ಇದು ತೆಲುಗಿನ `ಮಿಥುನಂ’ ಚಿತ್ರದ ಕಥಾಹಂದರ
ಅರುಣಕುಮಾರ್
ಒಂದು ಗ್ರಾಮ, ಅದರಲ್ಲೊಂದು ತೋಟದ ಮನೆ, ಆ ಮನೆಯಲ್ಲಿಬ್ಬರು ವೃದ್ಧ ಬ್ರಾಹ್ಮಣ ದಂಪತಿಗಳು. ಮಗ ಮತ್ತವನ ಸಂಸಾರ ಅಮೆರಿಕದಲ್ಲಿ ನೆಲೆಸಿದೆ. ಇಲ್ಲಿ ಮನೆಯಲ್ಲಿ ಇಬ್ಬರೇ. ಪರಸ್ಪರ ಒಬ್ಬರನ್ನೊಬ್ಬರ ಆರೈಕೆ ಮಾಡಿಕೊಂಡಿರುತ್ತಾರೆ. ಗಂಡ ಮಹಾನ್ ಭೋಜನ ಪ್ರಿಯ.
ಆತ ಇಷ್ಟ ಪಟ್ಟವನ್ನೆಲ್ಲಾ ತಿಂಡಿ ತಿನಿಸುಗಳನ್ನು ಮಾಡಿಕೊಡುವುದು, ಅಡುಗೆ ಮಾಡಿ ಬಡಿಸುವುದು, ಫಲಾಹಾರ ನೀಡಿ, ಎಲೆಅಡಿಕೆ ತಾಂಬೂಲ ಕೊಟ್ಟು ಮಗುವಿನಂತೆ ಮಲಗಿಸುವುದು ಹೆಂಡತಿಯ ದಿನನಿತ್ಯದ ಕರ್ತವ್ಯವಾದರೆ, ತಮ್ಮದೇ ತೋಟದಲ್ಲಿ ಬೆಳೆದ ತರಕಾರಿ ಹಣ್ಣು ಹಂಪಲನ್ನು ಕಿತ್ತು ತರುವುದು, ಮಡದಿಯ ತಲೆಬಾಚುವುದು, ಆಕೆಯ ಕೈಗಳಿಗೆ ಮದರಂಗಿ ಹಚ್ಚುವುದು, ಮಡಿಕೆ ಮಾಡಿಕೊಡುವುದು ಮಾತ್ರವಲ್ಲ ಆಕೆಯ ಕಾಲಿಗೆ ಹೊಂದುವ ಮೆಟ್ಟುಗಳನ್ನು ಹೊಲಿದುಕೊಡುವುದು ಇತ್ಯಾದಿ ಗಂಡನ ಜವಾಬ್ದಾರಿಗಳು.
ಕದ್ದು ಬೆಲ್ಲ ಜಜ್ಜಿ ತಿನ್ನಲು ಹೋಗಿ ಕೈಗೆ ಪೆಟ್ಟುಮಾಡಿಕೊಳ್ಳುವ ಗಂಡನ ಕೈಗಳಿಗೆ ಶುಶ್ರೂಷೆ ಮಾಡುವ ಹೆಂಡತಿ… ಹೆಂಡತಿ ಹಣ್ಣು ಕೀಳಲು ಹೋಗಿ ಬಿದ್ದು ಪೆಟ್ಟು ಮಾಡಿಕೊಂಡಾಗ ಆಕೆಯ ಕಾಲನ್ನು ನೀವಿ ಸಂತೈಸುವ ಗಂಡ.. ಒಟ್ಟಾರೆ ಅದು ಅವರಿಬ್ಬರದ್ದೇ ಲೋಕ. ಹೆಚ್ಚೆಂದರೆ ದೂರವಾಣಿಯಲ್ಲಿ ಮಾತಾಡುವ ಮಗ, ಮೊಮ್ಮಕ್ಕಳು. ಬಿಟ್ಟರೆ ಮನೆಯ ಮುಂಭಾಗದಲ್ಲೇ ಇರುತ್ತಿದ್ದ ಸಾವಿತ್ರಿ ಮತ್ತು ಅದರ ಕೂಸು ಅಂಜಿ ಎಂಬ ಹಸು ಕರು. ಒಮ್ಮೆ ಅಂಜಿ ತೋಟದಿಂದ ತಪ್ಪಿಸಿಕೊಂಡಿರುತ್ತದೆ.
ಎಲ್ಲೆಲ್ಲಿ ಹುಡುಕಾಡಿದರೂ ಕಾಣಸಿಗುವುದಿಲ್ಲ. ಕಡೆಗೂ ಅದು ಸಿಗುವುದು ನಿರ್ಜೀವವಾಗಿ. ತಪ್ಪಿಸಿಕೊಂಡು ತೋಟದಿಂದ ಹೊರಹೋದ ಸಣ್ಣಕರು ಸಿಕ್ಕಿದ್ದನ್ನೆಲ್ಲ ತಿನ್ನಬಾರದೆಂದು ಬಾಗೆ ಕಟ್ಟಿದ್ದ ಬಿದಿರಿನ ಕುಕ್ಕೆಯನ್ನು ಬಿಡಿಸಿಕೊಳ್ಳಲಾರದೇ ಹೊಟ್ಟೆಗಿಲ್ಲದೇ ಪ್ರಾಣ ಬಿಟ್ಟಿರುತ್ತದೆ. ಇತ್ತ ಹೆತ್ತವರನ್ನು ನೋಡಲು ಬರುತ್ತೇವೆಂದು ಹೇಳಿದ್ದ ಮಗ-ಮೊಮ್ಮಕ್ಕಳೂ ಬರುವುದಿಲ್ಲ. ಹೆತ್ತಮಕ್ಕಳಿದ್ದೂ ವೃದ್ಧಾಪ್ಯದಲ್ಲಿ ಕಾಡುವ ಅಭದ್ರತೆ, ಏಕಾಂಗಿತನಗಳು, ಒಬ್ಬರನ್ನೊಬ್ಬರು ಬಿಟ್ಟುಹೋಗಬೇಕಾದ ಆತಂಕ, ದುಗುಡಗಳೇ ಇಲ್ಲಿನ ತಿರುಳು.
-ಇದು ತೆಲುಗಿನ `ಮಿಥುನಂ’ ಚಿತ್ರದ ಕಥಾಹಂದರ. ಇಡೀ ಚಿತ್ರದಲ್ಲಿ ಕಾಣಸಿಗುವುದು ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಜ್ಯೂಲಿ ಲಕ್ಷ್ಮಿ ಇಬ್ಬರೇ ಪಾತ್ರಧಾರಿಗಳು. ಅದನ್ನು ಬಿಟ್ಟರೆ ಹಸು-ಕರು, ಮಾವು, ಹಲಸು ಮುಂತಾದ ಮರಗಳು, ತರಕಾರಿ ಗಿಡಗಳು, ಒಂದು ಮನೆ, ದನದ ಕೊಟ್ಟಿಗೆ, ಸುಂದರ ಪರಿಸರಗಳೇ ಇಲ್ಲಿನ ಪಾತ್ರಗಳು. ಎಸ್.ಪಿ.ಬಿ ಮತ್ತು ಲಕ್ಷ್ಮಿ ನಿಜಕ್ಕೂ ಶತಮಾನಗಳಿಂತ ಒಟ್ಟಿಗೇ ಬದುಕಿ ಬಾಳಿದವರಂತೆ, ಬದುಕನ್ನು ಅನುಭವಿಸಿ ನಟಿಸಿದ್ದಾರೆ.
ನಟನೆಯನ್ನೂ ಮೀರಿ ಪ್ರತಿ ದೃಶ್ಯಗಳೂ ನೈಜವಾಗಿ ಮೂಡಿರುವುದು ಅತಿಯಾದ ನಗು ಮತ್ತು ದುಃಖಕ್ಕೆ ಕಾರಣವಾಗುತ್ತದೆ. ಭರಣಿ ತನಿಕೇಳ್ಳ ನಿರ್ದೇಶಿಸಿರುವ ಈ ಚಿತ್ರವನ್ನು ಮಕ್ಕಳನ್ನು ಹೆತ್ತವರು, ಹೆತ್ತವರಿದ್ದೂ ಅವರಿಂದ ದೂರವಿರುವ ಮಕ್ಕಳು ಒಮ್ಮೆ ನೋಡಲೇಬೇಕು.











ಅವಧಿ,
ತೆಲುಗಿನ ಶ್ರೀರಮಣರ ಈ ಕಥೆಯನ್ನು ವಸುಧೇಂದ್ರ ಕನ್ನಡಕ್ಕೆ ’ಮಿಥುನ’ ಹೆಸರಿನಿಂದ ತಂದಿದ್ದಾರೆ..ಬೇರೆ ಭಾಷೆಯದಿರಬಹುದು ಎಂದು ಭಾಸವಾಗದೇ ಇರುವ ಈ ಕಥೆಯನ್ನು ನಾನು ಆಗಾಗ ಓದಿ ಓದಿ ಖುಶಿಪಟ್ಟುಕೊಳ್ಳುತ್ತಿರುತ್ತೇನೆ. ಈ ಕಥೆ ಸಿನೆಮಾ ಆಗಿದೆ ಎಂದು ಓದಿಯೇ ಸಂತಸವಾಯ್ತು..ಜತೆಗೆ ಹೇಗಿರಬಹುದು ಎಂಬ ಕುತೂಹಲವೂ!! ಅರುಣಕುಮಾರ್ ಅವರಿಗೆ ಧನ್ಯವಾದಗಳು.
ಹೌದೌದು… ನಾನು ಅದನ್ನು ಪತ್ರಿಕೆಯಲ್ಲಿ ಓದಿದ ನೆನಪು 🙂
Sir,
Where you got DVD , please advise thanks balu 98455 19387
ಬರಹ ಚೆನ್ನಾಗಿದೆ,ಬಾಲು ಅವರ ಪ್ರಶ್ನೆ ನಂಗೂ ಇದೆ ಸಿ.ಡಿ /ಡಿ .ವಿ.ಡಿ ಎಲ್ಲಿ ಸಿಗಬಹುದು ?
ಅವಧಿಗೆ ಥ್ಯಾಂಕ್ಸ್…
ಸಿಡಿ ಎಲ್ಲಿ ಸಿಗುತ್ತೆ ಅಂತ ನನಗೂ ಮಾಹಿತಿ ಇಲ್ಲ. ಈ ಚಿತ್ರದ ಸಿಡಿ ಈಗಲೇ ಬಿಡುಗಡೆ ಆಗಿರೋದು ಡೌಟು. ಸಂಬಂಧಪಟ್ಟವರಿಗೆ ತಿಳಿಸಿ ಮತ್ತೊಂದು ವಿಶೇಷ ಪ್ರದರ್ಶನ ಏರ್ಪಡಿಸಿ ಅಂತಾ ಕೇಳಬೇಕು…!
-ಅರುಣ್ ಕುಮಾರ್.ಜಿ