ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಾದಾಪೀರ್ ಅನುವಾದಿಸಿದ ಸಂಪೂರ್ಣ ಚಟರ್ಜಿ ಕವಿತೆಗಳು

ಇಂಗ್ಲಿಷ್ ಮೂಲ: ಸಂಪೂರ್ಣ ಚಟರ್ಜಿ 

ಕನ್ನಡಕ್ಕೆ: ದಾದಾಪೀರ್ ಜೈಮನ್

ಸಂಪೂರ್ಣ ಚಟರ್ಜಿ

ಸಂಪೂರ್ಣ ಚಟರ್ಜಿ ಅವರು ಬರಹಗಾರ್ತಿ, ಅನುವಾದಕಿ, ಸಂಪಾದಕಿ ಮತ್ತು ಅಧ್ಯಾಪಕಿ. ಅವರ ಸಾಹಿತ್ಯಾಭ್ಯಾಸವು ಕಾವ್ಯ, ಕಾದಂಬರಿ, ಸಣ್ಣ ಕಥೆ, ಅನುವಾದ ಮತ್ತು ಸಾಹಿತ್ಯಿಕ ಸಂಯೋಜನೆಗಳನ್ನು ಒಳಗೊಂಡಿದೆ. 21 ಪ್ರಕಟಣೆಗಳಲ್ಲಿ ಹನ್ನೊಂದು ಕವನ ಸಂಗ್ರಹಗಳಾಗಿವೆ; ಅವುಗಳಲ್ಲಿ Unmappable Moves (2023) ಮತ್ತು Space Gulliver (2015/2020) ಪ್ರಮುಖವು. Dirty Love (2013) ಮುಂಬೈ ನಗರವನ್ನು ಅನ್ವೇಷಿಸುತ್ತದೆ. RuptureLand of the Well ಮತ್ತು Ella ಕಾದಂಬರಿಗಳು ಅವರ ನಿರೂಪಣಾ ವ್ಯಾಪ್ತಿಯನ್ನು ವಿಸ್ತರಿಸುತ್ತವೆ. ಅವರು ಪ್ರಮುಖ ಸಾಹಿತ್ಯ ಸಂಕಲನಗಳನ್ನು ಸಂಪಾದಿಸಿದ್ದು, ಸುಕುಮಾರ್ ರೇ ಮತ್ತು ಜಾಯ್ ಗೋಸ್ವಾಮಿ ಅವರ ಅನುವಾದಗಳಿಗೆ ವಿಶೇಷ ಪ್ರಶಂಸೆ ಪಡೆದಿದ್ದಾರೆ.

[ಈ ಕವಿತೆಗಳನ್ನು ‘ನಿರ್ದಿಗಂತ’ದಲ್ಲಿ ನಡೆದ ಕಾವ್ಯ ಸಂಜೆ ಅಂತಾರಾಷ್ಟ್ರೀಯ ಕಾವ್ಯಾನುವಾದ ಕಾರ್ಯಾಗಾರದಲ್ಲಿ ಅನುವಾದಿಸಲಾಗಿದೆ. ಮೂಲಕವಿಗಳು ಸಹ ಕಾರ್ಯಾಗಾರದಲ್ಲಿ ಇದ್ದದ್ದು ಅನುವಾದದ ತೊಡಕುಗಳನ್ನು ಸೃಜನಶೀಲವಾಗಿ ಪರಿಹರಿಸಲು ಮತ್ತು ಸವಾಲುಗಳನ್ನು ಎದುರಿಸಲು ಮತ್ತು ಮೂಲ ಪಠ್ಯ ಹಾಗೂ ಕನ್ನಡ ನುಡಿಸಂಸ್ಕೃತಿ ಮುಖಾಮುಖಿಯಾಗುವ ಸಂತಸವನ್ನು, ಕಾವ್ಯಾನುವಾದದ ಸೂಕ್ಷ್ಮಗಳನ್ನು ಅರಿಯಲು ಸಹಾಯ ಮಾಡಿದೆ]

ಕ್ಷಮೆ

*

ಬಸವನಹುಳುವಿಗೆ ನಾನು ಕ್ಷಮೆ ಕೇಳುತ್ತೇನೆ.

ಲೋಕದ ಎಲ್ಲಾ ಸಮಯವನ್ನೂ ಫಿಬೊನಾಚಿ ಆಕಾರದ ನಿನ್ನ 

ಚಿಪ್ಪಿನೊಳಗೆ ಮಡಚಿಕೊಂಡು ರಸ್ತೆ ದಾಟುತ್ತಿದ್ದ ನಿನ್ನನ್ನು

ನಿಂತು ನೋಡುವುದಕ್ಕೂ ನಾನೊಂದು ಕ್ಷಣ ನಿಲ್ಲದಿದ್ದಕ್ಕಾಗಿ… 

ಎರೆಹುಳುವಿಗೆ ನಾನು ಕ್ಷಮೆ ಕೇಳುತ್ತೇನೆ.

ಸೈಕಲ್ ಓಡಿಸೋ ಜಾಗದಲ್ಲಿ ವಾಕಿಂಗ್ ಮಾಡುವವರೇ ತುಂಬಿಹೋಗಿ 

ತಪ್ಪು ದಿಕ್ಕಿಗೆ ಹೊರಟವರ ಕಾಲಡಿ ನಿಮ್ಮನ್ನು ಲಕ್ಷ ಲಕ್ಷ ತುಂಡುಗಳಾಗಿ ಕತ್ತರಿಸಿದ್ದಕ್ಕಾಗಿ.

ಮುದ್ದೆಕೋಲಿಗೆ ನಾನು ಕ್ಷಮೆ ಕೇಳುತ್ತೇನೆ.

ವಿದ್ಯಾರ್ಥಿಗಳಿಲ್ಲದೆ ಮುಚ್ಚಿ ಹೋದ ದಾರಿಯಲ್ಲಿ ಹಾರಾಟದಿಂದ ಅನಂತಕ್ಕೆ 

ಬಯಲಾಗಿ ಹೋದ ನಿನ್ನ ನೋಡಿ ಸಂತಾಪ ಸೂಚಿಸಲು ಯಾರೂ ಇರದಿದ್ದಕ್ಕಾಗಿ 

ಹಲ್ಲಿಗೆ ನಾನು ಕ್ಷಮೆ ಕೇಳುತ್ತೇನೆ.

ಸ್ನಾನದ ಕೋಣೆಯ ನೆಲದ ಮೇಲೆ ಅಮ್ಮ ಕಂಡದ್ದು ನಿನ್ನನ್ನೇ ತಾನೇ 

ಜಿರಳೆಗಳನ್ನು ಕೊಲ್ಲಲಿಟ್ಟ ಮಿಶ್ರಣದ ಗಾಳಿಕಣಗಳಿಂದ ಅಚೇತನಗೊಂಡದ್ದಕ್ಕಾಗಿ   

ಇರುವೆಗೆ ನಾನು ಕ್ಷಮೆ ಕೇಳುತ್ತೇನೆ.

ನೀರಿಗಾಗಿ ಹಾತೊರೆಯುತ್ತಿದ್ದ ನಿಮ್ಮ ಸೇನೆ

ನನ್ನ ನೀರಿನ ಹೂಜಿಯೊಳಗೆ ಮುಳುಗಿ ಸತ್ತಿರಿ,

ಅಸಹನೆಗಾಗಿ ಅಸಂಖ್ಯ ಪುಟ್ಟ ಪುಟ್ಟ ಕಪ್ಪು ಚುಕ್ಕೆಗಳಾಗಿ ಹೋಗಿದ್ದಕ್ಕಾಗಿ 

ನಾಯಿಗೆ ನಾನು ಕ್ಷಮೆ ಕೇಳುತ್ತೇನೆ.

ದಿಗ್ಭ್ರಮೆಗೊಂಡ ಆಕಾಶದ ತುಂಬೆಲ್ಲ ಹೃದಯವೇ ಸಿಡಿದು ಹೋಗುವ ಹಾಗೆ 

ಪಟಾಕಿಗಳ ಶಬ್ದಕ್ಕೆ ನೀನು ಭಯಭೀತಗೊಂಡದ್ದಕ್ಕಾಗಿ

ನಾಯಿ, ಇರುವೆ, ಹಲ್ಲಿ, ಮುದ್ದೆಕೋಲು,

ಬಸವನಹುಳು ಮತ್ತು ಮಣ್ಣಿನಲ್ಲೇ ಗೇಯುವ ಎರೆಹುಳು 

ನಿಮ್ಮೆಲ್ಲರಿಂದ

ನಾನು ಕ್ಷಮೆ ಕೇಳುತ್ತೇನೆ.

ನಾನು ಕೇಳುತ್ತೇನೆ 

ಸುದೀರ್ಘವಾದ 

ತಿಳಿಯಾದ ಒಂದು ಮರೆವನ್ನು.

– ಇಂಗ್ಲಿಷ್ ಮೂಲ: ಸಂಪೂರ್ಣ ಚಟರ್ಜಿ 

ಕನ್ನಡ ಅನುವಾದ: ದಾದಾಪೀರ್ ಜೈಮನ್

ನಗಬಹುದಾಗಿದ್ದು 

*

‘ಕನಸುಗಳನ್ನು ಭದ್ರ ಪಡಿಸಿಕೊಳ್ಳಲಾಗದಿರುವುದಕ್ಕೆ ಚಿಂತೆಯೇ’ 

ಹೌದು 

ಆದರೆ ನೀವು ಬ್ಯಾಂಕ್ ಸಾಲಗಾರರು ಅರ್ಥೈಸುವ ರೀತಿಯಂತಲ್ಲ  

ನನಗೆ ಚಿಂತೆಯಾಗುತ್ತದೆ ಮುಂಜಾನೆಯ ನಸುಕಿನಲ್ಲಿ ಹೊಳೆದು ಹೋದ ಮುಖಗಳನ್ನು 

ನನಗೆ ಬೇಕಾದ ಹಾಗೆ ಭದ್ರಪಡಿಸಿಕೊಳ್ಳಲು ಆಗದಿರುವುದಕ್ಕೆ 

ನನಗೆ ಚಿಂತೆಯಾಗುತ್ತದೆ ಪದಗಳು ಪಿನ್ನಿನ ಹಾಗೆ, ಕೊಕ್ಕೆಯ ಹಾಗೆ, ಸ್ಟೇಪ್ಲರಿನ ಹಾಗೆ ಭದ್ರವಲ್ಲವೆಂದು 

ನನಗೆ ಚಿಂತೆಯಾಗುತ್ತದೆ ಕನಸುಗಳು ಕೈತಪ್ಪಿ ಹೋಗಬಹುದೆಂದು 

ನನಗೆ ಚಿಂತೆಯಾಗುತ್ತದೆ ಎಲ್ಲಿ ಫಿಕ್ಸರ್ ಡ್ರಾಪುಗಳು ಹದದಲ್ಲಿ ಬೆರೆಯದೆ 

ಕಾಗದದ ಮೇಲಿಟ್ಟ ಪೆನ್ನಿನಿಂದ ಬೆಳಕು ಒಳನುಗ್ಗುವಾಗ 

ಹೊಮ್ಮುವ ಕನಸುಗಳು ಬಿಳಚಿ ಹೋಗಿ, ತಪ್ಪು, ಅಲಕ್ಷ್ಯಗಳಿಂದ ಮಂಕಾಗಿಬಿಡಬಹುದೇನೋ ಎಂದು

ನಾನು ಎಚ್ಚರದಲ್ಲಿರುವಾಗ ನನಗೆ ಚಿಂತೆಯಿಲ್ಲ 

ನನಗೆ ಚಿಂತೆಯಾಗುವುದು ಕಂಡ ಕನಸು ಮಂಪರನಪ್ಪಿಕೊಂಡು  

ನೀನು ಎಲ್ಲಿದ್ದೀಯ ಎಂದು ನಿನಗೇ ತಿಳಿಯದ ಸ್ಥಿತಿಗೆ ತಲುಪಿಕೊಂಡುಬಿಟ್ಟಾಗ  

ನನಗೆ ಚಿಂತೆ ನನ್ನ ಕನಸುಗಳು ಸಂಪೂರ್ಣವಾಗಿ ಅಸಹಾಯಕವಾಗಿ ಬೆತ್ತಲುಗೊಳ್ಳುವುದಕ್ಕಿಂತ 

ಬೇರೊಂದು ಅಭದ್ರತೆ ಅವಕ್ಕೆ ಇರಲಾರವೇನೋ ಎಂದು 

ಹಾಗಾಗಿ, ‘ನೀವು ಚಿಂತಿಸುತ್ತಿದ್ದೀರಾ…’ ಎಂದು   

ಸಾಲಗಳಿಂದಲೇ ತುಂಬಿ ಹೋದ ಭೀಕರ ಭವಿಷ್ಯವನ್ನು ಮಾರುವ 

ಮತ್ತೊಂದು ಆಮಿಷವನ್ನು 

ಕಸದ ಬುಟ್ಟಿಗೆ ಅರ್ಪಿಸುತ್ತೇನೆ 

ಬದಲಿಗೆ 

ಕೆಲವು ಪದಗಳ ಸಾಲ ತೆಗೆದುಕೊಳ್ಳುತ್ತೇನೆ:

ದುರ್ಬಲ ಚಲನಶೀಲ ಚಲಂತೋ

ಶಾಂಘಟಿಕ್ ಅದ್ಭುತ ಬೆಂಕಿ 

ಶೇಷಕಾಲೇ ಕ್ರಮೇಣ ಹುಚ್ಚು ಸಹಜ ಶ್ಯಾಭಾಭೀಕ್ 

ಮಾರಾತ್ತೊಕ್ ತಲ್ಲಣ ವಿಚ್ಛಿದ್ರ ಅಭಿಮಾನ್ 

ಕ್ಷುಲ್ಲಕ 

ಹಾಷ್ಯಕೊರ್

ನಗಬಹುದಾಗಿದ್ದು…

‍ಲೇಖಕರು avadhi

10 February, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading