ತೇಜಸ್ವಿ ಸತ್ತ ದಿನ..

ಗಿರಿಧರ್ ಖಾಸನೀಸ್

ದೇವರ ಮೇಲೆ ಆಣೆ. ತೇಜಸ್ವಿಗೂ ನನಗೂ ಯಾವ ಸಂಬಂಧವೂ ಇಲ್ಲ. ನಾನು ಅವರನ್ನು ನೋಡಿಲ್ಲ. ಅವರ ಪುಸ್ತಕ ಓದಿಲ್ಲ. ಅವರು ಮಾತಾಡಿದ್ದು ಕೇಳಿಲ್ಲ. ಶಾಲೆಯಲ್ಲಿ ಅವರ ಭಾವಚಿತ್ರ ನೋಡಿದ್ದೇನೆ ಅಷ್ಟೇ.

ಹುಟ್ಟಿದ ಆರು ತಿಂಗಳಿಗೇ ಅನಾಥನಾದೋನು ನಾನು. ಯಾರೋ ಪುಣ್ಯಾತ್ಮರು ಮದುವೆಯಾಗಿ ಆರು ವರುಷವಾದರೂ ಮಕ್ಕಳಾಗದ ದೂರದ ಸಂಬಂಧಿಕರು ನನ್ನನ್ನು ಈ ಊರಿಗೆ ಕರ್ಕೊಂಡು ಬಂದು ಇಟ್ಟುಕೊಂಡರು. ನನ್ನ ಕಾಲ್ಗುಣದ ಫಲವೋ ಗ್ರಹಚಾರವೋ ಅವರಿಗೆ ವರ್ಷಕ್ಕೊಂದರಂತೆ ಸಾಲಾಗಿ ಮೂರು ಮಕ್ಕಳಾಗಿ ಹೋದವು. ಎರಡು ಹೆಣ್ಣು ಆಮೇಲೆ ಒಂದು ಗಂಡು.

ಗಂಡು ಪಾಪು ಆದ ಮೇಲೆ ಇನ್ನು ಮುಂದೆ ನಮ್ಮನ್ನು ಅಪ್ಪ ಅಮ್ಮ ಅಂತ ಕರೀಬೇಡ, ಚಿಕ್ಕಪ್ಪ ಚಿಕ್ಕಮ್ಮ ಅನ್ನು ಅಂತ ಅವರು ಹೇಳಿದ್ದು ನನಗಿನ್ನೂ ನೆನಪಿದೆ. ಇನ್ನೊಂದು ದಿನ ನೀನೇ ಸ್ನಾನ ಮಾಡೋದನ್ನ ಕಲಿ ಅಂತ ಚಿಕ್ಕಮ್ಮ ಬಚ್ಚಲಲ್ಲಿ ನಿಲ್ಲಿಸಿ ಹೋದಳು. ಬಾಗಿಲು ಸರಿಸಿ ಬಟ್ಟೆ ಬಿಚ್ಚಿ ಮತ್ತೆ ಅನಾಥನಾಗಿ ಹೋದೆ.

ಅವರನ್ನು ದೂಷಿಸುವುದು ತಪ್ಪು. ಎಷ್ಟಾದರೂ ಎಂಟೊಂಬತ್ತು ವರ್ಷ ಆಶ್ರಯ ಕೊಟ್ಟರಲ್ಲ. ಊಟ ಹಾಕಿದರಲ್ಲ. ಗವರ್ನಮೆಂಟ್ ಸ್ಕೂಲೇ ಆಗ್ಲಿ ನಾಲ್ಕು ಅಕ್ಷರ ಕಲಿಸಿದರಲ್ಲ. ಅದಕ್ಕೆ ಮುಂಜಾನೆ ಮನೆಯಿಂದ ಹೊರಟಾಗ ಅವರ ಕಾಲಿಗೆ ನಮಸ್ಕಾರ ಮಾಡಲು ಮರೀಲಿಲ್ಲ.

ಅದೆಲ್ಲ ಸರಿ, ಇಂದಿನ ಕತೆ ಏನಪ್ಪಾ ಅಂದ್ರೆ…

ಮೊನ್ನೆ ರಿಸಲ್ಟ್ ಬಂದು ನಾನು ಐದನೇ ಕ್ಲಾಸಿನಲ್ಲಿ ಪಾಸ್ ಆದೆ. ‘ಓದಿದ್ದು ಸಾಕು, ಚಾಕರಿ ಮಾಡು. ನಿನ್ನ ಕಾಲ ಮೇಲೆ ನೀನು ನಿಲ್ಲೋದು ಕಲಿ’ ಅಂತ ಚಿಕ್ಕಪ್ಪ ಉಪದೇಶ ಮಾಡಿದರು. ಈವತ್ತು ಬೆಳಿಗ್ಗೆ ‘ಬಾ ಪಾಪಣ್ಣನ ಪ್ರೆಸ್ಸಿಗೆ ಒಬ್ಬ ಹುಡುಗ ಬೇಕಂತೆ ಮಾತಾಡಿದ್ದೀನಿ’ ಅಂತ ಇಲ್ಲಿಗೆ ಕರ್ಕೊಂಡು ಬಂದ್ರು.

ಪ್ರೆಸ್ಸಿನ ಯಜಮಾನ್ರು ನನ್ನ ನೋಡಿದ್ರು. ನಾಲ್ಕು ಮಾತಾಡಿಸಿದ್ರು. ಹಳೇ ಪತ್ರಿಕೆ ತೆಗೆದು ಎರಡು ಪ್ಯಾರಾ ಓದು ಅಂದ್ರು. ಪೆನ್ನು ಪೇಪರ್ ಕೊಟ್ಟು ತೋಚಿದ ವಿಷಯದ ಮೇಲೆ ಬರಿ ಅಂದ್ರು. ಅದಕ್ಕೆ ಇಲ್ಲಿ ಕೂತಿದ್ದೀನಿ.

ಪೆನ್ನು ತೆಗೆದ ತಕ್ಷಣ ತಾನಾಗಿ ಉರುಳುರುಳಿ ಬಂದ ಪದಗಳೇ ಇವು. ‘ತೇಜಸ್ವಿ ಸತ್ತ ದಿನ…’ ಮುಂದೇನು ಬರಿಯೋದು? ಏನು ಬರೆದರೂ ಕೆಲಸ ಕೊಡ್ತಾರೆ, ನನಗ್ಗೊತ್ತು. ಚಿಕ್ಕಪ್ಪ ಎಲ್ಲ ಮಾತಾಡಿರ್ತಾರೆ. ಪ್ರೆಸ್ಸಲ್ಲಿ ಸಹಾಯಕ ಅಂದ್ರೆ ಏನೂ ಅಂತಾನೂ ಗೊತ್ತು. ಕಸ ಹೊಡಿಯೋದು, ಸಾಮಾನು ಎತ್ತಿ ಇಡೋದು, ಡೆಲಿವರಿ ಮಾಡೋದು, ಯಜಮಾನರ ಮನೆ ಕೆಲಸ… ಆಲ್ ಇನ್ ಆಲ್.

ಒಂದೆರಡು ತಿಂಗಳಾದ ಮೇಲೆ ಚಿಕ್ಕಪ್ಪ ಹೇಳ್ತಾರೆ: ‘ನೋಡು ಮರಿ, ಪ್ರೆಸ್ಸಿನ ಪಕ್ಕದಲ್ಲೇ ರೂಮಿನ ವ್ಯವಸ್ಥೆ ಮಾಡ್ತಾರಂತೆ. ಅಲ್ಲೇ ಹಿತ್ತಲಲ್ಲೇ ಬಚ್ಚಲೂ ಇದೆಯಂತೆ. ಊಟ ತಿಂಡಿಗೆ ಹತ್ತಿರಾನೆ ಖಾನಾವಳಿಗಳಿವೆ. ಏನಾದರೂ ತೊಂದರೆ ಆದರೆ ನಾನಿದ್ದೇನೆ. ಚಿಂತೆ ಮಾಡಬೇಡ…’

ಇರೋ ನಾಲ್ಕು ಬಟ್ಟೆಯನ್ನು ಬ್ಯಾಗಿನಲ್ಲಿ ಹಾಕಿ ಚಿಕ್ಕಪ್ಪ ಚಿಕ್ಕಮ್ಮನ ಕಾಲ್ಮುಟ್ಟಿ ನಮಸ್ಕರಿಸಿ ಬೀದಿಗೆ ಬರುವ ದಿನ ಸ್ಪಷ್ಟವಾಗಿ ಕಾಣುತ್ತಿದೆ.

‘ಏನು ಮಹರಾಯ, ಯೋಚನೆ ಮಾಡ್ತಾ ಕೂತಬಿಟ್ಟೀ,
ನಾಲ್ಕು ಲೈನು ಬರೆಯೋಕ್ಕೆ ಇಷ್ಟು ಸಮಯ ಬೇಕಾ?…’

‘ಇಲ್ಲ ಯಜಮಾನರೇ, ಈಗ ಮುಗಿಸ್ತೀನಿ…’

ಪೆನ್ನನ್ನೊಮ್ಮೆ ಒದರುತ್ತೇನೆ. ಅದಕ್ಕೆ ಹೊಸ ಜೀವ ಬರುತ್ತದೆ. ಪದಗಳು ಮತ್ತೆ ಉರುಳುರುಳಿ ಹೊರಬರುತ್ತವೆ.

‘ಮುಂಜಾನೆ ಎಂದಿನಂತೆ ಸೂರ್ಯ ಹುಟ್ಟಿದ. ಕೋಳಿ ಕೂಗಿತು. ಅದರ ಕತ್ತು ಕತ್ತರಿಸಿ ರೆಕ್ಕೆಪುಕ್ಕ ಸುಲಿದು ಕಂಬಿಗೆ ಕಾಲು ಸಿಕ್ಕಿಸಿ ಶಾಪಿನ ಮುಂದೆ ನೇತಾಕಿದರು. ಬಿಸಿ ಬಿಸಿ ಕೋಳಿ ಬಿರಿಯಾನಿ ತಿಂದು ತೇಗಿ ಕೈತೊಳೆಯಲು ಎದ್ದವರು ಹಾಗೆ ಎದೆ ಒತ್ತಿಕೊಂಡು ಬಿದ್ದುಬಿಟ್ಟರು. ಹೊರಗೆ ಕಂಪೌಂಡಿನ ಮೇಲೆ ಬೆದರುಗೊಂಬೆಯ ಹಾಗೆ ಕೂತಿದ್ದ ಓತಿಕ್ಯಾತ ಹಿತ್ತಲಲ್ಲಿದ್ದ ಬಚ್ಚಲಿನ ಕಡೆ ಓಡಿತು’.

‍ಲೇಖಕರು avadhi

April 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: