ಕುಸುಮಬಾಲೆ ಹುಟ್ಟುವ ಮುನ್ನ

ನನ್ನ ಕಥೆಗಳಲ್ಲಿ ನಾನೆಲ್ಲಿರಬಹುದು? ಎರಡು ಕಥೆಗಳು ನನ್ನ ಮನಸ್ಸಿಗೆ ಬರುತ್ತವೆ. ಒಂದು ಕ್ರಿಸ್ತಪೂರ್ವದಲ್ಲಿದ್ದ ಆದಿನಾಥನೆಂಬ ಜೈನ ದೊರೆಯದು. ಆತ ಒಂದು ಬೆಳಗ್ಗೆ ಎದ್ದು ನೋಡುತ್ತಾನೆ-ಅವನ ತಲೆಯ ಒಂದು ಕೂದಲು ನೆರೆತಿದೆ. ಅವನಿಗೆ ತಕ್ಷಣವೇ ಬದುಕಿನ ಕ್ಷಣಿಕತೆಯ- ಹುಟ್ಟು, ಸಾವು ಎಲ್ಲದರ ದರ್ಶನವಾಯಿತು. ಅವನು ರಾಜ್ಯ ಕೋಶ ಎಲ್ಲವನ್ನೂ ಬಿಟ್ಟು ತಪಸ್ಸು ಮಾಡಲು ಕಾಡಿಗೆ ಹೊರಟುಹೋದ.

ಇನ್ನೊಂದು ಸುಮಾರು ನನ್ನ ಥರದ ಮನುಷ್ಯನಿಗೆ ಸಂಬಂಧಿಸಿದ್ದು. ಅವನು ಒಂದು ದಿನ ನದಿಯೊಂದರಲ್ಲಿ ನೀರು ಕುಡಿಯುತ್ತಿದ್ದಾಗ ಅವನ ಬೊಗಸೆಯಲ್ಲಿ ಒಂದು ಉದ್ದನೆಯ ಕೂದಲು ಕಂಡಿತು. ತಕ್ಷಣ ಅವನ ಕಣ್ಮುಂದೆ ಒಬ್ಬ ಸುಂದರ ಹೆಣ್ಣಿನ ರೂಪ ಮೂಡಿತು. ‘ಈ ಕೂದಲೇ ಇಷ್ಟೊಂದು ಮನೋಹರವಾಗಿರುವಾಗ ಆ ಕೂದಲನ್ನು ಪಡೆದ ಹೆಣ್ಣು ಇನ್ನೆಷ್ಟು ಚೆಲುವೆಯಾಗಿರಬೇಕು’ ಎಂದು ಆತ ಯೋಚಿಸಿದ. ಅವನು ಆ ಹೆಣ್ಣನ್ನು ಹುಡುಕಿ ಅವಳ ಒಲವನ್ನು ಗಳಿಸಲು ಹೆಣಗತೊಡಗಿದ.

ಮೋಹ ಮತ್ತು ನಶ್ವರತೆ ನಡುವೆ ಸೃಷ್ಟಿ ಉಯ್ಯಾಲೆಯಾಡುತ್ತಿದೆಯೆ? ಕುಸುಮಬಾಲೆ ಬರೆಯಲು ನನ್ನನ್ನು ಪ್ರೇರೇಪಿಸಿದ್ದು ಏನು? ಅಂದಾಜು ಈ ಮೂರು: ಮೊದಲನೆಯದು, ನಾನಿನ್ನೂ ಹುಡುಗನಾಗಿದ್ದಾಗ ಸಾವಿನ ಕಡೆಗೆ ನಡೆದುಹೋಗುತ್ತಿದ್ದವರನ್ನು ಉಳಿಸಲು ಆಚರಿಸುತ್ತಿದ್ದ ನೇಮವೊಂದರ ಬಗ್ಗೆ ಕೇಳಿದ್ದೆ. ದೇಹಕ್ಕೆ ಗರ ಬಡಿದಿದೆ ಎಂಬೊಂದು ನಂಬಿಕೆ. ಈ ಗರವನ್ನು ಓಡಿಸಲು ಆ ವ್ಯಕ್ತಿಗೆ ಗೊತ್ತಿಲ್ಲದಂತೆ ಬಗೆಬಗೆಯ ತಿಂಡಿ ತಿನಿಸುಗಳನ್ನು ಸಿದ್ಧಪಡಿಸಿ ಗರಬಡಿದಾತನನ್ನು ಒಂಟಿಯಾಗಿ ಆ ಅನಿರೀಕ್ಷಿತ ಔತಣದ ಮುಂದೆ ಕುಳ್ಳಿರಿಸಿ ಮರೆಯಾಗುತ್ತಾರೆ. ಆ ತಿಂಡಿತಿನಿಸುಗಳ ರಾಶಿಯ ಮಂದೆ ಆ ಗರಬಡಿದಾತ ಮುಖಾಮುಖಿಯಾದಾಗ ಆ ಜೀವಕ್ಕೆ ಬೆರಗು ತುಂಬಿ ತೃಪ್ತಿಯಾಗಿ ಆ ಗರ ಆ ದೇಹವನ್ನು ಬಿಟ್ಟು ಓಡಿಹೋಗುತ್ತದೆ ಎಂಬ ಈ ನೇಮದ ಆಚರಣೆ ನನ್ನನ್ನು ಹಿಂಬಾಲಿಸುತ್ತಿತ್ತು. ಇದು ನನಗೆ ಬಡತನವನ್ನು ಅರ್ಥಮಾಡಿಸಿತು. ಇದು ನಮ್ಮ ಜನ ತಮ್ಮ ಅರಿವಿನ ಮೂಲಕ ರೂಢಿಸಿಕೊಂಡ ಒಂದು ರೀತಿಯ ಮನೋಚಿಕಿತ್ಸೆಯಾಗಿ ಕಂಡಿತು. ನಾನೆಂದೂ ಈ ಆಚರಣೆಯನ್ನು ಕಣ್ಣಾರೆ ನೋಡಿಲ್ಲ. ಆದರೆ ಕುಸುಮಬಾಲೆಯಲ್ಲ್ಲಿ ಈ ಆಚರಣೆಯನ್ನು ವಿವರಿಸುವ ಪುಟಗಳು ನನ್ನ ಅತ್ಯುತ್ತಮ ಬರವಣಿಗೆ ಎಂದು ನನಗನ್ನಿಸಿದೆ.

ಇನ್ನೊಂದು ಕೂಡ ಒಂದು ಜಾನಪದ ಕಥೆಯೇ- ಜೋತಮ್ಮಗಳನ್ನು ಕುರಿತದ್ದು. ರಾತ್ರಿ ದೀಪಗಳನ್ನು ಆರಿಸಿದ ನಂತರ ಈ ದೀಪಗಳ ಆತ್ಮಗಳು ಹಳ್ಳಿಯ ಒಂದು ಸ್ಥಳದಲ್ಲಿ, ಮರವೊಂದರ ಕೆಳಗಿರುವ ಮಂಟಪದಲ್ಲಿ ಸೇರಿ ತಂತಮ್ಮ ಮನೆಗಳಲ್ಲಿ ಏನೇನು ಆಗುತ್ತಿದೆ ಎಂಬುದರ ಬಗ್ಗೆ ಹಂಚಿಕೊಳ್ಳುತ್ತವೆ ಎಂಬುದು ಈ ಕಥೆ. ಜಾನಪದ ಕಥೆಯಲ್ಲಿ ಇದನ್ನು ತಮಾಷೆಗೆಂದು ಬಳಸಲಾಗಿದೆ. ಆದರೆ ನಿಜವನ್ನು ನುಡಿಸುವ ಆತ್ಮವಾಗಿ ನನಗೆ ಇದು ಕಾಣಿಸಿತು.

ಕೆಲವರ್ಷಗಳ ಹಿಂದೆ ನನಗೆ ಗೊತ್ತಿದ್ದ ದಲಿತ ಸಂಘಟನೆಯಲ್ಲಿದ್ದ ಸ್ನೇಹಿತನೊಬ್ಬನ ಕೊಲೆಯಾಯಿತು. ಆತ ಕೊಲೆಯಾದ ಸ್ಥಳಕ್ಕೆ ಹೋಗಿ ನೋಡಿದರೆ ಆ ಸ್ಥಳದಲ್ಲಿದ್ದ ಗೋಡೆಗಳಿಗೆ ಸುಣ್ಣ ಬಳಿಯಲಾಗಿತ್ತು. ಅಲ್ಲಿದ್ದ ಒಬ್ಬ ಮುದುಕಿ ‘ನೀವು ಎರಡು ದಿನ ಮುಂಚೆ ಬಂದಿದ್ದರೆ ರಕ್ತದ ಕಲೆಗಳನ್ನು ನೋಡಬಹುದಿತು’ ಎಂದಳು. ಆ ಕ್ಷಣ ನನಗೆ ‘ಗೋಡೆಗೆ ಸುಣ್ಣ ಬಳಿದ ಮಾತ್ರಕ್ಕೆ ರಕ್ತದ ಕಲೆಗಳು ಉಳಿಯುವುದಿಲ್ಲವೇ?’ ಎಂದು ಅನ್ನಿಸಿ ಅದು ಒಳಗೇ ಬೆಳೆಯತೊಡಗಿತು.

ಒಂದು ದಿನ, ನನ್ನೊಳಗೆ ಈ ಮೂರೂ ಎಳೆಗಳೂ ಐಕ್ಯಗೊಂಡು ಕುಸುಮಬಾಲೆ ಮೂಡತೊಡಗಿತು.

‍ಲೇಖಕರು G

December 11, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. chanukya

    ಮೂಲತಃ ನಾನು ಮೈಸೂರಿನವನೇ ಆದರೂ ಕುಸುಮಬಾಲೆ ಸಾಹಿತ್ಯ ಭಾಷೆ ಅರ್ಥವಾಗಲು ತುಂಬ ಸರ್ಕಸ್ ಹೊಡೆಯಬೇಕಾಯಿತು. ಅದೊಂದು ಅದ್ಭುತ ಕಾದಂಬರಿ. ನಾನು ಓದಿದ ನಂತರ ನನ್ನೆಷ್ಟೋ ಗೆಳೆಯರೂ ಓದಿ ಖುಷಿಪಟ್ಟರು.

    ಪ್ರತಿಕ್ರಿಯೆ
  2. ಉಷಾಕಟ್ಟೆಮನೆ

    ಕುಸುಮಬಾಲೆಯನ್ನು ಒಬ್ಬರೇ ಕೂತು ಓದುವುದಕ್ಕಿಂತ ಗುಂಪಿನಲ್ಲಿ ಅನುಭವಿಸಬೇಕು. ಒಬ್ಬರು ಜೋರಾಗಿ ಓದುತ್ತಾ ಹೋಗಬೇಕು ಉಳಿದವರು ಆಲಿಸುತ್ತಾ ಧೇನಿಸಬೇಕು.

    ಪ್ರತಿಕ್ರಿಯೆ
  3. ಉಷಾಕಟ್ಟೆಮನೆ

    ಖಂಡಿತಾ ಭಾರತಿ…ಮೊನ್ನೆಯಂತೆ..?!.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: