
ಡಾ ರಾಜೇಗೌಡ ಹೊಸಹಳ್ಳಿ
ದಿಲ್ಲಿಯಲ್ಲಿ ವಾಯುದೇವನಿಗೆ ಉಬ್ಬಸ.
‘ಬೀದಿ ಮಕ್ಕಳು ಬೆಳೆದೂ ಕ್ವಾಣೆ ಮಕ್ಕಳು ಕೊಳೆತೂ’ ಎಂಬುದು ಗಾಂಧಿ ಭಾರತದ ಏಳುವರೆ ಲಕ್ಷ ಹಳ್ಳಿಗಳ ಅರಿವಾಗಿತ್ತು.
ಆ ನಂಬಿಕೆಗೆ ಈಗ ತುರ್ತುಪರಿಸ್ಥಿತಿ.
ಹಾಗಾಗಿ ಶಾಲೆಗಳಿಗೆ ರಜೆ ನೀಡಿ ಉಸಿರಾಡಲು ಆಮ್ಲಜನಕ ಇಲ್ಲ. ಬೀದಿಗೆ ಬರಬೇಡಿ ಕ್ವಾಣೆಲಿರಿ ಮಕ್ಕಳೇ! ಎಂದು ಸರ್ಕಾರ ಹೇಳಿತ್ತಲ್ಲವೆ. ಈಗ ಕ್ರಿಕೆಟ್ ಆಟಗಾರರು ವಾಂತಿ ಮಾಡುತಿದ್ಧಾರೆ ಮಾಸ್ಕ್ ಹಾಕಿದ್ಧಾರೆ. ಈಗ ಎಂಥಾ ಗತಿ ಬಂತು.ದಿಲ್ಲಿಯೀಗ ವಿಶ್ವದ ಅತಿ ಕಲ್ಮಷದ ರಾಜಧಾನಿಯೂ ಹೌದು. ಮಂಜುವಿನ ಹನಿಗಳು ಗಿರಿಮೇಲಿನ ಶಂಕರನು ನೀಡುವ ಅಮೃತ ಬಿಂದುಗಳು. ಮಂಜು ಹನಿಗಳವು ಗರಿಕೆ ಮೇಲೆ ದಿನಮಣಿ ಮುಖಮಜ್ಜನಮಾಡಿ ಮೀಸೆ ತಿರುವಿ ಲೋಕ ಸಂಚಾರಕ್ಕೆ ಹೊರಟಾಗ ಹಿಡಿವ ಕಿರುಗನ್ನಡಿಗಳು.
ಈಗ ಅದೊಂದು ಕನಸು. ಇತ್ತ ದಿಲ್ಲಿ ಅತ್ತ ಲಾಹೋರ್ ವರೆಗೆ ಹೊಂಜಾಗಿ ಧೂಮವಾಗಿ ನಿಂತ ವಿಷ ಹೀರಲು. ವಿಷಕಂಠನ ಕೃಪೆ ಈಗಿಲ್ಲ ಬಿಡಿ. ಹೊಂಜಿನ ಕಂಬಳಿ ಹೊದ್ದಿರುವ ದಿಲ್ಲಿ ಈಗ ಮಹಾರೋಗಿ. ಈ ರೋಗಕ್ಕೆ ಕಾರಣ ಹರಿಯಾಣ ಪಂಜಾಬು ರಾಜ್ಯಗಳ ರೈತರು ಗೋವು ಮೇವು ಹುಲ್ಲು ಸುಡುವ ಕಾರಣವಂತೆ. ಹೌದು. ಹಸಿರುಕ್ರಾಂತಿ ಎಂಬ ಕಂಬಳಿ ಈಗ ಅಂಟುಜಾಡ್ಯದ ಜಾಡಿನಲ್ಲಿದೆ. ರೈತರು ಬೆಳೆದು ಒಕ್ಕಿದ ಹುಲ್ಲನ್ನು ಮೇವಾಗಿ ಸಹಜ ಗೊಬ್ಬರವಾಗಿ ಆಹಾರ ಪೋಷಕವಾದ ಸಾರಜನಜ ಚಕ್ರವಾಗಿಸುವ ಪರಂಪರೆಯ ಜ್ಞಾನವನ್ನು ಕಿತ್ತುಕೊಂಡಾಗಿದೆ. ಹಸಿರುಪೀಠ ಸರ್ವೋಚ್ಛ ನ್ಯಾಯಾಲಯ ಇತ್ಯಾದಿಗಳೆಲ್ಲ ಇದೇನಿದು! ಆಡಳಿತ ಏನು ಮಾಡುತ್ತಿದೆ! ಎಂದು ಗದರಿಸುತ್ತಿವೆ.
ರೈತನ ಮೇಲೆ ಆಪಾದನೆ ಹೊರಿಸುವುದು ಸರಿ. ಅಕ್ಷರಸ್ಥ ಸಮಾಜ ಏನು ಮಾಡುತ್ತಿದೆ? ‘ಇಂಜಿನಿಯರುಗಳು ಹೆಚ್ಚಾದಷ್ಟು ಪರ್ವತಗಳು ಕರಗುತ್ತವೆ. ಫಲವತ್ತಾದ ಭೂಮಿಯಲ್ಲೂ ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತುತ್ತವೆ’. ಇವು ವಿಶ್ವವಿದ್ಯಾನಲಯಗಳ ಪಾಠ ಪ್ರವಚನವಾಗಿವೆ ಎಂದು ಥೈಲೆಂಡ್ನ ಒಬ್ಬ ಕಿಂದರಜೋಗಿ ಪುನ್ಪುನ ಹೇಳುತ್ತಾನೆ. ಹೌದು ಈ ದೇಶದ ಹೊಳೆ ಮರಳೆಲ್ಲವನ್ನು ಕಾಂಕ್ರೀಟ್ ಕಲೆಸಿ ಮುಗಿಸಿಯಾಗಿದೆ. ಹೊರದೇಶದಿಂದ ಮರಳಿಗೂ ಆಮದು ಟೆಂಡರ್ ಹಾಕಲಾಗಿದೆ. ಅಲ್ಲದೆ ಎಣ್ಣೆ ದೇಶಗಳ ದೀಪಗಳನ್ನು ಜಗತ್ತಿನ ದೊಡ್ಡಣ್ಣಾದಿಗಳು ಕೈಯಲ್ಲಿ ಹಿಡಿದು ಅಭಿವೃದ್ಧಿಶೀಲ ದೇಶಗಳಲ್ಲಿ ಬಗೆಬಗೆಯ ಸರಕು ಸರಂಜಾಮು ಹುಡುಕುತ್ತಿದ್ದಾರೆ.
ಹಾಗಾಗಿ ಅಲ್ಲಾವುದ್ದೀನನ ದೀಪ ಆರುತ್ತಲೇ ಇಲ್ಲ. ಕಿರುದಾರಿ ಹೆದ್ದಾರಿಗಳೆಲ್ಲ ಕಲ್ಮಷ ಉಗುಳುತ್ತಿವೆ . ಅರವತ್ತು ಲಕ್ಷ ವಾಹನಗಳ ಬುಸು ಬುಸು ಹೊಗೆ. ವಾಯುದೇವನಿಗೆ ಹಗಲು ರಾತ್ರಿ ನಿದ್ರೆಯಿಲ್ಲದ ಗೂರಲು ಕೆಮ್ಮು. ಇಂದು ದಿಲ್ಲಿ ನಾಳೆ ಬೆಂಗಳೂರು ನಾಡಿದ್ದು ಅಡವಿಯೊಳಗಿರುವ ಒಂದು ಚಿಕ್ಕಹಳ್ಳಿ ಎಲ್ಲವೂ ವ್ಯಾಪಾರಿ ದೇಶಗಳ ಸರಕುಗಳು. ಅಲ್ಲಿಂದ ಮಾಸ್ಕ್ಗಳನ್ನು ಕೊಳ್ಳುವ ಗಿರಾಕಿಗಳು. ನಮ್ಮ ದೇಶದ ನೆಲಜಲಗಾಳಿಯನ್ನೆಲ್ಲ ನಗರೀಕರಣವೆಂಬ ಭೂತವು 25 ಲಕ್ಷ ಜನರ ನೆಣದೊಂದಿಗೆ ನೆಕ್ಕಿದೆಯಲ್ಲದೆ ಮತ್ತಷ್ಟು ಉದ್ದ ನಾಲಗೆ ಚಾಚುತ್ತಿದೆಯಂತೆ. ಗೋವುಗಳನ್ನು ಪೂಜಿಸುವ ದೇಶದಲ್ಲೀಗ 20 ಮಿಲಿಯನ್ ಟನ್ ಗೋ ಆಹಾರವನ್ನು ದಾರಾಳವಾಗಿ ಸುಟ್ಟು ಹೊಂಜು ಮೋಡಗಟ್ಟಿಸಲಾಗಿದೆಯಂತೆ. ಅಂದು ಯೂರೋಪ್ ಸರ್ಕಾರ ಭಾರತ ಚೈನಾಗಳೆರಡರಲ್ಲೂ ಇತ್ತು. ಆಧುನಿಕತೆ ಎಂಬ ಹುಸಿ ಪಾಠವನ್ನು ಬುದ್ಧನ ಹಾಗೂ ಕನ್ಪ್ಯೂಸಿಯಸ್ನ ದೇಶೀ ಪಾಠಗಳ ಬದಲು ಎರಡೂ ದೇಶಗಳು ಕಲಿತವು.
ಹಾಗಾಗಿ ಬೀಜಿಂಗ್ ಹಾಗೂ ದಿಲ್ಲಿಗಳೀಗ ಪಿಶಾಚಿ ನಗರಗಳಾಗುತ್ತಿವೆ. ಯೂರೋಪ್ ತರಗತಿಗಳಿಂದ ಬೇಗನೆ ಎದ್ದು ಬಂದ ಗಾಂಧೀಜಿ ಹಾಗೂ ರವೀಂದ್ರರು ತಮ್ಮ ಅನುಭವದ ಪಾಠ ಹೇಳಿದರು. ‘ಎಳೆ ವಯಸ್ಸಿನಲ್ಲಿ ಯೂರೋಪಿನ ನಾಗರೀಕತೆಯನ್ನು ಒಂದು ವರವೆಂದೇ ನಂಬಿದ್ದೆ’ ಎಂದು ರವೀಂದ್ರರು ಹೇಳಿದರೆ; ‘ಭಾರತವೇನಾದರೂ ಪಶ್ಚಿಮದ ರೀತಿಯಲ್ಲಿ ಕೈಗಾರಿಕೀಕರಣವನ್ನು ಅಪ್ಪಿಕೊಂಡರೆ ದೇವರೇ ಕಾಪಾಡಬೇಕು’ ಎಂದು ಗಾಂಧೀಜಿ ಹೇಳುತ್ತಾರೆ. ಈ ಯಾರ ಮಾತನ್ನೂ ಸ್ವತಂತ್ರ ಭಾರತ ಕೇಳಿಸಿಕೊಳ್ಳಲಿಲ್ಲ. ಅದೆಲ್ಲದರ ಪರಿಣಾಮವೇ ಇಂದಿನ ದಿಲ್ಲಿ ಸ್ಥಿತಿ: ಗಾಳಿ ನೀರಿನ ದುಸ್ಥಿತಿ. ಬೆಂಗಳೂರು ಇರಲಿ ರಾಮನಗರದಂತಹ ಚಿಕ್ಕಪಟ್ಟಣ ಸುತ್ತ ಶೇ.80ರಷ್ಟು ನೀರು ಕುಡಿಯಲಾರದ ಕಲ್ಮಷವಾಗಿದೆ ಎಂದು ಸಂಶೋಧನೆ ಹೇಳುತ್ತಿದೆ.
ಗಾಳಿನೀರು ಪೃಥ್ವಿ ಮೇಲಿನ ಮಡಿ ಜೀವಧಾತುಗಳು ಸರಿ. ಈ ನೆಲದ ಮೇಲೆ ಗಾಳಿ ಮಾತ್ರ ಮಲಿನವಾಗಿ ಅಂಬಾರಕ್ಕೆ ಭಾರವಾಗಿಲ್ಲ. ಸನಾತನ ಭಾರತದ ಗಂಗಾಸ್ನಾನ ಕಾವೇರಿಯಿಂದ ಯಮುನೆವರೆಗೆ ಪುಣ್ಯದ ಆಹ್ವಾನವಾಗುಳಿದಿಲ್ಲ. ಅಂತರ್ಜಲವೂ ಸೇರಿದಂತೆ ದೇಶದ ನೀರೆಲ್ಲವೂ ಆಂಟಿಬಯಾಟಿಕ್ ಔಷದಕ್ಕೂ ಜಗ್ಗದ ಪ್ರತಿರೋಧ ಬೆಳೆಸಿಕೊಂಡಿದೆಯೆಂದು Wಊಔ ವರದಿ ಹೇಳುತ್ತಿದೆ. 2050ನೇ ಇಸವಿಯಷ್ಟರಲ್ಲಿ ಮಳೆಯ ಪ್ರಮಾಣ ಇನ್ನೂ ಶೇ.31ರಷ್ಟು ಕಡಿಮೆಯಾಗಲಿದೆಯೆಂದು ಇಸ್ರೋ ಅಧ್ಯಕ್ಷರು ಹೇಳುತ್ತಿದ್ದಾರೆ.
ಬ್ರಿಟನ್ ಮಹಾ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಇನ್ನು ಆರು ಶತಮಾನದೊಳಗೆ ಭೂಮಂಡಳ ಬೆಂಕಿಯ ಚೆಂಡಾಗಿ ಉರಿದು ಭಸ್ಮವಾಗುತ್ತದೆಂದು ಹೇಳುತ್ತಿದ್ದಾರೆ. ಲಕ್ಷಾಂತರ ವರುಷಗಳಲ್ಲಿ ಜೀವಜಾಲ ನಿರ್ಮಿಸಿದ ಪೃಥ್ವಿಗೆ ಆರು ಶತಮಾನಗಳೆಂದರೆ ಸೃಷ್ಟಿಕರ್ತ ಕಣ್ಣುರೆಪ್ಪೆ ಮಿಟುಕಿಸುವ ಸಮಯ. ಇದು ಮಠದೊಳಗಿನ ‘ಕುರುವಿನ ಕಟ್ಟು’ ಹೇಳುವ ಭವಿಷ್ಯವಲ್ಲ. ಶಾಸ್ತ್ರದ ಕಟ್ಟಿನ ಒಣ ಮಂತ್ರವೂ ಅಲ್ಲ. ನೊಬೆಲ್ ಪುರಸ್ಕøತ ಈ ಬ್ರಿಟಿಷ್ ವಿಜ್ಞಾನಿಯ ಭವಿಷ್ಯ ಯಾವುದೂ ಸುಳ್ಳಾಗಿಲ್ಲ. ಅಕ್ಕನು ಹೇಳುವಂತೆ ‘ಹಗಲು ನಾಲ್ಕು ಜಾವ ಅಸನಕ್ಕೆ ಕುದಿವರು – ಇರುಳು ನಾಲ್ಕು ಜಾವ ವ್ಯಸನಕ್ಕೆ ಕುದಿವರು – ಅಗಸ ನೀರೊಳಗಿರ್ದು ಬಾಯಾರಿ ಸತ್ತಂತೆ’ ಎಂಬಂತೆ ಜಗತ್ತು ತಾನು ಕೂರುವ ಜಾಗಕ್ಕೆ ತಾನೇ ಬೆಂಕಿ ಹಾಕಿಕೊಂಡಿದೆ.
ಇದು ವಿಶ್ವ ಸಂಕಟವೂ ಹೌದು. ವಿಶ್ವದ ಶೇ.92 ಜನಜೀವಗಳು ನೀರುಗಾಳಿ ಕಲ್ಮಷದಲ್ಲಿ ನರಳುತ್ತಿವೆ. ಅವಧೂತರಿಗೆ ಭವಿಷ್ಯದ ಕೆಟ್ಟ ಕನಸುಗಳು ಬೀಳುತ್ತವೆಯೋ ಏನೋ! ಹಾಗಾಗಿ ಅಂದೇ ಅಲ್ಲಮನು ‘ಗಂಗಾದೇವಿ ಮುಂಡೆಯಾದಳು ಗೌರಿದೇವಿ ಓಲೆಯ ಕಳೆದಳು, ಚಂದ್ರ ಸೂರ್ಯರಿಬ್ಬರೂ ನೀರಿಳಿದರು. ವಾಯುದೇವ ವಿಮಾನ ಹೊತ್ತ. ವಾಸುದೇವ ತಲೆಕೊಳ್ಳಿಯನಿರಿದ’ ಎಂದು ಹೇಳಿಬಿಟ್ಟಿದ್ದಾನೆ. ನಮ್ಮ ದೇಶ ಕೂಡ ನೆಲದ ಮರೆಯ ನಿಧಾನದಂತೆ ಚಲಿಸಬೇಕಾಗಿತ್ತು.
ಇಂದು ರಾಮೇಶ್ವರದಿಂದ ಹಿಮಾಲದವರೆಗೆ ಹೆದ್ದಾರಿಗಳ ಚಲನೆಯಾಗಿದೆಯೇ ಹೊರತು ಕಾಶಿಯ ಗಂಗೆ ಭಾರತದ ಹೆಣಹೊತ್ತು ಯಮಭಾರದಲ್ಲಿ ನಡೆಯುತ್ತಿರುವುದನ್ನು ಯಾರೂ ಅರಿಯುತ್ತಿಲ್ಲ. ಅಂದು ಗ್ರಾಮಸ್ವರಾಜ್ಯ ಕಲ್ಪನೆಯ ಗಾಂಧೀಜಿಗೆ ಒಲಿದ ಕುವೆಂಪು ‘ಹಾಳೂರು’ ಕಥನದ ಮೂಲಕ ಸ್ಪಂದಿಸಿದಾಗ ಅವರಿಗೆ ಕೇವಲ 22 ವರ್ಷ. ‘ಬಾ ಪುರದ ಗೆಳೆಯನೇ ಹಾಳೂರ ನೋಡು. ಹಳ್ಳಿಗರು ಪುರಮಾರಿಗುಣಿಸಾದರಲ್ಲಾ’ ಎಂಬ ಅವರ ಆತಂಕವು ಭವಿಷ್ಯ ಭಾರತದ ಆತಂಕದ್ದಾಗಿತ್ತು. ನಮ್ಮನ್ನಾಳುವ ಇಂಗ್ಲೆಂಡು ಇದೇ ಆತುರದಲ್ಲಿದ್ದು ಸರಿಪಡಿಸಿಕೊಂಡದ್ದು ಚರಿತ್ರೆ.
1956ರಲ್ಲಿನ ಅಲ್ಲಿನ ಕಾನೂನು ಥೇಮ್ಸ್ ನದಿಯನ್ನು ಪನ್ನೀರು ಮಾಡಿಕೊಂಡಿರುವಾಗ ನಮ್ಮಲ್ಲೇಕೆ ಆಗಬಾರದು? ಹಾಗಾಗಲು ಈ ನಗರೀಕರಣವೆಂಬ ಭೂತವನ್ನು ಸೀಸೆಯೊಳಗೆ ಕೂಡಿ ಬಿರುಡೆ ಹಾಕಬೇಕು. ಇದಕ್ಕೆ ದೇಶದ 130 ಕೋಟಿ ಜನರ ಹೃದಯಗಳು ಪರಿವರ್ತನಾ ಯಾತ್ರೆ ಮಾಡಬೇಕು. ಅದೇ ಕಾಶಿಯಾತ್ರೆ.






0 Comments