-ಡಾ ಅನಿಲ್ ಎಮ್ ಚಟ್ನಳ್ಳಿ
ಹಬ್ಬದಿಂದ ಹಬ್ಬಕ್ಕೆ
ಮೊನ್ನೆ ಮೊನ್ನೆಯೆ
ಒಂದು ಹಬ್ಬ ಮುಗಿದರೂ
ಆಗಲೇ ಕಾಯುತ್ತೇನೆ
ಮುಂದಿನ ಹಬ್ಬಕ್ಕಾಗಿ
ಪ್ರತಿ ದಿನವೂ ಹಬ್ಬ ಮಾಡಲಿಕ್ಕೆ
ಎಲ್ಲರ ಬದುಕೂ ಅಷ್ಟು ಹಸನಾಗಿರುವುದಿಲ್ಲ
ಎಲ್ಲೊ ಕೆಲವರದು ಇರಬಹುದೇನೋ
ದಿನವೂ ಹಬ್ಬದಂಥ ಬದುಕು
ಹಬ್ಬ ಮಾಡುವುದು ನನಗಿಷ್ಟ
ಅದು ಇತರೆ ದಿನಗಳಂತಲ್ಲ
ಹಬ್ಬ ಚಿಕ್ಕದೋ ದೊಡ್ಡದೋ
ಮನೆ ದೊಡ್ಡದೋ ಚಿಕ್ಕದೋ
ಇದ್ದೇ ಇರುತ್ತದೆ ಒಂದಿಷ್ಟು ಸಂಭ್ರಮ
ಹಬ್ಬದ ಹಿಂದು ಮುಂದಿನ ದಿನ
ಟ್ರಾಫಿಕ್ ಪೋಲೀಸು ಬೇರೆ ದಿನಗಳಂತೆ
ಹೊಂಚು ಹಾಕಿ ಗಾಡಿ ಹಿಡಿಯುವುದಿಲ್ಲ
ನೋಡಿಯೂ ನೋಡದಂತೆ
ಉದಾಸೀನ ಮಾಡುತ್ತಾನೆ
ಬಹುಶಃ ಆತನಿಗೂ ಬೇಗ
ಮನೆಗೆ ಹೋಗಲಿಕ್ಕಿದೆ
ಹಬ್ಬದ ಹಿಂದು ಮುಂದಿನ ದಿನ
ಟೈಲರು ಹೇಳಿದ ದಿನಕ್ಕೆ ಬಟ್ಟೆ ಕೊಟ್ಟರೆ ಕೆಟ್ಟಾಣೆ
ಸುಮ್ಮನೆ ಸತಾಯಿಸುತ್ತಾನೆ
ಗುಂಡಿ ಹಾಕಲಿಕ್ಕಿದೆ, ಇಸ್ತ್ರಿ ಮಾಡಲಿಕ್ಕಿದೆ
ಇನ್ನೇನೋ ಮತ್ತೇನೋ ಹೇಳಿ
ಒಳಗೊಳಗೆ ಲೆಕ್ಕ ಹಾಕುತ್ತಾನೆ
ಈ ಸಲ ಎಷ್ಟಾಗಬಹುದು ಕಲೆಕ್ಷನ್ನು ?
ಹಬ್ಬದ ಹಿಂದು ಮುಂದಿನ ದಿನ
ಕಂಪನಿಯ ಮಾಲೀಕ
ಲೆಕ್ಕ ಹಾಕುತ್ತಾನೆ
ನೌಕರರಿಗೆ ಕೋಡಬೇಕಾದ
ಪೇಡದ ಡಬ್ಬಿಯ ಖರ್ಚು
ಹಬ್ಬದ ಹಿಂದು ಮುಂದಿನ ದಿನ
ತಾಯಿಗೆ ಖಾತ್ರಿ ಇದೆ
ನನ್ನ ಜನ್ಮಕ್ಕಂಟಿದ ಕಂಟಕ ಮಗ
ಇವತ್ತು ಕುಡಿದು ಬರುವುದಿಲ್ಲ
ಹಬ್ಬದ ಹಿಂದು ಮುಂದಿನ ದಿನ
ನೆನಪಾಗುತ್ತದೆ ಅಮ್ಮ ಹೊರಟು ಹೋದದ್ದು
ಕಳೆದ ವರ್ಷ ಈ ಹೊತ್ತಿಗೇ ಅಲ್ಲವೆ
ಅವಳಿಗೆ ಕಾಯಿಲೆ ಶುರುವಾದದ್ದು ?
ಹಬ್ಬದ ಹಿಂದು ಮುಂದಿನ
ಅನಿಸುತ್ತದೆ ನನಗೆ ವಯಸ್ಸಾಯಿತು
ಆಗೆಲ್ಲ ಕೂಡು ಮನೆಯ ಮಂದಿಗೆಲ್ಲ
ಹೋಳಿಗೆ ಮಾಡಿ ತಿನ್ನಿಸುತ್ತಿದ್ದವಳು
ಈಗ ಖೀರು ಮಾಡುವಷ್ಟರಲ್ಲಿ ಸುಸ್ತಾಗುತ್ತಿದೆ
ಹಬ್ಬದ ಹಿಂದು ಮುಂದಿನ ದಿನ
ಅರಿವಾಗುತ್ತದೆ ಸಂಸಾರ ಬೆಳೆದದ್ದು
ಈ ಹಬ್ಬಕೆ ಅಳಿಯ ಬರಲಿದ್ದಾರೆ
ಒಂದೆರಡು ಸ್ವೀಟು ಜಾಸ್ತಿಯೇ ಮಾಡಬೇಕು
ಹಬ್ಬದ ಹಿಂದು ಮುಂದಿನ ದಿನ
ಅನಿಸುತ್ತದೆ ಮಕ್ಕಳು ದೊಡ್ಡವರಾದರು
ಇಂಥ ದಿನವೆಲ್ಲ ಬಣ್ಣದ ಬಟ್ಟೆಯುಟ್ಟು
ಕೈಯಲ್ಲಿ ಕಾಲಲ್ಲಿ ಟುಪು ಟುಪು
ಓಡಾಡುತ್ತಿದ್ದ ಮಕ್ಕಳು
ಈಗ ದೂರದ ಊರಿನಲ್ಲಿ
ದೊಡ್ಡ ಕೋರ್ಸು ಓದುತ್ತಿದ್ದಾರೆ
ಹಬ್ಬದ ಹಿಂದು ಮುಂದಿನ
ಗೊತ್ತಾಗುತ್ತದೆ ಕಳೆದದ್ದು ಗಳಿಸಿದ್ದು
ಹಿಂದಿನ ಹಬ್ಬಕ್ಕೆ ಪೂಜೆಗಿದ್ದ ಟ್ರ್ಯಾಕ್ಟರ್
ಮಾರಿಬಿಟ್ಟಿದ್ದೇವೆ ಆರು ತಿಂಗಳ ಹಿಂದೆ
ಹೀಗೆ ಬದುಕುತ್ತಿರುತ್ತೇವೆ ನಾವು
ದಿನದಿಂದ ದಿನಕ್ಕೆ, ಹಾಗೆಯೆ
ಹಬ್ಬದಿಂದ ಹಬ್ಬಕ್ಕೆ.






0 Comments