ಈ ನಾಟಕೋತ್ಸವದಲ್ಲಿ ಅಡಿಗೆ ಊಟದ ಜವಾಬ್ದಾರಿ ವಹಿಸಿಕೊಂಡಿದ್ದ ಕರಿಯಪ್ಪ ಗೌಡರಿಗೆ ತೇಜಸ್ವಿಯವರೊಂದಿಗಿದ್ದ ಒಡನಾಟ ನಮೆಗೆಲ್ಲರಿಗೂ ತಿಳಿದಿದ್ದ ವಿಷಯವೇ ಆಗಿದ್ದುದರಿಂದ, ಬಿಡುವಿನವೇಳೆಯಲ್ಲಿ ಅವರನ್ನು ಮಾತಿಗೆಳೆಯುತ್ತಿದ್ದೆವು. ಅಂತಹ ಸಮಯದಲ್ಲಿ ಸಂಜೆ ಅಡಿಗೆ ಕೆಲಸವೆಲ್ಲ ಮುಗಿದ ಮೇಲೆ ಅಳಿಯ ಉಗ್ಗಪ್ಪ ತಂದುಕೊಡುತ್ತಿದ್ದ ಕ್ವಾರ್ಟರ್ ಗಂಟಲಲ್ಲಿ ಇಳಿದ ಮೇಲಂತೂ ಕರಿಯಪ್ಪ ಗೌಡರಿಗೆ ಮಾತಿಗೆ ಲಹರಿ ಬರುತ್ತಿತ್ತು.
ಕಿರಗೂರಿನ ಗಯ್ಯಾಳಿಗಳು ನಾಟಕ ನೋಡಿದ ಕರಿಯಪ್ಪ ಗೌಡರು ಇದು ಕಿರುಗೂರೂ ಅಲ್ಲ ಬರಗೂರೂ ಅಲ್ಲ, ನಮ್ಮೂರು ಗಯ್ಯಾಳಿಗಳ ಕಥೆ ಎಂದರು.
ಅದು ಹೇಗೆ ಹೇಳ್ತೀರಿ ಕರಿಯಪ್ಪಣ್ಣ ಯಾರೋ ಕೇಳಿದರು.
ಹ್ಯಾಗೆ ಅಂದ್ರೆ, ಅಗ ಆ ಕೆಂಪು ಸೀರೆ ಉಟ್ಕ ಬಂದ್ಲಲ ಅವ್ಳು, ಸೀನಪ್ಪನ ಮಗ್ಳು, ಅಮೇಲೆ ಇನ್ನೊಂದು ಪಟಾಪಟಿ ಸೀರೆ ಉಟ್ಟದ್ಲಲ ಅವ್ಳೂ ಬೈರಪ್ಪಣ್ಣನ ಹೆಂಡ್ತಿ. ಇನ್ನೊಬ್ಬ ಅವ್ನು… ಆ ಹೇತ್ಲಾಂಡಿ ನನಮಗ ಇದಾನಲ್ಲ ಅವ್ನು ಬಿಡಿ ಊರಿಗೇ ಗೊತ್ತು ಎಂದು ತೇಜಸ್ವಿಯವರ ಕಥಾ ಪ್ರಪಂಚದ ಪಾತ್ರಗಳನ್ನು ಒಂದೊಂದಾಗಿ ತೆರೆದಿಡಲು ಪ್ರಾರಂಭಿಸಿದರು.
ತೇಜಸ್ವಿಯವರೊಮ್ಮೆ ತಮ್ಮ ಕಥಾ ಪಾತ್ರಗಳ ಬಗ್ಗೆ ಮಾತಾಡುತ್ತಾ ಅವ್ರೆಲ್ಲ ಇಲ್ಲೇ ಇದ್ದಾರೆ ಕಣ್ರಯ್ಯ ಎಂದದ್ದು ನೆನಪಾಯಿತು.
ಕರಿಯಪ್ಪಣ್ಣ ನೀವು ಈಗ ತೇಜಸ್ವಿಯೋರ ಜೊತೆ ಶಿಕಾರಿಗೆ ಹೋಗಲ್ವ ನಮ್ಮಲ್ಲೊಬ್ಬ ಕೇಳಿದ.
ಥೋ..ಥೋ..ಥೋ ಅವರೆಲ್ಲ ಶಿಕಾರಿ ಬುಟ್ಟು ಯಾವದೋಕಾಲ ಆಯ್ತು, ಈಗ ನನ್ಕೈಲೂ ಆಗಲ್ಲ’ ಆವಾಗೆಲ್ಲ ಅವ್ರು ಚಂದ್ರಾಪುರದಲ್ಲಿ ಇದ್ರಲ್ಲ, ಅಲ್ಲೇ ಪಕ್ಕ ನಮ್ಮೂರು (ಕರಿಯಪ್ಪ ಗೌಡರ ಊರು ಚಂದ್ರಾಪುರದ ಪಕ್ಕದ ನಿಡುಗೋಡು ಎಂಬ ಹಳ್ಳಿ) ಆವಾಗ ನಮ್ಮನೆವ್ರೆಲ್ಲ ಅವ್ರಲ್ಲಿ ಕರದಾಗ ಕೆಲ್ಸಕ್ಕೋಗೋರು, ಆವಾಗ ಶಿಕಾರಿ ಅಂತ ನನ್ ಜೊತೆ ಕಾಡು ಸೋವೋಕೆ ಬರೋರು, ಅಂತ ಹುಚ್ಚೇನಿಲ್ಲ ಅವ್ರಿಗೆ, ನಾನೇ ಆವಾಗ ಒಂದೆರಡ್ಸಾರಿ ಶಿಕಾರಿ ಮಾಡಿದ್ದಾಗ ಮಾಂಸ ತಗಂದೋಗಿ ಕೊಟ್ ಬರ್ತಿದ್ದೆ. ಒಂದ್ಸಾರಿ ಎಂಥ ಎಡವಟ್ಟಾಯ್ತು ಅಂತೀರಿ, ನಾನು ಶಿಕಾರಿ ಮಾಂಸನೂ ಹಿಡ್ಕಂದು ಕೋವಿ ಹೆಗಲಾಗೆ ಇಟ್ಕಂದು ಅವರ ಮನಿ ಹತ್ರ ಹೋದೆ, ಅಂಗಳಕ್ಕೆ ಬರ್ತೀನಿ ಒಬ್ರು ಉದ್ದನೆ ಇಜಾರ ಹಾಕ್ಕಂಡು ಉದ್ದನೆ ಕೋಟು ತೊಟ್ಕಂಡು ನಿಂತ್ಕಂಡಿದ್ರು, ನಂಗಿವುರ್ಯಾರೋ ಡಿ.ಸಿ.ನೋ ಡಿ.ಎಫೋ ಇರ್ಬೇಕು ಅಂತಾಯ್ತು, ಮುಗೀತು ನನ್ಕತೆ ಅಂತ.. ಹಂಗೆ ಬಗ್ಗಿ ಕಾಫಿಗಿಡದೊಳಿಕ್ ನುಗ್ಗಿ, ಕೋವಿ ತೋಟದೊಳಿಕ್ಕೆ ಹಣದು, ಮಾಂಸ ಹಿಡ್ಕಂಡು ಕಾಡುಬಿದ್ದು ಪರಾರಿಯಾದೆ, ಆಮೇಲ್ ಗೊತ್ತಾಯ್ತು ಅವ್ರೇ ‘ಕುವೆಂಪು’, ಮಗನ ಮನೀಗ್ ಬಂದಿದ್ರು ಅಂತ. ಅದೇ ಪಸ್ಟು ಅವ್ರುನ್ನ ನಾನೋಡಿದ್ದು.






innu swvlpa diirgavaagiddare chalo aagtittu.–raju hege
ಕರಿಯಪ್ಪನವರಿಗೆ tejaswiyavara ಒಡನಾಟದ ಬಗ್ಗೆ ಕೇಳಿ ಇನ್ನು ದೀರ್ಘ ವಾಗಿ ಬರೆಯಿರಿ ಸಾರ್,