ದುಂಡು ಮಲ್ಲಿಗೆ ದಂಡೆ..

‘ಎದೆಯ ಪಿಸುಮಾತು ಉಸುರಲು ಹೆಸರೇ ಇರಬೇಕೇನು?’ ಎಂದು ಕೇಳಿದ್ದು ಈ ಹುಡುಗಿ.

ಆಕಾಶದ ಏಳು ಬಣ್ಣಗಳ ತೆಕ್ಕೆಗೆ ಹಾಕಿಕೊಳ್ಳಲು ಒಬ್ಬ ಜೊತೆಗಾರನಿರಬೇಕು ಸರಿ.. ಆದರೆ ಅವನ ಹೆಸರು ಗೊತ್ತಿರಲೇಬೇಕೇನು..? ಎಂದವಳು ಈ ಹುಡುಗಿ.

‘ಎನ್ನೆದೆಯ ಒಲವಿನ ಹಾಡಿಗೆ ನೀವು ಯಾವ ಹೆಸರಾದರೂ ಕೊಟ್ಟುಕೊಳ್ಳಿ..’ ಎಂದು ಮುಫತ್ತಾಗಿ ಹೇಳಿದವಳು ಈ ಹುಡುಗಿ.

‘ಕಾಣದ ಕಡಲಿನ ಮೊರೆತದ ಜೋಗುಳಕ್ಕೆ ನಿಮಗೆ ಹೆಸರಿಟ್ಟು ಕರೆಯಲು ಸಾಧ್ಯವೇ ?’ಎಂದು ಚಾಲೆಂಜ್ ಮಾಡಿದವಳು ಈ ಹುಡುಗಿ.

ತನ್ನ ಕಣ್ಣ ಹೊಳಪು, ಎದೆಯ ಭಾವನೆ, ಮನದ ನವಿರು ಎಲ್ಲವನ್ನೂ ಈ ಹುಡುಗಿ ಇಂದಿನಿಂದ ಪ್ರತೀ ವಾರ ನಮ್ಮೆದುರು ಇಡಲಿದ್ದಾಳೆ

ಇವಳು ಒಲವಿನ ಹುಡುಗಿ.

ಆಕೆಯೇ ತನ್ನ ಪರಿಚಯ ಮಾಡಿಕೊಂಡದ್ದು ಹೀಗೆ-

ಅನಾಮಿಕಾ@ಹ್ಯಾಂಡ್ ಪೋಸ್ಟ್ :

ನನ್ನ ಬಗ್ಗೆ ಹೇಳಿಕೊಳ್ಳುವಂಥಹದ್ದು ಏನೂ ಇಲ್ಲ.

ಸಮಾನ ಮನಸ್ಕರರ ಪ್ರಯಾಣಕ್ಕೆ ಬೇಕೆಂದಂತೆ ಒದಗಿ ಬರುವುದನ್ನ ನೋಡಿ, “ಒಲವು, ಏಕಾಂತದ ಮೂರ್ತರೂಪ ನೀನು. ನಗುವ ನಿನ್ನ ಲಯ, ನಿನ್ನೆದೆಯ ಭಾವಗೀತೆ, ಬಳ್ಳಿ ಮರದ ಮಳ್ಳಿ ಎದೆಯ ಸುಗ್ಗಿ ಸೊಗಸು ಎಲ್ಲ ಕಾಲದಲ್ಲೂ ಹೀಗೆ ಇರಲಿ. ‘ನನ್ನಂಥಹ’ ಚಿರವಿರಹಿಗಳೆಡಗಿನ ನಿನ್ನೊಲವು ಅಕ್ಷಯವಾಗಲಿ,” ಎಂದು ಹರಿಸಿದ್ದು ಭವವಿಧುರರು.

ಅನೀರೀಕ್ಷಿತಗಳ ಮೇಲೆ ಬದುಕು ನಿಂತಿರಲಿ ಎನ್ನುವ ಹಂಬಲದ ನನಗೆ ಪ್ರಯಾಣದ ಏಕಾಂತಕ್ಕೊದಗುವುದೆಂದರೆ, ಬದುಕಿನ ಏಕತಾನತೆ ಹೊಡೆದೊಡಿಸಿ, ಜೀವಂತವಾಗಿರುವ ಕ್ರಿಯೆ.

ಇನ್ನು ಓದಿ ಅವಳ ಕಾಡುವ ಬರಹಗಳನ್ನು-

ದುಂಡು ಮಲ್ಲಿಗೆ ದಂಡೆಯ ಎದೆಯ ಹಾಡಿದು

ಅಮ್ಮಂದಿರಿಗೆ ಒಲುಮೆ ಐಸಿರಿಯಾದರೆ, ಮಕ್ಕಳಿಗದು ಒಲವಿನ ಹಾಲುಪಥ (Milky way). ನಡುವನ್ನು ಅಳಿಸಿ ಎದೆಭಾರ ತಂದ ಎನ್ನುವಂಥ ಹೆಣ್ಣೆದೆ ಇನ್ನೊಂದು ಹೆಣ್ಣಿನ ಕುತೂಹಲಕ್ಕೂ ಕಾರಣ. ಸದಾ ಸೆರಗಿನ ಮರೆಯಲ್ಲಿರುವುದರ ಬಗ್ಗೆ ಬರೆಯುವುದು ಹೇಗೆ ಎನ್ನುವ ಯೋಚನೆಯಲ್ಲಿದ್ದಾಗ ಮಾರುಕಟ್ಟೆಗೆ ಹೊಸತಾಗಿ ಬಿಟ್ಟ ಪ್ಯಾಡೆಡ್ ಬ್ರಾ ಧರಿಸಿ ಬಂದ ‘ಸಣ್ಣೆದೆ’ಯ ಸ್ನೇಹಿತೆ ಸೊಂಟದ ಮೇಲೊಂದು ಕೈಯಿಟ್ಟು ನಿನಗಿಂತ ನಾನೇನು ಕಮ್ಮಿ ಎನ್ನುವ ಭಂಗಿಯಲ್ಲಿ ಝಲಕ್ ಕೊಟ್ಟಳು. ಅರೆ, ಇದಕ್ಕೆ ಹೀಗೆ ‘ಕಾಣ’ಬಹುದಾದ ದೃಷ್ಟಿಕೋನವೂ ಒಂದಿದೆ ಎನ್ನಿಸಿದಾಗ ನೆನಪಾದ ಕೆಲವು ಸಂಗತಿಗಳಿವು.

ಒಮ್ಮೆ ಸ್ನೇಹಿತನೊಬ್ಬ ಕಂಚುಕಗಳ ಕುರಿತಾದ ಫ್ಯಾಶನ್ ಶೋ ನಡೆಸಲು ಯೋಚಿಸಿದಾಗ ಫೀಲ್ಡ್‌ಗೆ ಹೊಸಬನಾದ್ದರಿಂದ ವೃತ್ತಿಪರ ರೂಪದರ್ಶಿಗಳ್ಯಾರೂ ಡೇಟ್ಸ್ ಕೊಡಲಿಲ್ಲ. ಇದರಿಂದ ಫ್ಯಾಶನ್ ಲೋಕದ ಗಂಧಗಾಳಿ ಗೊತ್ತಿಲ್ಲದವರನ್ನ ಆಯ್ಕೆ ಮಾಡಿಕೊಂಡು ತರಬೇತಿ ಕೊಡುತ್ತೇನೆ ಎನ್ನುವ ಹಠಕ್ಕೆ ಬಿದ್ದ. ಈ ಕಾರಣಕ್ಕಾಗಿ ಹುಡುಗರೇ ಸೇರಿ ಆಯೋಜಿಸುತ್ತಿದ್ದ ಕಾರ್ಯಕ್ರಮಕ್ಕೆ ನನ್ನ ಸೇಪರ್ಡೆಯಾಯಿತು. ನಾನೂ ಇದಕ್ಕೆ ಹೊಸಬಳಾದ್ದರಿಂದ ಸ್ವಲ್ಪ ದಿನದ ಮಟ್ಟಿಗೆ ವೃತ್ತಿಪರ ರೂಪದರ್ಶಿಗಳನ್ನು ಶೋಗೂ ಮುನ್ನ ನೇಪಥ್ಯದಲ್ಲಿ ಅಣಿಗೊಳಿಸುವವರ ಸಹಾಯಕಿಯಾಗಿ ಸೇರಿದೆ.

ಮೊದಮೊದಲಲ್ಲಿ ಸಾವಿರಾರು ಕ್ಯಾಮೆರಾ ಪ್ಲ್ಯಾಶ್, ಝಗಮಗಿಸುವ ರಂಗಸ್ಥಳದ ಮೇಲೆ ರೂಪದರ್ಶಿಯರನ್ನು ನೋಡುತ್ತಿದ್ದಾಗ ಇವರೆಲ್ಲ ಕೀ ಕೊಟ್ಟ ಯಂತ್ರಗಳಾ ಎನ್ನುವ ಸಂದೇಹ ಕಾಡುತ್ತಿತ್ತು. ತೆರೆಯ ಹಿಂದೆ ಬಣ್ಣ ಬಳೆದುಕೊಂಡು, ಏನಾದರೂ ಭಾವ ವ್ಯಕ್ತಪಡಿಸಿದರೆ ಮುಖದ ಛವಿ ಹಾಳಾಗುತ್ತದೆ ಎನ್ನುವ ಭಂಗಿಯಲ್ಲಿ ನಿಂತವರಿಗೆ ಬೇರೊಬ್ಬರು ಬಟ್ಟೆ ಜಾರಿಸಿ ಬಟ್ಟೆ ಏರಿಸುವುದನ್ನು ನೋಡುವಾಗಲೆಲ್ಲ ಇವರೆಲ್ಲ ಜೀವವಿರುವ ಯಂತ್ರಮಾನವೆಯರೇ ಎನಿಸುತ್ತಿತ್ತು.

ಇದಿಷ್ಟನ್ನೇ ಅರಗಿಸಿಕೊಳ್ಳುವ ಹೊತ್ತಿನಲ್ಲಿ ಪ್ರಸಿದ್ಧ ಕಂಪೆನಿಯೊಂದರ ಒಳಉಡುಪುಗಳ ಶೋ ನಡೆಯಿತು. ಆಗ ಕಂಚುಕದ ಎದೆ ಬಟ್ಟಲಲ್ಲಿ ಮಾಡೆಲ್‌ಗಳ ಸ್ತನಗಳನ್ನಿಟ್ಟು ಒಪ್ಪಗೊಳಿಸಿದ್ದೂ ಸಹಾಯಕರು! ದೇಹದ ವೈಯಕ್ತಿಕ ಭಾಗವೊಂದನ್ನು ಬೇರೆಯವರು ಸ್ಪರ್ಶಿಸುತ್ತಾರೆ ಎನ್ನುವ ಯೋಚನೆಯೇ ದಿಗಿಲು ಮೂಡಿಸುವಂಥದ್ದು. ಆದರೆ, ಆ ಕ್ಷಣಕ್ಕೆ ಮೈದೋರಿ ಮುಂದೆ ಸಹಕರಿಸಿದರೂ ನಂತರ ಸಹಜವಾಗಿರುತ್ತಿದ್ದ ಅವರನ್ನು ನೋಡುತ್ತ, ನೋಡುತ್ತ ಸೆರೆಗಿರುವುದೇ ಸರಿಪಡಿಸಿಕೊಳ್ಳಲು ಎನ್ನುವ ಅವಶ್ಯಕತೆಯಿಲ್ಲದ ಸರಳ ಮತ್ತು ದಿಟ್ಟತನದ ಹೊಸ ಆಯಾಮವೊಂದು ತೋಚಿದ್ದೂ ಆಗಲೇ ನನಗೆ.

ಬೃಹದಾಕಾರಾರದ ಎರಡು ಮೊಲೆಗಳು..

ಇವೇ ಮಂದಣ್ಣನ ತಲೆ ಕೆಡಿಸಿರಬೇಕು..

ನಂತರ ನೆನಪಾಗಿದ್ದು ‘ಕರ್ವಾಲೋ’ ಕಾದಂಬರಿಯ ಮಂದಣ್ಣ. ಮದುವೆ ದಳ್ಳಾಳಿ ಕೆಲಸ ಮಾಡುವಂತಹ ಅನಿವಾರ್ಯತೆ ತಂದಿಟ್ಟ ಮಂದಣ್ಣನನ್ನು ಬೈಯ್ದುಕೊಳ್ಳುತ್ತಲೇ ಮದುವೆಗೆ ಹಾಜರಾಗುವ ತೇಜಸ್ವಿ ಹೇಳುತ್ತಾರೆ, ‘‘ಎಲ್ಲರಿಗೂ ಒಳಗೊಳಗೇ ಮೂರ್ಖರಾದೆವೇನೋ ಎಂದೆನ್ನಿಸಿತು. ಮಂದಣ್ಣನ ಹೆಂಡ್ತಿ ರಾಮಿಯನ್ನು ನೋಡಿದೆ. ಅವಳಲ್ಲಿ ಎದ್ದು ಕಂಡ ಒಂದೇ ಅಂಶವೆಂದರೆ ಅವಳ ವಯಸ್ಸಿಗೂ ಗಾತ್ರಕ್ಕೂ ತಾಳ ಮೇಳವಿಲ್ಲದಂತಿದ್ದ ಅವಳ ಬೃಹದಾಕಾರಾರದ ಎರಡು ಮೊಲೆಗಳು. ಇವೇ ಮಂದಣ್ಣನ ತಲೆ ಕೆಡಿಸಿರಬೇಕೆಂದು ನಾನು ಊಹಿಸಿದೆ,’’  ಎಂದು.

ನಾವೆಲ್ಲ ವಯೋಸಜಹ ಕ್ರಶ್, ಔಟಿಂಗ್ ಬಗ್ಗೆ ಯೋಚಿಸುತ್ತಿದ್ದಾಗ, ಸ್ನೇಹಿತನೊಬ್ಬ ಹುಡುಗಿಯರನ್ನು ಕಂಡರೆ ದೂರ ನಿಲ್ಲುತ್ತಿದ್ದ. ನಿನ್ನಲ್ಲೇ ಏನೋ ಐಬಿರಬೇಕು ಎಂದು ಕಾಡಿಸಿದರೂ ಡಿಸ್ಟನ್ಸ್ ಮೇಂಟೆನ್ ಮಾಡುತ್ತಿದ್ದ. ಇವನೊಬ್ಬ ಹೊಮೋಸೆಪಿಯನ್ ವರ್ಗದ ಒಂದು ಅಪೂರ್ವ ಸ್ಪೆಸಿಮನ್ ಎಂದು ಬೈದುಕೊಂಡು ಸುಮ್ಮನಾಗಿದ್ದ ನಮಗೇ ದಿಗ್ಭ್ರಮೆಯಾಗುವಂತೆ ಒಂದು ರಾತ್ರಿ ಎಲ್ಲರನ್ನೂ ಕಾನ್ಫೆರೆನ್ಸ್ ಕಾಲ್‌ನಲ್ಲಿ ಕರೆದು ಮದುವೆಯಾಗುತ್ತಿರುವುದಾಗಿ ಘೋಷಿಸಿದ. ನಾವು ಕನಸಿನಲ್ಲೂ ನಿರೀಕ್ಷಿಸದ ಮಾತಿಗೆ ಏನು ಪ್ರತಿಕ್ರಿಯಿಸಿಬೇಕು ಎಂದು ತೋಚದೆ ಮೂಕರಂತೆ ಹೂಂಗುಟ್ಟಿದೆವು. ಕೊನೆಗೂ ಪ್ರೇಮ, ಕಾಮ ಹೊಂದಿದ ಸಹಜ ಹುಡುಗನಂತಾದ ಎಂದು ನಾನು ಸುಮ್ಮನಾದೆ.

ಅಷ್ಟರಲ್ಲಿ ಮಿಕ್ಕ ಸ್ನೇಹಿತರು ಈ ಅನಿರೀಕ್ಷಿತ ಆಘಾತದಿಂದ ಎಚ್ಚೆತ್ತು ನನಗೆ ಕರೆ ಮಾಡಿ ಅವನು ಮಾತನಾಡುವ ಏಕೈಕ ಹುಡುಗಿ ನೀನು (ಇವನ ತಂದೆ ಮತ್ತು ನನ್ನಪ್ಪ ಬಾಲ್ಯ ಸ್ನೇಹಿತರು. ನಾವಿಬ್ಬರೂ ಬಾಲವಾಡಿಯಿಂದ ಪಿಯುವರೆಗೆ ಒಟ್ಟಿಗೆ ಓದಿದ್ದು. ಹೀಗಾಗಿ ನನಗೆ ಅವನ ಮೇಲೆ ಒಂದು ರೀತಿ ಸಾಫ್ಟ್ ಕಾರ್ನರ್. ಸ್ನೇಹಿತರು ಕಾಲೆಳೆಯುತ್ತಾರೆ ಎಂದು ಏನಾದರೂ ಹೇಳುವುದದಿದ್ದರೆ ಅವನ ಪರ ವಕಾಲತ್ತು ವಹಿಸುವ ನನ್ನ ಜತೆಗಿಟ್ಟುಕೊಂಡೆ ಮಾತನಾಡುತ್ತಿದ್ದ) ಅವನು ಮದುವೆಯಾಗಲಿ ಅಂತ ಎಂಥೆಂತಾ(?) ಹುಡುಗಿಯರನ್ನು ತೋರಿಸಿದ್ದೆವು. ಬತ್ತಿ ಹೋದ ಕೊಳವೆ ಬಾವಿ, ಟೆನ್ನಿಸ್ ಕೋರ್ಟ್ ಎಂದೆಲ್ಲ ಬಿರುದು ಹಚ್ಚಿದವ ಈ ನಿರ್ಧಾರಕ್ಕೆ ಬಂದಿದ್ದಾನೆ ಎಂದರೆ ಬಲವಾದ ಕಾರಣವಿರಬೇಕು. ಪತ್ತೆ ಮಾಡಿ ಹೇಳಲೇಬೇಕು ಎಂದು ಗಂಟು ಬಿದ್ದರು.

ನನಗೆ ಮಂದಣ್ಣ ನೆನಪಾದ!

ಮಧ್ಯರಾತ್ರಿಯಾಗಿದ್ದರೂ ಫೋನು ಮಾಡಿ (ಹಗಲಿನಲ್ಲಿ ಮಾತನಾಡಲು ಮುಜುಗರ ಪಡಬಹುದಾದ ಹುಡುಗರ ಜಗತ್ತಿನ ಸಂಗತಿಗಳು ರಾತ್ರಿ ಸರಾಗವಾಗಿ ಹೊರಬರುತ್ತವೆ ಎನ್ನುವುದು ಅನೇಕ ಸಲ ನನ್ನ ಅನುಭವಕ್ಕೂ ಬಂದಿದೆ!) ನೇರ ವಿಷಯಕ್ಕೆ ಬಂದೆ (ಮಿಕ್ಕ ಸ್ನೇಹಿತರೆಲ್ಲ ಅವನ ಮಾತು ಕೇಳಿಸಿಕೊಳ್ಳಲು ಪಿನ್‌ಡ್ರಾಪ್ ಸೈಲೆಂಟ್, ಮ್ಯೂಟ್ ಪೊಸಿಷನ್ ಕಾನ್ಫೆರೆನ್ಸ್‌ನಲ್ಲಿ). ಅವನಿಗೂ, ಎಲ್ಲವನ್ನೂ ಒಮ್ಮೆ ಒದರಿ ನಮ್ಮ ಕಾಟದಿಂದ ಕಳಚಿಕೊಂಡರಾಯಿತು ಎನಿಸಿತ್ತೋ ಏನೋ, ‘‘ಆಫೀಸಿಗೆ ಹೊಸದಾಗಿ ಬಂದ ಹುಡುಗಿ ಅವಳು. ಟೂ ವೀಲ್ಹರ್ ಮೇಲೆ ಬಂದು ಜರ್ಕಿನ್ ತೆಗೆಯುವಾಗ ಅಲಗುವ ಅವಳೆದೆಯ ಸೊಬಗಿಗೆ ಪಾರ್ಕಿಂಗ್ ಲಾಟ್‌ನಲ್ಲಿ ನಿಂತ ಎಂಟ್ಹತ್ತು ಹುಡುಗರ ಎದೆ ತುಸು ಜೋರಾಗೇ ಅದರುತ್ತದೆ. ಅಂತಹ ತುಂಬಿದೆದೆಯ ಮೈಮೆರವಣಿಗೆ ನೋಡಿ ನೋಡಿ ಪ್ರೀತಿ ಮದುವೆ ಆಗೋ ಆಸೆ ವ್ಯಕ್ತ ಪಡಿಸಿದೆ, ಅವಳೂ ಹೂಂ ಎಂದಳು. ಇನ್ನೇನು ಕೇಳಬೇಡ ಪ್ಲೀಸ್,’’ ಎಂದವನೇ ಫೋನಿಟ್ಟು ಬಿಟ್ಟ. ಜೋರು ನಗುವಿನೊಂದಿಗೆ ನನಗೆ ಮಂದಣ್ಣ ನೆನಪಾದ!

ಎದೆಯ ವಿಷಯವೆಂದರೆ ‘ತೆರೆದು ತೋರುವ’ ಅಥವಾ ಹುಡುಗಾಟಿಕೆಯಷ್ಟೇ ಅಲ್ಲ, ಅದಕ್ಕೊಂದು ಭಾವನಾತ್ಮಕ ಸ್ಪರ್ಶವೂ ಇದೆ ಎನಿಸಿದ್ದು ಎರಡು ಘಟನೆಗಳಲ್ಲಿ. ಮಾಟದೆದೆಯಲ್ಲೇ ತನ್ನ ಚೆಲುವಿದೆ ಎಂದು ನಂಬಿದ್ದ, ಅಸಾಧರಣ ಸುಂದರಿಯಾಗಿದ್ದ ಸ್ನೇಹಿತನ ಹೆಂಡತಿ ಕ್ಯಾನ್ಸರ್‌ನಿಂದಾಗಿ ಒಂದು ಸ್ತನವನ್ನು ಕಳೆದುಕೊಂಡಳು. ರಸಿಕ ಪ್ರಜ್ಞೆಗಾದ ಆಘಾತ, ಗಂಡ ಇದನ್ನು ಹೇಗೆ ಒಪ್ಪಿಕೊಳ್ಳುತ್ತಾನೆ ಎನ್ನುವ ತಳಮಳದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಳು. ಗಾಬರಿಯಿಂದ ಹೋಗಿ ನಿಂತ ನಮ್ಮೆಲ್ಲೆರೆದುರಿಗೆ ಸ್ನೇಹಿತ, ‘‘ಎಲ್ಲ ಹೂಗಳ ಮಧ್ಯೆ ನೀನೇ ನನ್ನ ಆಯ್ಕೆ. ಗೊಂದಲ ಬೇಡ,’’ ಎಂದು ಬಿಗಿದಪ್ಪಿದ.

ಅರಳೋ ಮಲ್ಲಿಗೆ ಅರಳಲಿ ಮೆಲ್ಲಗೆ..

ಬಲವಂತ ಬೇಡ

ನಂತರ ಒಮ್ಮೆ ಹಿರಿಯ ಸ್ನೇಹಿತನ ಮನೆಗೆ ಹೋಗಿದ್ದೆ. ಯಾವುದೋ ಸಮಾರಂಭಕ್ಕೆ ಎಂದು ಅವನ ಹೆಂಡತಿ ಅವರ ಹದಿನಾಲ್ಕು ವರ್ಷದ ಮಗಳಿಗೆ ಪ್ಯಾಡೆಡ್ ಬ್ರಾ, ಅದಕ್ಕೊಪ್ಪುವ ಡ್ರೆಸ್ ಹಾಕಿಸಿ ರೆಡಿ ಮಾಡಿದ್ದಳು. ಆ ವಯಸ್ಸಿಗೆ ಅದು ಅಸಹಜ ಮತ್ತು ಕಿರಿಕಿರಿ ಎನಿಸುತ್ತಿತ್ತು. ಅವರನ್ನು ಕರೆದೊಯ್ಯಲು ಬಂದ ಸ್ನೇಹಿತ ಅರೆ ಕ್ಷಣದಲ್ಲಿ ಇದನ್ನು ಗುರುತಿಸಿ ಮಗಳಿಗೆ ನಿನ್ನಿಷ್ಟದ ಡ್ರೆಸ್ ಹಾಕಿಕೊ ಎಂದು ಒಳಗೆ ಕಳುಹಿಸಿದ. ಹೆಂಡತಿಯ ಕಡೆ ತಿರುಗಿ ಅರಗಿಳಿಯಂಥ ಹೆಣ್ಣು ಮಕ್ಕಳು ಸಹಜವಾಗಿಯೇ ಚೆಂದ. ಅರಳೋ ಮಲ್ಲಿಗೆ ಅರಳಲಿ ಮೆಲ್ಲಗೆ ಬಲವಂತ ಬೇಡ ಎಂದ. ಎದುರು ನಿಂತು ಮಾತನಾಡುತ್ತಲೇ ಕತ್ತಿನ ಕೆಳಗೆ ನೋಟ ನಿಲ್ಲಿಸಿ ಮುಜುಗರವುಂಟು ಮಾಡುವ, ತುಂಬಿ ತುಳುಕುವ ಬಸ್‌ನ ಕಂಬಿಗೊರಗಿ ನಿಂತು, ಸೀಟ್‌ನಲ್ಲಿ ಕೂತ ಹುಡುಗಿಯ ಮುಂಭಾರದೆಡೆಗೆ ಇಣುಕಿ ನೋಡಿ ಕಿರಿಕಿರಿಯುಂಟು ಮಾಡುವವರ ನಡುವೆ ಇಂಥವರು ಬಹುಮಾನ್ಯರು ನನಗೆ.

ದುಂಡು ಮಲ್ಲಿಗೆ ದಂಡೆಯ ಎದೆ

ಹಾಲು ಹಲ್ಲಿನ ಹಸುಳೆಗೆ ಎದೆಯೂಡಿಸುತ್ತಿದ್ದಾಗ ಚಿನ್ನಾಟಕ್ಕೆ ಬಿದ್ದು ತುಸು ಜೋರಾಗೆ ಕಚ್ಚಿತ್ತು. ಅದಕ್ಕೆ ಏನು ಮಾಡಬೇಕು ಎನ್ನುವುದು ತೋಚದ ಸ್ನೇಹಿತೆ ಹತ್ತಿರವಿದ್ದ ನಮ್ಮ ಮನೆಗೆ ಓಡಿ ಬಂದಿದ್ದಳು. ಮೊಲೆತೊಟ್ಟಿಗೆ ತೇಯ್ದ ಅರಿಶಿಣ ಸವರುತ್ತ ಇನ್ನೊಮ್ಮೆ ಹಾಗೆ ಮಾಡಿದರೆ ಅರೆಕ್ಷಣ ಮಗುವಿನ ಮೂಗು ಹಿಡಿ, ಬಾಯಿ ತೆರೆಯುತ್ತದೆ ಎಂದು ಸಲಹೆ ಕೊಟ್ಟಳು ಅವ್ವ.

ಇದಾದ ಸ್ವಲ್ಪ ದಿನಕ್ಕೆ ಹುಟ್ಟಿದ ಕೂಸನ್ನು ಕಳೆದುಕೊಂಡಿದ್ದ ಸ್ನೇಹಿತೆಯನ್ನು ನೋಡಲು ದೊಡ್ಡಕ್ಕನೊಟ್ಟಿಗೆ ಹೋಗಿದ್ದೆ. ಖಿನ್ನೆತೆಯಲ್ಲಿ ಆಸ್ಪತ್ರೆಗೂ ಹೋಗಲಾರದೆ ಹಾಲಿನ ಹನಿ ಭಾರಕ್ಕೆ ವಿಲಗುಟ್ಟುತ್ತಿರುವವಳ ಎದೆಗೆ ಮಲ್ಲಿಗೆ ಹೂವಿಟ್ಟು ಕಟ್ಟು ಕಟ್ಟಿದ ಅಕ್ಕ ಸ್ವಲ್ಪ ನೋವು ತಾಳಿಕೊ, ಎಲ್ಲ ಸರಿಹೋಗುತ್ತದೆ ಎಂದು ಸಮಾಧಾನ ಮಾಡಿದಳು. ಇಂತಹ ಯಾವ ಸೂಕ್ಷ್ಮಗಳೂ ಗೊತ್ತಿಲ್ಲದ ನನ್ನ ಪೀಳಿಗೆಗೆ ಇದು ಸೌಂದರ್ಯದ ಕುರುಹು ಮಾತ್ರ ಆಗಿದ್ದೇಕೆ? ಎನ್ನುವ ಪ್ರಶ್ನೆಯೊಂದಿಗೆ ನೆನಪಾದ ದುಂಡು ಮಲ್ಲಿಗೆ ದಂಡೆಯ ಎದೆ ಹಾಡಿದು.

‍ಲೇಖಕರು avadhi

November 10, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

4 ಪ್ರತಿಕ್ರಿಯೆಗಳು

  1. T S SHRAVANA KUMARI

    ತುಂಬಾ ತುಂಬಾ ಚೆನ್ನಾಗಿದೆ. ಒಳ್ಳೆಯ ಬರಹಕ್ಕೆ ಹಾರ್ದಿಕ ಅಭಿನಂದನೆಗಳು

    ಪ್ರತಿಕ್ರಿಯೆ
  2. G.W.Carlo

    Fascinating subject ಬಗ್ಗೆ ಅಷ್ಟೇ fascinate ಆಗಿದೆ. ಹೀಗೇ ಬರೀತಾ ಇರಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: