। ಗೋರಖಪುರದ ಸಾವಿನ ದುರಂತದ ಬಗ್ಗೆ ರಾಜೇಂದ್ರ ಪ್ರಸಾದ್ ಬರೆದ ಲೇಖನ ‘ನನಗೀಗ ಸೂತಕ! ನೊಂದವರೆಲ್ಲ ನನ್ನ ಬಳಗ..’ ಲೇಖನಕ್ಕೆ ಪ್ರತಿಕ್ರಿಯೆ ।
ಲಲಿತಾ ಸಿದ್ಧಬಸವಯ್ಯ
ರಾಜೇಂದ್ರ , ಚಿಕ್ಕ ಹುಡುಗ ನೀವು, ಎಷ್ಟು ಆಳವಾಗಿ ಯೋಚಿಸಿ ಬರೆದಿರುವಿರಿ, ಲೇಖನ ಓದುತ್ತ ಭಾವೋದ್ವೇಗ ತಪ್ಪೊ ಸರಿಯೊ ಎಂಬ ತರ್ಕವೆಲ್ಲ ಹಾರಿಹೋಗಿ ಕಣ್ಣು ಮಂಜಾಗಿಬಿಟ್ಟವು. ಮೂರು ದಿನದಿಂದಲು ನಾನಿದೆ ಸಂಕಟ ಅನುಭವಿಸುತ್ತಿರುವೆ.
ಅಕ್ಕ ಅಂದುಬಿಟ್ಟಳು, ಬಂಜೆಯೆತ್ತ ಬಲ್ಲಳು ಹಡೆಯುವ ನೋವ ಎಂದು. ಆದರೆ ಬಂಜೆ ಹೆಣ್ಣುಮಗಳೊಳಗೆ ತಾಯಿ ಇದ್ದೆ ಇರುತ್ತಾಳೆ, ಅವಳಿಗೂ ಗೊತ್ತು ಹಡೆಯುವ ನೋವಿನೊಂದಿಗಿನ ನಲಿವು. ಹಾಗೇ ಅಪ್ಪನಾಗಲೇ ಬೇಕಿಲ್ಲ ಕಂಡವರ ಮಕ್ಕಳ ಸಾವು ಇದಿರಿದ್ದಾಗ ಕಣ್ಣೀರಾಗಲು.
ಲೇಖನದಲ್ಲಿ ಸರ್ಕಾರಿ ಜಡತ್ವದ ಬಗ್ಗೆ ಹೇಳಿರುವ ಮಾತುಗಳು ಕಹಿಯಾದ ವಾಸ್ತವ. ಶಿಕ್ಷೆಯಾಗಬೇಕಾದ್ದು ಈ ಸರ್ಕಾರಿ ಯಂತ್ರಕ್ಕೆ. ಆಕ್ಸಿಜನ್ ಸಿಲಿಂಡರ್ ಸರಬರಾಜುದಾರ 64 ಲಕ್ಷ ರೂ ಬಾಕಿ ಇದ್ದರೆ ಹೇಗೆ ಬದುಕಬೇಕು, ನಾನಿದನ್ನೆ ಯೋಚಿಸುತ್ತಿರುವೆ. ನಿಜ ಸಮಸ್ಯೆ ಅಲ್ಲಿದೆ. ಅದನ್ನು ಮುಚ್ಚಲು ಪ್ರಯತ್ನಿಸುತ್ತಿದ್ದಾರೆ.
ಆಕ್ಸಿಜನ್ ಸರಬರಾಜಾಗಿಲ್ಲ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿ ಕೈ ತೊಳೆದುಕೊಳ್ಳಬಹುದು, ಆದರೆ ಹಾಗೆ ಅರವತ್ತ್ನಾಲ್ಕು ಲಕ್ಷ ಬಾಕಿ ಉಳಿಯುವ ತನಕ ಆಸ್ಪತ್ರೆಯ ಮುಖ್ಯಸ್ಥನೇನು ಪಗಡೆ ಆಡುತ್ತಿದ್ದನೇ ? ಮಕ್ಕಳ ವಾರ್ಡಿನ ಡಾಕ್ಟರ್ ಗಳಿಗೆ ಮಿದುಳುಜ್ವರದ ಶಿಶುಗಳಿಗೆ ಬೇಕಾದ ಮೊದಲ ಪೂರೈಕೆ ಆಮ್ಲಜನಕ ಎಂದು ತಿಳಿದಿದ್ದೂ ಕೊನೆಗಳಿಗೆಯವರೆಗೆ ಸುಮ್ಮನಿದ್ದರೆ ? ಗೋರಖಪುರ ಮಿದುಳುಜ್ವರದ ಆವಾಸ ಆಗಿರುವುದು ಅಲ್ಲಿನ ಆರೋಗ್ಯ ಇಲಾಖೆಯ ಗಮನಕ್ಕೆ ಹತ್ತು ವರ್ಷಗಳಿಂದ ಬಂದಿಲ್ಲವೆ? ಸರ್ಕಾರದ ಆರೋಗ್ಯ ಇಲಾಖೆಯೇನು ಮಣ್ಣು ತಿನ್ನುತ್ತಿದೆಯೆ?
ಈ ತಳದ ಪ್ರಶ್ನೆಗಳಿಗೆ ಉತ್ತರ ಹುಡುಕದ ಹೊರತು ಈ ಸಮಸ್ಯೆ ಪರಿಹಾರ ಆಗದು. ಇಂದು ಯುಪಿ, ನಾಳೆ ಮಗದೊಂದು ರಾಜ್ಯ. ಎಲ್ಲೂ ಇರುವುದು ಇಂತಹುದೇ ಜಡವಾದ ಸರ್ಕಾರಿಯಂತ್ರ.
ಎಚ್ಚೆತ್ತುಕೊಳ್ಳಬೇಕಾದ್ದು ನಾವು ನೀವು ಎಂಬ ಜನ. ಸ್ವಾತಂತ್ರ್ಯ ದ ಅರ್ಥ ಅದೇ ಅಲ್ಲವೇ ?






0 Comments