ಮತ್ತೆ ಬಂತು ರೈತ ಹುತಾತ್ಮ ದಿನ…
ರಮೇಶ್ ಚೀಮನಹಳ್ಳಿ

ಜನತೆಯ ಹಸಿವು ನೀಗಿಸಲು ತಮ್ಮ ಜೀವನವನ್ನು ಸವೆಸಿ, ಸಲಹುತ್ತಾ ನೆಡೆದು ಬಂದವರು ಇವರು. ನಮ್ಮ ದೇಶದ ಬಹುಪಾಲು ಜನರು ಕೃಷಿಯನ್ನೆ ಅವಲಂಬಿಸಿ ಬೆಳೆದು ಬಂದವರು, ಅಂದಿನಿಂದ ಇಂದಿನವರೆಗೂ ರೈತ ಬದುಕನ್ನು ಸಂಭ್ರಮಿಸಿ ಸವಿದವರು, ಸಂಭ್ರಮದ ಜೊತೆಜೊತೆಗೆ ಸವಾಲುಗಳನ್ನು ಎದುರುಸುತ್ತಾ ಬಂದವರು.
ಅಂದಿಗಾಗಲೆ, ತಮ್ಮ ಕೊಟ್ಟಿಗೆಯಿಂದ ತೆಗೆದ ಸಗಣಿ ಮತ್ತು ಗಂಜಲಗಳನ್ನು ಬಳಸುತ್ತಾ ಬಂದಿದ್ದ ರೈತರ ಹೊಲಗಳಿಗೆ ಪ್ಲಾಸ್ಟಿಕ್ ಚೀಲದಲ್ಲಿ ಅದೆಂತದೊ ಯೂರಿಯಾ, ಡಿ.ಎ.ಪಿ, ಕಾಂಪ್ಲೆಕ್ಸ್ಗಳಂತ ರಾಸಾಯನಿಕಗಳು ಬಂದಾಗಿತ್ತು, ಎಂದೂ ಕೇಳಿ ಕಂಡರಿಯದ ಕೀಟನಾಶಕಗಳನ್ನು ಸಿಂಪಡಿಸುವಂತೆ ಮಾಡಲಾಗಿತ್ತು. ಕೃಷಿಕ, ಅಟ್ಟದಲ್ಲೋ, ಗುಡಾಣಗಳಲ್ಲೋ ಶೇಖರಿಸಿಕೊಂಡಿರುತ್ತಿದ್ದ ನಮ್ಮ ತರಕಾರಿ ಮತ್ತು ಧಾನ್ಯದ ಬೀಜಗಳು ಕಾಣದಾಗಿ ಅಂಗಡಿಯ ಬೀಜಗಳನ್ನೆ ಅವಲಂಬಿಸುವಂತೆ ಮಾಡಲು ತಯಾರಿಗಳು ನೆಡೆದಿದ್ದವು. ದೇಶದ ಆಹಾರ ಭದ್ರತೆ ಮತ್ತು ಅನ್ನದಾತನ ಆರ್ಥಿಕ ಸಬಲತೆಗಾಗಿ, ಅತಿಯಾಗಿ ನೀರು ಬಳಸಿಕೊಂಡು ಅಧಿಕ ಇಳುವರಿ ಕೊಡುವ ಹಣದ ಬೆಳೆಗಳನ್ನು ಬೆಳೆಸಲು ಪ್ರೆರೇಪಿಸಿ, ಈ ಪ್ರಕ್ರಿಯೆಗೆ ನಯವಾಗಿ ‘ಹಸಿರುಕ್ರಾಂತಿ’ ಎಂದು ಹೆಸರಿಡಲಾಗಿತ್ತು.
ಹಸಿರು ಕ್ರಾಂತಿ, ಮೊದಲಿಗೆ ಸಹಜವಾಗಿಯೇ ದೊಡ್ಡ ಇಡುವಳಿದಾರರ, ಒಂದಿಷ್ಟು ಸ್ಥಿತಿವಂತರ ಜಮೀನುಗಳಿಗೆ ಪ್ರವೇಶಪಡೆದು ಬೇಷ್ ಅನಿಸಿಕೊಂಡಿತ್ತು. ಇದನ್ನು ಗಮನಿಸುತ್ತಿದ್ದ, ಉಳುಮೆ ಮಾಡುತ್ತಾ ಶಾಸನೀಯವಾಗಿ ತುಂಡು ಭೂಮಿಯ ಒಡೆಯರಾಗಿ ಆಗಷ್ಟೆ ಬದುಕು ಕಟ್ಕೊಳ್ತಿದ್ದ ಅದೆಷ್ಟೊ ಸಣ್ಣ ರೈತರು ಅಲ್ಲಿ ಇಲ್ಲಿ ಸಾಲ ಮಾಡಿ ಆದುನಿಕ ಕೃಷಿ ಮಾಡಲು ಮುಂದಾಗಿದ್ರು. ‘ಇನ್ನೇನು ನಮ್ಮ ಕೈಗೊಂದಿಷ್ಟು ಕಾಸು ಬಂದೇಬಿಡ್ತು.’ ಅನ್ಕೊಂಡಿದ್ದ ರೈತರ ಕನಸುಗಳು ದುಬಾರಿ ಆಧುನಿಕ ಕೃಷಿಯ ಸಮಸ್ಯೆಗಳಿಂದ ಮತ್ತು ಬರದ ಕಾರಣದಿಂದ ಭಗ್ನಗೊಂಡಿದ್ದವು. ಅದರಲ್ಲೂ ಸಣ್ಣ ರೈತರಂತು ದಾರಿಕಾಣದೆ ಸೋತು ಸುಣ್ಣವಾಗಿ ನಿರಾಸೆಯ ಪರಮಾವದಿ ತಲುಪಿಬಿಟ್ಟಿದ್ರು. ಅದೇ ಸಂದರ್ಭದಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದ ವರಲಕ್ಷ್ಮಿ ಹತ್ತಿ ವರ ನೀಡದೇ ಶಾಪವಾಗಿ ಪರಿಣಮಿಸಿತ್ತು, ಆದುನಿಕ ಕೃಷಿ ಪದ್ದತಿಯ ಉತ್ಪಾದನಾ ವೆಚ್ಚದ ಹೆಚ್ಚಳ ಇದಕ್ಕೆ ಮುಖ್ಯ ಕಾರಣವಾಗಿತ್ತು, ಹೀಗಿರುವಾಗ ಅಲ್ಲಿನ ಸರಕಾರಿ ಅಧಿಕಾರಿಗಳು ರೈತರಿಗೆ ಗಾಯದ ಮೇಲೆ ಬರೆ ಎಳೆಯುವಂತೆ ವರ್ತಿಸಿಬಿಟ್ಟಿದ್ರು.
ಬಳಸದ ನೀರಿಗೂ ಶುಲ್ಕ, ಭೂ ಅಭಿವೃದ್ದಿ ಶುಲ್ಕ ಹೀಗೇ ಏನೇನೊ ಶುಲ್ಕ ವಿಧಿಸಿ ಕಾಡಿದ್ದು ಮಾತ್ರವಲ್ಲ, ಹಸಿರು ಕ್ರಾಂತಿಯ ಭೂತದ ಬಾಯಿಗೆ ಬೂಸ ಹಾಕಲು ಕೊಟ್ಟಿದ್ದ ಸಾಲದ ಮರುಪಾವತಿಗೆ ಕಠಿಣ ಕ್ರಮ ಕೈಗೊಂಡಿದ್ರು. ರೈತರ ಮನೆಗಳನ್ನ ದರೋಡೆ ಮಾಡಿ, ಇದ್ದ ಬದ್ದ ಎಲ್ಲಾ ಆಸ್ತಿಗಳನ್ನ ಮುಟ್ಟುಗೊಲು ಹಾಕಿಕೊಳ್ಳಲು ಬ್ಯಾಂಕ್ನವ್ರು ಸಜ್ಜಾಗಿಬಿಟ್ಟಿದ್ರು. ಹೀಗೆ ಒಂದಾದ ಮೇಲೆ ಮತ್ತೊಂದರಂತೆ ಬಿಡುವಿರದೆ ಬಂದ ಆಘಾತಗಳಿಂದ ರೂಸಿಹೊಗಿಬಿಟ್ಟಿದ್ದ ಕೃಷಿಕನಿಗೆ ತಿರುಗಿಬೀಳದೆ ಬೇರೆ ಮಾರ್ಗವೇ ಇರಲಿಲ್ಲ. ಆ… ಇದೇ ರೈತಬಂಡಾಯಕ್ಕೆ ನಾಂದಿಯಾಡಿದ್ದು..!
ನರಗುಂದ ಇಂತದೊಂದು ರೈತ ಬಂಡಾಯಕ್ಕೆ ಸಜ್ಜಾಗುತ್ತಿಂದಂತೆ ಎಷ್ಟೊದಿನಗಳಿಂದ ‘ಹಸಿರು ಬೆಳೆದರೂ ಹಸಿದುಕೊಂಡು ಉಸಿರು ಬಿಗಿ ಹಿಡಿದು ಕಾಯುತ್ತಿದ್ದ’ ಗದಗ ಜಿಲ್ಲೆಯ ರೈತಸಮುದಾಯ ಒಟ್ಟಾಗಿಬಿಟ್ಟಿತ್ತು, ಆಗಿನ್ನೂ ಎಲ್ಲಾ ಮನೆಗಳಲ್ಲಿ ಟಿವಿಗಳಿರದ, ಮೊಬೈಲ್ ಫೋನನ್ನು ನೋಡದ 1980 ದಶಕ, ಅಂಗಿದ್ರೂ ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ಸೇರುವಷ್ಟರ ಮಟ್ಟಿಗೆ ಬಂಡಾಯದ ಹೊಗೆ ಹರಡಿದ್ದನ್ನ ನೊಡಿದರೆ ಕೃಷಿಕನ ಅಂದಿನ ಪರಿಸ್ಥಿತಿಯನ್ನ ಊಹಿಸಿಕೊಳ್ಳಬಹುದು. ಅಂದು ಮಾರ್ಚ್ 1, ಸ್ಥಳೀಯ ರೈತರೆಲ್ಲ ಅಳಗವಾಡಿಯಲ್ಲಿ ಸಮಾವೇಶ ಮಾಡಿ ‘ಮಲಪ್ರಭಾ ಪ್ರದೇಶ ರೈತ ಸಮನ್ವಯ ಸಮಿತಿ’ ಅಂತೇನೊ ಮಾಡ್ಕೊಂಡು ಹೊರಾಟಕ್ಕೆ ಇಳಿದೇ ಬಿಟ್ಟಿದ್ರು. ಅಂದಿನಿಂದ ಸತತವಾಗಿ ಒಂದಲ್ಲೊಂದುಕಡೆ, ಧರಣಿ, ಸತ್ಯಾಗ್ರಹ ಅಂತೇನೇ ಮಾಡಿದ್ರು ಸರ್ಕಾರ ಮಾತ್ರ ಸೊಪ್ಪು ಹಾಕಲಿಲ್ಲಾ, ಬದಲಿಗೆ ಇದು ರಾಜಕೀಯ ನಾಟಕ ಅಂತ ಮೂದಲಿಸಿದ್ರು.
ಇದರಿಂದ ಮತ್ತಷ್ಟು ಕುಗ್ಗಿಹೋದ ರೈತ ಸಮುದಾಯ ಜುಲೈ 21 ರಂದು ನರಗುಂದ, ನವಲುಗುಂದ, ರಾಮದುರ್ಗ, ಸೌದತ್ತಿಗಳಲ್ಲಿ ಬಂದ್ ಆಚರಿಸಿ, ಸರ್ಕಾರಿ ಕಛೇರಿಗಳಿಗೆ ಮುತ್ತಿಗೆ ಹಾಕಿತ್ತು, ನರಗುಂದಾದಲ್ಲಿ ತಾಹಶೀಲದಾರರು ಜಿಲ್ಲಾದಿಕಾರಿಯ ಆದೇಶದಂತೆ, ತಾಲೂಕು ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುತ್ತಿದ್ದ ರೈತರನ್ನು ತುಳಿದುಕೊಂಡೆ ಒಳಗೆ ಪ್ರವೇಶಿಸಿದಾಗ ಗಲಬೆಯ ವಾತಾವರಣ ನಿರ್ಮಾಣವಾಗಿತ್ತು, ಅಷ್ಟರಲ್ಲಾಗಲೆ ಇದೇ ಸಮಯಕ್ಕೆ ಕಾಯುತ್ತಿದ್ದವನಂತೆ ನಿಂತಿದ್ದ ಪಿ ಎಸ್ ಐ, ಪ್ರತಿಭಟನಾ ನಿರತ ರೈತರ ಮೇಲೆ ಗುಂಡು ಹಾರಿಸಿಯೇಬಿಟ್ಟಿದ್ದ, ನೋಡನೋಡುತ್ತಿದಂತೆ ಗುಂಪಿನಲ್ಲಿದ್ದ ರೈತ ‘ಈರಪ್ಪ ಕಡ್ಲಿಕೊಪ್ಪ’ ಗುಂಡು ತಗಲಿ ಒದ್ದಾಡತೊಡಗಿದ್ದ, ನೆಮ್ಮದಿಯ ಬದುಕಿನ ಬರವಸೆಗಾಗಿ ಕಾದು ಕುಳಿತಿದ್ದ ಅನ್ನದಾತನೊಬ್ಬನ ರಕ್ತ ನರಗುಂದದ ಮಣ್ಣಲ್ಲಿ ಚೆಲ್ಲಾಡಿತ್ತು. ತಮ್ಮ ಕಣ್ಮುಂದೇಯೆ ಇಂತದೊಂದು ದಾರುಣತೆಯನ್ನು ಕಂಡ ಗುಂಪು ಹಿಂದೆಂದಿಗಿಂತಲೂ ಉಗ್ರವಾದ ಹೋರಾಟದ ರೂಪ ಪಡೆದುಕೊಂಡು ಪ್ರತಿಕಾರಕ್ಕೆ ಮುಂದಾಗಿಬಿಡ್ತು. ಇಷ್ಟಾದಮೇಲೆ ಪರಿಸ್ಥಿತಿ ರಣರಂಗವಾಗಿ ಮಾರ್ಪಡಲು ತುಂಬ ಸಮಯವೇನು ಹಿಡಿಯಲಿಲ್ಲಾ, ರೈತರ ಮೇಲೆ ಗುಂಡುಹಾರಿಸಿದ್ದ ಪೋಲಿಸ್ ಅಧಿಕಾರಿಯನ್ನು ಹಟ್ಟಿಸಿಕೊಂಡುಹೊಗಿ ಕೊಂದು ಹಾಕಿದ್ರು, ಇದೇ ಗಲಬೆಯಲ್ಲಿ ಇನ್ನಿಬರು ಪೋಲೀಸ್ ಸಿಬಂದ್ದಿ ಕೂಡ ಸತ್ತುಹೊದ್ರು ಇದೇ ಸಮಯದಲ್ಲಿ ನವಲುಗುಂದಾದಲ್ಲಿ ನೀರಾವರಿ ಕಛೇರಿಗೆ ಮತ್ತಿಗೆ ಹಾಕಿದ್ದ ರೈತರ ಮೇಲೆ ಗೋಲಿಬಾರ್ ಮಾಡಲಾಗಿ ಗುಂಡೇಟಿಗೆ ರೈತ ‘ಬಸಪ್ಪ ಲಕುಂಡಿ’ ಸತ್ತು ಮಲಗಿದ್ದ. ಶ್ರಮಜೀವಿಯ ಪ್ರತಿಕಾರದ ಕಿಡಿ ನೀರಾವರಿ ಕಛೇರಿಯನ್ನು ಸುಟ್ಟು, ಕಂಡಕಂಡ ಸರ್ಕಾರಿ ಅಧಿಕಾರಿಗಳನ್ನ ಹಿಗ್ಗಾಮುಗ್ಗಾ ಬಡಿಯುವ ರೂಪ ಪಡೆದಿತ್ತು.
ಗದಗ ಜಿಲ್ಲೆ ಸೂತಕದ ಛಾಯೆಯಲ್ಲೆ ಮುಳುಗಿ, ಪ್ರತಿ ಕ್ಷಣವೂ ಆತಂಕದಿದ ಕಳೆಯುತ್ತಿದ್ದ ಆ ಒಂದು ದಿನಕಳೆಯುವುದರೋಳಗೆ ಇಡಿ ರಾಜ್ಯದ ರೈತ ಸಮುದಾಯ ಸರರ್ಕಾರದ ವಿರುದ್ದ ಗುಡುಗಲಾರಂಬಿಸಿತ್ತು, ಅನ್ನದಾತನ ಆಕ್ರೊಶ ಪ್ರತಿಬಟನೆಗಳ ರೂಪ ಪಡೆದಿತ್ತು, ಸರ್ಕಾರ ಕೂಡ ಸೆಡ್ಡುವಡೆದವರಂತೆ ನೆಡೆಸಿದ ಗೋಲಿಬಾರ್ಗಳು ರಾಜ್ಯದ 139 ಜನ ರೈತರನ್ನು ಬಲಿತೆಗೆದುಕೊಂಡಿದ್ದವು. ಇಡಿ ರಾಜ್ಯಕ್ಕೆ ರಾಜ್ಯವೆ ಹೊತ್ತಿ ಉರಿರ ದಿನಗಳವು, ಸಮಾಜದ ಬಹುದೊಡ್ಡ ಶ್ರಮಿಕ ಸಮುದಾಯ ತಿರುಗಿಬಿದ್ದರೆ ಆಗಬಹುದಾದ ಎಲ್ಲವೂ ನೆಡೆದುಹೋದ ದಿನಗಳು, ಇದೇ ಕಾರಣದಿಂದಲೇ ಜನರ ಆಶೊತ್ತರಗಳಿಗೆ ಸ್ಪಂದಿಸದ ಅಂದಿನ ಗೊಂಡುರಾಯರ ಸರ್ಕಾರವನ್ನು ಚುನಾವಣೆಯಲ್ಲಿ ಹೀನಾ ಮಾನ ಸೋಲಿಸಿದ್ದು. ಇದೇ ಸಂದರ್ಭದಲ್ಲಿ ರಾಜ್ಯದೆಲ್ಲೆಡೆ ಹೊಸ ಸ್ವರೂಪದ ರೈತ ಸಂಘಟನೆ ಆರಂಬಗೊಂಡು, ಸೈದ್ದಾಂತಿಕ ಚೌಕಟ್ಟನ್ನು ಹಾಕಿಕೋಡಿದ್ದು, ನಮ್ಮ ಪ್ರೊಪೇಸರ್ ನಂಜುಂಡಸ್ವಾಮಿ, ಸುಂದರೇಶ್ರಂತಹವರೆಲ್ಲಾ ತಮ್ಮದೇ ವಿಭಿನ್ನ ಶೈಲಿಯ ಪ್ರತಿಬಟನೆಯಿಂದ ವಾತವರಣವನ್ನು ರೈತಮಯವಾಗಿಸಿದ್ದು.
ಬಿಡಿ.. ಇವೆಲ್ಲಾ ಇತಿಹಾಸಹ ಪುಟ ಸೇರಿ 33 ವರ್ಷಗಳೇ ಕಳೆದಿವೆ. ಈ ಎಲ್ಲಾ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾದ ಆ ಸಂದರ್ಭವನ್ನು ನೆನೆಯುವುದಕ್ಕಾಗಿಯೇ ಜೂನ್ 21 ರಂದು ‘ರೈತ ಹುತಾತ್ಮ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಆದರೆ ಇಂದು ಅಂದಿನಂತಿಲ್ಲ..! ಸ್ವಾಭಿಮಾನಕ್ಕೆ ದಕ್ಕೆ ಬಂದಾಗ ಅಬ್ಬರಿಸಿದ್ದ ರೈತ ಸಂಘಟನೆಗಳು ಇಂದೇಕೊ ತಣ್ಣಗಾದಂತಿವೆ. ಸರ್ಕಾರ ಮಾಡಿದ ಜಪ್ತಿಗೆ ಪ್ರತಿ ಜಪ್ತಿ ಮಾಡಿಸುತೇವೆಂದು, ‘ರೈತರ ಅನುಮತಿ ಇಲ್ಲದೆ ಸರ್ಕಾರಿ ಅಧಿಕಾರಿಗಳಿಗೆ ಗ್ರಾಮದ ಒಳಗೆ ಪ್ರವೇಶವಿಲ್ಲ’. ಎಂದು ನೆಟ್ಟಿದ್ದ ಪಲಕಗಳು ಮಾಸಿದಂತಿವೆ. ರೈತರ ಹೆಸರಿಲ್ಲಿ ಪ್ರಮಾಣ ಮಾಡಿದ ಮುಖ್ಯಮಂತ್ರಿಯೊಬ್ಬರು ಗೋಲಿಬಾರ್ ಮಾಡಿಸಿಗಾದಲು ರೈತರ ದ್ವನಿ ಗಟ್ಟಿಯಾಗಿ ಕೇಳದಿದ್ದುದು ಇದಕ್ಕೆ ಸಾಕ್ಷಿ.
ಸರ್ಕಾರಗಳೂ ಕೂಡ ತಮ್ಮ ತಂತ್ರಗಳನ್ನು ವ್ಯವಸ್ಥಿತವಾಗಿಸಿಕೊಂಡಿವೆ, ಅಭಿವೃದ್ದಿಯ ಹೆಸರಲ್ಲಿ ರೈತನ ಭೂಮಿಯನ್ನು ಕಸಿದುಕೊಂಡು ಬೀದಿಗೆ ನೂಕುತ್ತಿವೆ, ಕೃಷಿ ಅಭಿವೃದ್ದಿಯ ಹೆಸರಲ್ಲಿ ಕಾಣದ ಕಂಪನಿಗಳ ಕಪಿಮುಷ್ಟಿಗೆ ರೈತನನ್ನು ಒಪ್ಪಿಸಿ, ಬಿಟಿ ಹೈಬ್ರೀಡ್ ಅಂತೇನೇನೊ ಹೇಳಿ, ನುಂಗಲೂ ಆಗದ ಉಗುಳಲೂ ಆಗದ ಬಿಸಿತುಪ್ಪವನ್ನ ಕೃಷಿಕನ ಬಾಯಿಗೆ ಹಾಕಿವೆ. ಹೀಗೆ ಒಂದಲೊಂದು ರೀತಿಯಲ್ಲಿ ಇಂದಿಗೂ ಕಾಡುತ್ತಾ, ಪರೊಕ್ಷವಾಗಿ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರನ್ನ ಕೊಂದುಹಾಕಿ ‘ಆತ್ಮಹತ್ಯೆ’ ಎಂಬ ಹಣೆಪಟ್ಟಿ ಕಟ್ಟಿವೆ. ಇಂದೂ ಪ್ರತಿ ದಿನವೂ ರೈತ ಹುತಾತ್ಮದಿನವೆ. ಇಷ್ಟಾದರೂ ರೈತ ಸುಮ್ಮನಿದ್ದಾನೇಕೆ..? ನಿಜವಾಗಿಯೂ ಅಂದಿನ ಹೊರಾಟದ ಕಿಚ್ಚು ನಂದಿಹೊಯಿತ..?








Idakke Raitha Sanghadavaru uttarisabeku. Avarige sahakarigalaagi sarvaru bembalisabeku.