
ಮಂಗಳೂರಿನಲ್ಲಿ ಇತ್ತೀಚಿಗೆ ಮಾತನಾಡಿದ ದೇವನೂರು ಮಹಾದೇವ ಅವರು ಆಪರೇಷನ್ ಮಾಡಿ ಗೀತೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದಿದ್ದರು . ಈ ವರದಿ ಇಲ್ಲಿದೆ .
ಅದಕ್ಕೆ ಖ್ಯಾತ ಬರಹಗಾರ ಕೆ ವಿ ತಿರುಮಲೇಶ್ ಪ್ರತಿಕ್ರಿಯಿಸಿದ್ದಾರೆ
ಕೆ.ವಿ. ತಿರುಮಲೇಶ್
ದೇವನೂರ ಮಹಾದೇವರ ಮಾತುಗಳನ್ನು ತತ್ವಶಃ ಒಪ್ಪಬೇಕು ಎನ್ನುವವರಲ್ಲಿ ನಾನೂ ಒಬ್ಬ, ಆದರೆ ಅಕ್ಷರಶಃ ಅಲ್ಲ. ಎಂದರೆ ಭಗವದ್ಗೀತೆಯಲ್ಲಿ ನಾವು ಸಮ್ಮತಿಸದ ಅಂಶಗಳನ್ನು ಕತ್ತರಿಸಿ ಎಡಿಟ್ ಮಾಡಬೇಕು ಎನ್ನುವ ಅರ್ಥವಲ್ಲ. ಗ್ರಂಥಗಳು ಹಳತಾಗುತ್ತ ಹೋದಂತೆ ಹೊಸ ಜನಾಂಗ ಅವುಗಳಲ್ಲಿರುವ ಎಲ್ಲಾ ವಿಷಯಗಳನ್ನೂ ಒಪ್ಪುವುದು ಸಾಧ್ಯವಿಲ್ಲ. ಸಮಸ್ಯೆ ಏನೆಂದರೆ, ಕೆಲವು ಗ್ರಂಥಗಳು ಧರ್ಮಗ್ರಂಥಗಳು, ಆದ್ದರಿಂದ ಅವು ಪೂಜನೀಯ, ಅವುಗಳಲ್ಲಿ ಹೇಳಿದ್ದೆಲ್ಲವನ್ನೂ ಜನರು ಸರ್ವದಾ ನಂಬಬೇಕು, ಅವುಗಳನ್ನು ಪ್ರಶ್ನಿಸಬಾರದು, ಅವು ರಾಷ್ಟ್ರೀಯ ಗ್ರಂಥಗಳಾಗಬೇಕು ಎಂಬಿತ್ಯಾದಿ ಹಟಗಳು. ಇದು ಅವಿಮರ್ಶಾತ್ಮಕವಾದ ನಿಲುವು.
ಯಾವುದೇ ಗ್ರಂಥವನ್ನು—ಭಗವದ್ಗೀತೆ, ಬೈಬಲ್, ಕುರ್ರಾನ್, ಗ್ರಂಥ್ ಸಾಹೇಬ್, ತ್ರಿಪಿಟಕಗಳು, ರಾಮಾಯಣ, ಮಹಾಭಾರತ, ವೇದಗಳು, ಧರ್ಮಶಾಸ್ತ್ರಗಳು ಮುಂತಾದವನ್ನು–ನಾವು ವಿಮರ್ಶಾತ್ಮಕವಾಗಿಯೇ ಓದಬೇಕಾಗಿದೆ. ಅವುಗಳ ರಚನಾಕಾಲ ಪ್ರಾಕೃತವಾದ ಕಾರಣ, ಅಂದಿನ ಮನೋಧರ್ಮವನ್ನು ಅವು ಪ್ರತಿಬಿಂಬಿಸುವುದು ಸಹಜವೇ ಆಗಿದೆ.
ಒಮ್ಮೆ ಬರೆದ ಗ್ರಂಥ ತಿದ್ದುವಿಕೆಗೆ ಒಳಗಾಗದೆ ಹಾಗೆಯೇ ಇರುತ್ತದೆ. ಆದರೆ ನ್ಯಾಯ, ನೀತಿ, ದಂಡನೆ, ಅತಿಭೌತಿಕ ಕಲ್ಪನೆ ಮುಂತಾದವು ಸಮಾಜದ ಜತೆಗೆ ಬದಲಾಗುತ್ತ ಇರುತ್ತವೆ. ನಮ್ಮ ಮನಸ್ಸು ಆಧುನಿಕವಾಗಿದ್ದರೆ ಸಾಕು, ನಾವು ಓದುವ ಈ ಹಳೆಯ ಗ್ರಂಥಗಳಲ್ಲಿ ನಮಗೆ ಬೇಕಾದ್ದನ್ನು ಸ್ವೀಕರಿಸಿ ಬೇಡದ್ದನ್ನು ಬಿಡಬಹುದು—ಈ ಬೇಡದ ವಿಷಯಗಳು ಯಾಕೆ ಈಗ ಬೇಡವಾಗಿವೆ, ಆದರೆ ಒಂದು ಕಾಲದಲ್ಲಿ ಕೆಲವರಿಗೆ ಬೇಕಾದವು ಎನ್ನುವುದು ಗೊತ್ತಾಗುತ್ತದೆ.
ಕುಮಾರವ್ಯಾಸ ಭಾರತದಲ್ಲಿ ವಿದುರನೀತಿಯ ಅಧ್ಯಾಯದಲ್ಲಿ ಅವೆಷ್ಟೋ ಒಳ್ಳೆಯ ಸಂಗತಿಗಳು ಬರುತ್ತವೆ; ಆದರೆ ಜತೆ ಜತೆಗೇ ವಿಧವೆಯರನ್ನು, ರೋಗಿಗಳನ್ನು ದೂರೀಕರಿಸುವ ಮಾತೂ ಬರುತ್ತದೆ! ಬುದ್ಧನ ಕಾಲದಲ್ಲಿ ರೋಗಿಗಳನ್ನು ಬೌದ್ಧಧರ್ಮಕ್ಕೆ ಸೇರಿಸಿಕೊಳ್ಳಲಾಗುತ್ತಿರಲಿಲ್ಲ ಎಂದು ಕೇಳಿದ್ದೇನೆ. ಗಣರಾಜ್ಯಕ್ಕೆ ಮಾದರಿಯಾಗಿದ್ದ ಗ್ರೀಸ್ ಮತ್ತು ನಂತರದ ರೋಮಿನಲ್ಲಿ ಪ್ರಜೆಗಳಿಗೆ ಮತದ ಹಕ್ಕು ಇತ್ತು, ಆದರೆ ಗುಲಾಮರಿಗೆ ಆ ಹಕ್ಕು ಇರಲಿಲ್ಲ. ಅಷ್ಟೇ ಅಲ್ಲ, ಗುಲಾಮರ ಮಾರಾಟವೂ ಅಲ್ಲಿ ಸ್ವೀಕೃತವಾಗಿತ್ತು. ಶೇಕ್ಸ್ ಪಿಯರನ `ಮರ್ಚೆಂಟ್ ಆಫ್ ವೆನಿಸ್’ನಲ್ಲಿ ಶೈಲಾಕನನ್ನು ಒಂದು ರೀತಿಯ ಒತ್ತಾಯದಿಂದಲೇ ಮತಾಂತರಗೊಳಿಸಲಾಗುತ್ತದೆ.
ಸೋಮೇಶ್ವರ ಶತಕದಲ್ಲಿ ಜಾತಿನಿಂದನೆಯ ಮಾತುಗಳು ಬರುತ್ತವೆ. `ಹರಿಶ್ಚಂದ್ರ ಕಾವ್ಯ’ದಲ್ಲಿ `ಹೊಲತಿ’ಯರನ್ನು ಅವರ ಬಣ್ಣ ಮತ್ತು ಜಾತಿಯ ಹೆಸರಿನಲ್ಲಿ ನಿಂದಿಸುವ ಮಾತುಗಳಿವೆ. (ಈ ಕುರಿತು ಕೀರ್ತಿನಾಥ ಕುರ್ತಕೋಟಿಯವರ ಸೊಗಸಾದ ವಿಶ್ಲೇಷಣೆಯೊಂದಿದೆ.) `ಹದಿಬದೆಯ ಧರ್ಮ’ದಲ್ಲಿ ಚಿತ್ರಿಸಿದ ಸ್ತ್ರೀ ಆ ಕಾಲದ ಆದರ್ಶವಲ್ಲದೆ ನಮ್ಮ ಕಾಲದಲ್ಲಿ ಸ್ವೀಕರಿಸಬಹುದಾದ್ದಲ್ಲ. ನಮ್ಮ ಜನಪದ ಕತೆ ಮತ್ತು ಹಾಡುಗಳಲ್ಲಂತೂ ನಾವಿಂದು ಒಪ್ಪಲಾಗದ ಅನೇಕ ಆಚಾರ ವಿಚಾರಗಳಿವೆ. ಇವೆಲ್ಲ ನಮ್ಮ ಪೂರ್ವಜರು ಸ್ವೀಕರಿಸಿದ ಸಂಗತಿಗಳು, ಜೀವವಿರೋಧಿ ಸಂಗತಿಗಳನ್ನು ನಾವು ಆಚರಿಸಕೂಡದು.
ಆಧುನಿಕತೆ ಇಂದು ಮಹತ್ವದ ವೈಚಾರಿಕ ಬದಲಾವಣೆಯನ್ನು ತಂದಿದೆ. ನಮ್ಮ ಪೂರ್ವಜರು ಆಧುನಿಕರಾಗಿ ಇರಲಿಲ್ಲ ಎಂದು ನಾವು ದೂರಿ ಪ್ರಯೋಜನವಿಲ್ಲ. ನಾವು ಅವರಂತೆ ಇರದಿದ್ದರೆ ಸಾಕು. ಪೂರ್ವಜನ್ಮ, ಮರುಜನ್ಮ, ಆತ್ಮ, ಪರಮಾತ್ಮ, ಕರ್ಮ, ವಿಧಿ, ವರ, ಶಾಪ, ನಾಕ, ನರಕ ಮುಂತಾದವುಗಳನ್ನು ಅವರು ನಂಬಿದ್ದರು. ಮನುಷ್ಯ ಸಮಾಜ ಮನುಷ್ಯ ನಿರ್ಮಿತವೇ ಎಂದು ನಾವಿಂದು ತಿಳಿದುಕೊಂಡಿದ್ದೇವೆ—ಎಂದರೆ ದೇವರ ಹೆಗಲಿನಿಂದ ಭಾರ ನಮ್ಮ ಹೆಗಲಿಗೆ ಬಂದಿದೆ. ಆದ್ದರಿಂದ ನಮ್ಮ ಹೊಣೆಗಾರಿಕೆ ಹೆಚ್ಚಿದೆ. ಫೂಕೋನ `ದಿ ಆರ್ಡರ್ ಆಫ್ ಥಿಂಗ್ಸ್’ನ ಕೊನೆ ಭಾಗ ಇದನ್ನು ಚೆನ್ನಾಗಿ ಚಿತ್ರಿಸುತ್ತದೆ: ದೇವರನ್ನು ಕೊಂದ ಮನುಷ್ಯ ರಕ್ತಸಿಕ್ತನಾಗಿ ಇದ್ದಾನೆ—ಇನ್ನೇನು ಮಾಡುವುದೆಂದು ತಿಳಿಯದೆ!
ನಮಗೆ ವಿಶನ್ ಎಂಬುದು ಇದೆಯೇ? ಯಾವ ರೀತಿಯ ಮನುಷ್ಯಸಮಾಜವನ್ನು ನಾವು ಬಯಸುತ್ತೇವೆ? ಯಾರಲ್ಲಾದರೂ ಒಂದು ನೀಲಿನಕ್ಷೆ ಇದೆಯೇ? ಅದನ್ನು ಸಾಧಿಸುವುದಕ್ಕೆ ನಾವೇನು ಮಾಡಬೇಕು? ಯೋಚಿಸಿದ್ದೇವೆಯೇ?
ಮೊತ್ತದಲ್ಲಿ, ಮಾನವನ ಇತಿಹಾಸದ ದಾಖಲೆಗಳನ್ನು ನಾವು ತೊಡೆದುಹಾಕುವ ಬದಲು ವೈಚಾರಿಕವಾಗಿ ಓದುವುದೇ ನಮಗಿಂದು ಇರುವ ಮಾರ್ಗ. ತೊಡೆದುಹಾಕಿದರೆ ಮತ್ತೆ ನಮಗೆ ಹಿಂದಿನ ಸಮಾಜಗಳ ನೆನಪಿರುವುದಿಲ್ಲ; ಅಂಥ ಬಲೆಗೆ ನಾವು ಬೀಳಬಾರದು ಎನ್ನುವುದಕ್ಕೆ ಆ ಗ್ರಂಥಗಳನ್ನು ಹಾಗೇ ಇರಿಸೋಣ. ಪೂಜಿಸುವುದು ಬೇಡ, ಕಣ್ಣುಬಿಟ್ಟು ಓದೋಣ, ಬೇಕಾದ್ದನ್ನು ಸ್ವೀಕರಿಸಿ ಬೇಡದ್ದನ್ನು ತಿಳಿದುಕೊಳ್ಳೋಣ.





ತಿರುಮಲೇಶ್ ಸರ್ ಅವರದು ಬಹಳ ಸಮತೂಕದ ಬರಹ . ಯಾವುದೇ ಧರ್ಮಗ್ರಂಥಗಳು ಆಯಾ ಕಾಲದ ಮನೋಧರ್ಮಕ್ಕೆ ಅನುಗುಣವಾಗಿ ರಚಿತವಾಗಿರುವುದು. ಗ್ರಂಥಗಳು ತಿದ್ದುಪಡಿ ಆಗುವುದಿಲ್ಲ, ಆಗಬೇಕಿಲ್ಲ. ಕಾಲಕ್ಕೆ ತಕ್ಕಂತೆ ಮನುಜನ ವಿಚಾರಧಾರೆಗಳು ಬದಲಾಗುತ್ತವೆ, ಆಗಲಿ., ಆಗಬೇಕು. ಯಾವುದೇ ಧರ್ಮಗ್ರಂಥಗಳು ಅಲ್ಲಿಯ ನೆಲಕ್ಕೆ ಪೂಜನೀಯ . ಕಾಲಕ್ಕೆ ಅನುಗುಣವಾಗಿ ಅದರಲ್ಲಿನ ಒಳಿತನ್ನು ಮಾನ್ಯಮಾಡುತ್ತಾ, ಸಮಾಜಕ್ಕೆ ಅಹಿತವಾದದ್ದನ್ನು ಅನುಸರಿಸದಿದ್ದರಾಯಿತು. ಜಗದಗಲ ಕೂಡ ನಂಬಿಕೆ, ಮೂಢನಂಬಿಕೆಗಳು ಇವೆ. ಅಂದರೆ ಜಗತ್ತು ನಿಂತಿರುವುದೇ ನಂಬಿಕೆಯ ತಳಹದಿಯ ಮೇಲೆ. ಒಬ್ಬರ ನಂಬಿಕೆ ಮತ್ತೊಬ್ಬರಿಗೆ .ಪಥ್ಯವಾಗಬೇಕು ಎಂದೇನಿಲ್ಲ.
ಯಾವುದು ಸಮಾಜಕ್ಕೆ ಕ್ರೂರ, ಹಿಂಸೆ ಎನ್ನಿಸುವುದೋ ಅಂತ ನಂಬಿಕೆ, ಆಚರಣೆಗಳ ಕುರಿತು ಶಾಂತಿಯುತವಾದ ಸಂವಾದಗಳು ನಡೆಯಲಿ. ಯಾರ ವೈಯ್ಯಕ್ತಿಕ ನಂಬಿಕೆಗಳು ಮತ್ತೊಬ್ಬರ ಬದುಕಿಗೆ ಬಾಧಕವಲ್ಲವೋ ಅವುಗಳು ಅವರ ಬದುಕಿಗಿರಲಿ.
ತಿರುಮಲೇಶ್ ಸರ್, ತಮ್ಮ ವಿಚಾರಧಾರೆಗೆ, ತಮಗೆ ದೊರಕಿದ ಪ್ರಶಸ್ತಿಗೆ ಅಭಿನಂದನೆಗಳು
ಹಳೆಯ ಗ್ರಂಥಗಳ ಬಗ್ಗೆ ತಿರುಮಲೇಶ್ ಅವರು ಹೇಳಿದ್ದು ಸರಿಯಾಗಿದೆ. ನಮ್ಮ ಸಂವಿಧಾನ, ಅದರ ತಿದ್ದುಪಡಿಗಳು ಮತ್ತು ಕಾಲ ಕಾಲಕ್ಕೆ ಸಂಸತ್ತು ಮತ್ತು ರಾಜ್ಯ ಸರಕಾರಗಳು “ಹಿಂದೂಗಳಿಗೆ” ಸಂಬಂಧಿಸಿದಂತೆ ತಂದ ಕಾನೂನುಗಳು ನಾವು ಈ ನಿಟ್ಟಿನಲ್ಲಿ ಸಾಕಷ್ಟು ಮುಂದೆ ಹೋಗುವಂತೆ ಮಾಡಿವೆ. ಆದರೆ ಮೊನ್ನೆ ಕನ್ನಡಪ್ರಭದಲ್ಲಿ ಸಿ ಎನ್ ರಾಮಚಂದ್ರನ್ ಅವರು ಮೂಢನಂಬಿಕೆ ಬಗ್ಗೆ ಬರೆವಾಗ ನಮ್ಮ ಮನೆ ಮಾಡು ಸೋರುವುದನ್ನು ರಿಪೇರಿ ಮಾಡುವುದು ಮುಖ್ಯ; ಬೇರೆಯವರ ಮಾಡು ಸೋರುವುದರ ಬಗ್ಗೆ ಚಿಂತಿಸಬೇಕಾಗಿಲ್ಲ ಅನ್ನುವ ಹಾಸ್ಯಾಸ್ಪದ ವಾದ ಮುಂದಿಟ್ಟಿದ್ದಾರೆ.
The ambiguity in geetha needs to be interpreted to the present time. this effort has been going on right from Adishankara to Gandhi and DVG.
Jesus says “my father’s house has many mansions”. I believe this is the definition of poetic ambiguity. I think Devanura Mahadeva is not ready to consider geetha (poetry) as a poetry.
ಯಾವ ಕೃತಿಗಳನ್ನೂ ನಾಶ ಮಾಡಬೇಕಿಲ್ಲ. ಕತ್ತರಿಸಬೇಕಾಗಿಲ್ಲ,ಹರಿದೊಗೆಯಬೇಕಾದ್ದಿಲ್ಲ ಎಂಬ ವಿಚಾರ ಸತ್ಯ. ದೇವನೂರರೂ ಅದನ್ನೇ ಹೇಳಿರುವುದು. ಅವರು ಕುವೆಂಪುರವರ ಎರಡು ಮಾತುಗಳನ್ನು ಅವರ ಬಾಷಣದಲ್ಲಿ ಕೋಟ್ ಮಾಡಿದ್ದಾರೆ. ೊಂದು ಪ್ರತಿಕೃತಿ ದೃಷ್ಠಿಯಿಂದಲ್ಲ ಪ್ರತಿಮಾ ದೃಷ್ಠಿಯಿಂದ ಹಿಂದಿನೆಲ್ಲಾ ಕೃತಿಗಳನ್ನು ನೋಡಬೇಕು. ಮತ್ತೊಂದು ಹಳೆಯ ಆಭರಣಗಳನ್ನು ಕರಗಿಸಿ ಹೊಸ ಾಭರಣ ಮಾಡಿಸಿಕೊಳ್ಳುವಂತೆ ಹಿಂದಿನ ಕೃತಿಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು.
ಯಾವುದೇ ಕೃತಿ ಧಾರ್ಮಿಕವಿರಲಿ ಬೇರೆ ಯಾವುದೇ ಇರಲಿ ಅದರ ರಚನೆಯ ಕಾಲ,ದೇಶಕ್ಕೆ ನಿಷ್ಟ.ಅದೇ ಸಮಯದಲ್ಲಿ ಮಾನವತೆಯೆಂಬ ನಿರಂತರ ಸಾಗಿ ಬಂದ ಜೀವನ ಮೌಲ್ಯಗಳಿಗೂ ನಿಷ್ಟ.
ಸಮಾಜದ ಬೆಳವಣಿಗೆಯೊಡನೆ ಅದರ ಸ್ವರೂಪ,ಆಶಯಗಳು ಬದಲಾಗುತ್ತವೆ. ಆದಕ್ಕೆ ತಕ್ಕಂತೆ ಹಿಂದಿನ ಕೃತಿಗಳಲ್ಲಿ ಅವುಗಳ ಕಾಲ ಮತ್ತು ದೇಶಕ್ಕೆ ನಿಷ್ಟವಾದ ಅಂಶಗಳು ಆಯಾ ಕಾಲವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತವೆ. ಆ ಮೂಲಕ ಇಂದಿಗೆ ತಮ್ಮ ಸೇವೆ ಸಲ್ಲಿಸುತ್ತವೆ. ಅದರಲ್ಲಿರುವ ಮಾನವತೆಯ ಮೌಲ್ಯಗಳು ಇಂದಿಗೂ ಸಲ್ಲಬಹುದು. ಆಕೃತಿಗಳಲ್ಲಿ ಯಾವ ಅಂಶಗಳು ಪ್ರಧಾನವಾಗಿದೆ, ಆ ಕೃತಿಗಳ ಆಶಯವೇನು ಎಂಬುದರ ಮೇಲೆ ಅವುಗಳ ಸಾಪೇಕ್ಷ ಮೌಲ್ಯ ತಿಳಿಯುತ್ತದೆ. ಆದರೆ ಎರಡೂ ಅಂಶಗಳೂ ಕೂಡ ಿಂದಿನ ,ಮುಂದಿನ ಮಾನವ ಸಮಾಜಕ್ಕೂ ಪ್ರಯೋಜನಕಾರಿಯೇ .
ಇಲ್ಲಿ ಮತ್ತೊಂದಿ ಅಂಶವನ್ನು ಗಮನಕ್ಕೆ ತರಬಯಸುತ್ತೇನೆ. ದೇವನೂರರು ತಮ್ಮ ಮಾತುಗಳನ್ನು ಉದ್ದೇಶಿಸಿದ್ದು ಪ್ರಗತಿಪರರಿಗೆ. ಪರಂಪರೆಯನ್ನೆಲ್ಲಾ ನಿರಾಕರಿಸುವ ಅವರಲ್ಲಿರುವ ಒಂದು ವೈಪರೀತ್ಯಕ್ಕೆ. ಪರಂಪರೆಯಿಂದ ದೂರ ಉಳಿದ ನೀವು ಸಮಾಜದಿಂದಲೂ ಬೇರೆಯಾಗುತ್ತಿದ್ದೀರಿ ಎಂದು ಎಚ್ಚರಿಸುವುದಕ್ಕೆ.ಅಂದರೆ ಕತ್ತರಿಸಬೇಡಿ ಬಳಸಿಕೊಳ್ಳಿ ಎಂದು ಹೇಳುವುದಕ್ಕೇ ಅವರ ಒತ್ತು.
ಪೂಜಿಸುವುದು ಬೇಡ, ಕಣ್ಣುಬಿಟ್ಟು ಓದೋಣ, ಬೇಕಾದ್ದನ್ನು ಸ್ವೀಕರಿಸಿ ಬೇಡದ್ದನ್ನು ತಿಳಿದುಕೊಳ್ಳೋಣ.
Yes Sir.. ಬಹಳ ಸಮಚಿತ್ತದ ಬರಹ..
ಉತ್ತಮವಾದ updated ಮನಸ್ಥಿತಿಯ ಬರಹ. ಹೌದು ಓದಬೇಕು ಕಣ್ಣುಬಿಟ್ಟು. ವಿಚಾರಧಾರೆಗಳು ಓದಿಗಷ್ಟೇ ಸೀಮಿತವಾಗದೆ ಕಾಲದ ಪಯಣದೊಂದಿಗೆ ಹರಿಯಬೇಕಿದೆ.ಹಳೆಯದನ್ನೇ ತಿದ್ದುವ ಹಟವ್ಯಾಕೆ..? ಬೇಕಾದದ್ದನ್ನು ಉಳಿಸೋಣ.ಅರಿವು ಹರಿಯಲಿ. ಹೊಸತು ಹುಟ್ಟಲಿ. ಹೊಸತಿನೊಂದಿಗೆ ಸಾಗೋಣ .