ದೀಪಾವಳಿಯ ಮಿಂಚುಗಳು..
-ರಂಜನಿ ಪ್ರಭು
ಒಂದು
—
ಮೊದಲ ದೀಪಾವಳಿ
ಮದುಮಕ್ಕಳಿಗೆ
ಮುಂಜಾನೆ
ನಿವಾಳಿಸಿದ
ಆರತಿಯ ಓಕುಳಿ
ಸಂಜೆ ಬಾನಿನಲ್ಲಿ.
ಎರಡು
—
ನಿನ್ನೊಡನೆ ಸಲ್ಲಾಪದ ಗಳಿಗೆಗಳೆಂದರೆ
ಭೂ ಚಕ್ರ ವಿಷ್ಣು ಚಕ್ರ
ಗರಗರನೇ ತಿರುಗಿದಂತೆ
ಹೂ ಮತಾಪು
ಹೂಕುಂಡಗಳು
ಒಟ್ಟಿಗೇ ಅರಳುವಂತೆ
ಇಡೀ ದೀಪಾವಳಿಗೆ
ದೀಪಾವಳಿಯೇ
ಧುಮ್ಮಿಕ್ಕಿದಂತೆ.
ಮೂರು
—
ತಿರುಗುವ, ಕರಗುವ,
ಅರಳುವ, ಚಿಮ್ಮುವ
ಹಾರುವ, ಏರುವ
ಬೆಚ್ಚಿ ಬೀಳಿಸುವ
ಹತ್ತಾರು ಬಗೆ
ಪಟಾಕಿಯ ಅಭಿವ್ಯಕ್ತಿಗೆ.
ಹಾಗೆಯೇ
ಪ್ರೇಮದ ಅಭಿವ್ಯಕ್ತಿಯೂ ಕೂಡಾ.
ನಾಲ್ಕು
—
ಹೂ ಕಾರಂಜಿಗಳೂ
ಮತಾಪುಗಳೂ
ಸಂಬಂಧದ ಹಾಗೆ
ಕಣೋ ಹುಡುಗಾ
ಇದ್ದ ಮಾತ್ರಕ್ಕೆ
ಬೆಳಕು ಬೀರುವುದಿಲ್ಲ
ಪ್ರೀತಿಯ ಕಿಡಿ
ತಾಗಿಸಲೇ ಬೇಕು
ಬೆಳಕ ಕಾರಂಜಿ
ಹೊಮ್ಮಲು.
ಐದು
—-
ಹಚ್ಚಿದ ಪಟಾಕಿಗಳೆಲ್ಲ
ಸಿಡಿಯುವುದಿಲ್ಲ
ಕಟ್ಟಿದ ಕನಸುಗಳೆಲ್ಲ
ಫಲಿಸುವುದಿಲ್ಲ.
ಆರು
—-
ಮಾತು ಪಟಾಕಿ
ಸಿಡಿಮದ್ದುಗಳಂತೆ
ಬರೀ ಸದ್ದು ಮಾಡಿದಾಗ
ಮನದ ತುಂಬಾ
ಉಸಿರುಗಟ್ಟಿಸುವ
ಹೊಗೆ.
ಏಳು
—-
ನನ್ನವನ ಕಣ್ಣ
ಹಣತೆಗಳಲ್ಲಿ
ಮಿನುಗು ದೀಪದಂತೆ
ಕಂಬನಿಯ ಬಿಂದು
ಹಚ್ಚಿದ್ದು ನನ್ನದೇ
ಮಾತಿನ ಕಿಡಿ.
ಈಗ ನನ್ನಎದೆ ತುಂಬ ಉರಿ ಉರಿ.
ಎಂಟು
—–
ಕಾರ್ತಿಕ ಮಾಸದ
ಬೆಳದಿಂಗಳಿರುಳಲ್ಲಿ
ಎದೆಯ ಹೊಸಿಲಿನ
ಮೇಲೆ
ನನ್ನವನು ಹಚ್ಚಿಟ್ಟ
ದೀಪಗಳ ಸಾಲು
ಈ ದೀಪಾವಳಿ.
ಒಂಬತ್ತು
—-
ಇಂತಹದೇ ಒಂದು
ದೀಪಗಳ ತಿಂಗಳಲಿ
ಕತ್ತಲೆ ಬೆಳಕಿನ ಜೊತೆ ಸಂಧಾನ
ನಡೆಸುವ ಹೊರಳಿನಲಿ
ಅವನು ನನ್ನ ಅಂಗೈಯನ್ನು ತುಟಿಗೊತ್ತಿ
ಕಣ್ಣುಮುಚ್ಚಿ
ನುಡಿದ
ನೀ ಬರೆವ ಪ್ರತಿ
ಕವಿತೆ ಸಾಲಿಗೆ
ನನ್ನ ಪ್ರೀತಿಯ ಮುತ್ತು.
ಆ ಗಳಿಗೆಯಿಂದ
ಕವಿತೆ ಬರೆಯುತ್ತಲೇ ಇದ್ದೇನೆ
ಬರೆಯುತ್ತಲೇ……






0 Comments