ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಿಗಣೆ ಮೀಮಾಂಸೆ

ತಿಗಣೆ ಮೀಮಾಂಸೆ

ಪುರೂರವ ಕೆ.ವಿ

ತಾನಿರುವ ವ್ಯವಸ್ಥೆಗೆ ಹೊಂದಿಕೊಳ್ಳದ ಪ್ರಾಣಿ ಹೆಚ್ಚು ಕಾಲ ಆ ಪರಿಸರದಲ್ಲಿ ಬದುಕುವುದು ಕಷ್ಟ. ಕೆಲವರಿಗೆ ಹೊಸ ಪರಿಸರಕ್ಕೆ ಹೊಂದಿಕೊಳ್ಳುವುದೆಂದರೆ ಊಸರವಳ್ಳಿ ಬಣ್ಣ ಬದಲಿಸಿದಷ್ಟೆ ಸುಲಭ ಮತ್ತೆ ಕೆಲವರು ಡೈನೋಸಾರ್‌ಗಳಂತೆ ನಿರ್ಣಾಮವಾದರೂ ಆಗುತ್ತಾರೆ ಆದರೆ ಹೊಂದಾಣಿಕೆಗೆ ಮನಸ್ಸು ಮಾಡುವುದಿಲ್ಲ. ಒಬ್ಬ ಮನುಷ್ಯ ತಾನು ಕೆಲಸ ಮಾಡುವ ಕಂಪೆನಿಯ ಆಡಳಿತದ ಪಾಲಿಸಿಗಳಿಗೆ ಒಳಪಟ್ಟಿರುತ್ತಾನೆ. ಉಳಿದವರಿಗೊಂದು ತನಗೇ ಒಂದು ಪಾಲಿಸಿ ಅನ್ನುವಂತೆ ವರ್ತಿಸಿದರೆ ಆಡಳಿತದ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಒಂದು ಮಗು ಹುಟ್ಟಿದ ಮೇಲೆ ತನ್ನ ಮನೆಯಲ್ಲಿಯೇ ವ್ಯವಸ್ಥೆಯ ಮೊದಲ ಪಾಠಗಳನ್ನು ಕಲಿಯುತ್ತಾ ಹೋಗುತ್ತದೆ.

ಆಹಾರ ಸೇವನೆ, ಹಿರಿಯರೊಂದಿಗಿನ ವರ್ತನೆ, ಸಹ ವಯಸ್ಕರೊಂದಿಗಿನ ಒಡನಾಟ, ಶಿಸ್ತು-ಸಂಯಮ ಹೀಗೆ ಪ್ರತಿ ವರ್ತನೆಯಲ್ಲಿಯೂ ಕೂಡ ಮನೆಯಲ್ಲಿ ತಾನು ಕಲಿತ ಮೊದಲ ಪಾಠಗಳ ಮೂಲಕವೇ ಮಗು ಸಾಮಾಜಿಕ ವ್ಯವಸ್ಥೆಯಲ್ಲಿಯ ರೂಪುರೇಷೆಗಳನ್ನು ಮೈಗೂಡಿಸಿಕೊಳ್ಳುತ್ತಾ ಹೋಗುತ್ತದೆ. ಹೊಂದಾಣಿಕೆ ಎಂದ ಕೂಡಲೇ ನನ್ನ ಪರಿಚಯಸ್ಥರ ಮನೆಯಲ್ಲಿ ನಡೆದ ಒಂದು ಘಟನೆ ನೆನಪಾಗುತ್ತದೆ. ಒಮ್ಮೆ ಅವರ ಮನೆಯಲ್ಲಿ ತಿಗಣೆಗಳು ಕಾಣಿಸಿಕೊಳ್ಳೋಕೆ ಶುರುವಾದವಂತೆ. ಮೊದಮೊದಲು ಅವುಗಳನ್ನು ನಿರ್ಲಕ್ಷಿಸಿದರೂ ರಕ್ತ ಬೀಜಾಸುರ ವಂಶಸ್ಠರಂತೆ ಎಲ್ಲೆಂದರಲ್ಲಿ ಕಾಣಿಸಿಕೊಳ್ಳೋಕೆ ಶುರುವಾದಾಗ ಗಾಬರಿಯಾಗಿ ಅವುಗಳ ನಿಯಂತ್ರಣಕ್ಕಾಗಿ ಮಾರ್ಗೋಪಾಯಗಳನ್ನು ಅವರಿವರ ಬಳಿ ಕೇಳಿದ್ದಾರೆ.

ತಲೆಗೊಂದರಂತೆ ಅವರಿವರು ಕೊಟ್ಟಉಪಾಯಗಳನ್ನು ಜಾರಿಗೆ ತಂದರೂ ಅವುಗಳ ಸಂತತಿ ಬೆಳೆಯುತ್ತಲೇ ಹೋಯಿತಂತೆ. ಮನೆಯಲ್ಲಿಯ ತಿಗಣೆಗಳ ಉಪಟಳ ಒಂದೆಡೆಯಾದರೆ ಹೊರಗಡೆಯ ವಿದ್ಯಾಮಾನಗಳು ಇನ್ನೂ ಅವರನ್ನು ಚಿಂತೆಗೀಡು ಮಾಡಿದವು. ಅವರ ಮನೆಯ ತಿಗಣೆಗಳ ವಿಚಾರ ತರಗೆಲೆಗಳಿಗೆ ಹಚ್ಚಿದ ಬೆಂಕಿಯ ಥರ ಒಬ್ಬರಿಂದ ಇನ್ನೊಬ್ಬರಿಗೆ ಹಬ್ಬಿ ಎಲ್ಲರೂ ಇವರ ಮನೆಯವರನ್ನು ಅಸ್ಪೃಶ್ಯರ ಥರ ನೋಡಲು ಶುರು ಮಾಡಿದರು. ಕೊನೆಗೆ ಪರಿಸ್ಥಿತಿಯ ಗಂಭೀರತೆ ಇವರಿಗೆ ಅರ್ಥವಾಗಿದ್ದು ಮನೆಗೆಲಸಕ್ಕೆ ಬರುತ್ತಿದ್ದ ಲಕುಮಿ “ನಿಮ್ಮನೆ ಸಾವಾಸ ಮಾತ್ರ ಬ್ಯಾಡಕ್ಕೋ” ಅಂತ ಉದ್ದಂಡ ನಮಸ್ಕಾರ ಹಾಕಿ ಹೇಳಿದಾಗ.

ಅದೂ ಅಲ್ಲದೆ ಇತ್ತಿಚೆಗಷ್ಟೇ ಅವರ ಮನೆಗೆ ಹೆಣ್ಣು ಕೊಟ್ಟ ಬೀಗರೂ ಕೂಡ ಬಂದು “ನಿಮ್ಮ ಮನೆಯಲ್ಲಿ ನಮ್ಮ ಮಗಳಿಗೆ ಸರಿಯಾಗಿ ಊಟ ಹಾಕಿ ಚೆನ್ನಾಗಿ ನೋಡಿಕೊಳ್ತಾ ಇಲ್ಲ ಅನ್ಸುತ್ತೆ ನೋಡಿ ಎಷ್ಟೊಂದು ವೀಕಾಗಿದಾಳೆ” ಅಂತ ವಾಪಾಸು ಕರೆದುಕೊಂಡು ಹೋಗಿದ್ದರು. ಅವರ ಸೊಸೆ ಕೂಡ ತಿಗಣೆಗಳು ಮೈಯ ರಕ್ತ ಕುಡಿದು ಹೀಗೆ ಆಗಿರೋದು ಅಂತ ಹೇಳಿದ್ರೆ ಎಲ್ಲಿ ಅಪ್ಪ ಅಮ್ಮ ಕೂಡ ಮನೆಗೆ ಸೇರಿಸೊಲ್ವೊ ಅನ್ನೊ ಹೆದರಿಕೆಯಿಂದ ನಿಜವನ್ನು ಮುಚ್ಚಿಟ್ಟು ತಂದೆ ಮನೆ ಸೇರಿದ್ದಳು. ಪೆಸ್ಟ್ ಕಂಟ್ರೋಲ್ ಏಜೆನ್ಸಿಯಿಂದ ಜನರನ್ನು ಕರೆಸಿ ಅವರಿಗೆ ಸಾವಿರಾರು ರೂಪಾಯಿ ಸುರಿದಿದ್ದಾಯಿತು.ಮತ್ಯರೋ ಹೇಳಿದರು ಅಂತ ಮಂತ್ರವಾದಿ ಕರೆಸಿ ಮಂತ್ರದ ನೀರನ್ನು ತಿಗಣೆಗಳು ಇರುವ ಜಾಗಕ್ಕೆ ಸಿಂಪಡಣೆ ಮಾಡಿದ್ದಾಯಿತು ಯಾವುದಕ್ಕೂ ತಿಗಣೆಗಳು ಬಗ್ಗಲೇ ಇಲ್ಲವಂತೆ.

ಮನೆಯ ಗೋಡೆಗಳೋ ಪಿಕಾಸೋನ ಕಲಾಕೃತಿಗಳನ್ನೂ ಮೀರಿಸುವಂತೆ ತಿಗಣೆಗಳನ್ನು ಹೊಸಕಿದ ರಕ್ತದ ಕಲೆಗಳಿಂದ ತುಂಬಿ ಕಳೆಕೆಟ್ಟಿದ್ದವು. ಬೇರೆ ಯಾವುದೇ ಪ್ರಾಣಿಗಳಾಗಿದ್ದರೂ ಕೂಡ ಮನೆಯವರೆಲ್ಲ ಸೇರಿ ಬೇಟೆಯಾಡಿ ಮುಗಿಸಿಬಿಡುತ್ತಿದ್ದರೇನೋ ಆದರೆ ಮನೆಯಲ್ಲಿ ತುಂಬಿರುವುದು ಯಕಶ್ಚಿತ್ ತಿಗಣೆಗಳು. ಆದರೂ ಸಂದಿ ಗೊಂದಿಗಳಿಂದ ಅವುಗಳನ್ನು ಹೊರಗೆಳೆದು ಕೊಲ್ಲುವುದೂ ತಿಗಣೆಗಳು ಮತ್ತೆ ಬೆಳೆಯುವುದೂ ನಡೆದೇ ಇತ್ತು. ಮನೆಯಲ್ಲಿ ಇಂಟರ್ನೆಟ್ ಅರೆದು ಕುಡಿದಿರೋ ಹೈಕಳುಗಳೂ ಇದ್ದ ಬದ್ದ ಜಾಲತಾಣಗಳನ್ನೆಲ್ಲಾ ಹುಡುಕಿ ಪೆಟ್ರೋಲ್ ಅಥವಾ ಸೀಮೆ‌ಎಣ್ಣ್ ಸಿಂಪಡಿಸಿದರೆ ತಿಗಣೆಗಳು ಸಾಯುತ್ತವೆ ಅನ್ನೋ ವಿಷಯವನ್ನು ಕಂಡು ಹಿಡಿದು ಅದನ್ನು ಕಾರ್ಯರೂಪಕ್ಕೆ ತರಲಾಗಿ ಒಳ್ಳೆಯ ಫಲಿತಾಂಶವನ್ನೇ ಕೊಟ್ಟಿತು.

ಇನ್ನೇನು ತಿಗಣೆಗಳು ನಾಮಾವಶೇಷ ಆಗುತ್ತವೆ ಮನೆ ಮಂದಿಯೆಲ್ಲಾ ನೆಮ್ಮದಿಯಿಂದ ಇರಬಹುದು ಅಂತಾ ನಿಟ್ಟುಸಿರು ಬಿಡುವಾಗಲೇ ತಿಗಣೆಗಳ ಹೊಂದಾಣಿಕೆ ಶಕ್ತಿ ಅವರಿಗೆ ಗೋಚರಿಸಿದ್ದು. ತಿಗಣೆಗಳು ಸೀಮೆ‌ಎಣ್ಣೆಗೂ ಸಾಯದೆ ಬದುಕುವಂತಹ ವಿಚಿತ್ರ ನಿರೋಧಕ ಗುಣವನ್ನು ಬೆಳೆಸಿಕೊಂಡಿದ್ದವು. ಕೊನೆಗೆ ಆ ಮನೆ ಮಂದಿಯೆಲ್ಲಾ ಸಾಮಾನುಗಳನ್ನೆಲ್ಲಾ ಅದೇ ಮನೆಯಲ್ಲಿಯೇ ಬಿಟ್ಟು ಉಟ್ಟ ಬಟ್ಟೆಯಲ್ಲಿಯೇ ಬೇರೆ ಬಾಡಿಗೆ ಮನೆ ತಗೊಂಡು ಜೀವನ ಮಡುತ್ತಾ ಇದ್ದಾರೆ.

ವ್ಯವಸ್ಥೆಯೊಂದಿಗೆ ಹೊಂದಿಕೊಂಡು ಹೋಗುವ ಗುಣವನ್ನು ತಿಗಣೆಗಳಿಂದಲೇ ಕಲಿಯಬೇಕೆಂಬುದು ನನ್ನ ಭಾವನೆ. ಇಷ್ಟೆಲ್ಲಾ ತಿಗಣೆಗಳ ಬಗೆಗಿನ ಪುರಾಣ ನಾನು ಯಾಕೆ ಬಿಚ್ಚಿಡಬೇಕಾಯ್ತು ಅಂದ್ರೆ ನಾನಿರುವ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಅಕಸ್ಮಾತ್ತಾಗಿ ತಿಗಣೆಯೊಂದನ್ನು ನೋಡಿದೆ. ಮುಂದಿನ ದಿನಗಳಲ್ಲಿ ನನಗೇನು ಗ್ರಹಚಾರ ಕಾದಿದೆಯೋ ನಾನು ನಂಬದ ಆ ದೇವರಿಗೇ ಗೊತ್ತು.

 

‍ಲೇಖಕರು avadhi

25 March, 2013

2 Comments

  1. pravara

    ಗೋಡೆ ಮೇಲೆ ಪಿಕಾಸೋನ ಕಲೆ ನೀವೆ ಮೂಡಿಸಿದ್ದೀರಿ… ನೋಡಿದವರು ಬಾಯಿ ಬಿಡೋದೊಂಡು ಬಾಕಿ…. ಬರಹ ತುಂಬಾ ಇಷ್ಟವಾಯ್ತು ನಿನ್ನನ್ನು ತಿಗಣೆಯಿಂದ ದೇವರು ಕಾಪಾಡಲಿ

  2. ಸುಧಾ ಚಿದಾನಂದಗೌಡ

    ಚೆನ್ನಾಗಿ ನಗಿಸಿದಿರಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading