ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೂಕದ ತೂಗುಯ್ಯಾಲೆಯಲ್ಲಿ..

ಸ್ಮಿತಾ ಅಮೃತರಾಜ್, ಸಂಪಾಜೆ

ದುಬೈಯಲ್ಲಿರುವ ನನ್ನ ತಂಗಿ ಮೊನ್ನೆ ತವರೂರಿಗೆ ಬರುವ ಸಂಭ್ರಮದಲ್ಲಿದ್ದಳು.ಇನ್ನೇನು ವಿಮಾನ ಹತ್ತಬೇಕು ಅನ್ನುವಷ್ಟರಲ್ಲಿ ದೌಡಾಯಿಸಿ ನನಗೊಂದು ಪೋನ್ ಹಚ್ಚಿ, ಏನೋ ತನಗೆ ಅಗತ್ಯವಾದದ್ದು ಬೇಕಾಗಿದೆಯೆಂದು, ಅದು ನಿನ್ನ ಊರಿನಲ್ಲಿಯೇ ಸಿಗುತ್ತದೆ, ನನಗದು ತೀರಾ ಅಗತ್ಯ. ತೆಗೆದಿರುಸುವೆಯಾ.. ಅಂತ ಒಂದೇ ಸಮನೆ ದುಂಬಾಲು ಬೀಳುತ್ತಿದ್ದಾಳೆ.

ಏನೆಲ್ಲಾ ತರಬೇಕು ಅಂತ ಊರಿಗೆ ಮುಂದೆ ನಮ್ಮ ಮುಂದೆ ಪಟ್ಟಿ ಹೇಳುವವಳು, ಇವತ್ತು ನನ್ನ ಜೊತೆಯೇ ತುಂಬಾ ಸೀರಿಯಸ್ ಆಗಿ ಕೇಳುತ್ತಿರುವಳಲ್ಲಾ?!. ನಾನೋ ದುಬೈನಲ್ಲಿ ಸಿಗದ ಅಮೂಲ್ಯ ವಸ್ತು, ಅದು ನನ್ನೂರಿನಲ್ಲಿ ಎಲ್ಲಿ ಸಿಗುತ್ತದಪ್ಪಾ.. ಅಂತ ನಾನು ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡು, ಹಾಗಾದರೆ ಅದಕ್ಕೆ ಕಂಡಾ ಬಟ್ಟೆ ರೇಟಿರಬಹುದೆಂದು ಒಂಚೂರು ಜಾಸ್ತಿಯೇ ತಲೆಬಿಸಿ ಮಾಡಿಕೊಂಡು, ಆಯ್ತು ಮಾರಾಯ್ತಿ! ಒಮ್ಮೆ ಹೇಳು. ನನ್ನ ಕೈಯಲ್ಲಿ ಸಾಧ್ಯ ಆದರೆ ತೆಗೆದಿಡುವೆ ಅಂತ yoga14ಅಂದಿದ್ದೇ ತಡ, ಆಕೆ ಬಾರೀ ಖುಷಿಯಿಂದ ನಿಮ್ಮ ಪಕ್ಕದ ಊರಿನಲ್ಲಿಒಂದು ಆಯುರ್ವೇದಿಕ್ ಅಂಗಡಿಯಿದೆಯಂತೆ, ಅಲ್ಲಿಂದ ಎರಡು ಗೋಮೂತ್ರದ ಡಬ್ಬಿಯನ್ನಾದರೂ ತೆಗೆದಿರಿಸು. ಅದರ ನಿಯಮಿತ ಸೇವನೆಯಿಂದ ಬೊಜ್ಜು ಕರಗುತ್ತದೆಯಂತೆ. ಉಳಿದದ್ದು ಆಮೇಲೆ ಮಾತನಾಡುವ ಅಂತ ಹೇಳಿ ಲಗುಬಗೆಯಿಂದ ವಿಮಾನ ಮೆಟ್ಟಿಲೇರಿಯೇ ಬಿಟ್ಟಳು.

ಅಬ್ಭಾ! ನಾ ಎಂತದೋ ನನ್ನ ಕೈಲಾಗದ್ದಕ್ಕೆ ಬೇಡಿಕೆ ಇಡುತ್ತಾಳೆ ಅಂದುಕೊಂಡರೆ ಇವಳೋ.. ನಾನು ಬೇಗ ಹೋಗಿ ಖರೀದಿಸದೇ ಇದ್ದರೆ ಅದೆಲ್ಲಾ ಮುಗಿದೇ ಹೋಗಿ ಬಿಡುತ್ತದೆಯೇನೋ ಎಂಬಷ್ಟು ಅತಂಕ ವ್ಯಕ್ತಪಡಿಸುತ್ತಾ, ಬರೇ ಎರಡೇ ಎರಡು ಗೋಮೂತ್ರ ಡಬ್ಬ ಕೇಳಿದ್ದು ನೆನೆದು ನನಗೆ ಅಚಾನಕ್ಕಾಗಿ ನಗು ತಡೆಯಲಾಗಲಿಲ್ಲ. ಜೋರು ನಕ್ಕರೆ ಸಂಗತಿ ಮನೆಯಿಡೀ ಹರಡಿ ಮತ್ತೆ ನಾ ತಮಾಷೆಯ ವಸ್ತುವಾಗಬಹುದೆಂದು ಸುಮ್ಮಗೆ ಮನಸ್ಸಿನೊಳಗೇ ನಗುವ ಪ್ರಯತ್ನ ಮಾಡಿದೆ. ಯಾಕೆಂದರೆ ನಾನೂ ಕೂಡ ಇಂತಹ ಹಲವು ಪ್ರಯೋಗಗಳನ್ನು ಜಾರಿಗೊಳಿಸುತ್ತಾ ಇರುವುದು, ಅದೆಲ್ಲಾ ನೀರಿಗೆ ಹಾಕಿದ ಹೋಮದಂತಾಗಿ ನನ್ನ ತೂಕ ಏರುತ್ತಾ ಹೋಗುವುದು ಎಲ್ಲರಿಗೇ ಗೊತ್ತೇ ಇದೆ.

ಹಾಗಾಗಿ ಈಗ ಯಾರಿಗೂ ಗೊತ್ತಾಗದಂತೆ ತೆಳುವಾಗಬೇಕೆನ್ನುವ ನನ್ನ ಯೋಜನೆ ಗೌಪ್ಯವಾಗಿ ಕಾರ್ಯಗತಗೊಳಿಸುತ್ತಿರುವೆ. ಅದಕ್ಕಾಗಿ ಸಾಕಷ್ಟು ಕಾಸನ್ನೂ ಕರಗಿಸಿರುವೆ. ಅಂತಹುದರಲ್ಲಿ ಅವಳ ಬೇಡಿಕೆ ತುಸು ತಮಾಷೆಯದ್ದಾಗಿತ್ತು. ಯಾಕೆಂದರೆ ನಮ್ಮ ಮನೆಯ ಹಟ್ಟಿಯಲ್ಲಿ ದನಗಳಿರುವುದರಿಂದ, ಎರಡು ಡಬ್ಬಿ ಯಾಕೇ ಎರಡು ಕೊಡಪಾನ ತುಂಬಾ ಬೇಕಾದರೂ ಕೊಡಬಹುದಲ್ಲಾ ಅಂತ ನೆನೆದುಕೊಂಡಾಗ ಮಾತ್ರ ನಗು ತಡೆಯಲಾಗಲಿಲ್ಲ. ಅದರ ಜೊತೆಗೆ ದೇಹದ ತೂಕ ನನಗೊಬ್ಬಳಿಗೆ ಮಾತ್ರ ಅಮರಿಕೊಂಡಿರುವುದಲ್ಲ, ಬೊಜ್ಜು ಅವಳ ಜೊತೆಗೂ ನಂಟು ಬೆಳೆಸಿ ಕೊಂಡಿದೆಯೆಂಬುದು ಮಾತ್ರ ನನಗೆ ತುಸು ಸಮಾಧಾನದ ಸಂಗತಿಯಾಗಿತ್ತು. ಜೊತೆಗೆ ಬೊಜ್ಜು ಇಳಿಸುವ ಕಸರತ್ತಿಗೆ ನಾನೊಬ್ಬಳೇ ಸಿಲುಕಿಕೊಂಡು ಪಡಿಪಾಟಲು ಪಡುತ್ತಿರುವುದಲ್ಲ ಎಂಬುದೇ ದೊಡ್ಡ ಖುಷಿಯ ಸಂಗತಿಯಾಗಿತ್ತು. ಯಾಕೆಂದರೆ ಮದುವೆಯಾದ ನಂತರ ಹೆಚ್ಚಿನ ಹೆಣ್ಮಕ್ಕಳು ತಾವು ಕಲಿತ ವಿದ್ಯೆಯನ್ನೆಲ್ಲಾ ಉಪಯೋಗಿಸಿದರೂ, ಯಾವುದೂ ಫಲಪ್ರದವಾಗದೆ, ಸ್ಥೂಲಕಾಯವನ್ನು ಅನಾವಶ್ಯಕವಾಗಿ ಹೊತ್ತುಕೊಂಡು ಬಸವಳಿಯುವುದು ಸಾಮಾನ್ಯ ಸಂಗತಿಯಾದರೂ, ಇದು ಅವರ ನೆಮ್ಮದಿಗೆ ಭಂಗ ತರುವ ಸಂಗತಿಯೆಂಬುದು ಅಷ್ಟೇ ಸಾರ್ವಕಾಲಿಕ ಸತ್ಯವೂ ಕೂಡ.

ಕವಿಯೋರ್ವರು ತಮ್ಮ ಹನಿಗವಿತೆಯೊಂದರಲ್ಲಿಸ್ಥೂಲ ಕಾಯದ ಹೆಣ್ಮಗಳನ್ನ ಈ ರೀತಿಯಾಗಿ ಹಾಡಿ ಹೊಗಳುತ್ತಾ ವಾಸ್ತವ ಸತ್ಯವನ್ನೇ ಸಣ್ಣ ಪದ್ಯದಲ್ಲಿ ವಿಶಾಲವಾಗಿ ಹರವಿ ಬಿಟ್ಟಿದ್ದಾರೆ.

ಮದುವೆಗೆ ಮೊದಲು
ಅವಳು ಏಳು ಮಲ್ಲಿಗೆ
ತೂಕದವಳು.
ನಂತರ ಏಳು ಮೆಲ್ಲಗೆ ಎನ್ನುವಷ್ಟು
ತೂಕದವಳು..

ಈ ಕವಿತೆಯನ್ನು ಮದುವೆಗೆ ಮೊದಲು ಕೋಲು ಕಡ್ಡಿಯಂತಿದ್ದ ನಾನು ಓದಿ ನಕ್ಕು ಮರೆತು ಬಿಟ್ಟಿದ್ದೆ. ಇದು ಸುಮ್ಮಗೊಂದು ಹಾಸ್ಯ ಕವಿತೆ ಅಂತ ಹನಿ ಕವಿತೆಯನ್ನು ಲಘುವಾಗಿ ಪರಿಗಣಿಸಿ ಬಿಟ್ಟಿದ್ದೆ. ಮುಂದೊಮ್ಮೆ ಇದು ಇಡಿಯಾಗಿ ನನ್ನನ್ನು ವ್ಯಾಪಿಸಿಕೊಳ್ಳಬಹುದೆಂಬ ಕಿಂಚಿತ್ ಅನುಮಾನ ಕೂಡ ನನ್ನನ್ನು ಸುಳಿದಿರಲಿಲ್ಲ.

ಯಾಕೆಂದರೆ ಮದುವೆಗೆ ಮುಂಚೆ ನಾನು ಏಳು ಮಲ್ಲಿಗೆ ತೂಕ ಹೋಗಲಿ, ಕಾವ್ಯ ಭಾಷೆಯ ತಕ್ಕಡಿಯಲ್ಲಿ ತೂಗಿದರೆ ಅದಕ್ಕಿಂತಲೂ ಕಡಿಮೆ ತೂಗಿ ಬರುತ್ತಿದ್ದೆನೋ ಏನೋ. ಯಾಕೆ ಇಷ್ಟೊಂದು ಕೋಲು ಕಡ್ಡಿ, ಸರಿ ತಿನ್ನೋದಿಲ್ವಾ.. ಅಂತ ಕಂಡ ಕಂಡವರೆಲ್ಲಾ ನನ್ನ ಸಣಕಲು ದೇಹದ ಬಗ್ಗೆ ಪ್ರಶ್ನೆ ಕೇಳುತ್ತಾ ಪ್ರವಚನ ಕೊಡುವುದೇ ಆಯಿತು. ನನಗೋ ಕ್ಷಣಕ್ಕೆ ಅನ್ನಿಸಿದ ಉತ್ತರ ಕೊಟ್ಟು ಕೊಟ್ಟು ಮತ್ತಷ್ಟು ಸಣಕಲಾದೆನೇನೋ ಅಂತ ಅನ್ನಿಸತೊಡಗಿತ್ತು. ಪದವಿ yoga15ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ನಾನು ಒಮ್ಮೆ ಏಳನೇ ತರಗತಿಯಲ್ಲಿ ಕಲಿಯುತ್ತಿದ್ದ ನನ್ನ ತಂಗಿಯ ಶಾಲೆಗೆ ಹೋಗಿದ್ದೆ. ಆ ದಿನ ಅವಳಿಗೆ ಸ್ಕೂಲ್ ಡೇ ಪ್ರಯುಕ್ತ ಡಾನ್ಸ್ ಪ್ರಾಕ್ಟೀಸ್ ನಡೆಯುತ್ತಿತ್ತು. ಅವಳ ಅಧ್ಯಾಪಿಕೆಯರು ನನ್ನನ್ನು ಕಂಡೊಡನೇ ಭಾರತ ಮಾತೆಯಾಗಿ ನಿಲ್ಲಲು ಇನ್ನು ಯಾರನ್ನೂ ಆಯ್ಕೆ ಮಾಡಲಿಲ್ಲ, ನೀನೇ ನಿಲ್ಲುವಿಯಾ.. ಅಂತ ನನ್ನನ್ನು ಪುಸಲಾಯಿಸ ತೊಡಗಿದರು. ನಾನು ಏನೋ ಸಬೂಬುಗಳನ್ನು ಹೇಳಿ ಅಲ್ಲಿಂದ ನುಣುಚಿಕೊಂಡು ಬಿಟ್ಟಿದ್ದೆ. ನನ್ನ ತೆಳು ಕಾಯವನ್ನು ನೋಡಿ ನಾನು ಬಹುಷ; ಎಂಟೋ, ಒಂಭತ್ತನೆಯ ತರಗತಿಯಲ್ಲಿರಬೇಕೆಂದು ಅವರು ಊಹಿಸಿಕೊಂಡಿರಬೇಕು.

ಬಂಧು ಮಿತ್ರರು ಸಿಕ್ಕಾಗಲೆಲ್ಲಾ,ನಿಮ್ಮ ಮಗಳು ಸಪೂರ.. ಅಂತ ಉದ್ದಕ್ಕೆ ರಾಗ ಎಳೆಯುವುದನ್ನು ಕೇಳಿ ಕೇಳಿ ಅಮ್ಮನ ಕಿವಿಗೂ ಆಯಾಸವಾಗಿದ್ದಿರ ಬೇಕು. ನಾನು ಮದುವೆ ಆಗೋಕೆ ಮುಂಚೆ ಅವಳಿಗಿಂತನೂ ಕಡ್ಡಿ ಹಾಗೆ ಒಣಗಿಕೊಂಡಿದ್ದೆ. ಅವಳನ್ನು ಹೆತ್ತಿದ್ದೇ ಹೆತ್ತಿದ್ದು, ಹೇಗೆ ನೋಡಿ ದಪ್ಪಗಾಗಿರುವೆ ಅಂತ, ತನ್ನ ನಿಯಂತ್ರಣಕ್ಕೆ ಸಿಗದ ಸ್ಥೂಲ ದೇಹವನ್ನು ಆ ಕ್ಷಣಕ್ಕಾದರೂ ಹೆಮ್ಮೆ ಪಟ್ಟುಕೊಂಡು ಹೇಳುತ್ತಾ, ಹೇಗೆ ತನಗೆ ಒಂದೇ ಸಮನೇ ತೂಕ ಏರಿದಾಗ ಯಾರಿಗೂ ಗುರುತು ಸಿಕ್ಕದ್ದೇ ಹೋಗಿ ಕಳವಳಗೊಂಡಿದ್ದು, ಈಗ ಬೇಡ ಬೇಡವೆಂದರೂ ತೂಕ ಇಳಿಸಲಾಗದೆ, ಕಾಲಿನ ಪಾದ ಗಂಟುಗಳಲ್ಲೆಲ್ಲಾ ತೂಕ ಹೊರಲಾಗದೆ ಸಣ್ಣಗೆ ಚೀರಿಡುತ್ತಾ ನೋವು ಅನುಭವಿಸುವುದು.. ಎಂಬಿತ್ಯಾದಿ ತೂಕದ ತರಾವರಿ ಕತೆಗಳನ್ನ ಬಿಚ್ಚಿಡುತ್ತಿದ್ದಳು.

ನನ್ನಮ್ಮನಿಗೆ ಕವಿಯಂತೆ ಕಾವ್ಯಾತ್ಮಕವಾಗಿ, ಕವಿತೆಯಂತೆ ಕೆಲವೇ ಪದಗಳಲ್ಲಿ ಅದನ್ನು ಹೇಳಲು ಆಗುತ್ತಿರಲಿಲ್ಲ. ಹಾಗಾಗಿ ನೂರೆಂಟು ಕತೆ ಕಟ್ಟಿ ಹೇಳಿದರೂ, ಏನೂ ಪ್ರಯೋಜನವಿಲ್ಲ. ಮತ್ತೊಮ್ಮೆ ಇದೇ ಪ್ರಶ್ನೆ ತಪ್ಪುತ್ತಿರಲಿಲ್ಲ. ಮತ್ತೆ ಮತ್ತೆ ಯಾವ್ಯಾವ ಕಾಲಕ್ಕೆ ಯಾರು ಹೇಗೆ ಆಗಬೇಕು ಅದು ಆಗಿಯೇ ಆಗುತ್ತದೆ ಅಂತ ಒಂದೇ ಸಾಲಿನಲ್ಲಿ ಪ್ರಶೆಗೆ ಉತ್ತರಿಸುವಷ್ಟು ಪ್ರಬುದ್ದತೆಯನ್ನು ಮೈಗೂಡಿಸಿಕೊಂಡಿದ್ದಳು.

ನನಗೂ ಎಷ್ಟೋ ಬಾರಿ ಇದು ಹೌದು ಅಂತ ಅನ್ನಿಸಿದ್ದಿದೆ. ಯಾಕೆಂದರೆ ನಾನು ಅದೆಷ್ಟು ಹೊಟ್ಟೆ ಬಾಕಿಗಳ ಹಾಗೆ ತಿನ್ನುತ್ತಿದ್ದೆನೆಂದರೆ ಅದು ನನಗಷ್ಟೇ ಗೊತ್ತು. ಆದರೂ ಸಣಕಲು ಕಡ್ಡಿಯಂತೆ ಯಾಕೆ ಒಣಗಿಕೊಂಡಿರುತ್ತಿದ್ದೆನೋ ಎಂಬುದು ಮಾತ್ರ ಗೊತ್ತಾಗುತ್ತಿರಲಿಲ್ಲ. ಆದರೆ ಇಷ್ಟು ದಿನ ನನ್ನ ಕೋಲು ಕಡ್ಡಿ ಶರೀರದ ಬಗ್ಗೆ ಕಿಂಚಿತ್ತೂ ಚಿಂತೆ ಪಟ್ಟುಕೊಳ್ಳದ ನನ್ನಮ್ಮನಿಗೆ, ನಾನು ಮದುವೆಯ ಲಿಸ್ಟಿಗೆ ತಯಾರಾಗಿ ನಿಂತಾಗ ಮಾತ್ರ ಅಮ್ಮನಿಗೆ ಸಣ್ಣಗೆ ಭೀತಿ ಶುರುವಾಗಿದೆ ಅನ್ನಿಸುತ್ತದೆ. ಒಮ್ಮಿಂದೊಮ್ಮೆಗೇ ನನಗೆ ಭಾರಿ ಉಪಚರಿಸಿ ಊಟ ಕೊಡುವುದು ನನಗೆ ಅಚ್ಚರಿ ಮೂಡಿಸಿತ್ತು. ಹಾಲು.. ಮೊಟ್ಟೆ.. ವಗೈರ, ವಗೈರ. ನೀನು ಏನೇ ತಿನ್ನಿಸು ನನಗಾವುದೂ ಅದು ಒಗ್ಗೋದಿಲ್ಲ ಅನ್ನುವಂತೆ ನನ್ನ ದೇಹ ಮುನಿಸಿಕೊಂಡು ಬಿಡುತ್ತಿತ್ತು. ಅಂತೂ ಇಂತೂ ಹುಡುಗಿ ಲಾಚಾರು.. ಅಂತ ಹಿಂದಿನಿಂದ, ಮುಂದಿನಿಂದ, ಸೈಡಿನಿಂದ ಹೇಳಿಸಿಕೊಂಡರೂ, ಯಾವ ಕಾಲಕ್ಕೆ ಯಾವುದು ಆಗಬೇಕೋ ಅಂತ ಅಮ್ಮ ಹೇಳಿದ ಹಾಗೆ ಮದುವೆಯೂ ಆಯಿತು, ನಂತರ ಮಗುವೂ ಆಯಿತು.

ಮತ್ತೆ ಶುರುವಾದದ್ದು ನೋಡಿ ಕೊಬ್ಬು. ನನಗೋ ದೇಹಕ್ಕೋ ಅಂತ ನನಗೂ ಗೊತ್ತಾಗಲಿಲ್ಲ. ಕೋಲು ಕಡ್ಡಿ ಶರೀರ ಏಕಾ ಏಕಿ ಹಲಸಿನ ಬೀಜಕ್ಕೆ ಮಣ್ಣು ಸವರಿದ ಹಾಗೆ ಕಾಣುತ್ತಿದ್ದದ್ದು, ನಂತರ ಮೆಲ್ಲ ಮೆಲ್ಲಗೆ ನಾನು ಊದತೊಡಗಿದ್ದು ಗಮನಕ್ಕೆ ಬಂದೇ ಇರಲಿಲ್ಲ. ಯಾವಾಗ ಸೀರೆ, ರವಿಕೆ, ಚೆಂದ ಚೆಂದದ ಚೂಡಿದಾರದ ಟಾಪ್ಗಳು ದೇಹಕ್ಕೆ ಹಿಡಿಸದೆ, ಮುನಿಸಿಕೊಂಡು ಕುಳಿತಾಗಲೇ ನನಗೆ ಮಂಡೆ ಬಿಸಿ ಶುರುವಾಗಿ ಏಕಾ ಏಕಿ ಜ್ಞಾನೋದಯವಾಗತೊಡಗಿದ್ದು. ಈಗ ಗುರುತು ಪರಿಚಯದವರೆಲ್ಲಾ ಇದು ನೀನಾ.. ಅನ್ನುವಷ್ಟರಮಟ್ಟಿಗೆ ನಾನು ಬದಲಾಗಿ ಬಿಟ್ಟಿದ್ದೆ. ಆವತ್ತು ತೆಳ್ಳಗೆ ಆಗಿ ಎಷ್ಟು ಚೆಂದಕ್ಕೆ ಇದ್ದೆ ನೋಡು. ಈಗ ನೋಡು ಗುಂಡಮ್ಮ ಆಗಿ ಚೆಲುವನ್ನೆಲ್ಲಾ ಹಾಳು ಮಾಡಿಕೊಂಡಿರುವಿಯಲ್ಲಾ.. ಅಂದಾಗಲೇ, ಎಲಾ! ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ ಎನ್ನುವ ಕವಿವರ್ಯರ ಕವಿತೆ ಸಾಲೊಂದು ಪಕ್ಕನೆ ಹಾದು ಹೋಗಿಬಿಟ್ಟಿತು.

ನನ್ನ ದೇಹ, ನನ್ನಜೀವ, ನನ್ನ ತೂಕ. ಅವರಿವರ ಟೀಕೆಯ ಮಾತು ಒತ್ತಟ್ಟಿಗಿರಲಿ. ನನಗಿದ್ದದ್ದು ಒಂದೇ ಚಿಂತೆ. ಈಗಲೇ ರಾಶಿ ಬಿದ್ದಿರುವ ಬಟ್ಟೆಯ ಆಕಾರದೊಳಗೆ ನನ್ನ ಗಾತ್ರ ತೂರಿಕೊಂಡರಷ್ಟೇ ನನಗೆ ಬೇಕಾದಷ್ಟಾಯಿತು. ಇಲ್ಲದಿದ್ದರೆ, ಮನೆ ತುಂಬಾ ಬಟ್ಟೆಗಳ ಗಂಟು ತುಂಬಬಹುದೋ ಅಥವಾ ಎದುರಿಗೆ ರಾಶಿ ಬಟ್ಟೆಯ ಗುಡ್ಡೆಯಿದ್ದರೂ ಬೇಕಾದ ಧಿರಿಸು ಹಾಕಲಾಗದೆ ಒದ್ದಾಡುವ ಸ್ಥಿತಿ ಬಂದೆರಗಬಹುದೇನೋ ಎಂಬ ಚಿಂತೆಯೇ ನನ್ನನ್ನು ಹೈರಾಣಾಗಿಸುತ್ತಿತ್ತು. ಇಷ್ಟು ದಿನ ತೂಕ yoga17ಏರಿಸಲಿಕ್ಕೆ ಚಿಂತಿಸದವಳು ಏಕಾಏಕಿ ತೂಕ ಇಳಿಸಲೋಸ್ಕರ ಪಡಿಪಾಟಲು ಪಡುವಂತಾಗಿತ್ತು. ಇದಕ್ಕೋಸ್ಕರ ಹೊಟ್ಟೆ ಬಾಯಿ ಕಟ್ಟುವುದೇ ಆಯಿತು. ತುಪ್ಪ ತಿನ್ನುವ ಹಾಗಿಲ್ಲ. ಹಾಲು ಕುಡಿಯುವ ಹಾಗಿಲ್ಲ. ತಿಂಡಿ ಐಸ್ಕ್ರೀಂ ನೋಡೋದಿಕ್ಕೂ ಭಯ ಪಡುವ ಪ್ರಸಂಗ. ಅಯ್ಯೋ..! ಇವೆಲ್ಲಾ ತಿನ್ನದೇ ಹೋದರೆ, ಆಸೆ ಪಟ್ಟೇ ಸತ್ತು ಹೋದೆನೇನೋ ಎನ್ನುವಷ್ಟರ ಮಟ್ಟಿಗೆ ಆತಂಕ ಶುರುವಾಗಿ ಬಿಟ್ಟಿತ್ತು.

ದಿನ ಬೆಳಗಾದರೆ ಬೊಜ್ಜು ಕರಗಿಸಿ ತುಸು ತೆಳ್ಳಗಾಗುವುದು ಹೇಗೆಂಬುದೇ ಚಿಂತೆ. ವೃತ್ತ ಪತ್ರಿಕೆಯ ಮೇಲೆ ಮುಖ ಹುದುಗಿಸಿ ಗಹನವಾಗಿ ಸಮಾಚಾರ ಓದುವುದಕ್ಕಿಂತ, ತೆಳ್ಳಗಾಗುವುದಕ್ಕೆ ಸುಲಭ ಉಪಾಯ ಎಲ್ಲಾದರೂ ಜಾಹಿರಾತಿನಲ್ಲಿ ಸಿಗಬಹುದೇ ಅಂತ ಕಾತರದಿಂದ ಕಣ್ಣಾಡಿಸುವುದೇ ಆಯಿತು. ರೇಡಿಯೋದಲ್ಲಿ ಏನಾದರೂ ಕೊಬ್ಬು ಕರಗಿಸಲು ಉಚಿತ ಸಲಹೆ ಸಿಗಬಹುದಾ.. ಅಂತ ಕೆಲಸದ ನಡುವೆ ಮೈಯೆಲ್ಲಾ ಕಿವಿಯಾಗಿ ಕೇಳಿಸಿಕೊಳ್ಳುವುದೇ ಆಯಿತು. ದಿನಾ ಹತ್ತು ಕರಿಬೇವಿನೆಲೆ ತಿನ್ನುವುದು ಬೊಜ್ಜು ಕರಗಲು ರಾಮ ಬಾಣ ಅಂತ ರೇಡಿಯೋದಲ್ಲಿ ಇನಿದನಿಯಲ್ಲಿ ಉಲಿದ ಆಕಾಶವಾಣಿಯ ಅಶರೀರವಾಣಿಗೆ, ರೋಮಾಂಚನವಾಗಿ ನಿಧಿ ಸಿಕ್ಕಷ್ಟು ಸಂಭ್ರಮವಾಗಿತ್ತು. ಯಾಕೆಂದರೆ ಹಿತ್ತಲ ತುದಿಗೆ ಓಡಿದರಷ್ಟೇ ಸಾಕು, ಅನಾಯಾಸವಾಗಿ ಹತ್ತು ಎಲೆ ಏಕೆ ಒಂದು ಕಟ್ಟು ಬೇಕಾದರೂ ತಿನ್ನಬಹುದೆಂಬುದೇ ಖುಷಿಯ ವಿಚಾರವಾಗಿತ್ತು. ಈ ನಡುವೆ ಒಗ್ಗರಣೆಗೆ ಹಾಕಿದ ಬೇವಿನೆಲೆಯನ್ನ ತಟ್ಟೆಯ ಕೊನೇ ತುದಿಯಲ್ಲಿ ಉಳಿಸಿಬಿಡುತ್ತಿದ್ದದ್ದು ಮರೆತೇ ಹೋಗಿತ್ತು. ಹಿತ್ತಲ ಕರಿಬೇವಿನ ಗಿಡದ ಮೇಲೆ ಈಗ ಎಲ್ಲಿಲ್ಲದ ಮುದ್ದುಕ್ಕಿ ಬಂದು ಬಿಟ್ಟಿತ್ತು.

ಇನ್ನು,ನಾವು ರೈತಾಪಿ ವರ್ಗದವರಾದ ಕಾರಣ ಬೆಳಗ್ಗೆ ಎದ್ದದ್ದೊಂದೇ ಗೊತ್ತು, ಒಂದಲ್ಲಒಂದು ಕೆಲಸಗಳು ನಮ್ಮನ್ನು ತಾಕಿಕೊಂಡೇ ಇರುತ್ತವೆ. ಆದರೆ ಅದಕ್ಕೆ ಹೊರತಾಗಿಯೂ ಬೆಳಗ್ಗೆ ಯಾರೂ ಏಳೋಕೆ ಮುಂಚೆ ಜಾಗಿಂಗ್ ಓಟ ಶುರು ಮಾಡಿದೆ. ನಾಲ್ಕೈದು ದೋಸೆ ಪಟ್ಟಂತ ಹೊಡಿತ್ತಿದ್ದವಳು, ಈಗ ಒಲ್ಲದ ಮನಸ್ಸಿನಿಂದ ಎರಡು ದೋಸೆಗೆ ಇಳಿಸಬೇಕಾಯಿತು. ಹೆಚ್ಚು ಕಡಿಮೆ ಅನ್ನವನ್ನ ಒಂದು ಸೌಟಿಗಷ್ಟೇ ಇಳಿಸಿ ಬಿಟ್ಟೆ. ಅಚಾನಕ್ ನೋಡಿದವರೆಲ್ಲಾ ನಿಂಗೆ ಹುಷಾರಿಲ್ಲವಾ.. ಅಂತ ಕೇಳೋಕೆ ಶುರು ಮಾಡಿದಾಗಲೇ ಎಲ್ಲೋ ಎಡವಟ್ಟು ಆಗಿದೆಯಲ್ಲಾ ಅಂತ ಅನ್ನಿಸಿತು.

ಈಗ ನಾನು ಎಲ್ಲಾ ಉಚಿತ ಸಲಹೆಗಳನ್ನ ಖಚಿತ ನಿಲುವಿನಿಂದ ಮೂಲೆ ತಳ್ಳಿ ಆರಾಮವಾಗಿರುವೆ. ಸಪೂರವೋ, ದಪ್ಪವೋ.. ಅದು ಅದರ ಪಾಡಿಗೆ, ನಾ ನನ್ನ ಪಾಡಿಗೆ ಹೊಟ್ಟೆಗೆ ಹಿಡಿಸುವಷ್ಟು ತಿನ್ನುತ್ತಾ, ಬೆವರು ಹರಿಯುವಷ್ಟು ಕೆಲಸ ಮಾಡುತ್ತಾ, ಸಮಾ ನಿದ್ದೆ ಮಾಡುತ್ತಾ ನಡು ನಡುವೆ ಕವಿತೆ ಗೀಚುತ್ತಾ ತೆಪ್ಪಗಿರುವೆ. ತೂಕಕ್ಕೆ ಸಿಗದ, ಅಳತೆಗೆ ಸಿಗದ ವಿಷಯಗಳ ತೂಗುಯ್ಯಾಲೆಯಲ್ಲಿ ಕುಳಿತು ಚಿಂತಿಸುತ್ತಾ ಹೈರಾಣಾಗದೆ, ಅದನ್ನೆಲ್ಲಾ ಕವಿತೆಯೊಳಗೆ ಇಳಿಬಿಟ್ಟು ಹಗುರವಾಗಿರುವೆ.

‍ಲೇಖಕರು Admin

5 May, 2016

4 Comments

  1. ಆನಂದ್ ಋಗ್ವೇದಿ

    ಚಂದದ ಬರಹ. ತೂಕದ ತೂಗುಯ್ಯಾಲೆಯಲ್ಲಿ ನಾನೂ ತುಯ್ದಾಡಿದೆ!

  2. Anonymous

    Beautiful…..

  3. s.p.vijayalakshmi

    Beautiful baraha……S.P.Vijaya lakshmi

  4. ಸುನೀತಾ.

    ಸ್ಮಿತಾ ನಿಮ್ಮ ಬರಹ ಓದುತ್ತಾ ನಾನೂ ನನ್ನ ಪ್ರಯತ್ನವನ್ನು ಮೆಲುಕಿಸಿದೆ. ಬದಲಾವಣೆಯನ್ನು ಸ್ವೀಕರಿಸೋಣವೆಂದು ಸುಮ್ಮನಾದೆ. ಕುತೂಹಲಕಾರಿ ಬರಹ .
    ಸುನೀತ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading