ಗೋಪಾಲ ವಾಜಪೇಯಿ
ಛೇ… ಮತ್ತೊಂದು ದುರ್ವಾರ್ತೆ !
ನನ್ನ ಮನಸ್ಸು ಗಾಸಿಗೊಂಡಿದೆ…
ತುಳು ನಾಡವರ ಹೆಮ್ಮೆಯ ‘ರಂಗ ಭೀಷ್ಮ’, ಚಲನಚಿತ್ರ ನಟ, ನಿರ್ದೇಶಕ ಕೆ. ಎನ್. ಟೇಲರ್ ತಮ್ಮ 77ನೆಯ ವಯಸ್ಸಿನಲ್ಲಿ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಕೆಲವು ಕಾಲದಿಂದ ಅವರು ಅಸ್ವಾಸ್ಥ್ಯದಿಂದ ಬಳಲುತ್ತಿದ್ದರಂತೆ.
ನಲವತ್ತೈದು ವರ್ಷಗಳ ಹಿಂದೆ, ನಾನಿನ್ನೂ ಮೊದಲ ಬಾರಿಗೆ ಬಣ್ಣ ಹಚ್ಚುವ ಹೊತ್ತಿಗಾಗಲೇ ಕೆ. ಎನ್. ಟೇಲರ್ ತಮ್ಮ ಹಾಸ್ಯ ನಾಟಕಗಳ ಮೂಲಕ ದೇಶದ ಒಳ ಹೊರಗಿನ ತುಳುವರ ಪ್ರೀತಿಗೆ ಪಾತ್ರರಾಗಿದ್ದವರು. ಆ ಆಸುಪಾಸಿನಲ್ಲೇ ಅವರೊಮ್ಮೆ ತಮ್ಮ ನಾಟಕಗಳೊಂದಿಗೆ ಹುಬ್ಬಳ್ಳಿಗೆ ಬಂದಿದ್ದರು. ಆಗ ಹುಬ್ಬಳ್ಳಿಗೆ ಯಾವುದೇ ಭಾಷೆಯ ನಾಟಕಗಳು ಬಂದರೂ ನಾವು ಕೆಲವರು ಸ್ವಯಂಪ್ರೇರಣೆಯಿಂದ ಆ ತಂಡದ ಕಲಾವಿದರಿಗೆ ಬೇಕಾದ ಸ್ಥಳೀಯ ನೆರವನ್ನು ನೀಡುತ್ತಿದ್ದೆವು.
ಆ ವೇಳೆಗಾಗಲೇ ಅವರು ‘ದಾರೆದ ಬುಡೆದಿ’ (1971) ಮತ್ತು ‘ಬಿಸತ್ತಿ ಬಾಬು’ (1972) ನಿರ್ಮಿಸಿ, ನಿರ್ದೇಶಿಸಿ, ನಟಿಸಿದ್ದರು ಕೂಡ.
ಹೀಗಾಗಿ, ಹುಬ್ಬಳ್ಳಿಯಲ್ಲಿ ಅವರ ನಾಟಕಗಳು ತುಂಬಿದ ಗೃಹಗಳ ಪ್ರದರ್ಶನ ಕಂಡವು.
ಕೆ. ಎನ್. ಟೇಲರ್ ತುಳು ನಾಡಿಗೆ ಅರ್ಪಿಸಿದ ಒಟ್ಟು ನಾಟಕಗಳು ಸುಮಾರು ಇಪ್ಪತ್ತು. ‘ಬೊಂಬಾಯಿ ಕಂಡನೆ’, ‘ಪುದರ್ ಕೇನಡೆ’, ‘ಡಾ. ಶಂಕರ್’, ‘ತಮ್ಮಲೆ ಅರುವತ್ತನ ಕೋಲ’, ‘ಏರ್ ಮಲ್ತಿನ ತಪ್ಪು?’, ‘ಶಾಂತಿ’, ‘ಕಲ್ಲ್‌ದ ದೇವೆರ್’, ‘ಯಾನ್ ಸನ್ಯಾಸಿ ಆಪೆ’, ‘ಕಾಸ್‌ದಾಯೆ ಕಂಡೆನಿ’, ‘ಬಾಡಾಯಿದ ಬಂಗಾರ್’, ‘ಕಂಡನೆ ಬುಡೆದಿ’, ‘ಇಂದ್ರನ ಆಸ್ತಿ’, ‘ಕಲ್ಜಿಗದ ವಿಶ್ವಾಮಿತ್ರ ಮೇನಕೆ’, ‘ದೇವೆರ್ ಕೊರ್ಪೆರ್’, ‘ಸೈನಗಾಂಡಲಾ ಸತ್ಯ ಪನ್ಲೆ’, ‘ದಾಸುನ ಮದ್ಮೆ’ ಮುಂತಾದವು ಅವುಗಳಲ್ಲಿ ಮುಖ್ಯ.
ಕೆಲವು ಕಾಲ ರಂಗದಿಂದ ದೂರವಿದ್ದ ಟೇಲರ್ ಮತ್ತೆ ಚೇತರಿಸಿಕೊಂಡು, ಹಾಸ್ಯಭರಿತ ನಾಟಕ ‘ಏರೆನ್ಲಾ ನಂಬೊಡ್ಚಿ’ ಮೂಲಕ ರಂಗಭೂಮಿಯಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದರು.
ಟೇಲರ್ ಅವರ ಪ್ರತಿಭೆ, ಛಲ ಮತ್ತು ಸಾಹಸೀ ಪ್ರವೃತ್ತಿಗೆ ಹಿಡಿದ ಕೈಗನ್ನಡಿ ಎಂಬಂತೆ ಮೂಡಿಬಂದಂಥವು ‘ದಾರೆದ ಬುಡೆದಿ’, ‘ಪಗೆತ ಪುಗೆ’, ‘ಬಿಸತ್ತಿ ಬಾಬು’, ‘ಯಾನ್ ಸನ್ಯಾಸಿ ಆಪೆ’, ‘ತುಳುನಾಡ ಸಿರಿ’, ‘ಸಾವಿರೊಡೊರ್ತಿ ಸಾವಿತ್ರಿ’, ‘ಭಾಗ್ಯವಂತೆದಿ’ ಮುಂತಾದ ತುಳು ಸಿನೆಮಾಗಳು. ಈ ಪೈಕಿ ‘ಭಾಗ್ಯವಂತೆದಿ’ ಹೊರತುಪಡಿಸಿದರೆ ಉಳಿದೆಲ್ಲವೂ ಕಪ್ಪು ಬಿಳುಪು ಚಿತ್ರಗಳೇ. ಆ ಕಪ್ಪು ಬಿಳುಪಿನ ಕಾಲದಲ್ಲೇ ಭಾವನೆಗಳ ಬಣ್ಣ ಚೆಲ್ಲಿದ ರಂಗ ಸರದಾರ ಕೆ.ಎನ್.ಟೇಲರ್. ಅವರ ಬಹುತೇಕ ಸಿನೇಮಾಗಳು ಅವರದೇ ಆದ ‘ಗಣೇಶ ನಾಟಕ ಸಭಾ’ ಮೂಲಕ ಜನಪ್ರಿಯತೆ ಗಳಿಸಿದ ಯಶಸ್ವಿ ನಾಟಕಗಳನ್ನು ಆಧರಿಸಿದಂಥವು.
ಟೇಲರ್ ಅವರ ‘ಕಾಸದಾಯೇ ಕಂಡೆನಿ’ ಚಿತ್ರದಲ್ಲಿ ಕನ್ನಡ ಚಿತ್ರರಂಗದ ‘ಗಿರಿ ಕನ್ಯೆ’ ಎಂದೇ ಹೆಸರಾದ ನಟಿ ಜಯಮಾಲಾ ಅಭಿಮಾನದಿಂದ ಅಭಿನಯಿಸಿದರು. ಹಾಗೆಯೇ, ‘ಏರ್ ಮಲ್ತಿನ ತಪ್ಪು?’ ಚಿತ್ರದಲ್ಲಿ ಮಿನುಗು ತಾರೆ ಕಲ್ಪನಾ ಅಮೋಘ ಅಭಿನಯ ನೀಡಿದರು. ಇನ್ನು, ‘ಸಾವಿರೊಡೊರ್ತಿ ಸಾವಿತ್ರಿ’ ಚಿತ್ರವನ್ನು ನಿರ್ದೆಶಿಸುವದರ ಜೊತೆಗೆ ಟೇಲರ್ ಅವರು ದ್ವಿಪಾತ್ರಗಳಲ್ಲಿ ನಟಿಸಿದರು. ‘ತುಳುನಾಡ ಸಿರಿ’ ಬೇರೆ ನಿರ್ಮಾಪಕರಿಗಾಗಿ ಟೇಲರ್ ನಿರ್ದೇಶಿಸಿದ ಚಿತ್ರ.
1989ರ ಸಾಲಿಗಾಗಿ ಟೇಲರ್ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ದೊರೆತ ಸಂದರ್ಭದಲ್ಲಿ ನಾನು ಅಕಾಡೆಮಿಯ ಸದಸ್ಯನಾಗಿದ್ದೆ. ಪ್ರಶಸ್ತಿ ಪ್ರದಾನ ಸಮಾರಂಭ ಮಂಗಳೂರಿನಲ್ಲಿ ನಡೆಯಿತು. ಆಗ ಅವರೊಂದಿಗೆ ಮಾತನಾಡುವ ಅವಕಾಶ ನನಗೆ ದೊರಕಿತ್ತು.
ಆ ಮಹಾನ್ ಕಲಾವಿದನ ಆತ್ಮಕ್ಕೆ ಶಾಂತಿ ಕೋರುವೆ.







Though I have not seen any of his films or dramas, I am a big fan of songs from his films and the songs written by him.
RIP KNT.
Priya Gopal Vajapeyi avare,
ee lekhana barediddakke Tulunadigara paravaagi naanu tamage dhanyavaada heluttene. K N Taylor ondu dantakathe.
Mahamud