ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದರ್ಶನ್ ಜಯಣ್ಣ ಸರಣಿ ಕಥೆ ೧ – ಶಿವರಾತ್ರಿ..

 ‘ಎಲ್ಲ ಹೂಗಳೂ ಅರಳಿ ನಗುವುದಿಲ್ಲ, ಎಲ್ಲ ಕವಿತೆಗಳೂ ಹಾಡಾಗುವುದಿಲ್ಲ’ ಎಂಬುದನ್ನೇ ಧ್ಯೇಯ ವಾಕ್ಯವಾಗಿಸಿಕೊಂಡ ದರ್ಶನ ಜಯಣ್ಣ ಚಿಮಿಕಲ್ ಎಂಜಿನಿಯರ್. ತಮ್ಮ ವೃತ್ತಿಗೆ ಸಾಹಿತ್ಯದ ಪರಿಮಳವನ್ನೂ ಬೆಸುಗೆ ಹಾಕಿದ್ದಾರೆ. ‘ಪದ್ಯ ಸಿಕ್ಕಿತು’ ಇವರ ಕವನ ಸಂಕಲನ.

‘ಅವಧಿ’ಯಲ್ಲಿ ಈಗಾಗಲೇ ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ.

ಇಂದಿನಿಂದ ಇವರು ತಮ್ಮ ಅಪ್ಪನ ಬಗ್ಗೆ ಕಟ್ಟಿಕೊಡುವ ಬುತ್ತಿ ನನ್ನ ಅಪ್ಪ ಸರಣಿ ಆರಂಭ

ದರ್ಶನ್ ಜಯಣ್ಣ

ಅವತ್ತು ಶಿವರಾತ್ರಿ. ನಾವು ಮನೆಯವರೆಲ್ಲ ಉಪವಾಸ ಮಾಡಿ ಮತ್ತೆ ಸ್ನಾನ ಮಾಡಿ ಶಿವಪೂಜೆ ಮುಗಿದ ನಂತರವೇ ಫಲಾಹಾರ ಉಣ್ಣುತ್ತಿದ್ದೆವು. ಫಲಾಹಾರವೆಂದರೆ ಉಪ್ಪಿಟ್ಟು, ತಂಬಿಟ್ಟು ಮತ್ತು ರಸಾಯನ. 

ನನ್ನ ಅಜ್ಜಿ, ಅಪ್ಪ, ಅಮ್ಮ ಎಲ್ಲ ಒಂದು ಹನಿ ನೀರು ಕುಡಿಯುತ್ತಿರಲಿಲ್ಲವಾದರೂ ನನಗೆ ರಿಯಾಯಿತಿ ಇತ್ತು. ನಾನೂ ಬೆಳಿಗ್ಗೆ ಎದ್ದಕೂಡಲೇ ಮೊದಲನೇ ಸ್ನಾನದ ಮುನ್ನ ಒಂದು ಲೋಟ ಹಾಲು ಕುಡಿಯಬಹುದಿತ್ತು. 

ಶಿವರಾತ್ರಿ ಎಂದರೆ ಪ್ರತಿಮನೆಯಲ್ಲಿ ಅದರಲ್ಲೂ ಶಿವನ ಆರಾಧಕ ಮನೆಗಳಲ್ಲಿ ಅದೇನೋ ಸಂಭ್ರಮ. ಅದರಲ್ಲೂ ನಮ್ಮ ಮನೆಯಲ್ಲಿ ಒಂದು ಕೈ ಮೇಲೆ, ಕಾರಣ ಧಾರ್ಮಿಕವಲ್ಲ ಬದಲಾಗಿ ವ್ಯಾಪಾರ. ಹೌದು, ಅಪ್ಪನ ಗ್ರಂಥಿಗೆ ಅಂಗಡಿಯಲ್ಲಿ ಅವತ್ತೇ ಭರ್ಜರಿ ವ್ಯಾಪಾರ. ವರ್ಷದಿಂದ ಖರ್ಚಾಗದೆ ಉಳಿದ ವಿಭೂತಿಗಟ್ಟಿ, ವಸ್ತ್ರ, ಟವಲ್ಲು, ಮಗುಟ, ಲಿಂಗು, ಕರಡಿಗೆ, ರುದ್ರಾಕ್ಷಿ, ಸಾಲಿಗ್ರಾಮ, ಕುಂಕುಮ-ಅರಿಶಿನ, ಶಿವದಾರ, ಅಭಿಷೇಕದ ಸಾಮಾನು ಹೀಗೆ ವ್ಯಾಪಾರ ಜೋರೋ ಜೋರು.

ನಾವು ಅಭಿಷೇಕದ ಸಾಮಾನಿಗೆ ಬೇಕಾದ ಪರಿಕರಗಳಾದ ಆದ್ಯ, ಪಾದ್ಯ, ಆಚಮಾನ, ಅಷ್ಟಗಂಧಗಳನ್ನು ತಂದು ಮನೆಯಲ್ಲಿ ಜೇನುತುಪ್ಪ ಬೆರೆಸಿ ತಯಾರಿಸುತ್ತಿದ್ದೆವು. ಇದಕ್ಕೆ ಕಾರಣ ಬಜಾರಿನಲ್ಲಿ ಸಿಗುತ್ತಿದ್ದ ಅಭಿಷೇಕದ ಸಾಮಾನಿನಲ್ಲಿ ಇರುತ್ತಿದ್ದವು ಒಂದೋ ಎರಡೋ ಪರಿಕರಗಳು ಮಾತ್ರ. 

ಅವತ್ತು ಅಪ್ಪನ ಜೊತೆಗೆ ನಾನೂ ಸಂಜೆಯವರೆಗೆ ಅಂಗಡಿಯಲ್ಲೇ ಇರುತ್ತಿದ್ದೆ. ನನಗೆ ಇದೆಲ್ಲದರ ವ್ಯಾಪಾರ ಅತ್ಯಂತ ಖುಷಿಯ ಸಂಗತಿಯಾಗಿತ್ತು. ಸುಮಾರು ಸಂಜೆ ನಾಲ್ಕರ ಹೊತ್ತಿಗೆ ವ್ಯಾಪಾರ ಮುಗಿದ ಮೇಲೆ ಮನೆಗೆ ಬಂದು ಸ್ನಾನ ಮಾಡಿ ಪೂಜೆ ಆರಂಭಿಸುತ್ತಿದ್ದೆವು. 

ಆ ವರ್ಷವೂ ಹಾಗೆಯೇ ಆಯಿತು.ಆದರೆ ಮನೆಗೆ ಬಂದಾಗ ಅಪ್ಪನಿಗೆ ಎಳನೀರು ತರುವುದು ಮರೆತೆನಲ್ಲ ಎಂಬುದು ತಿಳಿವಿಗೆ ಬಂದು “ಬಾರೋ ಎಳನೀರು ತರೋಣ ” ಎಂದರು. ನಾನು ನಮ್ಮ ಹೊಸಾ ಕೈನೆಟಿಕ್ ಹೋಂಡಾ ದ ಮೇಲೆ ಹೋಗುವ ಸಂಭ್ರಮಕ್ಕೆ ಹಿಗ್ಗಿದೆ. 

ಒಳ್ಳೆಯ ಎಳನೀರು ತುಮಕೂರಿನಲ್ಲಿ ಆಗ ಸಿಗುತ್ತಿದ್ದುದು ಹೈಸ್ಕೂಲ್ ಫೀಲ್ಡ್ ನಲ್ಲಿ. ಅಲ್ಲಿಗೆ ನಾನೂ ಅಪ್ಪ ಹೋದಾಗ ಅಲ್ಲಿದ್ದ ಐದಾರು ಜನ ವರ್ತಕರು ಅಪ್ಪನೆಡೆಗೆ ಅಂತಹಾ ಮುತುವರ್ಜಿ ತೋರದಿರಲು ಕಾರಣ ಅಪ್ಪನನ್ನು ಮೆಚ್ಚಿಸಲು ಅವರ ಬಳಿ ಯಾವ ಎಳನೀರು ಇದ್ದರೂ ಸಾಲದೇ ಹೋಗಬಹುದೆಂಬ ಭಯ ಅಥವಾ ತಾತ್ಸಾರ !

ಅಪ್ಪನಿಗೆ ತೆಂಗು ಬೆಳಸಿ, ಕಾಯಿ ಕೀಳಿಸಿ, ಮಾರಿ ಗೊತ್ತಿದ್ದರಿಂದ ಅವರನ್ನು ಸುಲಭವಾಗಿ ಮೆಚ್ಚಿಸಲು ಆಗುತ್ತಿರಲಿಲ್ಲ. ಹೀಗಿರುವಾಗ ಅಲ್ಲೊಬ್ಬ ವರ್ತಕ ಹೊಸಬನಂತೆ ಕಂಡ. ಅವನಲ್ಲಿದ್ದ ಕಾಯಿಗಳು ಚೆನ್ನಾಗಿದ್ದವು. 

ಅಪ್ಪ “ಬಾ ಅಲ್ಲಿ ಹೋಗೋಣ ನೋಡು ಎಷ್ಟು ಚೆನ್ನಾಗಿವೆ ಎಳನೀರು, ಎರಡಾದ್ರೆ ಸಾಕು ಅಭಿಷೇಕಕ್ಕೆ ” ಎಂದರು. 

ನಾವು ಅಲ್ಲಿಗೆ ಹೋದಾಗ ಆಗಲೇ ಕಾರಿನಲ್ಲಿ ಬಂದಿಳಿದಿದ್ದ ಒಬ್ಬರು ಕಾಯಿ ಕೆತ್ತಿಸುತ್ತಿದ್ದರು. ನೋಡುವುದಕ್ಕೆ ತುಂಬಾ ಅನುಕೂಲಸ್ಥರ ಹಾಗೆ  ಕಾಣುತ್ತಿದ್ದರಾದರೂ ಎಳನೀರಿನವನನ್ನು ಹತ್ತು ಹಲವು ಪ್ರಶ್ನೆ ಕೇಳುತ್ತಿದ್ದರು. ಅವನ ಉತ್ತರಕ್ಕೆ ಇವರ ಕುಹಕ ಎದ್ದು ಕಾಣುತ್ತಿತ್ತು.

ಅದಲ್ಲದೆ ತೆಗೆದುಕೊಳ್ಳುತ್ತಿದ್ದ ನಾಲ್ಕು ಕಾಯಿಗೆ ನಲವತ್ತು ಚೌಕಾಸಿ. ವರ್ತಕನ ಮುಖ ಪೇಲವವಾಗಿತ್ತು. ಬಿಟ್ಟರೆ ಗಿರಾಕಿ ಹಾಳುಮಾಡಿಕೊಳ್ಳಬೇಕೆಂದು  ಸಹಿಸಿಕೊಳ್ಳುತ್ತಿದ್ದ. ಇದೆಲ್ಲದರ ಮಧ್ಯೆ ಹೀಗೆ ಕೊಚ್ಚು, ಹಾಗೇ ಕೊಚ್ಚು ಎಂದೂ ತಲೆ ತಿನ್ನುತ್ತಿದ್ದ. ಅಪ್ಪ ನಾನು ಅವನನ್ನೇ ನೋಡುತ್ತಿದ್ದೆವು.

ಇದ್ದಕ್ಕಿದ್ದ ಹಾಗೇ ವರ್ತಕ ಚೀರಿದ. ನೋಡುವಾಗ, ಮಚ್ಚು ಅವನ ಎಡಗೈನ ಬೆರಳಿಗೆ ತಗುಲಿ ರಕ್ತ ಹೋಗುತ್ತಿತ್ತು. ನಾವು ಕಂಗಾಲಾದೆವು. ಅಪ್ಪ ಗಾಡಿಯ ಕೀಲಿಕೈಯನ್ನು ನನಗೆ ಕೊಟ್ಟು “ಹೋಗು ಫಸ್ಟ್ ಏಡ್ ಕಿಟ್ ತೆಗೆದುಕೊಂಡು ಬಾ” ಎಂದರು. ನಾನು ಓಡಿದೆ. 

ಆದರೆ ಇದಾವುದರ ಪರಿವೆಯೇ ಇಲ್ಲದ ಆ ದೊಡ್ಡ ಮನುಷ್ಯ ” ಎಷ್ಟು ವರ್ಷದಿಂದ ಈ ಕೆಲಸ ಮಾಡ್ತಾ ಇದ್ದೀಯಯ್ಯ? ನೋಡ್ಕೊಂಡು ಕೊಚ್ಚಬಾರದ? ” ಎಂದು ದವಲತ್ತಿನ ಮಾತನಾಡಿ ಚೌಕಾಸಿ ಮಾಡಿದ್ದ ರೇಟಿಗೆ ಕಾಯಿಕೊಂಡು ಕಾರು ಹತ್ತಿ ಹೋಗಿಬಿಟ್ಟ. 

ನನ್ನಪ್ಪ ಜತನದಿಂದ ಅವನಿಗೆ ಫಸ್ಟ್ ಏಡ್ ಮಾಡಿದರು. ವರ್ತಕನ ಕಣ್ಣು ಒದ್ದೆಯಾದದ್ದನ್ನು ನಾನು ಕಂಡೆ ಅವನು ಏನೂ ಮಾತನಾಡಲಿಲ್ಲ. 

ಅಪ್ಪ ” ನಿನಗೆ ಕೊಚ್ಚಲಿಕ್ಕೆ ಕಷ್ಟವಾಗಬಹುದು ನಾನು ಬೇರೆಡೆ ಕಾಯಿ ಕೊಳ್ಳುತ್ತೇನೆ ” ಎಂದರು. 

“ಇಲ್ಲಾ ಸಾಮಿ, ಇದೆಂಥಾ ಗಾಯ! ನೋಡಿ ಇಪ್ಪತೈದು ವರ್ಷದಿಂದಾ ಕಾಯಿ ಕೊಚ್ತಾ ಇದ್ದೀನಿ ಇವತ್ತು ಆಯಪ್ಪ ಯಾಮಾರಿಸಿಬಿಟ್ಟ, ಒಳ್ಳೆ ಗ್ರಹಚಾರ ” ಎಂದ. 

ಅಪ್ಪ “ಹಂಗೇನಪ್ಪಾ ದುಡ್ಡಿರೋರ ಕಥೆ” ಅಂದರು. ವರ್ತಕ ಸಾವರಿಸಿಕೊಂಡು ಹುಡುಕಿ ಒಳ್ಳೆಯ ಎರಡು ನೀರಿನ ಕಾಯನ್ನು ಕೊಚ್ಚಿ ಕಟ್ಟಿ ಕೊಟ್ಟ. 

ಅಪ್ಪ “ಎಷ್ಟು ದುಡ್ಡು?” ಎಂದಾಗ

 “ಅಯ್ಯೋ ನಿಮ್ಮ ಹತ್ರ ಕಾಸು ತಗೋಳೋಕಾಯ್ತದಾ? ಬೇಡ ಸಾಮಿ” ಅಂದ. 

ಅದಕ್ಕೆ ಅಪ್ಪ ನಕ್ಕು “ಬೇಡ ತಗಳಪ್ಪ, ಎಳನೀರು ದೇವರ ಅಭಿಷೇಕಕ್ಕೆ, ಬಿಟ್ಟಿ ತಗೊಂಡೋದ್ರೆ ದೇವರು ಮೆಚ್ಚಲ್ಲ” ಅಂದರು. 

ಒದ್ದೆಯಾಗಿದ್ದ ವರ್ತಕನ ಕಣ್ಣು ಜಿನುಗಿತು.

ಇದಾದ ನಂತರ ಮನೆಗೆ ಹಿಂತಿರುಗುವಾಗ ಅಪ್ಪ

 “ನೋಡ್ದ ಮಗಾ ದೊಡ್ಡವರ ಲೆಕ್ಕಾಚಾರ? ” ಎಂದು ಹೇಳುತ್ತಾ ಮನೆಯೆಡೆಗೆ ಗಾಡಿ ತಿರುಗಿಸಿದರು. 

‍ಲೇಖಕರು Avadhi

29 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading