ತೇಜಸ್ವಿ ಇರಬೇಕಿತ್ತು.. ಮತ್ತಷ್ಟು ಕಥೆ ಹೇಳಬೇಕಿತ್ತು..

ವಿನತೆ ಶರ್ಮ

೨೦೦೦ನೇ ಇಸವಿಯ ತನಕ ಪೂರ್ಣಚಂದ್ರ ತೇಜಸ್ವಿಯವರ ಪ್ರತಿಯೊಂದು ಪುಸ್ತಕವನ್ನೂ ಕೊಂಡುಕೊಂಡು ಓದುವ ಅಭ್ಯಾಸವಿತ್ತು. ಅವರ ಬರವಣಿಗೆಯ ಶೈಲಿ, ಕಥಾವಸ್ತು, ಅದರ ನಿರೂಪಣೆ ಮತ್ತು ಭಾಷೆಯ ಬಳಕೆ ಇವತ್ತಿಗೂ ನನಗೆ ಬಹಳ ಅಚ್ಚುಮೆಚ್ಚು. ಅವರ ಬರಹಗಳಲ್ಲಿದ್ದ ಕಾಡಿನ ಜೀವಜಾಲದ, ನಿಗೂಢತೆಯ ಬಗೆಗಿನ ನೋಟ, ಅವರ ಅಲೆದಾಟ ಅದೆಷ್ಟು ಕಂಡಾಪಟ್ಟೆ ಇಷ್ಟವಾಗುತ್ತಿತ್ತೋ ಅದರ ಜೊತೆಗೆ ಸ್ವಲ್ಪ ಹೊಟ್ಟೆಯುರಿ ಕೂಡ ಆಗ್ತಿತ್ತು.

೧೯೯೬ರ ಆರಂಭದ ವೇಳೆಗೆ ನನ್ನದೇ ಸ್ವಂತ ಜಮೀನು ಖರೀದಿಸಿ ಸಹಜ ಕೃಷಿ ಮಾಡುತ್ತಾ ಬದುಕುವ ನನ್ನ ಕನಸು, ಪ್ರಯತ್ನಕ್ಕೆ ಅದೇನೇನೋ ಕಾರಣಗಳಿಂದ ತಿಲಾಂಜಲಿ ಕೊಟ್ಟುಬಿಟ್ಟಿದ್ದೆ. ನಂತರ ಅದೇ ವರ್ಷ ನನ್ನ ಉದ್ಯೋಗಜೀವನಕ್ಕೆ ಸಂಬಂಧಿಸಿದ ಮಹತ್ವದ ನಿರ್ಧಾರವನ್ನೂ ಕೈಗೊಂಡು ಕ್ರೈ (CRY) ಸಂಸ್ಥೆಯನ್ನು ಸೇರಿದ್ದೆ.

 

ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದವರ ಕಾರ್ಯಕ್ಷೇತ್ರಕ್ಕೆ ಭೇಟಿ ಕೊಟ್ಟು, ಅವರ ಕೆಲಸ ಕ್ರೈ ಸಂಸ್ಥೆಯ ಆಶಯಗಳಿಗೆ ಮತ್ತು ಕಾರ್ಯನೀತಿಗಳಿಗೆ ತಕ್ಕಂತೆ ಇದೆಯೇ ಎಂದು ಪರಿಶೀಲಿಸಿ ಅವರ ಸಂಸ್ಥೆಗೆ ನೆರವು ನೀಡುವಂತೆ ಸೂಚಿಸುವುದು. ನೆರವು ಸಿಕ್ಕಮೇಲೆ ಅವರ ಕಾರ್ಯಕ್ಷೇತ್ರಕ್ಕೆ ಆಗಾಗ ಭೇಟಿಕೊಟ್ಟು ಕೆಲಸದ ಮುಂದುವರಿಕೆಯನ್ನು ಗಮನಿಸಿ, ಸಂಸ್ಥೆಗೆ ಬೇಕಿದ್ದ ಇತರೇ ಸಹಾಯಗಳನ್ನು ಕೊಡುವುದು (ಮಾನವಸಂಪನ್ಮೂಲ, ಲೆಕ್ಕಾಚಾರ ಕೌಶಲ್ಯಗಳು, ಸಿಬ್ಬಂದಿ ತರಬೇತಿ ಮುಂತಾದವು). ಕೆಲಸ, ಸಂಸ್ಥೆ, ಜನರು, ಎಲ್ಲವೂ ಹೊಚ್ಚ ಹೊಸದು. ಮುಂಚೆ ಮಾಡುತ್ತಿದ್ದ ಲೆಕ್ಚರರ್ ಕಮ್ HOD ಕೆಲಸಕ್ಕೂ ಈ ಕೆಲಸಕ್ಕೂ ಅಜಗಜಾಂತರ ವ್ಯತ್ಯಾಸ.

ನನ್ನ ಮೊಟ್ಟಮೊದಲ ಕಾರ್ಯಕ್ಷೇತ್ರ ಭೇಟಿ ಮೂಡಿಗೆರೆಗೆ. ಪೂರ್ಣಚಂದ್ರ ತೇಜಸ್ವಿಯವರಿದ್ದ ಊರಿಗೆ. ತನಗೆ ಫೆಲೋಶಿಪ್ ಕೊಟ್ಟು ತನ್ನ ಕೆಲಸವನ್ನು ಪ್ರೋತ್ಸಾಹಿಸಿ ಎಂದು ಕ್ರೈ ಸಂಸ್ಥೆಗೆ ಅರ್ಜಿ ಹಾಕಿಕೊಂಡಿದ್ದ ಯುವಕ ದೇವಣ್ಣನನ್ನು (ಹೆಸರನ್ನು ಬದಲಾಯಿಸಿದ್ದೀನಿ) ಕಂಡು, ಅವರ ಕೆಲಸವನ್ನು ಗಮನಿಸುವುದು. ಎರಡು ದಿನಗಳು ಮೂಡಿಗೆರೆಯಲ್ಲಿರುವುದು.

ಮೂಡಿಗೆರೆ ಎಂದೊಡನೆ ಓಹೋ ತೇಜಸ್ವಿಯವರ ಊರು ಎಂದು ಖುಷಿಯಾದರೂ ನಾನೇನು ಅವರನ್ನ ನೋಡಲು ಹೋಗ್ತಿದ್ದೀನ, ಅವರೆಲ್ಲಿ ಸಿಗ್ತಾರೆ, ಎಂದು ಸುಮ್ಮನಾಗಿದ್ದೆ. ಚಿಕ್ಕಪಟ್ಟಣವಾದ ಆ ಮೂಡಿಗೆರೆಯಲ್ಲಿ ಎರಡು ದಿನ ಒಬ್ಬಳೇ ಎಲ್ಲಿರುವುದು ಎಂದು ದಿಗಿಲಾಗಿತ್ತು. ಸಹೋದ್ಯೋಗಿಗಳು ‘ದೇವಣ್ಣ ಎಲ್ಲ ನೋಡ್ಕೋತಾನೆ,’ ಎಂದು ಧೈರ್ಯ ತುಂಬಿದ್ದರು. ಮನದಾಳದಲ್ಲಿ ತೇಜಸ್ವಿಯವರ ಕಾರ್ಯಕ್ಷೇತ್ರವನ್ನು ಹೋಗಿ ನೋಡುವಂತಿದ್ದರೆ ಎಷ್ಟು ಚೆನ್ನ ಎಂಬ ರಹಸ್ಯವಾದ ಆಸೆಯೂ ಇತ್ತು.

ತೇಜಸ್ವಿಯವರನ್ನ ನಾನು ಮೈಸೂರಿನಲ್ಲಿ ಎಂದೆರಡು ಮೂರು ಬಾರಿ ನೋಡಿದ್ದೆ, ಅವರ ಮಾತುಗಳನ್ನ ಕೇಳಿದ್ದೆ, ಅದಕ್ಕಿಂತಲೂ ಹೆಚ್ಚು ‘ಆಂದೋಲನ’ ಪತ್ರಿಕೆಯಲ್ಲಿ ಕೆಲಸ ಮಾಡಿದ ದಿನಗಳಲ್ಲಿ ಮತ್ತು ಅವರ ಮೈಸೂರಿನ ಸ್ನೇಹಿತವಲಯದಲ್ಲಿ ಅವರ ಬಗ್ಗೆ ಕೇಳುತ್ತಿದ್ದೆ. ಬೇಕಿರಲಿ, ಬೇಡದಿರಲಿ ಅವರ ಜೀವನದ ಆಗುಹೋಗುಗಳು ಕೂಡ ಕಿವಿಗೆ ಬೀಳುತ್ತಿತ್ತು.

ಪುಣ್ಯವಶಾತ್ ಆಗ ಬರಿಯ ರೇಡಿಯೋ, ಟಿ.ವಿ ಮತ್ತು ಮುದ್ರಿತ ಪತ್ರಿಕೆಗಳಿದ್ದ ಕಾಲ. ಜನರು ಸಂಯಮದಿಂದ ತಮ್ಮ-ತಮ್ಮ ಜೀವನವನ್ನು ಅವರವರ ನೆಲೆಗಟ್ಟಿನಲ್ಲೇ ಇನ್ನೂ ಬದುಕುತ್ತಿದ್ದರು. ಒಮ್ಮೆ ಮೈಸೂರಿನ ಅರಣ್ಯ ಇಲಾಖೆಯ ವಿಭಾಗದ ‘ಪರಿಸರ ದಿನ’ ಕಾರ್ಯಕ್ರಮಕ್ಕೆ ತೇಜಸ್ವಿ ಬಂದಿದ್ದರು. ಕ್ಯಾಮರಾ ತೆಗೆದುಕೊಂಡು ನಾನೂ ಹೋದೆ. ಮುಖ್ಯವಾಗಿ ಅವರ ಮಾತನ್ನ ಕೇಳಲು.

ನಗುಮುಖದಿಂದ ಮಾತನಾಡುತ್ತಿದ್ದ ಅವರು ಇದ್ದಕ್ಕಿದ್ದಂತೆ ಸ್ವಲ್ಪ ಜೋರಾಗೆ “ಕಾಡು ಕಡೀಬೇಡ್ರೋ ಬೋಳಿ ಮಕ್ಕಳ್ರಾ, ಅದ್ರ ಪರಿಣಾಮ ನಿಮ್ ಬುಡಕ್ಕೆ ಬರತ್ತೆ ಅಂತ ಬೊಡ್ಕೋತೀನಿ, ಕೇಳ್ತಾಯಿಲ್ಲಾ,” ಅಂದದ್ದು ಈಗಲೂ ಕಿವಿಯಲ್ಲಿದೆ. ಕೆಲಕ್ಷಣಗಳ ಕಾಲ ಅವರ ಮುಖದಲ್ಲಿ ತೋರಿದ ಕೋಪ ಕಣ್ಣಿಗೆ ಕಟ್ಟಿದಂತಿದೆ. ಇವತ್ತು ಅವರ ಮಾತು ನಿಜವಾಗಿದೆ. ಅದಿರಲಿ. ನನ್ನ ಮೂಡಿಗೆರೆ ಕಥೆಗೆ ವಾಪಸ್ ಬರ್ತೀನಿ.

ಬೆಳಗಿನ ಜಾವ ಮೂಡಿಗೆರೆಯಲ್ಲಿ ಇಳಿದರೆ ಇಬ್ಬನಿ ತುಂಬಿದ ವಾತಾವರಣ. ಮಳೆಗಾಲ ಬೇರೆ. ನಗುಮುಖದ ದೇವಣ್ಣ  ಲವಲವಿಕೆಯಿಂದ ಮಲೆನಾಡಿನ ಭಾಷೆ ಮಾತನಾಡಿದಾಗ ಖುಷಿಯಾಗಿತ್ತು. ಹಾಗೆ ಮಾತನಾಡುತ್ತಾ ಅವರ ಬಳಿ “ರೀ ದೇವಣ್ಣ, ತೇಜಸ್ವಿಯವ್ರ ಎಸ್ಟೇಟ್ ಎಲ್ಲಿದೆ, ಅವ್ರು ಈ ಕಡೆ ಬರ್ತಾ ಇರ್ತಾರಾ,” ಎಂದೆ.

ನಾವಿಬ್ಬರೂ ನಿಂತಿದ್ದದ್ದೇ ಊರಲ್ಲಿದ್ದ ಒಂದೇ ಒಂದು ಮುಖ್ಯರಸ್ತೆಯಲ್ಲಿ!! ಆ ದೇವಣ್ಣನೋ “ಏ ಬಿಡ್ರಿ ಮೇಡಂ, ಅವ್ರನ್ ಯಾಕ್ ನೋಡ್ಬೇಕು, ಭಾರಿ ಕೋಪದ ಮನುಷ್ಯ, ಹತ್ರ ಹೋಗಿ ಏನಾದ್ರೂ ಮಾತ್ನಾಡಿಸಿದ್ರೆ ಬಯ್ದೆ ಬಿಡ್ತಾರೆ. ಹೌದು ಮೇಡಂ, ಇಲ್ಯಾರೂ ಅವ್ರ ಸುದ್ದಿಗೇ ಹೋಗಲ್ಲ. ಎಲ್ರಿಗೂ ಬಯ್ತಾರೆ,” ಅಂತಾ ನಗುನಗುತ್ತಲೇ ಹೇಳಿದಾಗ ಸುಮ್ಮನಾದೆ. ತೇಜಸ್ವಿನಾ ನಾ ನೋಡಕ್ ಬಂದಿರೋದು ಇಲ್ಲ ಕೆಲಸದ ಮೇಲಾ, ಎಂದು ನನ್ನನ್ನೇ ಬಯ್ದುಕೊಂಡು ದೇವಣ್ಣನ ಕೆಲಸದ ಕ್ಷೇತ್ರವನ್ನು ನೋಡಲು ಹೋದೆವು.

ಮಾರನೇ ದಿನ ದೇವಣ್ಣನ ಕೆಲಸದ ಬಗ್ಗೆ ಅವರ ಸ್ನೇಹಿತರು ಬಂದು ನನ್ನನ್ನ ಭೇಟಿಯಾಗಿ ಮಾತನಾಡುವುದಿತ್ತು. ಅವರು ಬರುವುದು ತಡವಾಯ್ತು. ಪೇಟೆಯಲ್ಲಿ ಯಾವ ಕಡೆ ಹೋದ್ರೂ ಎಲ್ಲಾ ದಿಕ್ಕಿನಿಂದಲೂ ಕಾಣಿಸುತ್ತಿದ್ದ ಅದೇ ಮುಖ್ಯರಸ್ತೆಯಲ್ಲೇ ಆ ಕಡೆ ಬದಿಯಲ್ಲಿ ನಿಂತು ಜೋರಾಗೆ ಮಾತಾಡ್ತಾ ಇದ್ವಿ. ದೇವಣ್ಣ ತಮಾಷಿ ಮನುಷ್ಯ, ಮಾತುಮಾತಿಗೂ ತಾನೂ ನಗುತ್ತಾ, ನನ್ನನ್ನು ನಗಿಸುತ್ತಿದ್ದ ಉತ್ಸಾಹಿ ಯುವಕ. ಈಗ ಎಲ್ಲಿದ್ದಾರೋ ಹೇಗಿದ್ದಾರೋ??!! ಅವರ ಸ್ನೇಹಿತ ಬಂದಾಯ್ತು.

ನಾವೇನೋ ಜೋರು ಜೋರಾಗಿ ಮಾತನಾಡುತ್ತಾ ನಗ್ತಾ ಇರಬೇಕಾದ್ರೆ ಎಡಗಡೆಯಿಂದ ಬುರ್ರನೆ ಸ್ಕೂಟರ್ ಬಂತು. ದೇವಣ್ಣ ಆ ಕಡೆಯೇ ಮುಖ ಮಾಡಿ ನಿಂತಿದ್ದರಿಂದ ಅವರಿಗೆ ಸ್ಕೂಟರ್ ಚಲಾಯಿಸುತ್ತಿದ್ದ ತೇಜಸ್ವಿ ಮೊದಲು ಕಾಣಿಸಿದರು. ಅದೇ ಜೋರು ದನಿಯಿಂದ “ಓ ನೋಡಿ ಮೇಡಂ, ನಿನ್ನೆಯೆಲ್ಲಾ ತೇಜಸ್ವಿ ಬಗ್ಗೆ ಕೇಳ್ತಾ ಇದ್ರಲ್ಲಾ ಅವ್ರೆ ಬರ್ತಾ ಇದಾರೆ,” ಅನ್ನುವುದೇ!!

ನನ್ನ ಕಿವಿಗಿರಲಿ, ಪೇಟೆಯಲ್ಲಿದ್ದ ಸಮಸ್ತ ಮನುಷ್ಯಕುಲಕ್ಕೂ ಅದು ಕೇಳಿಸಿತ್ತು. ಅದು ಬಹುಶಃ ತೇಜಸ್ವಿಯವರಿಗೂ ಕೇಳ್ತೇನೋ ಎಂಬಂತೆ ಮಾರುದ್ದ ದೂರ ಹೋಗಿ ಸ್ಕೂಟರ್ ನಿಲ್ಲಿಸಿದರು. ಸುಮ್ಮನಿರಲಾರದೆ ದೇವಣ್ಣ “ಮೇಡಂ, ನೀವು ಊರಿಗೆ ಹೊಸಬರು ಅಂತ ಅವ್ರಿಗೆ ಗೊತ್ತಾಗಿರಬೇಕು, ವಿಚಾರಿಸಲು ಈಗ ಬರ್ತಾರೆ ಇರಿ,” ಅಂದರು. ನಾನು ಸ್ಕೂಟರ್ ಕಡೆ ನೋಡುತ್ತಾ “ಅವ್ರ್ಯಾಕೆ ಬರ್ತಾರೆ, ಏನೋ ಹೊಸಬರು ಅಂತ ನೋಡ್ತಾ ಇರಬಹುದು,” ಅಂದೆ.

ತೇಜಸ್ವಿ ಅಲ್ಲಿ ಸ್ಕೂಟರ್ ಮೇಲೆ ಕೂತೇ ನಮ್ಮನ್ನು ನೋಡ್ತಾ ಇದ್ದಾರೆ. ಕುತೂಹಲವೋ, ಏನೋ. ಅವರ ಹೆಸರೆತ್ತಿದ್ದು ಅವರಿಗೆ ಕೇಳಿತ್ತೇನೋ. ಇಲ್ಲಾ ನನ್ನ ಬೆಂಗಳೂರಿನ ಕನ್ನಡ ಅವರಿಗೆ ಗೊತ್ತಾಯ್ತೆನೋ. ಪತ್ರಿಕೆಯವರು ಅಂದ್ಕೊಂಡ್ರೇನೋ. ದೇವಣ್ಣ, ಮತ್ತವರ ಸ್ನೇಹಿತ ಕುಲುಕುಲು ನಗ್ತಾನೇ ಇದ್ದಾರೆ.

ನಾನೇನೋ ತೇಜಸ್ವಿ ಕಡೇನೇ ನೋಡ್ತಾ ನಿಂತಿದ್ದೀನಿ. ರಸ್ತೆಯ ಆ ಕಡೆ, ಈ ಕಡೆ ಜನ ನಮ್ಮನ್ನ ಅಷ್ಟೊತ್ತಿನಿಂದ ನೋಡ್ತಾ ಇರೋದು ಆಗ ನನ್ನ ಗಮನಕ್ಕೆ ಬಂತು. ತಬ್ಬಿಬ್ಬಾಯ್ತು. ಇದ್ದಕ್ಕಿದ್ದಂತೆ ಅವರೇ ಸೃಷ್ಟಿಸಿದ ‘ಜುಗಾರಿ ಕ್ರಾಸ್’ ಕತೆಯ ಪಾತ್ರಗಳಾದ ಗೌರಿ ಮತ್ತು ಸುರೇಶ ನೆನಪಿಗೆ ಬಂದರು. ಅವರಿಬ್ಬರೂ ಏಲಕ್ಕಿ ಮೂಟೆಗಳನ್ನ ಸಾಗಿಸಿಕೊಂಡು ಪೇಟೆಯಲ್ಲಿ ಎಲ್ಲಿ ಹೋದರೂ ಯಾರೋ ಅವರನ್ನೇ ಗಮನಿಸುತ್ತಿದ್ದಾರೆ ಎಂಬ ಗುಮಾನಿ ಅವರನ್ನ ಕಾಡಿತ್ತು.

ಪೇಟೆಯೇ ಒಂದು ರಹಸ್ಯವಾಗಿತ್ತು. ಅಲ್ಲೊಂದು ನಿಗೂಢತೆಯಿತ್ತು. ಆ ದಿನ ಪೇಟೆಯಲ್ಲಿ ಹೊಸಬರಿದ್ದರು. ಹೊಸಬರ ಜೊತೆಯಲ್ಲಿ ಪೇಟೆಯವರು ಅದೇನೋ ವ್ಯವಹಾರ ನಡೆಸಿದ್ದರು. ಆಗ ನಾನಿದ್ದ ಸನ್ನಿವೇಶವೂ ಹಾಗೇ ಇತ್ತಲ್ಲವೇ ಅನ್ನಿಸಿತು. ಅಲ್ಲಿ ಸ್ಕೂಟರ್ ಮೇಲೇ ಕುಳಿತು ಒಂದು ಕಾಲನ್ನ ನೆಲದ ಮೇಲೆ ಊರಿ ನಮ್ಮನ್ನೇ ನೋಡುತ್ತಿದ್ದ ತೇಜಸ್ವಿಯವರ ತಲೆಯಲ್ಲಿ ಏನು ನಡೆದಿತ್ತು? ಪಾತ್ರಗಳು ಸೃಷ್ಟಿಯಾಗುತ್ತಿದ್ದವೇ?! ಪೇಟೆಯ ರಹಸ್ಯ, ನಿಗೂಢತೆಯಲ್ಲಿ ನಾನು, ದೇವಣ್ಣ, ಅವರ ಸ್ನೇಹಿತ ಎಲ್ಲರೂ ಪಾತ್ರಗಳಾದೆವಾ ಎನ್ನಿಸಿತು.

ನಾನೊಬ್ಬ ಗೂಢಾಚಾರಿಯಂತೆ ಕಾಣಿಸಿದೆನೇ? ಅವರು ಯಾಕಾಗಿ ನಮ್ಮನ್ನೇ ಅಷ್ಟು ಹೊತ್ತು ನೋಡಿದರು? ತಮ್ಮ ಮುಂದಿನ ಕಥೆಗೆ ಅವರು ಪಾತ್ರ ಕಟ್ಟುತ್ತಿದ್ದರೆ ನಾನು, ದೇವಣ್ಣ ಅದರಲ್ಲಿ ಸೇರಿಕೊಂಡೆವೇ? ಎಲ್ಲವೂ ಅಯೋಮಯವಾಗಿತ್ತು. ಮೈ ಜುಂಮ್ ಎಂದಿತ್ತು.

ಅಷ್ಟು ಸಲೀಸಾಗಿ ಒಳ್ಳೊಳ್ಳೆ ಕಥೆ ಕಟ್ಟುತ್ತಿದ್ದ ಅಂಥಾ ತೇಜಸ್ವಿ ಇನ್ನೂ ಬದುಕಿದ್ದು ಮತ್ತಷ್ಟು ಕಥೆ ಹೇಳಬೇಕಿತ್ತು. ರೇಗಾಡುತ್ತಾ ಹಾರಾಡುತ್ತಾ ಈ ಕಾಲದ ಎಲ್ಲರನ್ನೂ ಚೆನ್ನಾಗಿ ಬೇಕಾದಷ್ಟು ಬೈಯಬೇಕಿತ್ತು. ಅವರನ್ನು ನಾವು ಇನ್ನಷ್ಟು ಓದಬೇಕಿತ್ತು, ಓದುವುದಿತ್ತು.

‍ಲೇಖಕರು avadhi

September 11, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Deepa G

    ನೀವು ತೇಜಸ್ವೇಪ್ಪನ್ನ ಅಷ್ಟು ಹತ್ತಿರದಿಂದ ನೋಡಿದ್ದು ಮತ್ತೆ ಅಷ್ಟೆ ಹತಿರದಿಂದ ಅವರಿಗೆ ಕಾಣಿಸಿಕೊಂಡದ್ದು ನನ್ನ ಜಿಟ್ಟೆಉರಿಗೆ ಕಾರಣ… ತುಂಬ ಚೆನ್ನಾಗಿ ಮೂಡಿ ಬಂದಿದೆ ನೆನಪಿನ‌ಸುರುಳಿ..

    ಪ್ರತಿಕ್ರಿಯೆ
  2. T S SHRAVANA KUMARI

    ಹೌದು, ತೇಜಸ್ವಿ ಇನ್ನೂ ಇರಬೇಕಿತ್ತು. ಎಷ್ಟೆಷ್ಟೋ ಕತೆಗಳನ್ನು ನಮಗೆ ಹೇಳಬೇಕಿತ್ತು.

    ಪ್ರತಿಕ್ರಿಯೆ
  3. Seema S V

    ನೀವು ಅವ್ರನ್ನು ಮಾತಾಡಿಸ್ಬೇಕಿತ್ತು…ಅವ್ರಿಂದ ಬಯ್ಗಳು ತಿನ್ನಕ್ಕೂ ಪುಣ್ಯ ಮಾಡಿರ್ಬೇಕು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: