ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೀಪ್ತಿ ಕಣ್ಣ ಮುಂದಿನ ವಾಸ್ತವ

 

kallesh kumbar

ಕಲ್ಲೇಶ್ ಕುಂಬಾರ್, ಹಾರೂಗೇರಿ

ಆ ಬದಿಯ ಹೂವು (ಕಥಾ ಸಂಕಲನ)
ದೀಪ್ತಿ ಭದ್ರಾವತಿ
ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ
ಬೆಲೆ: 90/-
** ** ** ** **
ಭಿನ್ನ ನೆಲೆಯ ಕಥೆಗಳು

‘ಆ ಬದಿಯ ಹೂವು’- ದೀಪ್ತಿ ಭದ್ರಾವತಿಯವರ ಮೊದಲ ಕಥಾ ಸಂಕಲನ. ಇವರು, ತಮ್ಮ ಸುತ್ತಲಿನ ಲೋಕವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವ ಪ್ರಬುದ್ಧ ಕಥೆಗಾರ್ತಿ. ಒಂದು ಅರ್ಥದಲ್ಲಿ, ದೀಪ್ತಿಯವರು ಮಹಿಳಾ ಸಂವೇದನೆಯ ಕಥೆಗಳು ಎಂಬ ಚೌಕಟ್ಟನ್ನು ಮೀರಿ ಕಣ್ಣ ಮುಂದಿನ ವಾಸ್ತವ ಪರಿಸರದಲ್ಲಿನ ಮನುಷ್ಯ ಮತ್ತು ಮನುಷ್ಯೇತರ ಬದುಕಿನ ಸಂಗತಿಗಳನ್ನು ತಮ್ಮ ಕಲ್ಪನೆಯಲ್ಲಿ ಮರು ಸೃಷ್ಟಿಸುತ್ತ ಹೊಸ ವಾಸ್ತವವನ್ನು ಇಲ್ಲಿನ ಕಥೆಗಳಲ್ಲಿ ಕಟ್ಟಿದ್ದಾರೆ.
Art-Kallesh-Kumbar1ಪ್ರಸ್ತುತ, ಈ ಸಂಕಲನದಲ್ಲಿರುವ ಮೊದಲ ಕಥೆ, ‘ತಿಮ್ಮಯ್ಯ ಮಾರ್ಕೆಟ್’- ಮನುಷ್ಯ ಬದುಕಿನಲ್ಲುಂಟಾಗುವ ಸ್ಥಿತ್ಯಂತರಗಳನ್ನು ಈ ಕಥೆಯ ಮುಖ್ಯ ಪಾತ್ರವೆಂಬಂತೆಯೇ ಇರುವ ‘ತಿಮ್ಮಯ್ಯ ಮಾರ್ಕೆಟ್’ನ ಇರುವಿಕೆಯಲ್ಲಿ ಕಾಲಾಂತರದಲ್ಲಿ ಉಂಟಾದ ಬದಲಾವಣೆಗಳೊಂದಿಗೆ ಸಮೀಕರಿಸಿ ಹೇಳುತ್ತದೆ. ಇಲ್ಲಿ, ಮಾರಿಮುತ್ತು ಮತ್ತು ಜಾಂಬವತಿ ಎಂಬ ಎರಡು ಪಾತ್ರಗಳು ನಿರ್ವಹಿಸಿದ ಅಸಹನೀಯ ಬದುಕಿಗೆ ಅವರ ಗಂಡಂದಿರಾದ ಇಳಂ ಮತ್ತು ಮಲ್ಲೇಶರ ನಡುವಿನ ಈರ್ಷೆಯೇ ಮೇಲ್ನೋಟಕ್ಕೆ ಕಾರಣವೆನಿಸಿದರೂ ಸಹ ಅದರ ಆಂತರ್ಯದಲ್ಲಿ ‘ತಿಮ್ಮಯ್ಯ ಮಾರ್ಕೆಟ್’ ಕ್ರಮೇಣ ಹೊಸ ರೂಪು ಪಡೆದುಕೊಳ್ಳಲಾರಂಭಿಸಿದ್ದೇ ನಿಜದ ಕಾರಣವಾಗಿದೆ ಎಂಬುದನ್ನು ಕಥೆ ಸೂಚ್ಯವಾಗಿ ಹೇಳುತ್ತದೆ.

ಹೀಗೆ, ನಗರವೊಂದು ತನ್ನನ್ನು ತಾನು ಹೊಸದಾಗಿ ಮಾರ್ಪಾಡು ಮಾಡಿಕೊಳ್ಳುವಾಗ ಮನುಷ್ಯನ ಬದುಕನ್ನು ಹೇಗೆಲ್ಲ ಆಪೋಷಣೆ ಮಾಡಿಕೊಳ್ಳುತ್ತದೆ ಎಂಬುದನ್ನು ‘ತಿಮ್ಮಯ್ಯ ಮಾರ್ಕೆಟ್’ನ ವಿಚಾರದಲ್ಲಿ ಸಂಭವಿಸಿದ ಘಟನೆಯ ಮೂಲಕ ದೀಪ್ತಿಯವರು ಸೂಚ್ಯವಾಗಿ ಹೇಳುತ್ತಾರೆ.
ಇನ್ನು, ‘ದೇವರ ಕಲ್ಲು’ ಕಥೆ, ದೇವರು-ಧರ್ಮಗಳ ವಿಚಾರದಲ್ಲಿ ಈ ಇಂಥ ದಿನಗಳಲ್ಲೂ ಉಳಿದುಕೊಂಡು ಬಂದ ಆಸ್ತಿಕ ನಂಬಿಕೆಗಳು ಕೆಲವೊಮ್ಮೆ ಮನುಷ್ಯನ ಬದುಕನ್ನು ಹೇಗೆ ರೌರವ ನರಕವಾಗಿಸುತ್ತವೆ ಎಂಬುದನ್ನು ಅನಾವರಣ ಮಾಡುತ್ತದೆ.

ಈ ಕಥೆಯ ಮುಖ್ಯ ಪಾತ್ರ, ಅಲಮೇಲಮ್ಮನಿಗೆ ಕೆರೆಯಲ್ಲಿ ಸಿಕ್ಕುವ ನುಣುಪು ಕಲ್ಲು, ಜನರ ಮೂಢ ನಂಬಿಕೆಗಳಿಂದಾಗಿಯೇ ‘ಕೆರೆ ದುರ್ಗಮ್ಮ’ ಎಂಬ ಹೆಸರಿನಲ್ಲಿ ಆಕೆಯ ಮನೆಯಲ್ಲಿ ಪ್ರತಿಷ್ಠಾಪನೆಗೊಂಡು, ಕ್ರಮೇಣ ಅಲಮೇಲಮ್ಮನ ಅಸ್ತಿತ್ವವನ್ನೇ ಅಲುಗಾಡಿಸುವ ಮಟ್ಟಕ್ಕೆ ಬಂದು ನಿಲ್ಲುತ್ತದೆ. ಇದರೊಂದಿಗೆ, ಆಕೆಯ ವಿಚಾರದಲ್ಲಿ ಬೆಸೆದುಕೊಳ್ಳುವ ಊರ ಜನರ ದ್ವೇಷ, ಅಸೂಯೆ, ಸ್ವಾರ್ಥಗಳು ಆಕೆಯ ಬದುಕನ್ನೇ ಅಸಹನೀಯವಾಗಿಸುತ್ತವೆ. ಕೊನೆಗೆ, ಇದೆಲ್ಲವನ್ನೂ ಎದುರಿಸಲಾಗದ ಅಲಮೇಲಮ್ಮ ಆ ಕಲ್ಲನ್ನು ಮತ್ತೇ ಕೆರೆಗೆ ಹಾಕುವ ನಿಧರ್ಾರಕ್ಕೆ ಬರುವುದರ ಮೂಲಕ ಮತ್ತೇ ಸಹನೀಯ ಬದುಕನ್ನು ಹೊಂದಲು ಬಯಸುತ್ತಾಳೆ ಎನ್ನುವ ಅರ್ಥವನ್ನು ಧ್ವನಿಸುವುದರ ಮೂಲಕ ಕಥೆ ಮುಕ್ತಾಯಗೊಳ್ಳುತ್ತದೆ.

ಇನ್ನೊಂದು, ‘ನೀಲಾಂಬರ’ ಕಥೆ, ಆಧುನಿಕ ಕೈಗಾರಿಕರಣ ನೀತಿಯಿಂದಾಗಿ ಮಧ್ಯಮ ವರ್ಗದ ಜನರ ಬದುಕಿನಲ್ಲಿ ಉಂಟಾಗುತ್ತಿರುವ ಸ್ಥಿತ್ಯಂತರಗಳನ್ನು ಗುರುತಿಸುತ್ತದೆ. ಕಥೆಯ ಮುಖ್ಯ ಪಾತ್ರ, ಕಾಖರ್ಾನೆಯ ಮುಂದೆ ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿರುವ ನೀಲಾಂಬರನು, ತನ್ನಪ್ಪನ ಪ್ರಾಮಾಣಿಕತೆಯ ದೆಸೆಯಿಂದಾಗಿಯೇ ಕಾಲಾಂತರದಲ್ಲೂ ತೀರ ಕೆಳದರ್ಜೆಯ ಬದುಕನ್ನು ನಿರ್ವಹಿಸುವಂತಾಗುವುದು ನಮ್ಮದೇ ವ್ಯವಸ್ಥೆಯ ರೀತಿಯನ್ನು ಅಣಕಿಸುವಂತಿದೆ. aa badiya hoovuಇದಕ್ಕೆ ಪೂರಕವಾಗಿಯೆಂಬಂತೆ ಹಳೆಯ ಕಾರ್ಖಾನೆಯು ಲಾಕ್ ಔಟ್ ಆಗುವುದರ ಮೂಲಕ ನೀಲಾಂಬರನ ಹೆಂಡತಿ-ಮಕ್ಕಳು ಊರು ಬಿಡುವ ನಿರ್ಧಾರಕ್ಕೆ ಬರುವುದು ಒಂದು ರೀತಿಯಲ್ಲಿ ಪರಿಸ್ಥಿತಿಯ ವಿಷಮತೆಯ ಪರಿಯನ್ನು ಅರಿವಿಗೆ ತರುತ್ತದೆ. ಆದರೆ, ಕೊನೆಗೂ ನೀಲಾಂಬರನು ಊರು ಬಿಡುವ ನಿರ್ಧಾರಕ್ಕೆ ಬರದೇ ಇರುವುದು ಕಳೆದುಕೊಂಡಲ್ಲೇ ಹುಡುಕಬೇಕೆಂಬ ಮಾತಿಗೆ ಪೂರಕವಾಗಿರುವಂತಿದೆ.

ಮತ್ತೊಂದು, ‘ಗ್ರಾಸ’ ಕಥೆ, ಬಾಹ್ಯ ಜಗತ್ತಿನಲ್ಲಿ ಯಾರೊಬ್ಬರ ಅರಿವಿಗೂ ಬಾರದ, ಮನುಷ್ಯನ ಆಂತರ್ಯದಲ್ಲಿನ ವಯಕ್ತಿಕ ನೆಲೆಗೆ ಸಂಬಂಧಿಸಿದ ನೋವು, ಸಂಕಟ, ಹತಾಶೆ, ಪಾಪಪ್ರಜ್ಞೆ- ಇವೆಲ್ಲವುಗಳನ್ನು ವರ್ತಮಾನ ಸಂದರ್ಭದಲ್ಲಿ ಸಂಭವಿಸಬಹುದಾದ ಘಟನೆಯೊಂದಿಗೆ ಸಮೀಕರಿಸಿ ಹೇಳುತ್ತದೆ. ಕಥೆಯಲ್ಲಿ ಬರುವ ಸೀತಾರಾಮನನ್ನು ಅನಾಮಿಕ ಅಜ್ಜ ಬಿಡದೇ ಕಾಡುವುದಕ್ಕೂ ಒಂದು ಕಾರಣವಿದೆ. ವಾಸ್ತವದಲ್ಲಿ ಹಾಸುಗೆ ಹಿಡಿದು ಮಲಗಿದ್ದ ವಯಸ್ಸಾದ ಅಪ್ಪ, ರಾಜು ಭಟ್ಟರು ಕೊನೆಗಾಲದಲ್ಲಿ ಊಟವನ್ನು ತ್ಯಜಿಸುವುದು ಮಗ, ಸೀತಾರಾಮನ ಸಮಾಧಾನಕ್ಕೆ ಕಾರಣವಾಗುವುದರ ಮೂಲಕ ಆತನೊಳಗಿನ ಅಸಹಾಯಕತೆಯ ರೂಪದ ತಣ್ಣನೆಯ ಕ್ರೌರ್ಯವನ್ನು ಅನಾವರಣ ಮಾಡುತ್ತದೆ.

ಹಾಗೆಯೇ, ಈ ಕಥಾ ಸಂಕಲನದ ಶೀರ್ಷಿಕೆಯೂ ಆಗರುವ, ‘ಆ ಬದಿಯ ಹೂವು’ ಕಥೆ, ಸಾಮಾಜಿಕ ಕಟ್ಟಳೆಗಳನ್ನು ಮೀರಿದ ಸಂಬಂಧದ ಹಿಂದೆ ಬಿದ್ದು, ತನ್ನದೆನ್ನುವ ಬದುಕನ್ನು ಕಳೆದುಕೊಂಡ ಅಮಾಯಕ ಹೆಣ್ಣಿನ ಅಂತರಂಗದ ತುಮುಲವನ್ನು ಬಿಚ್ಚಿಡುತ್ತದೆ. ಇಲ್ಲಿ, ಕಥಾ ನಾಯಕಿ ಶಾರಿಯೂ, ತನ್ನ ತಾಯಿಯ ಮಾತನ್ನು ಮೀರಿ, ಪ್ರೀತಿಸಿದವನೊಂದಿಗೆ ಓಡಿ ಹೋಗುವುದು ಮತ್ತು ಆತ ಕೈಕೊಟ್ಟ ಮೇಲೆ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ, ಕೊನೆಗೆ ಬೀದಿ ಬದಿಯ ಸೂಳೆಯಾಗುವ ಸಂದರ್ಭದಲ್ಲಿನ ಚಿತ್ರಣವೇ ಕ್ಷಣ ಹೊತ್ತು ಓದುಗನ ಅಂತರಂಗವನ್ನೇ ಕಲಕಿ ಬಿಡುತ್ತದೆ. ಮತ್ತು, ಯಾರೋ ಬಿತ್ತಿದ ಬೀಜ ತನ್ನ ಗರ್ಭದಲ್ಲಿ ಕುಡಿಯೊಡೆದಾಗ ಅದನ್ನು ಕಿತ್ತೆಸೆವ ನಿರ್ಧಾರಕ್ಕೆ ಶಾರಿಯು ಬರುವುದರ ಹಿಂದೆಯೂ ಕೂಡ ಅನೇಕ ಕಾರಣಗಳಿದ್ದರೂ ಆಕೆ ಗರ್ಭಪಾತ ಮಾಡಿಸಿಕೊಳ್ಳಲೆಂದು ಆಸ್ಪತ್ರೆಗೆ ಹೊರಟು ನಿಂತಾಗ ಆಕೆಯ ಅಮ್ಮ, ‘ಶಾರಿ, ಹೋಗಬೇಡವೇ…’ ಎಂದು ಕೂಗಿದಂತಾಗುವುದು ಒಂದರ್ಥದಲ್ಲಿ ತಾಯ್ತನ ಎನ್ನುವುದು ಹೆಣ್ಣಿಗೆ ಯಾವತ್ತಿಗೂ ಕೂಡ ಶ್ರೇಷ್ಠವೇ ಎಂಬ ಮಾತಿಗೆ ಘನತೆಯನ್ನು ತರುವಂತಿದೆ.

ಅಲ್ಲದೇ, ಈ ಸಂಕಲನದಲ್ಲಿ ಓದುಗನನ್ನು ಚಿಂತನೆಗೀಡು ಮಾಡುವಂಥ ಇನ್ನಷ್ಟು ಕಥೆಗಳಿದ್ದು, ವರ್ತಮಾನ ಸಂದರ್ಭದ ವ್ಯವಸ್ಥೆಯಲ್ಲಿನ ಬಹುಮುಖ್ಯ ಸಂಗತಿಗಳನ್ನು ದೀಪ್ತಿಯವರು ಪ್ರತಿಕ್ರಿಯಾತ್ಮಕ ರೀತಿಯಲ್ಲಿ ಕಟ್ಟಿದ್ದಾರೆ. ಆದರೂ, ಕಥೆಯ ಚೌಕಟ್ಟಿಗೆ ವಸ್ತುವೊಂದನ್ನು ತರುವಾಗ ಅದನ್ನು ತಮ್ಮ ಪರಿಸರದ ಭಾಷೆಯೊಂದಿಗೆ ಒಳಗೊಳಿಸಿದಾಗ ಮಾತ್ರ ಕವಿತೆಯ ಬಂಧ ಕಥೆಗೆ ಬರಲು ಸಾಧ್ಯ ಎಂಬುದನ್ನು ದೀಪ್ತಿಯವರು ಈ ಸಂದರ್ಭದಲ್ಲಿ ಗಮನಿಸಬೇಕಾದ ಅಂಶವೂ ಹೌದು.

‍ಲೇಖಕರು admin

10 April, 2016

1 Comment

  1. smitha

    Abhinandanegalu deepthi-smitha.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading