……
ಇತ್ತೀಚೆಗೆ ನನ್ನನ್ನು ಸಿನಿಮಾದ ಆರಂಭದಿಂದಲು ಕೊನೆಯವರೆಗು ಭಾವನಾತ್ಮಕವಾಗಿಸಿದ್ದು ದಂಗಲ್. ಬಹುತೇಕ ಕೆಲವೊಮ್ಮೆ ಕಣ್ಣೀರಿನ ಮೂಲಕ ಕೆಲವೊಮ್ಮೆ ಒಳಗೊಳಗೇ ಅಳುವಂತೆ ಮಾಡಿದ ಸಿನಿಮಾ ದಂಗಲ್,
ಮರಗಳ ಹಿಂದೆ ಮುಂದಿನ ಸುತ್ತಾಟ ಹಾಡು , ಪ್ರೇಮಗೀತೆಯಿಲ್ಲದ ಸಿನಿಮಾವಿದು. ತಂದೆ ಮತ್ತು ಆತನ ಹೆಣ್ಣು ಮಕ್ಕಳ ನಡುವಿನ ಸುಂದರ ಬಂಧ, ಹಠವೊಂದರ ಸುತ್ತ ಹೆಣೆಯಲಾದ ಸಿನಿಮಾ ಈಗ ಜನರ ಮನಗೆದ್ದಿದೆ. ಜೊತೆಗೆ ನನ್ನಂತಹ ಹೆಣ್ಣುಮಕ್ಕಳಿಗೆ ಸಿನಿಮಾ ವೀಕ್ಷಿಸಿ ಮುಗಿಸಿ ಹೊರಗೆ ಬರುವಾಗ ಪುಟ್ಟದೊಂದು ಛಲವನ್ನು ಗಟ್ಟಿಯಾಗಿ ಅಪ್ಪಿಕೊಳ್ಳುವಂತೆ ಮಾಡುತ್ತದೆ.
ಹೆಣ್ಣೆಂದರೆ ಹೀಗೆ ಇರಬೇಕು ಎಂದು ಹಲವಾರು ಷರತ್ತುಗಳನ್ನು ವಿಧಿಸುವ ನಮ್ಮ ಸಮಾಜ ಗಂಡಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತದೆ.ಅದಕ್ಕಾಗಿ ಮಹಾವೀರ್ ಸಿಂಗ್ ಮಕ್ಕಳ ಕೂದಲ ಕತ್ತರಿಸಿದಾಗ ವಕ್ರದ್ರಷ್ಟಿ ಬೀರುತ್ತದೆ. ವ್ಯಂಗ್ಯವಾಡುತ್ತದೆ. ಇನ್ನೊಬ್ಬರ ಜೀವನ, ಆಚಾರ ವಿಚಾರ, ಉಡುಗೆತೊಡುಗೆ ನಮ್ಮ ಜೀವನದೊಂದಿಗೆ ಯಾವೊಂದು ಸಂಬಂಧವೊಂದನ್ನು ಹೊಂದಿಲ್ಲವೆಂದರು ಸಮಾಜಕ್ಕೆ ಅದೇನೋ ವಿಚಿತ್ರ ಕುತೂಹಲ. ಮಾತಾಡಿಕೊಂಡಾಗ ಖುಷಿ.
ಗೆದ್ದಾಗ ಉಡುಗೆತೊಡುಗೆ ನಮ್ಮ ಜೀವನಶೈಲಿ ಅಷ್ಟು ಸಮಾಜಕ್ಕೆ ಪ್ರಮುಖವಾಗುವುದಿಲ್ಲ, ಯಾಕಂದ್ರೆ ಗೆದ್ದೆತ್ತಿನ ಬಾಲ ಹಿಡಿಯೋರೇ ನಾವೆಲ್ಲ ಅಲ್ವಾ. ದಂಗಲ್ ಸಿನಿಮಾ ಮೊದಲು ಸೋತು ಗೆಲ್ಲುವ ಕಥೆ. ಸಮಾಜದ ವಕ್ರದೃಷ್ಟಿಯನ್ನು ಗೆಲುವಿನೊಂದಿಗೆ ಬದಲಾಯಿಸುವ ಕಥೆ. ತಂದೆಯೊಬ್ಬ ಆದ ಅವಮಾನಗಳನ್ನು ಮೆಟ್ಟಿನಿಂತು ಗಟ್ಟಿಪಥದಲ್ಲಿ ಗೆಲುವಿನ ಕಾಮನಬಿಲ್ಲ ಮುಟ್ಟುವ ಕಥೆ. ಈ ಕಾಮನಬಿಲ್ಲನ್ನು ಮುಟ್ಟುವ ಹಾದಿಯಲ್ಲಿನ ಪಯಣ ಥ್ರಿಲ್ಲಿಂಗ್ ಅನ್ನಿಸುತ್ತದೆ. ಜೊತೆಗೆ ನಮ್ಮ ಬಾಳಿನ ಹಾದಿಯ ಅವಲೋಕನ ಮಾಡಿಸುತ್ತದೆ.
ಮಹಾವೀರ್ ಸಿಂಗ್ ಪೋಗಟ್ ನೆನಪಿಸಿದ ಅಪ್ಪ
ದಂಗಲ್ ನೋಡಿದ ಬಳಿಕ ಅಪ್ಪನ ನೆನಪು ಮತ್ತೆ ದಟ್ಟವಾಗಿ ಕಾಡಿತು. ಹಳ್ಳಿಯಿಂದ ಬಂದ ನನಗೆ ಸ್ವಾಭಿಮಾನದ ಜೀವನ ನಡೆಸಲು ದಾರಿಮಾಡಿ ಕೊಟ್ಟ ಅಪ್ಪನ ವಿಶಾಲ ಮನೋಭಾವ ಕಣ್ಣಿಂದ ಹನಿಯೊಂದು ಸದ್ದಿಲ್ಲದೆ ಹರಿವಂತೆ ಮಾಡಿತು. ಊರಿನಿಂದ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಾಗ ಯಾವುದೇ ಆತಂಕವಿಲ್ಲದೆ ಹತ್ತಿರವಿರಬೇಕೆಂಬ ಆಸೆಯಿದ್ದರು ನಾನು ಸ್ವಾವಲಂಬಿಯಾಗಬೇಕೆಂಬ ಕಾರಣಕ್ಕೆ ಕಳಿಸಿಕೊಟ್ಟ ಅಪ್ಪ ನಂಗೆ ಎಂದಿಗು ಮಾದರಿ.
ಯಾಕಂದ್ರೆ ನನ್ನ ಗೆಳತಿಯರಲ್ಲಿ ಹಲವರ ಪಾಲಿಗೆ ನನ್ನಷ್ಟು ಸ್ವತಂತ್ರ್ಯ ಸಿಗಲಿಲ್ಲ. ಡಿಗ್ರಿ ಆದ ತಕ್ಷಣ ಮದುವೆ ಮಾಡಿ ಮನೆ ನೋಡಿಕೊಂಡ್ರೆ ಸಾಕೆಂಬ ಧೋರಣೆ ಹೊಂದಿದ ಅಪ್ಪನ ಕುರಿತು ನೋವಿನಿಂದ ಮಾತಾಡಿದ ಗೆಳತಿಯ ಮಾತು ಇನ್ನು ಕಿವಿಗೆ ಅಪ್ಪಳಿಸುತ್ತಿದೆ.
ಯಾವತ್ತು ನನ್ನ ಉಡುಗೆ ತೊಡುಗೆಯ ಬಗ್ಗೆಯಾಗಲೀ ಯಾವುದೇ ವಿಷಯದ ಬಗ್ಗೆ ಷರತ್ತನ್ನು ಹಾಕಿದ ಘಟನೆ ನೆನಪಲ್ಲಿ ಇಲ್ಲವೇ ಇಲ್ಲ. ಅಪ್ಪ ಅಂದ್ರೆ ಹಾಗಾಗಿ ನೆನಪಾಗುವುದು ಪ್ರೀತಿಯ ಸುಧೆಯಾಗಿ ಮಾತ್ರ.
ವೃತ್ತಿ ಬದುಕಿನಲ್ಲಿ ಅಂತಹ ದೊಡ್ಡ ಸಾಧನೆ ಮಾಡಿದ್ದೇನೆಂದು ಹೇಳೋದಿಲ್ಲ. ಆದರೆ ಅದಕ್ಕೆ ವೇದಿಕೆಯನ್ನಂತು ಅಪ್ಪ ಕಲ್ಪಿಸಿದ್ದಾರೆ. ಅಂತಹ ಸ್ವತಂತ್ರ್ಯ ಬದುಕನ್ನು ನನಗೆ ಕೊಟ್ಟಿದ್ದಾರೆ.
ಬಾಲ್ಯದಲ್ಲಿ ಜ್ವರ ಬಂದಾಗ ಗಂಜಿ ಕೊಟ್ಟು ಪಾಲಿಸಿದ ಅಪ್ಪ, ಒಂದಿಷ್ಟು ಬೇಜಾರಾದ್ರು ಪಕ್ಕನೇ ಕೇಳಿಬಿಡುತ್ತಿದ್ದ ಅಪ್ಪ , ಫೋಟೋಗ್ರಫಿ ಹುಚ್ಚಿಗಾಗಿ ಕ್ಯಾಮರಾ ಕೊಡಿಸಿದ ಅಪ್ಪ, ಕಾಡು ಮೇಡೆಂದು ಒಬ್ಬಳೇ ಓಡಾಡಿದ್ರು ಪ್ರಶ್ನೆಯೊಂದನ್ನು ಎತ್ತದ ಅಪ್ಪ ಹೀಗೆ ಅಪ್ಪ ಪ್ರತಿ ಬರೀ ಸ್ಪೂರ್ತಿ ಮತ್ತು ಪ್ರೀತಿಯ ಸೆಲೆಯಾಗಿಯೇ ನೆನಪಾಗುತ್ತಿರುತ್ತಾರೆ.
ಉದ್ದಲಂಗ ಹಾಕಿದ ಪುಟ್ಟ ಹುಡುಗಿಯ ನನ್ನೊಳಗಿನ ನೆನಪಿನಿಂದ ಹಿಡಿದು ಮೊನ್ನೆ ಮೊನ್ನೆ ಮನೆಯವರೆಗೆ ಮನೆಗೆ ಹೋದಾಗ ಜಗಲಿಯಲ್ಲಿ ಕೂತು ಹೊಡೆದ ಹರಟೆಯವರೆಗು ಅಪ್ಪ ಬದಲಾಗಲಿಲ್ಲ. ಅವರ ಪ್ರೀತಿ ಬದಲಾಗಲಿಲ್ಲ.
ಆದರೆ ನಾವೆಲ್ಲೋ ಬದಲಾಗುತ್ತಿರುತ್ತೇವೆ. ತಾಂತ್ರಿಕ ಜಗತ್ತಿನ ಮಧ್ಯೆ ಕಳೆದುಹೋಗಿ ದಿನನಿತ್ಯದ ಜಂಜಾಟದಲ್ಲಿ ಎಲ್ಲೋ ಕಳೆದುಹೋಗಿರುತ್ತೇವೆ. ಮುಂಜಾನೆ ನಗುವಿನೊಂದಿಗೆ ಏಳುತ್ತಿದ್ದ ನಾವು ಸಂಜೆಯಾದರು ನಗುವನ್ನು ಮರೆತು ದಿನದೂಡುತ್ತಿರುತ್ತೇವೆ.
ಇಲ್ಲ ಕಳೆದುಹೋದದ್ದನ್ನು ಹುಡುಕಬೇಕು. ಸ್ಥಾನಮಾನ, ಹೆಸರು ಮೀರಿದ ಭಾವನೆಗಳಿಗೆ ಮತ್ತೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಇದು ಹೊಸ ವರುಷದಲ್ಲಿ ಮತ್ತೊಮ್ಮೆ ನನಗೆ ನಾನೇ ಹೇಳಿಕೊಂಡಿರುವ ಮಾತು.
ವೃತ್ತಿಬದುಕಿನಲ್ಲಿ ಹೆಣ್ಣೆಂಬ ಕಾರಣಕ್ಕೆ ಕೆಲವು ಅವಕಾಶಗಳನ್ನು ನಿರಾಕರಿಸಿದವರು ನನ್ನ ನೆನಪಿಗೆ ಬರುತ್ತಾರೆ. ಹಾಗೆ ಯಾವುದೇ ತಾರತಮ್ಯವಿಲ್ಲದೆ ಬೆನ್ನುತಟ್ಟಿದ ಕೆಲವೇ ಕೆಲವು ವ್ಯಕ್ತಿಗಳು ಮಧ್ಯದಲ್ಲಿದ್ದಾರೆ. ಹಾಗಾಗಿಯೇ ರಾಜ್ಯ ಸುತ್ತಿ ರಾತ್ರಿ ಹಗಲು ವರದಿ ಮಾಡುವ ಅವಕಾಶಗಳು ದಕ್ಕಿವೆ.ಸಮಾಜವೆಂದಾಗ ಒಳ್ಳೆಯ, ಕೆಟ್ಟ ಎರಡು ರೀತಿಯ ಮಾತುಗಳು ಕೇಳಲೇ ಬೇಕು. ಹಾಗೆಂದು ಅದು ನೀವು ಅದಕ್ಕೆ ಕೊಡುವ ಪ್ರಾಶಸ್ತ್ಯದ ಮೇಲೆ ಆಧಾರಿತವಾಗಿರುತ್ತದೆ.
ಶೇಖರ್ ಕಪೂರ್ ಬರೆದ ಸಾಲುಗಳೊಂದಿಗೆ ಈ ಬಾರಿಯ ಮಾತುಗಳನ್ನು ಇಲ್ಲಿಗೆ ನಿಲ್ಲಿಸುವೆ.
ನಿಮ್ಮ ವೃತ್ತಿಯನ್ನು ತುಂಬಾನೆ ಪ್ರೀತಿಸಿ. ಎಷ್ಟೊಂದು ಪ್ರೀತಿಸಿ ಅಂದ್ರೆ ಇಡೀ ಜಗತ್ತೇ ನಿಮ್ಮ ಮುಂದೆ ಬಾಗುವ ಹಾಗೆ…
ಬರುವ ವಾರ ಮತ್ತೊಂದು ವಿಷಯದೊಂದಿಗೆ ಬರ್ತೀನಿ.
ಅಲ್ಲಿಯವರೆಗು ಟೇಕ್ ಕೇರ್.
ಜ್ಯೋತಿ ಇರ್ವತ್ತೂರು,






” ಇನ್ನೊಬ್ಬರ ಜೀವನ, ಆಚಾರ ವಿಚಾರ, ಉಡುಗೆತೊಡುಗೆ ನಮ್ಮ ಜೀವನದೊಂದಿಗೆ ಯಾವೊಂದು ಸಂಬಂಧವೊಂದನ್ನು ಹೊಂದಿಲ್ಲವೆಂದರು ಸಮಾಜಕ್ಕೆ ಅದೇನೋ ವಿಚಿತ್ರ ಕುತೂಹಲ. ಮಾತಾಡಿಕೊಂಡಾಗ ಖುಷಿ.”
You’re right Jyothi. Many times, consequences leave a permanent mark and no one understands this.
ದಂಗಲ್!
Manasige manavatheya salugalu shileyanthe kannige sundhara roopa kotide nimma yeshashugalalli nanna naguvu mane madide