ತೇಜಸ್ವಿಯವರ 'ಎಂದೂ ಮಾತಾಡದ ಹುಡುಗಿ'

 soumya prabhu kalyankar
ಸೌಮ್ಯ ಪ್ರಭು ಕಲ್ಯಾಣ್‌ಕರ್
ತೇಜಸ್ವಿಯವರ ಜುಗಾರಿ ಕ್ರಾಸ್ ಅಲ್ಲಿ ಮೇದರಹಳ್ಳಿಯ ದ್ಯಾವಮ್ಮನ ಮಗಳ ಪ್ರಸಂಗ ಬರುತ್ತದೆ. ಮೂಕಿ ದ್ಯಾವಮ್ಮನ ಮಗಳಾದ, ಹೆಸರೂ ಇಲ್ಲದ ಹುಡುಗಿ ಮೂಕಿಯೇ ಎಂದು ಎಲ್ಲರೂ ತೀರ್ಮಾನಪಟ್ಟಿರುತ್ತಾರೆ. ಆದರೆ ಇದ್ದಕ್ಕಿದ್ದ ಹಾಗೆ ಪವಾಡವೆಂಬಂತೆ ಸರಾಗವಾಗಿ ಮಾತನಾಡುತ್ತಾಳೆ ಹುಡುಗಿ.

tejasvi13ತೇಜಸ್ವಿ ಅವಳನ್ನು ಎಂದೂ ಮಾತಾಡದ ಹುಡುಗಿ ಎಂದು ಕರೆದಿದ್ದಾರೆ. ದಾರಿ ಬದಿಯಲ್ಲಿ ನಿಂತು ರೆಂಜ ಹೂಗಳ ಮಾಲೆ ಮಾರುವ ಹೆಸರಿಲ್ಲದ ಈ ಹುಡುಗಿಗೆ, ತನ್ನ ಬುಟ್ಟಿಯಲ್ಲಿದ ಎಲ್ಲಾ ಮಾಲೆಗಳನ್ನು ಮಾರುವ ಆಸೆ. ತೇಜಸ್ವಿಯೇ ಹೇಳುವಂತೆ ಹೃದಯಹೀನ ಪ್ರಪಂಚದ ಮೇಲೆ ದುಃಖಗೊಂಡಿದ್ದ ಪುಟ್ಟ ಹುಡುಗಿಗೆ ಕೊನೆಗೆ ರಸ್ತೆಯಲ್ಲಿ ಕಾಣುವ ವಾಹನದಲ್ಲಿ ಇದ್ದವರಾದರೂ ಎಂತವರು? ಸಾಕ್ಷಾತ್ ಯಮನ ದೂತರು, ಕೊಲೆಗುಡಕರು. ನೆತ್ತಿಯ ಮೇಲೆ ಮುಷ್ಠಿಯಿಂದ ಒಂದೇ ಒಂದು ಗುದ್ದಿ ಆ ಹುಡುಗಿಯನ್ನು ಕೊಲ್ಲುವಷ್ಟು ಕ್ರೋಧ, ಆಕ್ರೋಶದಲ್ಲಿದ್ದವರು! ಮುಂದಿನ ಚಿತ್ರಣವನ್ನು ತೇಜಸ್ವಿ ಯಾವ ಪರಿಯಲ್ಲಿ ಎಳೆ ಎಳೆಯಾಗಿ ಬಿಡಿಸಿತ್ತಿದಾರೆಂದರೆ, ಅವರ ಮಾತುಗಳಲ್ಲಿ ಓದಿ.
 
ದೌಲತ್ ರಾಮ್ ಚಕ್ಕನೆ ಒಂದು ನೋಟು ತೆಗೆದು ಹುಡುಗಿ ಕೈಲಿ ಕೊಟ್ಟು, ಕೈಲಿದ್ದ ಬುಟ್ಟಿ ಕಿತ್ತುಕೊಂಡಂತೆ ತೆಗೆದುಕೊಂಡು, ” ಹೋಗು, ಹೋಗು ” ಎಂದು ಗದರಿದ.
ಬೆಳಗ್ಗಿಂದ ನಿಂತೂ ನಿಂತೂ, ಪ್ರತಿಯೊಂದು ವಾಹನ ಬಂದಾಗಲೂ ಪ್ರತೀಕ್ಷೆಯಿಂದ ಕಾದೂ, ಕಾದೂ ಹತಾಶೆಯಲ್ಲಿ ದುಃಖದಲ್ಲಿ ತನ್ನ ಕೈಯಲ್ಲಿ ಒಣಗುತ್ತಿದ್ದ ಕೊನೆಯ ಹೂ ಮಾಲೆಯನ್ನು ಎತ್ತಿ ಹಿಡಿದ ದ್ಯಾವಮ್ಮನ ಮಗಳಿಗೆ ದೌಲತ್ ರಾಮನ ವರ್ತನೆ ಎಷ್ಟು ದುಃಖ ತಂದಿತೆಂದರೆ ನೆತ್ತಿಯ ಮೇಲೆ ಮುಷ್ಠಿಯಿಂದ ಅಪ್ಪಳಿಸಿದ ಹಾಗೇ ಆಯ್ತು! ಮರಗಳೆಲ್ಲ ಹುಚ್ಚರ ಹಾಗೆ ತಲೆ ಕೆದರಿಕೊಂಡು ಗಾಳಿಗೆ ತೂರಾಡುತ್ತ ಹಿಯ್ಯಾಳಿಸಿ ನಗುವಂತೆ, ನೋಡಿದಷ್ಟುದ್ದಕ್ಕೂ ಹಾಸಿ ಬಿದ್ದಿರುವ ರಸ್ತೆ ಕಠೋರ ಜೀವನದಂತೆ, ಮೋಡ ಕಿಕ್ಕಿರಿದಿದ್ದ ಆಕಾಶ, ಅವಳನ್ನು ಮುಚ್ಚಿ ಕೂಡಿಹಾಕಿದ ಡಬ್ಬಿ ಮುಚ್ಚಲದಂತೆ tejasvi26ಅಸಹನೀಯವಾಗಿ ಕಂಡಿತು. ಬೆಳಗ್ಗೆ ಬರುತ್ತಾ ಬುಟ್ಟಿಯ ತುಂಬಾ ಮಾಲೆಗಳೊಂದಿಗೆ ಹೊತ್ತು ತಂದಿದ್ದ ಅವಳ ಕಿನ್ನರ ಕನಸುಗಳೆಲ್ಲ ಧೂಳು ಹಿಡಿದು ಮುರುಟಿ ದುರ್ಭರವಾದವು. ಹುಡುಗಿಯ ಕಣ್ಣೊಳಗೆ ನೀರು ತುಂಬಿ ಪ್ರಪಂಚವೆಲ್ಲಾ ಮಂಜು ಮಂಜಾಯ್ತು.
ಆ ಹುಡುಗಿ ಹುಲ್ಲಿನ ಮಧ್ಯೆ ಬೈತಲೆ ಎಳೆದಂತಿದ್ದ ಕಾಲು ದಾರಿಯಲ್ಲಿ ಮೌನವಾಗಿ ಮ್ಲಾನವದನದಲ್ಲಿ ತಿರುಗಿ ಮಾತೇ ಆಡದೆ ಹೊರಟು ಹೋದಳು. ಬಂದಿದ್ದ ಮಾತು ಮತ್ತೊಮ್ಮೆ ಶಾಶ್ವತವಾಗಿ ನಿರ್ಗಮಿಸಿತ್ತು.
ಈ ಹುಡುಗಿ ನನಗೆ ಪದೇ ಪದೇ ಕಾಡುತ್ತಾಳೆ. ಮತ್ತೆ ಮುಂದುವರೆದ ಅವಳ ಮೂಕ ಪ್ರಪಂಚವೂ ಕಾಡುತ್ತದೆ. ಮಗಳು ಮಾತನಾಡುತ್ತಾಳೆ ಎಂದು ಸಂಭ್ರಮಿಸಿದ ದ್ಯಾವಮ್ಮ ನೆನಪಿಗೆ ಬರುತ್ತಾಳೆ. ಮಗಳೇನೋ ಚಿರಪರಿಚಿತ ಸನ್ನೆಯ ಭಾಷೆಗೆ ಮತ್ತೆ ಮೊರೆ ಹೋಗಿ ಆದುದ ಹೇಳಿಕೊಳ್ಳಬಹುದೋ ಏನೋ ಒಂದು ದಿನ. ಆದರೆ ಮಾತು ಮತ್ತೆ ಕಳೆದುಕೊಂಡ ಮಗಳ, ಜೀವನ ಪೂರ್ತಿ ಮಾತನಾಡದ ದ್ಯಾವಮ್ಮ ಅದೆಂತು ಸಂತೈಸುತ್ತಾಳೆ ?!? ಈ ಪ್ರಪಂಚ ಹೀಗೆಯೇ, ಎಂದು ಅದು ಹೇಗೆ ಸಮಾಧಾನಪಡಿಸಬಲ್ಲಳು?
ಕೊನೆಗೂ ಬಾಯಿ ಬರದ ಹಸು ತನ್ನ ಕರುವನ್ನು ನೆಕ್ಕಿ ಸಂತೈಸುವ ಪರಿ ಕಣ್ಣಿಗೆ ಬರುತ್ತದೆ.
ಭಾಷೆಗೆ ನಿಲುಕದ ಸಂಕಟವನ್ನು, ತಳಮಳವನ್ನು ನಮ್ಮೊಳಗೆ ತೇಜಸ್ವಿ ಹುಟ್ಟು ಹಾಕುವ ಪರಿಯಿದು.
ಎಂದೋ ನಿಮಗೆ ಈ ಹುಡುಗಿ ಸಿಗಬಹುದು, ನೋಯಿಸಬೇಡಿ ಎಂದಿದ್ದಾರೆಯೇ ತೇಜಸ್ವಿ?

‍ಲೇಖಕರು G

April 5, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಅಕ್ಕಿಮಂಗಲ ಮಂಜುನಾಥ

    ಬರಹ ತುಂಬಾ ಸೊಗಸಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: