ದೀಪಾ ಗೋನಾಳ
ಬಾಳೇನು ನೆನೆದಿಲ್ಲ
ತೊಡೆ ಕಾಲು ಮುಖ
ಮಾತ್ರ,
ಎದೆ ಬೆಚ್ಚಗಿದೆ
ಎದೆಯೊಳಗಿರುವ ನೀನೂ..
ಬಾಳೇನು ನೆನೆದಿಲ್ಲ
ತನುವಿನಾಚೆಯ ಹೊದಿಕೆ
ಅಲ್ಲಲ್ಲಿ ನೆನೆದಿದೆ
ತನುವಿನೊಳಗಿನ
ಆತ್ಮ ಬೆಚ್ಚಗಿದೆ,
ಆತ್ಮಕ್ಕಂಟಿದ ನೀನೂ
ಬಾಳೇನು ನೆನೆದಿಲ್ಲ
ಈ ಮಳೆಗಾಲಕ್ಕೆ
ಸಿಕ್ಕ ಬಾಳೆ ಬಾಗಿದೆ
ಮಳೆಮುತ್ತಿಗೆ ಸಿಕ್ಕ
ಎಳೆಎಲೆ ನಲುಗಿದೆ
ಬೇರು ನೆಲವ ಅಪ್ಪಿ
ಜೀವ ಬೆಚ್ಚಗಿದೆ
ಜೀವಕ್ಕೆ ಬೆಸೆದುಕೊಂಡ ನೀನೂ
ಬಾಳೇನು ನೆನೆದಿಲ್ಲ
ಸೋರುವ ಮನೆಯ
ಸುಣ್ಣ ಬಣ್ಣಗೆಟ್ಟಿದೆ
ಒಳಮಾಳಿಗೆ ಹಕ್ಕಳೆ
ಉದುರಿದೆ
ಒಲೆ ಬೆಚ್ಚಗಿದೆ
ಒಲೆಯ ಮೇಲಿನ ಅನ್ನವು
ಅನ್ನ ಉಣ್ಣುವ ನೀನೂ
ಬಾಳೇನು ನೆನೆದಿಲ್ಲ
ಕಣ್ಣು ತೋಯ್ದು
ಕಣ್ಣ ಮೇಲೆ ನೀರ ಪರದೆ
ರೆಪ್ಪೆಗುಂಟ ತೊಟ್ಟಿಕ್ಕುತ್ತಲೇ
ಇದೆ ಮಳೆ ನಿಂತರೂ
ಕಣ್ಣೊಳಗಿನ ಹನಿ ನಿಂತಿಲ್ಲ
ಬಿಂಬ ಮಾತ್ರ
ಬೆಚ್ಚಗಿದೆ ಬಿಂಬದೊಳಗಿನ
ನೀನೂ
0 ಪ್ರತಿಕ್ರಿಯೆಗಳು