ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ತಾಮ್ರವರ್ಣದ ತಾಯಿ’ ಕುರಿತಂತೆ ಓ ಎಲ್ ನಾಗಭೂಷಣ ಸ್ವಾಮಿ

ಪಿ ಚಂದ್ರಿಕಾ ಅವರ ತಾಮ್ರವರ್ಣದ ತಾಯಿ ಕೃತಿಗೆ ಓ.ಎಲ್. ನಾಗಭೂಷಣ ಸ್ವಾಮಿ ಬರೆದ ಮುನ್ನುಡಿ :

ಡಾ. ಚಂದ್ರಿಕಾ ಅವರ ಕವಿತೆಗಳ ಸಂಕಲನ ಎಂದೋ ಪ್ರಕಟವಾಗಬೇಕಿತ್ತು. ಹಲವು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಚಂದ್ರಿಕಾ ತಮ್ಮ ರಚನೆಗಳನ್ನು ಸಂಕಲನವಾಗಿ ರೂಪಿಸುವುದರಲ್ಲಿ ತುಂಬ ಸಹನೆ ತೋರಿದ್ದಾರೆ, ಕಾಯ್ದಿದ್ದಾರೆ. ಕಾಯುವ ಗುಣ ಬಲು ದೊಡ್ಡದು. ಈ ಸಂಕಲನದ ಕವಿತೆಗಳನ್ನು ಹಲವು ಬಾರಿ ಓದಿದ ಮೇಲೂ ಅವುಗಳನ್ನು ಕುರಿತು ಬರೆಯುವುದು ಕಷ್ಟದ ಕೆಲಸ ಅನ್ನಿಸಿತು. ಇದು ಅವರ ಕವಿತೆಗಳನ್ನು ಕುರಿತ ಮಾತಲ್ಲ, ಸಮಕಾಲೀನವಾದ ಕವಿತೆಯನ್ನು ಕುರಿತು ಮಾತನಾಡುವ ಕಷ್ಟದ ಬಗ್ಗೆ ಹೇಳುತ್ತಿರುವ ಮಾತು. ನಮ್ಮ ಕಾಲದಲ್ಲೇ ನಮ್ಮ ಸುತ್ತಮುತ್ತಲೇ ರಚನೆಗೊಳ್ಳುತ್ತಿರುವುದನ್ನು ಅರಿಯುವ, ಗ್ರಹಿಸುವ, ವಿವರಿಸುವ ಕೆಲಸ ನಿಜವಾಗಲೂ ಕಷ್ಟ. ಹಾಗಾಗಿ ತಮ್ಮ ಕವಿತೆಗಳನ್ನು ವಿಶ್ವಾಸವಿರಿಸಿ ಓದಲು ಕೊಟ್ಟು, ಅವುಗಳ ಬಗ್ಗೆ ಚರ್ಚೆೆ ಮಾಡಿ, ಎಷ್ಟೋ ವರ್ಷಗಳ ನಂತರ ಸಂಕಲನವಾಗಿ ಓದುಗರ ಮುಂದಿಡುತ್ತಿರುವ ಚಂದ್ರಿಕಾ ಅವರ ಕವಿತೆಗಳ ಬಗ್ಗೆ ಹೇಳುವುದಕ್ಕಿಂತ ಹೆಚ್ಚಾಗಿ ಈ ಕಷ್ಟವನ್ನೇ ಕುರಿತು ಮೊದಲಿಗೆ ಹೇಳಬೇಕು ಅನಿಸಿದೆ.

ಮಾತಿಗೆ ಇನ್ನೊಂದು ಮಾತು ಪ್ರತಿಕ್ರಿಯೆ; ಹಾಗೆಯೇ ಕವಿತೆಗೆ ಇನ್ನೊಂದು ಕವಿತೆಯಷ್ಟೇ ನಿಜವಾದ ಪ್ರತಿಕ್ರಿಯೆ ಎಂದು ಬಲವಾಗಿ ಅನ್ನಿಸುತ್ತಿದೆ. ಆದರೆ ಕವಿತೆಯನ್ನು ಕುರಿತು ಪ್ರತಿಕ್ರಿಯೆ ತೋರಿಸುವುದಕ್ಕೆ ವಿಮಶರ್ೆ ಅನ್ನುವ ಉಪಕರಣ ಬಳಸುವುದು ನಮಗೆ ಅಭ್ಯಾಸವಾಗಿಬಿಟ್ಟಿದೆ. ಆ ಅಭ್ಯಾಸವಾದರೂ ನಮಗೆ ತಕ್ಕಮಟ್ಟಿಗೆ ಸ್ಪಷ್ಟವಾಗಿರುವ ಭಾಷೆ, ಭಾವನೆ, ವಿಚಾರಗಳ ವಿನ್ಯಾಸವನ್ನು ಆಧರಿಸಿ ಬೆಳೆಸಿಕೊಂಡದ್ದು. ಅದು ವಿನ್ಯಾಸವೂ ಹೌದು, ರೂಢಿಯೂ ಹೌದು. ವಿಮರ್ಶೆ ಎಂದೂ ಕವಿತೆಗೆ ಸಂವಾದಿಯಲ್ಲ, ಪರ್ಯಾಯವೂ ಅಲ್ಲ. ಕವಿತೆ ಅನುಭವದ ಒಡನಾಟವಾದರೆ ವಿಮರ್ಶೆ ಅಂಥ ಒಡನಾಟಗಳ ವಿನ್ಯಾಸ ಯಾವುದು, ಮಹತ್ವವೇನು, ಮಿತಿಯೇನು ಇಂಥ ಸಂಗತಿಗಳ ಬುದ್ಧಿಪೂರ್ವಕ ಅನ್ವೇಷಣೆ. ಅಂಥ ಅನ್ವೇಷಣೆಗೆ ಕವಿತೆ ಒದಗಿ ಬರುತ್ತದೆ ನಿಜ. ಆದರೆ ಒಮ್ಮೆ ವಿಮರ್ಶೆ ಹುಟ್ಟಿದಮೇಲೆ ಅದು ತನ್ನ ಪಾಡಿಗೆ ತಾನು ಇತರ ವಿಮರ್ಶೆಗಳ ಬೀಜವಾಗುತ್ತ ಬೆಳೆಯತೊಡಗುತ್ತದೆ. ಅಥವಾ, ಹೀಗೂ ಹೇಳಬಹುದು. ಕವಿತೆಯೆನ್ನುವುದು ನೋಟ, ವಿಮರ್ಶೆ ನೋಟದ ಬಗೆಯ ಪರಿಶೀಲನೆ. ಅದಕ್ಕೇ ಕವಿತೆಗೂ ವಿಮರ್ಶೆಗೂ ಅಂಥ ಸಂಬಂಧವಿಲ್ಲ, ಎರಡೂ ತಮ್ಮದೇ ರೀತಿಯಲ್ಲಿ ಬೆಳೆಯುವ ಜೀವಗಳು ಅನ್ನಿಸಿಬಿಟ್ಟಿದೆ.

ಮೆರಿಯಾನ್ ಮೂರ್ ಎಂಬ ಕವಿ ಹೇಳುತ್ತಾಳೆ- it is a privilege to see so much confusion.  ‘ಇಷ್ಟೊಂದು ಗೊಂದಲವನ್ನು ನೋಡುವ ಅವಕಾಶ ದೊರೆತಿರುವುದು ಸುಕೃತ’. ಓದುಗರಾಗಿ ನಮ್ಮ ಮನಸುಗಳು ಹಳೆಯ ಆಗಿಹೋದ ಕವಿಗಳ ನೋಟದ ವಿನ್ಯಾಸ, ಬಣ್ಣಿಸುವ ರೀತಿ, ವಿಚಾರಗಳನ್ನು ವ್ಯಕ್ತಪಡಿಸುವ ಕ್ರಮ ಇವುಗಳಿಗೆ ಹೊಂದಿಕೊಂಡಿರುತ್ತದೆ. ಬೇರೆಯ ವಿನ್ಯಾಸ ಎದುರಾದಾಗ ತಬ್ಬಿಬ್ಬಾಗುತ್ತದೆ. ಸುಮ್ಮನೆ ನೋಡಿ: ಕನ್ನಡದಲ್ಲಿ ಈಗ ಯಾವ ಚಳುವಳಿಗಳೂ ಇಲ್ಲ; ಇಂದಿನ ಕಾವ್ಯ ಮತ್ತೆ ನವೋದಯದ ಮಾದರಿಗೆ ಮರಳುತಿದೆ; ನವ್ಯದ ಧೋರಣೆಗಳು ಮತ್ತೆ ತಲೆ ಎತ್ತಿ ಕವಿ-ಓದುಗರನ್ನು ಸಮಾಜವಿಮುಖಗೊಳಿಸುತಿವೆ; ವಿಚಾರ ಮುಖ್ಯವಾದಷ್ಟು ಆಕೃತಿ ಮುಖ್ಯವಾಗಿಲ್ಲ; ಲೇಖಕರಲ್ಲಿ ಲಯದ ಕೊರತೆ ಇದೆ-ಇಂಥ ಹತ್ತಾರು ತೀರ್ಮಾನಗಳು ಹುಟ್ಟಿವೆಯಲ್ಲ ಅವೆಲ್ಲವೂ ಸಮಕಾಲೀನವನ್ನು ನಿಜವಾಗಿ ಕಣ್ಣಿಟ್ಟು ನೋಡಲಾಗದೆ ಪರಿಚಿತ ಚಿಂತನಾ ಮಾದರಿಯ ಕನ್ನಡಕಗಳನ್ನೇ ಬಳಸುತಿರುವುದರ ಫಲಿತಾಂಶ ಅನ್ನಿಸುತ್ತದೆ. ನಾವು ಕೇಳಬೇಕಾದ ಪ್ರಶ್ನೆಗಳು ಬೇರೆಯೇ ಇವೆ. ಸಮಕಾಲೀನ ಕನ್ನಡ ಕವಿತೆಯ ವಿನ್ಯಾಸ ಯಾವುದು? ಕವಿತೆಯ ಆಕೃತಿ, ಕಲಾತ್ಮಕತೆ, ಲಯ ಇತ್ಯಾದಿಗಳ ಅಭಾವ ಹೊಸ ಅಭಿವ್ಯಕ್ತಿ ರೂಪದ ಸಾಧನೆಗಾಗಿ ನಡೆಸುತ್ತಿರುವ ಹುಡುಕಾಟ ಇರಬಹುದೇ? ಹಲವು ‘ಇಲ್ಲ’ಗಳ ನಡುವೆಯೂ ಸಮಕಾಲೀನ ಕವಿಗಳ ರಚನೆಯ ಹಿಂದೆ ಕೆಲವು ಸಮಾನಗುಣಗಳನ್ನು ಕಾಣಬಹುದೇ? ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟರೆ ಸಮಕಾಲೀನ ಕಾವ್ಯಮೀಮಾಂಸೆಯ ಅಗತ್ಯ ಮನದಟ್ಟಾಗಬಹುದು. ಅಂಥ ಪ್ರಯತ್ನಕ್ಕೆ ಈ ಮುನ್ನುಡಿಯ ಮಾತುಗಳು ತಕ್ಕ ಸ್ಥಳವಲ್ಲ. ಆದರೂ ಚಂದ್ರಿಕಾ ಅವರ ಕವಿತೆಗಳನ್ನು ಕುರಿತು ಯೋಚನೆಮಾಡಿದಷ್ಟೂ ಸಮಕಾಲೀನ ಕವಿತೆ ಸಮಕಾಲೀನ ಮನಸ್ಸನ್ನು ಬಯಸುತ್ತದೆಯೋ, ಹಳೆಯ ವಿನ್ಯಾಸಗಳಿಂದ ತಿದ್ದಿಕೊಂಡ ಓದುಗ ಮನಸ್ಸು ನಿಜವಾಗಲೂ ಸಮಕಾಲೀನವಾದದ್ದನ್ನು ಗ್ರಹಿಸಬಲ್ಲುದೋ ಅನ್ನುವ ಪ್ರಶ್ನೆ ಕಾಡಿದ್ದರಿಂದ ಅದನ್ನು ನಿಮ್ಮೊಡನೆ ಹಂಚಿಕೊಂಡಿದ್ದೇನೆ.

ಚಂದ್ರಿಕಾ ಅವರ ಕವಿತೆಗಳ ಒಂದು ಮುಖ್ಯ ಗುಣವೆಂದರೆ ಅವು ಇಂಥ ಪ್ರಶ್ನೆಗಳನ್ನು ಹುಟ್ಟಿಸುತ್ತವೆ ಅನ್ನುವುದೇ. ಕನ್ನಡದ ಕೆಲವು ಕವಿಗಳು ಚರಿತ್ರೆಯ ಹಳೆಯ ಮರೆತ ಸಂಗತಿಗಳನ್ನು ಇವತ್ತಿನ ದೃಷ್ಟಿಕೋನದಿಂದ ನೋಡುವ ದಾರಿ ಹಿಡಿಯುತ್ತಾರೆ; ಮತ್ತೆ ಕೆಲವರು ಕಾಲದ ಹಂಗಿಲ್ಲದ ಪುರಾಣ ಪ್ರತಿಮೆಗಳ ಮೂಲಕ ಇಂದಿನ ಮನಸ್ಥಿಗೆ ಕನ್ನಡಿ ಹಿಡಿಯುವುದಕ್ಕೋ ಇಲ್ಲವೇ ಅಂಥ ಪುರಾಣಗಳನ್ನು ಪ್ರಶ್ನಿಸುವುದಕ್ಕೋ ತೊಡಗುತ್ತಾರೆ; ಮತ್ತೆ ಕೆಲವರು ನುಡಿ ಚದುರುತನದಿಂದ ಆಕರ್ಷಕವಾಗಿ ಬರೆಯುವ ಕೆಲಸದಲ್ಲಿ ತೊಡಗುತ್ತಾರೆ; ಇನ್ನೂ ಅನೇಕರು ಒಪ್ಪಿತವಾದ ಸಾಮಾಜಿಕ ನಿಲುವನ್ನು ಕವಿತೆಯಂತೆ ಕಾಣುವ ಹಾಗೆ ಜೋಡಿಸಿಡುವುದರಲ್ಲಿ ಮಗ್ನರಾಗುತ್ತಾರೆ. ಚಂದ್ರಿಕಾ ಅವರು ಈ ಯಾವ ದಾರಿಗಳನ್ನೂ ಆಯ್ಕೆಮಾಡಿಕೊಂಡಿಲ್ಲ. ಹಾಗಾಗಿ ಅವರು ಕವಿತೆಯ ವಸ್ತುವಿನ ಆಯ್ಕೆಯಲ್ಲಿ ಪರಿಮಿತವಾಗಿರುವಂತೆ ತೋರುವ ಆದರೆ ಅಪಾರ ಸಾಧ್ಯತೆಗಳಿರುವ ವಲಯಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಅದು ವ್ಯಕ್ತಿಯ ಭಾವಗಳ ಲೋಕ ಮತ್ತು ವ್ಯಕ್ತಿ-ಸಮಾಜದ ಸಂಬಂಧಗಳ ಹೆಣಿಗೆಯ ಪರಿಶೀಲನೆಯ ವಲಯ. ಇಲ್ಲಿನ ಕವಿತೆಗಳಲ್ಲಿ ಸಮಾಜ ಅನ್ನುವುದು ಕೂಡ ನಿದರ್ಿಷ್ಟ ಇತರ ವ್ಯಕ್ತಿಗಳ, ಅವರೊಡನೆ ತನಗೆ ಇರುವ, ಇಲ್ಲದ, ಇರಬೇಕೆಂದು ಬಯಸುವ ಸಂಬಂಧಗಳ ರೂಪದಲ್ಲೇ ವ್ಯಕ್ತವಾಗಿದೆ. ತಾಯಿಯಾಗಿ, ಸಂಗಾತಿಯಾಗಿ, ಕರುಳ ಕುಡಿಯಾಗಿ, ತನ್ನೊಡನೆ ಸಂಬಂಧವಿರುವ ಪಾತ್ರಗಳಾಗಿ, ಕಲ್ಪಿತವಾದ ‘ಪರ’ ಅಥವ ಅಲೌಕಿಕವಾಗಿಯೂ ಸಮಾಜ ಇಲ್ಲಿ ಕಾಣಿಸಿಕೊಂಡಿದೆ.

ಚಂದ್ರಿಕಾ ಅವರು ಕಷ್ಟದ ಆಯ್ಕೆಯನ್ನು ಮಾಡಿಕೊಂಡಿದ್ದಾರೆ. ಕಷ್ಟದ ದಾರಿ ಯಾಕೆಂದರೆ ಇದು ಕ್ಷಣ ಕ್ಷಣವೂ ರೂಪ ಬದಲಿಸುವ ಭಾವಗಳನ್ನು ಭಾವುಕತೆಗೆ ಗುರಿಯಾಗದಂತೆ, ಆತ್ಮಮರುಕಕ್ಕೆ ಎಡೆಗೊಡದಂತೆ, ಸ್ವಸಮರ್ಥನೆಯ ರೂಪ ತಾಳದಂತೆ, ಹಳಹಳಿಕೆಯಾಗದಂತೆ, ಕೇವಲ ಆತ್ಮಕಥೆಯಾಗದಂತೆ ವ್ಯಕ್ತಪಡಿಸುವ ಕಠಿಣವಾದ ದಾರಿ. ತನ್ನಲ್ಲಿ ತಾನು ಎಷ್ಟು ಮುಳುಗಬೇಕು, ತನ್ನಿಂದ ತಾನು ಎಷ್ಟು ಅಂತರದಲ್ಲಿ ನಿಂತು ಮಾತಾಡಬೇಕು ಇವೆಲ್ಲ ಮನಸಿನ, ಬುದ್ಧಿಯ ಹದವನ್ನು ಬೇಡುತ್ತವೆ. ಸ್ವಂತದ ಭಾವಗಳನ್ನು ಕವಿತೆಯ ವಸ್ತುಮಾಡಿಕೊಳ್ಳುವುದು ಸುಲಭವೆಂಬಂತೆ ತೋರುತ್ತದೆ, ಆದರೆ ಬಲು ಬಲು ಕಷ್ಟದ ಕೆಲಸ ಅದು. ಇದರಲ್ಲಿ ಯಶಸ್ಸು ಸಿಕ್ಕಿದೆಯೋ ಇಲ್ಲವೋ ಅನ್ನುವ ಪ್ರಶ್ನೆ ಬೇರೆ; ಆದರೆ ಸಮಕಾಲೀನ ಲೇಖಕಿಯರು ಈ ವಲಯವನ್ನು ಕಾವ್ಯದ ಸಾಮಗ್ರಿಯಾಗಿ ಬಳಸುತಿದ್ದಾರೆ ಅನ್ನುವುದು ಗಮನಿಸಬೇಕಾದ ಸಂಗತಿ.

ಹೀಗೆ ಮಾಡಿಕೊಂಡಾಗ ಓದುಗರ ದೃಷ್ಟಿಯಿಂದ ಒಂದು ತೊಡಕು ಮೈದೋರುತ್ತದೆ. ನಮ್ಮ ಕಾಲದ ಅನೇಕ ಕವಿಗಳು ತಾವು ಏಕಾಂಗಿಗಳೆಂದು, ತಮ್ಮನ್ನು ಯಾರೂ ಅರ್ಥಮಾಡಿಕೊಂಡಿಲ್ಲ, ಅರ್ಥಮಾಡಿಕೊಳ್ಳಲಾರರು ಎಂದು ಭಾವಿಸಿದ್ದಾರೆ; ಹಿತವಾದ ಸಂಬಂಧದ ಹದಕ್ಕೆ ಕಾತರಿಸುತ್ತಾರೆ. ಈ ಭಾವನೆ, ಈ ಕಾತರಗಳು ಮನಸಿನೊಳಗಿನ ಏಕಾಂತದ ನುಡಿಗಳಾಗಿರುತ್ತವೆ. ಏಕಾಂತದ ನುಡಿಯ ಹಿಂದು ಮುಂದುಗಳು ಮನಸಿಗೆ ಗೊತ್ತಿರುವುದರಿಂದ ಇಂಥ ನುಡಿಮಥನದಲ್ಲಿ ಹುಟ್ಟುವ ರೂಪಕಗಳು ಸ್ವಯಂಸ್ಪಷ್ಟ ಎಂದು ಕವಿಗೆ ಅನಿಸುವುದು ಸಹಜ. ಅದನ್ನು ಕವಿತೆಯ ಕೇಂದ್ರವಾಗಿಟ್ಟುಕೊಂಡು ತನ್ನ ಮಟ್ಟಿಗೆ ಅರ್ಥಪೂರ್ಣವಾದ ರಚನೆಯನ್ನೂ ಮಾಡಬಹುದು. ಅದರೆ ಓದುಗರಿಗೆ ಕೇವಲ ಖಚಿತವಾದ ರೂಪಕ ದೊರೆತಿರುತ್ತದೆ, ಅದಕ್ಕೆ ರೂಪುಗೊಳ್ಳುವುದಕ್ಕೆ ಕಾರಣವಾದ ಮನಸಿನ ಸಂಚಾರದ ಜಾಡು ತಿಳಿಯುವುದಿಲ್ಲ. ಹೀಗಾಗಿ ಕವಿತೆ ಓದುಗರಿಗೆ ಅಸ್ಪಷ್ಟವೆನಿಸುವುದು ಸಹಜ. ಚಂದ್ರಿಕಾ ಅವರ ಈ ಸಂಕಲನಕ್ಕೆ ಹೆಸರು ಒದಗಿಸಿರುವ ‘ತಾಮ್ರವರ್ಣದ ತಾಯಿ’ ಈ ಮಾತಿಗೆ ಒಂದು ನಿದರ್ಶನ. ತಾಮ್ರವರ್ಣ ಅನ್ನುವದರ ಹಲವು ಅರ್ಥಗಳು ಮನಸಿಗೆ ಹೊಳೆದರೂ ತಾಯಿಯೊಡನೆ ಅವನ್ನು ಹೊಂದಿಸಿಕೊಂಡು ಕವಿತೆಯನ್ನು ಗ್ರಹಿಸುವುದು ನನ್ನ ಮನಸಿಗೆ ಕಷ್ಟವಾಯಿತು. ಮನಸಿನ ಒಳಮಾತುಗಳನ್ನು ಕವಿತೆಯಾಗಿಸುವ ಕವಿಗಳು ಓದುಗರಿಂದ ನಿಜವಾದ ಸಮಾನ-ಹೃದಯತೆಯನ್ನು ಅಪೇಕ್ಷಿಸುತ್ತಾರೆ. ವಾಚಕ ಕೇಂದ್ರಿತ ಓದುಗಳು ಇಂಥಲ್ಲಿ ನೆರವು ನೀಡುವುದಿಲ್ಲ. ಓದುಗರಿಗೆ ಗೊತ್ತಿರುವುದನ್ನಲ್ಲ, ತನ್ನ ಮನಸ್ಸು ಹೇಳುವುದನ್ನು ಬರೆದಿದ್ದೇನೆ, ಓದುಗರೂ ಕವಿಯ ಹಾಗೆ ಅದನ್ನು ಗ್ರಹಿಸಿ ಎಂದು ಸಮಕಾಲೀನ ಕವಿತೆ ಒತ್ತಾಯಿಸುವಂತೆ ತೋರುತ್ತದೆ. ಅಂದರೆ ಓದುಗರು ಕವಿಯ ಮನಃಪ್ರವೇಶ ಮಾಡುವುದು ಅಗತ್ಯವಾಗುತ್ತದೆ. ಓದುಗರು ತಮ್ಮ ಅಹಂಗಳನ್ನು ಬದಿಗಿಟ್ಟು ಮತ್ತೊಂದು ವ್ಯಕ್ತಿತ್ವವನ್ನು ಆವಾಹಿಸಿಕೊಳ್ಳುವಂತೆ ಇಂಥ ರಚನೆಗಳು ಆಹ್ವಾನಿಸುತ್ತವೆ. ವ್ಯಕ್ತಿಯ ಭಾವ ಸಂಚಾರಗಳನ್ನು ಆಧರಿಸಿದ ಕವಿತೆಗಳ ಸಾಮಾಜಿಕ ಮುಖ ಇದು ಅನ್ನಿಸುತ್ತದೆ.

ಭಾವನೆ, ಬಣ್ಣನೆ ಮತ್ತು ವಿಚಾರ ಇವು ಮೂರೂ ತಕ್ಕ ಭಾಷಾರೂಪದಲ್ಲಿ ಹೊಲಿಗೆ ಕಾಣದಂತೆ ಹೊಂದಿಕೊಂಡಿರುವುದು ಅತ್ಯುತ್ತಮ ಕವಿತೆಯ ಲಕ್ಷಣ; ಯಾವ ಕವಿತೆಯು ಲೋಕವನ್ನು ಹೀಗೂ ನೋಡಿ ಎಂದು ನೋಟದ ಹೊಸ ಕೋನವನ್ನು ಒದಗಿಸುತ್ತದೋ ಅದು ಒಳ್ಳೆಯ ಕವನ ಎಂದೆಲ್ಲ ಹೇಳಬಹುದು. ಆದರೆ ಸಮಕಾಲೀನ ಕವಿತೆಯನ್ನು ನೋಡಿದರೆ ಭಾವನೆ, ಬಣ್ಣನೆ, ವಿಚಾರ ಇವು ಪ್ರತ್ಯೇಕವಾಗಿಯೇ ಉಳಿಯುವುದೇ ಲಕ್ಷಣ ಎಂಬಂತೆ ಕಾಣುತ್ತದೆ. ಭಾಷೆಯು ಕ್ಯಾನ್ವಾಸು, ವಿಚಾರವು ಚಿತ್ರದ ಸೀಮೆ, ಬಣ್ಣನೆಯು ಭಾವವನ್ನು ಖಚಿತಗೊಳಿಸುವ ಸಹಾಯಕ ಸಂಗತಿ ಅನ್ನುವ ಸ್ಥೂಲ ನಿದರ್ಶನವನ್ನಿಟ್ಟುಕೊಂಡರೆ ಇವತ್ತು ನಮ್ಮ ಸುತ್ತಲೂ ಕಾಣುವ ಕಟ್ಟಡ, ನಮ್ಮ ಮನಸನ್ನು ಆವರಿಸಿಕೊಳ್ಳುವ ಜಾಹಿರಾತು, ಚಲನಚಿತ್ರ, ಜನಪ್ರಿಯ ಸಂಗೀತ ಹೀಗೆ ಎಲ್ಲೆಲ್ಲೂ ಭಾವನೆ, ಬಣ್ಣನೆ, ವಿಚಾರಗಳಲ್ಲಿ ಯಾವುದಾದರೊಂದು ಮಾತ್ರ ಮೇಲುಗೈಯಾಗಿರುವುದನ್ನು ಕಾಣುತಿದ್ದೇವೆ. ಸಮಕಾಲೀನ ಕವಿತೆ ಮಾತ್ರ ಈ ಛಿದ್ರದಿಂದ ಹೊರತಾಗಿರಬೇಕೆಂದರೆ ಹೇಗೆ ಸಾಧ್ಯ?

ಬಾಗಿಲ ಹಿಂದಿನ ಕಸದ ತುಣುಕು/ಒರಳ ಮೇಲಿಂದ ತೆಗೆದ ರುಬ್ಬುಗುಂಡು/ಮುಸ್ಸಂಜೆ ಹೊತ್ತಿನಲಿ ಹೊಸ್ತಿಲ ಮೇಲೆ/ಆಪಾದಮಸ್ತಕ ಗೋಳಿಡುತ ಕೂತ ಮಗು

ಪರುಷವಾಗುವ/ಬೆಳುದಿಂಗಳ ಪರ್ವತ ಬಂಡೆ

‘ಬಣ್ಣಗಳು’ ಕವಿತೆಯ ಇಂಥ ಚಿತ್ರಗಳು ವಾಸುದೇವ್ ಅವರ ಚಿತ್ರವನ್ನು ನೋಡಿ ಮಾತಿನಲ್ಲಿ ಮೂಡಿಕೊಂಡ ಚಿತ್ರಗಳು. ಕವಿತೆಗೆ ಕಾರಣವಾದ ಚಿತ್ರಗಳನ್ನು ಓದುಗ ನೋಡಿರದಿದ್ದರೂ ನುಡಿ ಚಿತ್ರಗಳೇ ಮನಸಿನಲ್ಲಿ ಊರಿಕೊಳ್ಳುವಷ್ಟು ಸಶಕ್ತವಾಗಿವೆ. ಆದರೆ ಈ ಎಲ್ಲ ಚಿತ್ರಗಳು ಮೂಡಿಸಿದ ಭಾವವನ್ನು ಮಾತ್ರ ಓದುಗರು ಕವಿ ಆಯ್ದಿರುವ ಪದಗಳು, ಜೋಡಣೆ ಇವುಗಳ ಮೂಲಕ ಊಹಿಸಿಕೊಳ್ಳಬೇಕು. ಹಾಗೆಯೇ ಇಡೀ ಕವಿತೆ ಒಳಗೊಂಡಿರುವ ವಿಚಾರವನ್ನು ಕೂಡ ಕಲ್ಪಿಸಿಕೊಳ್ಳಬೇಕು.

ಅನಾಥ ಅಗ್ನಿಪಥ ಅನ್ನುವಂಥ ರೂಪಕಗಳು ಚೆಂದವಾಗಿವೆ ಅನ್ನಿಸಿದರೂ ಅನಾಥ ಮತ್ತು ಅಗ್ನಿಪಥವನ್ನು ಹೇಗೆ ಹೊಂದಿಸಿಕೊಳ್ಳುವುದು ಅನ್ನುವ ಪ್ರಶ್ನೆಗಿಂತ ತರ್ಕ, ವಿಚಾರಗಳಿಗೆ ಅತೀತವಾದ ಇಂಥ ಸಂಬಂಧವನ್ನು ಕಲ್ಪಿಸಿಕೊಳ್ಳುವುದು ಸಮಕಾಲೀನ ಮನಸಿನ ಲಕ್ಷಣವೇ ಅನ್ನುವ ಸಂಗತಿ ನನ್ನನ್ನು ಕಾಡುತ್ತಿದೆ.

‘ಅಮೂರ್ತ’ ಕವಿತೆ ‘ತಾಯ ತವಕ’ವನ್ನು ಉನ್ಮತ್ತ ಮನಸ್ಸು ಮತ್ತು ಅನಾಥ ಭಾವಗಳ ಜೊತೆಯಾಗಿ ಕಂಡಿರುವುದು ಇನ್ನೊಂದೇ ಸಂಗತಿಯನ್ನು ಹೇಳುತ್ತದೆ. ಕಾಲ, ಚರಿತ್ರೆಗಳನ್ನು ಮೀರಿದ ತಾಯ್ತನದಂಥ ವಸ್ತುವನ್ನು ಕುರಿತು ಬರೆಯುವಾಗ ಭಾವ, ಬಣ್ಣನೆ, ವಿಚಾರಗಳ ಐಕ್ಯ ಸುಲಭವಾಗುತ್ತದೋ ಏನೋ. ಉಳಿದಂತೆ ‘ಕತ್ತಲಲ್ಲಿ ಹತ್ತದ ದೀಪ/ದೂರದಲ್ಲಿ ಉರಿವ ಕೊಳ್ಳಿಯ ಅಸ್ಪಷ್ಟ ಜ್ವಾಲೆ’ ಎಂಬಂಥ ಖಚಿತ ಬಣ್ಣನೆಗಳ ಮೂಲಕ ಹಣ್ಣಾಗದ ತಾಯ್ತನದ ನೋವನ್ನು ಹೇಳುತ್ತದೆ. ಇದರ ಮುನ್ನ ಕಾಣಿಸಿಕೊಳ್ಳುವ ಕವಿತೆಗಳೊಡನೆ ನೋಡಿದರೆ ಅನಾಥ ಮತ್ತು ಉನ್ಮತ್ತ ಮನ ಎಂಬ ಎರಡು ವಿರುದ್ಧ ಭಾವಸ್ಥಿತಿಗಳ ಮೂಲಕ ಕವಿ ತಾಯಿತನವನ್ನು ಬೇರೆ ಬೇರೆ ಕೋನಗಳಿಂದ ನೋಡುತ್ತಿದ್ದಾರೇನೋ ಅನಿಸುತ್ತದೆ. ಸಮಕಾಲೀನ ಕವಿಗಳು ತಮ್ಮ ಎಲ್ಲ ಕವಿತೆಗಳ ಮೂಲಕ ಸೃಷ್ಟಿಸಲು ಬಯಸುವ ವಿನ್ಯಾಸವನ್ನು ಓದುಗರೇ ಪೂರ್ಣಗೊಳಿಸಿಕೊಳ್ಳಬೇಕೆಂದು ಬಯಸುವಂತೆ ಕಾಣುತ್ತದೆ. ಕವಿ ಸಾಧ್ಯವಾದಷ್ಟೂ ಕಡಮೆ ನೆರವು ನೀಡುತ್ತ ಕವನ ಸೃಷ್ಟಿಯ ಹೆಚ್ಚಿನ ಜವಾಬ್ದಾರಿಯನ್ನು ಓದುಗರ ಪಾಲಿಗೇ ಬಿಡುವಂತೆ ಬರೆಯುವುದು ಸಮಕಾಲೀನ ಕವಿತೆಯ ಲಕ್ಷಣವೂ ಇರಬಹುದೇ ಅನಿಸುತ್ತದೆ.

‘ಸ್ವರವಾದ ಹಂಬಲ’ ಎಂಬ ಕವಿತೆ ಮಲ್ಲಿಕಾರ್ಜುನ ಮನ್ಸೂರರ ಹಾಡು ಕೇಳಿದ್ದರಿಂದ ರೂಪುತಳೆದದ್ದು. ‘ಮಲೆತ ಗಾಳಿಗೆ ಸೊಕ್ಕು/ದಡಕ್ಕೆ ಅಪ್ಪಳಿಸುವ ಅಲೆಗಳಿಗೆ ಸೊಕ್ಕು/ಅಂಕೆಗೂ ಸಿಗದ ಮುಂಗುಳಿಗೂ ಸೊಕ್ಕು/ದಣಿಯಲಾರದ ಎದೆ ಬಡಿತಕ್ಕೂ ಸೊಕ್ಕು/ಕಾಣುತ್ತದೆ ಆ ದೂರ ತೀರ/ಆವೆ ಮಣ್ಣಿನ ನೂರು ಮನೆಗಳಲ್ಲು/ಒಟ್ಟಾಗಿ ಹೊತ್ತಿದ ಕನಸಿನ ಗುಂಗು’ ಎಂಬಂಥ ಚೆಲುವಾದ ಸಾಲುಗಳು ಸಂಗೀತದಿಂದ ಪ್ರೇರಿತವಾಗಿ ಆಳ ಮನಸಿನಿಂದೆದ್ದು ಬರುವ ಚಿತ್ರಗಳನ್ನೇ ಕವಿತೆಯಾಗಿಸಿದೆ. ಇದಕ್ಕಿಂತ ಬೇರೆಯಾಗಿ ‘ಕೊಲಾಜ್’ನಂಥ ಕವಿತೆ ಕಾಣುತ್ತದೆ. ಇಲ್ಲೂ ಬೇರೆ ಬೇರೆಯಾದ ಚಿತ್ರಗಳನ್ನು ಒಟ್ಟುಗೂಡಿಸಿ ಚರಿತ್ರೆಯ ಕಲ್ಪನೆಯನ್ನು ಮೂಡಿಸಿಕೊಳ್ಳುವುದು ಓದುಗ ಮನಸಿನದೇ ಜವಾಬ್ದಾರಿ.

ಕವಿತೆಗೆ ಮತ್ತೊಂದು ಕವಿತೆಯೇ ತಕ್ಕ ಪ್ರತಿಕ್ರಿಯೆ ಅನ್ನುವುದಕ್ಕೆ ‘ಬೊಂಬೆ ಮಿಠಾಯಿವಾಲ’ ಒಂದು ಒಳ್ಳೆಯ ಉದಾಹರಣೆ. ತನ್ನ ಬಾಲ್ಯ ಮತ್ತು ಮಗಳ ಬಾಲ್ಯ ಎಷ್ಟು ಬೇರೆ ಬೇರೆ ಅನ್ನುವುದನ್ನು ಮನಸಿಗೆ ತಂದುಕೊಳ್ಳುವ ತಾಯ ನುಡಿಗಳು ಕನ್ನಡ ಕವಿತೆಯನ್ನು ಬಲ್ಲ ಓದುಗರ ಮನಸಿನಲ್ಲಿ ಕಂಬಾರರ ‘ಜಾನಪದ ಕಥೆಗಳ ರಾಕ್ಷಸ’ದೊಂದಿಗೆ ಮಾತುಕತೆಯಾಡುವಂತೆ ತೋರುತ್ತದೆ. ಕಂಬಾರರ ಕವಿತೆಯಲ್ಲಿ ಜಾನಪದ ಕಥೆಯಲ್ಲಿ ಮಾತ್ರ ಜೀವಂತವಾಗಿರುವ ರಾಕ್ಷಸನ ಸ್ಥಾನಕ್ಕೆ ಮಕ್ಕಳ ಮನಸಿನ ಮೇಲೆ ಅತ್ಯಾಚಾರವೆಸಗುವ, ರಾಕ್ಷಸನನ್ನು ಸೋಲಿಸುವ ರೋಬೋಗಳು ಬಂದರೆ ಇಲ್ಲಿ ಬೊಂಬೆ ಮಿಠಾಯಿಯನ್ನು ತಿರಸ್ಕರಿಸಿ ಐಸ್ ಕ್ರೀಮು ಚೀಪುವ ಮಕ್ಕಳು; ಎರಡೂ ಕವಿತೆಗಳು ಹಿಂದಿನ ಮತ್ತು ಇಂದಿನ ಕಾಲಗತಿಯ ವೈಪರೀತ್ಯಗಳನ್ನೇ ತಮ್ಮದೇ ರೀತಿಯಲ್ಲಿ ಹೇಳುತ್ತವೆ.

‘ನಿದ್ದೆ’, ‘ಹೆಪ್ಪಾಗುತ್ತಿವೆ’ ಮತ್ತು ‘ಆ ಕನಸು’ ಕವಿತೆಗಳು ಭಾಷೆಗೆ ಬರಲು ಒಲ್ಲದ ಎಚ್ಚರದ ಮನಸಿನಾಚೆಗೆ ಇರುವ ಭಾವ ಸಂಕೀರ್ಣತೆಗಳನ್ನು ಮಾತಿನಲ್ಲಿ ಮೂಡಿಸುವ ಯತ್ನವಾಗಿ ಕಾಣುತ್ತವೆ. ಬೇಂದ್ರೆಯಂಥ ಕವಿಗಳು ಇಂಥ ಪ್ರಯತ್ನ ಮಾಡಿದ್ದಕ್ಕೂ ಸಮಕಾಲೀನ ಕವಿಗಳ ಇಂಥ ಪ್ರಯತ್ನಕ್ಕೂ ಇರುವ ವ್ಯತ್ಯಾಸಗಳನ್ನು ಗಮನಿಸಿದರೆ ಸಮಕಾಲೀನ ಕವಿತೆಯ ಕೆಲವು ಲಕ್ಷಣಗಳು ಸ್ಪಷ್ಟವಾದಾವು. ‘ಬಾಳೆಯ ತೋಟದ…’ ಕವಿತೆಯಲ್ಲಿ ಕಾಣುವ ‘ಬೇವಿನ ಮರದಲ್ಲಿ ಕೂಗೇ ಕೂಗುವ ಕಾಗೆ/ಕೆಳಗೆ ಗೂಡಂಗಡಿಯಲ್ಲಿ ಕುದ್ದು ಕುದ್ದು ಘಾಟು ವಾಸನೆ ಹರಡುವ ಟೀ’ ಇಂಥ ಚಿತ್ರಗಳು ಬೇಂದ್ರೆ ಕವಿತೆಯನ್ನು ಮನಸಿಗೆ ತಂದರೂ ಪರಿಣಾಮ ಬೇರೆ. ಸಮಕಾಲೀನ ಕವಿಗಳು ಕನ್ನಡದ ಹಿರಿಯ ಕವಿಗಳೊಡನೆ ನಡೆಸುತ್ತಿರುವ ಸಂವಾದವನ್ನು ಗಮನಿಸದೆ ಸಮಕಾಲೀನ ಕವಿತೆಯ ಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ.

ಈ ಸಂಕಲನದ ಎರಡನೆಯ ಭಾಗವನ್ನು ಚಂದ್ರಿಕಾ ಅವರು ‘ಅಲೌಕಿಕ’ ಎಂದು ಕರೆದಿದ್ದಾರೆ. ಹಾಗೆ ಪ್ರತ್ಯೇಕವಾಗಿ ನೋಡುವ ಅಗತ್ಯವಿರಲಿಲ್ಲ ಅನ್ನುವುದು ನನ್ನ ಭಾವನೆ. ಇಲ್ಲಿನ ಹನ್ನೆರಡು ಕವಿತೆಗಳು ತಾತ್ವಿಕತೆಗೆ ಹೆಚ್ಚು ಒಲಿದಂತೆ ಕಾಣುವುದು ಅವು ‘ಅಲೌಕಿಕ’ ಎಂಬ ಹಣೆಪಟ್ಟಿ ಹೊಂದಿರುವ ಕಾರಣದಿಂದಲೇ ಅನ್ನುವ ಪ್ರಶ್ನೆ ಕೇಳಿಕೊಂಡಿದ್ದೇನೆ. ಲೌಕಿಕ/ ಅಲೌಕಿಕ ಎಂಬ ವಿಭಜನೆಯೇ ಕೃತಕ. ಲೋಕ ಇದ್ದರೆ ಮಾತ್ರ ಭಾವ, ಬಣ್ಣನೆ, ವಿಚಾರ, ಭಾಷೆ ಎಲ್ಲವೂ. ಲೋಕದಲ್ಲಿದ್ದುಕೊಂಡೇ ಲೋಕದಲ್ಲದ್ದನ್ನು ಕಾಣುವುದು, ಅನುಭವಿಸುವುದು, ಬಣ್ಣಿಸುವುದು ಹೇಗೆ? ಹಾಗೆ ನೋಡಿದರೆ ಚಂದ್ರಿಕಾ ಅವರ ಅಲೌಕಿಕ ಕವಿತೆಗಳು ಕೂಡ ಲೋಕಕ್ಕೆ ಲೋಕದ ಮನಸ್ಸು ತೋರುತ್ತಿರುವ ಪ್ರತಿಕ್ರಿಯೆ, ಲೋಕದ ಮಿತಿಗಳನ್ನು ಮೀರುವ ಹಂಬಲ, ಆಗದೆಂಬ ನೋವು, ಚಡಪಡಿಕೆಗಳೇ ಆಗಿವೆ. ನಿಜವಾಗಿ ಕವಿತೆಯ ಉದ್ದೇಶ ಲೌಕಿಕ-ಅಲೌಕಿಕ, ಖಾಸಗಿ-ಸಾಮಾಜಿ ಇಂಥ ಸರಳ, ಕೃತಕ ದ್ವಂದ್ವಗಳನ್ನು ಮೀರುವುದೇ ಆಗಿರುತ್ತದೆ. ಇಲ್ಲಿನ ಹನ್ನೆರಡು ಕವಿತೆಗಳಲ್ಲಿ ಮನಸಿನಲ್ಲಿ ಮೂಡುವ ಪ್ರಶ್ನೆಗಳ ಮೂಲಕ ವಿಚಾರಕ್ಕೆ, ತಾತ್ವಿಕತೆಗೆ ಹೆಚ್ಚಿನ ಅವಧಾರಣೆ ನೀಡುವ ಅಪೇಕ್ಷೆ ಕಾಣುತ್ತದೆ.

ಮನೆಯ ಶೋ ಕೇಸ್ನಲ್ಲಿರುವ ಹಲವು ವಸ್ತುಗಳಲ್ಲಿ ಯಾವುದೋ ಒಂದು ಗಮನ ಸೆಳೆದು ಹಿಡಿದಿಟ್ಟುಕೊಳ್ಳುವ ಹಾಗೆ, ರಾತ್ರಿಯ ಕತ್ತಲಲ್ಲಿ ಯಾವುದೋ ಒಂದು ಚುಕ್ಕೆ ಮನಸ್ಸನ್ನು ಸೆಳೆದಿಟ್ಟುಕೊಳ್ಳುವ ಹಾಗೆ, ಬಡಿಸಿದ ಹಲವು ಪದಾರ್ಥಗಳಲ್ಲಿ ಯಾವುದೋ ಒಂದು ರುಚಿ ಅನ್ನಿಸುವ ಹಾಗೆ ಸಮಕಾಲೀನ ಕವಿತೆಯಲ್ಲಿ ಮನಸು ಸೆಳೆಯುವ ರೂಪಕ, ತಟ್ಟನೆ ಕಾಡುವ ಪ್ರಶ್ನೆ, ಬೇರೆಯ ರುಚಿಯ ವಾಕ್ಯ ರಚನೆ ಇವು ಓದುಗರ ಗಮನ ಸೆಳೆಯುವುದು ನಿಜ. ಹಾಗೆ ಗಮನ ಸೆಳೆಯುವ ವಸ್ತು ಪದಾರ್ಥಗಳ ಜೊತೆಗೇ ಕವಿತೆಯಲ್ಲಿ ಗಮನ ಸೆಳೆಯದ ಸಂಗತಿಗಳೂ ಯಾಕೆ ಹಾಗಿವೆ ಅನ್ನುವುದನ್ನು ಗಮನಿಸಿದರೆ ಮಾತ್ರ ಒಟ್ಟಾರೆ ಭಾವ-ಭಾಷಾ-ವಿನ್ಯಾಸದ ಅರಿವು ನಮಗೆ ಬಂದೀತು.

ಚಂದ್ರಿಕಾ ಅವರ ಈ ಸಂಕಲನದಲ್ಲಿ ಪ್ರಖರವಾದ ಚಿತ್ರಶಕ್ತಿಗೆ ಹೇರಳ ಉದಾಹರಣೆಗಳು ದೊರೆಯುತ್ತವೆ; ಭಾಷೆಗೆ ಸುಲಭವಾಗಿ ಬರಲೊಲ್ಲದ ಭಾವಗಳನ್ನು ಮಾತಿನಲ್ಲಿ ಹಿಡಿದಿಡುವ ಪ್ರಯತ್ನವಿದೆ; ಉನ್ಮತ್ತತೆ, ಅನಾಥ ಭಾವ, ಹಂಬಲ, ನೋವು, ವಿಷಾದ, ಸಂತೋಷ ಇಂಥ ಸ್ವಂತದ ಸ್ವಭಾವಗಳನ್ನು ಕವಿತೆಗೊಳಿಸುತ್ತ ಓದುಗರೂ ತಮ್ಮ ಖಾಸಗಿ ಲೋಕವನ್ನು ತಡಕಿಕೊಳ್ಳುವಂತೆ ಮಾಡುವ ಸಾಧ್ಯತೆ ಇದೆ; ಅವರ ಈ ಸಂಕಲನ ಕನ್ನಡದ ಸಮಕಾಲೀನ ಕವಿತೆಯ ಲಕ್ಷಣಗಳನ್ನು ತಿಳಿಯಲು ಬಯಸುವವರಿಗೆ ಉತ್ತಮ ಸಾಮಗ್ರಿಯನ್ನು ಒದಗಿಸುತ್ತದೆ. ಇಷ್ಟು ಸಮರ್ಥರಾದ ಚಂದ್ರಿಕಾ ತಮ್ಮ ಭಾವ, ಬಣ್ಣನೆ, ವಿಚಾರಗಳಿಗೆ ತಕ್ಕ ವಿನ್ಯಾಸವನ್ನು ರೂಪಿಸಿಕೊಳ್ಳುತ್ತಾರೆಂಬ ವಿಶ್ವಾಸವಿದೆ.

 

‍ಲೇಖಕರು G

10 December, 2012

2 Comments

  1. chalam

    innu chandrikaara kavithe oduva avashykathe kanuvudilla.astu chennagide lekana.adroo kavana odite anubavisabeku alva..?

  2. sunil rao

    beautifulll…………..
    i always admire OLN

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading