ತಪ್ಪಿದ ಚುಕ್ಕಿಯೊಳಗೆ..

ಪ್ರೇಮಾ ಟಿ ಎಮ್ ಆರ್

ಕನಕಾಂಬರ ಮುಡಿಯಬೇಕು
ತುಂಬು ಬಸುರಿನ ಆಸೆ
ಮನಮುಡಿಯಾಸೆ ಮಲ್ಲಿಗೆ?
ಹೊತ್ತಲ್ಲದ ಹೊತ್ತು
ಎಲ್ಲಿ ಸಿಕ್ಕೀತು?

ಪೇಟೆಯ ತುಂಬ
ಗಸ್ತು ತಿರುಗಿದ್ದೇ ಬಂತು
ಬೋಕುಳ ಕುಂದಿ ಜಾಜಿ
ಸೇವಂತಿ ಇರುವಂತಿಗಳ
ನಡುವೆಯೂ ಕಣ್ಗಳಿಗೆ ಅದಾವ
ಬೇಟೆಯ ನಿರೀಕ್ಷೆ?
ಬಿರಿದ ಗುಲಾಬಿಯೊಳಗೂ
ಮಲ್ಲಿಗೆಯ ಘಮ್ಮಿಗೆ
ಮೂಗರಳಿದ್ದೇಕೋ
ಭಾವ ಬೆಚ್ಚಿಬಿದ್ದ ಬಸವಳಿಕೆ

ಬಿಗಿದ ಜೋಡುಜಡೆಗೆ ಹೂವ
ಸೇತುವೆಕಟ್ಟುತ್ತಿದ್ದ ಅಮ್ಮ
ಮುಷ್ಠಿ ಸಡಿಲಾಗಬಾರದು ಅಮ್ಮು
ಆಗಾಗ ಕಿವಿಯಲುಸುರುವ ಹೊತ್ತು

ಯಾಕೋ ನೆನಪಿನ
ಆಳದಲ್ಲಿ ಹುಗಿದಿಟ್ಟ ಅವನು
ಘೋರಿಯಿಂದ
ಮೇಲೆದ್ದು ಬಂದಂತೆ
ಕಣ್ಬಡಿಯುತ್ತಿದ್ದ
ನಿನ್ನ ಹೆಸರು ಮಲ್ಲಿಗೆಯಾ?
ಕಣ್ಣಲ್ಲಿ ಸಿಂಗಾರಗೊನೆಯಂಥ ಮಿಂಚು ಕರಗಬಾರದೆಂಬ
ಕರಾರನ್ನೂ ಮೀರಿ ಕರಗಿದ್ದು
ಕಣ್ಣೆತ್ತದೆಯೇ ಅಲ್ಲವೆಂಬಂತೆ
ಅಡ್ಡಡ್ಡ ತಲೆಹಾಕಿದರೂ
ಸಂಪಿಗೆಯೆಂಬ ಹೆಸರಿಟ್ಟ ಸೋದರತ್ತೆಯ
ಶಪಿಸಬೇಕೆಂಬಷ್ಟು ಸಿಟ್ಟು
ತುಂಟ ಕಣ್ಣುಗಳು
ಕೆನ್ನೆಯಲ್ಲಿ ನೆಟ್ಟರೆ
ಮಲ್ಲಿಗೆಗೆ ಗುಲಾಬಿಯ
ಬಳಿದ ನಾಚಿಕೆಯನ್ನ
ಅಟ್ಟಾಡಿಸಿ ಬಡಿಯಬೇಕು
ಅನ್ನಿಸಿತ್ತು

ಎದೆಯಲ್ಲಿ ಗೂಡುಕಟ್ಟುತ್ತಿದ್ದಾನೆಂಬ
ಅರಿವಾಗುವ ಮೊದಲೇ
ನೆಲಸಿಯೂ ಆಗಿತ್ತು
ನೋಟ ನಗುವಿನಾಚೆ
ಬೆರಳುಗಳೂ
ಸದ್ದಿಲ್ಲದೆಯೇ ಬೆಸೆಯುವಾಗ
ಮಾವು ಹೊಂಗೆಗಳ
ಹಂಗಿರಲಿಲ್ಲ
ಬೇವಿನ ಒಗರು ಗಾಳಿಗೂ
ಮುಂಗುರುಳು
ತೂಗಿತ್ತು
ಚಿಗುರುಮೀಸೆಯ
ತುಂಬುತುಟಿ ಮತ್ತೆ ಮತ್ತೆ
ಹಸಿಯಾಗುತ್ತಿತ್ತು
ಎತ್ತಣದ ಗಾಳಿಗೋ
ತೂರಿಕೊಂಡು ಬಂದವನು
ಮತ್ತೆತ್ತಲೋ ಸಾಗುವಾಗ
ಅಂಗಳದ ರಂಗೋಲಿಯ
ಚುಕ್ಕೆ ತಪ್ಪಾಗಿ ಹೋಗಿತ್ತು

ಮತ್ತೆ ಬರುತ್ತೇನೆ ನನ್ನ ಮಲ್ಲಿಗೆ
ಮಲ್ಲಿಗೆ ಮಾಲೆ ಹಿಡಿದು
ಮಾತಕೊಟ್ಟವ ಮತ್ತೆ ಬರಲೇ ಇಲ್ಲ
ಹೆಜ್ಜೆ ಗುರುತುಗಳು
ಕನಸಿಗೆ ಬಂದು ಬಂದು
ಕರಗಿದವು
ಸಿಂಗಾರದಕ್ಕಿ ನೆಲಕ್ಕುದುರಿ
ಬೋಳುಬೋಳು ಎಳೆಗಳು
ಜೋತುಬಿದ್ದಿತು ಕಣ್ಣೊಳಗೆ

ಸೇಸೆ ಉದುರುತ್ತಿದೆ ನೆತ್ತಿಗೆ
ಮಾಂಗಲ್ಯ ಜೋತುಬೀಳುವ
ಚೂರು ಮುಂಚೆ
ಧಾರೆ ನೀರು ಹನಿಯುವ
ಕಡೇಕ್ಷಣ ಎದೆಯೆಸರು
ಕಡಪಡೆದು ಹೋದವನ
ಹೆಜ್ಜೆ ಸಪ್ಪಳಕೆ ಕಿವಿಗೊಟ್ಟೇ
ಪುರ್ರೆಂದು ಹಾರಿಹೋಗುವ
ಕನಸಲ್ಲಿ
ಕಳೆದು ಹೋದವು

ಮತ್ತೆ ಮಲ್ಲಿಗೆ ಘಮಲು
ಎಲ್ಲಿಂದ?
ಒಂದೇ ಮೊಳವಿತ್ತು ಕೊಟ್ಟಾಯ್ತು
ಮಾರುವ ಹೆಣ್ಣು
ಪಾಪವೆಂಬಂತೆ ತುಂಬು
ಹೊಟ್ಟೆ ಕಂಡು ನಕ್ಕಳು
ಮಲ್ಲಿಗೆ ಹಿಡಿದವನೆಡೆಗೆ
ಓರೆನೋಟವೆಸೆದರೆ
ಕ್ಷಣ ಲಗಾಮುಹರಿದು
ಇದ್ದದ್ದೆಲ್ಲ ಅಲ್ಲಲ್ಲೇ
ಬಿಟ್ಟು ಜೋತುಬೀಳುವ ಕನಸು
ಮನಸಿಗೆ ಮಲ್ಲಿಗೆ
ಹಿಡಿದವನ ಕೊರಳಿಗೆ
ಮೊಳಮಲ್ಲಿಗೆ ಯಾರ ಹೆರಳಿಗೋ?
ಕೊಂಕುವಾಸೆ ತುಟಿಗೂ

ಮಲ್ಲಿಗೆ ಕಂಪೆನಗೆ ತಲೆನೋವು
ಗುಲಾಬಿಯೇ ಸಾಕು
ತನ್ನದಲ್ಲದ ಒಡಲುಬ್ಬಿಗೆ
ಅಪ್ಪನಾದೆನೆಂದು
ಬೀಗಿ ನಿಂತವನೆಡೆಗೆ ಮುಡಿಯೊಡ್ಡಿದರೆ
ಒಲವುಗಣ್ಣಿನ ಬೆಳ್ದಿಂಗಳಲಿ
ಮಿಂದು ಮಡಿಯಾದ ಹಾಗೆ

ಒಡಲ ಮುತ್ತಿನ ಒದೆ ಕಿಬ್ಬೊಟ್ಟೆಗೆ
ತಪ್ಪಿದ ಚುಕ್ಕೆಯೊಳಗೂ
ಎಷ್ಟೊಂದು ಚಂದದ ರಂಗೋಲಿ

‍ಲೇಖಕರು AdminS

August 31, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: