ದಿನೇಶ್ ಕುಕ್ಕುಜಡ್ಕ ಅವರ ರೇಖಾಚಿತ್ರ ಕ೦ಡದ್ದು ಹೀಗೆ

ಸ್ವತಹ ಕಲಾವಿದರಾಗಿರುವ ವೆ೦ಕಟ್ರಮಣ ಭಟ್ ಅವರ ಮನದಲ್ಲಿ ಈ ರೇಖೆಗಳು ಚಿತ್ರಗಳಾಗಿದ್ದು ಹೀಗೆ : ಇದು ಒಂದು ಇಲ್ಲಸ್ಟ್ರೇಷನ್ ಅಂದರೆ ಕಥೆ ಕವನ ಬರಹ ಅಥವಾ ಸಂದರ್ಭಗಳ visual/sensual ವಿವರಣೆಗಳನ್ನು ಕೊಡಲು ಬಿಡಿಸಿದ ಚಿತ್ರ ಎನಿಸುತ್ತಿದೆ, ಪತ್ರಿಕೆಗೆ ಬರೆದದ್ದೆಂದರೆ ಅದು ನಿಜ, ಅಂದರೆ ಪ್ರಾಸಂಗಿಕವಾದದ್ದು. ಮುಖ್ಯವಾಗಿ ಕಾಣುವುದು ಚೌಕಟ್ಟು ಮತ್ತು ಕಪ್ಪು ಬಣ್ಣ, ನಾವೇ ರೂಪಿಸಿಕೊಂಡ ಕಾನೂನು ಇಲ್ಲ ಮರ್ಯಾದೆ, ನಿಯತ್ತನ್ನು ಮೀರಲು ಹಾತೊರೆಯುತ್ತಿರುವ ಮನಸ್ಸಿನ ಚಡಪಡಿಕೆ ವ್ಯಕ್ತವಾಗುತ್ತಿದೆ, ಹೊರಗೆ ಓಡುತ್ತಿರುವ ಕುದುರೆಯ ಕಾಲಿನ ಭಾಗ ಇದನ್ನು ಹೇಳುತ್ತದೆ, ಇಲ್ಲಿ ಯಾವ ಕಟ್ಟುಪಾಡುಗಳಿದ್ದರೂ ಅದನ್ನು ಮೀರಿ ಯೋಚಿಸುವ ಮನಸ್ಸಿಗೆ ಅದು ಪ್ರತಿಮೆಯಾಗಿದೆ.ಅದು ಕೂಡ ಚೌಕಟ್ಟಿನ ಹೊರಗೇ, ತಪ್ಪೇ ಇರಬಹುದು ಸರಿಯೂ ಇರಬಹುದು, ಕಲ್ಪನೆಗೆ ಕಟ್ಟಳೆಯಿಲ್ಲ. ಬೇಡದ್ದಕ್ಕೆ ಹಾತೊರೆಯುತ್ತಿರುವಂತೆಯೂ ಇದೆ,ಅದೇ ಪ್ರಿಯವಾದ ಹಾಗೆ. ಮೇಲ್ಬಾಗದ ಚಿತ್ರಗಳು ಕೆಡುಕನ್ನು ಯೋಚಿಸುವ ಮನಸ್ಸಿನ ಪ್ರತಿಮೆಯಾ?ಗೊಂದಲಮಯ ಅಥವಾ ತಪ್ಪಿತಸ್ಥ ಮನಸ್ಸಿದೆ. ಹೊರಗೆ ಕಾಣುವ ಹೆಣ್ಣಿನ ಚಿತ್ರವೂ ಆ ಹಾತೊರೆಯುವಿಕೆಯ ಕಾರಣವಿರಬಹುದೇನೋ, ಕಾಗದಪತ್ರದ ವಿಷಯವನ್ನು ಸಂಕೇತಿಸುವ ಚಿತ್ರವಿದೆ, ಆಕರ್ಷಣೆ, ಮದುವೆ,ವಿಚ್ಚೇದನವೋ, ಪ್ರೇಮ ವೈಫಲ್ಯವೊಂದರ ಸುತ್ತವೋ,ದೈಹಿಕತೆಯ, ಹೆಣ್ಣಿನ/ಹೆಂಗಸರ ಸುತ್ತವೋ ಹೆಣೆದ ಚಿತ್ರ? ಇಷ್ಟೇ ತಿಳಿದದ್ದು, ಚಿತ್ರಕ್ಕೆ ವಿವರಣೆ ಹುಡುಕುವುದು ಖುಷಿಕೊಡುತ್ತದೆ, ಏನೇನೋ ಬರೆದಿದ್ದರೆ ಸಹಿಸಿಕೊಳ್ಳಿ ದಿನೇಶ್ ,ಇನ್ಯಾವುದೋ ಅರ್ಥವಿದ್ದರೆ ನನಗೂ ಹೇಳಿ. ಮುರಳಿ ಕೃಷ್ಣ ಮದ್ದಿಕೇರಿ : ಇಲ್ಲಿ ಒ೦ದು ಹೆಣ್ಣಿನ ಹತಾಶೆ, ಟೆನ್ಶನ್, ಹರಿದ/ಮುರಿದ ಮನಸು, ಅವಳ ತಳಮಳ ಕಾಣಿಸ್ತಾ ಇದೆ. ಇದು ನನಗೆ ಅರ್ಥವಾಗಿದ್ದು              ]]>

‍ಲೇಖಕರು G

May 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ದಿನೇಶ್ ಕುಕ್ಕುಜಡ್ಕ

    ಹಿರಿಯರಿಗೆ ಈ ಪುಟ್ಟ ಕಲಾವಿದನ ವಂದನೆಗಳು.
    ನಿಜ ಹೇಳಬೇಕೆಂದರೆ, ನೀವು ಇಷ್ಟೆಲ್ಲಾ ಸೂಕ್ಷ್ಮಗಳನ್ನು ಹುಡುಕುತ್ತೀರೆಂಬ ಸಣ್ಣ ಕಲ್ಪನೆಯೂ ನನಗಿರಲಿಲ್ಲ! ಒಂದೊಮ್ಮೆ ಅದು ಮೊದಲೇ ಗೊತ್ತಿರುತ್ತಿದ್ದರೆ, ಸ್ವಲ್ಪ ಕಾನ್ಷಿಯಸ್ ಆಗಿಬಿಡುತ್ತಿತ್ತೋ ಏನೋ ಮನಸ್ಸು! ಸೃಜನಶೀಲ ಕೆಲಸಗಳಲ್ಲಿ ತೊಡಗಿರುವಾಗ ಹಾಗೆ ಕಾನ್ಷಿಯಸ್ ಆಗುವುದು;ಕೆಲವೊಮ್ಮೆ ಅದುವೇ ಒಂದು ಮಿತಿಯಾಗಬಹುದಾದ ಅಪಾಯವೂ ಇರಬಹುದೆನಿಸುತ್ತದೆ! ಮಿತ್ರರೇ, ಈ illustration ಗಳ ಒಟ್ಟಾರೆ ಶೈಲಿಗೆ ಸಂಬಂಧಿಸಿದಂತೆ, ಒಂದು ದೊಡ್ಡ ಗೊಂದಲದ ತುಯ್ದಾಟಕ್ಕೆ ಸಿಲುಕಿ ಹಲವು ತಿಂಗಳುಗಳೇ ನರಳಿಬಿಟ್ಟಿದ್ದೇನೆ ನಾನು.ಏನೇ ಮಾಡಿದರೂ ಇದು ಈಗಾಗಲೇ ಎಲ್ಲೋ ಯಾರೋ ಮಾಡಿಬಿಟ್ಟಂಥಾ ಶೈಲಿಯೇ ಎನ್ನಿಸಿಬಿಟ್ಟು ನನ್ನ ಗೆರೆಗಳ ಬಗ್ಗೆಯೇ ಹೇವರಿಸಿಕೊಳ್ಳುವಂತಾಗಿದ್ದು ಎಷ್ಟೋ ಸಲ! ಈ ಮಧ್ಯೆ ನಾನು ಏನೋ ಮಾಡಹೋಗಿ ಇದುವೇ ಚಿತ್ರ ಅಂದುಕೊಳ್ಳುವಷ್ಟರಲ್ಲಿ ಅದನ್ನು ಬಳಸಿಕೊಳ್ಳುವವರ ಅಸಹನೆಯ ಮರ್ಜಿಗೆ ಬೀಳಬೇಕಾದ ಸಂದರ್ಭಗಳು….ಒತ್ತಡದ ವೇಳೆಯಲ್ಲೂ ಸಂತೆಯಲ್ಲಿ ಮೂರು ಮೊಳ ನೇಯ್ದು ಗಟ್ಟಿಗನೆನಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಮೆದುಳು ಹಿಂಡಿಕೊಳ್ಳುವ ಯಾತನಾಮಯ ಕಸರತ್ತುಗಳು…. ಒಂದುರೀತಿಯ ಬುದ್ಧಿ ಜಿಗುಪ್ಸೆಗೆ ಬಿದ್ದು ನರಳುವ ಸಂದರ್ಭಗಳನ್ನೂ ಕಂಡಿದ್ದೇನೆ.ಅಂದ ಮಾತ್ರಕ್ಕೆ ಇದು ಯಾರಿಗೂ ಆಗಿರದ ಅನುಭವವೆಂದೇನಲ್ಲ. ಒಂದರ್ಥದಲ್ಲಿ ಈ ‘ವ್ಯಾಪಾರ’ವೇ ದೂರದ ಶತ್ರುವಾಗಿ ಕೃತಿಕಾರನನ್ನು ಕೊಂದುಬಿಡುವ ಸಾಧ್ಯತೆಯೂ ಇರಬಹುದೆಂದು ಒಮ್ಮೊಮ್ಮೆ ತೀವ್ರವಾಗಿ ಅನ್ನಿಸುವುದಿದೆ! ಇಷ್ಟೆಲ್ಲಾ ಸಾಂದರ್ಭಿಕ ವಿವರಗಳೇಕೆಂದರೆ, ಮೇಲಿನ ಚಿತ್ರ- ಮಗು ತಾನು ಯಾರಿಗೂ ಕಾಣಿಸಿತ್ತಿಲ್ಲವೆಂದುಕೊಂಡು ತನ್ನ ಪಾಡಿಗೆ ತಾನು ಆಟವಾಡುತ್ತಾ ಏನನ್ನೋ ಮಾಡುತ್ತಿರುತ್ತದಲ್ಲ… ಹಾಗೆ ರಚನೆಗೊಂಡಿರುವುದು! ಬಹುಷಃ ಯಾವ ಒತ್ತಡವೂ ಇದ್ದಿರಲಿಲ್ಲ ಆವತ್ತು. ಒಂದೊಮ್ಮೆ ಅದು ಚಿತ್ರವಾಗಿ ಯಶಸ್ವಿಗೊಂಡಿದ್ದರೆ, ಅದಕ್ಕೆ ಕಾರಣ- ಕಲೆಯ ಹೃದಯ ಹೊಕ್ಕಿದ ಆ ಸುಂದರ ಗಳಿಗೆಯ ಶುಭ್ರಗಾಳಿಯ ಆಹ್ಲಾದಕರ ಜೀವಂತಿಕೆಯೇ ಹೊರತು,ಈ ಅಹಂಕಾರಿ ಮನುಷ್ಯ ಕೈಗಳ ಒಣ ನೈಪುಣ್ಯತೆಯಂತೂ ಅಲ್ಲ!
    ಇಲ್ಲಿ ಹಿರಿಯರಿಬ್ಬರು ಹಂಚಿಕೊಂಡ ಸೂಕ್ಷ್ಮ ಒಳನೋಟಗಳು- ಕೃತಿಕಾರನಾಗಿ ನನ್ನನ್ನು ಉಲ್ಲಾಸಗೊಳಿಸಿವೆ. ಏಕೆಂದರೆ,ಚಿತ್ರದ ಶೈಲಿಯೂ ಸೇರಿದಂತೆ ಅದರ ವರ್ಣನಾವಿವರಗಳನ್ನು ಅವರಿವರಿಗೆ ಸ್ವತಃ ಕಲಾವಿದನೇ ಒಪ್ಪಿಸಿಕೊಳ್ಳುವುದಿದೆಯಲ್ಲಾ… ಅದು ಯಾವ ಕಲಾವಿದನೂ ಮಾಡಲಾಗದ ಮತ್ತು ಮಾಡಬಾರದ ಕೆಲಸವೇ! ಆ ಕಂಟಕದಿಂದ ನನ್ನನು ಪಾರು ಮಾಡಿದ ಹಿರಿಯರಿಗೆ ಧನ್ಯವಾದಗಳು!ಇಷ್ಟಾಗಿಯೂ ಪತ್ರಿಕೆಯಲ್ಲಿ ಒಂದು ದಿನದ ಮಟ್ಟಿಗೆ ಕಾಣಿಸಿಕೊಂಡು ,ಬಳಿಕ ಕಲಾವಿದನ ವೈಯಕ್ತಿಕ ದಾಖಲೆಗಷ್ಟೇ ಸೇರಿಹೋಗಬಹುದಾಗಿದ್ದ ಈ ಚಿತ್ರವನ್ನೆತ್ತಿ ಮಡಿಲಿಗೆ ಕೂರಿಸಿಕೊಂಡು ಕೂಸಿನ ಕೊಂಡಾಟದ ವಾತ್ಸಲ್ಯ ತೋರಿಸಿದ ‘ಅವಧಿ’ಗೆ ಪ್ರೀತಿಯ ನಮಸ್ಕಾರಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: