ಥೂ.. ಪೋಲಿ.. ನಳಿನಾಕ್ಷಿಯ ನಲಿವ ನಡುವಿನಲಿ

ಶೃಂಗಾರವೆಂಬ ಕಟು ವಿಷವೇ ಪೀಯೂಷವೇ…

“ಜೀವಿಸುವ ಜೀವನಕ್ಕೆ ಶೃಂಗಾರ ಗಣಮೇಳಾಪ.
ಇವಿಲ್ಲದ ಜೀವಿಯ ಬಾಳುವೆ ಏತಕ್ಕೆ ಬಾತೆಯಯ್ಯಾ ”

ಎಂದು ತನ್ನೊಂದು ವಚನದಲ್ಲಿ ಮಹಾದೇವಿ ಅಕ್ಕ ಶೃಂಗಾರದ ಮಹತ್ವವನ್ನು ಕುರಿತು ಚರ್ಚಿಸುತ್ತಾಳೆ. ಶೃಂಗಾರ ಲೇಪನವಿಲ್ಲದ ಬದುಕು ಪ್ರಯೋಜನವಿಲ್ಲದ್ದು ಎನ್ನುತ್ತಾಳೆ.

ಪ್ರಪಂಚ ಸಾಹಿತ್ಯವನ್ನು ತೆಗೆದು ನೋಡಿದರೆ ಅರ್ಧಭಾಗ ಸ್ರ್ತೀ- ಪುರುಷ ಪ್ರೇಮದ ವರ್ಣನೆಯೇ ತುಂಬಿದೆ. ಸಾಹಿತ್ಯ ಎನ್ಮುವುದು ಬದುಕಿನ ಕನ್ನಡಿಯೇ ಆಗಿರುವುದರಿಂದ ಶೃಂಗಾರ ಎನ್ನುವುದು ಬದುಕಿನಲ್ಲಿ ಇಲ್ಲದಿದ್ದರೆ ಅಂತಹ ಬದುಕು ಸಪ್ಪೆಯೆನಿಸುತ್ತದೆ.

ಬದುಕನ್ನು ಶೃಂಗರಿಸಲು ಎಲ್ಲಿಂದಲೂ ಸಾಮಗ್ರಿಯನ್ನು ತರಬೇಕಿಲ್ಲ.ನಮ್ಮಲ್ಲೇ ಆ ಸರಕಿದೆ. ಮನುಷ್ಯನ ಪ್ರೇಮ- ಕಾಮ ಶೃಂಗಾರದ ಗಣಿ.ಆ ಗಣಿಯಿಂದ ನಮಗೆ ಬೇಕಾದಷ್ಟು ಕಚ್ಚಾ ಮಾಲನ್ನು ಎತ್ತಿ ತಂದು ಅದನ್ನು ನಮಗೆ ಬೇಕಾದಂದೆ ಅಂದಗೊಳಿಸಿಕೊಂಡರೆ ಸಾಕು ಬದುಕು ಶೃಂಗಾರಮಯವಾಗುತ್ತದೆ. ಇಂಥ ಕೆಲಸವನ್ನು ನಮ್ಮ ಕವಿಗಳು ಈಗಾಗಲೆ ಮಾಡಿ ಹೋಗಿದ್ದಾರೆ. ಅಂಥ ಕವಿಗಳ ಕಾವ್ಯಗಳು ನಮ್ಮ ಶೃಂಗಾರ ಬದುಕಿಗೆ ಕೈಪಿಡಿಗಳಾಗುತ್ತವೆ.

ಅಂಥಹ ಕವಿಗಳ ಕವಿಚಕ್ರವರ್ತಿ ನಮ್ಮ ಭರ್ತೃಹರಿ.

ಭರ್ತೃಹರಿ ಸಂಸ್ಕೃತ ಸಾಹಿತ್ಯ ಇತಿಹಾಸ ಆಗಸದ ಧೃವತಾರೆ.ಇಂದಿಗೂ ಭರ್ತೃಹರಿಯನ್ನು ಮೀರಿಸುವ ಕಾವ್ಯ ಹುಟ್ಟಿಕೊಂಡಿಲ್ಲ.

ಭರ್ತೃಹರಿಯ ಬಗ್ಗೆ ಒಂದು ದಂತಕತೆಯಿದೆ. ಆತ ರಾಜನಾಗಿದ್ದ. ಒಮ್ಮೆ ಅವನು ಆಸ್ಥಾನದಲ್ಲಿ ಕುಳಿತಿದ್ದಾಗ ಅಲ್ಲಿಗೆ ಸಾಧುವೊಬ್ಬನು ಬಂದು, ಮನೋಹರವಾದ ಒಂದು ಫಲವನ್ನು ಅವನಿಗೆ ಕೊಟ್ಟ.’ ಇದನ್ನು ತಿಂದವರು ದೀರ್ಘಾಯುಸ್ಸನ್ನು ಪಡೆಯುವರು’ ಎಂದು ಹೇಳಿದ.

ಸಭೆ ಮುಗಿದ ಮೇಲೆ ರಾಜ ಅಂತಃಪುರದೊಳಗೆ ಹೋದ. “ನಾನೊಬ್ಬನೇ ಬಹುಕಾಲ ಬದುಕಿದ್ದರೆ ಏನು ಫಲ? ನನ್ನ ಪ್ರೇಯಸಿ ದೀರ್ಘಾಯುಸ್ಸನ್ನು ಪಡೆದಿದ್ದರೆ ಮಾತ್ರ ನಾನು ಸುಖ ಪಡಬಹುದು! ” ಎಂದು ಯೋಚಿಸಿದ. ತನ್ನ ರಾಣಿಗೆ ವಿಷಯವನ್ನೆಲ್ಲಾ ತಿಳಿಸಿ ಹಣ್ಣನ್ನು ಅವಳ ಕೈಯಲ್ಲಿಟ್ಟ.

ಅಂದು ಸಂಜೆಯೇ ರಾಣಿಯೂ ರಾಜನಂತೆಯೇ ಸಮಾಲೋಚಿಸಿ, ತನ್ನ ಪ್ರೀತಿಗೆ ಪಾತ್ರನಾಗಿದ್ದ ಅರಮನೆಯ ಕುದುರೆಯ ಚಾಕರನಿಗೆ ಹಣ್ಣನ್ನು ಕೊಟ್ಟಳು. ಅವನೂ ಅದನ್ನು ತಿನ್ನಲ್ಲಿಲ್ಲ; ತನ್ನ ಪ್ರೇಯಸಿಯಾಗಿದ್ದ ಲಾಯ ಗುಡಿಸುತ್ತಿದ್ದವಳಿಗೆ ಕೊಟ್ಟುಬಿಟ್ಟ! ಆದರೆ ಆ ಲಾಯ ಗುಡಿಸುವ ಹೆಣ್ಣಿಗೆ ರಾಜನಲ್ಲಿ ಆಸಕ್ತಿ ಇತ್ತು. ರಾಜ ಸುಖವಾಗಿದ್ದರೆ ಎಲ್ಲರಿಗೂ ಒಳ್ಳೆಯದು”ಎಂಬ ಭಾವನೆ ಅವಳಲ್ಲಿತ್ತು.

ಮರುದಿನ ಬೆಳಿಗ್ಗೆ ಅವಳು ಆ ಹಣ್ಣನ್ನು ರಾಜನಿಗೆ ಕೊಟ್ಟುಬಿಟ್ಟಳು! ರಾಜನಿಗೆ ಶಾಕ್ ಆಯಿತು. ಭರ್ತೃಹರಿಗೆ ಆಗ ಈ ಪ್ರೇಮದ ಟೊಳ್ಳುತನ ಅರಿವಾಗಿ ತನ್ನ ರಾಜ್ಯಕೋಶವನ್ನೆಲ್ಲಾ ಬಿಟ್ಟು ಆತ ಸಂನ್ಯಾಸಿಯಾದ, ಆನಂತರ ಶತಕತ್ರಯಗಳಾದ ನೀತಿ ಶತಕ, ಶೃಂಗಾರ ಶತಕ, ವೈರಾಗ್ಯಶತಕಗಳನ್ನು ಬರೆದ.

ಆತನ ಶತಕತ್ರಯಗಳಲ್ಲಿ ಒಂದಾದ “ಶೃಂಗಾರಶತಕ” ದಲ್ಲಿ ಪ್ರೇಮ, ಕಾಮಗಳ ವೈಶಿಷ್ಟ್ಯಗಳನ್ನು ವಿವರಿಸುತ್ತಲೇ, ಅವುಗಳ ವೈಚಿತ್ರ್ಯವನ್ನೂ ಹೇಳುತ್ತಾನೆ.

ಭರ್ತೃಹರಿಯು ತನ್ನ ಶೃಂಗಾರ ಶತಕದಲ್ಲಿ ಸ್ರ್ತೀ ಪ್ರಶಂಸೆ, ಸುರತ ವರ್ಣನೆ, ಹಾಗೂ ಋತುವರ್ಣನೆ ಮಾಡಿದ್ದಾನೆ ಇಲ್ಲೆಲ್ಲಾ ಆನಂಧವರ್ಧನನ ತನ್ನ ಧ್ವನ್ಯಾಲೋಕದಲ್ಲಿ ಹೇಳುವ ” ಶೃಂಗಾರ ಏವ ಮಧುರಃ ಪರಪ್ರಹ್ಲಾದನೋರಸಃ ” ಎಂದು ಶೃಂಗಾರದ ಪರಮಮುಖ್ಯತತ್ವವನ್ನು ಭಟ್ಟಿ ಇಳಿಸಿ ಹೇಳಿದ್ದಾನೆ.

ಮೊದಲಿಗೆ ಸ್ರ್ತೀ ಪ್ರಶಂಸೆ ಎಂಬ ಭಾಗದಲ್ಲಿ ಹೆಣ್ಣು ಗಂಡನ್ನು ಆಕರ್ಷಿಸುವ ಶೃಂಗಾರ ಸಾಧನಗಳಾವುವು,ಮತ್ತು ಅವುಗಳ ವೈಶಿಷ್ಟ್ಯತೆಗಳ ಬಗ್ಗೆ ಹೇಳುತ್ತಾ

ವೇದಾಂತಿಯ ಮಾತು ನಿಜ
ಇಂದ್ರಾದಿ ದೇವತೆಗಳ
ತನ್ನ ವಾರೆ ನೋಟದಲೆ
ಮಣ್ಣು ಮುಕ್ಕಿಸಿದ ಹೆಣ್ಣು
ಅಬಲೆಯಲ್ಲ.
ಅಬಲೆ ಎನ್ನುವ
ಈ ಕವಿಗಳಿಗೆ
ನಿಜಕ್ಕೂ ಬುದ್ಧಿಯಿಲ್ಲ.

– ಎಂದು ಹೇಳಿ ಅಂಥಾ ಸೃಷ್ಟಿಕರ್ತರನ್ನೆ ತಮ್ಮ ಕೈಕೊಂಬೆಗಳನ್ನಾಗಿಸಿದ ಶೃಂಗಾರ ಮೂರ್ತಿಗಳಾದ ಹೆಣ್ಣುಗಳು ಇನ್ನು ಈ ಮರ್ತ್ಯದ ಸಾಮಾನ್ಯ ಗಂಡು ಪ್ರಾಣಿಗಳನ್ನು ಏನೇನು ಮಾಡಬಹುದು ಎಂದು ಮುಂದೆ ವಿವರಿಸುತ್ತಾನೆ.

ಹೆಣ್ಣು ತನ್ನ

“ವಾರೆನೋಟ, ಲಜ್ಜೆ, ಭಯ, ಬಗೆಬಗೆಯ ಸಲ್ಲಾಪ, ಮುಗುಳ್ನಗು, ಪ್ರೇಮಕಲಹಗಳೆಂಬ ಆಟಗಳ ಅಸ್ತ್ರಗಳಿಂದ ಪುರುಷನ ಕಟ್ಟಿ ಹಾಕುವಳು “

ಎಂದು ಇದು ಶೃಂಗಾರದ ಮೊದಲ ಪಾಠ ಎನ್ನುತ್ತಾನೆ.
ಮುಂದುವರೆದು

“ಕಮಲಮುಖಿ,
ಸುಳಿಕಣ್ಣು ,
ಬಂಗಾರದ ಮೈ ಬಣ್ಣ, ದುಂಬಿಗಳಂತೆ ಕಪ್ಪಾದ ತಲೆಗೂದಲ ರಾಶಿ
ಮದ್ದಾನೆ ಕುಂಬಸ್ಥಳದಂತಿರುವ ಕುಚದ್ವಯ,
ತುಂಬು ನಿತಂಬ,
ಸಿಹಿ ಮಾತು”

ಇವು ಅವಳ ಅಲಂಕಾರಗಳು ಎನ್ನುತ್ತಾನೆ.
ಮುಂದೆ ಗಂಡಿನ ಇಂದ್ರಿಯ ಸುಖವೆಲ್ಲಾ ಹೆಣ್ಣಲ್ಲೆ ಅಡಗಿದೆ ಎಂದು ಹೇಳಿ ಅದನ್ನು ಹೀಗೆ ವರ್ಣಿಸುತ್ತಾನೆ.

“ಇಂದ್ರಿಯಗಳ ಪುಣ್ಯವಡಗಿಹುದು
ಹೆಣ್ಣಕಾಯದಲಿ.
ಅವಳ ಮೊಗ ನೋಡುವುದು
ಕಣ್ಣಿನ ಪುಣ್ಯ.
ಗಂಧದುಸಿರ
ಮೂಸುವುದು
ಮೂಗಿನ ಪುಣ್ಯ.
ಕಿವಿಯ ಪುಣ್ಯ
ಅವಳ ಸವಿಮಾತ ಕೇಳುವುದು.
ಅವಳ ಅಧರಾಮೃತ
ಹೀರುವುದು
ನಾಲಗೆಯ ಪುಣ್ಯ.”

ಇಂಥ ಶೃಂಗಾರದ ಹೆಣ್ಣಿನ ಅಂದಕೆ ಮಾರುಹೋಗದ ಗಂಡಿಲ್ಲ ಲೋಕದಲಿ ಎಂದು ಹೇಳುತ್ತಾ

“ಹೊಂಬಣ್ಣವ ಸೂಸುವ ದೇಹ
ಕಂಠೀಹಾರವ ಕುಣಿಸುವ ಕುಚಗಳು.
ನೂಪುರದ ಹಂಸದ್ವನಿ
ಬಂಗಾರದ ಪಾದಗಳ ನವತರುಣಿಯ ಬಲೆಗೆ
ಬೀಳದ ಗಂಡು ಮಿಕಗಳೆ ಇಲ್ಲ ಲೋಕದಲಿ.
ಎನ್ನುತ್ತಾನೆ.

ಇಂಥ ಶೃಂಗಾರದ ಜಾಲಕ್ಕೆ ಸಿಕ್ಕ ಗಂಡು ಹೆಣ್ಣುಗಳ ಪರಿಸ್ಥಿತಿ ಎಂತಹದು ಎಂಬುದನ್ನು ಮುಂದಿನ ಹಲವಾರು ಪದ್ಯಗಳಲ್ಲಿ ತಿಳಿಸುತ್ತಾನೆ.

ಅಂದು

ಉದ್ದನೆಯ
ಕಾಳಸರ್ಪದ
ಆನಂದ ಎಂಬ
ಅದರ ಹೆಡೆಯ
ಬಳುಕಿನ ಬಾಯಿಗೆ
ನಾನೊಮ್ಮೆ ಸಿಕ್ಕೆ.
ಅದೃಷ್ಟವಶಾತ್
ಗಾರುಡಿಗರು ಸಿಕ್ಕಿ ವಿಷವಿಳುಹಿ ನನ್ನ ಉಳಿಸಿದರು.

ಇಂದು ಈ ಹೆಣ್ಣ ಕುಡಿನೋಟದ
ಕಾಳಸರ್ಪವು ಕಚ್ಚಿದೆ
ಹುಡುಕುತ್ತಿದ್ದೇನೆ
ಇದರ
ವಿಷವಿಳಿಸುವ
ಮದ್ದೂ ಇಲ್ಲ
ಗಾರುಡಿಗರೂ ನಾಪತ್ತೆ.

ಮನ್ಮಥನ ಕಾಟ
ಮಲರೋಗ ಇದ್ದಂತೆ
ಉನ್ಮಾದ,ಭ್ರಾಂತಿಗಳು
ಆ ರೋಗದ ಕುರುಹುಗಳು.
ಯಾವ ಮಂತ್ರ,ಮದ್ದುಗಳಿಗೂ
ಹೋಗದು,
ಯಾವ ಯಾಗ,ಶಾಂತಿಗೂ
ಬಗ್ಗದು.

“ಹೆಣ್ಣಿನ ಸಂಗ
ಬದುಕೇ ಭಂಗ” ಎಂದುಪದೇಶಿಸುವ,
ಪೊಳ್ಳು ತತ್ವಜ್ಞಾನಿಗಳು,
ಆಚಾರ್ಯರು,
ಹಿರಿಯರೆನ್ನಿಸಿಕೊಂಡವರು
ನಳಿನಾಕ್ಷಿಯ
ನಲಿವ ನಡುವಿನಲಿ
ಹೊಳೆವ ರತುನದ ಡಾಬುಳ್ಳ
ತುಂಬು ನಿತಂಬವ ನೋಡದೇ ಇರುವವರೇ ?

ಲೋಕದೊಳು
ಮದಿಸಿದಾನೆಯ
ಮೆಟ್ಟಬಲ್ಲವರು
ಕುದಿವ ಸಿಂಹವ
ಕೆಡಹ ಬಲ್ಲವರು ಬಹಳ.
ಆದರೆ
ಮದನನ ಮದವ
ಅಡಗಿಸಬಲ್ಲವರು ವಿರಳ.

ಆ ಸೃಷ್ಟಿಕರ್ತನೂ
ಅಸಹಾಯಕ
ಉನ್ಮತ್ತ ಪ್ರೇಮದಲಿ ಹುಚ್ಚೆದ್ದ ಹೆಣ್ಣಿನ ಎದುರು !

ಎಚ್ಚರೆಚ್ಚರ ಹೆಸರು,ಖ್ಯಾತಿ,ಪಾಂಡಿತ್ಯ
ಸತ್ಕುಲ,ವಿವೇಚನೆ ಎಂಬುವು
ಕಾಮಾಗ್ನಿಯ ಚಿತೆಯಲಿ ಬೆಂದು ಬೂದಿಯಾಗುವವು …

ಸರ್ವ ರತ ಸುಖಗಳ
ಸಾಕಾರ ಮೂರ್ತಿ ಹೆಣ್ಣೆಂಬ
ಸತ್ಯವ ಮರೆತು,
ಅದ ಕಡೆಗಣಿಸಿ,
ಸ್ವರ್ಗ ಮೋಕ್ಷಗಳೆಂಬ
ಮೃಗಜಲವ ಬಯಸಿ
ಹೋಗುವ ಹೆಡ್ಡರನು
ದಿಗಂಬರ,ಬೋಳು ಸಂನ್ಯಾಸಿ,ಪಂಚಶಿಖೆಯತಿ,
ಜಟಾಧಾರಿ,ಕಾಪಾಲಿಕನನ್ನಾಗಿಸಿ
ಸೇಡು ತೀರಿಸಿಕೊಂಬ
ನಮ್ಮ ಮಾರ.

ಮುಂದೆ ಭರ್ತೃಹರಿ
ಸುರತ ವರ್ಣನೆ ಎಂಬ ಭಾಗದಲ್ಲಿ ಹೆಣ್ಣಿನ ಶೃಂಗಾರ ಸುರತ ಗಂಡಿಗೆ ಮೋಕ್ಷಗಾಮಿಯಾದದ್ದು ಎಂದು ವಿವರಿಸುತ್ತಾನೆ.

ಬೆಳಕ ಕೊಡುವ ಅಗ್ನಿ
ಸೂರ್ಯ ಚಂದ್ರ ಚುಕ್ಕೆಗಳಿದ್ದರೂ
ಹೊಳೆವ ಕಂಗಳ
ನನ್ನವಳು
ಬಳಿಯಿರದಿರೆ
ಕತ್ತಲ ಕೋಣೆ
ಈ ಜಗ
ನನಗೆ…

ನಿನ್ನ ಭಾರ ಸ್ತನಗಳೆ ಗುರುವು
ಹೊಳೆಯವ ಮೊಗದಲಿಹರು
ಸೋಮಸೂರ್ಯರು
ನಡಿಗೆಯಲಿಹನು ಶನೈಶ್ಚರನು
ನಿನ್ನ ದೇಹವೊಂದು
ಗ್ರಹಮಂಡಲ.

ಮೋಹಕ ಮೊಗವು
ಮುಡಿದ ಮಲ್ಲಿಗೆಯು
ಚಂದನಲೇಪಿತ ಮೆಯ್ಯು
ಎದೆಯ ಮೇಲೊರಗಿ
ರತ ಸುಖವ
ಬಯಸುವ
ಪ್ರಿಯತಮೆಯು ಇವು
ನಾಕಕ್ಕೆ ಕಟ್ಟಿದ
ಮೆಟ್ಟಿಲುಗಳು.

ಯೋಜಿತ ರತದೋಳು
ರತಶಿಖರವನೇರಿ
ಸುಖಿಸುತ,
ಅರೆನಿಮಿಲಿತ
ಗಂಡು- ಹೆಣ್ಣು
ಮುಕ್ತಿಯ
ಹೊಸ್ತಿಲೊಳಿರುವ
ಸಾಧಕರು.
ಎಲೆ ಕಿವಿಯೇ ಕೇಳು
ಅವಳ ಇನಿದನಿ ಸಂಗೀತವ,
ಕಣ್ಣೇ ನೋಡವಳ
ಮೋಹಕ ಕುಣಿತವ
ನಾಸಿಕವೇ ಆಘ್ರಾಣಿಸು
ಅವಳ ಗಂಧ ಲೇಪಿತ ಮೈಯ್ಯ,
ನೀ ಸ್ಪರ್ಶಿಸು
ಅವಳ ಗುಬ್ಬಕ್ಕಿ ಮೊಲೆಗಳ
ತಿಳಿ ಮನವೆ
ಇಂದ್ರಿಯಗಳು
ಮೋಕ್ಷದ ಸಾಧನಗಳಲ್ಲವೇ..

ಅವಳು ಮುಡಿದ
ಮಲ್ಲಿಗೆ ಮಾಲೆ
ಮದನ ಮೋಹಿತ ಮೊಗವು
ಕೆಂಬಣ್ಣದ ಗಂಧಲೇಪಿತ ದೇಹ
ಎದೆಯ ಮೇಲೊರಗಿ
ಸುರತ ಬಯಸುವ
ಪ್ರಿಯತಮೆ
ಇವು ಸಗ್ಗ ಸೋಪನವಲ್ಲವೆ…

ಹೀಗೆ ಭರ್ತೃಹರಿಯು ಶೃಂಗಾರಪ್ರಪಂಚದ ಎಲ್ಲ ದಾರಿಗಳನ್ನೂ ತೆರದು ಅಲ್ಲಿ ಗಂಡು ಹೆಣ್ಣು ಸ್ವೇಚ್ಛೆಯಾಗಿ ನಡೆದಾಡಲು ಹೇಳುತ್ತಾನೆ.

‍ಲೇಖಕರು avadhi

July 29, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: