ಉರು ಹೊಡೆದಿದ್ದೆಲ್ಲಾ ಥಟ್ಟನೆ ಮರೆತುಹೋಯಿತು!

ಎ ಆರ್ ಮಣಿಕಾಂತ್
ಸಾವಯವ ಕೃಷಿ ಚಳವಳಿಯಲ್ಲಿ ಮುಂಚೂಣಿಯಲ್ಲಿ ಇರುವಾತ ಜಿ ಕೃಷ್ಣ ಪ್ರಸಾದ್. ಕೇಪಿ ಎಂಬ ಶಾರ್ಟ್ ಹೆಸರಿಂದಲೇ ಈತ ಎಲ್ಲರಿಗೂ ಪರಿಚಿತ. ನನಗೆ ಇವನು ಕಾಲೇಜಿನಲ್ಲಿ ಸಹಪಾಟಿ. ಬಹುಶ ನನಗಿಂತ ಮೂರ್ನಾಲ್ಕು ತಿಂಗಳು ದೊಡ್ಡವ. ನನ್ನ ಪಾಲಿಗೆ ಅವನು ಅವತ್ತಿಗೂ, ಈವತ್ತಿಗೂ- ಕಿಟ್ಟಿ. ನನ್ನ ಬಗ್ಗೆ ಅವನಿಗೆ ಇರುವ ಪ್ರೀತಿ, ಅಕ್ಕರೆಯನ್ನು ವಿವರಿಸಲು ನನ್ನಲ್ಲಿ ಪದಗಳು ಇಲ್ಲ.
ಕೇಪಿ ಪರಿಸರ ತಂತ್ರಜ್ಞಾನದ ವಿದ್ಯಾರ್ಥಿ. ಈತ ಸೆಕೆಂಡ್ ರ್ಯಾಂಕ್ ನೊಂದಿಗೆ ಡಿಗ್ರಿ ಮುಗಿಸಿದ. ನನ್ನದು ಆಟೋ ಮೊಬೈಲ್ ಡಿಪಾರ್ಟ್ ಮೆಂಟ್ .ನಾನು ಮತ್ತೆ ಮತ್ತೆ ಫೇಲಾದೆ.ಕಡೆಗೊಮ್ಮೆ – ಅಬ್ಬಾ, ಅಂತೂ ಕಾಲೇಜ್ ಲೈಫ್ ಮುಗೀತು ಅನ್ನುತ್ತಾ ನಾನು ಬೆಂಗಳೂರಿಗೆ ಬರುವ ಹೊತ್ತಿಗೆ ಕೇಪಿ ಕೆಲಸಕ್ಕೆ ಸೇರಿದ್ದ. ಪರಿಸರ ಹೋರಾಟಗಾರ್ತಿ ವನಜಾ ರಾಮಪ್ರಸಾದ್ ಅವರ ಕಂಪನಿಯಲ್ಲಿ ಸಿಇಒ ಥರದ ಹುದ್ದೆ ಅವನದಿತ್ತು. ನನಗೆ ಕೆಲಸವಿರಲಿಲ್ಲ. ಕಿಟ್ಟೀ, ಎಲ್ಲಾದ್ರೂ ಒಂದು ಕೆಲಸ ಕೊಡಿಸು ಅಂತ ಅವನಿಗೆ ಗಂಟುಬಿದ್ದೆ.
ಇದೆಲ್ಲಾ ೧೯೯೭ ರ ಮಾತು.
ಎರಡು ದಿನಗಳ ನಂತರ ಸಿಕ್ಕಿದ ಕಿಟ್ಟಿ- ”ನಿನಗೆ ಕೆಲಸ ಹುಡುಕಿದ್ದೀನಿ ಕಣಯ್ಯ. ನಮ್ಮ ಬಾಸ್ ವನಜಾ ರಾಮಪ್ರಸಾದ್ ಇದ್ದಾರಲ್ಲ, ಅವರ ಗಂಡನ ಫ್ಯಾಕ್ಟರಿಯಲ್ಲಿ ಕೆಲಸ ಕೊಡಿಸ್ತೇನೆ. ಅದಕ್ಕೂ ಮೊದಲು ನೀನು ರಾಮ್ ಪ್ರಸಾದ್ ಅವರ ಜೊತೆ ಮಾತಾಡಬೇಕು. ಇಂಗ್ಲಿಷ್ ನಲ್ಲಿ ಮಾತಾಡಬೇಕು” ಅಂದ.
ಪಜೀತಿ ಶುರು ಆಗಿದ್ದೇ ಆಗ. ಯಾಕೆಂದರೆ ನನಗೆ ಅವತ್ತಿನ ಸಂದರ್ಭದಲ್ಲಿ ನಾಲ್ಕು ಜನ ಮೆಚ್ಚುವಂಥಾ ಇಂಗ್ಲಿಷ್ ಮಾತಾಡಲು ಬರುತ್ತಿರಲಿಲ್ಲ. ಆ ಕಾರಣದಿಂದಲೇ- ”ಕಿಟ್ಟೀ, ನನಗೆ ಒಳ್ಳೆಯ ಇಂಗ್ಲಿಷ್ ಬರಲ್ಲ. ನಾನು ಕನ್ನಡದಲ್ಲೇ ಮಾತಾಡ್ತೇನೆ. ಹೇಗಿದ್ರೂ ಅವರಿಗೆ ಕನ್ನಡ ಬರುತ್ತೆ ಅಲ್ವ” ಅಂದೆ. ”ಕನ್ನಡ ಬರುತ್ತೆ ನಿಜ, ಆದ್ರೆ ಅವರು ಹೆಚ್ಚಾಗಿ ಇಂಗ್ಲಿಷ್ ನಲ್ಲೆ ಮಾತಾಡೋದು. ಕೆಲಸ ಬೇಕು ಅಂದ್ರೆ ಇಂಗ್ಲಿಷ್ ಲಿ ಮಾತಾಡಲೇಬೇಕು” ಅಂದ ಕಿಟ್ಟಿ, ಅಷ್ಟಕ್ಕೇ ಸುಮ್ಮನಾಗದೆ ಇಂಗ್ಲಿಷ್ ನಲ್ಲಿ ಹೇಗೆ ಮಾತಾಡಬೇಕು ಅನ್ನುವುದನ್ನು ಬರೆದೂ ಕೊಟ್ಟ. ಸ್ಕ್ರಿಪ್ಟ್ ಸಿಕ್ಕಿದ ಮೇಲೆ ಹೆದರಿಕೆ ಯಾಕೆ ಅಂದುಕೊಂಡು ಮನೆಗೆ ಬಂದವನೇ ಪೂರ್ತಿ ಎರಡು ದಿನ ಅದನ್ನು ಬಾಯಿಪಾಟ ಮಾಡಿಕೊಂಡೆ. ಮೂರನೇ ದಿನ, ನಾನು ರೆಡೀ ಅಂತ ಘೋಷಿಸಿಯೂ ಬಿಟ್ಟೆ. ಕಿಟ್ಟಿ ಖುಷಿಯಾಗಿ ರಾಮ್ ಪ್ರಸಾದ್ ಅವರ ಮನೆಗೆ ಕರೆದೊಯ್ದ. ನಂತರ ”ಆಲ್ ದಿ ಬೆಸ್ಟ್” ಹೇಳಿ ಕೆಲಸಕ್ಕೆ ಹೋಗಿಬಿಟ್ಟ.
ಆ ನಂತರದ ಕಥೆ ಕೇಳಿ: ಆ ಮಹರಾಯ ರಾಮ್ ಪ್ರಸಾದ್ ಅವರು ಎಕ್ಸ್ ಪ್ರೆಸ್ ವೇಗದಲ್ಲಿ ಏನೇನೋ ಕೇಳಿದರು.ಅಷ್ಟೆ: ಎರಡು ದಿನ ಉರು ಹೊಡೆದಿದ್ದೆಲ್ಲಾ ಥಟ್ಟನೆ ಮರೆತುಹೋಯಿತು. ಹೈ ಸ್ಕೂಲ್ ನಲ್ಲಿ ಮೂರು ವರ್ಷವೂ ಇಂಗ್ಲಿಷ್ನಲ್ಲಿ ಸ್ಕೂಲ್ ಗೇ ಟಾಪರ್ ಅನ್ನಿಸಿಕೊಂಡಿದ್ದ ನನಗೆ ಅವತ್ತು ಒಂದೇ ಒಂದು ಪದವೂ ನೆನಪಿಗೆ ಬರಲಿಲ್ಲ. ನಾನು ಅದೇನೇ ತಿಪ್ಪರಲಾಗ ಹಾಕಿದರೂ ನಾಲಿಗೆ ಹೊರಳಲಿಲ್ಲ. ಕಡೆಗೂ ಬೆ ಬ್ಬೆ ಬ್ಬೆ ಅಂದು ಅಲ್ಲಿಂದ ಬರಿಗೈಲಿ ವಾಪಸ್ಸಾದೆ.
ಇವತ್ತು ನನ್ನ ಇಂಗ್ಲಿಷ್ ಅನುವಾದದ ಬರಹಗಳನ್ನುಯಾರಾದರೂ ಹೊಗಳಿದಾಗ, ಇದೇ ಇಂಗ್ಲಿಷಿನ ಪದಗಳು ಅರ್ಥವಾಗದೇ ನಾನು ಒದ್ದಾಡಿಹೋದ ದಿನಗಳು ನೆನಪಾಗುತ್ತವೆ.
ಅಂದಹಾಗೆ, ಇಂಗ್ಲೀಷಿನಲ್ಲಿ ಮಾತಾಡಲು ಬಾರದೆ ಪತರುಗುಟ್ಟಿದ ಅನುಭವಗಳು ನಿಮಗೂ ಆಗಿವೆಯಾ?





0 Comments