ಅನನ್ಯತೆ, ಅಸಹನೆ ಮತ್ತು ಅಧಿಕಾರ

ಸಿ. ಎನ್. ರಾಮಚಂದ್ರನ್
ಇತ್ತೀಚೆಗೆ ಉತ್ತರಪ್ರದೇಶದ ದಾದ್ರಿ ಗ್ರಾಮದಲ್ಲಿ ನಡೆದ ಮುಹಮ್ಮದ್ ಇಖ್ಲಾಕ್ನ ಭೀಕರ ಕೊಲೆಯನ್ನು ಇದೊಂದು ಆಕಸ್ಮಿಕ ಬಿಡಿ ಘಟನೆಯೆಂದು ನಾವು ಗ್ರಹಿಸಿದರೆ, ಇಂತಹ ಅಥವಾ ಇದಕ್ಕಿಂತ ಘೋರವಾದ ಅಪರಾಧಗಳು ನಡೆಯುತ್ತಲೇ ಇರುತ್ತವೆ. ದಾದ್ರಿ ಘಟನೆ ಖಂಡಿತವಾಗಿಯೂ ಒಂದು ಬಿಡಿ ಘಟನೆಯಲ್ಲ.
ಇದರ ಹಿಂದೆ ಹರಿದ್ವಾರದ ಸಮೀಪವಿರುವ ಪೀರನ್ ಕಲಿಯಾರ್ ಘಟನೆಯಿದೆ. ಅಲ್ಲಿ, ಕಳೆದ ತಿಂಗಳು (25/ 9/15), ಒಂದು ಗೆಸ್ಟ್ಹೌಸ್ನಲ್ಲಿ ತಂಗಿದ್ದ ಯುವ ದಂಪತಿಗಳನ್ನು ಹೊರಗೆಳೆದು, ‘ಹರಿದ್ವಾರದಂತಹ ಪುಣ್ಯಕ್ಷೇತ್ರವನ್ನು ಇವರು ಅಪವಿತ್ರಗೊಳಿಸುತ್ತಿದ್ದಾರೆ’ ಎಂದು ಆಪಾದಿಸಿ, ಅವರನ್ನು ನಿರ್ದಯೆಯಿಂದ ಥಳಿಸಿ, ಅವಮಾನಗೊಳಿಸಿದ ಘಟನೆಯಿದೆ. ಈ ಘಟನೆಯ ಹಿಂದೆ, ‘ನೀವು ಟಿಪು ಪಾತ್ರವನ್ನು ಸಿನಿಮಾದಲ್ಲಿ ವಹಿಸಬಾರದು’ ಎಂದು ಪ್ರಸಿದ್ಧ ನಟ ರಜನೀಕಾಂತ್ ಅವರನ್ನು ಆಗ್ರಹಿಸುತ್ತಿರುವ ಸಂಗತಿಯಿದೆ; ಇದರ ಹಿಂದೆ, ಮಹಾರಾಷ್ಟ್ರದಲ್ಲಿ ಎರಡು ವರ್ಷಗಳ ಹಿಂದೆ ನಡೆದ ದಾಭೋಳ್ಕರ್-ಪನ್ಸಾರೆ ಮತ್ತು ಇತ್ತೀಚೆಗೆ ಧಾರವಾಡದಲ್ಲಿ ನಡೆದ ಕಲಬುರ್ಗಿ ಇವರುಗಳ ಹತ್ಯೆಗಳಿವೆ; ಇವುಗಳ ಹಿಂದೆ ಕರ್ನಾಟಕದ ಕರಾವಳಿಯಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಸ್ಟೇ ಹೋಮ್ ಪ್ರಕರಣವಿದೆ;

ಇಂತಹ ದುರ್ಘಟನೆಗಳಿಗಿಂತ, ಪ್ರಭುತ್ವದಲ್ಲಿರುವವರು ಅವುಗಳನ್ನು ನೋಡುವ ಧೋರಣೆ ಅಥವಾ ನಿಲುವು ಇನ್ನೂ ಹೆಚ್ಚು ಭೀತಿಯನ್ನುಂಟುಮಾಡುತ್ತದೆ. ದಾದ್ರಿ ಹತ್ಯೆಯನ್ನು (ಪತ್ರಿಕೆಗಳಲ್ಲಿ ವರದಿಯಾದಂತೆ) ‘ಇದು ತಪ್ಪು ಗ್ರಹಿಕೆಯಿಂದಾದ ಒಂದು ಆಕಸ್ಮಿಕ’ (”It is an incident caused by misunderstanding” ) ಎಂದು ಕೇಂದ್ರದ ಉಪಮಂತ್ರಿಯೊಬ್ಬರು ವಿವರಿಸಿದರೆ, ‘ಇದೊಂದು ದುರದೃಷ್ಟಕರ ಘಟನೆ; ಇದಕ್ಕೆ ರಾಜಕೀಯ ಲೇಪ ಬೇಡ’ (”It is an unfortunate incident; don’t politicize it”) ಎಂದು ಕೇಂದ್ರ ಗೃಹಮಂತ್ರಿಗಳು ಪ್ರತಿಕ್ರಿಯಿಸುತ್ತಾರೆ. ಹರಿದ್ವಾರದ ಬಳಿ ನಡೆದ ಘಟನೆಯನ್ನು ‘ಹರಿದ್ವಾರದ ಪಾವಿತ್ರ್ಯವನ್ನು ಯಾರೂ ಭ್ರಷ್ಟಗೊಳಿಸಲು ನಾವು ಬಿಡುವುದಿಲ್ಲ’ (‘we will not allow anybody to corrupt the purity of Haridwar’) ಎಂದು ಆಕ್ರಮಣಕಾರರು ಸಮರ್ಥಿಸಿಕೊಳ್ಳುತ್ತಾರೆ. ಮುಂಬಯಿಯ ಬೀಚಿನ ಬಳಿ ಕುಳಿತಿದ್ದ ಯುವಪ್ರೇಮಿಗಳನ್ನು ಬಂಧಿಸಿದ ಬಳಿಕ, ಮುಂಬಯಿಯ ಪೋಲೀಸ್ ಕಮೀಶನರ್ ಅವರು ‘ನಾವು ನೈತಿಕ ಪೋಲೀಸ್ಗಿರಿಯನ್ನು ಮಾಡುತ್ತಿರುವುದು ಸಮಾಜದ ಒಳಿತಿಗಾಗಿ’ (‘If we are doing moral policing, it is for the betterment of society’) ಎಂದು ಅಭಿಮಾನದಿಂದ ಸಾರ್ವಜನಿಕ ಹೇಳಿಕೆ ಕೊಡುತ್ತಾರೆ.
ಕಲಬುರ್ಗಿಯವರ ದಾರುಣ ಕೊಲೆ ನಡೆದ ದಿನ, ಆ ಸುದ್ದಿ ಎನ್ ಡಿ ಟಿ ವಿ ನ್ಯೂಸ್ ತಾಣದಲ್ಲಿ ಪ್ರಕಟವಾದ ಅರ್ಧ ಘಂಟೆಯೊಳಗೆ (ಸುಮಾರು 12.30 ಘಂಟೆಗೆ) ಆ ಸುದ್ದಿಯ ಕೆಳಗೆ ಮೂರು ಪ್ರತಿಕ್ರಿಯೆಗಳಿದ್ದುವು; ಮತ್ತು ಮೂರೂ ಆ ಹತ್ಯೆಯನ್ನು ಸಮರ್ಥಿಸುತ್ತ, ಅವರನಂತರದ ಸರದಿ ಯಾರದು ಎಂಬುದನ್ನೂ ದಾಖಲಿಸಿದ್ದುವು.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಡೆದ, ನಡೆಯುತ್ತಿರುವ ಇಂತಹ ನೂರಾರು ಘಟನೆಗಳ ಮತ್ತು ಅವುಗಳ ಬಗ್ಗೆ ಇರುವ ನಿಲುವುಗಳ ಆಳದಲ್ಲಿ ರಾಜಕೀಯ-ಸಾಂಸ್ಕೃತಿಕ ಅಧಿಕಾರಕ್ಕಾಗಿ ಭಿನ್ನ ಸಮುದಾಯಗಳು ಕಟ್ಟಿಕೊಳ್ಳುತ್ತಿರುವ ‘ಅನನ್ಯತೆ’ಯ (identity) ಒತ್ತಡಗಳಿವೆ.
ಸ್ವಾತಂತ್ರ್ಯಪೂರ್ವ ಕಾಲದ ರಾಜಮನೆತನಗಳಾಗಲಿ, ಸ್ವಾತಂತ್ರ್ಯೋತ್ತರ ಕಾಲದ ಸಮುದಾಯಗಳಾಗಲಿ, ಅಧಿಕಾರಕ್ಕಾಗಿ ‘ತಾವು ಇತರರಿಗಿಂತ ಭಿನ್ನ’ ಎಂಬಂತಹ ಅನನ್ಯತೆಯನ್ನು ರಾಜಕೀಯ, ಧಾರ್ಮಿಕ, ಸಾಮಾಜಿಕ, ಇತ್ಯಾದಿ ಅನೇಕ ನೆಲೆಗಳಲ್ಲಿ ಕಟ್ಟಿಕೊಳ್ಳಬೇಕಾಗುತ್ತದೆ. ಅನನ್ಯತೆಯ ವ್ಯಂಗ್ಯವೆಂದರೆ ‘ಅನ್ಯ’ರಿಲ್ಲದೆ ‘ಅನನ್ಯತೆ’ಯಿಲ್ಲ. ಪರಿಣಾಮತಃ, ಗಾಢ ಅನನ್ಯತೆಗಾಗಿ ಅನೇಕಾನೇಕ ‘ಅನ್ಯ’ರನ್ನು ಸೃಷ್ಟಿಸುತ್ತಾ ಹೋಗಬೇಕಾಗುತ್ತದೆ; ಅಂತಹವರು-ಅಂತಹ ಸಂಗತಿಗಳು ಎಂದೂ ‘ಅನ್ಯ’ರಾಗಿದ್ದರೆಂದು ದಾಖಲಿಸಲು ಒಂದು ಕಲ್ಪಿತ ಗತವನ್ನು ಪುನನರ್ಿಮರ್ಿಸ- ಬೇಕಾಗುತ್ತದೆ. ಇಂದು ನಡೆಯುತ್ತಿರುವುದು ಇದೇ ಪ್ರಕ್ರಿಯೆಯ ತಲ್ಲಣಗಳು.
ಈ ತಲ್ಲಣಗಳನ್ನು ವಿವರಿಸಬೇಕಾದರೆ: ರಾಜಕೀಯ ನೆಲೆಯಲ್ಲಿ: ರಾಷ್ಟ್ರೀಯತೆ ಮತ್ತು ರಾಷ್ಟ್ರವು ಪ್ರಬಲವಾಗಿರಬೇಕು ಎಂಬ ಪರಿಕಲ್ಪನೆಯ ಪರಿಣಾಮವಾಗಿ ‘ಕೇಂದ್ರ’ವು ಪ್ರಬಲವಾಗಿ, ಪ್ರಾಂತ್ಯಗಳು ‘ಅನ್ಯ’ವಾಗುತ್ತವೆ; ‘ವಿಕೇಂದ್ರೀಕರಣ’ ತಿರಸ್ಕರಿಸಲ್ಪಡುತ್ತದೆ. ರಾಷ್ಟ್ರಕ್ಕೊಂದು ರಾಷ್ಟ್ರಭಾಷೆಯಿರಬೇಕು ಎಂಬ ಪರಿಕಲ್ಪನೆಯ ಪರಿಣಾಮವಾಗಿ ಹಿಂದಿ ಪ್ರಭುತ್ವದಡಿ ಇಂಗ್ಲೀಷ್ ಹಾಗೂ ಇತರ ಬೆಂಗಾಲಿ-ಮರಾಠಿ-ತಮಿಳು-ಕನ್ನಡ ಇತ್ಯಾದಿ ಭಾಷೆಗಳು ಅನ್ಯವಾಗುತ್ತವೆ; ಅವು ಹಿಂದುಳಿಯುತ್ತವೆ. ಆಯ್ದ ಕೆಲವು ‘ರಾಷ್ಟ್ರನಾಯಕ’ರ ವಿಗ್ರಹಗಳು ಕಡೆಯಲ್ಪಟ್ಟು ಅವರು ಪ್ರಶ್ನಾತೀತರಾಗುತ್ತಾರೆ. ಧಾರ್ಮಿಕ ನೆಲೆಯಲ್ಲಿ: ಭಾರತದಂತಹ ಬಹು ಧರ್ಮೀಯ ರಾಷ್ಟ್ರದಲ್ಲಿ ಎಲ್ಲಾ ಧರ್ಮ-ಪಂಥಗಳೂ ಇತರ ಧರ್ಮ-ಪಂಥಗಳನ್ನು ‘ಅನ್ಯ’ವಾಗಿಸುತ್ತವೆ; ಸ್ವಧರ್ಮ ರಕ್ಷಣೆಯ ನೆಪದಲ್ಲಿ ಆಕ್ರಾಮಕವಾಗುತ್ತವೆ. ಧರ್ಮರಕ್ಷಣೆಯ ಸಂಪೂರ್ಣ ಭಾರ ಭಾರತೀಯ ನಾರಿಯ ಮೇಲೆ ಬಿದ್ದು, ಅವಳು ಪುರುಷಕೇಂದ್ರಿತ ವ್ಯವಸ್ಥೆಯಲ್ಲಿ ‘ಅನ್ಯ’ಳಾಗುತ್ತಾಳೆ; ಅವಳ ಉಡುಗೆ-ತೊಡುಗೆ, ವೃತ್ತಿ-ವರ್ತನೆ, ಇತ್ಯಾದಿ ಎಲ್ಲವೂ ನಿರ್ಬಂಧಿಸಲ್ಪಡುತ್ತವೆ. ಸಾಂಸ್ಕೃತಿಕ-ಸಾಹಿತ್ಯಕ ನೆಲೆಯಲ್ಲಿ: ವಿಧಮರ್ಿಗಳಿಲ್ಲದ, ಪವಿತ್ರ ಸಮಾಜವಿದ್ದ ‘ಗತ’ದ ‘ದೇಶೀ’ ಚರಿತ್ರೆ ಕಟ್ಟಲ್ಪಡುತ್ತದೆ.
ಪ್ರಾಚೀನ ವಾಙ್ಮಯದ ಮರು ಓದು ವ್ಯಾಪಕವಾಗಿ, ರಾಮಾಯಣ-ಮಹಾಭಾರತದಂತಹ ಶ್ರೇಷ್ಠ ಸಾಹಿತ್ಯಕೃತಿಗಳು ‘ಅಧಿಕೃತ ವೈಜ್ಞಾನಿಕ ದಾಖಲೆ’ಗಳಾಗುತ್ತವೆ; ಅಣುಸ್ಫೋಟದ ಹಾಗೂ ಸ್ಟೆಮ್ ಸೆಲ್ ಪ್ರಯೋಗಗಳ ಸಾಕ್ಷಿಗಳಾಗುತ್ತವೆ. ಒಟ್ಟಾರೆಯಾಗಿ, ಭಾರತವೆಂಬ ‘ರಾಷ್ಟ್ರಗಳ ರಾಷ್ಟ್ರ’ ಬಹುತ್ವದಿಂದ ಏಕತ್ವದೆಡೆಗೆ, ವರ್ತಮಾನದಿಂದ ಪ್ರಾಚೀನತೆಯ ಕಡೆಗೆ, ಪ್ರಜಾಪ್ರಭುತ್ವದಿಂದ ನಿರಂಕುಷ ಪ್ರಭುತ್ವದೆಡೆಗೆ ಚಲಿಸುತ್ತದೆ.
ಈ ಸಂದರ್ಭದಲ್ಲಿ, ಮುಂಬಯಿ ಹೈಕೋರ್ಟ್ ನ ಚೀಫ್ ಜಸ್ಟಿಸ್ ಆಗಿದ್ದಾಗ ಜಸ್ಟಿಸ್ ಸಾಲ್ಡಾನಾ ಅವರು ನೀಡಿದ ಒಂದು ಚಾರಿತ್ರಿಕ ತೀರ್ಪು ತುಂಬಾ ಪ್ರಸ್ತುತವಾಗುತ್ತದೆ. ಅವರ ಮುಂದೆ ಜಾಮೀನು ಕೋರಿ ಬಂದಿದ್ದ ಪ್ರಕರಣದ ವಿವರಗಳು ಹೀಗಿವೆ. ಇಪ್ಪತ್ತೊಂದು ವರ್ಷದ, ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ. ವಿದ್ಯಾರ್ಥಿನಿಯಾಗಿದ್ದ, ನ್ಯಾನ್ಸಿ ಅಡಾಜಾನಿಯಾ ಬರೆದಿದ್ದ ‘ಪುರಾಣ ಮತ್ತು ಮಹಾಪುರಾಣ’ (Nancy Adajania, “Myth and Super Myth”) ಎಂಬ ಸಂಶೋಧನಾತ್ಮಕ ಲೇಖನವನ್ನು ಆಗ ರಾಷ್ಟ್ರೀಯ ನೆಲೆಯಲ್ಲಿ ಪ್ರಖ್ಯಾತವಾಗಿದ್ದ ಇಲಸ್ಟ್ರೇಟಿಡ್ ವೀಕ್ಲಿ ಆಫ್ ಇಂಡಿಯಾ ತನ್ನ ಏಪ್ರಿಲ್ 10-16, 1993 ಸಂಚಿಕೆಯಲ್ಲಿ ಪ್ರಕಟಿಸಿತು.
ಈ ಲೇಖನದಲ್ಲಿ ಅಡಾಜಾನಿಯಾ ಮಂಡಿಸುವ ಸ್ವೋಪಜ್ಞ ವಾದವನ್ನು ಹೀಗೆ ಸಂಗ್ರಹಿಸಬಹುದು: ‘ವಸಾಹತುಶಾಹಿಯಿಂದ ಬಿಡುಗಡೆ ಪಡೆದ ನೂತನ ರಾಷ್ಟ್ರಗಳ ಮೇಲೆ ಪ್ರಾರಂಭದಲ್ಲಿ ತಮ್ಮದೇ ಆದ ಒಂದು ಹೊಸ ಇತಿಹಾಸವನ್ನು ಕಟ್ಟಿಕೊಳ್ಳುವ ಒತ್ತಡವಿರುತ್ತದೆ. ಕಾರಣ, ದಾಸ್ಯದ ತಮ್ಮ ಗತ ಇತಿಹಾಸವನ್ನು ಅವುಗಳು ಒಪ್ಪಿಕೊಳ್ಳುವ ಮನಃಸ್ಥಿತಿಯಲ್ಲಿರುವುದಿಲ್ಲ. ಪರಿಣಾಮತಃ, ರಾಷ್ಟ್ರೀಯತೆಯ ಚೌಕಟ್ಟಿನಲ್ಲಿ, ಅಂತಹ ನೂತನ ರಾಷ್ಟ್ರಗಳು ತಮ್ಮ ಗತ ಚರಿತ್ರೆಯನ್ನು ಪುನರ್ರಚಿಸುವಾಗ ಗತಕಾಲದ ರಾಜಕೀಯ-ಸಾಂಸ್ಕೃತಿಕ ನಾಯಕರನ್ನು ಅವರ ವಿಶಿಷ್ಟ ಕಾಲ-ದೇಶ ಬದ್ಧ ಸಂದರ್ಭಗಳಿಂದ ಬೇರ್ಪಡಿಸಿ, ಅವರನ್ನು ಅತಿಮಾನವರಂತೆ, ಇಡೀ ರಾಷ್ಟ್ರದ ‘ಮಾದರಿ’ಗಳಂತೆ ಚಿತ್ರಿಸುತ್ತವೆ. ಇಂತಹ ಮಾದರಿಗಳು ತಮ್ಮ ವಿಶಿಷ್ಟ ಚಾರಿತ್ರಿಕ ಸಂದರ್ಭಗಳಿಂದ ಬೇರ್ಪಟ್ಟಿರುವುದರಿಂದ ಅರ್ಥಹೀನರಾಗಿ ಕೇವಲ ಪುರಾಣಪುರುಷರಾಗುತ್ತಾರೆ.’ ತಮ್ಮ ವಾದದ ಸಮರ್ಥನೆಗಾಗಿ ಲೇಖಕಿ ಶಿವಾಜಿ, ಝಾನ್ಸಿರಾಣಿ ಲಕ್ಷ್ಮೀಬಾಯಿ, ರಾಜ ಗಂಗಾಧರರಾವ್, ಇವರುಗಳ ನಿಜ / ಕಲ್ಪಿತ / ಆರೋಪಿತ ವ್ಯಕ್ತಿತ್ವಗಳನ್ನು ವಿಶ್ಲೇಷಿಸುತ್ತಾರೆ; ಇವರಾರೂ ಅತಿಮಾನವರಲ್ಲ, ಇವರೆಲ್ಲರಿಗೂ ಮಾನವಸಹಜ ಮಿತಿ-ದೌರ್ಬಲ್ಯಗಳಿದ್ದುವು ಎಂದು ವಾದಿಸುತ್ತಾರೆ.
ಇಂತಹ ಅಕಡೆಮಿಕ್ ವಾದ ಇಡೀ ಮಹಾರಾಷ್ಟ್ರವನ್ನು ಹೇಗೆ ತಲ್ಲಣಗೊಳಿಸಿತು ಎಂದು ಈಗ ನೆನಪಿಸಿಕೊಂಡಾಗ ಆಶ್ಚರ್ಯವಾಗುತ್ತದೆ, ಭಯವಾಗುತ್ತದೆ. ಎಲ್ಲೆಡೆಯೂ ಆ ವೀಕ್ಲಿ ಯ ಸಂಚಿಕೆ ಸುಡಲ್ಪಟ್ಟು, ಪ್ರಕಾಶಕ, ಸಂಪಾದಕ ಮತ್ತು ಲೇಖಕಿ ಇವರನ್ನು ಕೂಡಲೇ ಬಂಧಿಸಬೇಕೆಂಬ ಕೂಗೆದ್ದಿತು. ಆಗ ಅಸೆಂಬ್ಲಿ ನಡೆಯುತ್ತಿದ್ದುದರಿಂದ, ಎಲ್ಲಾ ಸದಸ್ಯರೂ ಪಕ್ಷಾತೀತವಾಗಿ ಈ ಲೇಖನವನ್ನು ಹಾಗೂ ಅದನ್ನು ಬರೆದ ಲೇಖಕಿಯನ್ನು ಖಂಡಿಸಿದರು. ಆಗ ಮುಖ್ಯ ಮಂತ್ರಿಯಾಗಿದ್ದ ಶರದ್ ಪವಾರ್ ಅವರೂ ‘ಈ ಲೇಖನ ಸಮಾಜದಲ್ಲಿ ಒಡಕನ್ನುಂಟುಮಾಡುತ್ತದೆ’ ಎಂದು ಒಪ್ಪಿಕೊಂಡರು. ಐ ಪಿ ಸಿ ಸೆಕ್ಷನ್ 153 ಎ ಮತ್ತು 153 ಬಿ ಇವುಗಳಡಿ ಅವರೆಲ್ಲರ ವಿರುದ್ಧ ಮೊಕದ್ದಮೆ ಹೂಡಲಾಯಿತು. ಪ್ರಕಾಶಕರು ಮತ್ತು ಸಂಪಾದಕರು ಸಾರ್ವಜನಿಕ ಕ್ಷಮೆ ಬೇಡಿ ಆ ಸಂಚಿಕೆಯ ಎಲ್ಲಾ ಪ್ರತಿಗಳನ್ನೂ ಹಿಂಪಡೆದರು. ಲೇಖಕಿಯನ್ನು ಬಂಧಿಸಲಾಯಿತು.
ಅಡಾಜಾನಿಯಾಳ ಜಾಮೀನು ಅರ್ಜಿಯ ವಿಚಾರಣೆ ಹೈಕೋರ್ಟ್ ನ ಮುಂದೆ ಬಂದಾಗ ಸರಕಾರಿ ವಕೀಲರು ಯಾವ ಕಾರಣಕ್ಕೂ ಜಾಮೀನು ನೀಡಬಾರದೆಂದು ಉಗ್ರವಾಗಿ ವಾದಿಸಿದರು. ಏಪ್ರಿಲ್ 23, 1993ರಂದು ಜಸ್ಟಿಸ್ ಎಂ. ಸಾಲ್ಡಾನಾ ಹೀಗೆ ತೀರ್ಪಿತ್ತರು. ತಪ್ಪುದಾರಿಯಲ್ಲಿ, ತಪ್ಪು ನಿರ್ದೇಶನದಂತೆ ನಡೆದಿರುವ ಈ ಪ್ರಕರಣವು ಹೇಗೆ ತುಂಬಾ ಖೇದಕರ ಎಂದು ಹೇಳುತ್ತಾ, ವಿಶ್ವಾಸಾರ್ಹ ಗ್ರಂಥಗಳನ್ನು ಆಧರಿಸಿರುವ ಇದೊಂದು ಶ್ರೇಷ್ಠ ಸಂಶೋಧನಾ ಲೇಖನವೆಂದು ಮಾನ್ಯಮಾಡಿ, ಸರಕಾರಿ ವಕೀಲರು ಮಂಡಿಸಿದ ವಾದದ ಎಲ್ಲಾ ಅಂಶಗಳನ್ನೂ ಒಂದೊಂದಾಗಿ ತಿರಸ್ಕರಿಸಿದರು. ‘ಈ ಲೇಖನದಲ್ಲಿ ಸೆಕ್ಷನ್ 153 ಎ ಅಡಿಯಲ್ಲಿ ಶಿಕ್ಷಾರ್ಹವೆನಿಸುವ ಯಾವುದೂ ನನಗೆ ಕಾಣುವುದಿಲ್ಲ’ ಎಂದು ಹೇಳುತ್ತಾ ಲೇಖಕಿಗೆ ಜಾಮೀನು ಮಂಜೂರು ಮಾಡಿದರು. ತಮ್ಮ ತೀರ್ಪಿನ ಒಂದು ಭಾಗದಲ್ಲಿ ಅವರು ಟಾಗೋರರ ‘Where the mind is without fear . . . . . .’ ಎಂಬ ಪ್ರಸಿದ್ಧ ಕವನವನ್ನು ಉಲ್ಲೇಖಿಸಿ, ಲೇಖಕರು ಮತ್ತು ಪತ್ರಕರ್ತರು ಇವರುಗಳ ಮೇಲೆ ಇಂತಹ ಮೊಕದ್ದಮೆ ಹೂಡುವಾಗ ತುಂಬಾ ಎಚ್ಚರಿಕೆ ವಹಿಸಬೇಕೆಂದು ಹೇಳುತ್ತಾ, ಹೀಗೆ ಘೋಷಿಸಿದರು: ಸಂವಿಧಾನವು ಪ್ರಜೆಗಳಿಗೆ ಕೊಟ್ಟಿರುವ ಭರವಸೆಗಳು ಈಡೇರಬೇಕಾದರೆ ಮತ್ತು ಕತ್ತಲೆಯ ಯುಗದ ವಿಚಾರಗಳು ಗಡಿಯಾರವನ್ನು ಹಿಂತಿರುಗಿಸುವುದಕ್ಕೆ ಅವಕಾಶ ಕೊಡದೇ ಇರಬೇಕಾದರೆ, ಇಂತಹ ಎಚ್ಚರಿಕೆ ಅಗತ್ಯ (”This is very necessary if constitutional guarantees are to be safeguarded and concepts that held good in the dark ages are not to be allowed to turn the clock backwards”).
ಸೌಜನ್ಯ : ಕನ್ನಡಪ್ರಭ





0 Comments