ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಿನೇಶ್ ಅಮೀನ್‌ಮಟ್ಟು ಲೇಖನಕ್ಕೆ ಡಿ.ಎಸ್ ನಾಗಭೂಷಣ reaction

ಚರ್ಚೆಗೆ ಸ್ವಾಗತ ‘ಪ್ರಜಾವಾಣಿ’ ಲೇಖನ ಇಲ್ಲಿದೆ

ಪ್ರಿಯರೇ,

ನಿನ್ನೆಯ ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ದಿನೇಶ್ ಅಮೀನ್ಮಟ್ಟು ಅವರ ’ಸಂವಿಧಾನೇತರ ಶಕ್ತಿಗಳ ನಿಯಂತ್ರಣದಲ್ಲಿ ಪಕ್ಷಗಳು’ ಅಂಕಣ ಬರಹ ತೀರಾ ಸಾರಾಸಗಟಾಗಿದೆ ಎನ್ನಿಸಿದುದರಿಂದ ನನ್ನದೊಂದು ಪ್ರತಿಕ್ರಿಯೆಯನ್ನು ದಿನೇಶ್ ಅವರಿಗೆ ಕಳಿಸಿ, ನಂತರ ನಿಮ್ಮ ಓದು/ಅಭಿಪ್ರಾಯಕ್ಕಾಗಿ ಕಳಿಸುತ್ತಿರುವೆ.

-ಡಿಎಸ್ಸೆನ್

 

ಪ್ರಿಯಶ್ರೀ ದಿನೇಶ್ ಅಮೀನ್‌ಮಟ್ಟು ಅವರಲ್ಲಿ,

ಇಂದಿನ ಪ್ರಜಾವಾಣಿಯಲ್ಲಿ ಸಂವಿಧಾನೇತರ ಶಕ್ತಿಗಳ ಬಗ್ಗೆ ನೀವು ಬರೆದ ಅಂಕಣ ಓದಿದೆ. ನಿಮ್ಮ ವಾದ ಒಂದು ಆದರ್ಶ ಅಥವಾ ಪ್ರಬುದ್ಧ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ ಸರಿಯೆನಿಸೀತೇನೋ! ನಿಮ್ಮ ಬರಹದ ಕೊನೆಯಲ್ಲಿ ಹಾಕಿರುವ, ಇದರಿಂದ ಸಂಸದೀಯ ಪ್ರಜಾಪ್ರಭುತ್ವ ದುರ್ಬಲಗೊಳ್ಳುವುದಿಲ್ಲವೇ? ಎಂಬ ಪ್ರಶ್ನೆಯನ್ನು ನಿಮ್ಮ ಬರಹದ ಆರಂಭದಲ್ಲೇ ಹಾಕಿಕೊಂಡು, ಇಂದಿನ ನಮ್ಮ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಮುಟ್ಟಿರುವ ಸ್ಥಿತಿಯನ್ನು ವಿಶ್ಲೇಷಿಸುವ ಪ್ರಯತ್ನ ಮಾಡಿದ್ದರೆ ಬಹುಶಃ ನೀವು ಹೀಗೆ ವಾದ ಮಾಡುತ್ತಿರಲಿಲ್ಲ!

ಪ್ರಜಾಪ್ರಭುತ್ವ ಇಂದು ದುರ್ಬಲಗೊಂಡಾಗಿದೆಯಲ್ಲವೇ? ಅದರಿಂದಾಗಿಯೇ ಇಷ್ಟೆಲ್ಲ ಗೊಂದಲಗಳಲ್ಲವೇ, ಸಾಂವಿಧಾನಿಕ-ಅಸಂವಿಧಾನಿಕ ಶಕ್ತಿಗಳನ್ನು ಕುರಿತ ಚರ್ಚೆಗಳಲ್ಲವೇ? ಪ್ರಜಾಪ್ರಭುತ್ವ ಇಂದು ದುರ್ಬಲಗೊಂಡಿರುವುದು, ಯಾವುದನ್ನು ನೀವು ಇವು ಮಾತ್ರ ಸಾಂವಿಧಾನಿಕ ಶಕ್ತಿಗಳು ಎಂದು ಮಾನ್ಯತೆ ನೀಡಿರುವಿರೋ, ಅವುಗಳಿಂದಲೇ ಅಲ್ಲವೇ? ಸಭ್ಯ ಸಾಮಾನ್ಯ ನಾಗರಿಕರಾರೂ ಚುನಾವಣೆಗಳಿಗೆ ನಿಂತು ನೀವು ಚೌಕಟ್ಟು ಹಾಕಿರುವಂತಹ ಸಂವಿಧಾನಿಕ ಶಕ್ತಿಗಳಾಗಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಉಂಟಾಗಿರುವಾಗ ನೀವು ಯಾವ ತೆರೆನ ಸಾಂವಿಧಾನಿಕ ಶಕ್ತಿಯ ಬಗ್ಗೆ ಮಾತನಾಡುತ್ತಿರುವಿರೋ ತಿಳಿಯದಾಗಿದೆ!

ನಾಗರಿಕ ಸಮುದಾಯವೂ, ತನಗೆ ದತ್ತವಾಗಿರುವ ಪ್ರಜೆತನದಿಂದಾಗಿ ಸಾಂವಿಧಾನಿಕ ಶಕ್ತಿಯ ಒಂದು (ಸುಪ್ತ)ಭಾಗವೇ ಆಗಿದೆ. ನೀವು ಹೇಳುವ (ಕ್ರಿಯಾತ್ಮಕ)ಸಾಂವಿಧಾನಿಕ ಶಕ್ತಿ, ಇದರ ಪ್ರಾತಿನಿಧಿಕ ರೂಪವಷ್ಟೇ. ಹಾಗಾಗಿ ಈ ಪ್ರಾತಿನಿಧಿಕ ಶಕ್ತಿ ರೂಪವು, ಯಾವುದರಿಂದ ತಾನು ಸಂಭವಿಸಲು ಸಾಧ್ಯವಾಗಿದೆಯೋ ಆ ಸಂವಿಧಾನದ ಮೂಲ ಉದ್ದೇಶಗಳನ್ನೇ, ಅದರ ಪ್ರಕ್ರಿಯೆಗಳನ್ನೇ ಬುಡಮೇಲು ಮಾಡಬಲ್ಲಷ್ಟು ರಾಕ್ಷಸವಾದಾಗ, ಅದರ ಮೂಲಾಧಾರವಾದ ಪ್ರಜಾಶಕ್ತಿಯ ರೂಪದಲ್ಲಿರುವ (ಸುಪ್ತ)ಸಾಂವಿಧಾನಿಕ ಶಕ್ತಿಯು ಎಚ್ಚರಗೊಳ್ಳುವುದೂ ಸಾಂವಿಧಾನಿಕವೇ ಎಂದು ನಾನು ಭಾವಿಸಿದ್ದೇನೆ. ನೀವು ಸಂವಿಧಾನೇತರವೆಂದು ಗುರುತಿಸುವ ಈ ಶಕ್ತಿಗಳೂ ಜನತೆಯ ಸಾಮೂಹಿಕ ಬೆಂಬಲ ಪಡೆದಿರುವುದರಿಂದಲೇ ಅವು ಸರ್ಕಾರದ ಮೇಲೆ ಒತ್ತಡ ಉಂಟು ಮಾಡಲು ಸಾಧ್ಯವಾಗಿರುವುದು ಅಲ್ಲವೇ? ಅವಕ್ಕೆ ಜನ ಬೆಂಬಲ ಇಲ್ಲವಾದ ಕೂಡಲೇ-ಈಗ ನಿಧಾನವಾಗಿ ರಾಂದೇವ್‌ಗೆ ಆಗುತ್ತಿರುವಂತೆ-ಅವುಗಳ ಪರಿಣಾಮವೂ ಕುಂದುತ್ತಾ ಹೋಗುತ್ತದೆ.

ನೀವು ನಿಮ್ಮ ವಾದದ ಭಾಗವಾಗಿ ಪ್ರಸ್ತಾಪಿಸುವ ಆರೆಸೆಸ್ ಅಥವಾ ಇನ್ನಿತರ ಫ್ಯಾಸಿಸ್ಟ್ ಶಕ್ತಿಗಳ ಕೈವಾಡವನ್ನು ಜನತಾ ಶಕ್ತಿಯೇ ನಿರ್ವಹಿಸಬಲ್ಲುದಾಗಿದೆ. ಮತ್ತು ಜನತಾ ಶಕ್ತಿ ಮಾತ್ರ ನಿರ್ವಹಿಸಬೇಕಾಗಿದೆ. ಆ ದಿಕ್ಕಿನಲ್ಲಿ ಜನತೆಯನ್ನು ಎಚ್ಚರಿಸುವ ಕೆಲಸವನ್ನು(ಈಗ ಬಾಬಾ ರಾಂದೇವ್ ಅವರ ಆಂದೋಲನದ ಬಗ್ಗೆ ಮಾಡಿದಂತೆ)ಮಾಡುವುದು ಪ್ರಜ್ಞಾವಂತಿಕೆಯ ಕೆಲಸವಾದೀತೇ ಹೊರತು, ಸಾರಾ ಸಗಟಾಗಿ ಜನತಾ ಶಕ್ತಿಯ ಒಂದು ಅಭಿವ್ಯಕ್ತಿ ಕ್ರಮವನ್ನೇ ಅಸಂವಿಧಾನಿಕ ಎಂದು ಗುರುತಿಸುವುದು ಸಂಸದೀಯ ಪ್ರಜಾಪ್ರಭುತ್ವವನ್ನು ಕೇವಲ ತಾಂತ್ರಿಕ ಚೌಕಟ್ಟಿನೊಳಕ್ಕೆ ತುರುಕಿ ಉಸಿರುಗಟ್ಟಿಸುವ ಅಪಾಯಕಾರೀ ಕೆಲಸವಾದೀತೆಂದು ನನ್ನ ಭಾವನೆ. ನಿಮ್ಮ ವಾದವೇ ಸರಿಯಿದ್ದರೆ, ೭೦ರ ದಶಕದ ಜೆಪಿ ಆಂದೋಲನವೇ ಸಾಧ್ಯವಾಗುತ್ತಿರಲಿಲ್ಲ. ಅಂದು ಈ ಆಂದೋಲನದ ಬಗ್ಗೆಯೂ ಸರಿ ಸುಮಾರು ಇಂತಹುದೇ ಆಕ್ಷೇಪಣೆಗಳನ್ನು ಎತ್ತಲಾಯಿತು.(ಅವನ್ನು ಪುನರುಚ್ಚರಿಸುವ ಜನ ಈಗಲೂ ಇದ್ದಾರೆ ಎಂಬುದು ಬೇರೆ ವಿಷಯ.) ಆದರೆ ಜೆಪಿ ಆಂದೋಲನ ನಡೆಯದಿದ್ದರೆ, ಯಾವ ಸಾಂವಿಧಾನಿಕ ಸಂಸದೀಯ ಪ್ರಜಾಪ್ರಭುತ್ವದ ರಕ್ಷಣೆಯ ಕಳಕಳಿಯನ್ನು ನೀವು ತೋರಿಸುತ್ತಿದ್ದೀರೋ ಆ ಪ್ರಜಾಪ್ರಭುತ್ವ ಖಂಡಿತ ನಮ್ಮ ಪಾಲಿಗೆ ಹೀಗಂತೂ ಇರುತ್ತಿರಲಿಲ್ಲ.

ಇನ್ನು ನೀವು ಪ್ರಸ್ತಾಪಿಸಿರುವ ಸೋನಿಯಾ ಗಾಂಧಿ-ರಾಷ್ಟ್ರೀಯ ಸಲಹಾ ಮಂಡಳಿ(ಎನ್.ಎ.ಸಿ.)-ಮನಮೋಹನ ಸಿಂಗ್ ಅವರ ಸಾಂವಿಧಾನಿಕ ಸಂಬಂಧಗಳ ಬಗ್ಗೆ ಹೇಳುವುದಾದರೆ, ಮೊದಲಾಗಿ ಮನಮೋಹನ ಸಿಂಗರು ಯಾವ ಜನತಾ ಶಕ್ತಿಯ, ಎಂತಹ ಪ್ರತಿನಿಧಿಯೆಂದು ಮೊದಲು ಯೋಚಿಸಬೇಕಾಗುತ್ತದೆ. ಅಣ್ಣ ಹಜಾರೆ ಮತ್ತವರ ಸಹವರ್ತಿಗಳೋ ಅಥವಾ ಬಾಬಾ ರಾಂದೇವ್ ಆರೆಸ್ಸೆಸ್ ಕೈಗೊಂಬೆಗಳೇ ಆಗಿದ್ದಾರೆಂದು ಹೇಳುವುದಾದರೆ, ಈ ಮನಮೋಹನ ಸಿಂಗ್ ಮೂಲತಃ ಯಾರ ಕೈಗೊಂಬೆ ಎಂದು ಕೇಳಬಹುದಲ್ಲವೇ? ಮೊದಲು ಸುಳ್ಳು ವಿಳಾಸ ನೀಡಿ ಸಂವಿಧಾನದ ನಿಮವನ್ನೇ ಉಲ್ಲಂಘಿಸಿ ಸಂಸತ್ತನ್ನು ಪ್ರವೇಶಿಸಿ, ಸಚಿವರೂ ಆಗಿ; ಜನತಾ ಆದೇಶವಿಲ್ಲದೆಯೇ ದೇಶದ ಅಭಿವೃದ್ಧಿಯ ಆದ್ಯತೆ ಮತ್ತು ಸ್ವರೂಪಗಳನ್ನೇ ಮೂಲಭೂತವಾಗಿ ಬದಲಿಸಿದ ಈ ಮನಮೋಹನ ಸಿಂಗರು, ಈಗ ನಮ್ಮ ಸಂವಿಧಾನ ನಿರ್ಮಾತೃಗಳು ಬಹುಶಃ ತುರ್ತು ಸಂದರ್ಭಗಳಿಗಿರಲೆಂದು ಮಾಡಿಕೊಟ್ಟ ರಾಜ್ಯಸಭಾ ಸದಸ್ಯರೂ ಪ್ರಧಾನ ಮಂತ್ರಿಗಳಾಗಬಹುದೆಂಬ ಅವಕಾಶವನ್ನು ಬಳಸಿಕೊಂಡು ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿರುವವರು. ಇವರು ಪ್ರಧಾನ ಮಂತ್ರಿಯಾಗಿರುವುದೇ ಸೋನಿಯಾ ಅವರ ಕೃಪೆಯಿಂದ ಎಂಬುದು ಸಾರ್ವಜನಿಕವಾಗಿ ಬಹಿರಂಗವಾದ ವಿಚಾರ. ಹೀಗಿರುವಾಗ ಇವರು ಎಂತಹ ರಾಜಕೀಯ ಅಧಿಕಾರಕ್ಕೆ ಬಾಧ್ಯಸ್ಥರಾಗಬಲ್ಲರು? ಹಾಗೆ ಬಾಧ್ಯಸ್ಥರಾಗಿಲ್ಲದಿರುವುದರಿಂದಲೇ, ಸೋನಿಯಾ ಗಾಂಧಿಯವರು ರಾಷ್ಟ್ರೀಯ ಸಲಹಾ ಮಂಡಳಿಯನ್ನು ರಚಿಸಿ ಆಡಳಿತ ನೀತಿ ಹಾಗೂ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪರಿಣಿತಿಯನ್ನು ಹೊರಗುತ್ತಿಗೆಗೆ ಪಡೆಯುವ ಅನಿವಾರ್ಯತೆU ಸಿಕ್ಕಿರುವುದು ಅಲ್ಲವೇ? ಅಂದಹಾಗೇ ಈ ಹೊರ ಗುತ್ತಿಗೆ ಪದ್ಧತಿ ಯಾರ ಕೊಡುಗೆ?

ಹೀಗೆ ಪ್ರಜಾಪ್ರಭುತ್ವವೆಂಬುದೇ ಮೂಲಾಧಾರಗಳನ್ನು ಕಳಚಿಕೊಂಡು, ಹೊಸ ಸಂದರ್ಭಕ್ಕೆ ತನ್ನನ್ನು ತಾನು ಅಳವಡಿಕೊಳ್ಳುತ್ತಿರುವ ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಆದರ್ಶ ಪ್ರಜಾಪ್ರಭುತ್ವದ ಆದರ್ಶಗಳ ಪಾಲನೆಯ ಮಾತಾಡುವುದು, ರೋಗ ಲಕ್ಷಣಗಳನ್ನೇ ರೋಗವೆಂದು ಗುರುತಿಸಿ ಗಾಬರಿಗೊಳ್ಳುವ ಕೆಲಸವಾಗುತ್ತದೆ. ನೀವು ಸಂವಿಧಾನೇತರ ಶಕ್ತಿಗಳು ಎಂದು ಕರೆಯುವ ಈ ನಾಗರಿಕ ಸಮಿತಿಗಳು ನೀವು ಹೇಳಿದಂತೆ ಶಾಸನ ರಚಿಸುವ ಕೆಲವನ್ನೇನೂ ಮಾಡುತ್ತಿಲ್ಲ. ಅವರದೇನಿದ್ದರೂ, ಸರ್ಕಾರದೊಂದಿಗೆ ಅನುಸಂಧಾನಿಸುತ್ತಾ ಕರಡು ಮಸೂದೆಯನ್ನೇ ನೀತಿ ನಿರೂಪಣೆಯನ್ನೋ ಸಿದ್ಧಪಡಿಸುವುದಷ್ಟೆ. ಅದರ ಮೇಲೆ, ಸಚಿವ ಸಂಪುಟವಿದೆ, ಸಂಸತ್ತಿದೆ, ಅದರದೇ ಆದ ಅಂಗ ಸಂಸ್ಥೆಗಳಿವೆ, ಅವನ್ನು ಅಂತಿಮವಾಗಿ ಒಪ್ಪಲು ಅಥವಾ ಬಿಡಲು.

ಆದುದರಿಂದ ನೀವು ಹೇಳುವಂತಹ ಸಂವಿಧಾನೇತರ ಶಕ್ತಿಗಳು ಸಂವೈಧಾನಿಕವಾಗಿ ನಿರ್ಣಾಯಕವೆನ್ನಬಹುದಾದ ಕೆಲಸಗಳಲ್ಲೇನೂ ತೊಡಗಿಲ್ಲ. ಅವು ನಮ್ಮ ಸಂವಿಧಾನದ ಕ್ರಿಯಾತ್ಮಕ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಹಾಗೂ ನಾಲ್ಕನೇ ಅನೌಪಚಾರಿಕ ಅಂಗವೆನಿಸಿದ ಮಾಧ್ಯಮ ರಂಗ ನಿಧಾನವಾಗಿ ಭ್ರಷ್ಟತೆಯ ಗಂಭೀರ ಆರೋಪಗಳನ್ನು ಎದುರಿಸುವಂತಾಗಿ, ಇವುಗಳನ್ನಾಧರಿಸಿದ ಪ್ರಜಾಪ್ರಭುತ್ವವೇ ಅರ್ಥಹೀನವೆನ್ನಿಸತೊಡಗಿ ಅಪಾಯಕ್ಕೆ ಸಿಕ್ಕಿರುವಾಗ, ಸಂವಿಧಾನದ ಸುಪ್ತ ಶಕ್ತಿಯೆನಿಸಿರುವ ಜನತಾ ಶಕ್ತಿಯ ಪ್ರತಿನಿಧಿಯಾಗಿ ನಾಗರಿಕ ಸಮಿತಿಗಳು ಕ್ರಿಯಾಶೀಲವಾಗತೊಡಗುವುದು ಭರವಸೆಯ ಬೆಳಕಾಗಿ ಕಾಣಬೇಕೇ ಹೊರತು, ಕೆಡುಕಿನ ಸೂಚನೆಯಾಗಿ ಅಲ್ಲ. ಜನತಾ ಶಕ್ತಿ ಪ್ರಜಾಪ್ರಭುತ್ವಕ್ಕೆ ಉಂಟಾಗಿರುವ ಅಪಾಯದ ಬಗ್ಗೆ ಎಷ್ಟು ಸೂಕ್ಷ್ಮ ಹಾಗೂ ಕ್ರಿಯಾಶೀಲವಾಗಿರುತ್ತದೋ ಅಷ್ಟು ಮಾತ್ರ ಈ ನಾಗರೀಕ ಸಮಿತಿಗಳು ಸೂಕ್ಷ್ಮ ಹಾಗೂ ಕ್ರಿಯಾಶೀಲವಾಗಿರಬಲ್ಲವು. ಹಾಗಾಗಿ ಈ ನಾಗರಿಕ ಸಮಿತಿಗಳ ಮಿತಿಗಳು ಮತ್ತು ಅತಿಗಳ ಬಗ್ಗೆ ದೂರುತ್ತಾ ಕೂರುವುದಕ್ಕಿಂತ, ಜನತಾ ಶಕ್ತಿಯನ್ನು ಹೆಚ್ಚು ಸೂಕ್ಷ್ಮ ಹಾಗೂ ಕ್ರಿಯಾಶೀಲಗೊಳಿಸುವತ್ತ ಗಮನ ಹರಿಸುವುದು ಪ್ರಜ್ಞಾವಂತರ ಕೆಲಸವಾಗಬೇಕು.

ನಿಮ್ಮ ಪತ್ರಿಕೆಯಲ್ಲಿ ಯಾವುದಾವುದೋ ತಾಂತ್ರಿಕ ಕಾರಣಗಳ ಮೇಲೆ ಓದುಗರಿಗೆ ದೀರ್ಘ ಪ್ರತಿಕ್ರಿಯೆ ಹಾಗೂ ಸಂವಾದಕ್ಕೆ ಅವಕಾಶವಿಲ್ಲದಿರುವುದರಿಂದ ನಿಮಗೆ ನೇರವಾಗಿ ಬರೆದಿರುವೆ. ನೀವು ಗಮನಿಸಿದ ಮೇಲೆ ಇದನ್ನು ನನ್ನ ಇತರ ಕೆಲವು ಗೆಳೆಯರಿಗೆ ತಲುಪಿಸುವ ಇರಾದೆ ನನ್ನದು..

-ಡಿ.ಎಸ್ ನಾಗಭೂಷಣ

 

‍ಲೇಖಕರು G

15 June, 2011

14 Comments

  1. ಲಕ್ಷ್ಮೀನಾರಾಯಣ ವಿ ಎನ್

    ಸಮಂಜಸವಾದ ಪ್ರತಿಕ್ರಿಯೆ

    • D.S.Nagabhushana

      ಧನ್ಯವಾದಗಳು. ಮುಂದಿನ ಇತರ ಪ್ರತಿಕ್ರಿಯೆಗಳನ್ನೂ ಓದಿ ಯೋಚಿಸಿ ಎಂದು ಕೋರಿಕೆ

  2. vasanth

    Sir,
    Your comments are valid but let us assume Anna (as majority feel is a gandhian, let us accept what the public feel) is doing right thing by using the democratic rights we enjoy. But Anna Hazare is also in way responsible for Baba Ramdev to sit for fasting. If once we allow the interlocutors to pitch-in in a elected democratic space, we have to see more baba Ramdev. So it is right time to strengthen our democratic institutions.
    In this context, Dinseh sir editorial perspective is vary valid.

    • D.S.Nagabhushana

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ನನ್ನ ಲೇಖನ ಗೆಳೆಯ ದಿನೇಶ್ ಅಮೀನ್ಮಟ್ಟು ಅವರ ಅಂಕಣ ಬರಹಕ್ಕೆ ಪ್ರತಿಕ್ರಿಯೆಯಾಗಿದ್ದು, ಅದರಲ್ಲಿ ಅಣ್ಣಾ ಹಜಾರೆ ಅವರ ಆಂದೋಲನದ ಬಗ್ಗೆ ನಾನು ಹೇಳಬೇಕಾದುದನ್ನೆಲ್ಲ ಹೇಳಲಾಗಿಲ್ಲ. ಈ ಆಂದೋಲನದ ಬಗ್ಗೆ ಕಳೆದ ತಿಂಗಳ ’ಸಂವಾದ’ ಮಾಸಿಕದಲ್ಲಿ ಪ್ರಕಟವಾದ ನನ್ನ ಲೇಖನ ’ಅಣ್ಣಾ ಹಜಾರೆ ಆಂದೋಲನ; ಉಳಿದು ಹೋದ ಕೆಲವು ಪ್ರಶ್ನೆಗಳು’ ಲೇಖನವನ್ನು ಓದಿದ್ದಾದರೆ,ನಾನು ಅಣ್ಣಾ ಹಜಾರೆ ಆಂದೋಲನದ ಅಪೂಣತೆ ಮತ್ತು ಅಸಮರ್ಪಕತೆಗಳ ಬರೆದಿರುವುದನ್ನು ಗಮನಿಸಬಹುದು. ಈ ಪ್ರತಿಕ್ರಿಉಎಯಲ್ಲಿ ನನ್ನ ವಾದ ಇಷ್ಟೆ: ಜನತಾ ಆಂದೋಲನಗಳು ಇಂದಿನ ಅವಶ್ಯಕತೆಯಷ್ಟೇ ಅಲ್ಲ, ತುರ್ತು ಅಗತ್ಯವೂ ಆಗಿದೆ. ಹಾಗಾಗಿ ಅವುಗಳ ಮಿತಿಗಳನ್ನೂ ಅತಿಗಳನ್ನೂ ವಿಮರ್ಶಿಸೋಣ. ಆದರೆ ಅವುಗಳ ವಿಶ್ವಾಸಾರ್ಹತೆಯನ್ನೇ ಸಾರಾಸಗಟಾಗಿ ಪ್ರಶ್ನಿಸದಿರೋಣ.

  3. Divyaprakash

    ಈ ಪ್ರತಿಕ್ರೀಯೆ ಒಂದು ಅರ್ಧಸತ್ಯದಂತೆ ಅನ್ನಿಸುತ್ತಿದೆ. ಕಾರಣವಿಷ್ಟೆ.. ಒಂದು ಆದರ್ಶವಿಲ್ಲದೆ ಮನುಷ್ಯರು ಸಾಮೂಹಿಕ ಜೀವನ ನಡೆಸುವುದು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಜನರು ಸಾಮೂಹಿಕ ಜೀವನ ನಡೆಸಲು ಇರುವ ಪ್ರಸ್ತುತ ಮಾದರಿಗಳಲ್ಲಿ ಉತ್ತಮವಾದದ್ದು ಎಂಬ ಆಧಾರದಲ್ಲಿ ಭಾರತದಲ್ಲಿ ಚಾಲ್ತಿಯಲ್ಲಿದೆ ಎಂಬುದು ನನ್ನ ನಂಬಿಕೆ. ಹಾಗಾಗಿ ಪ್ರಜಾಪ್ರಭುತ್ವದಲ್ಲಿ ನಮ್ಮ ನಂಬಿಕೆಯ ಮುಂದುವರಿಕೆಗೆ ’ಆದರ್ಶ’ದ ಕಲ್ಪನೆ ಅಗತ್ಯವಾದದ್ದು. ಈ ದೃಷ್ಟಿಕೋನದಿಂದ ನೋಡಿದಾಗ ಅಮೀನ್ ಮಟ್ಟು ಅವರ ಲೇಖನದಲ್ಲಿ ದೊಡ್ಡ ಕೊರತೆಗಳೇನೂ ಕಾಣಿಸುವುದಿಲ್ಲ.

    ಇನ್ನೊಂದು ವಿಷಯ. ಜನರು ಸುಪ್ತ ಸಾಂವಿಧಾನಿಕ ಶಕ್ತಿ ಎಂಬುದು ನಿಜ. ಕ್ರಿಯಾತ್ಮಕ ಸಾಂವಿಧಾನಿಕ ಶಕ್ತಿ ಇದರ ಪ್ರಾತಿನಿಧಿಕ ರೂಪವೆಂಬುದು ಅಷ್ಟೇ ಸತ್ಯ. ಹಾಗೆ ನೋಡಿದರೆ ನಾವು ಸಾಮಾನ್ಯ ಜನತೆಯನ್ನು ನಾಗಭೂಷಣ್ ಹೇಳಿರುವಂತೆ ಸಾಂವಿಧಾನಿಕ ಪರಿಧಿಯೊಳಗಿಟ್ಟು ನೋಡಿದಾಗಲೂ ಸಮಸ್ಯೆ ಪರಿಹಾರವಾಗುವುದಿಲ್ಲ. ಒಂದಿಡೀ ಪ್ರಜಾ ಸಮೂಹವನ್ನು ಮುನ್ನಡೆಸಲು ಬೇಕಾದ ಆಡಳಿತ ವಿಧಾನಗಳನ್ನು ರೂಪಿಸಲು ಪ್ರಜಾ ಸಮೂಹವನ್ನು ’ನೇರವಾಗಿ’ ಜವಾಬ್ದಾರನಾಗಿಸುವುದು ಸಾಧ್ಯವಿಲ್ಲ!! ಈ ಕಾರಣಕ್ಕಾಯೇ ಪ್ರಾತಿನಿಧಿಕ ಶಕ್ತಿ ಬಳಕೆಯಾಗಬೇಕು ಅಲ್ಲವೇ?

    ಬೆಕ್ಕಿಗೆ ಗಂಟೆ ಕಟ್ಟಬೇಕಿದೆ. ಸಾವಿರ ಇಲಿಗಳು ಮುಗಿಬೀಳುವುದು ಅಸಾಧ್ಯ. ಸರಿ ಒಂದೈದು ಇಲಿಗಳನ್ನು ಕಳುಹಿಸಿಕೊಡೋಣ ಎಂದರೆ ಉಳಿದವಕ್ಕೆ ಐದಿಲಿಗಳ ಅರ್ಹತೆಯ ಪ್ರಶ್ನೆ ಎದುರಾಗಿದೆ. ಜಗಳ ದೊಡ್ಡದಾಗಿ ಗಂಟೆ ಕಟ್ಟುವುದು ಮರೆತುಹೋಗಿದೆ!!!

    • D.S.Nagabhushana

      ನಾನು ಆದರ್ಶದ ಅಗತ್ಯವನ್ನು ಎಲ್ಲಿ ನಿರಾಕರಿಸಿದ್ದೇನೆ? ಆದರೆ ದಿನೇಶ್ ಅವರ ಮಾತು, ಟೀಕೆ ಸಾಂದರ್ಭಿಕವಾಗಿಲ್ಲ ಎಂದಷ್ಟೇ ಹೇಳಿರುವೆ. ಆದರ್ಶಗಳು ಕಳೆದುಹೋಗಿರುವ ಸಂದರ್ಭದಲ್ಲಿ ಆದರ್ಶಗಳನ್ನು ಸ್ಥಾಪಿಸುವ ಸಣ್ಣಪುಟ್ಟ ಪ್ರಯತ್ನಗಳು ಆರಂಭವಾಗಿರುವಾಗ, ಅವನ್ನು ಸಾರಾಸಗಟಾಗಿ ಆದರ್ಶಗಳ ಅಳತೆಗೋಲುಗಳಿಂದ ಅಳೆದು ತೀರ್ಮಾನಗಳಿಗೆ ಬರುವುದು ತದ್ವಿರುದ್ಧ ಪರಿಣಾಮಗಳನ್ನು ಉಂಟು ಮಾಡೀತು ಎಂಬ ಆತಂಕವನ್ನಷ್ಟೇ ನಾನು ವ್ಯಕ್ತಪಡಿಸುವುದು. ಅಣ್ಣಾ ಹಜಾರೆ ಆಂದೋಲನ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಿರಲಿ, ಅವುಗಳನ್ನು ಮುಟ್ಟಬಲ್ಲವು ಎಂಬ ಬಗ್ಗೆ ನನಗೆ ಅನುಮಾನವಿದೆ. ಆದರೆ ಆ ದಿಕ್ಕಿನಲ್ಲಿ ಇದೊಂದು ಶುಭಾರಂಭವಾದರೆ, ಆರಂಭದಲ್ಲೇ ಅಪಶಕುನದ ಮಾತೇಕೆ? ಇದಷ್ಟೇ ನನ್ನ ಪ್ರಶ್ನೆ.

  4. sumathibk

    naagabhooshanji.. ade prakhara nudi nimmadu.. how r u ?

    • D.S.Nagabhushana

      ಪ್ರಿಯ ಶ್ರೀಮತಿ ಸುಮತಿ ಅವರೇ, ನೀವು ಆಕಾಶವಾಣಿಯ ಉದ್ಘೋಷಕಿ ತಾನೇ? ನಿಮ್ಮ ಮಾತುಗಳಿಗಾಗಿ ವಂದನೆಗಳು. ನಿಮ್ಮ ಕುಟುಂಬಕ್ಕೆ ನನ್ನ ಸಿಹಿ ನೆನಪುಗಳು!

  5. A P Bhat

    ದಿನೇಶ್ ಅವರು ಭಾಗಶ ಅಧಿಕಾರಸ್ಥರ ಅಶಯಗಳನ್ನೇ ಪ್ರತಿಪದಿಸಿದ್ದಾರಯೇನಿಸುತದೆ.ಸಂವಿಧಾನದ ಆಶಯ ತಿಳಿದಿರದ ಮತ್ತು ಅದಕ್ಕೆ ವ್ಯತಿರಿಕ್ತ ವಾಗಿ ವರ್ಥಿಸುತಿರುವ
    ಜನಪ್ರತಿನಿಧಿಗಳಿಂದ ಈ ನಿಟ್ಟಿನಲ್ಲಿ ಸುಧಾರಣೆ ನಿರೀಕ್ಷಿಸಿ ಸಾಕಾಗಿದೆ. .

    • D.S.Nagabhushana

      ವಂದನೆಗಳು. ಮೇಲಿನ ಪ್ರತಿಕ್ರಿಯೆಗಳನ್ನೂ ಗಮನಿಸಿ.

  6. Sharath S.

    Dear Nagbhushan,
    You will get clear picture, only if you read Mr.Mattu’s present column with some of his previous columns on failure of legislature, judiciary and Media. He wrote many column about the failure of these ‘estates’.
    Sharath S.

    • D.S.Nagabhushana

      ನಾನು ಅಮೀನ್ಮಟ್ಟು ಅವರ ಅಂಕಣಗಳ ನಿಯಮಿತ ಓದುಗನಷ್ಟೇ ಅಲ್ಲ, ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುವಾತ. ಹಾಗಾಗಿ ಅವರ ಈ ಹಿಂದಿನ ಅಂಕಣಗಳನ್ನು ಓದಿಯೂ ಇದನ್ನು ಅವರಿಗೆ ಬರೆಯುವುದು ಅನಿವಾರ್ಯತಷ್ಟೇ ಅಲ್ಲ,ಇದನ್ನು ಸಾರ್ವಜನಿಕವಾಗಿ ಪ್ರಕಟಿಸುವುದೂ ಅಗತ್ಯವೆನಿಸಿತು!

  7. Laxminarasimha

    ರಾಜಕಾರಣಿಗಳ ವಿರುದ್ಧ ಟೀಕೆ/ ಕಟಕಿ ವ್ಯಕ್ತಪಡಿಸುವ “ನಾಗರಿಕ ಪ್ರತಿನಿಧಿ”ಗಳಿಗೆ ನೀವೂ ಚುನಾವಣೆಗೆನಿಂತು ಗೆದ್ದುಬನ್ನಿ; ನಂತರ ಇದೆಲ್ಲಾ ಮಾಡಿ
    ಎಂದು ಸವಾಲು ಎಸೆಯುವ ಕಾಂಗ್ರೆಸಿಗರೂ, ಕಾಂಗ್ರೆಸ್ಸನ್ನು ಟೀಕಿಸುವುದನ್ನು ಬಿಟ್ಟು ಬೇರೆನ್ನನ್ನೂ ಮಾಡುತ್ತಿಲ್ಲದ ಬೀಜೇಪೀಯೂ,
    ಚುನಾವಣೆ ಎನ್ನುವುದನ್ನು ಅಣಕವಾಗಿಸಿರುವುದು ಸ್ವತಸಿದ್ಧ. ಈವತ್ತು ಯಾರಾದರೂ ನೈತಿಕತೆಯುಳ್ಳ, ಹಣ/ತೋಳ್ಬಲ ಇಲ್ಲದ ಮನುಷ್ಯ ಎಂಪಿ, ಎಂಎಲ್ಲೆ ಬಿಡಿ
    ಗ್ರಾಮ/ಜಿಲ್ಲಾ ಪಂಚಯತಿಯಲ್ಲೂ ಗೆಲ್ಲುವ ಕನಸು ಕಾಣಲಾಗದ ಪರಿಸ್ಥಿತಿ ತರುವುದರಲ್ಲಿ ಎಲ್ಲ ಮುಖ್ಯ ಪಕ್ಷಗಳ ಪಾಲುದಾರಿಕೆಯೂ ಇದೆಯಲ್ಲವೆ.
    ಇಂತಹ ಪರಿಸ್ಥಿತಿಯಲ್ಲಿ, “ನಾಗರಿಕ ಪ್ರತಿನಿಧಿ”ಗಳು ನಡೆಸುತ್ತಿರುವ “ಹೋರಾಟ” ಟೀವೀ ಪ್ರೇಕ್ಷಕರಿಗಾಗಿ ನಡೆಯುತ್ತಿರುವಹಾಗೆ ಕೆಲವರಿಗೆ ಕಂಡಿದೆ.
    ನಾಗಭೂಷಣ ಅವರು ಹೇಳಿದಂತೆ ಈಗಿನ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೂ, ಎಪ್ಪತ್ತರ ದಶಕದ ಜೇಪೀ ಚಳವಳಿಗೂ ತುಂಬಾ ವ್ಯತ್ಯಾಸಗಳಿವೆ.
    ಆಗಿನ ಯುದ್ಧ ಚುನಾಯಿತ ರಾಜಕಾರಣಿಯೊಬ್ಬರ ಸರ್ವಾಧಿಕಾರದ ವಿದುದ್ಧವಿದ್ದು ಅದರ ವಿದುದ್ಧ ಹೋರಾಡುವುದರಿಂದ ಸಾಮನ್ಯ ಜನತೆ
    ಸ್ವಾತಂತ್ರ್ಯಕ್ಕೆ ಹಾಕಲಾದ ಸಂಕೋಲೆಗಳನ್ನಲ್ಲದೆ ಏನನ್ನೂ ಕಳೆದುಕೊಳ್ಳಲಿಕ್ಕಿರಲಿಲ್ಲ. ಆದರೆ, ಈಗಿನ ಭ್ರಷ್ಟಾಚಾರದ ವಿರುದ್ಧದ ಹೋರಾಟ
    ನಮ್ಮೆಲ್ಲರ ಅಂತರಂಗದಲ್ಲಿ ಮೊದಲು ನಡೆದು, ಹಾಗೆ ಹೋರಾಟ ನಡೆಸಿದ ನಂತರ ಅಥವಾ ಜೊತೆಜೊತೆಯಲ್ಲೇ ನಡೆಸುವ ಈ ರೀತಿಯ ಹೋರಾಟಗಳು
    ಹೆಚ್ಚು ಸಮರ್ಥನೀಯವಾಗುತ್ತವೆ ಎಂದೆನಿಸುತ್ತದೆ. ಆದರೆ ಅಂತಹ ಹೋರಾಟಗಳು ತುಂಬಾ ತಾಳ್ಮೆ ಹಾಗೂ ಶ್ರಮ ಬೇಡುವಂತಹವು;
    ಹೀಗೆ ತತ್ಷಣದ ಪ್ರದರ್ಶನ ಕೇವಲ ಕೊನೆಯ ಹಂತದಲ್ಲಿ ಮಾತ್ರ ಹೆಚ್ಚು ಸಮರ್ಪಕ ಎನ್ನಿಸುತ್ತದೆ. ನಾಗಭೂಷಣ ಅವರು ಹೇಳುವಂತೆ
    “ನಾಗರಿಕ ಸಮಾಜದ ಪ್ರತಿನಿಧಿ”ಗಳನ್ನು ಅಪಾಯಕಾರಿ ಎಂದೆಣಿಸುವದರಲ್ಲಿ ಅರ್ಥವಿಲ್ಲವೆನ್ನುವುದು ಸರಿಯಾದರೂ,
    ಅವರು ಮಾಡುತ್ತಿರುವುದನ್ನ ಒಂದು ಮಹತ್ತಾದ ಕ್ರಾಂತಿ ಎಂದು ಬಿಂಬಿಸಲಾಗುತ್ತಿರುವುದನ್ನು ಅಲ್ಲಗಳೆಯಲೇ ಬೇಕಿದೆ.
    ನಮ್ಮ ಮಧ್ಯಮವರ್ಗದ ಜನರಿಗೆ ಟೀವೀಯಲ್ಲಿ ಕಾಣಿಸುತ್ತಿರುವ ಈ ವ್ಯವಹಾರಗಳೆಲ್ಲಾ ಕ್ರಾಂತಿಕಾರಕವಾಗಿ ಕಾಣಬಹುದೇನೋ;
    ಆದರೆ ನಿಜಸಂಗತಿ ಹಾಗಿಲ್ಲ ಎಂದೇ ಎನ್ನಿಸುತ್ತದೆ.

  8. D.S.Nagabhushana

    ನಿಜ, ಸದ್ಯದ ನಾಗರಿಕ ಸಮಾಜದ್ದು ಎಂದು ಹೇಳಲಾಗುವ ಆಂದೋಲನವನ್ನು ಒಂದು ದೊಡ್ಡ ಕ್ರಾಂತಿ ಎಂದು ಬಗೆಯುವುದು ಬರಿ ಭೋಳೆತನವಾದೀತು.ಆದರೆ ಅದು ಇಂದಿಗೆ ಅಗತ್ಯವಾದ;ಆದರೆ ನಾವಾರೂ ಮಾಡಲಾಗದ/ಮಾಡದೇ ಹೋದ ಏನೋ ಒಂದನ್ನು ಆರಂಭಿಸಿದೆ. ಅದನ್ನು ಅಲ್ಲಗೆಳಯದೆ, ವಿಮರ್ಶಿಸಿ ಮುನ್ನೆಡುಸುವ ನಮ್ಮದೇ ಮಿತಿಯ ಪ್ರಯತ್ನವನ್ನಾದರೂ ಮಾಡೋಣ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading