ಪ್ರಸಾದ್
ಪ್ರಸಂಗ 1:
ವಾರದ ಹಿಂದಿನ ಮಾತು. ದೆಹಲಿ, ಗುರ್ಗಾಂವ್, ನೋಯಿಡಾ ಮುಂತಾದ ನ್ಯಾಷನಲ್ ಕ್ಯಾಪಿಟಲ್ ರೀಜನ್ (ಎನ್.ಸಿ.ಆರ್) ಎಂದು ಕರೆಯಲ್ಪಡುವ ಸ್ಥಳಗಳು ಈಗಾಗಲೇ ಚಳಿಯ ಚಾದರವನ್ನು ಹೊದ್ದುಕೊಂಡು ತಣ್ಣಗೆ ಥರಗುಡುತ್ತಿವೆ. ದಿನದ ಮಧ್ಯಭಾಗದಲ್ಲಿ ಸಿಗುವ ಅಲ್ಪಸ್ವಲ್ಪ ಬಿಸಿಲನ್ನು ಬಾಚಿಕೊಳ್ಳಲು ಎಲ್ಲರಿಗೂ ಧಾವಂತ. ದೆಹಲಿಯ ಚಳಿಗಾಲದ ದಿನಗಳಲ್ಲಿ ಮಾತ್ರ ಸಿಗುವ ಅದ್ಭುತ ಕ್ಷಣಗಳಿವು. ನಾನಿರುವ ಗುಗರ್ಾಂವ್ ನಗರವು ರಾಷ್ಟ್ರರಾಜಧಾನಿ ದೆಹಲಿಗೆ ಪಕ್ಕದ ಮನೆಯ ಹುಡುಗಿಯಿದ್ದಂತೆ. ಹೀಗೆ ಪುಸ್ತಕಗಳ ಶಾಪಿಂಗ್ ಮಾಡುವ ನೆಪದಲ್ಲಿ ಬಿಸಿಲನ್ನು ಸವಿಯಲು ಹೊರಟ ನಾನು ಗುಗರ್ಾಂವಿನ ಎಂ.ಜಿ ರೋಡಿನುದ್ದಕ್ಕೂ ನಾಯಿಕೊಡೆಗಳಂತೆ ಎದ್ದು ನಿಂತ ಶಾಪಿಂಗ್ ಮಾಲ್ ಗಳ ಸಾಲಿನಲ್ಲಿ ಒಂದರೊಳಗೆ ಎಂದಿನಂತೆಯೇ ಹೆಜ್ಜೆಯಿಟ್ಟೆ. ಎಂಟ್ರಿ ಅಂದಮೇಲೆ ಸೆಕ್ಯೂರಿಟಿ ಚೆಕ್ ಅನ್ನುವಂಥದ್ದು ಅಡುಗೆಗೆ ಉಪ್ಪಿದ್ದಷ್ಟೇ ಸಾಮಾನ್ಯ ಎಂದು ಬೇರೆ ಹೇಳಬೇಕಿಲ್ಲ ತಾನೇ. ಆದರೆ ಈ ಬಾರಿಯ ಸುರಕ್ಷಾ ತಪಾಸಣೆ ಕೊಂಚ ಹೆಚ್ಚೇ ಹಾಸ್ಯಾಸ್ಪದವಾಗಿತ್ತು. ಬ್ಯಾಗನ್ನು ಪುಟಾಣಿ ಟೇಬಲ್ಲಿನ ಮೇಲಿರಿಸಿದ ನಾನು ತಪಾಸಣೆಗಾಗಿ ಅದರ ಒಂದೊಂದಾಗಿ ಝಿಪ್ ಗಳನ್ನು ತೆರೆಯುತ್ತಾ ಹೋದರೆ ಸಮವಸ್ತ್ರದಲ್ಲಿದ್ದ ನಮ್ಮ ಸೆಕ್ಯೂರಿಟಿ ಸಾಹೇಬರು ಮುಂದೆ ಹೋಗೀಪ್ಪಾ ಎಂದು ಸಾವಧಾನವಾಗಿಯೇ ತಳ್ಳಿದರು. “ಅಲ್ಲಾ ಸಾರ್, ನನ್ನ ಬ್ಯಾಗಿನ ಒಂದೇ ಕಂಪಾರ್ಟ್ ಮೆಂಟು ನೋಡಿದಿರಲ್ಲಾ. ಉಳಿದೆರಡೂ ನೋಡಬೇಡವೇ?”, ಎಂದು ಆಶ್ಚರ್ಯದಿಂದ ಕೇಳಿದೆ. “ಅಯ್ಯೋ, ಅದೇನೋ ಅಂಥದ್ದೆಲ್ಲಾ ತರಬೇಕು ಅಂತಿದ್ರೆ ಹೇಗೂ ತರ್ತಾರೆ ಬಿಡ್ರೀ, ನಾವೇನು ಹಿಡಿಯೋದು ಮಣ್ಣಾಂಗಟ್ಟಿ”, ಎಂದು ಗೊಣಗಿದರು ಸಾಹೇಬರು ತಮ್ಮ ಹರಿಯಾಣವೀ ಮಿಶ್ರಿತ ಹಿಂದಿ ಭಾಷೆಯಲ್ಲಿ. ಇನ್ನು ನನ್ನಂಥಾ ಆಮ್ ಆದ್ಮಿ ಕೇಳೋದಕ್ಕೇನಿದೆ, ಸಾಹೇಬರು ಹೇಳೋದಕ್ಕೇನಿದೆ. “ಯಾವನ್ರೀ ಅವನು ಮದ್ರಾಸಿ ನನ್ಮಗ, ಸೆಕ್ಯೂರಿಟಿ ಚೆಕ್ಕಿಂಗ್ ಗೇ ಇಷ್ಟು ಹೊತ್ತು ತಗೋತಾ ಇದಾನೆ”, ಎನ್ನುವ ದನಿಯೊಂದು ಕೇಳಿತು ಹನುಮನ ಬಾಲದಂತೆ ನನ್ನ ಹಿಂದೆ ಬೆಳೆಯುತ್ತಿದ್ದ, ಬೇಗಬೇಗನೆ ಮಾಲ್ ಒಳಗೆ ಬರಲು ತಣ್ಣಗೇ ರೇಗುತ್ತಿದ್ದ ಜನಗಳ ಸಾಲಿನಿಂದ. ಮರುಮಾತಿಲ್ಲದೆ ನಾನು ಬ್ಯಾಗನ್ನು ಹೆಗಲಿಗೇರಿಸಿ ಮುಂದೆ ನಡೆದೆ.

ಪ್ರಸಂಗ 2:
ಎನ್.ಸಿ.ಆರ್ ಗೆ ಬಂದ ಹೊಸತರಲ್ಲಿ ಬಂದಾಗ ಕಂಡ ಆ ದೃಶ್ಯಗಳು ಭಯಮಿಶ್ರಿತ ರೇಜಿಗೆಯನ್ನು ಹುಟ್ಟಿಸಿದ್ದವು. ಈಗ ಅದೊಂದು ನೋಡಲೇಬೇಕಾದ, ಸಹಿಸಲೇ ಬೇಕಾದ ಅನಿವಾರ್ಯ ದಿನಚರಿ. ಇದೇ ಗುರ್ಗಾಂವಿನ, ಇದೇ ಎಂ.ಜಿ ರೋಡಿನಲ್ಲಿ ತಲೆಯೆತ್ತಿ ನಿಂತಿರುವ ಒಂದು ಪ್ರತಿಷ್ಠಿತ ಶಾಪಿಂಗ್ ಮಾಲು. ಕುಖ್ಯಾತ ಎಂದರೂ ತಪ್ಪಾಗಲಾರದೇನೋ. ಸಂಜೆ ಏಳರ ನಂತರ ಪ್ರತಿದಿನವೂ ಗುಂಪುಗುಂಪಾಗಿ ಅತಿಯಾಗಿ ಮೇಕಪ್ಪುಗಳನ್ನು ಮೆತ್ತಿಕೊಂಡು ತುಂಡುಡುಗೆಯಲ್ಲಿ ಫ್ಯಾಷನ್ನು ಕ್ವೀನುಗಳಂತೆ ಆಟೋಗಳಿಂದ, ಕಾರುಗಳಿಂದ ಬಂದಿಳಿಯುವ ಮತ್ತು ಈ ಮಾಲ್ ಗೆ ನುಗ್ಗುವ ಇಪ್ಪತ್ತರಿಂದ ಮೂವತ್ತರ ಆಸುಪಾಸಿನ ಹೆಂಗಳೆಯರು. ರಾತ್ರಿ ಒಂದರ ಮೇಲಾದರೂ ಈ ರ್ಯಾಂಪ್ ವಾಕ್ ಗಳು ನಿಮಿಷಕ್ಕೊಂದರಂತೆ ಆಗುತ್ತಿರುತ್ತವೆ. ನಿಮ್ಮ ಆಬ್ಸವರ್ೇಷನ್ನು ಪವರುಗಳು ಚೆನ್ನಾಗಿದ್ರೆ ದ್ವಿಲಿಂಗಿಗಳೂ ಹೆಣ್ಣುಡುಗೆಯಲ್ಲಿ ಬರುವ ದೃಶ್ಯಗಳೂ ಕಾಣಸಿಗುತ್ತವೆ. ಇವರೆಲ್ಲರೂ ಈ ಶಾಪಿಂಗ್ ಮಾಲ್ ನಲ್ಲಿರುವ ಡಿಸ್ಕೋಥೆಕ್ ಗಳ ರಾತ್ರಿಯ ರಾಣಿಯರು. ಡ್ಯಾನ್ಸಿನಿಂದ ಹಿಡಿದು ‘ಎಲ್ಲ’ದಕ್ಕೂ ಬಗೆಬಗೆ ರೇಟುಗಳಂತೆ. ಈ ರಾತ್ರಿಯ ರಂಗಿನಾಟದ ಮುಕ್ತ ಸಾರ್ವಜನಿಕ ಪ್ರದರ್ಶನದ ದುರ್ವಿಧಿಯಿಂದ ಮಾಲ್ ಗೆ ಏನೋ ಖರೀದಿಸಲು ಬಂದವರು, ವಿಂಡೋ ಶಾಪಿಂಗ್ ಮಾಡಲು ಬಂದವರು, ಪ್ರೇಯಸಿಯೊಂದಿಗೆ ಡೇಟ್ ಮಾಡಲು (ಇಲ್ಲಿ ಬಂದುಬಿಟ್ಟ ಎಂದಾದರೆ ನಗರಕ್ಕೆ ಪಕ್ಕಾ ಹೊಸಬನಾಗಿರಬೇಕು) ಅಥವಾ ಕುಟುಂಬದೊಂದಿಗೆ ಕಾಲಕಳೆಯಲು ಮಾಲಿನಲ್ಲಿ ಅಡ್ಡಾಡುತ್ತಿರುವವರು ಹೀಗೆ ಎಲ್ಲರಿಗೂ ವಿಚಿತ್ರ ಫಜೀತಿ. ಮನದಲ್ಲೇ ಅನಾಮಿಕ ಮುಖಗಳಿಗೆ ಹಿಡಿಶಾಪ. ವಾರಾಂತ್ಯಗಳಲ್ಲಿ ಪಡ್ಡೆಹುಡುಗರಿಂದ ಹಿಡಿದು ಹಂಡೆಯಂತೆ ಉಬ್ಬಿದ ಹೊಟ್ಟೆಯಿದ್ದರೂ ಜೀನ್ಸು ಪ್ಯಾಂಟು ಹಾಕಿಕೊಂಡು ಈಗ ತಾನೇ ಮೀಸೆ ಚಿಗುರಿದವರಂತೆ ಪೋಸು ಕೊಡುವ ಮುದುಕರವರೆಗೂ, ಅತ್ತಿತ್ತ ನೋಡದೆ ಸೀದಾ ಈ ಡಿಸ್ಕೋಥೆಕ್ ಗಳಿಗಷ್ಟೇ ನುಗ್ಗುವ ವಿಪರೀತ ಜನಜಂಗುಳಿ.
ಕತ್ತಲೆಂಬುದರ ಪರಿವೆಯಿಲ್ಲದಷ್ಟು ವರ್ಷವಿಡೀ ಬ್ಯುಸಿಯಾಗಿರುವ ನಗರಕ್ಕೆ ರಾತ್ರಿ ಹತ್ತರ ಮೇಲಾಗುತ್ತಿದ್ದಂತೆಯೇ ರಸ್ತೆಯ ಬದಿಗಳಿಂದ, ನಿಂತಿರುವ ಆಟೋದ ಕತ್ತಲ ಮೂಲೆಗಳಿಂದ ಇದಕ್ಕಾಗಿಯೇ ಹೊಂಚು ಹಾಕುವವರಿಗೂ, ಅಮಾಯಕರಿಗೂ ಕಣ್ಣಲ್ಲೇ, ಕೈಭಾಷೆಗಳಲ್ಲೇ ಆಹ್ವಾನ. ಕೇಳಿದ ರೇಟಿನಲ್ಲಿ ಫಿಕ್ಸ್ ಮಾಡಿಕೊಂಡು ಕೊನೆಗೆ ಪೇಮೆಂಟ್ ಮಾಡಿಲ್ಲವೆಂದು ಅಲ್ಲಲ್ಲಿ ಒಂದೆರಡು ಗುಂಪುಗಳ ಹೊಡೆದಾಟ, ಹತ್ತು-ಹನ್ನೆರಡು ಕುಡಿದ ಮತ್ತಿನಲ್ಲಿರುವ ಗಂಡಸರ ಮಧ್ಯೆ ಒಂದೆರಡು ಸಿಂಗರಿಸಿದ ಹೆಣ್ಣುಮಕ್ಕಳ ಬಾಯ್ತುಂಬಾ ಬೈಗುಳಗಳ ಚೀರಾಟ. ವಿಚಿತ್ರವೆಂದರೆ ಕೆಲವೊಮ್ಮೆ ಪೋಲೀಸು ವ್ಯಾನುಗಳೂ ಕಟ್ಟಡದ ಅಂಗಳದಲ್ಲಿ ನಿಂತಿರುತ್ತವೆ ಮೂಕಪ್ರೇಕ್ಷಕರಾಗಿ. ದಾರಿಹೋಕರೂ ಕೂಡ ಪಕ್ಕದಲ್ಲೇ ನಡೆಯುತ್ತಿದ್ದರೂ ತಲೆ ಎತ್ತಿ ನೋಡುವುದಿಲ್ಲ. ಎಲ್ಲರಿಗೂ ಈ ಎಲ್ಲವೂ ಸಾಮಾನ್ಯವಾಗಿ ಬಿಟ್ಟಿದೆ. ವಾಷರ್ಿಕ ಸಂಪ್ರದಾಯವೆಂಬಂತೆ ಏನೋ ಒಣನೆಪವಿಟ್ಟುಕೊಂಡು ವರ್ಷಕ್ಕೊಂದು ಪೋಲೀಸ್ ದಾಳಿ. ಒಂದೆರಡು ಪತ್ರಿಕೆಗಳಲ್ಲಿ ಬಾಯಿಚಪ್ಪರಿಸುವ ವರದಿಗಳು ಮತ್ತು ಪ್ರತಿಕ್ರಿಯೆಗಳು. ಮರುದಿನದಿಂದ ಮತ್ತದೇ ರಾಗ, ಅದೇ ತಾಳ.
ಪ್ರಸಂಗ 3:
ದೆಹಲಿಯ ಜಾಮಾ ಮಸೀದಿಯ ವಿಶಾಲ ಅಂಗಣದಲ್ಲಿ ಮೊಬೈಲಿನ ಮೆಮರಿ ಕಾಡರ್ು ತುಂಬಿಹೋಗುಷ್ಟು ಫೋಟೋಗಳನ್ನು ಕ್ಲಿಕ್ಕಿಸಿ ಹಿಂತಿರುಗುತ್ತಿದ್ದಾಗ ಸ್ಥಳೀಯ ಯುವಕನೊಬ್ಬನೊಡನೆ ಸಿಡಿಮಿಡಿಗೊಳ್ಳುತ್ತಿರುವ ಮಧ್ಯವಯಸ್ಸಿನ ವಿದೇಶೀ ಜೋಡಿಯೊಂದು ಕಾಣಸಿಕ್ಕಿತು. ಅರ್ಧಘಂಟೆಯ ಹಿಂದಷ್ಟೇ ಈ ಯುವಕ ನಮ್ಮ ಗ್ರೂಪ್ ಫೋಟೋ ತೆಗೆದಿದ್ದ. ಅಲ್ಲಲ್ಲಿ ಪ್ರವಾಸಿಗಳು “ನಮ್ಮ ಫೋಟೋ ತೆಗೆಯುತ್ತೀರಾ ಪ್ಲೀಸ್” ಎಂದು ವಿನಂತಿಸಿಕೊಂಡಾಗ ತಲೆಯಾಡಿಸಿ ಪ್ರವಾಸಿಗಳ ಕ್ಯಾಮೆರಾದಿಂದಲೇ ಅವರ ಬೇಡಿಕೆಗೆ ತಕ್ಕಂತೆ ಫೋಟೋ ಸೆರೆಹಿಡಿಯುತ್ತಿದ್ದ. ಹೆಚ್ಚೆಂದರೆ ಇಪ್ಪತ್ತೈದಾಗಿರಬಹುದು ಈ ಯುವಕನಿಗೆ. ತೆಳ್ಳಗಾಗಿ, ಕುಳ್ಳಗಾಗಿ, ತುಸು ಕಪ್ಪಗಿದ್ದರೂ ಜಾಮಾ ಮಸೀದಿಯೇ ತನ್ನ ಮನೆ ಎಂಬಂತೆ ಲವಲವಿಕೆಯಿಂದ ಓಡಾಡುತ್ತಿದ್ದ. ನಮ್ಮನ್ನು ವಿದೇಶೀ ಪ್ರವಾಸಿಗಳ ಜೊತೆ ಮಾತನಾಡುತ್ತಿರುವುದನ್ನು ಕಂಡ ಇವನು ಏನೋ ಹೇಳ ಬಯಸಿದವನಂತೆ ಓಡಿ ಬಂದಿದ್ದ. ಅದೇನಪ್ಪಾ ಎಂದು ಕೇಳಿದರೆ ವಿದೇಶೀ ಜೋಡಿಯೊಂದನ್ನು ತೋರಿಸಿ ಅವರ ಜೊತೆಯೊಂದು ಫೋಟೋ ತೆಗೆಸಿಕೊಳ್ಳಬೇಕು ನನಗೆ, ಅವರಿಗೆ ಹೇಳುತ್ತೀರಾ ಪ್ಲೀಸ್ ಎಂದ. ಈ ವಿದೇಶೀ ದಂಪತಿಗಳು ಮಸೀದಿಯ ಸೌಂದರ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯುವುದರಲ್ಲೇ ಮಗ್ನರಾಗಿದ್ದರು. ನಲವತ್ತರ ಆಸುಪಾಸಿನಲ್ಲಿದ್ದ ಗಂಡ ಬಹುತೇಕ ಎಲ್ಲಾ ಯೂರೋಪಿಯನ್ನರಂತೆಯೇ ಫಿಟ್ ಆಗಿದ್ದ. ಮೂವತ್ತರ ಅಂಚಿನಲ್ಲಿದ್ದರೂ ಮಹಿಳೆ ಎತ್ತರವಾದ ನಿಲುವಿನೊಂದಿಗೆ ಆಕರ್ಷಕವಾಗಿದ್ದಳು. “ಅವರು ಈ ಕಡೆ ಬಂದರೆ ನಿಧಾನಕ್ಕೆ ಮಾತಾಡಿಸೋಣವಂತೆ, ನಿನ್ನ ಕ್ಯಾಮೆರಾ ರೆಡಿಮಾಡಿಟ್ಟುಕೊಂಡಿರಪ್ಪಾ” ಎಂದರು ನಮ್ಮ ಗುಂಪಿನಲ್ಲೊಬ್ಬ ಮಹಾಶಯ. “ನನ್ನಲ್ಲಿ ಎಲ್ಲಿಂದ ಬಂದೀತು ಕ್ಯಾಮೆರಾ ಎಲ್ಲಾ. ಅವರ ಜೊತೆಯೇ ಇದೆ ನೋಡಿ ಒಂದು. ಅದರಿಂದಲೇ ತೆಗೆದರಾಯಿತು” ಅಂದ. ಫೋಟೋ ತೆಗೆದರಾಯ್ತೇನಪ್ಪಾ, ನೀನು ನಿನ್ನ ಚಿತ್ರ ಹೇಗೆ ಅವರಿಂದ ತೆಗೆದುಕೊಳ್ಳುತ್ತೀಯಾ ಎಂದು ಕೇಳಿದರೆ ನಾವೇ ತಲೆಹರಟೆಯ ಪ್ರಶ್ನೆ ಕೇಳಿದೆವೆಂಬಂತೆ ವಿಚಿತ್ರವಾಗಿ ಮುಖ ಸಿಂಡರಿಸಿ ಏನೋ ಗೊಣಗಿ ಮಾಯವಾದ.
ಭಾರತೀಯರಿಗೆ ಬಿಳಿತೊಗಲಿನ ಕಡೆಗಿರುವ ಆಕರ್ಷಣೆ ಈ ಮೊದಲೂ ಕೂಡ ನೋಡಿದ್ದೇನೆ ನಾನು. ನಾವೂ ಅಲ್ಲಿಲ್ಲಿ ಅಡ್ಡಾಡುತ್ತಾ ಮರೆತು ಜನಜಂಗುಳಿಯಲ್ಲಿ ಸೇರಿಹೋದೆವು. ಆಮೇಲೆ ಈ ವಿದೇಶೀ ಜೋಡಿ ಇರಿಸುಮುರಿಸುಗೊಂಡು, ಜನರು ಗುಂಪುಗೂಡಿ ಅಲ್ಲೊಂದು ಹೊಸ ಬೀದಿ ನಾಟಕ ಶುರುವಾದಾಗಲೇ ಅವನನ್ನು ಪುನಃ ನೋಡಿದ್ದು. ಫೋಟೋ ನೆಪ ಮಾಡಿಕೊಂಡು ಹೋಗಿದ್ದ ಈತ ಆ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದನಂತೆ. ನಾಲ್ಕೈದು ಜನರು ಆಗಲೇ ಅವನನ್ನು ಬೈಗುಳಗಳ ಧಾರೆಯನ್ನು ಸುರಿಸುತ್ತಾ ತದುಕಲಾರಂಭಿಸಿದ್ದರು. ಆ ವಿದೇಶಿ ದಂಪತಿ ಮಾತ್ರ ಅಯ್ಯೋ ಇದ್ಯಾವ ಹುಚ್ಚರ ಸಂತೆಗೆ ಬಂದು ಸಿಲುಕಿಬಿಟ್ಟೆವೋ ಎಂಬಂತೆ ನಿಂತುಕೊಂಡಿದ್ದನ್ನು ನೆನೆಸಿಕೊಂಡರೆ ಈಗಲೂ ಬೇಸರವೆನಿಸುತ್ತದೆ. ಭಾರತದ ಬಗ್ಗೆ, ಭಾರತೀಯರ ಬಗ್ಗೆ ಏನಂದುಕೊಂಡರೋ ಪಾಪ!
ಸ್ವಗತ:
ಮೊನ್ನೆ ಮೊನ್ನೆ ಹುಸಿ ಬಾಂಬ್ ಕರೆ ಬಂತೆಂದು ದೆಹಲಿ ದೇಶದಲ್ಲೆಲ್ಲಾ ಸುದ್ದಿಯಾದಾಗ, ಇಲ್ಲಿಯ ಅಪರಾಧದ ಪ್ರಕರಣಗಳು ಪತ್ರಿಕೆಗಳಲ್ಲಿ ಫಿಲ್ಲರ್ ಗಳಂತೆ ಸುದ್ದಿಯಾಗುತ್ತಿರುವುದನ್ನೆಲ್ಲಾ ಕಂಡು ಬೆರಗಾಗಿ, “ಡೆಲ್ಲಿ ತುಂಬಾ ಡೇಂಜರಂತೆ, ಹೌದೇನ್ರೀ?” ಎಂದು ಯಾರೋ ಕೇಳಿದರು. ಆಗ ಇವೆಲ್ಲವೂ ಒಮ್ಮೆಗೇ ನೆನಪಾಯಿತು.






ಮಳೆಗಾಲದಲ್ಲಿ ಅರಳುವ ಪುಟಾಣಿ ಬಣ್ಣ ಬಣ್ಣದ ಹೂವುಗಳಂತೆ ನಗರ ಜೀವನದ ಹಲವು ಬಣ್ಣ ಗಳನ್ನು ತೊರಿಸುವ ಪುಟಾಣಿ ಕಥೆಗಳು…ಎಂದಿನಂತೆ ಮನಸ್ಸಿಗೆ ಮುದಕೊಡುವ ಬರಹ…
ಧಾವಂತದ ನಗರ ಜೀವನದ ನಡುವೆಯೂ ಅರಳಿದ ಈ ಕಥೆಗಳನ್ನು ಓದಿ ಒಂದು English ಮಾತು ನೆನಪಾಗುತ್ತಿದೆ….
Some people feel the rain….
Others Just get wet…
ದೆಹಲಿಯ ಒಳಪದರುಗಳನ್ನು ಬಿಡಿ ಬಿಡಿಸಿ ನೋಡುತ್ತ ವರದಿಸುತ್ತ ಲೇಖನ ಕಣ್ಮುಂದೆ ಆ ಚಿತ್ನಣಗಳನ್ನು ಸೆರೆ ಹಿಡಿದ ರೀತಿ ಹಿಡಿಸಿತು. ಚನ್ನಾಗಿದೆ
Thank you all 🙂
ದೆಹಲಿಯ ಕೊಲಾಜ್ ಚೆಂದ ಇದೆ …