ಅವಧಿ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ: ಹಸಿರುಮಾತು

ಇವತ್ತಿನ ಆಯ್ಕೆ: ಹಸಿರುಮಾತು 

ಪತ್ರಕರ್ತ ನಾಗೇಶ್ ಹೆಗಡೆ ಹೇಳುತ್ತಿರುತ್ತಾರೆ: ಕನ್ನಡದ ಮಹತ್ವಪೂರ್ಣ ಪತ್ರಿಕೆಗಳಲ್ಲಿ ’ಅಡಿಕೆ ಪತ್ರಿಕೆ’ ಸಹ ಒಂದು ಅಂತ. ಅದರಲ್ಲಿ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆಯವರ ಪಾತ್ರ ದೊಡ್ಡದು. ಇವರ ಬಳಿ ಹೋಗಿ ’ನೀವು ಯಾರು?’ ಅಂತ ಕೇಳಿದರೆ ಬಹುಶಃ ’ನಾ ಕಾರಂತ ಪೆರಾಜೆ’ ಎನ್ನಬಹುದು! ಇವರ ಸರೀ ಹೆಸರು ನಾರಾಯಣ ಕಾರಂತ. ಊರು ಪೆರಾಜೆ. ಬರೆಯುವಾಗ ’ನಾ. ಕಾರಂತ ಪೆರಾಜೆ.’ 🙂

ಪೆರಾಜೆಯವರ ಬ್ಲಾಗು ’ಹಸಿರುಮಾತು’. ಕನ್ನಡದ ’ಜಾಗೃತ ಬ್ಲಾಗು’ಗಳಲ್ಲಿ ಇದೂ ಒಂದು. ಪರಿಸರ ಜಾಗೃತಿ, ಕೃಷಿ ಸಲಹೆಗಳು ಹಾಗೂ ಸಾಮಾಜಿಕ ಕಳಕಳಿಗಳು ಈ ಬ್ಲಾಗಿನೆಲ್ಲ ಬರಹಗಳ ಅಡಕ.  ಅದು ಎಂಡೋಸಲ್ಫಾನ್‌ ಬಳಕೆಯಿಂದಾಗುವ ಹಾನಿಗಳ ಬಗೆಗಿರಬಹುದು, ತೆಂಗಿನ ಬಳಕೆಯ ಕುರಿತ ಅಭಿಯಾನವಿರಬಹುದು, ಮಣ್ಣ ಗಣೇಶನಿಗೆ ಬಣ್ಣ ಹಚ್ಚುವುದರ ವಿರೋಧಿ ನುಡಿಗಳಿರಬಹುದು -ಇಲ್ಲಿಯ ಬರಹಗಳು ನಮ್ಮಲ್ಲೊಂದು ಅರಿವು ಮೂಡಿಸುವ, ಚಿಂತನೆಗೆ ಹಚ್ಚುವ ಒಳತೋಟಿಯವು. ನೀವೇನಾದರೂ ಹಸಿದಿದ್ದರೆ ಇಲ್ಲಿ ಬಕ್ಕೆ ಹಲಸಿನ ಹಣ್ಣೂ,  ಬಾಯಾರಿದ್ದರೆ ಪುನರ್ಪುಳಿ ಶರಬತ್ತೂ, ಊಟದ ಸಮಯವಾಗಿದ್ದರೆ ಕೆಂಪಕ್ಕಿ ಬಸಿದ ಬಿಸಿಬಿಸಿ ಅಡುಗೆಯೂ, ಆಮೇಲೆ ತಿನ್ನಲೊಂದಿಷ್ಟು ಕಲ್ಲಂಗಡಿ ಹಣ್ಣಿನ ಹೋಳುಗಳೂ ಲಭ್ಯ. ಅಷ್ಟೇ ಅಲ್ಲ, ಕಾರಂತರು ಮೂಡು ಬಂದಾಗ ಬಿಚ್ಚಿದ ನೆನಪಿನ ಬುತ್ತಿಯೂ ಇಲ್ಲಿ ಚಪ್ಪರಿಸಲು ಸಿಗುತ್ತದೆ.

ಅವರ ಇನ್ನೆರಡು ಬ್ಲಾಗುಗಳಾದ ’ಪೆರಾಜೆಮಾತು’ ಹಾಗೂ ’ಯಕ್ಷಮಾತು’ -ಗಳನ್ನೂ ನೋಡಿದ ನೀವು ಕಾರಂತರು ಭಯಂಕರ ’ಮಾತು’ಗಾರರು ಅಂತ ತೀರ್ಮಾನಿಸಿದರೆ ಪೂರ್ತಿ ತಪ್ಪೇನಿಲ್ಲ. ಆದರೆ ಕಾರಂತರು ಮಾತಷ್ಟೇ ಅಲ್ಲ; ಕೃತಿಯಲ್ಲೂ ಮುಂಚೂಣಿ.

-’ಅವಧಿ’ಗಾಗಿ ಸುಶ್ರುತ ದೊಡ್ಡೇರಿ

* * *

ನಾ. ಕಾರಂತ ಪೆರಾಜೆ:

I am Na. Karantha Peraje from Puttur. Asst Editor of “Adike Pathrike” Kannada Farm Magazine published from Puttur DK-574201 – ನಾನು ನಾರಾಯಣ ಕಾರಂತ. ಕಾವ್ಯ ನಾಮ ‘ನಾ.ಕಾರಂತ ಪೆರಾಜೆ’. ಹುಟ್ಟೂರು ಸುಳ್ಯ ಸನಿಹದ ಪೆರಾಜೆ. ಮಂಗಳೂರಿನಲ್ಲಿ ವೃತ್ತಿ ಆರಂಭ. ನಂತರ ಪುತ್ತೂರಿಗೆ ವಲಸೆ. ಪ್ರಸ್ತುತ ಪುತ್ತೂರಿನ ಪಾರ್ಮರ್ ಫಸ್ಟ್ ಟ್ರಸ್ಟ್ ಪ್ರಕಾಶಿಸುತ್ತಿರುವ ‘ಅಡಿಕೆ ಪತ್ರಿಕೆ’ಯಲ್ಲಿ ಸಹಾಯಕ ಸಂಪಾದಕ. ಒಂದರ್ಧ ದಶಕ ಯಕ್ಷಗಾನದಲ್ಲಿ ಕಾಲಯಾಪನೆ! ಸದ್ಯ ‘ಸ್ವಘೋಷಿತ’ ಮಾಜಿ! ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಪ್ರತಿಷ್ಠಿತ ‘ರಾಜ್ಯ ಮಟ್ಟದ ಕೃಷಿ ಪತ್ರಿಕೋದ್ಯಮ ಪ್ರಶಸ್ತಿ’, ಬೆಂಗಳೂರಿನ ಸಿಡಿಎಲ್ ನೀಡುವ ‘ಚರಕ ಪ್ರಶಸ್ತಿ’, ಮಂಗಳೂರಿನ ‘ಪ.ಗೋ.ಪ್ರಶಸ್ತಿ’, ಮೈಸೂರಿನ ಪತ್ರಕರ್ತರ ಸಂಘ ನೀಡುವ ‘ಮುರುಘಾಶ್ರೀ’ಪ್ರಶಸ್ತಿ’, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಗ್ರಾಮೀಣ ವರದಿಗಾರಿಕೆಗೆ ನೀಡುವ ‘ಮಂಡಿಬೆಲೆ ಶ್ಯಾಮಣ್ಣ ಪ್ರಶಸ್ತಿ-೨೦೦೮,‘ಗ್ರಾಮೀಣ ಪತ್ರಿಕೋದ್ಯಮ’ ವಿಭಾಗದಲ್ಲಿ ದಕ್ಶಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ-೨೦೧೦ ಪ್ರಶಸ್ತಿಗಳು ಬೆನ್ನೇರಿವೆ. ಶೇಣಿ ದರ್ಶನ, ಶೇಣಿ ಚಿಂತನ, ನುಡಿನಮನ, ಹಾಸ್ಯಗಾರನ ಅಂತರಂಗ, ಯಕ್ಷಕೋಗಿಲೆ, ತಳಿ ತಪಸ್ವಿ, ಅಂತಿಕ, ಹಸಿರು ಮಾತು, ಕಾಡು ಮಾವು ಮತ್ತು ಸಾಮಗ ಪಡಿದನಿ – ಪ್ರಕಟಿತ ಕೃತಿಗಳು. ವಿಳಾಸ : ಭಟ್ ಬಿಲ್ಡಿಂಗ್, ಏಳ್ಮುಡಿ, ಪುತ್ತೂರು – ೫೭೪ ೨೦೧ (ದ.ಕ.)

* * *

ಮಾದರಿ ಬರಹ:

ಬೇಸಿಗೆಯ ನೆಂಟ ‘ಪುನರ್ಪುಳಿ

ಈಚೆಗೆ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದೆ. ‘ಬಿರಿಂಡಾ ಜ್ಯೂಸ್’ ಮೊದಲಾತಿಥ್ಯ. ಗಾಢ ಕೆಂಪು ಬಣ್ಣದ ಜ್ಯೂಸ್ ಕುಡಿದಾದ ಬಳಿಕ ನಾಲಗೆ ಏನೋ ದಡ್ಡುಕಟ್ಟಿದ (ದೊರಗಾದ) ಅನುಭವ. ಪುನರ್ಪುಳಿಯ ಯಾವ ಸ್ವಾದವೂ ಇರಲಿಲ್ಲ. ಬಳಿಯಲ್ಲಿದ್ದ ಪ್ರಕಾಶ್ ‘ಅದು ಕಲಬೆರಕೆಯೇ ಇರಬೇಕು. ನಾವು ನೀರು ಕುಡಿದೇ ಸುಧಾರಿಸುವಾ’ ಎಂದು ಪಿಸುಗುಟ್ಟಿದರು.

ಮಂಗಳೂರಿನ ಸೆಂಟ್ರಲ್ ಮಾರ್ಕೆಟಿನ ತರಕಾರಿ ವ್ಯಾಪಾರಿ ಡೇವಿಡ್ ಹೇಳಿದ ಮಾತು ನೆನಪಾಯಿತು – ‘ಇಲ್ಲಿಗೆ ತರಕಾರಿಗೆಂದು ಬರುವವರಿಗೆ ನಾನೇ ಸಾಕಷ್ಟು ಬಾರಿ ಹೇಳುತ್ತಿದ್ದೇನೆ. ಗಾಢ ಬಣ್ಣದ ರೆಡಿಮೇಡ್ ಜ್ಯೂಸ್ ಬಹುತೇಕ ಸಾಚಾ ಅಲ್ಲ. ವ್ಯಾಪಾರದ ಉದ್ದೇಶ ಅಲ್ವೇ, ಏನೇನೋ ಬಣ್ಣ ಸೇರಿಸುತ್ತಾರೆ. ಅದಕ್ಕಾಗಿ ತಾಜಾ ಹಣ್ಣನ್ನೇ ಒಯ್ದು, ಮನೆಯಲ್ಲೇ ಜ್ಯೂಸ್ ಮಾಡಿ ಕುಡಿಯಿರಿ. ಹೊಟ್ಟೆಗೆ ತಂಪು, ಆರೋಗ್ಯಕ್ಕೂ ಒಳ್ಳೆಯದು.’

ಎರಡು ತಿಂಗಳ ಹಿಂದೆ ನಾನು ಹೊಸ ಬಾಡಿಗೆ ಮನೆಗೆ ಗಂಟು ಮೂಟೆ ಕಟ್ಟಿದ್ದೆ. ಅಲ್ಲಿ ಒಂದು ಪುನರ್ಪುಳಿ ಮರವಿತ್ತು. ಹಣ್ಣುಗಳು ಸಾಕಷ್ಟಿದ್ದುವು. ‘ಜ್ಯೂಸ್ ಮಾಡೋಣ’ ಎನ್ನುತ್ತಾ ಮಗಳು ಸುಕನ್ಯಾಳಿಂದ ಹಣ್ಣಿನ ಜ್ಯೂಸ್ ತಯಾರಿ. ಕೊನೆಗೆ ಪತ್ನಿ ವೀಣಾ ಹಣ್ಣು ಕೊಯಿದು, ಪ್ರತಿ ಹಣ್ಣನ್ನು ಎರಡು ಭಾಗ ಮಾಡಿ, ಅದರ ಮೇಲೆ ಸಕ್ಕರೆಯನ್ನು ಮಿಶ್ರ ಮಾಡಿ ಬಿಸಿಲಲ್ಲಿಟ್ಟಳು. ‘ನಾಳೆಯಿಂದ ನಿಮಗೆ ಬಾಟಲ್ ಜ್ಯೂಸ್ ಇಲ್ಲ. ಪುನರ್ಪುಳಿಯದ್ದೇ ಜ್ಯೂಸ್’ ಎನ್ನುತ್ತಾ, ‘ಇದು ಈಗ ತಾನೇ ಹಣ್ಣಿನಿಂದ ಮಾಡಿದ ತಾಜಾ ಜ್ಯೂಸ್, ಕುಡಿಯಿರಿ. ಪಿತ್ತ ಇಳಿಯುತ್ತದೆ’ ಎಂದು ನೀಡಿದಾಗ ನಿಜಕ್ಕೂ ‘ಪಿತ್ತ ಏರಿತ್ತು’!

‘ಮಂಗಳೂರಿನ ಹೋಟೆಲ್ಗಳಲ್ಲಿ ಬಹಳ ವರುಷದ ಹಿಂದೆ ಗ್ರಾಹಕರ ಎದುರೇ ಪುನರ್ಪುಳಿ ಹಣ್ಣನ್ನು ಕ್ರಷ್ ಮಾಡಿ ಜ್ಯೂಸ್ ಮಾಡಿ ಕೊಡುತ್ತಿದ್ದರು’ ಎಂದು ಡೇವಿಡ್ ಹೇಳಿದ ಮಾತು ನೆನಪಾಗಿ ಹೊಟ್ಟೆಗಿಳಿಸಿಕೊಂಡೆ. ‘ಬೇಸಿಗೆಯ ನೆಂಟ’ ಎಂಬ ಮಾತು ನಿಜಕ್ಕೂ ಅನ್ವರ್ಥ.

ಕರಾವಳಿಯಲ್ಲಿ ಈ ಹಣ್ಣಿಗೆ ‘ಪುನರ್ಪುಳಿ’ ಎಂಬ ಹೆಸರಿದ್ದರೆ, ಮಲೆನಾಡಿನಲ್ಲಿ ‘ಮುರುಗಲು’ ಹಣ್ಣು. ಇಂಗ್ಲಿಷ್ ಹೆಸರು ಕೋಕಂ. ಸಸ್ಯಶಾಸ್ತ್ರೀಯ ಹೆಸರು ‘ಗಾರ್ಸೀನಿಯಾ ಇಂಡಿಕಾ’. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಿಂದ ದಕ್ಷಿಣಕ್ಕೆ; ಕೇರಳದ ಕಾಸರಗೋಡು ವರೆಗೆ ಪಶ್ಚಿಮ ಘಟ್ಟಗಳಲ್ಲಿ ಉತ್ತಮ ಕಾಡು ಬೆಳೆ. ನಿತ್ಯ ಹರದ್ವರ್ಣ ಮರ. ಮರವು ಪಿರೆಮಿಡ್ ಆಕಾರದಲ್ಲಿ ಬೆಳೆಯುತ್ತದೆ. ಕಾಡುತ್ಪತ್ತಿಯಾಗಿ ಪರಿಗಣನೆ.

ಎಪ್ರಿಲ್-ಮೇ ತಿಂಗಳಲ್ಲಿ ಉತ್ತಮ ಇಳುವರಿ. ಹಣ್ಣು ಮಾಗಿದಾಗ ಗಾಢ ಕೆಂಪು. ಉರುಟು ಹಣ್ಣು. ಹುಳಿ-ಸಿಹಿ ರುಚಿ. ಸಿಪ್ಪೆ, ಒಳಗಿನ ಗುಣ ಎಲ್ಲವೂ ಹಲವು ರೀತಿಯಲ್ಲಿ ಉಪಯೋಗಿ. ಬೀಜದಿಂದ ಗಿಡ ತಯಾರಿ 8-10 ವರುಷಗಳಲ್ಲಿ ಇಳುವರಿ.
ಸಿಪ್ಪೆಯನ್ನು ಒಣಗಿಸಿ ಶರಬತ್ತು ತಯಾರಿ. ಹಣ್ಣಿಗೆ ಸಕ್ಕರೆ ಸೇರಿಸಿ ಕುದಿಸುವುದು ಒಂದು ಬಗೆ, ಬಿಸಿಲಿನಲ್ಲಿ ಒಣಗಿಸುವುದು ಮತ್ತೊಂದು. ಪಿತ್ತಶಮನ ಗುಣ. ಮನೆ ಅಡುಗೆಯಲ್ಲಿ ಸಾರು, ತಂಬುಳಿ, ಅಪ್ಪೆಹುಳಿಯಾಗಿ ಬಳಕೆ.

ಮರ ದೊಡ್ಡದಾಗಿ ಬೆಳೆಯುತ್ತದೆ. ಶೇ. 70ರಷ್ಟು ಮಂದಿ ಹಣ್ಣನ್ನು ಕೊಯ್ಯದೆ, ಬಳಸದೆ ಹಾಳಾಗುವುದೇ ಹೆಚ್ಚು. ಪಿತ್ತಕಾರಿ ತರಕಾರಿಗಳ ಬಳಕೆಯಲ್ಲಿ ಹುಣಸೆ ಹಣ್ಣಿನ ಬದಲಿಗೆ ಪುನರ್ಪುಳಿ ಹಣ್ಣನ್ನು ಬಳಸುತ್ತಾರೆ.

ಇದರಲ್ಲಿರುವ ‘ಹೈಡ್ರಾಕ್ಸಿ ಸಿಟ್ರಿಕ್ ಆಸಿಡ್’ ಎಂಬ ಸಸ್ಯಜನ್ಯ ಉತ್ಪನ್ನವನ್ನು ಪ್ರತ್ಯೇಕಿಸಿ ರಫ್ತು ಮಾಡುವ ಉದ್ದಿಮೆಗಳು ಭಾರತದಲ್ಲಿವೆ. ಇದರ ಮೌಲ್ಯವರ್ಧಿತ ಉತ್ಪನ್ನಗಳತ್ತ ಅಲ್ಲಲ್ಲಿ ಸಾಕಷ್ಟು ಪ್ರಯತ್ನಗಳು ಆಗುತ್ತಿವೆ.

1984ರಲ್ಲಿ ಪುತ್ತೂರಿನಲ್ಲಿ ಸೇಡಿಯಾಪು ವಿಶ್ವಪ್ರಸಾದ್ ಪುನರ್ಪುಳಿಯ ಸ್ಕ್ವಾಷ್ ತಯಾರಿ ಯಶಸ್ಸಾಗಿದ್ದರು. ಸಾಯಿಕೋಟೆ ಎಂಟರ್ಪ್ರೈಸಸ್ ಇವರು ‘ಪುನರ್ಪುಳಿಯ ಹುಡಿ’ ತಯಾರಿಸಿದ್ದರು. ಇದರಲ್ಲಿ ಸಾರಿಗೆ ಬೇರೆ, ಶರಬತ್ತಿಗೆ ಬೇರೆ ಎಂದು ಎರಡು ವೆರೈಟಿಯಿದ್ದುವು. ಕೆಲವು ಎನ್ಜಿಓಗಳು, ಖಾಸಗಿ ಸಂಸ್ಥೆಗಳು ‘ಬಿರಿಂಡಾ ಜ್ಯೂಸ್’ ತಯಾರಿ, ಆ ಕುರಿತು ತರಬೇತಿ ನಡೆಸುತ್ತಿವೆ.

ಮಂಗಳೂರಿನ ಡೇವಿಡ್ ಮೂರು ದಶಕದ ಹಿಂದೆಯೇ ಪುನರ್ಪುಳಿಯ ಬೆನ್ನು ಬಿದ್ದಿದ್ದರು. 1977ರಲ್ಲಿ ದೇಶದಲ್ಲಿ ಕೋಲಾ ನಿಷೇಧವಾದಾಗ ಡೇವಿಡ್ಗೆ ಪುರುಸೊತ್ತಿರಲಿಲ್ಲ! ತರಕಾರಿಗೆಂದು ಬರುತ್ತಿದ್ದ ಗ್ರಾಹಕರ ತಲೆಗೆ ಪುನರ್ಪುಳಿಯನ್ನು ಹೇರುತ್ತಿದ್ದರು. ‘ಗ್ರಾಹಕರ ಆರೋಗ್ಯ ಚೆನ್ನಾಗಿದ್ದರೆ ನನಗೂ ಒಳ್ಳೆಯದಲ್ಲವೇ?’ ಎನ್ನುತ್ತಾರೆ.

ಸೀಸನ್ ಸಮಯದಲ್ಲಿ ಹಣ್ಣನ್ನು ಒಣಗಿಸಿಟ್ಟು ವರುಷಪೂರ್ತಿ ಬಳಸುತ್ತಾರೆ. ಕೊಲ್ಲಿಯಿಂದ ಬಂದ ಕರಾವಳಿಗರು ಡೇವಿಡ್ ಅವರನ್ನು ಭೇಟಿ ಮಾಡದೆ ಮರಳುವುದಿಲ್ಲ!

ಡೇವಿಡ್ ಅವರಲ್ಲಿ ತಾಜಾ ಹಣ್ಣಿಗೆ ಕಿಲೋಗೆ ೫೦-೬೦ ರೂಪಾಯಿ ಬೆಲೆ. ಮಂಗಳೂರಿನಲ್ಲಿ ಎಲ್ಲಾ ಸೇರಿ ಸುಮಾರು 15-20 ಮಂದಿ ಹಣ್ಣಿನ ವ್ಯಾಪಾರಿಗಳಲ್ಲಿ ತಾಜಾ ಹಣ್ಣು ಸಿಗುತ್ತದೆ. ಏನಿಲ್ಲವೆಂದರೂ ಸೆಂಟ್ರಲ್ ಮಾರ್ಕೆಟ್ ಒಂದರಲ್ಲೇ ವರುಷಕ್ಕೆ ನಾಲ್ಕು ಟನ್ ತಾಜಾ ಹಣ್ಣು ಮಾರಾಟವಾಗ್ತದೆ ಅಂದ್ರೆ ನಂಬ್ತೀರಾ?

‘ಹೀಗೆ ದೊಡ್ಡ ಮಟ್ಟದ ತಾಜಾ ಕೋಕಂ ಮಾರಾಟ ಬೇರೆ ಯಾವ ನಗರದಲ್ಲೂ ಇರುವುದು ಗೊತ್ತಿಲ್ಲ. ಇದು ಮಹತ್ವದ ವಿಚಾರ’ ಎನ್ನುತ್ತಾರೆ ಗೋವಾದಲ್ಲಿರುವ ಪಶ್ಚಿಮಘಟ್ಟ ಕೋಕಂ ಪೌಂಡೇಶನ್ನಿನ ಅಧ್ಯಕ್ಷ ಅಜಿತ್ ಶಿರೋಡ್ಕರ್.

ಮೇ 6, 7ರಂದು ಗೋವಾದಲ್ಲಿ ಪುನರ್ಪುಳಿಯ ಕೊಯ್ಲೋತ್ತರ ಸಂಸ್ಕರಣೆ ಮತ್ತು ಮಾರುಕಟ್ಟೆ ಕುರಿತು ರಾಷ್ಟ್ರೀಯ ಸಮ್ಮೇಳನ ನಡೆಯಿತು. ದೇಶದ ಬೇರೆ ಬೇರೆಡೆ ನಡೆಯುತ್ತಿರುವ ಪುನರ್ಪುಳಿ ಹಣ್ಣಿನ ಸ್ಥಿತಿಗತಿ, ಅದರ ವೈಜ್ಞಾನಿಕ ಮಾಹಿತಿಗಳು, ಕೋಕಂನ ಮೌಲ್ಯವರ್ಧಿತ ಉತ್ಪನ್ನಗಳ ಕುರಿತು ಸಮ್ಮೇಳನದಲ್ಲಿ ಚರ್ಚೆ ನಡೆದಿತ್ತು.

 

‍ಲೇಖಕರು G

May 24, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಧಿ….

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: