-ಪಿ.ಓಂಕಾರ್, ಮೈಸೂರು
ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಪೇಜಾವರ ಶ್ರೀಗಳನ್ನು ಆಹ್ವಾನಿಸಲು ಸರಕಾರ ನಿರ್ಧರಿಸಿದೆ. ವಯಸ್ಸಿನ ಹಿರಿತನ, ಸಂತ ಸಾಧನೆ, ವಿದ್ವತ್ ಹಿರಿಮೆ ಮತ್ತಿತರ ಎಲ್ಲಾ ದೃಷ್ಟಿಯಿಂದಲೂ 80ರ ಹರೆಯದ ವಿಶ್ವೇಶ ತೀರ್ಥ ಸ್ವಾಮೀಜಿ ಆಯ್ಕೆ ಸಮಂಜಸ. ಆದರೆ…?
ಈ ಆದರೆ ಯಾಕೆಂದರೆ, ನಾಡ ಹಬ್ಬ ದಸರೆಗೆ ಚಾಲನೆ ನೀಡಲು ಹೀಗೆ ಮಠಾಶರನ್ನು ಆಹ್ವಾನಿಸುತ್ತಿರುವುದು ಇದು ಸತತ 5ನೇ ಬಾರಿ, ನಾಡಿನ ಸಾಂಸ್ಕೃತಿಕ ವೈಭವ, ಹಿರಿಮೆ ಗರಿಮೆಯನ್ನು ಸಾರುವ ಹಬ್ಬದ ಸಂದರ್ಭದಲ್ಲಿ ಇಂಥ ಪುನರಾವರ್ತನೆ ಒಳ್ಳೆಯ ಸಂದೇಶವಲ್ಲ ಎಂಬ ಕಾರಣಕ್ಕೆ.
ಎಚ್.ಡಿ.ಕುಮಾರಸ್ವಾಮಿ-ಬಿ.ಎಸ್.ಯಡಿಯೂರಪ್ಪ `ಬೆಸುಗೆ’ಯ ಸರಕಾರ ಉತ್ಸವದ ಉದ್ಘಾಟನೆಗೆ ಸಿದ್ಧಗಂಗಾ ಶ್ರೀಗಳನ್ನು ಆಹ್ವಾನಿಸಿತ್ತು.ನಂತರದ `ವಚನ ಭ್ರಷ್ಟ’ ರಾಜಕೀಯದ ಪರಿಣಾಮವೋ ಏನೋ ಅವರು ಬರಲಿಲ್ಲ. ಆದಿಚುಂಚನಗಿರಿ ಸ್ವಾಮೀಜಿ ಚಾಲನೆ ಬಂದು ನೀಡಿದರು. ಮರು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ. ಉದ್ಘಾಟನೆಗೆ ಸಿದ್ಧಗಂಗಾ ಶ್ರೀ ಒಪ್ಪಿ ಬಂದು ನಾಡನ್ನು ಹರಸಿದರು. ನಂತರದ ವರ್ಷ ಆರ್ಟ್ ಆಫ್ ಲಿವಿಂಗ್ ನ ರವಿಶಂಕರ ಗುರೂಜಿ. ಕಳೆದ ವರ್ಷ ಧರ್ಮಸ್ಥಳದ ಡಾ.ಡಿ. ವೀರೇಂದ್ರ ಹೆಗ್ಗಡೆ. ಈ ವರ್ಷ ಪೇಜಾವರ ಶ್ರೀಗೆ ಆಹ್ವಾನ.
ಹೀಗೆ, ಪ್ರತಿವರ್ಷವೂ ಮಠಾಧೀಶರನ್ನು ಕರೆಸಲು ದಸರೆಯೇನು ಧಾರ್ಮಿಕ ಸಮಾವೇಶವೇ? ಬೇರೆ ಬೇರೆ ಕ್ಷೇತ್ರಗಳಲ್ಲಿ ಅರ್ಹ ಸಾಧಕರಿಲ್ಲವೇ ಎನ್ನುವುದು ಸಹಜ ಪ್ರಶ್ನೆ. ಯಾಕೆಂದರೆ, ದಸರೆಗೆ ಉದ್ಘಾಟನಾ ಸಂಭ್ರಮ ಮುಖ್ಯ ಕಾರ್ಯಕ್ರಮವಾಗಿ (ಮೊದಲೆಲ್ಲ ಪೂಜೆಗೆ ಸೀಮಿತವಾಗಿತ್ತು) ಸೇರಿದ ನಂತರದ ವರ್ಷಗಳಲ್ಲಿ ರಾಜಕುಮಾರ್, ಸಿ.ಎನ್.ಆರ್.ರಾವ್, ಬರಗೂರು ರಾಮಚಂದ್ರಪ್ಪ, ಜಿ.ನಾರಾಯಣ ಸೇರಿ ಹಲವು ವಿವಿಧ ಕ್ಷೇತ್ರದ ಸಾಧಕರು ಚಾಲನೆ ನೀಡಿದ್ದರು. ನಾಡಿನ ಕಲೆ,ಸಂಸ್ಕೃತಿ,ಸಾಹಿತ್ಯ, ಪ್ರಗತಿಯ ವೈಭವ ಸಾರುವ ಸಂಭ್ರಮವನ್ನು ಮೇರು ಸಾಧಕರು ಉದ್ಘಾಟಿಸುವುದು ಅರ್ಥಪೂರ್ಣವೂ, ಸಾಧಕರಿಗೆ ನೀಡುವ ಗೌರವವೂ ಆಗಿತ್ತು.
ಹಾಗಂತ ನಾಡು ನುಡಿಗೆ ತಮ್ಮದೇ ಕೊಡುಗೆ ನೀಡಿದ ಮಠಾಧೀಶರು ಇದಕ್ಕೆ ಅರ್ಹರಲ್ಲ ಎಂದಲ್ಲ. ಅವರ ಭಾಗವಹಿಸುವಿಕೆಯೂ ಅರ್ಥಪೂರ್ಣ. ಆದರೆ, ಸತತವಾಗಿ, ಅದೂ ಒಂದು ಧರ್ಮಕ್ಕೆ ಸೀಮಿತ ಧಾರ್ಮಿಕ ಮುಖಂಡರನ್ನೇ ಆಹ್ವಾನಿಸುವ ನಿರ್ಧಾರ ಸಮಾಜಕ್ಕೆ ಬೇರೆಯದೇ ಸಂದೇಶ ನೀಡುತ್ತದೆ.
ಮಹೋತ್ಸವಕ್ಕೆ ರಾಜ್ಯದ ಸರ್ವ ಜನರ ತೆರಿಗೆ ಹಣ ಪ್ರತ್ಯೇಕ್ಷ 10ಕೋಟಿ ರೂ., ಪರೋಕ್ಷವಾಗಿ ಇನ್ನೂ ಹಲವು ಕೋಟಿಗಳ ಲೆಕ್ಕದಲ್ಲಿ ಖರ್ಚಾಗುತ್ತದೆ. ಹತ್ತು ದಿನದ ಉತ್ಸವದಲ್ಲಿ ಎಲ್ಲಾ ಮತ, ಧರ್ಮದ ಜನ ಜಾತಿ, ಭಾಷೆಯ ಮಿತಿಗಳನ್ನು ಮೀರಿ `ನಮ್ಮದೆಂಬ’ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ನಾಡು, ಹೊರನಾಡಿನ ದಿಗ್ಗಜ ಕಲಾವಿದರು `ತಮ್ಮ ಪಾಲಿನ ಸುಕೃತ ‘ವೆಂದು ಭಾವಿಸಿ ಭಾಗವಹಿಸಿ ಪ್ರತಿಭೆಯನ್ನು ಹರಿಸುತ್ತಾರೆ.
ಇಂಥ ಸಂಭ್ರಮದಲ್ಲಿ `ಎಲ್ಲೆಡೆ’ಯ, ಎಲ್ಲಾ ಸಮುದಾಯ, ಧರ್ಮದ ಹಿನ್ನೆಲೆಯ ಜನ ಇನ್ನಷ್ಟು ಉತ್ಸಾಹದಿಂದ ಪಾಲ್ಗೊಳ್ಳಬೇಕೆಂಬ ಆಶಯ ಸರಕಾರದ್ದೂ ಹೌದು. ಈ ನಿಟ್ಟಿನಲ್ಲಿಯೇ ದಸರೆ ವರ್ಷದಿಂದ ವರ್ಷಕ್ಕೆ ಹಲವು ವೈವಿಧ್ಯಗಳನ್ನು ತುಂಬಿಕೊಳ್ಳುತ್ತಿದೆ. ಸರ್ವಜನರ ಹಬ್ಬಕ್ಕೆ ಧಾರ್ಮಿಕ ಮುಖಂಡರನ್ನು ಕರೆಸುವುದೇ ಆದರೆ ಎಲ್ಲಾ ಧರ್ಮ ಗುರುಗಳನ್ನು ಒಳಗೊಳ್ಳಬೇಕು ಎಂಬ ಸದಾಶಯ ಹಿಂದೆಯೇ ವ್ಯಕ್ತವಾಗಿತ್ತು. ಆದರೂ, ಈ ಬಾರಿಯೂ ಅಗ್ರ ಗೌರವ `ಏಕಪ್ರಕಾರ’ವಾಗಿ ಮಠಾಶರಿಗೇ ಸಲ್ಲುತ್ತಿರುವುದು ಚರ್ಚಾಸ್ಪದ.
***
ಈಗಿನ ಸ್ಥಿತಿಯಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರದಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವಂತಿಲ್ಲ. ನಾಡಿನ 6 ಕೋಟಿ ಪ್ರಜೆಗಳ ಪ್ರತಿನಿಧಿಯಾಗಿ ಕೆಲಸ ಮಾಡಬೇಕಾದ ಚುನಾಯಿತ ಸರಕಾರದ `ವಿವೇಕ’ ಕೆಲವೇ ಮಠಾಶರ ಪಾದಾರವಿಂದದಲ್ಲಿ ಪಡಮಟ್ಟು ಕುಳಿತಿದೆ. ಮತದಾರ ಪ್ರಭುಗಳಿಗಿಂತ ಮಠಾಶರ ಮಾತೇ ಸರಕಾರಕ್ಕೆ ವೇದವಾಕ್ಯ.
ರಾಜಕೀಯ ಹಗರಣಗಳ ಕಾರಣವಾಗಿ ಸರಕಾರ ಸಂಕಷ್ಟಕ್ಕೆ ಸಿಲುಕಿದರೆ ರಕ್ಷಿಸಲು ಮಠಾಧೀಶರು ಟೊಂಕ ಕಟ್ಟಿ ನಿಲ್ಲುತ್ತಾರೆ. ಅಧಿಕಾರಸ್ಥರ ಭೂ `ದಾಹ’ದಿಂದ ಅನ್ನದಾತ ಬಚಾವಾಗಬೇಕೆಂದರೂ `ಶ್ರೀ’ರಕ್ಷೆ ಇರಲೇ ಬೇಕು. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುಗಳಾದ ಜನ ಬೇಡಿಕೆಗಳ ಈಡೇರಿಕೆಗೆ, ಅನ್ನ ನೀಡುವ ಭೂಮಿಗಾಗಿ ಉಪವಾಸ ಕುಳಿತರೂ ಎಡಗಣ್ಣು ಹರಿಸದ ಸರಕಾರ, ಮಠಾಧೀಶರು ನಿರಶನದ ಬೆದರಿಕೆ ಹಾಕುತ್ತಿದ್ದಂತೆ ಶರಣು ಹೊಡೆಯುತ್ತದೆ !
ಇದಲ್ಲವೇ ಪ್ರಜಾ ಪ್ರಭುತ್ವದ ವ್ಯಂಗ್ಯ’ ಎಂದು ಕೇಳಿಕೊಂಡು, ಸುಧಾರಿಸಿಕೊಳ್ಳುವಷ್ಟರಲ್ಲೇ ಮತ್ತೊಂದು ದಸರೆ ಬಂದು, ಅದರ ಉದ್ಘಾಟನೆಗೆ `ನಿರಶನ’ದ ಚುಚ್ಚುಮದ್ದು ನೀಡಿದ್ದ ಪೇಜಾವರ ಶ್ರೀಗಳೇ ಆಹ್ವಾನಿತರಾಗುತ್ತಾರೆ. ಈಗ, ಸರಕಾರಕ್ಕೆ ಮಠಾಧೀಶರ ಮೇಲಿನ ನಿಜ ಭಕ್ತಿ ಕಾರಣವೋ, ಬೀದಿಯಲ್ಲಿ ಹೋದ ಮಾನವನ್ನು ಮರುಪೂರಣ ಮಾಡಿಕೊಳ್ಳುವ `ರಾಜಕಾರಣ’ವೋ …ಎಂದು ಗೊಂದಲಕ್ಕೆ ಬೀಳುವ ಸರದಿ ಮತ್ತದೆ ಪಾಮರ ಪ್ರಜಾ-ಪ್ರಭುಗಳದ್ದು.
ಏನೇನಕ್ಕೂ ಕಿವಿಗೊಡದ ಸರಕಾರ ಮಠಾಶರ ಪ್ರಭಾವಕ್ಕಾದರೂ ಬಗ್ಗುತ್ತಿದೆಯಲ್ಲ ಎಂಬ `ಸದ್ಯದ ಸಮಾಧಾನ’ಕ್ಕೆ ಶರಣಾಗದೆ ಜನತಂತ್ರದ `ಪ್ರಭು’ಗಳಿಗೆ ಬೇರೆ ದಾರಿಯೇ ಇಲ್ಲ. ದಸರೆಯ ಉದ್ಘಾಟನೆ ವಿಷಯದಲ್ಲೂ ಇಂಥದೇ ಸಂಭವಿಸಲಿ ಎಂಬುದು ನಿರೀಕ್ಷೆ. ಹಿರಿಯರು, ಪ್ರಾಜ್ಞರೂ ಆದ ಪೇಜಾವರ ಶ್ರೀಗಳು ಇಂತಹ `ಧರ್ಮಸೂಕ್ಷ್ಮ’ಗಳನ್ನು ಬಹಳಷ್ಟು ಬಲ್ಲವರು. ಅವರೇ ಧರ್ಮ ರಾಜಕಾರಣ ಮಾಡುತ್ತಿರುವ ಸರಕಾರಕ್ಕೆ ಬುದ್ಧಿಮಾತು ಹೇಳುವ ಮೂಲಕ, ನಾಡಹಬ್ಬದ ಸಾಂಸ್ಕೃತಿಕ ವೈವಿಧ್ಯಕ್ಕೆ ಭಂಗ ಬಾರದಂತೆ `ಶ್ರೀ ರಕ್ಷೆ’ ನೀಡಬೇಕು. ಇಲ್ಲವೇ,`ನನ್ನನ್ನು ಒಳಗೊಳ್ಳದ ಹಬ್ಬಕ್ಕೆ ನನ್ನ ಪಾಲಿನ ತೆರಿಗೆ ಹಣ ಯಾಕಾದರೂ ವಿನಿಯೋಗವಾಗಬೇಕು, ನಾನ್ಯಾಕೆ ಪಾಲ್ಗೊಳ್ಳಬೇಕು’ ಎಂಬ ಪ್ರಶ್ನೆ ಯಾರಲ್ಲೇ ಮೂಡಿದರೂ ಅಚ್ಚರಿ ಪಡಬೇಕಿಲ್ಲ.







ಈ ಮಥಾಧೀಶರ ಕಾಟ ಜಾಸ್ತಿಯಾಗಿದೆ.ಏನು ಮಾಡಬೇಕು ಗೊತ್ತಾಗುತ್ತಿಲ್ಲ!
ದಸರಾ ಹೇಗೆ ಧಾರ್ಮಿಕ ಸಮಾವೇಶ ಅಲ್ಲ? ಮಹಿಷಾಸುರನನ್ನು ಕೊಲ್ಲುವ ದೇವಿಯ ಹಿಂಸೆಯ ಮೌಲ್ಯ ಈ ನಾಡಿನ ಎಲ್ಲ ಸಮುದಾಯವನ್ನು ಪ್ರತಿನಿಧಿಸುತ್ತದೆಯೆ? ರಾಜ ಪ್ರಭುತ್ವವನ್ನು ಆರಾಧಿಸುವ, ಒಡೆಯರನ್ನು ಅಂಬಾರಿ ಮೇಲೆ ಏರಿಸಿ ಸಂಬ್ರಮಿಸುವ ಸಂಸ್ಕೃತಿ ಪುರೋಹಿತ ಶಾಹಿ ಮೌಲ್ಯಕ್ಕೆ ಹತ್ತಿರವಾದುದು. ಅಲ್ಲಿ ನಡೆಯುವ ಪೂಜೆಗೂ ಕನ್ನಡದ ಸಂಕೆತಗಳಿಗು ಸಂಬಂಧವಿದೆಯೇ? ಪೇಜಾವರ ಶ್ರೀಗಳನ್ನು ದಸರಾ ಉದ್ಘಾಟನೆಗೆ ಕರೆದಿರೂದು ಅರ್ಥಪೂರ್ಣವಾಗಿದೆ. ವೈದಿಕರ ಕಾರ್ಯಕ್ರಮಕ್ಕೆ ವೈದಿಕರನ್ನು ಕರೆದರೆ ನಿಮಗೇಕೆ ಹೊಟ್ಟೆ ಉರಿಯಾಬೇಕು. ಸರಕಾರ ಸರಿಯಾದ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ.
I personally do not agree with few views (not all) expressed in the first part of the article.
1. Sri Shivakumara Swamiji and Vishweshwara Teertha Swamiji are not only spiritual leaders, but persons with concern over the society and the people. So, how come you restrict them to only ‘MaTaadheesharu’.
Karnataka Government’s denotification of Mangalore SEZ land aquisition is attributed to Vishweshwara teertha swamiji’s active participation.
2. And about the second part of the write up , the people have to be intelligent enough to isolate ‘maTHa’ and ‘Raajakeeya’, thus forcing government to ‘come to them’