ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ತುಂಗಾ’ ಕೈಸೇರಿದಾಗ…

ನಿಮಗೂ ನಿಮ್ಮೊಳಗೂ ಅನೇಕ ತುಂಗೆಯರು ಇರಬಹುದು, ಅದಕ್ಕೆ ಒಂದು ಮೆಲುಕು ಹಾಕಲು ಹಾಗೆನೇ, ನಿಮ್ಮ ಮನೆಯಲ್ಲಿಯೂ ತುಂಗೆಯರು ಈ ಅವಸ್ಥೆಯಲ್ಲಿ ಚಡಪಡಿಸುತ್ತಿರಬಹುದು. ಓದಿ..

ಶಿಕ್ಷಕರು ಮತ್ತು ಮಕ್ಕಳನ್ನು ಹೆತ್ತವರು, ಪೋಷಿಸುವವರು, ಮಕ್ಕಳ ಬಗ್ಗೆ ಕಾಳಜಿ ಇದ್ದವರು ಓದಲೇ ಬೇಕಾದ ಪುಸ್ತಕ… ಓದಿಸಿಕೊಂಡು ಮನಸ್ಸಿನಲ್ಲಿ ಪುಟನೆಗೆವ ಕಾದಂಬರಿ “ತುಂಗಾ”.

ಯಮುನಾ ಗಾಂವ್ಕರ್ / ಜೋಯಿಡಾ

ತಲೆ ಹೊಕ್ಕಿದ ಆ ಬಾಲ್ಯವೆಂಬ ಗುಬ್ಬಿಮರಿಯ ಹೊರಹಾಕಲು ಮನಸ್ಸಿಲ್ಲ…
ಮನದೊಳಗೆ ಚಿಂವ್ ಗುಟ್ಟಿ ನರನರಗಳ ಮೇಲೆಲ್ಲ ಕುಳಿತು ಬುರ್ ಎಂದು ಹಾರುತ್ತಾ ಮಿದುಳು ಆವರಿಸಿದೆ …

ಈಗಷ್ಟೇ, ಜಡಿಮಳೆಯ ಕಂಬ್ಳಿಕೊಪ್ಪೆಯೊಳಗೆ ಹೊಕ್ಕು ಮಿಶ್ರಿ ಜೇನು ಕಂಡು ಬಂದೆ.
ಕೆರೆಮೀನು ತಿನ್ನಲು ಬಂದ ಉದ್ದಕೊಕ್ಕಿನ ಹಕ್ಕಿಯ
ಚಿಟಬಿಲ್ಲಿನಿಂದ ಕಲ್ಲುತೂರಿ ಓಡಿಸಿದೆ. ಅಣ್ಣಂದಿರ ಜೊತೆಗೆ ನೀರಗಪ್ಪೆ ಆಟಕ್ಕೆ ಚಪ್ಪಟೆ ಕಲ್ಲು ಹೆಕ್ಕಿಟ್ಟೆ.
ಆಗಷ್ಟೆ ಮುಗಿಯುತ್ತ ಬಂದ ಹೆಬ್ಬಲಸಿನ ಹಣ್ಣು ಹೆಕ್ಕಿ ಹುಗಿಸಿಟ್ಟು ಓಡೋಡಿ ಬಂದೆ.

ಯಾರಿಗೂ ಕಾಣದಂತೆ ಪೋಷ್ಟ್ ಮ್ಯಾನ್ ಅಂತೋನಿಯ ಸೈಕಲ್ ನಲ್ಲಿ ಒಳಪಾಡ್ಲು ಹೊಡೆದು ಚೈನ್ ಬೀಳಿಸಿದೆ.
ಹಾಗೆ ನೇರಳೆ, ಮುಳ್ಳಣ್ಣು, ಕೌಳಿಕಾಯಿ ತಿಂದು ಹುಣಿಸೆ ಬೆಟ್ಟಿಗೆ ಉಪ್ಪಿಟ್ಟು ತರಗೆಲೆಗಳ ಮಧ್ಯೆ ಕರಟದಲ್ಲಿ ಮುಚ್ಚಿಟ್ಟೆ, ವಾಟೆಹುಳಿಗೆ ಚಿಟಮೆಣಸು, ಉಪ್ಪು ಹಾಕಿ ಜಜ್ಜಿಟ್ಟೆ, ಇವು ನಾಳೆ ನಂತರದ ಶಾಲೆಗೆ ದಾರಿ ಖರ್ಚಿಗೆ ಆಯ್ತು. ಅಪ್ಪ ವಾರ್ಷಿಕ ಖರ್ಚಿನಲ್ಲಿ ತಂದಿಟ್ಟ ಪಾಠಿಕಡ್ಡಿ ಚೂರು ಚೂರು ಮಾಡಿ ಬೆಂಕಿ ಪೆಟ್ಟಿಗೆಯಲ್ಲಿ ಕಟ್ಟಿಟ್ಟೆ ಗೆಳತಿಯರಿಗೆ ಹಂಚಲು.

ಗದ್ದೆಮೂಲೆಯ ಆಲದ ಬಿಳಿಲಿಗೆ ಜೀಕಿಜೀಕಿ
ಕೈಜಾರಿ ಬಿದಿರು ಮುಳ್ಳ್ ಮೇಲೆ ಬಿದ್ದೆ.
ಕಡು ಚಳಿ-ಬೇಸಿಗೆಯ ಹುಲಿಗೆ-ಸಂಪಿಗೆ ಹಣ್ಣು ಮರೆಯದೇ ತಿಂದೆ.

ಮತ್ತೇನಿಲ್ಲ ದಣಪೆಯೂ ಇಲ್ಲದ ಶಾಲೆಯ ಅಂಗಳದಲ್ಲಿ “ಸಾವರಿ ಫೂಲ್” ಡಬ್ಬಾಡುಬ್ಬಿ ಆಡಿ ಕ್ಲಾಸಿಗೆ ಹುಳಿತುಕೊಳ್ಳಲಾಗದೇ ಮಾಸ್ತರ್ ಬರೋದ್ರೊಳಗೆ ಕಾಡೆಲ್ಲ ಓಡೋಡಿ ಗದ್ದೆಯ ಮಾಳದೊಳಗೆ ಹೊಕ್ಕು, ಹಕ್ಕಿ ಮಂಗಗಳ ಓಡಿಸಲು ಕುಟ್ಟಂಡೆ ಭಾರಿಸುತ್ತ ಹೊತ್ತು ಕಳೆದು, ಊಟದ ವೇಳೆ ಸರಿಯಾಗಿ ಅಂಗಳದಲ್ಲಿದ್ದೆ.!!

ಸಂಜೆ ದೊಡ್ಡವರ ವಿಶ್ರಾಂತಿಯ ವೇಳೆಯಲ್ಲಿ, ಮತ್ತೊಂದು ಕೇರಿಯವರೆಲ್ಲ ಗದ್ದೆ ಕಾಯಲು ಮರದ ಮೇಲೆ ಕಟ್ಟಿದ ‘ಶಿಕಾರಿ ಮಾಳ’ ಏರಿ ಕುಳಿತು ಇಳಿಯಲಾಗದೇ ಒದ್ದಾಡುತ್ತಿದ್ದಾಗ, ದಾರಿಯಲ್ಲಿ ಹೋಗುತ್ತಿದ್ದ ಮಲಯಾಳಿ ಕಾಕಾ ಇಳಿಸಿಟ್ಟು ಹೋಗಿದ್ದ.

ತಡ ಮಾಡದೇ ಮಾವಿನ ಮರದ ಟೊಂಗೆ ಏರಿ ಎರಡು ಕೊಯ್ದು, ಹಾರುವಾಗ ಪಾದಕ್ಕೆ ಅರ್ಧ ಕಡಿದ ಗಿಡದ ಕೊಕ್ಕು ಹೊಕ್ಕಿ ರಕ್ತಸೋರಿಸುತ್ತ ಅಂಗಳದ ತುದಿ ತನಕವೂ ಏಕ್ ದಂ ನಲ್ಲಿ ಓಡಿ ಬಂದಿದ್ದೆ ಅಪ್ಪಯ್ಯನ ಕಣ್ಣು ತಪ್ಪಿಸಿ. ಅಬ್ಬೆ ತನ್ನ ಹರಿದ ಸೀರೆ ಚೂರು ಕಟ್ಟಿ ಹಸಿರು ರಸ ಬೋಳ್ ಕಾಳಿನ ಹಿಟ್ಟು ಕಟ್ಟಿ ಗುಣ ಮಾಡಿದ್ಲು.

ಕಾಡಿಗೆ ಕಟ್ಟಿಗೆ ತರಲು ಹೋದಾಗ ಕಾಡು ಗೇರು ಹಣ್ಣಿನ ರಸ (ಹೊಳಗೇರು) ಕೈಗೆಲ್ಲ ಉಜ್ಜಿಕೊಂಡಿದ್ದರಿಂದ ಆ ಭಾಗವೆಲ್ಲ ಸುಟ್ಟು ಹೋಗಿತ್ತು. ಮೈಯೆಲ್ಲ ಬಾತು ವಾರಗಟ್ಟಲೆ ಕಣ್ಣು ಕಾಣುತ್ತಲೇ ಇರಲಿಲ್ಲ. ಆಗ ಅಜ್ಜಿ, ಅಬ್ಬೆ, ಅಕ್ಕು, ಅಣ್ಣ ಎಲ್ಲಾ ಕನಿಕರ ತೋರಿದ್ರು. ಹೀಗೆ ಏನೇನೋ

ಆದೆಲ್ಲ ಮುಗಿಸಿ …. ಒಂದಿನ ಶಾಲೆಯಲ್ಲಿ ಮಕ್ಕಳಿಗೆ ಕಲಿಸದ “ಗಲಾಟೆ ಮಾಡುವ ಮಾಸ್ತರ್ರು ಅಕ್ಕೋರುಗಳ” ಜೊತೆಗೆ ಸಿಕ್ಕಾಪಟ್ಟೆ ಜಗಳಾಡಿ ಹೊಡೆತ ತಿಂದೆ.

ಅದೇ ದಿನ ದೋಸ್ತರ ಕೂಟ ಕಟ್ಟಿಕೊಂಡು ಮಂಡಳ ಪ್ರಧಾನರ ಬೈಕ್ ಗಾಡಿ ಅಡ್ಡ ಹಾಕ್ ಬಿಟ್ಟಿದ್ವಿ. ಗ್ಯಾದರಿಂಗ್ ನಲ್ಲಿ ಕುಂತಿ ಪಾರ್ಟ್ ಕಟ್ಟಿಕೊಂಡೇ, ಮಾಸ್ತರ್ ಮಂದಿಯೆಲ್ಲ “ಬ್ಲೇಡು ಚಾಕು” ಗಲಾಟೆ ಮಾಡದಂತೆ, ಶಾಲಾ ಇನ್ಸ್‌ಪೆಕ್ಟರ್ ಗೆ ಶಾಲೆ ಮೂಲಸೌಕರ್ಯ ಬಗ್ಗೆ ಅರ್ಜಿ ಕೊಟ್ಟಿದ್ದೆ.

ಆಗಾಗ ಅಕ್ಕಂದಿರು ಕಟ್ಟಿಕೊಟ್ಟ ಹಬ್ಬಲಿಗೆ ಹೂಮಾಲೆ ಹಿಡಿದು ದೊಡ್ಡವರ ಜೊತೆಗೆ ಮಾರಾಟಕ್ಕೆ ನಿಲ್ಲುತ್ತಿದ್ದೆ.

ಆಗಾಗ ತರಕಾರಿ ಒಯ್ದಿದ್ದೆವು. ಊರಲ್ಲದ ಊರಿನಲ್ಲಿ ಓದಿದ್ದು, ಓಡಿದ್ದು, ಕೆಲಸ ಮಾಡಿದ್ದು, ಓರಗೆಯವರಿಗೂ ಓದಿಸಿದ್ದು ಈಗಲೂ ಮುಂದುವರೆದಿದ್ದು ಎಲ್ಲ ತುಂಗಾ ಜೊತೆಗೆ ಹೇಳಿಕೊಂಡೆ.

ನಮಗೆ ಆಗ ಆಕಾಶವಾಣಿ ಮನೆಗೆ ಬಂತು. ರಾತ್ರಿ 8 ಯುವವಾಣಿಯ ಮ್ಯೂಜಿಕ್ ಹೇಗಿತ್ತೆಂದರೆ “ಸಂತೋಷ ಉಕ್ಕುತ್ತೆ, ಸಂತೋಷ ಉಕ್ಕುತ್ತೆ ಸಂತೋಷ ಉಕ್ಕೇ ಉಕ್ಕುತ್ತೆ” ಎಂದಂತೆ ಇತ್ತು. ಈ ಹಾಡನ್ನು ನಮ್ಮ ಶಾಲೆಯ ಎದುರಿನ ದೇವಾಲಯಕ್ಕೆ ಹೋಗಿಬಂದ ಮೋನಿಕಾ ಶ್ರಾವ್ಯವಾಗಿ ಹೇಳುತ್ತಿದ್ದುದು ನೆನಪಿದೆ. ನನ್ನ ಅಬ್ಬೆ ಚೆಂದ್ ಹೇಳ್ತಾರೆ ಇದನ್ನ. ಇದು ತುಂಗಾ ಗೂ ಇಷ್ಟ.

ಹಾಗೆ ….ತಟ್ಟುಚಪ್ಪಾಳೆ ಪುಟ್ಟಮಗು ಗುನುಗುನಿಸುತ್ತಾ, ಕೈಯಲ್ಲಿ ತೊತ್ತೋ ಚಾನ್, ಹೂವಿನೊಡನೆ ಮಾತುಕತೆ, ಚಿನ್ನದ ಹುಡುಗಿ ಚಿನ್ನಮ್ಮ, ಹಸಿರೂರಿನ ಹುಡುಗ, ಬಣ್ಣದ ಹಕ್ಕಿ, ಇದು ಮುಗಿಯದ ಕತೆ ಎಲ್ಲವೂ ಬಂದು ಹೋಗಿ ಈಗ ಈ ಚಾಳೀಸಿನಲ್ಲಿ “ತುಂಗಾ” ಕೈಸೇರಿ ತುಂಟಾಟವಾಡುತ್ತಿದ್ದಾಳೆ.

ನಿಮಗೂ ನಿಮ್ಮೊಳಗೂ ಅನೇಕ ತುಂಗೆಯರು ಇರಬಹುದು, ಅದಕ್ಕೆ ಒಂದು ಮೆಲುಕು ಹಾಕಲು ಹಾಗೆನೇ, ನಿಮ್ಮ ಮನೆಯಲ್ಲಿಯೂ ತುಂಗೆಯರು ಈ ಅವಸ್ಥೆಯಲ್ಲಿ ಚಡಪಡಿಸುತ್ತಿರಬಹುದು. ಓದಿ, ಶಿಕ್ಷಕರು ಮತ್ತು ಮಕ್ಕಳನ್ನು ಹೆತ್ತವರು, ಪೋಷಿಸುವವರು, ಮಕ್ಕಳ ಬಗ್ಗೆ ಕಾಳಜಿ ಇದ್ದವರು ಓದಲೇ ಬೇಕಾದ ಪುಸ್ತಕ… ಓದಿಸಿಕೊಂಡು ಮನಸ್ಸಿನಲ್ಲಿ ಪುಟನೆಗೆವ ಕಾದಂಬರಿ “ತುಂಗಾ”.

ನನ್ನೊಳಗಂತೂ ಆ ದಿನದ ತುಂಗಾ ನೆನಪಾದಳು. ನಿಮಗೆ ಹೇಳಿಯೇಬಿಟ್ಟೆ. ಇನ್ನು ನಿಮ್ಮ ಪಾಳಿ.

ಈ ಕೃತಿ ಕೊಳ್ಳಲು

ಇಲ್ಲಿ ಕ್ಲಿಕ್ಕಿಸಿ 

‍ಲೇಖಕರು avadhi

22 February, 2019

1 Comment

  1. ತಮ್ಮಣ್ಣ ಬೀಗಾರ

    ಚನ್ನಾಗಿ ಪರಿಚಯಿಸಿದ್ದೀರಿ.ನಾನೂ ತುಂಗಾಳ ಸಂಗಡ ಮಾತಾಡಿ ಖುಷಿಪಡಬೇಕು.ತುಂಗಾ ಸಿಕ್ಕಿದ್ದಾಳೆ ಮಾತಾಡುವುದೊಂದೇ ಬಾಕಿ.ಅಭಿನಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading