ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೆರೆದಷ್ಟೂ ಬಾಗಿಲು..

ದ್ವಾರಸಮಾಚಾರವಿದು! 

jayashree deshapande

ಜಯಶ್ರೀ ದೇಶಪಾಂಡೆ

_20160122_165451

ಈ ಬಾಗಿಲುಗಳ  ಹಿಂದೆ ಕಥಾನಕಗಳಿವೆ… ನಾವು ಕ೦ಡಿಲ್ಲದ, ಕಿವಿಯಾರೆ ಕೇಳಿಲ್ಲದ ಆದರೂ ಇದೀಗ ಇತಿಹಾಸದ ಒಡಲಿನಲ್ಲಿ  ಮುಚ್ಚಿಟ್ಟುಕೊ೦ಡಿರುವ ಸ೦ಗತಿಗಳು.  ಹೌದು, ಯಾರೆಲ್ಲ ಇವುಗಳ ಒಳಹೊಕ್ಕು ಹೊರಬಂದ ಕತೆಗಳೋ… ಯಾರಿಗಾಗಿ ಯಾರು ಕಾದು ಕಣ್ಣೆವೆ ಮಿಟುಕದೆ ದೃಷ್ಟಿ ನೆಟ್ಟು ಕೂತಿದ್ದರೋ.. ಕೂತು ಕಣ್ಣ ಕೊಳಗಳನ್ನು ತುಂಬಿಸಿಕೊಂಡಿದ್ದರೋ…? ಯಾರ ಆಗಮನಕ್ಕೆ೦ದು   ಹೂಹರಡಿದ ನಡೆಮಡಿ ಧರಿಸಿ, ಪಾದಸ್ಪಶ೯ಕ್ಕೆ ಕಾತರಿಸಿದ ಒಳಾವರಣವನ್ನು ತಮ್ಮ ಹಿಂದಿಟ್ಟುಕೊಂಡು, ತೆರೆದುಕೊಳ್ಳುವ ಸಮಯಕ್ಕಾಗಿ ಅಣಿಯಾಗಿ ನಿಂತವೋ ಈ ಬಾಗಿಲುಗಳು!  ಎ೦ತೆ೦ಥ ಮಹಾನುಭಾವ, ಮಾನಿನಿಯರು ಈ  ಹೊಸ್ತಿಲುಗಳನ್ನು ಆಚೀಚೆ  ದಾಟಿ ಘಟಿಸಿದ   ಸಿಹಿ ಕಹಿಗಳ ಸ೦ಭವಗಳಿಲ್ಲಿ ಗೂಡುಕಟ್ಟಿರಬಹುದೋ…

_20160122_171841ಹಬ್ಬ ಹರಿದಿನ , ಮದುವೆ ಮು೦ಜಿಗಳಲ್ಲಿ ಬಣ್ಣ ಬಳಿಸಿಕೊ೦ಡು,ಕುಂಕುಮವಿಡಿಸಿಕೊಂಡು ತಳಿರು ತೋರಣಗಳ ಹಾರ ಧರಿಸಿ ಹೊಳೆದಿದ್ದಾವು ಈ ಬಾಗಿಲುಗಳು… ಹೊಸ್ತಿಲುಗಳು ರ೦ಗೋಲಿ ಎಳೆಸಿಕೊ೦ಡಿದ್ದಾವು…ಮಗುಗಳು ಇಲ್ಲಿ ಒಳಹೊರಗೆ ಆಡಿದ್ದಿರಬಹುದು.   ಬಾಲೆಯರು, ಕಿಶೋರರು ಇಲ್ಲೇ  ಹಿಂದಡಗಿ ಕಣ್ಣಾಮುಚ್ಚಾಲೆ ಆಡಿದ್ದಾರು… ಮಾನಿನಿಯರು ಆರತಿ ತಟ್ಟೆ ಹಿಡಿದು ನಿಂತಿರಬಹುದು. ಸವಾ೯ಲಂಕೃತೆಯಾಗಿ ನವವಧು ನಾಚುತ್ತ ಹೊಸಿಲಕ್ಕಿ ಯನ್ನು ಬಲಗಾಲಿಂದೊದ್ದು ಪ್ರವೇಶಿಸಿದ್ದಿರಬಹುದು…  ಮಾತೆಯರು ಮಗನ ಕಾಲಸದ್ದಿಗೆ ಹಾರೈಸಿ ಇಣುಕಿಣುಕಿ ನೋಡಿದ್ದಾರು…ಅಪ್ಪಂದಿರು ತೋಳೆತ್ತಿ ಬಾಗಿಲಂಚು ಹಿಡಿದು ದೂರಕ್ಕೆ ನಿರುಕಿಸಿದ್ದಿರಬಹುದು.. ಓಹ್ ಎಷ್ಟೆಲ್ಲ ಸಂಭವಗಳಿಲ್ಲಿ!  ತಿಳಿಯದ ಗುಟ್ಟುಗಳು ಬಚ್ಚಿಟ್ಟುಕೊ೦ಡ ಕಥನಗಳನ್ನು ಒಡೆದು ನೋಡಲು ಹೋಗದೆ ಮಾಟ ,ವಿನ್ಯಾಸ, ಬ೦ಧ, ಬಣ್ಣ, ಕೆತ್ತನೆ,ಕುಸುರಿಗಳನ್ನಷ್ಟೇ ಮೆಚ್ಚಿ ಆಸ್ವಾದಿಸುವ ಮನಸ್ಸುಗಳಿಗೆ  ತಮ್ಮ ಬಹುರೂಪೀ ಪ್ರದರ್ಶನ ಏರ್ಪಡಿಸಿ ನಿ೦ತ ಬಾಗಿಲುಗಳಿವು.

ಏನೆಲ್ಲ ಚಿಂತನೆಗೆ ಹಚ್ಚುವ ಈ ದ್ವಾರಪ್ರದಶ೯ನದಲ್ಲಿ ಅಚ್ಚುಕಟ್ಟಾಗಿ ನಿಂತ ಈ ಕುಸುರಿ ಕೆತ್ತನೆಯ ಸೃಷ್ಟಿಗಳು  ಹಲವಾರು ಅರಮನೆ, ಮಹಲು, ವಾಡೆಗಳಿಂದ, ಗುಡಿಗಳಿಂದ  ಇಲ್ಲಿ ಬಂದುನಿಂತು ಕಾಲಮಾನದ ಕಥೆಗಳನ್ನು ಹೇಳುತ್ತಿವೆ. ಅ೦ದೆ೦ದೋ ತಾವು ಜೀವಿಸಿದ್ದ ಕ್ಷಣಗಳ ಬಗ್ಗೆ ಮೌನದಲ್ಲೇ ಮಾತನಾಡುತ್ತ, ಈಗ ಕಣ್ಣು ಮುಚ್ಚಿ ನಿಂತು ನಿಶ್ಯಬ್ದ ಉಸಿರಿನಲ್ಲಿ ಗತಕಾಲದ ಘಟನೆಗಳಿಗೆ,ಸಂಗತಿಗಳಿಗೆ ತಾವೇ ಸಾಕ್ಷಿಯಾದ ಸುದ್ದಿ ಹೇಳುತ್ತಿವೆ. ತಮ್ಮಂಗವಿಡೀ ತುಂಬಿದ ಚೌಕಿ. ಚಿತ್ತಾರ, ಆನೆ, ಹುಲಿ, ಸಿಂಹ,  ಕುದುರೆ, ಗಿಣಿ ಗೊರವಂಕಗಳ ಸೂಕ್ಷ್ಮ ಕುಸುರಿಯ ಚೆಲುವನ್ನು ತೆರೆತರೆದು ಹಿಡಿಯುತ್ತ ನಸುನಕ್ಕಿವೆ. ಶಿಲಾಬಾಲಿಕೆಯರು, ದೇವ,ದೇವತೆಯರು , ರಾಜ ರಾಣಿಯರೆಲ್ಲರೂ  ಪ್ರತ್ಯಕ್ಷ ಇಲ್ಲಿ.  ಕಂಡೂ ಕಾಣದ ಕಿಂಡಿಗಳು ತಮ್ಮೊಳಗಿ೦ದ  ತೆಳುಗಾಳಿಯ ಹಾಸಿಗೆ ದಾರಿಕೊಟ್ಟಿವೆ..ಕಮಾನುಗಳ ಬಾಗು ಬಳುಕಿನ ತುದಿಯಲ್ಲಿನ ಕೆತ್ತನೆಯನ್ನು ನೋಡಿ ಎನ್ನುತ್ತ  ಕರೆದು ತೋರಿಸಿವೆ.ಅಂದೆಂದೋ ಈ ಒಳಗೆ ಉಕ್ಕಿ ಹರಿದಿರಬಹುದಾದ ಅಳು, ಪ್ರೀತಿ ,ನಗು,ಸ್ನೇಹ, ದ್ವೇಷ,ಕರುಣೆಗಳಿಗೆ ತಾವು  ಕಾವಲಾಗಿ ನಿಂತ ಮಾತು ಹೇಳಿವೆ.

ನಮ್ಮ ದೇಶದ ಪೂವ೯, ಪಶ್ಚಿಮ, ದಕ್ಷಿಣೋತ್ತರ ದಿಕ್ಕಗಳಿಂದ ಸಾಗಿ ಬಂದಿರುವ ಈ ಬಾಗಿಲುಗಳು ತಮ್ಮನ್ನೇ ಜನರಿಗಾಗಿ ತೆರೆದಿಟ್ಟುಕೊಂಡಿರುವ ಸ್ಥಳ ಅ೦ದರೆ  ಪುಣೆ ಶಹರದ ‘ರಾಜಾ ದಿನಕರ್ ಕೇಳ್ಕ್ ರ್ ವಸ್ತು ಪ್ರದಶ೯ನಾಲಯ.’
ಅಪರೂದ ವಸ್ತುಗಳ ಅನನ್ಯ ಅಭಿರುಚಿ ಹೊಂದಿದ್ದ ಈ ವೈದ್ಯರ ಅಹನಿ೯ಶಿ ಪ್ರಯತ್ನಗಳ ಫಲಿತವೇ ಕೇಳ್ಕರ್ ಮ್ಯೂಸಿಯಂ ಆಗಿ ಪುಣೆಯ ಬಾಜೀರಾವ್ ರಸ್ತೆಯಲ್ಲಿ ಆಸಕ್ತರನ್ನು ಕೈ ತೆರೆದು ಬರಮಾಡಿಕೊಳ್ಳುತ್ತದೆ. ಇವಿಷ್ಟೇ ವಸ್ತುಗಳು ಇಲ್ಲಿವೆ ಅ೦ತ ಅರ್ಥವಲ್ಲ. ಇನ್ನೂ ಸಾವಿರಾರು ವಸ್ತುಗಳಿರುವ ಈ ಭವನದ ಮುಖ್ಯ ಭಾಗವಾಗಿ ಆಕರ್ಷಣೆಗೆ ಹೆಸರು ಮಾಡಿದ ಈ ಬಾಗಿಲುಗಳನ್ನು,  ಪುಣೆಗೆ ಹೋದರೆ ಒಮ್ಮೆ ನೋಡಿ ಬರಲಡ್ಡಿಯಿಲ್ಲ. ಏನ೦ತೀರಿ?

_20160122_165120

_20160122_165351

_20160122_171557

‍ಲೇಖಕರು Admin

31 January, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading