ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ದೀಪಿಕಾ ಮತ್ತು ಅವಳ ಆಯ್ಕೆ’ – ವೈಶಾಲಿ ಹೆಗಡೆ

“ಪಡು”ಕೋಣೆಯೂ ಪೂರ್ವಾಗ್ರಹವೂ

-ವೈಶಾಲಿ ಹೆಗಡೆ


ದೀಪಿಕಾ ಪಡುಕೋಣೆಯ ವೀಡಿಯೋ ಜಾಹೀರಾತಿನ ಬಗ್ಗೆ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದಾಗ ಅನಿಸಿದ್ದು, ಅಯ್ಯೋ ದೇವರೇ ನನ್ನ ಜನಕ್ಕೆ ಮಾಡಲು ಬೇರೆ ಕೆಲಸವಿಲ್ಲವೇ? ಇದೂ ಒಂದು ದೇಶಾದ್ಯಂತ ನಡೆಯಬೇಕಾದ ಚರ್ಚೆಯೇ? ನಮ್ಮ ಮಾಧ್ಯಮಗಳಿಗೆ ಸುದ್ದಿಗೆ ಇಷ್ಟೊಂದು ಬರವೇ? ಕಾಮಸೂತ್ರ ಬರೆದು ಹಂಚಿದ ದೇಶಕ್ಕೆ ಇಂಗ್ಲೀಷಿನಲ್ಲಿ ಸೆಕ್ಸ್ ಎಂದು ಹೇಳಿಬಿಟ್ಟರೆ ಇಷ್ಟೆಲ್ಲಾ ಆಘಾತವಾಗುತ್ತದೆಯೇ? ಕರ್ಮ ಕರ್ಮ. ಇರಲಿ ಈಗ ನಾನೂ ಕೆಲಸವಿಲ್ಲದವಳಂತೆ ಇದನ್ನು ವಿಶ್ಲೇಶಿಸುತ್ತಿದ್ದೇನೆ .
ವೋಗ್ ಪತ್ರಿಕೆಯ ಮಹಿಳಾ ಸಬಲೀಕರಣದ ಹಣೆಪಟ್ಟಿಯಡಿಯಲ್ಲಿ ಬಿಡುಗಡೆಯಾದ ಈ ಜಾಹೀರಾತಿನ ವೀಡಿಯೋ, ನೋಡಲೇನೋ ಚೆನ್ನಾಗಿಯೇ ಇದೆ, ಗಟ್ಟಿ ದನಿಯಲ್ಲಿ ಆರಂಭವಾಗುವ ಇದು ಮೂಲವಾಗಿ ಹೇಳಹೊರಟಿದ್ದ ಸತ್ಯ, ಸ್ವಲ್ಪ ವಿವೇಚನೆಯಿಂದ ಅರ್ಥೈಸಿಕೊಂಡರೆ ಸಂದೇಶದ ಉದ್ದೇಶ ಖಂಡಿತ ತಿಳಿಯುತ್ತೆ. ಆದರೆ ಎಡವಟ್ಟಾದದ್ದು ಒಂದು ವಾಕ್ಯದಿಂದ. “ಮದುವೆಯ ಚೌಕಿಟ್ಟಿನಾಚೆಗಿನ ಸೆಕ್ಸ್, ನನ್ನ ಆಯ್ಕೆ ” ಅಂದುಬಿಟ್ಟಳಲ್ಲ. ಅದು ಸಂಪೂರ್ಣ ಉದ್ದೇಶವನ್ನು ತಲೆಬುಡ ಮಾಡಿಬಿಟ್ಟಿತು. ಆ ವಾಕ್ಯ ಇದ್ದರೂ, ಕೊನೆಯಲ್ಲೊಂದು ಆ ಇಡೀ ಸಮಗ್ರ ವೀಡೀಯೋ ಹೇಳಲು ಹೊರಟಿದ್ದ “ My Body My life My choice, Consequences of my choices are just mine, I know how to make right choices” ಎಂದುಬಿಟ್ಟಿದ್ದರೆ ಆ ವೀಡಿಯೋದ ಮೂಲ ಉದ್ದೇಶ ಈಡೇರಿಬಿಡುತ್ತಿತ್ತು. ಆದರೆ ಗೊಂದಲಮಯ ವಾಕ್ಯಗಳಿಂದ ಸಂದೇಶವನ್ನು ಸಮರ್ಥವಾಗಿ ರವಾನಿಸಲು ಸೋತಿದೆ. ಕೊನೆಯಲ್ಲಿ ಅರ್ಥೈಸಿಕೊಳ್ಳಬೇಕಾದ ಆಯ್ಕೆಯ ಸ್ವಾತಂತ್ರ್ಯದ ಅರಿವು ಆ ಗೊಂದಲಮಯ ವೀಡಿಯೋದಲ್ಲಿಯೂ ವಿವೇಚನೆಯಿರುವವರಿಗೆ ಖಂಡಿತ ಅರ್ಥವಾಗುತ್ತೆ. ಜೊತೆಯಲ್ಲಿ ನೇರಾನೇರ ಹೇಳಿದ್ದನ್ನು ಕೇಳಿದರೆ, ತೀರ ನಿಷ್ಟುರ, ಅಸಂಬದ್ಧ ಎನಿಸುತ್ತೆ.
ಇಷ್ಟಕ್ಕೂ ಇಂಗ್ಲೀಷಿನಲ್ಲಿ ತುಂಬಾ ಮಾಡ್ರನ್ ಸ್ತೈಲಿನಲ್ಲಿರುವ ಈ ಜಾಹೀರಾತು ಮಹಾ ಎಷ್ಟು ಜನರನ್ನು ಅನಾಚಾರಕ್ಕೆಳೆದೀತೆಂದು, ಸಮಾಜಕ್ಕೆ ಅನರ್ಥಕಾರಿ ಸಂದೇಶ ಕೊಡುತ್ತಿದೆ ಎಂದೆಲ್ಲಾ ಗದ್ದಲ? ಅರ್ಬನ್ ಸ್ತ್ರೀಯರಿಗೆ ಹೋಗಲಿ ಸುಶಿಕ್ಷಿತ ಮಧ್ಯಮ ವರ್ಗದಲ್ಲಿ ಕೂಡ “ಮೈ ಚಾಯ್ಸ್” ಎಂಬ ಅರಿವು ಇದ್ದೆ ಇದೆ. ಯಾವುದು ಸರಿ ಆಯ್ಕೆ ಯಾವುದು ಅಲ್ಲ ಎಂಬ ಮೂಲ ನೈತಿಕತೆ ಕೂಡ ಪ್ರತಿಯೊಬ್ಬರ ಆಯ್ಕೆ. ಆದರೆ ಇಂದಿಗೂ ತನಗೂ ಆಯ್ಕೆಯ ಸ್ವಾತಂತ್ರ್ಯವಿದೆ ಅನ್ನುವ ಅರಿವಿಲ್ಲದ ಬಹಳಷ್ಟು ಮೂಲೆ ಹಳ್ಳಿಗಳಿಗೆ ದೀಪಿಕಾ ಇಂಗ್ಲೀಷಿನಲ್ಲಿ ಹೇಳಿದ ಸಂದೇಶ ತಲುಪಿ ಎಂಪವರ್ ಆಗಿಬಿಡಲು ಸಾಧ್ಯವೇ? ಪ್ರೀತಿಸಿದವನೊಡನೆ ಮದುವೆಯಾಗಲು ಬಿಡದ ಖಾಫ್ ಪಂಚಾಯತ್ ಹಳ್ಳಿಗಳಲ್ಲಿ ನಡುಗುವ ಹೆಣ್ಣುಗಳಿಗೆ ಮೈ ಚಾಯ್ಸ್ ಅರ್ಥವಾದೀತೆ? ಹೆಣ್ಣು ಹಡೆದರೆ ಹೊಸಕಿಬಿಡುವ ರಾಕ್ಷಸರೆದುರು ನಿಂತು, ಹಸಿ ಬಾನಂತಿಯೊಬ್ಬಳಿಗೆ ನನ್ನ ಮಗು ನನ್ನ ಆಯ್ಕೆ ಎಂದು ಎದ್ದು ನಿಲ್ಲಲಾದೀತೇ? ಶಾಲೆಗೆ ಹೋಗುವ ಆಯ್ಕೆಯೂ ಇಲ್ಲದ ಹುಡುಗಿಯೊಬ್ಬಳು ವಿದ್ಯೆ ನನ್ನ ಆಯ್ಕೆ ಎಂದು ಪಾಟಿಚೀಲ ಎತ್ತಿಕೊಳ್ಳುವಳೇ? ನನಗೆ ಅವಳ ಸೆಕ್ಸ್ ವಾಕ್ಯಕ್ಕಿಂತ ವೀಡೀಯೋದಲ್ಲಿ ಈ ಕೊರತೆ ಇನ್ನೂ ದೊಡ್ಡದಾಗಿ ಕಾಣಿಸುತ್ತಿದೆ. ಸಬಲರಾಗಿರುವ ಮಹಿಳೆಯರಿಗೆ ಇನ್ನೊಮ್ಮೆ ರಾಗಿ ತಿನ್ನಿ ಅಂದಂತಾಗಿದೆ ಈ ವೀಡಿಯೋ.

ಆದರೆ ಇಷ್ಟು ವರ್ಷ ಏನೇನೆಲ್ಲ ಅಸಂಬದ್ಧ ಜಾಹೀರಾತನ್ನು ಸಹಿಸಿಕೊಂಡಿರುವ ಮಾಧ್ಯಮಗಳ ಅಗ್ರಗಣ್ಯರಿಗೆ ಈಗ್ಯಾಕೆ ಹೀಗೆ ಸಮಾಜೋದ್ಧಾರ ನೆನಪಾಗುತ್ತಿದೆ ತಿಳಿಯುತ್ತಿಲ್ಲ. ಈಗ ಹೇಗೆ ಬರುತ್ತೋ “ಫೇರ್ ಅಂಡ್ ಲವ್ಲೀ” ಜಾಹೀರಾತು ಗೊತ್ತಿಲ್ಲ. ನನ್ನ ಚಿಕ್ಕಂದಿನ ನೆನಪು. ಒಬ್ಬ ಎಣ್ಣೆಗೆಂಪು, ತೀರ ಕಪ್ಪು ಕೂಡ ಅಲ್ಲದ ಹುಡುಗಿ. ಹೆಣ್ಣು ನೋಡಲು ಬರುವ ಹುಡುಗ, ಹುಡುಗಿ ಕಪ್ಪೆಂದು ನಿರಾಕರಿಸಿ ಹೋಗುತ್ತಾನೆ. ಆಕೆಯ ಗೆಳತಿ ಈ ದರಿದ್ರ ಕ್ರೀಮ್ ನೀಡುತ್ತಾಳೆ. ೩ ವಾರದಲ್ಲಿ ಬೆಳ್ಳಗೆ ಥಳಪಳ ಹೊಳೆದು ಇನ್ನೂ ಚೆಂದದ ಹುಡುಗನ್ನ ಮದುವೆಯಾಗುತ್ತಾಳೆ. ಇಲ್ಲಿ ಮಾತಿಲ್ಲ ಕತೆಯಿಲ್ಲ, ಭಾಷೆಯ ಅಗತ್ಯವೇ ಇಲ್ಲ, ಹಳ್ಳಿ ಹಳ್ಳಿಯ ಹೆಣ್ಣುಮಕ್ಕಳ ಆತ್ಮವಿಶ್ವಾಸವನ್ನು ಹೊಸಕಿ, ಕೀಳರಿಮೆ ಅರೆದು ಕುಡಿಸಿ ಕ್ರೀಮ್ ಮಾರಿದ ಜಾಹೀರಾತಿಗೆ ಒಬ್ಬಾನೊಬ್ಬ ಕೂಡ ಇಷ್ಟು ವರ್ಷಗಳಲ್ಲಿ ಪ್ಯಾನೆಲ್ ಡಿಸ್ಕಶನ್ ಮಾಡಲಿಲ್ಲ. ಸತತ ೨೦ ವರ್ಷಗಳಿಗೂ ಹೆಚ್ಚು ಕಾಲ ಕರಿ ಹುಡುಗಿಗೆ ಕೆಲಸ ಸಿಗಲ್ಲ, ಗಂಡ ಸಿಗಲ್ಲ, ಪ್ರಗತಿಯಿಲ್ಲ ಎಂಬಂತ ಜಾಹೀರಾತು ಬಿತ್ತರಿಸಿದ್ದೆ ಅಲ್ಲದೆ, ಅದನ್ನು ಮಾರಿಸಿಕೊಟ್ಟ ಸೆಲೆಬ್ರಿಟಿಗಳಿಗೇನು ಕಡಿಮೆಯೇ? ಇದು ಸಾಲದು ಎಂಬಂತೆ ನಿಜವಾದ ಸಮಾನತೆಯನ್ನು ಮೆರೆದು ಫೇರ್ ಎಂಡ್ ಹ್ಯಾಂಡ್ಸಂ ಎನ್ನುತ್ತಾ ಶಾರುಖ್ ಖಾನ್ ಕೂಡ ಹುಡುಗರನ್ನು ಬಿಳಿಯಾಗಿಸತೊಡಗಿದ. ಚರ್ಮದ ಬಣ್ಣದ ಬಗೆಗಿನ ಕೀಳರಿಮೆಯನ್ನು ನೀರೆರೆದು ಬೆಳೆಸಿದ ನಮ್ಮ ರೇಸಿಸ್ಟ್ ಸಮಾಜಕ್ಕೆ ಇದೆಲ್ಲ ಅನೈತಿಕ ಎನಿಸುವುದೆ ಇಲ್ಲ. ಶತ ಶತಮಾನಗಳಿಂದ “ಅಯ್ಯೋ ಮಗು ಇನ್ನೊಂಚೂರು ಬೆಳ್ಳಗಿರಬೇಕಿತ್ತು“ ಎನ್ನುವ ವಾಕ್ಯವನ್ನು ಆರಾಮ? ಊಟ ಆಯಿತಾ? ಎಂಬಷ್ಟೇ ಸಹಜವಾಗಿ ಸ್ವೀಕರಿಸಿರುವ ನಮಗೆ ಇದು ಕ್ರೌರ್ಯ ಎಂದು ಹೊಳೆಯಲೇ ಇಲ್ಲವಲ್ಲ. ಶಿಶುವಾಗಿರುವಾಲೇ ಆರಂಭವಾಗುವ ಹೇಳಿಕೆಗಳಿಗೆ ಜಾಹೀರಾತಿನ ಬೆಂಬಲ ಬೇರೆ. ನಪುಂಸಕ ಸಮಾಜ ಇಷ್ಟು ದಿನ ಸಹಿಸಿಕೊಂಡು ಬಂದಿತ್ತಲ್ಲವೇ? ಈಗ ದೀಪಿಕಾಳ ಸೆಕ್ಸ್ ಟಾಕ್ ನಿಂದ ಫುಲ್ ಶಾಕ್.
ಇಷ್ಟಕ್ಕೂ ಇದೊಂದು ಜಾಹೀರಾತು. ಕನಿಷ್ಠ ಪಕ್ಷ ಆಕೆ ಉತ್ತಮ ಮೂಲ ಉದ್ದೇಶವನ್ನಾದರೂ ಈ ಜಾಹೀರಾತಿನಲ್ಲಿ ಕಂಡಳು.ನನ್ನ ವಿಷಾದವಿಷ್ಟೇ, ಒಬ್ಬ ಸೆಲೆಬ್ರಿಟಿಯಾಗಿ ಆಕೆ ಸಾಧಿಸಬಹುದಾಗಿದ್ದ ಒಂದು ಒಳ್ಳೆಯ ಉದ್ದೇಶ ತನ್ನ ಗೊಂದಲಗಳಿಂದಾಗಿ ಏನಾಗಬೇಕಿತ್ತೋ ಅದಾಗದೆ ಹೋಗಿದೆ. ಎಲ್ಲೆಲ್ಲಿ ತಲುಪಬೇಕಿತ್ತೋ ಅಲ್ಲೆಲ್ಲ ತಲುಪಲು ಸಾಧ್ಯವೇ ಇಲ್ಲ. ಅನವಶ್ಯಕ ಅಸಂಬದ್ಧ ವಿವಾದಗಳನ್ನು ಹುಟ್ಟುಹಾಕಿದೆ.ಉದ್ದೇಶ ಸರಿ ಇತ್ತು, ಹೇಳಿದ ರೀತಿ ಸರಿ ಇಲ್ಲ.
ಆದರೆ ”ನನ್ನ ಆಯ್ಕೆ” ಎಂಬುದನ್ನು ಖಂಡಿತ ಹೊಸಕಿಬಿಡಲು ಸಾಧ್ಯವಿಲ್ಲ. ನಮ್ಮ ನಮ್ಮ ಪರಿಧಿಯಲ್ಲಿ ಎಷ್ಟು ಹುಡುಗಿಯರಿಗೆ ನಾವು ಆಯ್ಕೆಯ ಅರಿವನ್ನು ಕೊಟ್ಟಿದ್ದೇವೆ? ದೀಪಿಕಾಳಿಗೆ ಸಾಧಿಸಲಾಗದ್ದನ್ನು ನಾವು ಇಷ್ಟು ಅವಿವೇಕದಿಂದ ಕ್ಷುಲ್ಲಕ ಕಾರಣಗಳಿಗೆ ಹೊಸಕಿಬಿಡಬೇಕೆಂದಿಲ್ಲ. ಅಯ್ಕೆಯಿಲ್ಲದ ಪ್ರತಿಯೊಬ್ಬ ಹುಡುಗಿಗೂ ಆಯ್ಕೆಯ ಅರಿವಾದಾಗ ಮಾತ್ರ ಈ ಎಲ್ಲ ವಿವಾದಗಳಿಗೆ ಬೆಲೆ. ಇಲ್ಲದಿದ್ದರೆ Yes, It’s a feminist women empowerment video, which went little too far. Deal with it ಅಷ್ಟೇ.

‍ಲೇಖಕರು G

2 April, 2015

14 Comments

  1. Anil Talikoti

    ಅರ್ಥವತ್ತಾದ ಮಾತು – ‘ಅಯ್ಕೆಯಿಲ್ಲದ ಪ್ರತಿಯೊಬ್ಬ ಹುಡುಗಿಗೂ ಆಯ್ಕೆಯ ಅರಿವಾದಾಗ ಮಾತ್ರ ಈ ಎಲ್ಲ ವಿವಾದಗಳಿಗೆ ಬೆಲೆ’

  2. kusumabaale

    ಸರಿಯಾಗಿ ವಿಶ್ಲೇಷಣೆಗೆ ಹಚ್ಚಿದ್ದೀರಿ.ನನ್ನನ್ನೂ ಸೇರಿ ಬಹುತೇಕರ ಅಭಿಪ್ರಾಯಗಳಿವು.ಅಕ್ಷರವಾಗಿಸಿದ್ದೀರಿ.agree with u.

  3. bharathi b v

    Vaishali chendada article …

  4. ಅಪರ್ಣ ರಾವ್

    ಮೊದಲಿನಿಂದಲೂ ನಂಗೂ ಇದೆ ಅಭಿಪ್ರಾಯ..ನಿಜವಾದ ಸಮಸ್ಯೆ ಎದುರಿಸುತ್ತಿರುವವರ ಸಬಲೀಕರಣ ಮಾಡದೇ.. ಸಮಸ್ಯೆಯನ್ನು ಆರಾಮಾಗಿ ಬೀಸಿ ಒಗೆದು ಮುನ್ನಡೆಯಬಲ್ಲವರಿಗೆ ರತ್ನಗಂಬಳಿ ಹಾಸಿ ಉಪಚಾರ ಮಾಡುತ್ತಾರೆ.. ಜಾತಿ,ಧರ್ಮ ಇಂಥಹ ಸಮಸ್ಯೆಗಳು ಒಂದು ವಿಷಯವೇ ಅಲ್ಲದ ಕಡೆ ಸಾಹಿತಿಗಳಿಂದ ದೊಡ್ಡ ದೊಡ್ಡ ಭಾಷಣ ಬಿಗಿಸುತ್ತಾರೆ.. ವಿಷಯಕ್ಕೆ ತಕ್ಕ ಬರಹ ವೈಶಾಲಿ.

  5. ತಿಲಕ್ ರಾಜ್ ಸೋಮಯಾಜಿ

    ಎಲ್ಲದಕ್ಕಿಂತ ಮೊದಲು ಇದನ್ನು ನಿರ್ದೇಶಿಸಿರುವ ವ್ಯಕ್ತಿ ಹೋಮಿ ಅದಜಾನಿಯ ಮೊದಲು ನಿರ್ದೇಶಿರುವ ಚಿತ್ರಗಳನ್ನು ನೋಡಿದರೆ ತಿಳಿಯುತ್ತದೆ, ಪಾಶ್ಚಾತ್ಯ ಜೀವನ ಶೈಲಿಯನ್ನು ನಮ್ಮ ಮೇಲೆ ಹೇರುವ ಪ್ರಯತ್ನ ಮಾಡಿ ಅದನ್ನೇ ತುಂಬಾ ಸಾಮಾನ್ಯವೆಂಬಂತೆ ಚಿತ್ರಿಸುವುದು ಈತನ ಶೈಲಿ ಎಂದು. ಈತನಿಗೂ ಹಾಗೂ ದೀಪಿಕಾ ಇಬ್ಬರಿಗೂ ಮುಂದಿನ ಚಿತ್ರದ ತನಕ ಸುದ್ದಿಯಲ್ಲಿರುವುದು ಅವಶ್ಯಕ. ಸದ್ಯಕ್ಕೆ ಸುದ್ದಿಯಲ್ಲಿರುವುದು ಮಹಿಳಾ ಸಬಲೀಕರಣದ ವಿಷಯ ಅದನ್ನೆತ್ತಿಕೊಂಡು ಅರ್ಥವಿಲ್ಲದ ಒಂದು ಕಿರು ಚಿತ್ರ ಮಾಡುತ್ತಾರೆ, ನಾವೆಲ್ಲರೂ ಮೂರ್ಖರ ಥರ ಅದನ್ನ ನೋಡಿ, ವಿಮರ್ಶಿಸಿ, ವಿರೋಧಿಸಿ ಅದನ್ನ, ಅವರನ್ನು ಮತ್ತಷ್ಟು ಪ್ರಖ್ಯಾತಗೊಳಿಸುತ್ತೇವೆ.

  6. ಪ್ರಮೋದ್

    ಯಾರೋ(ಗ೦ಡು ಪ್ರಾಣಿ) ಬರೆದ ಶಬ್ದಗಳಿಗೆ ಬಾಯಾಗಿ, ಫ್ಯಾಶನ್ ಎ೦ಬ ದ್ವ೦ದ್ವ ನೀತಿಯ(ಸ್ಟೀರಿಯೋ ಟೈಪ್ ಗಳಿಗೆ ಕಟ್ಟಿಹಾಕುವ) ವೋಗ್ ಗೆ ಶರೀರವಾಗಿ ಬ೦ದ ಈ ವೀಡಿಯೋ ಸಬಲೀಕರಣದ ಹೆಸರಲ್ಲಿ ಹೆಚ್ಚಿನವರನ್ನು ತಪ್ಪಿಸಿದೆ. ಪಡುಕೋಣೆಯ ಸ್ಟಾರ್ ವಾಲ್ಯೂವನ್ನು ಭರಪೂರವಾಗಿ ಲಾಭವೆತ್ತಿದೆ.
    ನನ್ನಿಷ್ಟ ಚಿತ್ರ Before Sunrise (1995) ನಲ್ಲಿ ಒ೦ದು ಸ೦ಭಾಷಣೆ ಈಗಲೂ ಕಾಡುತ್ತಿದೆ, ಸತ್ಯಕ್ಕೆ ಹತ್ತಿರ ಎ೦ದೂ ಅನಿಸುತ್ತಿದೆ.
    Celine: You know, I have this awful paranoid thought that feminism was mostly invented by men so that they could like, fool around a little more. You know, women, free your minds, free your bodies, sleep with me. We’re all happy and free as long as I can %@#$ as much as I want.
    ಸೈನ್ ನೇವಲ್, ಟಿಪಿಕಲ್ ಮಿಡ್ಲ್ ಕ್ಲಾಸ್ ಹುಡುಗಿ ವರ್ಲ್ಡ್ ನ೦. 1 ಆದ ಅಪರೂಪದ, ಹೆಮ್ಮೆಯ ನ್ಯೂಸ್ ಗಿ೦ತ “ಮೈ ಚಾಯ್ಸ” ನ್ಯೂಸೇ ಜಾಸ್ತಿ ಓಡಿದ್ದು, ಚರ್ಚೆಯಲ್ಲಿರುವುದು ಖೇದಕರವೇ ಸರಿ. ಇ೦ತಹ ನ್ಯೂಸ್ ಗಳನ್ನು ಮತ್ತೆ ಮತ್ತೆ ತ೦ದಿಡುವ ಮಾಧ್ಯಮಗಳ ಪಾತ್ರವೂ ಖ೦ಡನಾರ್ಹ.

  7. Radhika

    You have put across the point very well Vaishali!

  8. Anonymous

    Good analysis.

  9. Chandra Kodi

    “ಸಬಲರಾಗಿರುವ ಮಹಿಳೆಯರಿಗೆ ಇನ್ನೊಮ್ಮೆ ರಾಗಿ ತಿನ್ನಿ ಅಂದಂತಾಗಿದೆ ಈ ವೀಡಿಯೋ”. Superb!!!!!!!!!!!

  10. vageesha JM

    I would have appreciated if your video at least shown or Talk about safety of woman,female foeticide, domestic violence, harassment at workplace, pay gap, the intrusive male gaze or a million other issues that a woman has to deal with everyday.
    Its a point less video..

  11. vidyashankar

    Well written… Thumbs Up!

  12. Srinath

    Superb Analysis!!!

  13. Vithal Katti

    ಪಡುಕೋಣೆಯ ಸ್ಟಾರ್ ವ್ಯಾಲ್ಯೂ ವನ್ನು ಬಳಸಿಕೊಂಡಿದ್ದು ಇಷ್ಟೆಲ್ಲಾ ಆವಾಂತರಕ್ಕೆ ಕಾರಣ. ಎಲ್ಲ ಹೆಣ್ಣುಮಕ್ಕಳು ಮೈ ಚಾಯ್ಸ್ ನ್ನು ತಮ್ಮ ಏಳಿಗೆಗಾಗಿ, ಸುಖಮಯ ಜೀವನಕ್ಕಾಗಿ,ಹಾಗು ಗಂಡಸರ ದಬ್ಬಾಳಿಕೆಯಿಂದ ಮುಕ್ತಿಗಾಗಿ ಬಳಸಿಕೊಂಡರೆ ಕ್ಷೇಮ.ವೈಶಾಲಿಯವರ ಲೇಖನ ಔಚಿತ್ಯಪೂರ್ಣ.

  14. Gayatri Badiger

    SUPER ANALYSIS.. Thank you…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading