ಥ್ಯಾಂಕ್ಸ್ ಟು ಬಸು…

proof1-ಕೆ ಅಕ್ಷತಾ 
ರಶ್ಮಿ ಹೆಗ್ಡೆಗೆ ಫೋನ್ ಮಾಡಿ ಯಾರು ಹೇಳು ನೋಡೋಣ ಅಂದರೆ ಥಟ್ಟಂತ `ವಿಭಾ’ ಎಂದವಳು ಮರುಗಳಿಗೆಯೇ ಉಹೂಂ ಅಕ್ಷತಾ ಎಂದಳು. ಯಾಕೆ ಅವಳ ಬಾಯಲ್ಲಿ ವಿಭಾಳ ಹೆಸರು ಹಾಗೆ ಥಟ್ಟಂತ ಬಂತೋ ಗೊತ್ತಿಲ್ಲ ಆದರೆ ಇಬ್ಬರೂ ಒಂದರೆಕ್ಷಣ ವಿಭಾಳ ನೆನಪಿನಿಂದ ಮೌನಕ್ಕೆ ಸರಿದೆವು.
ವಿಭಾ,ನಾನು, ರಶ್ಮಿ ಮೂರು ದಿಕ್ಕಿನ ಮೂರು ಜಿಲ್ಲೆಗೆ ಸೇರಿದವರಾದರೂ ನಮ್ಮನ್ನೆಲ್ಲ ಶ್ರೀನಿವಾಸರಾಜು ಅವರ ಕ್ರೈಸ್ಟ್ ಕಾಲೇಜು ಕನ್ನಡ ಸಂಘ ಎಂಬ ಕಾವ್ಯದ ಶಾಲೆ ಬೆಸೆದಿತ್ತು. 2000ನೇ ಇಸ್ವಿಯ ಬೇಂದ್ರೆ ಕವನ ಸ್ಪರ್ಧೆಯ ವಿಜೇತರಲ್ಲಿ ನಾಲ್ಕು ಹೆಣ್ಣುದನಿಗಳು. ನಾವು ಮೂವರು ಮತ್ತು ಛಾಯಾ ಭಗವತಿ. ಆ ವರ್ಷದ ಬಹುಮಾನಿತ ಕವನಗಳ ಸಂಕಲನದ ಹೆಸರು ` ಹುಚ್ಚು ಹೊಳೆಯ ಮೂಲ’.
ಈ ಮೂವರನ್ನು ಆವತ್ತಿನ ಕಾರ್ಯಕ್ರಮದ ನಂತರ ಮತ್ತೆ ಭೇಟಿಯೇ ಆಗಿಲ್ಲದೆ ಇದ್ದರೂ( ರಶ್ಮಿ ಹೆಗ್ಡೆಯನ್ನು ಆರು ತಿಂಗಳ ಹಿಂದೆ ಎಂದರೆ ಎಂಟು ವರ್ಷದ ನಂತರ ಮತ್ತೊಮ್ಮೆ ಮುಖತಃ ಭೇಟಿಯಾದೆ) ನಾವೆಲ್ಲ ಒಟ್ಟಿಗೆ ಕಾವ್ಯ ಬರೆಯಲು ತೊಡಗಿದವರು ಎಂಬ ಅಂಶವೋ ಅಥವಾ ಕ್ರೈಸ್ಟ್ ಕಾಲೇಜು ಕನ್ನಡ ಸಂಘದ ಮೂಲಕ ನಾವು ಕವಿಗಳಾಗಿ ಸಾಹಿತ್ಯ ಜಗತ್ತಿಗೆ ಒಟ್ಟಿಗೆ ಪ್ರವೇಶ ಪಡೆದ ಅಂಶವೋ ನಮ್ಮನ್ನು ಬೆಸೆದಿತ್ತು. ಪದವಿ ಪಡೆದ ಕೂಡಲೇ ಮದುವೆಯಾಗಿ ಸಾಹಿತ್ಯದ ಜಗತ್ತನ್ನೆ ಮರೆತಂತಿದ್ದ ನನಗೆ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತಿದ್ದ ವಿಭಾಳ ಕವಿತೆಗಳು ನನ್ನೊಳಗಿನ ಕವಿಯನ್ನು ಎಬ್ಬಿಸುತಿದ್ದವು. ಮರೆತು ಮಲಗಿದ್ದಿಯಲ್ಲೆ ನೋಡು ವಿಭಾಳನ್ನು ಎಂದು ಅಣಕಿಸುತಿದ್ದವು. ವಿಭಾಳ ಕವಿತೆಯನ್ನು ಓದುತ್ತಾ ಹೆಮ್ಮೆ ತಾಳುತಿದ್ದೆ.
ಹೀಗಿರುವಾಗಲೇ ಬಡಿದಿದ್ದು ವಿಭಾ ಇನ್ನಿಲ್ಲ ಎಂಬ ಬರಿಸಿಡಿಲಿನಂತಾ ಸುದ್ದಿ. ವಿಭಾಳ ಮರಣದ ನಂತರ ಬಂದ ಅವಳ ಜೀವ ಮಿಡಿತದ ಸಂಕಲನ ಓದಿ ಕಣ್ಣೀರಾದೆ. ವಿಭಾಳ `ಕನಸಿನೂರಿನಲ್ಲಿ’, `ಏಕಾಂತ ಸಂಜೆ’, `ಪ್ರೀತಿ’, `ಕದ್ದರೆಂದು’ ಪದ್ಯಗಳು ನನ್ನ all time favourites’
proof2`ಪ್ರಿಯಾ ಅವರು ವಿರೋಧಿಸಬಹುದೆಂದು
ನಿನ್ನ ಭಾವಚಿತ್ರ ಬಳಿಯಿಟ್ಟುಕೊಂಡು
ರಾತ್ರಿಯ ನಿದ್ರೆಯನ್ನು ನಾನು ಹಾಳು ಮಾಡಿಕೊಳ್ಳಲಿಲ್ಲ
ಹೀಗಾಗಿ ನೀನು ಪ್ರತಿ ರಾತ್ರಿ ನನ್ನ ಕನಸುಗಳ ದರಬಾರಿಗೆ
ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ
ವಿಭಾಳ `ಪ್ರೀತಿ’ ಕವನದ ಸಾಲುಗಳು ನನ್ನಲ್ಲೆಬ್ಬಿಸಿದ ಭಾವ ತರಂಗ ಇನ್ನೂ ನವಿರಾಗಿದೆ. ನಾನೇ ಆ ಕವನ ಬರೆದಿದ್ದರೆ ಎಲ್ಲೋ ವಾಚ್ಯ ಮಾಡಿ ಹಾಳು ಮಾಡುತಿದ್ದೆನೇನೋ ಆದರೆ ವಿಭಾ ಮೂರೇ ಮೂರು ಸಣ್ಣ ಸ್ಟಾಂಜಾಗಳಲ್ಲಿ ಪ್ರೀತಿಯನ್ನು ಕಟ್ಟಿಕೊಟ್ಟಿರುವ ಪರಿಯೇ ಅಪೂರ್ವ ಕಾವ್ಯ ಶಿಲ್ಪಕ್ಕೊಂದು ಮಾದರಿ. ಮತ್ತೆ ಏಕಾಂತದ ಸಂಜೆಯಲ್ಲಿ `ಆ ಅವನನ್ನು’ ಧ್ಯಾನಿಸುವ ಪರಿ, `ಕದ್ದರೆಂದು’ ಪರಿತಪಿಸುವುದು ಬೇಡ ಎನ್ನುತ್ತಲೇ ಅವರ ನಿಸ್ಸಾಹಾಯಕತೆಯ ಬಗೆಗೆ ಮೂಡಿದ ಖೇದ, ಕನಸಿನೂರಿನ ಕನಸು ಹೀಗೆ ಬಹುತೇಕ ಕವಿತೆಗಳ ಭಾವ ನಮ್ಮನ್ನು ತುಂಬಿ ಕಾಡುತ್ತದೆ.
ಓರಗೆಯ ಬರಹಗಾರರಲ್ಲಿ ತಾವೆಷ್ಟು ಉದಾರಿ ಎಂದುಕೊಂಡರೂ ಪರಸ್ಪರ ಒಂದು ಹೊಟ್ಟೆ ಕಿಚ್ಚಿನ ಎಳೆ ಇದ್ದೆ ಇರುತ್ತದಂತೆ. ಆದರೆ ವಿಭಾ ನಾವ್ಯಾರೂ ನಿನ್ನ ಕವಿತೆಯ ಬಗ್ಗೆ ಮತ್ಸರ ಪಡದಷ್ಟೂ ನಿಸ್ಸಾಹಾಯಕರಾಗಿ ಮಾಡಿ ನೀನು ಹೊರಟು ಹೋಗಿದ್ದೀಯ. ಆದರೆ ನಿನ್ನ ಅಪೂರ್ವ ಕವಿತೆಗಳು ಹೊಸ ಸಂವೇದನೆಯನ್ನು ನಮ್ಮಲ್ಲಿ ಹುಟ್ಟು ಹಾಕುತ್ತಾ ಕಾವ್ಯದ ಮೋಹಕತೆಯ ಗುಂಗಿಗೆ ನಮ್ಮನ್ನು ತಳ್ಳುತ್ತಾ ನಮ್ಮನ್ನು ನಮ್ಮ ಕವಿತೆಗಳನ್ನು ಪೊರೆಯುತ್ತಿವೆ.
ಈಗ ಬಸು ನೀನು ಅನುವಾದಿಸಿದ ಕೈಫಿ ಆಜ್ಮಿ ಕವಿತೆಗಳನ್ನು ಸಂಕಲನ ತರಲು ಹೊರಟಿದ್ದಾರೆ. ನಾವು ನಿನ್ನ ಅನುವಾದದ ಕೈಫಿ ಆಜ್ಮಿಕವಿತೆಯ ಸಮ್ಮೋಹಕತೆಗೆ ಸಿಲುಕಲು ಹಸಿದು ಕುಳಿತಿದ್ದೇವೆ. ಥ್ಯಾಂಕ್ಸ್ ಟು ಬಸು.

‍ಲೇಖಕರು avadhi

April 3, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. satish patil

    ವಿಭಾಳ ಜೀವ ಮಿಡಿತದ ಸದ್ದು ಪುಸ್ತಕ ಬಿಡುಗಡೆಗೆ ಅಂಥ ನಾನು ಕೊಟ್ಟುರಿನಿಂದ ಗದಗಕ್ಕೆ ಹೋಗಿದ್ದೆ. ಅದೆಷ್ಟೊಂದು ಸ್ನೇಹಿತರು ವಿಭಾಳ ನೆನಪು ಮಾಡಿಕೊಂಡಿದ್ದರು. ನಂತರ ಕೊಟ್ಟೂರಿನಲ್ಲಿ ಅವಳ ಕಾವ್ಯದ ಬಗ್ಗೆ ವಿಚಾರಸಂಕಿರಣ ಏರ್ಪಡಿಸಲಾಗಿತ್ತು. ವಿಭಾ ಮತ್ತು ಅವಳ ನೆನಪು ಸದಾ ಹಸಿರು.
    ಸತೀಶ್ ಪಾಟೀಲ್ , ಹೈದರಬಾದ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: