ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ತುಷಾರ'ದ ಹಿರಿಯ ಇನ್ನಿಲ್ಲ

ಸದಭಿರುಚಿಗಳ ಸಾರ : ತುಷಾರಯ್ಯ ಎಂಬ ಈಶ್ವರಯ್ಯ

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು 


ಈಶ್ವರಯ್ಯ ಅನಂತಪುರ ಅವರ ಮೊದಲ ಪರಿಚಯ ನನಗೆ ‘ತುಷಾರ’ದ ಮೂಲಕ.
ನಾನಾಗ ತಲ್ಲೂರಿನಲ್ಲಿ ಪ್ರಾಥಮಿಕ ಶಾಲೆ ವಿದ್ಯಾರ್ಥಿ. ತುಷಾರದಲ್ಲಿ ಲಿವಿಸ್ ಕೆರಾಲ್ ನ ‘ಆಲಿಸ್ ಇನ್ ದಿ ವಂಡರ್ ಲ್ಯಾಂಡ್’ ಕಥೆ ಸ್ಥಳೀಯ ರೂಪದಲ್ಲಿ “ಪೂಪ ಕಾಡಿನಲ್ಲಿ ಪಾಪೂ” ಎಂಬೇನೋ ಹೆಸರಿನಲ್ಲಿ ಧಾರಾವಾಹಿಯಾಗಿ ಹರಿದುಬಂದಿತ್ತು. ನನ್ನನ್ನು ಆಕರ್ಷಿಸಿದ ಮೊದಲ ಫ್ಯಾಂಟಸಿ ಅದು. ಕನ್ನಡದಲ್ಲಿ ಹೆಚ್ಚಿನಂಶ ಅಂತಹ ಮಕ್ಕಳ ಕಥೆಗಳ ಪ್ರಯೋಗ ಅನನ್ಯ.
ಬನ್ನಂಜೆ ಸಹೋದರರ ಬಳಿಕ ಮಣಿಪಾಲದಲ್ಲಿ ‘ಉದಯವಾಣಿ’ಯ ಆ ಮೂಲಕ ಕನ್ನಡ ಕರಾವಳಿಯ ಸಾಂಸ್ಕ್ರತಿಕ ರಂಗದ ಸೂತ್ರ ಹಿಡಿದ ಈಶ್ವರಯ್ಯ ಉದಯವಾಣಿಯ ಕಲಾವಿಹಾರ, ಭಾನುವಾರದ ಸಾಪ್ತಾಹಿಕ ಸಂಚಿಕೆ, ದೀಪಾವಳಿ ಸಂಚಿಕೆಗಳ ಹಿಂದಿನ ಮೆದುಳಾಗಿದ್ದರು. ಬಹುಕಾಲ ತುಷಾರ ಸಂಪಾದಕರಾಗಿದ್ದರು.
ಆ ಪುಟಗಳಿಗೆ ಆಹಾರ ಒದಗಿಸುವ ಹಾದಿಯಲ್ಲಿ ಫೋಟೋಗ್ರಫಿ ಪರಿಣತರಾಗಿ, ಸಂಗೀತ ವಿಮರ್ಶಕರಾಗಿ, ಸಾಹಿತ್ಯ ರಸಾಸಕ್ತರಾಗಿ, ಕಲಾವಿಮರ್ಶಕರಾಗಿ ಈಶ್ವರಯ್ಯ ಅವರು ತಮ್ಮನ್ನು ತೊಡಗಿಸಿಕೊಂಡ ಹಾದಿ ಅನನ್ಯ. ಇಂತಹ ಅಧ್ಯಯನಶೀಲತೆ ಇಂದು ಸುದ್ದಿ ಕೋಣೆಗಳಲ್ಲಿ ಇಲ್ಲವೇ ಇಲ್ಲ ಎಂಬಷ್ಟು ಅಪರೂಪದ್ದು.
ಆರು ವರ್ಷಗಳ ಕಾಲ ಒಂದೇ ಪತ್ರಿಕಾ ಕಚೇರಿಯ ಬೇರೆಬೇರೆ ವಿಭಾಗಗಳಲ್ಲಿ ನಾವು ಕೆಲಸ ಮಾಡಿದ್ದೆವು. ನಾನು ಅಲ್ಲಿದ್ದ ಕಾಲಕ್ಕೆ ಆ ಪತ್ರಿಕಾ ಕಚೇರಿಗೆ ಹೊಸನೀರು ಹರಿದು ಬರಲಾರಂಭಿಸಿದ್ದು, ಹಳೆಯ ತಲೆಮಾರಿನ ಪತ್ರಕರ್ತರು ನಿಧಾನಕ್ಕೆ ಹೊಸನೀರಿಗೆ ಹಾದಿ ಮಾಡಿಕೊಡಲಾರಂಭಿಸಿದ್ದರು. ಮಣಿಪಾಲ ಬಳಗ ತನ್ನ ಬಳಿ ಲಭ್ಯವಿದ್ದ ಯಾವುದೇ ಪ್ರತಿಭೆಯನ್ನು ಆ ಪ್ರತಿಭೆಯ ಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲಿಲ್ಲ ಎಂಬುದಕ್ಕೆ ಈಶ್ವರಯ್ಯ ಅವರೂ ಕೂಡ ಮುಂದೊಂದು ದಿನ ನಿದರ್ಶನ ಆಗಲಿದ್ದಾರೆ.
ಉದಯವಾಣಿಯಿಂದ ವಿಶ್ರಾಂತರಾದ ಬಳಿಕ ಪೂರ್ಣ ಪ್ರಮಾಣದಲ್ಲಿ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದ ಈಶ್ವರಯ್ಯ ಅವರ ಆರೋಗ್ಯ ಚೆನ್ನಾಗಿಲ್ಲ ಎಂಬ ಸಂಗತಿ ಇತ್ತೀಚೆಗೆ ನನ್ನ ಗಮನಕ್ಕೆ ಬಂದಿತ್ತು.
ಉದಯವಾಣಿಯಲ್ಲಿದ್ದಾಗ ಅವರು ನಿವ್ರತ್ತರಾಗಿ ಹೋಗುವ ಮೊದಲು ಎರಡು ಮೂರು ವರ್ಷಗಳಲ್ಲಿನನಗೆ ಹಲವು ಬಾರಿ ಈಶ್ವರಯ್ಯ ಅವರ ಜೊತೆ ಸಂವಹನ ನಡೆಸುವ, ಜಗಳಾಡುವ ಅವಕಾಶ ದೊರೆತಿದೆ. ಆದರೆ ಸ್ನೇಹ ಮರೆತಿಲ್ಲ. ನನ್ನ ಪುಸ್ತಕ ಬಿಡುಗಡೆ ಆದಾಗ ಅವರಿಗೆ ಅದನ್ನು ತಲುಪಿಸಿದ್ದೆ, ಅದಕ್ಕವರು ಪ್ರೀತಿಯ ಪ್ರತಿಕ್ರಿಯೆ ನೀಡಿದ್ದರು. ನನ್ನ ಮುದ್ರಣಾಲಯ ತೆರೆದಾಗ ಕೂಡ ಪ್ರೀತಿಯಿಂದ ಶುಭ ಹಾರೈಸಿದ್ದರು.
ಈಶ್ವರಯ್ಯ ಅವರ ಬಗ್ಗೆ ಅವರ ನಿಡುಗಾಲದ ಸಹೋದ್ಯೋಗಿಯಾಗಿದ್ದ ನಿತ್ಯಾನಂದ ಪಡ್ರೆ ಅವರು ಬರೆದ, ಕಾಂತಾವರ ಕನ್ನಡ ಸಂಘ “ನಾಡಿಗೆ ನಮಸ್ಕಾರ” ಮಾಲೆಯಲ್ಲಿ ಪ್ರಕಟಿಸಿದ ಪುಸ್ತಕ ಹಲವು ಒಳನೋಟಗಳನ್ನು ಕೊಡಬಲ್ಲುದು.
ಈಶ್ವರಯ್ಯ ಅವರ ಅಧ್ಯಯನಶೀಲತೆ ಪತ್ರಕರ್ತರ ಹೊಸ ತಳಿಗಳಿಗೆ ಮಾದರಿಯಾಗಲಿ ಎಂದು ಆಸೆ.

‍ಲೇಖಕರು avadhi

30 December, 2018

6 Comments

  1. Srinidhi Tk

    ಶ್ರೀ ಈಶ್ವರಯ್ಯ ಅವರು ಎಪ್ಪತ್ತರ ದಶಕದಲ್ಲಿ ಅನಿಸುತ್ತೆ….ಬರೆದಿದ್ದ ಒಂದು ನಗೆಬರಹ ನನಗೆ ಇಂದಿಗೂ ನೆನಪಾಗುತ್ತಲೇ ತುಟಿಯಂಚಿನಲ್ಲಿ ನಗೆ ತರಿಸುತ್ತದೆ. ಇದೊಂದು ಕ್ರಿಕೆಟ್ ಆಟದ ಬಗೆಗಿನ ಬರಹವಾಗಿತ್ತು. ಆಟಗಾರರ ಹೆಸರು ಏನು ಎಲ್ಲಿ ಯಾರು ಎಂದೆಲ್ಲಾ ಇದ್ದಿದ್ದು ನೆನಪಿದೆ. ಹೇಗಾದರೂ ಅದನ್ನು ಮತ್ತೆ ಓದುವ ಆಸೆ ಕಾಡುತ್ತಿದೆ. ಅವರು ಇನ್ನಿಲ್ಲವೆಂಬ ಸುದ್ದಿ ಬಹಳ ದು:ಖ ತಂದಿದೆ. ಅವರ ಕುಟುಂಬಕ್ಕೆ ಅವರ ಅಗಲುವಿಕೆಯನ್ನು ಸಹಿಸುವ ಶಕ್ತಿ ಆ ಭಗವಂತ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

  2. Amba

    ಈಶ್ವರಯ್ಯನವರು ಇನ್ನಿಲ್ಲ ಎಂಬ ಸುದ್ದಿ ನನಗೆ ತುಂಬಾ ದುಃಖದಾಯಕವಾಗಿದೆ. ಎಪ್ಪತ್ತರ ದಶಕದಲ್ಲಿ ತುಷಾರದಲ್ಲಿ ನನ್ನ ಮೊದಲ ಕಥೆ “ಬಾಗಿಲು, ಬೀಗ,ಬೀಗದ ಕೈ” ಪ್ರಕಟವಾಗಿತ್ತು. ಅಂದಿನಿಂದ 1986 ರಲ್ಲಿ ತುಷಾರದಲ್ಲಿ ಪ್ರಕಟಗೊಂಡ ನನ್ನ ಕಥೆ “ಸೇಡು” (ಅದು ಪ್ರಕಟವಾಗಿದ್ದು “ನಿಶಿ” ಅನ್ನುವ ಹೆಸರಿನಲ್ಲಿ) ಕಥೆಯವರೆಗೆ ಈಶ್ವರಯ್ಯನವರ ಸತತ ಪ್ರೋತ್ಸಾಹವೇ ನನಗೆ ಬರೆಯಲು ಪ್ರೇರೇಪಿಸಿದ್ದು. ನಾನೇನು ಹೆಸರಾಂತ ಬರಹಗಾರಳಲ್ಲ. ಆದರೂ ಆಗಾಗ ಏನಾದರೂ ಬರೆಯಲು *ಸೋದರಿ, ನೀವು ಬರೆದು ಎಷ್ಟೋ ದಿನವಾಯಿತಲ್ಲವೇ? ತುಷಾರಕ್ಕೆ ಏನಾದರೂ ಬರಹ ಕಳುಹಿಸಿ”ಎಂಬ ಪತ್ರ ಬರುತ್ತಿತ್ತು.” ತುಷಾರದ ಸಂಪಾದಕರಾಗಿ ಅವರೆಷ್ಟು ಬರಹಗಾರರಿಗೆ ಪ್ರೋತ್ಸಾಹಿಸಿ ಹುರಿದುಂಬಿಸುತ್ತಿದ್ದರೋ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

  3. Rasheed

    ಅದಾಗ ತಾನೇ ಪಿ.ಯು.ಸಿ ಮುಗಿಸಿದ್ದ ನನ್ನ ಮೊದಲ ಕಥೆಯನ್ನ ಪ್ರೀತಿಯಿಂದ ಎತ್ತಿಕೊಂಡು ಪ್ರಕಟಿಸಿದ ಈಸ್ವರಯ್ಯ ನನ್ನಲ್ಲಿ ತುಂಬಿಸಿದ ಧೈರ್ಯ ಮತ್ತು ಉತ್ಸಾಹಕ್ಕೆ ಅವರಿಗೆ ನಾನು ಈವತ್ತಿಗೂ ಋಣಿ

  4. Maheshwari. U

    ಹೌದು.ಗುರುತು ಪರಿಚಯ ಇಲ್ಲದ ಹೊಸಬರನ್ನು ಪ್ರೋತ್ಸಾಹಿಸಿದ ಹಿರಿಯಈಶ್ವರಯ್ಯ ಅವರನ್ನು ನಾನೂ ಕೃತಜ್ನತೆಯಿಂದ ನೆನೆಯುತ್ತೇನೆ.ನಾನು ವಿದ್ಯಾರ್ಥಿನಿಯಾಗಿದ್ದಾಗ ಬರೆದಿದ್ದ ನಾನು ಮತ್ತು ಕಲ್ಲು ಎಂಬ ಕವಿತೆಯನ್ನು ತುಷಾರದ ಸಂಪಾದಕರಿಗೆ ಏನೊಂದೂ ಒಕ್ಕಣೆಯಿಲ್ಲದೆ ಕಳುಹಿಸಿದ್ದೆ. ತುಷಾರದಲ್ಲಿ ಅದು ಪ್ರಕಟವಾಯಿತು! ಭೇಟಿಯಾದಾಗ ಹಲವುಹಿತವಚನಗಳನ್ನು ನೀಡಿದ್ದರು. ಸಂಗೀತದ ಕುರಿತು ಸಾಹಿತ್ಯದಕುರಿತು ಅವರಮಾತುಗಳನ್ನು ಕೇಳುವುದು ಒಂದು ಒಳ್ಳೆಯ ಅನುಭವ.ಈಶ್ವರಯ್ಯನವರೊಂದಿಗೆ ನಮ್ಮೂರಿನವರೇ ಆದ. ಈ ಹಿಂದೆಯೇ ನಮ್ಮನ್ನಗಲಿದ ವ್ಯಾಸರು ನೆನಪಾಗುತ್ತಾರೆ.ಓದು, ಬರವಣಿಗೆ, ಸಂಗೀತ, ಕಿರಿಯರನ್ನು ಬೆಳೆಸುವ ಗುಣ-ಹೀಗೆ ಅವರಿಗೆ ಸಮಾನವಾದ ಕೆಲವು ಗುಣಗಳಿದ್ದವು. ಅಂಥವರು ಆಗಲಿದಾಗ ಒಂದು ಖಾಲಿತನ ಮನಸ್ಸನ್ನು ಕಾಡುತ್ತದೆ.

    • Amba

      ಹೌದು,ನೀರಿಯಾದದ್ದನ್ನೇ ಹೇಳಿದಿರಿ, ಎದ್ದೊಂದು ತರಹ ಖಾಲಿತನ. ಈಶ್ವರಯ್ಯನವರನ್ನು ಭೇಟಿಯಾಗುವ ಅವಕಾಶ ನನಗೆ ಸಿಗಲೇ ಇಲ್ಲ. ಈಗ ಅದೆಂದು ಸಾಧ್ಯ ಇಲ್ಲ ಅನ್ನುವ ಅದಮ್ಯ ನಿರಾಶೆ.ಇತ್ತೀಚೆಗಷ್ಟೇ ಅವರ ನೆನಪು ಯಾಕೋ ಬರುತ್ತಿತ್ತು.

  5. D.M.NADAF

    ಚಾಮಯ್ಯ ಮೇಷ್ಟ್ರ ನೆನಪಲ್ಲಿ ವೃತ್ತಿ ಜೀವನದ ಸ್ವಾರಸ್ಯಕರ ನೆನಪುಗಳು ಹಂಚಿಕೊಂಡಿದ್ದಾರೆ ಮ್ಯಾಮ್
    ಧನ್ಯವಾದಗಳು
    ಡಿ.ಎಮ್.ನದಾಫ್
    ಅಫಜಲಪುರ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading