ಎಲ್.ಸಿ. ನಾಗರಾಜ್
ಕಳೆದ ಒಂದು ವಾರದಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಕೆಲವು ಸ್ವಯಂಘೋಷಿತ ವಿಚಾರವಾದಿಗಳು ಹೊರಡಿಸುತ್ತಿರುವ ಫತ್ವಾಗಳನ್ನ ನೋಡಿದೀನಿ. ಇವರು ‘ಡಿ.ಕೆ.ಶಿವಕುಮಾರ್ ಭ್ರಷ್ಟ, ಶಿಕ್ಷೆ ಅನುಭವಿಸಬೇಕು’ ಎಂದಷ್ಟೇ ಹೇಳಿದ್ದರೆ ಇದು ಮಾಮೂಲಿ ರಾಜಕಾರಣದ ಅಧಿಕಾರ ವ್ಯೂಹದ ಬಗೆಗಿನ ಸಾತ್ವಿಕ ಸಿಟ್ಟು ಅಂತಾ ತಿಳಿಯಬಹುದಿತ್ತು.
ಆದರೆ ಈ ವಿಚಾರವಾದಿಗಳಿಗೆ ಮಹಾವಿಷ್ಣುವಿನ ಅವತಾರ ಎತ್ತಿ ಬಂದಿರುವ ಮನುಷ್ಯನಿಂದಲೇ ದಂಡನೆಯಾಗುತ್ತಿರುವ ಬಗ್ಗೆ ನಿಗೂಢ ವಿಘ್ನ ಸಂತೋಷ ಇರುವಂತಿದೆ. ಇದೇ ಕಳೆದ ವಾರದಿಂದ ಪೂರ್ಣಚಂದ್ರ ತೇಜಸ್ವಿಯ ಕತೆ, ಕಾದಂಬರಿಗಳನ್ನ ಓದಿದವರೆಲ್ಲ ಕೋಮುವಾದಿಗಳು, ಟೆಕ್ಕಿಗಳು ಮಾತ್ರ ತೇಜಸ್ವಿಯವರ ಬರಹಗಳನ್ನ ಓದುತ್ತಾರೆ. ಸಂಘ ಪರಿವಾರದವರು ತೇಜಸ್ವಿಯವರ ‘ಜುಗಾರಿ ಕ್ರಾಸ್’ ಕಾದಂಬರಿಯನ್ನ ಇಂಗ್ಲೀಷ್‍ಗೆ ಅನುವಾದಿಸಿ ತೇಜಸ್ವಿಯವರ ಅಭಿಮಾನಿಗಳನ್ನ ಬುಟ್ಟಿಗೆ ಹಾಕಿಕೊಳ್ಳಲು ಹವಣಿಸಿದ್ದರು.
ಈ ಬಗೆಯ ತೇಜಸ್ವಿ ಬರಹ / ಪಠ್ಯಕ್ಕೆ ಬಾಹ್ಯವಾದ ವಿದ್ಯಮಾನಗಳನ್ನ ಮುಂದು ಮಾಡಿ ಅವರು ಓದಬೇಕಾದ ಲೇಖಕರೇ ಅಲ್ಲ ಎಂಬ ಮಾನಸಿಕ ಪರಿಸ್ಥಿತಿಯನ್ನ ಹೇರಲು ಪ್ರಯತ್ನ ನಡೆಸಿದ್ದಾರೆ. ತೇಜಸ್ವಿಯವರ ಬರಹಗಳನ್ನು ಕನ್ನಡ ಅಥವಾ ಇಂಗ್ಲಿಷ್‍ನಲ್ಲಿ ಓದಿದ ಒಬ್ಬ ಪುಸ್ತಕ ಪ್ರಕಾಶಕರ ‘ಬುಟ್ಟಿಗೆ ಬೀಳುವುದು’ ಎಂದರೆ ಏನು? ಒಬ್ಬ ಓದುಗ ಸಂತೆಯ ಬುಟ್ಟಿಗೆ ಬೀಳುವ ದುರ್ಬಲ ಮನಸಿನವನಾಗಿರುತ್ತಾನಾ?.

ಈಗ ನಾನು ಬಾಗಲೋಡಿ ದೇವರಾಯರ ಕತೆಗಳನ್ನ ಓದಬೇಕು ಅಂತಾ ಪುಸ್ತಕದ ಅಂಗಡಿಗೆ ಹೋಗುತ್ತೇನೆ. ಅಂಗಡಿಯವರಿಗೆ ಕಾಸು ಕೊಟ್ಟೇ ಪುಸ್ತಕ ತಂದು ಓದುತ್ತೇನೆ. ಅಥವಾ ಮಾಸ್ತಿಯವರ ಚನ್ನಬಸವನಾಯಕ, ಚಿಕ್ಕವೀರರಾಜೇಂದ್ರ ಕಾದಂಬರಿಗಳನ್ನ ಕೊಂಡು ಓದುವಾಗ ಮಾಸ್ತಿಯವರು ಕಾದಂಬರಿ, ಕತೆಗಳಲ್ಲಿ ಹೊಮ್ಮಿಸುವ ಜೀವನ ಮೌಲ್ಯಗಳು ಮುಖ್ಯವಾಗುತ್ತವೇ ವಿನಾಃ ಆ ಪುಸ್ತಕದ ಪ್ರಕಾಶಕನ ಮೌಲ್ಯ, ವಿಚಾರಧಾರೆಗಳು ಮುಖ್ಯವಾಗುವುದಿಲ್ಲ.
ಇನ್ನೊಂದು ಪ್ರಶ್ನೆ ಇದೆ..
ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೆಂಪೇಗೌಡನ ಪೀಠ ಬೇಡ ಅಂತಾ ಹೇಳಿದರೆ ಅದೊಂದು ಅಕಾಡೆಮಿಕ್ ಪ್ರಶ್ನೆಯಾಗಿ ಸಂಗತವಾಗುತ್ತಿತ್ತು. ಆದರೆ, ಇದು ಇಷ್ಟಕ್ಕೆ ನಿಲ್ಲಲಿಲ್ಲ.. ಒಕ್ಕಲಿಗರಿಗೆ ಸಾಂಸ್ಕೃತಿಕ ನಾಯಕ / ಐಕಾನ್ ಬೇಕಿದ್ದರೆ ಅವರು ಕುವೆಂಪು ಮತ್ತು ಶಾಂತವೇರಿ ಗೋಪಾಲಗೌಡರನ್ನ ಆಯ್ಕೆ ಮಾಡಿಕೊಳ್ಳಬಹುದು ಎಂಬ ಫರ್ಮಾನು ಹೊರಡಿಸುತ್ತಾರೆ. ನೋಡಿದರೆ ಇವರೆಲ್ಲ ವಿದ್ಯಾರ್ಥಿಗಳಿಗೆ ಪಾಠ, ಪ್ರವಚನ ಮಾಡಬೇಕಾದ ಉಪನ್ಯಾಸಕರು, ಪ್ರಾಧ್ಯಾಪಕರೂ ಆಗಿ ಗುರುವಿನ ಸ್ಥಾನದಲ್ಲಿ ಕುಂತವರು ಅಥವಾ ನಿಂತವರು.
ಒಂದು ಕಡೆ ಕುವೆಂಪು ಒಕ್ಕಲಿಗರಿಗೆ ಸಾಂಸ್ಕೃತಿಕ ನಾಯಕ/ಐಕಾನ್ ಆಗಬಹುದು ಎಂಬ ಆಯ್ಕೆ ಕೊಡುವ ಈ ಮಹಾನ್ ಉಗ್ರ ಸೆಕ್ಯೂಲರ್ ಪಂಟರು. ಮತ್ತೊಂದು ಕಡೆ ಕುವೆಂಪು ಅವರ ಹೆಸರನ್ನ ‘ವಿಶ್ವಮಾನವೇಗೌಡ’ ಎಂಬುದಾಗಿ ತಿರುಚಿದ್ದಾರೆ.
ಇವರೆಲ್ಲ ಮಕ್ಕಳಿಗೆ ಪಾಠ ಪ್ರವಚನ ಮಾಡಿಕೊಂಡಿರಬೇಕಾದ ಗುರುವರ್ಯರು, ಸಮಾಜದ ಸ್ವಾಸ್ಥ್ಯ ಕಾಪಾಡಲು ನ್ಯಾಯದ ಪಥದಲ್ಲಿ ನಡೆಸಬೇಕಾಗಿದ್ದವರು ಅದಕ್ಕೂ ಮೊದಲೇ ತಾವು ಬಳಸುವ ಭಾಷೆ ಗುರುಸ್ಥಾನದಲ್ಲಿ ನಿಂತ ತನ್ನ ನಾಲಿಗೆಯಿಂದ ಹೊರಡಬಹುದಾದ ಸಮತೂಕ, ಘನತೆ ಉಳಿಸಿಕೊಳ್ಳಬೇಕಾಗಿದ್ದವರು. ತಾವು ಬಳಸುವ ಭಾಷೆ ತೀರ ಧಾರ್ಮಿಕ ಮತ್ತು ಜಾತಿ ದೃಢೀಕರಣದ ಗೀಳು ಹೊತ್ತಿಸಿಕೊಂಡ ಸಮಾಜದಲ್ಲಿ ಯಾವ ರೀತಿಯ ಪರಿಣಾಮಗಳನ್ನ ಬೀರುತ್ತದೆ ಎಂಬ ಎಚ್ಚರ ಇರಬೇಕಾಗಿದ್ದವರು.
ಹೆದ್ದಾರಿಗಳಲ್ಲಿ ಹಾದು ಹೋಗುವ ಸುವ್ ಕಾರುಗಳ ಮೇಲೆ ಕುರುಬಾಸ್, ಗೌಡಾಸ್, ರಾವ್ಸ್, ಲಿಂಗಾಯತ್ಸ್ ಎಂಬ ಜಾತಿ ಸೂಚಕಗಳೇ ಕಣ್ಣು ಕುಕ್ಕುತ್ತಿರುವಾಗ ಈ ಸಮಾಜ ತುಳಿಯುವ ಪಾದಗಳ ಕೆಳಗೆ ಹರವಿದ ಚಂದದ ಕುಸುರಿಗೆಲಸದ ಬಟ್ಟೆಯಾಗಿ ಬಿದ್ದಿರುವಾಗ, ಪಾಠ ಪ್ರವಚನ ಮಾಡುವ ಮೇಷ್ಟ್ರುಗಳೇ ತಮ್ಮ ನಾಲಿಗೆ ಹತೋಟಿ, ಮಾನಸಿಕ ಸಮತೋಲ ಕಳೆದುಕೊಂಡಿರುವಾಗ ಡಿ.ಕೆ. ಶಿವಕುಮಾರ್ ಅವರ ಬಗ್ಗೆ Enforcement directorate ನಡೆಸುತ್ತಿರುವ ವಿಚಾರಣೆ/ಬಂಧನ ಪ್ರತಿಭಟಿಸಿ ಬಸ್ಸುಗಳಿಗೆ ಬೆಂಕಿ ಹೊತ್ತಿಸುವ ಸಾಮಾನ್ಯ ಜನರಿಗೆ ಸಾರ್ವಜನಿಕ ಆಸ್ತಿ-ಪಾಸ್ತಿ ನಾಶ ಮಾಡಬಾರದೆಂಬ ಪಾಠ ಪ್ರವಚನ ಮಾಡುವವರು ಯಾರಿರುತ್ತಾರೆ?.
ನನ್ನ ಕಣ್ಣ ಮುಂದೆ ವರ್ಣಿತವಾದ ಒಂದು ಪ್ರಸಂಗ ಇದು. ಪ್ರಾಧ್ಯಾಪಕನೊಬ್ಬ ವಿಶ್ವವಿದ್ಯಾನಿಲಯದಿಂದ ತನ್ನ ಮನೆಗೆ ಮರಳುತ್ತಿರುವಾಗ ಆತನ ಕಾರಿನಿಂದ ಬಿಯರಿನ ಬಾಟಲಿಯೊಂದು ರೊಯ್ಯನೆ ಹೊರಚಿಮ್ಮಿ ರಸ್ತೆಯಂಚಿನ ಫಸಲಿನ ಮೇಲೆ ಬೀಳುತ್ತದೆ. ವಿಶ್ವವಿದ್ಯಾನಿಲಯದಲ್ಲಿ ವಿಚಾರ ಹೇಳಿ ಸಾರ್ವಜನಿಕ ನಡೆ-ನುಡಿಯಲ್ಲಿ ಅದೇ ವಿಚಾರವನ್ನ ಬದನೆಕಾಯಿ ತೊಟ್ಟು ಅಂತಾ ಭಾವಿಸಿರುವ, ಅಂತರಂಗ ಬಹಿರಂಗದ ನಡುವಿನ ಬಿರುಕಿಗೆ ಬಿದ್ದವರ ವಿಚಾರಗಳನ್ನ ಸಮಾಜ ನಂಬಲಿಕ್ಕಾದರೂ ಸಾಧ್ಯವಿದೆಯಾ?






ಒಳ್ಳೆಯ ಬರಹ