ತೀರಿತು ತೀರ್ಥಹಳ್ಳಿಯಲ್ಲಿ …
– ಲಕ್ಷ್ಮೀಶ ಭಟ್
ನಾನಾಗ 3 ನೇ ತರಗತಿಯಲ್ಲಿದ್ದೆ. ಆಗಿನ ಮಾಸದ ಮುಸುಕು ಮುಸುಕು ನೆನಪು. ಮಾಸ್ತರಿಕೆ ಮಾಡಬೇಕೆಂಬ ಹಂಬಲ. ನಾನು ಪ್ರತಿದಿನ ಹೇಳುವ ‘ನಮಸ್ತೇ ಸರ್’ ಪದ ನನಗೆ ಹೇಳಲ್ಪಡಬೇಕೆಂಬ ಹಮ್ಮಿಗಾಗಿಯೋ ಗೊತ್ತಿಲ್ಲ! ಒಟ್ಟು ನಾನೊಬ್ಬ ಇಸ್ಕೂಲು ಮೇಸ್ಟ್ರಾಗಬೇಕೆಂಬ ತುಡಿತ. ಮುಂದೆ 23 ವರ್ಷಗಳ ಬಳಿಕ 2013 ರಲ್ಲಿ ಮೊದಲ ಬಾರಿ ಚಿಗುರಿದ ಮೊಳಕೆ, ಬೆಳೆದು ಫಲಕೊಟ್ಟಾಗ ಧನ್ಯತೆಯಿಂದ ನನ್ನ ಮನ ಬಾಗಿತ್ತು. ನಾನೂ ಉಪನ್ಯಾಸಕನಾದೆ ಎಂದು ಮನ ಒಮ್ಮೆ ಬೀಗಿತ್ತು!. ಅತಿಥಿ ಉಪನ್ಯಾಸಕನಾಗಿ ಮೊದಲಬಾರಿ ಕಾಲೇಜು ಪ್ರವೇಶಿಸಿದ ನನಗಂದು ಪ್ರಸವ ವೇದನೆ. ಈ ವರ್ಷ ಒಂದನ್ನು ಪೂರ್ಣಗೊಳಿಸಿದಾಗ ಕೂಸು ಕೈಗೆ ಬಂದ ಸಂಭ್ರಮ. ತಾಯ್ತನದ ಬಯಕೆ ಈಡೇರಿ ಬದುಕು ಫಲವತಿಯಾದ ಸೌಭಾಗ್ಯ.
ಪದವಿ ಓದುವ ಕಾಲದಲ್ಲಿ ನನಗೆ ಕುವೆಂಪು, ತೇಜಸ್ವಿ ಒಂದು ಬೆರಗು. ಅಪ್ಪ ಕಾಡಿನಿಂದ ಪೇಟೆಗೆ ತೆರಳಿದರೆ ಮಗ ಪೇಟೆಯಿಂದ ಕಾಡಿಗೆ ಬಂದ. ಅದೂ ಅಪ್ಪ ಕುಲಪತಿಯಾಗಿದ್ದ ಕಾಲಕ್ಕೆ! ಹಾಗಾಗಿ ತೇಜಸ್ವಿ ನನ್ನ ಪಾಲಿನ ಹೀರೋ. ಅವರ ಕೃತಿ-ಬದುಕನ್ನು ಕಂಡು ಅವರ ಬಗೆಗಿನ ಬೆರಗು ಮತ್ತಷ್ಟು ಹೆಚ್ಚಿತು. ಮನಸ್ಸು ಅವರನ್ನೇ ನೆಚ್ಚಿತು. ಅಂಥ ತೇಜಸ್ವಿ ತನ್ನ ಬಾಲ್ಯ ಕಳೆದ, ಗೆಳೆಯ ಕಡಿದಾಳು ಶಾಮಣ್ಣನಂಥವರ ಜೊತೆ ಚೇಷ್ಟೆ ಮಾಡಿದ, ಮೀನು ಹಿಡಿದು ಬೆರಗಾದ ನೆಲದಲ್ಲಿ ಇಂದು ನಾನು ಉಪನ್ಯಾಸಕ! ಹೌದು ತೀರ್ಥಹಳ್ಳಿಯಲ್ಲಿ ಬದುಕಿನ ಬಲು ದೊಡ್ಡ ಕನಸೊಂದು ತೀರಿತ್ತು! ನಮ್ಮ ಕಾಲೇಜೋ ತುಂಗೆಯ ಮಡಿಲಲ್ಲೆ. ಇಲ್ಲಿನ ಪ್ರತಿ ಬಂಡೆಯ ಬಾಲಕ ತೇಜಸ್ವಿಯ ಪಡಿಯಚ್ಚಿದೆ. ತೇಜಸ್ವಿಯನ್ನು ಕಂಡ ಮೀನಿದೆ! ಕುವೆಂಪು ಅವರ ಮನಸ್ಸಿದೆ. ಮಲೆಗಳ ಮದುಮಗಳ ತಂಬೆಲರಿದೆ. ಹೌದು ಆನಂದಮಯ ಈ ಜಗ ಹೃದಯ …
ಇಲ್ಲಿನ ಮುಗ್ಧ ಮನಸ್ಸಿನ ಸ್ನಿಗ್ಧ ಹೃದಯದ ವಿದ್ಯಾರ್ಥಿಗಳ ಜೊತೆ ಮಗುವಾಗುವ ಭಾಗ್ಯ ನನ್ನದು. ಪ್ರತಿ ಶಿಷ್ಯ-ಶಿಷ್ಯೆಯರ ಕಣ್ಣಲ್ಲಿ ಕುವೆಂಪು, ತೇಜಸ್ವಿಯನ್ನು ಅರಸುತ್ತಾ ಅಂಥ ಚೇತನರು ಕಲಿಸಿದ ಪ್ರೀತಿಸಿದ ಪ್ರಕೃತಿಯ ಪಾಠವನ್ನು ಶಿಷ್ಯರ ಮೂಲಕ ಒಪ್ಪಿಸುವ ಭಾವ ನನ್ನದು.
ಕಾಲೇಜು ಮುಗಿದ ಬಳಿಕ ಮತ್ತೆ ಪ್ರಕೃತಿಯ ಪಾಠ. ಮುಸ್ಸಂಜೆ ಹೊತ್ತಿನಲ್ಲಿ ತುಂಗೆಯೊಡಲು ಸೇರುವ ಕಾಲ. ಪುಟಾಣಿ ಮಗುವಿಗೆ ತಾಯಿ ಮಡಿಲಲ್ಲಿ ಮಲಗಿ ನಲಿಯುವ, ಒಲವುಣ್ಣುವ ಸಂಭ್ರಮ. ಇಲ್ಲಿಗೆ ಸ್ವಲ್ಪ ದೂರದ ಶೃಂಗೇರಿ ಸನಿಹದ ಗಂಗಾಮೂಲದಲ್ಲಿ ಜನಿಸುವ ತುಂಗೆ, ತೀರ್ಥಹಳ್ಳಿಗೆ ಬರುವಾಗ ತುಂಡು ಲಂಗ-ದಾವಣಿ ಬಟ್ಟ ಮುದ್ದು-ಮುದ್ದಿನ ಶೋಡಷಿ! ಮೀಯಲು ತುಂಗೆಯೊಡಲಿಗೆ ಇಳಿದ ನನಗೆ ತುಂಗೆಯ ಹೃದಯ ಮಿಡಿತ ಕೇಳುವ ಕಾತರ. ತುಂಗೆಯ ಒಡಲು ಅದೆಷ್ಟು ನೆನಪಿನ ಆಗರ. ಉಕ್ಕಿನ ಕಾಖರ್ಾನೆಯ ತ್ಯಾಜ್ಯದೊಂದಿಗೆ ನವ ನಾಗರಿಕನ ಕಥೆ, ಕುದುರೆಮುಖದ ಗಣಿಗಾರಿಕೆಯ ವ್ಯಥೆ ಒಂದು ಮುಖವಾದರೆ ವಿಜಯ ನಗರ ಸಾಮ್ರಾಜ್ಯದಂಥ ಸುವರ್ಣಯುಗ ಅರಳಿ-ಮರಳಿದ ಚರಿತ್ರೆ ಎಲ್ಲ ಕೇಳಿಸುತ್ತಾಳೆ. ಈ ಜೀವ ನದಿ. ಬಹುಷಃ ತೇಜಸ್ವಿ ಕೂಡಾ ಈ ಕೇಳುವಿಕೆಗಾಗಿಯೇ ನದೀ ಪಾತ್ರದಲ್ಲಿ ಕೂರುತ್ತಿದ್ದರೇನೋ? ಮೀನು ಹಿಡಿಯುವುದು ಒಂದು ನೆಪವಷ್ಟೇ! ತುಂಗೆ ಅದೆಷ್ಟು ಏರಿಳಿತಗಳನ್ನು ಕಂಡಿಲ್ಲ? ತನ್ನಲ್ಲಿ. ತನ್ನ ತಟದಲ್ಲಿ ಅರಳಿದ ಸಾಮ್ರಾಜ್ಯಗಳಲ್ಲಿ. ಆದರೂ ಇಂದಿಗೂ ಅಂದಿನಂತೆಯೇ ಹರಿಯುತ್ತಿದ್ದಾಳೆ. ಸ್ಥಿತ ಪ್ರಜ್ಞೆ! ಪ್ರಕೃತಿಯ ಪಾಠದ ಎದುರು ನಮ್ಮ ಪುಸ್ತಿಕೆಯ ಪಾಠ ಯಾವ ಮರದ ತೊಪ್ಪಲು?
ಉಪನ್ಯಾಸಕ ವೃತ್ತಿಯ ಮತ್ತೊಂದು ಅನುಭವ. ಪ್ರಸಕ್ತ ವರ್ಷದಲ್ಲಿ ನನ್ನ ಕಜ ಆದಿಮ ತರಗತಿಗಳಿಗಾಗಿ ಪ್ರತಿ ವಾರಾಂತ್ಯ ಬೆಂಗಳೂರಿಗೆ ತೆರಳಬೇಕಾಗಿತ್ತು. ಬದುಕಿನ ಆದ್ಯಂತಗಳನ್ನು ಪ್ರತಿವಾರ ಅರಿಯುವ ಅದೃಷ್ಟ ನನಗೆ. (ಒಂದು ಪ್ರಕೃತಿಯ ಸೃಷ್ಠಿ. ಮತ್ತೊಂದು ಪ್ರಕೃತಿಯ ತನ್ಮೂಲಕ ಬದುಕಿನ ಅಂತ್ಯದ ಅನುಭಾವ!.
ಕುವೆಂಪು ಅವರ ಮಾತೊಂದು ನೆನಪಿಗೆ ಬರುತ್ತಿದೆ.
ತೇಜಸ್ವಿ, ನೀನು ಒಂದು ವರ್ಷದ ಮಗು.
ನಾನು ಒಂದು ವರ್ಷದ ತಂದೆ.
ಹಾಗಾಗಿ ನಾನು ನೀನು ಒಂದೇ!
ತಾಯಿಗೆ ತಾಯಿ ಪಟ್ಟವನ್ನು ಕೊಟ್ಟ ತಾಯ್ತನದ ಸೌಭಾಗ್ಯ ಕರುಣಿಸಿದ್ದು ಮಗು. ಮಗು ಹುಟ್ಟಿದ್ದರಿಂದ ಹೆಣ್ಣು ತಾಯಿಯಾಗುತ್ತಾಳೆ!. ಹಾಗೆಯೇ ನನ್ನ ಕನಸನ್ನು ನನಸಾಗಿಸಿದ ವೃತ್ತಿ ಜೀವನದ ಮೊದಲ ವರ್ಷವನ್ನು ಸೊಗಸಾಗಿಸಿದ ತೀರ್ಥಹಳ್ಳಿಗೆ, ತೀರ್ಥಹಳ್ಳಿಯ ನನ್ನ ನೆಚ್ಚಿನ ಶಿಷ್ಯಂದಿರಿಗೆ ನಾನು ಋಣಿ. ನನ್ನಲ್ಲಿನ ಶಿಕ್ಷಕನನ್ನು ಹಡೆದದ್ದಕ್ಕಾಗಿ …






Bhatre, you are back with your writing. Very heart touching concept and content. Keep it up. Thank you team avadhi