ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಿವಾಕರ್ ನೇರ ನುಡಿ: ಕಾಂಗ್ರೆಸ್ ಪಕ್ಷದ ಹತಾಶ ರಾಜಕಾರಣ

ನಾ ದಿವಾಕರ

ಸಂವಿಧಾನದ ವಿಧಿ 356 ಅತಿ ಹೆಚ್ಚು ದುರ್ಬಳಕೆಗೊಳಗಾಗಿರುವುದು ಕಾಂಗ್ರೆಸ್ ಆಳ್ವಿಕೆಯಲ್ಲೇ. ಈ ಸಂದರ್ಭದಲ್ಲಿ ಅನೇಕ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು ಬೊಮ್ಮಾಯಿ ಪ್ರಕರಣದ ನಂತರ ಒಂದು ತಾತ್ವಿಕ ನೆಲೆಯನ್ನೂ ಕಂಡುಕೊಂಡಿದೆ. ಒಂದು ಚುನಾಯಿತ ಸರ್ಕಾರವನ್ನು ತನ್ನಿಷ್ಟ ಬಂದಂತೆ ವಜಾ ಮಾಡುತ್ತಿದ್ದ ಪರಂಪರೆಗೆ ಇತಿಶ್ರೀ ಹಾಡಿದ್ದೇ ಬೊಮ್ಮಾಯಿ ಪ್ರಕರಣ. ರಾಜ್ಯಪಾಲರು ಎಂದರೆ ಒಂದು ರಾಜ್ಯದ ಆಡಳಿತದ ಬಗ್ಗೆ ಸೂಕ್ತ ನಿಗಾವಹಿಸಿ, ಸಂವಿಧಾನದ ತತ್ವಗಳ ಉಲ್ಲಂಘನೆಯಾಗದಂತೆ ಸರ್ಕಾರವನ್ನು ನಡೆಸಿಕೊಂಡು ಹೋಗುವ ಹೊಣೆಗಾರಿಕೆಯನ್ನು ಹೊತ್ತಿರುತ್ತಾರೆ. ಕೇಂದ್ರ ಸರ್ಕಾರದ ಸೂತ್ರದ ಗೊಂಬೆಗಳಂತೆ ವರ್ತಿಸುವ ರಾಜ್ಯಪಾಲರುಗಳಿಗೆ ಸರ್ವೋಚ್ಚ ನ್ಯಾಯಾಲಯ ಅನೇಕ ಸಂದರ್ಭಗಳಲ್ಲಿ ಕಪಾಳ ಮೋಕ್ಷ ಮಾಡಿರುವುದೂ ಉಂಟು. ಚುನಾಯಿತ ಸರ್ಕಾರ ಯಾವುದೇ ರೀತಿಯ ಸಾಂವಿಧಾನಿಕ ಬಿಕ್ಕಟ್ಟು ಎದುರಿಸಿದಾಗ ತಮ್ಮ ಪಕ್ಷ ಸಂಬಂಧಗಳನ್ನು ಬದಿಗಿಟ್ಟು, ನಿಷ್ಪಕ್ಷಪಾತವಾಗಿ, ಸಂವಿಧಾನದ ತತ್ವಗಳಿಗೆ ಬದ್ಧರಾಗಿ, ನ್ಯಾಯಯುತವಾದ ತೀರ್ಮಾನ ಕೈಗೊಳ್ಳುವುದು ರಾಜ್ಯಪಾಲರ ನೈತಿಕ ಹೊಣೆಗಾರಿಕೆ.

ಒಂದೂಕಾಲು ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಕುರಿತು ಪಾಠ ಹೇಳುವ ಅಗತ್ಯವಿಲ್ಲ. ಆದರೆ ಪ್ರಸ್ತುತ ಕರ್ನಾಟಕ ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಕಾಂಗ್ರೆಸ್ ಪಕ್ಷ ತನ್ನ ಪಾರಂಪರಿಕ ದೃಷ್ಟಿಕೋನದಿಂದ ಇನ್ನೂ ಹೊರಬಂದಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಮುಖ್ಯಮಂತ್ರಿಗಳು ಕೆಮ್ಮಿದರೂ ರಾಜೀನಾಮೆ ಕೇಳುವ, ಹೆಚ್ಚು ನಿದ್ರಿಸಿದರೆ ರಾಷ್ಟ್ರಪತಿ ಆಳ್ವಿಕೆಗೆ ಆಗ್ರಹಿಸುವ ಮಟ್ಟಕ್ಕೆ ಕಾಂಗ್ರೆಸ್ ನಾಯಕರು ತಲುಪಿದ್ದಾರೇನೋ ಎನಿಸುತ್ತದೆ. ನಿಜ, ಪ್ರಸ್ತುತ ಭಾಜಪ ಸರ್ಕಾರ ನೀತಿಗೆಟ್ಟ ಸರ್ಕಾರ. ಯಾವುದೇ ನೈತಿಕ ಮೌಲ್ಯಗಳಿಗೆ ಮಾನ್ಯತೆ ನೀಡದೆ, ಅಧಿಕಾರ ದಾಹದ ಪರಾಕಾಷ್ಠೆಗೆ ಸಂಕೇತವಾಗಿ ಭಾಜಪ ಸರ್ಕಾರ ರೂಪುಗೊಂಡಿದೆ. ಈ ಸರ್ಕಾರದ ಭ್ರಷ್ಟಾಚಾರದ ಹಗರಣಗಳು ಚಾರಿತ್ರಿಕ ದಾಖಲೆಯನ್ನೇ ಸೃಷ್ಟಿಸಿದೆ. ಆಪರೇಷನ್ ಕಮಲದಂತಹ ಕಾರ್ಯಾಚರಣೆಯ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗಿದೆ. ಲೂಟಿಕೋರರಿಗೆ, ಮಾಫಿಯಾಗಳಿಗೆ ರಾಜ್ಯದಲಿ ಮುಕ್ತ ಅವಕಾಶ ನೀಡಲಾಗಿದೆ. ಶಾಸಕರನ್ನು ಮಾರುಕಟ್ಟೆ ಸರಕುಗಳಂತೆ ಪರಿಗಣಿಸಿ ಖರೀದಿಸಲಾಗುತ್ತಿದೆ.

ಆದರೆ ಒಂದು ಪ್ರಬುದ್ಧ, ಪ್ರಜ್ಞಾವಂತ ವಿರೋಧ ಪಕ್ಷವಾಗಿ ಕಾಂಗ್ರೆಸ್ನ ನಿಲುವು ಹೇಗಿರಬೇಕು ? ಚುನಾವಣೆಗಳಲ್ಲಿ ನಡೆಯುವ ಅಕ್ರಮಗಳು ಏನೇ ಇರಲಿ, ಕಳೆದ ಎರಡು ವರ್ಷಗಳಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಬಹುತೇಕ ಮಣ್ಣು ಮುಕ್ಕಿದೆ. ಇಷ್ಟೊಂದು ಭ್ರಷ್ಟ ಸಕರ್ಾರ ಅಧಿಕಾರದಲ್ಲಿದ್ದಾಗಲೂ ಜನರನ್ನು ಬಡಿದೆಬ್ಬಿಸುವುದರಲ್ಲಿ ವಿಫಲವಾಗಿರುವ ಕಾಂಗ್ರೆಸ್ ಜನಸಾಮಾನ್ಯರ ನಡುವೆ ಸಂಚರಿಸಿ, ಸರ್ಕಾರದ ಅಕ್ರಮಗಳ ವಿರುದ್ಧ ಪ್ರಚಾರಾಂದೋಲನ ನಡೆಸಿ, ರಾಜ್ಯದಲ್ಲಿ ಒಂದು ಉತ್ತಮ ಪರ್ಯಾಯ ಒದಗಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳನ್ನು ಮಾಡುತ್ತಿಲ್ಲ. ಬದಲಾಗಿ ಕೇಂದ್ರದಲ್ಲಿನ ಅಧಿಕಾರವನ್ನು ಉಪಯೋಗಿಸಿ ರಾಜ್ಯ ಸರ್ಕಾರವನ್ನು ಪದಚ್ಯುತಗೊಳಿಸುವ ಹುನ್ನಾರ ನಡೆಸುತ್ತಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಪ್ರಜಾತಂತ್ರಕ್ಕೂ ಮಾರಕವಾದ ಬೆಳವಣಿಗೆಯಾಗಿದೆ.

ಪ್ರಜೆಗಳ ವಿಶ್ವಾಸ ಗಳಿಸದೆ, ಮತದಾರರಿಗೆ ಪರ್ಯಾಯ ವ್ಯವಸ್ಥೆಯ ಮಾರ್ಗವನ್ನು ಒದಗಿಸದೆ ಅಧಿಕಾರಕ್ಕೆ ಬರುವ ಹಗಲುಗನಸಿನಲ್ಲಿ ಕಾಂಗ್ರೆಸ್ ತೇಲುತ್ತಿದೆ. ಕಾಂಗ್ರೆಸ್ ನಾಯಕರು ರಾಜಭವನದಲ್ಲಿ ಕಳೆಯುವ ವೇಳೆಯನ್ನು ಜನರ ಮಧ್ಯದಲ್ಲಿ ಕಳೆದರೆ ರಾಜ್ಯಕ್ಕೂ ಒಳಿತು, ಪಕ್ಷಕ್ಕೂ ಒಳಿತು. ರಾಜಭವನಕ್ಕೆ ಹತ್ತಿರವಾಗುತ್ತಾ ಜನಮಾನಸದಿಂದ ದೂರವಾಗುತ್ತಿರುವ ಪಕ್ಷಕ್ಕೆ ಕಾಯಕಲ್ಪ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ಕಾಂಗ್ರೆಸ್ ಶಾಶ್ವತ ವಿರೋಧ ಪಕ್ಷವಾಗಿಯೇ ಉಳಿಯಬೇಕಾದೀತು. ಸೋಲಿನ ಸರಣಿಯಿಂದ ಜರ್ಝರಿತರಾಗಿ ಹತಾಶ ರಾಜಕಾರಣಕ್ಕೆ ಮುಂದಾಗಿರುವ ಕಾಂಗ್ರೆಸ್ನ ನಾಯಕ ಶಿಖಾಮಣಿಗಳು ಇನ್ನಾದರೂ ಕಣ್ತೆರೆದಾರೇ ?

‍ಲೇಖಕರು G

19 May, 2011

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading