ಖ್ಯಾತ ಕಾರ್ಮಿಕ ಮುಂದಾಳು, ಭಾರತ ಕಮ್ಯೂನಿಸ್ಟ್ ಪಕ್ಷದ ಹಿರಿಯರಾದ ಎಚ್ ವಿ ಅನಂತ ಸುಬ್ಬರಾವ್ ಅವರು ನಿನ್ನೆ ನಿಧನ ಹೊಂದಿದರು
ಅವರ ನೆನಪಿಗೆ ನಾ ದಿವಾಕರ್ ಅವರು ಬರೆದ ಕವಿತೆ ಇಲ್ಲಿದೆ-
ಚಿತ್ರದಲ್ಲಿ ಅನಂತಸುಬ್ಬರಾವ್ ಅವರು ತಮ್ಮ ಮಗಳು ಮಹಿಳಾ ಚಳವಳಿಯ ಮುಂದಾಳು ಜ್ಯೋತಿ ಅವರೊಂದಿಗೆ
ಲಾಲ್ ಸಲಾಂ ಸುಬ್ಬರಾಯರೇ

-ನಾ ದಿವಾಕರ
ನೀವೊಮ್ಮೆ ಹೇಳಿದ ನೆನಪು
ಕೊನೆಗಳಿಗೆಯಲಿ ಎದೆಯೊಳಗೊಂದು
ಭಾವ ಸ್ಫುರಿಸಿದರೆ ಸಾಕು ಕಣೋ ,,,,,,,
” ಸಮಾಜಕ್ಕೆ ಏನೋ ಕೊಟ್ಟು ಹೋಗುತ್ತಿದ್ದೇನೆ
ಹೆಜ್ಜೆ ಕರುಹುಗಳ ಬಿಟ್ಟು ಹೊರಟಿದ್ದೇನೆ ” ಎಂದು ,
ಥಟ್ಟನೆ ಹೊರಟೇ ಬಿಟ್ಟಿರಲ್ಲಾ ಕಾಮ್ರೇಡ್ !
ನಿಮ್ಮ ತಣ್ಣನೆಯ ದೇಹ
ಶೀತ ಪೆಟ್ಟಿಗೆಯಲಿ ವಿರಮಿಸುವುದ ಕಂಡಾಗ
ನೆನಪಾದುದು ನೀವು ದಾನ ಮಾಡಿದ್ದ
ಅಮೂಲ್ಯ ಮಿದುಳು ಕಣ್ಗಳು ಇತ್ಯಾದಿ
ನೆರೆದ ಜನಸ್ತೋಮದ ಒಕ್ಕೊರಲ ಕೂಗು
” ಅಮರ್ ರಹೇ ಕಾಮ್ರೇಡ್ ಅಮರ್ ರಹೇ “
ಬಿಟ್ಟು ಹೋದ ಹೆಗ್ಗುರುತುಗಳ ಚಿಹ್ನೆ ;
ಅಲ್ಲಿ ಮಾರ್ದನಿಸುತ್ತಿದ್ದುದು
ಅಭಿಮಾನದ ದನಿಯಲ್ಲ ಕಾಮ್ರೇಡ್
ಆರಾಧನೆಯ ಕೊರಳುಗಳಲ್ಲ
ನೂರಾರು ಸಂಗಾತಿಗಳ ಆಂತರ್ಯದ ನೋವು
ನಾಯಕನ ಅಗಲಿಕೆಯ ವೇದನೆ
ದಶಕಗಳ ನಿಸ್ಪೃಹ ಸೇವೆಯ ಮೂಕ ಸ್ಮರಣೆ ;
ಕರುಳುಬಳ್ಳಿಯ ಸೋಂಕಿಲ್ಲದ ಬಾಂಧವ್ಯಕೆ
ಹೆಸರೇನುಂಟು ಕಾಮ್ರೇಡ್ ?
ನೋಡುತ್ತಾ ಕೇಳುತ್ತಾ ಒಡನಾಡುತ್ತಾ ಬೆಳೆದ
ಈ ಜೀವದಂಗಳದಲಿ ನೀವು ನೆಟ್ಟ ಸಸಿಗಳು
ಹೆಮ್ಮರಗಳಾಗಿವೆಯಲ್ಲಾ ,,,,,
ಇನ್ನೇನ ಬಯಸಲಿ ಕಾಮ್ರೇಡ್ ?
ಹೊರಟುಬಿಟ್ಟಿರಿ ಒಂದು ಮಾತ ಹೇಳದೆ
ನಿಮಗೇ ಅರಿವಿಲ್ಲದೆ
ಇರಬಾರದಿತ್ತೇ ಎಂದು ಯಾರನ್ನು ಕೇಳಲಿ ?
ಇರಬೇಕಿತ್ತೆಂದು ಸಾರಿಸಾರಿ ಹೇಳಬಲ್ಲೆ
ಹೌದು ಕಾಮ್ರೇಡ್ ಇನ್ನೂ ಇರಬೇಕಿತ್ತು
ಶ್ರಮಿಕರ ಬೆವರಳಿಸಲು ಉಳ್ಳವರ ಬೆವರಿಳಿಸಲು
ಇರಬೇಕಿತ್ತು ;
ಕುಸಿಯುತ್ತಿರುವ ಮೌಲ್ಯಗಳ ಅಂಗಳದಲಿ
ಮರೆಯಾಗಿಹ ಆದರ್ಶಗಳ ಜಾತ್ರೆಯಲಿ
ಮನುಜ ಸಂಬಂಧಗಳು ಸರಕುಗಳಾಗಿರುವಾಗ
ಈ ಹಾಳು ಸಂತೆಯಲೊಬ್ಬ ಸಂತ
ಬೇಕಲ್ಲವೇ ಕಾಮ್ರೇಡ್ ?
ಇರಬಹುದು ನೂರು ಸಾವಿರ ,
ನಾ ಕಂಡ ಬೆರಳೆಣಿಕೆಯ ನಿತ್ಯ ಸಂತರಲಿ
ಒಬ್ಬರಲ್ಲವೇ ನೀವು ?
ಹ್ಞೂ ಎನ್ನಲು ನೀವಿಲ್ಲ ಬಿಡಿ
ನಿಮ್ಮ ಹೆಜ್ಜೆ ಗುರುತುಗಳಿವೆ
ದುಡಿವ ಕಾರ್ಮಿಕರ ಬೆವರ ಹನಿಗಳಲಿ
ನಿಮ್ಮ ಈ ಮಾನಸ ಸೋದರನ
ಹೃದಯಾಂತರಾಳದಲಿ , ಸ್ಮೃತಿಯಾಗಿ ;
ಮತ್ತೊಮ್ಮೆ ಹುಟ್ಟಿ ಬನ್ನಿ ಎನ್ನಲೇ ?
ಇಲ್ಲ, ನೀವು ಮರಳುವುದಿಲ್ಲ
ನಿಮ್ಮೊಳಗಿದ್ದ ಸರಳ ನಿಸ್ಪೃಹ ಜೀವ
ಇನ್ನು ಕೈಗೆಟುಕುವುದಿಲ್ಲ ;
ಚಿಂತೆಯಿಲ್ಲ ಬಿಡಿ ಕಾಮ್ರೇಡ್
ಹಾಕಿಕೊಟ್ಟ ಹಾದಿಯಿದೆ ನೆಟ್ಟ ಸಸಿಗಳಿವೆ
ಬಿರಿವ ಮೊಗ್ಗುಗಳಿವೆ
ನಾಳೆಯ ಕನಸುಗಳ ಮತ್ತೆ ಅರಳಿಸಲು
ಈ ಜೀವದಲಿ ಉಸಿರಿದೆ
ಅದರೊಳಗೊಂದು ಕಣ ನೀವಾಗಿರಿ
ಕೊನೆಯವರೆಗೂ ;
ಹೇಳದೆಯೇ ಹೊರಟಿರುವಿರಿ
ಹೋಗಿಬನ್ನಿ ಎನ್ನಬೇಕೇ ?
ಎಲ್ಲಿಗೂ ಹೋಗದಿರಿ ಕಾಮ್ರೇಡ್
ನಮ್ಮೊಳಗೊಂದಾಗಿರಿ ನಗುತ್ತಾ ನಗಿಸುತ್ತಾ
ಅರಿವಿನ ಕುಸುಮಗಳನರಳಿಸುತ್ತಾ
ಆ ಹೆಜ್ಜೆ ಕುರುಹುಗಳು ಚಿರಸ್ಥಾಯಿಯಾಗಲಿ
ನಮ್ಮೆದೆಯ ಅಂಗಳದಲಿ ;
ಲಾಲ್ ಸಲಾಂ ಕಾಮ್ರೇಡ್ ,
ಕೊನೆಯದಾಗಿ
ಒಂದೆರಡು ಹನಿಗಳು ನೆಲ ಸೇರಲಿ
ಅವುಗಳಲ್ಲಡಗಿದೆ ನಿಮ್ಮ ಚಹರೆ
ನೀವಿತ್ತ ಮೌಲ್ಯಾದರ್ಶಗಳ ಹೆಬ್ಬಯಲು
ಕಂಡ ಕನಸುಗಳ ಮಹಲು !






ತುಂಬಾ ಮನಸ್ಪರ್ಶಿ!
ಗೌರವಾದರದ ನಮನ!
— ಶ್ಯಾಮಲಾ ಮಾಧವ
Thank you madam