ತಂದೆಯೊಬ್ಬ ವಿಧುರನಾದಾಗ…Grace is Gone!

ಭಾಗ್ಯರೇಖಾ ದೇಶಪಾಂಡೆ 

ಹಠಾತ್ತಾಗಿ ತಾಯಿಯೊಬ್ಬಳು ವಿಧವೆಯಾಗಿ ಮಕ್ಕಳಿಗೆ ಆ ವಿಷಯ ತಿಳಿಸಿ ಅವರನ್ನು ಒಬ್ಬಂಟಿಯಾಗಿ ಬೆಳೆಸುವ ಸಂದರ್ಭ ಬಂದರೆ ಅದನ್ನು ಊಹಿಸಿಯೇ ಅದು ಸುಲಭವಲ್ಲ ಎನ್ನುತ್ತೇವೆ.

ಆದರೆ ಮಾನಸಿಕ, ಆರ್ಥಿಕ ಮತ್ತು ಸಾಮಾಜಿಕ ದೃಷ್ಟಿಯನ್ನು ಪಕ್ಕಕ್ಕಿಟ್ಟು ಮನೆ ವಿಷಯಗಳಲ್ಲಿ, ದೈನಂದಿನ ಕೆಲಸಕಾರ್ಯಗಳಲ್ಲಿ, ಕೌಟುಂಬಿಕ ಸಂಬಂಧಗಳಲ್ಲಿ ತನ್ನ ಸಂಗಾತಿಯ ಮೇಲೆ ಗಂಡಸೊಬ್ಬ ಹೊಂದಿರಬಹುದಾದ ಅವಲಂಬನೆಯ ದೃಷ್ಟಿಯಿಂದ ನೋಡಿದಾಗ ಮತ್ತು ಸಲಿಗೆಯಿದ್ದರೂ ಇಲ್ಲದಂತಹ ಪ್ರೀತಿಯಿದ್ದರೂ ಅತಿಯಾಗಿ ತೋರ್ಪಡಿಸದಂತಹ ಮಕ್ಕಳೊಂದಿಗಿನ ಆತನ ಸಂಬಂಧವನ್ನು ಗಮನಿಸಿದಾಗ ತಂದೆಯೊಬ್ಬ ಅಚಾನಕ್ಕಾಗಿ ವಿಧುರನಾದರೆ ಒಂಟಿ ಹೆಂಡತಿಗಿಂತ ಒಂದು ತೂಕ ಹೆಚ್ಚಿನ ಕಷ್ಟ ಅನುಭವಿಸುತ್ತಾನೆ ಎಂಬುದು ನನ್ನ ಅನಿಸಿಕೆ.

grace is gone movieವಿಧವೆಯಾಗುವ ಹೆಣ್ಣಿನ ಕಥೆಗಳನ್ನು ನಾವು ಸಾಕಷ್ಟು ಸಿನೆಮಾ ಧಾರವಾಹಿಗಳಲ್ಲಿ ನೋಡಿರುತ್ತೇವೆ. ಆದರೆ ಚಿಕ್ಕ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳ ತಂದೆಯೊಬ್ಬ ವಿಧುರನಾದಾಗ ಕೇವಲ ಆ ವಿಷಯವನ್ನು ತನ್ನ ಮಕ್ಕಳಿಗೆ ಮುಟ್ಟಿಸಲು ಆತ ಅನುಭವಿಸುವ ಆತಂಕ, ಹಿಂಜರಿಕೆಯ ಕಾರಣ ಆ ಸುದ್ದಿ ಮುಟ್ಟಿಸುವುದನ್ನೇ ವಿಳಂಬಿಸುತ್ತ ಬರುವ ಸೂಕ್ಷ್ಮತೆಯ ಸುತ್ತ ಹೆಣೆದಿರುವ ಕಥೆ ಗ್ರೇಸ್ ಈಜ್ ಗಾನ್ (Grace Is Gone) ಸಿನೆಮಾದ್ದು.

ಹನ್ನೆರಡು ವರ್ಷದ ಹೈಡಿ ಮತ್ತು ಎಂಟು ವರ್ಷದ ಡಾನ್ ಎಂಬ ಹೆಣ್ಣುಮಕ್ಕಳ ತಂದೆ ಸ್ಟೇನ್ಲಿ ಫಿಲಿಪ್ಸ್ ಹೋಮ್ ಸ್ಟೋರ್ ಒಂದರಲ್ಲಿ ಸೇಲ್ಸ್ ಮ್ಯಾನೇಜರ್. ಸ್ಟೇನ್ಲಿಯ ಹೆಂಡತಿ ಗ್ರೇಸ್ ಫಿಲಿಪ್ಸ್ ಅಮೆರಿಕಾ ಸೇನೆಯ ಮಿಲಿಟರಿ ಅಧಿಕಾರಿ. ಅಮೆರಿಕಾ ಮತ್ತು ಇರಾಕ್ ನಡುವೆ ನಡೆಯುವ ಯುದ್ಧದಲ್ಲಿ ಭಾಗವಹಿಸಲು ಕೆಲಸದ ಮೇರೆಗೆ ಇರಾಕ್ ಗೆ ಹೋಗಿರುತ್ತಾಳೆ. ತಂದೆಯೊಂದಿಗೆ ಇರುವ ಮಕ್ಕಳು ಹೆಚ್ಚಾಗಿ ತಮ್ಮ ಶಾಲೆ, ಹೋಂವರ್ಕ್ ಕುರಿತಾಗಿ ಅವನೊಂದಿಗೆ ಮಾತನಾಡುತ್ತಿರುತ್ತಾರೆ. ಮಕ್ಕಳ ಶಿಸ್ತಿನ ಜೀವನದ ಬಗ್ಗೆ ಕಾಳಜಿಯಿರುವ ಸ್ಟೇನ್ಲಿಗೆ ಮನೆಯಲ್ಲಿ ಮಕ್ಕಳು ಟಿ.ವಿ. ನೋಡಬಾರದೆಂಬ ಧೋರಣೆ ಇರುತ್ತದೆ. ಅದರಲ್ಲೂ ಯುದ್ಧದ ವಾರ್ತೆಯಿಂದ ಮಕ್ಕಳು ದೂರ ಇರಬೇಕೆಂಬ ನಿಲುವು ಅವನದಾಗಿರುತ್ತದೆ.

ಹಿರಿಮಗಳು ಹೈಡಿ ಕೊಂಚ ಗಂಭೀರತೆ, ಸೂಕ್ಷ್ಮತೆ ಇರುವ ಮುಗ್ಧ ಹುಡುಗಿ. ಕಿರಿಮಗಳು ಡಾನ್ ತನ್ನ ವಯಸ್ಸಿಗೆ ತಕ್ಕಂತೆ ಕೊಂಚ ತರಲೆ ಮಾಡುವ ತುಂಟ ಹುಡುಗಿ. ಪ್ರತಿದಿನ ಆಕೆಗೆ ತನ್ನದೇ ಆದ ಆ ದಿನದ ಸಮಯ (time of the day) ಎಂದಿರುತ್ತದೆ. ಅಂದರೆ ಆ ಕೆಲ ಕ್ಷಣಗಳು ಆಕೆ ತನ್ನಿಂದ ದೂರ ಯುದ್ಧಭೂಮಿಯಲ್ಲಿರುವ ಅಮ್ಮನನ್ನು ಮನಸ್ಸಾರೆ ನೆನೆಯುವ ಕ್ಷಣ. ಆ ಕ್ಷಣ ಅಮ್ಮನೂ ತನ್ನನ್ನು ನೆನೆಯುತ್ತಿರುತ್ತಾಳೆ ಎಂಬುದು ಆಕೆಗೆ ಖಚಿತವಾಗಿ ಗೊತ್ತು ಏಕೆಂದರೆ, ಡಾನ್ ಮತ್ತು ಅಮ್ಮ ಗ್ರೇಸ್ ತಮ್ಮ ಕೈ ಗಡಿಯಾರದಲ್ಲಿ ಪ್ರತಿದಿನವೂ ಒಂದೇ ಸಮಯಕ್ಕೆ ಗಂಟೆ ಬಾರಿಸುವಂತೆ ಅಲಾರಾಂ ಇಟ್ಟಿರುತ್ತಾರೆ. ಕೈ ಗಡಿಯಾರ ಆ ಸಮಯಕ್ಕೆ ಶಬ್ದ ಮಾಡಿದ ಕೂಡಲೇ ಯಾವುದೇ ಕೆಲಸದಲ್ಲಿ ತೊಡಗಿದ್ದರೂ ಡಾನ್ ಕಣ್ಣುಮುಚ್ಚಿ ಅಮ್ಮನನ್ನು ನೆನೆದು ಅಮ್ಮನನ್ನು ಅಪ್ಪಿದಷ್ಟೇ ಸಂತಸ ಪಡುತ್ತಿರುತ್ತಾಳೆ.

ಹೀಗೆ ಮೂವರೂ ಕೆಲ ದಿನಗಳಲ್ಲಿ ತಮ್ಮ ಪುಟ್ಟ ಕುಟುಂಬದ ನಾಲ್ಕನೆಯ ಸದಸ್ಯೆಯೂ ಮರಳಿ ಬರುವಳೆಂಬ ನಂಬಿಕೆಯಿಂದ ಸಹಜವಾಗಿ ಜೀವನದಲ್ಲಿ ತೊಡಗಿರುತ್ತಾರೆ. ಆದರೆ ಒಂದು ಮುಂಜಾನೆ ಸ್ಟೇನ್ಲಿಯ ಮನೆಯ ಬಾಗಿಲನ್ನು ಬಡಿಯುವ ಸೈನ್ಯದ ಸಿಬ್ಬಂದಿಯಿಬ್ಬರು ಈ ಸಹಜ ವಾತಾವರಣ ಹದಗೆಡುವಂತಹ ಸುದ್ದಿಯನ್ನು ತರುತ್ತಾರೆ. ಸ್ಟೇನ್ಲಿಯ ಹೆಂಡತಿ ಗ್ರೇಸ್ ಯುದ್ಧದಲ್ಲಿ ಮಡಿದಳೆಂಬ ಸುದ್ದಿಯನ್ನು ಮುಟ್ಟಿಸಿಬಿಡುತ್ತಾರೆ. ಅಚಾನಕ್ಕಾಗಿ ಬಂದ ಈ ಸುದ್ದಿಯನ್ನು ಕೇಳಿ ಆಘಾತಕ್ಕೊಳಗಾಗುವ ಸ್ಟೇನ್ಲಿ ಅದನ್ನು ಒಪ್ಪಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಕುಳಿತ ಕುರ್ಚಿಯಲ್ಲಿಯೇ ಬಹುಕಾಲ ಸುಮ್ಮನೆ ಕುಳಿತಿದ್ದು ಮೌನವಾಗಿ ರೋದಿಸುತ್ತಾನೆ. ಮಕ್ಕಳಿಗೆ ಅವರ ಅಮ್ಮನ ಸಾವಿನ ಸುದ್ದಿ ತಿಳಿಸಲು ಆತಂಕ ಪಡುತ್ತಾನೆ. ಆದರೂ ಅವರು ಶಾಲೆಯಿಂದ ಮರಳಿದ ಕೂಡಲೇ ತಾನು ಅವರೊಂದಿಗೆ ಏನೋ ಮಾತನಾಡಬೇಕೆಂದು ಲಿವಿಂಗ್ ರೂಮ್ ಗೆ ಕರೆದು ಸುದ್ದಿ ಹೇಳಲು ಬಾಯಿ ತೆರೆಯುತ್ತಾನೆ. ಆದರೆ, ಮಕ್ಕಳ ಮುಖದಲ್ಲಿನ ಮುಗ್ಧತೆ, ತುಂಟ ನಗು, ಅಮ್ಮ ಮನೆಯಲ್ಲಿರದಿದ್ದರೂ ಬೇರೆಡೆಗೆ ಕೆಲಸ ಮಾಡುತ್ತಿರುವಳೆಂಬ ಭದ್ರತೆಯ ಭಾವ, ಅವನನ್ನು ಕಟ್ಟಿ ಹಾಕುತ್ತದೆ. ಮುಟ್ಟಿಸಬೇಕಿದ್ದ ಕಹಿಸುದ್ದಿ ಗಂಟಲಿನಲ್ಲಿಯೇ ಸಿಕ್ಕು ಹೊರ ಬರಲು ಪರದಾಡುತ್ತದೆ. ಆ ದುಃಖದ ವಿಷಯ ಹೇಳುವ ಬದಲು ರಾತ್ರಿಯ ಊಟಕ್ಕೆ ಹೊರಗೆ ಹೋಗೋಣವೆಂದು ಅವರನ್ನು ಹೋಟೆಲ್ ಗೆ ಕರೆದೊಯ್ಯುತ್ತಾನೆ.

ಹೆಂಡತಿಯನ್ನು ಕಳೆದುಕೊಂಡ ದುಃಖವನ್ನು ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡು , ಆ ನೋವಿನ ಸಂಗತಿ ಮಕ್ಕಳಿಗೆ ತಲುಪುವ ಮುನ್ನ ಅವರನ್ನು ಖುಷಿಪಡಿಸಬೇಕೆಂದು ನಿರ್ಧರಿಸುತ್ತಾನೆ. ಮಕ್ಕಳಿಗೆ ಅವರು ಎಲ್ಲಾದರೂ ಹೋಗಲೇಬೇಕು ಎಂದು ಬಹಳ ಇಷ್ಟಪಡುವ ಜಾಗ ಯಾವುದಾದರೂ ಇದೆಯೇ ಎಂದು ಪ್ರಶ್ನಿಸುತ್ತಾನೆ. ಕಿರಿಮಗಳು ಡಾನ್ ಫ್ಲೋರಿಡಾದ ಎಂಚಾಂಟೆಡ್ ಗಾರ್ಡನ್ಸ್ ಎಂದು ಉತ್ಸಾಹದಿಂದ ಹೇಳಿದಾಗ ಅಲ್ಲಿಗೆ ಈಗಲೇ ಹೋಗಿಬಿಡೋಣ ಎಂದು ಮಕ್ಕಳನ್ನು ಹುರಿದುಂಬಿಸಿ ಆ ಕ್ಷಣವೇ ಅವರನ್ನು ಹೊರಡಿಸುತ್ತಾನೆ.

ತುಸು ಹಿಂಜರಿಯುವ ಹೈಡಿ, ತಮಗೆ ಈಗ ರಜೆ ಇಲ್ಲವೆಂದೂ , ತಾನು ಮತ್ತು ಡಾನ್ ಶಾಲೆಗೆ ಹೋಗಬೇಕೆಂದು, ತಮಗಿರುವ ಹೋಂವರ್ಕ್ ಬಗ್ಗೆ ನೆನಪಿಸಿದರೂ , ಶಾಲೆಯನ್ನು ಕೆಲ ದಿನ ತಪ್ಪಿಸಿದರಾಯಿತು, ಹೋಂವರ್ಕ್ ಮಾಡಿದರಾಯಿತು ಎಂದು ಉತ್ತರಿಸುವ ತಂದೆಯನ್ನು ನೋಡಿ ನಿಜಕ್ಕೂ ಅಚ್ಚರಿಪಡುತ್ತಾಳೆ. ಇಷ್ಟು ದಿನ ತಮ್ಮ ಶಾಲೆ ಹೋಂವರ್ಕ್ ಬಗ್ಗೆ ಗಂಭೀರವಾಗಿರುತ್ತಿದ್ದ ತಂದೆ ಈ ದಿನ ಹೀಗೆ ಹಗುರವಾಗಿ ಮಾತನಾಡುವುದನ್ನು ಗಮನಿಸಿ ಕೊಂಚ ಗಲಿಬಿಲಿಗೊಳ್ಳುತ್ತಾಳೆ. ನಿಜಕ್ಕೂ ಶಾಲೆಯನ್ನು ತಪ್ಪಿಸಬಹುದೇ ಎಂದು ಮತ್ತೊಮ್ಮೆ ವಿಚಾರಿಸಿ ಅವನು ಹೌದೆಂದು ಹೇಳಿದ ಮೇಲೆ ಪ್ರಯಾಣಕ್ಕೆ ಹೊರಡುತ್ತಾಳೆ. ಮಿನ್ನಿಸೊಟಾದಿಂದ ದಕ್ಷಿಣದ ಫ್ಲೋರಿಡಾಕ್ಕೆ ಪ್ರಯಾಣ ಬೆಳೆಸುವ ತಂದೆ , ಒಂದೆಡೆ ಮಕ್ಕಳಿಗೆ ಕಹಿಸುದ್ದಿಯನ್ನು ತಿಳಿಸುವ ಮನಸ್ಸಾಗದೆ ಪ್ರಯಾಣ ಹೂಡುತ್ತಾನೆ ಎನಿಸಿದರೆ ಮತ್ತೊಂದೆಡೆ ಆ ಸುದ್ದಿಯನ್ನು ಸ್ವತಃ ಒಪ್ಪಿಕೊಳ್ಳಲು ಕಸಿವಿಸಿಗೊಳ್ಳುತ್ತ ಆ ಘಳಿಗೆಯನ್ನು ಮುಂದೂಡಲು ಪ್ರಯಾಣ ಹೊರಡುತ್ತಾನೆ ಎಂದೆನಿಸುತ್ತದೆ.
ಪಯಣದ್ದುದ್ದಕ್ಕೂ ಮಕ್ಕಳಿಗಾಗಿ ತನ್ನ ದುಃಖವನ್ನು ಹುದುಗಿಸಿಕೊಂಡು ಸಹಜವಾಗಿರುವಂತೆ ನಟಿಸುವ ಸ್ಟೇನ್ಲಿ , ಆಗಾಗ ತನ್ನ ಮನೆಯ ಫೋನ್ ಗೆ ಕರೆ ಮಾಡಿ ಆನ್ಸರಿಂಗ್ ಮಶಿನ್ ನಲ್ಲಿ ರೆಕಾರ್ಡ್ ಆಗಿರುವ ಹೆಂಡತಿ ಗ್ರೇಸ್ ಳ ಧ್ವನಿಯನ್ನು ಆಲಿಸುತ್ತಿರುತ್ತಾನೆ. ಆಕೆಯ ಧ್ವನಿಗೆ ಸ್ಪಂದಿಸುವಂತೆ ತಾನು ಮತ್ತು ಮಕ್ಕಳು ಆರಾಮಾಗಿದ್ದೇವೆಂದೂ ಎಲ್ಲರೂ ಫ್ಲೋರಿಡಾಕ್ಕೆ ಟ್ರಿಪ್ ಗೆ ಹೊರಟಿದ್ದೇವೆಂದೂ ತಿಳಿಸುತ್ತಾನೆ.

ದಾರಿಯಲ್ಲಿ ತನ್ನ ತಾಯಿಯ ಭೇಟಿಗೆಂದು ಮಕ್ಕಳನ್ನು ತನ್ನ ಬಾಲ್ಯದ ಮನೆಗೆ ಕರೆದುಕೊಂಡು ಹೋಗುತ್ತಾನೆ. ಆದರೆ ಮನೆಯಲ್ಲಿ ತಾಯಿಯಿರದೆ ತಮ್ಮ ಜಾನ್ ಮಾತ್ರ ಇರುತ್ತಾನೆ. ಮಕ್ಕಳನ್ನು ಜಾನ್ ಜೊತೆಗೆ ಹೊರಗೆ ಸುತ್ತಾಡಿ ತಿಂದು ಬರಲು ಕಳುಹಿಸಿ ತಾನು ಕೋಣೆಯ ಒಳ ಹೊಕ್ಕು ಗಟ್ಟಿಯಾಗಿ ಅಳುತ್ತಾನೆ. ಮನೆಗೆ ಹಿಂತಿರುಗುವ ಜಾನ್ ಗೆ ಸಂಬಂಧಿಕರೊಬ್ಬರು ಗ್ರೇಸ್ ಳ ನಿಧಾನಕ್ಕಾಗಿ ಸಂತಾಪ ಸೂಚಿಸಲು ಫೋನ್ ಮಾಡಿದಾಗ ಸತ್ಯ ತಿಳಿಯುತ್ತದೆ. ಅಣ್ಣನ ವರ್ತನೆಯ ಬಗ್ಗೆ ಕಿಡಿಕಾರುವ ಜಾನ್ ಮಕ್ಕಳಿಗೆ ಅವರ ತಾಯಿಯ ಸಾವಿನ ಬಗ್ಗೆ ಹೇಳದೆ ಇರುವುದು ತಪ್ಪು ಎಂದು ಕೂಗುತ್ತಾನೆ. ಇಂತಹ ಸಮಯದಲ್ಲಿ ಮಕ್ಕಳನ್ನು ಟ್ರಿಪ್ ಗೆ ಕರೆದೊಯ್ಯುತ್ತಿರುವ ಅಣ್ಣನ ನಿರ್ಧಾರ ಹುಚ್ಚುತನ ಎಂದೂ ಹೇಳಿ ತಾನೇ ಅವರಿಗೆ ನಿಜ ಹೇಳುತ್ತೇನೆಂದು ಮುಂದುವರೆಯುತ್ತಾನೆ. ಆದರೆ ತಮ್ಮನನ್ನು ಬಲವಂತದಿಂದ ತಡೆಹಿಡಿದು, ಈಗಲೇ ಅವರಿಗೆ ವಿಷಯ ಹೇಳಕೂಡದೆಂದು ಅವರಿಗೆ ತಾನೇ ಆ ಸುದ್ದಿ ಮುಟ್ಟಿಸುವೆನೆಂದು ಹೇಳಿ ಈ ವಿಷಯದಲ್ಲಿ ದೂರ ಇರುವಂತೆ ತಮ್ಮನಿಗೆ ಹೇಳುತ್ತಾನೆ. ಮಕ್ಕಳು ಇಷ್ಟಪಡುವ ಜಾಗಕ್ಕೆ ಹೋಗಿ ಅವರು ಸಂತಸಪಡುವ ಮುನ್ನವೇ ತಮ್ಮ ಜಾನ್ ನಿಜ ಹೇಳಿದರೆ ಎಂದು ಆತಂಕಪಡುತ್ತ ಆ ನಡುರಾತ್ರಿಯಲ್ಲಿಯೇ ಮಲಗಿರುವ ಮಕ್ಕಳನ್ನು ಎಬ್ಬಿಸಿ, ಚಿಕ್ಕಪ್ಪನಿಗೆ ವಿದಾಯ ಹೇಳಲು ಅವಕಾಶ ಕೊಡದೆ ಕೂಡಲೇ ಕಾರಿನಲ್ಲಿ ಕೂಡುವಂತೆ ಸೂಚಿಸಿ ಆ ಕ್ಷಣವೇ ಪ್ರಯಾಣ ಮುಂದುವರೆಸುತ್ತಾನೆ.

grace is gone movie1ಪ್ರಯಾಣದ ಮಧ್ಯೆ ಮಗಳು ಹೈಡಿಗೆ ಇನ್ಸೋಮ್ನಿಯಾ ಇದೆಯೆಂಬುದನ್ನು ಮೊದಲ ಬಾರಿಗೆ ಅರಿಯುತ್ತಾನೆ. ರಾತ್ರಿ ನಿದ್ರೆ ಹತ್ತದಿದ್ದಾಗ ಒಬ್ಬಳೇ ಹೊರಹೋಗದೆ ತನ್ನನ್ನು ಎಬ್ಬಿಸಲು ಸೂಚಿಸುತ್ತಾನೆ. ಏಕೆಂದು ಮಗಳು ಪ್ರಶ್ನಿಸಿದಾಗ ಆ ಸಮಯದಲ್ಲಿ ನಾನು ನಿನ್ನೊಂದಿಗೆ ಮಾತನಾಡುತ್ತೇನೆ ಎನ್ನುತ್ತಾನೆ. ನಡುರಾತ್ರಿ ಏಳದ ತಂದೆ ಇನ್ನು ಮುಂದೆ ತನಗೆ ನಿದ್ರೆ ಹತ್ತದಿದ್ದರೆ ಎದ್ದು ತನ್ನೊಂದಿಗೆ ಹರಟುವೆನೆಂದು ಹೇಳುವುದನ್ನು ಕೇಳಿ ನಿಜಕ್ಕೂ ಆ ಸಮಯದಲ್ಲಿ ನೀನು ಮಾತನಾಡುವೆಯ ಎಂದು ಹೈಡಿ ಖಾತರಿಪಡಿಸಿಕೊಳ್ಳುತ್ತಾಳೆ.

ಪ್ರಯಾಣದ ಮಾರ್ಗದಲ್ಲಿ ಬರುವ ಅಂಗಡಿಯಲ್ಲಿ ಮಕ್ಕಳಿಗೆ ಹೊಸ ಬಟ್ಟೆಗಳನ್ನು ಕೊಡಿಸುತ್ತಾನೆ. ಮತ್ತೇನು ಬೇಕಾದರೂ ತೆಗೆದುಕೊಳ್ಳಿ ಎಂದು ಹೇಳುತ್ತಾನೆ. ಈ ವರೆಗೂ ಮಕ್ಕಳು ಕಿವಿಯಲ್ಲಿ ಓಲೆ ತೊಡಲು ಕಿವಿಯಲ್ಲಿ ತೂತು ಮಾಡಿಸಬೇಕೆಂದು ಕೇಳುತ್ತಿದ್ದಾಗಲೆಲ್ಲ , ನೀವಿನ್ನೂ ಚಿಕ್ಕವರು, ಹದಿಮೂರು ವರ್ಷಕ್ಕೆ ಬರುವ ತನಕ ಕಿವಿಯಲ್ಲಿ ತೂತು ಮಾಡಿಸಲು ಒಪ್ಪುವುದಿಲ್ಲ ಎನ್ನುತ್ತಿದ್ದ ಸ್ಟೇನ್ಲಿ ಈಗ ಅಂಗಡಿಯಲ್ಲಿದ್ದ ಓಲೆಗಳನ್ನು ಕೈಯಲ್ಲಿ ಹಿಡಿದು ಅವುಗಳನ್ನು ತೊಡುತ್ತೇವೆಂದು ಮಕ್ಕಳು ಆಸೆಪಟ್ಟಾಗ ಅಲ್ಲಿಯೇ ಅವರ ಕಿವಿಗಳಿಗೆ ತೂತು ಮಾಡಿಸಿ ಅವರ ಸಂತಸಕ್ಕೆ ಅಡ್ಡ ಬರದೆ ಅವರನ್ನು ಖುಷಿ ಪಡಿಸುವ ಮತ್ತೊಂದು ಪ್ರಯತ್ನ ಮಾಡಿ ಸಮಾಧಾನ ಪಡುತ್ತಾನೆ.

ಮಕ್ಕಳ ನಗು, ನಿರ್ಮಲ ಮನಸ್ಸನ್ನು ಕದಡುವ ಸಮಯ ಹತ್ತಿರ ಬರುತ್ತಿದ್ದಂತೆ ಧೈರ್ಯಗೆಟ್ಟು ಅಂಗಡಿಯಿಂದ ಹೊರಬಂದು ಮತ್ತೊಮ್ಮೆ ಆನ್ಸರಿಂಗ್ ಮಶಿನ್ ಗೆ ಫೋನ್ ಮಾಡಿ ರೆಕಾರ್ಡ್ ಆಗಿರುವ ಗ್ರೇಸ್ ಳ ಧ್ವನಿಯನ್ನು ಕೇಳುತ್ತ , ತಾನು ಎಲ್ಲವನ್ನೂ ಅಸ್ತವ್ಯಸ್ತಗೊಳಿಸಿಬಿಟ್ಟಿದ್ದೇನೆಂದು ರೋದಿಸುತ್ತಾನೆ. ಈ ಮಕ್ಕಳೊಂದಿಗೆ ಹೇಗೆ ಮಾತನಾಡಬೇಕೆಂದು ತಿಳಿಯುತ್ತಲೇ ಇಲ್ಲವೆಂದೂ ಈ ಸಮಯದಲ್ಲಿ ಗ್ರೇಸ್ ತನ್ನ ಸಹಾಯಕ್ಕೆ ಬರಬೇಕೆಂದು ಕಣ್ಣೀರಿಡುತ್ತಾನೆ. ಅಷ್ಟರಲ್ಲಿ ಹೊರಬರುವ ಮಕ್ಕಳಿಗೆ ಅವರ ಕ್ಲಾಸ್ ಟೀಚರ್ ನೊಂದಿಗೆ ಶಾಲೆಯ ಹೋಂವರ್ಕ್ ಕುರಿತಾಗಿ ಮಾತನಾಡುತ್ತಿದ್ದೆನೆಂದು
ಮತ್ತೊಮ್ಮೆ ಸುಳ್ಳು ಹೇಳಿ ಕಾರ್ ಹತ್ತುತ್ತಾನೆ.

ತಂದೆಯ ಅಸಹಜ ವರ್ತನೆಯ ಬಗ್ಗೆ ಅನುಮಾನ ಪಡುವ ಹೈಡಿ , ಕಾರಿನಲ್ಲಿ ತಂದೆಗೆ ಕೆಲ ಪ್ರಶ್ನೆಗಳನ್ನು ಕೇಳುತ್ತ ಅವನ ಕೆಲಸದ ಬಗ್ಗೆ ವಿಚಾರಿಸುತ್ತಾಳೆ. ಹೀಗೆಲ್ಲ ಕೆಲಸದಿಂದ ರಜೆ ತೆಗೆದುಕೊಳ್ಳದ ತಂದೆಗೆ, ಇಷ್ಟು ದಿನ ಕೆಲಸಕ್ಕೆ ಹೋಗದಿರುವ ಕಾರಣ ಅವನನ್ನು ಕೆಲಸದಿಂದ ತೆಗೆದು ಹಾಕಿಲ್ಲ ತಾನೇ ಎಂದು ಖಚಿತ ಪಡಿಸಿಕೊಳ್ಳುತ್ತಾಳೆ. ಅವನ ಕೆಲಸ ಹೋದರೆ ಅಮ್ಮನಿಗೆ ದುಃಖವಾಗುತ್ತದೆ ಎಂದೂ ನೆನಪಿಸುತ್ತಾಳೆ. ತನ್ನ ಕೆಲಸ ಹೋಗಿಲ್ಲವೆಂದೂ , ಅದು ಹಾಗೆಲ್ಲ ಹೋಗುವುದೂ ಇಲ್ಲವೆಂದು ತಂದೆ ಆಶ್ವಾಸನೆ ಇತ್ತ ಮೇಲೆ ಸುಮ್ಮನಾಗುತ್ತಾಳೆ. ಅಮ್ಮ ಹೀಗೆ ಕೆಲಸದ ಮೇಲೆ ಮನೆಯಿಂದ ದೂರ ಉಳಿದಾಗ ಆಕೆ ಮನೆಯಲ್ಲಿಯೇ ಇರಬೇಕೆಂದು ಅನಿಸುತ್ತದೆಯೇನು ಎಂಬ ಮತ್ತೊಂದು ಪ್ರಶ್ನೆಯನ್ನು ತಂದೆಗೆ ಕೇಳುತ್ತಾಳೆ. ತನ್ನ ಮನಸ್ಸಿಗೆ ಯಾವಾಗಲೂ ಗ್ರೇಸ್ ಮನೆಯಲ್ಲಿಯೇ ತನ್ನ ಜೊತೆಗೆ ಇರಬೇಕೆನಿಸುತ್ತದೆ ಎನ್ನುವ ಸ್ಟೇನ್ಲಿ, ದೇಶಕ್ಕಾಗಿ ಮತ್ತು ಪ್ರಜೆಗಳ ಸುರಕ್ಷತೆಗಾಗಿ ಯುದ್ಧದಲ್ಲಿ ಭಾಗಿಯಾಗುವುದು ಆಕೆಯ ಕರ್ತವ್ಯ ಎಂದೂ ತಿಳಿಸುತ್ತಾನೆ.

ತಂದೆಯ ನಡವಳಿಕೆಯ ಬಗ್ಗೆ ಸಂಶಯ ತಾಳುವ ಹೈಡಿ, ರಾತ್ರಿ ಹೋಟೆಲ್ ತಲುಪಿದ ಮೇಲೆ ಶಾಲೆಗೆ ಫೋನ್ ಮಾಡಿ ತಾನು ಮತ್ತು ತಂಗಿ ಕೆಲ ದಿನ ಶಾಲೆಗೆ ಬರಲಾಗುವುದಿಲ್ಲವೆಂದು ತಿಳಿಸುತ್ತಾಳೆ. ಆದರೆ ಆಕೆಯ ಕ್ಲಾಸ್ ಟೀಚರ್ ಒಂದು ವರ್ಷ ಮೆಟರ್ನಿಟಿ ಲೀವ್ ಹಾಕಿದ್ದಾರೆಂದು ತಿಳಿಯುತ್ತಾಳೆ. ಅವರ ಬದಲು ಮಾತನಾಡುವ ಮತ್ತೊಬ್ಬ ಟೀಚರ್ ಸಾಮಾನ್ಯವಾದ ಕಟ್ಟುನಿಟ್ಟಿನ ಗಂಭೀರ ಧ್ವನಿಯಲ್ಲಿ ಮಾತನಾಡದೆ ಶಾಲೆ ತಪ್ಪಿಸುತ್ತೇವೆಂದು ಹೇಳಿದರೂ ಹೆಚ್ಚು ಪ್ರಶ್ನೆಗಳನ್ನು ಕೇಳದೆ ಕರುಣೆ ತೋರುವವರಂತೆ ತಮಗೆ ಅರ್ಥವಾಗುತ್ತದೆ ಎಂದಷ್ಟೇ ಹೇಳಿದಾಗ ಗೊಂದಲಕ್ಕೊಳಗಾಗುತ್ತಾಳೆ. ತನ್ನ ಕ್ಲಾಸ್ ಟೀಚರ್ ಲೀವ್ ಮೇಲಿರುವುದರಿಂದ ತಂದೆ ಯಾರೊಂದಿಗೆ ಮಾತನಾಡಿದರೆಂಬ ಅನುಮಾನವೂ ಆಕೆಯನ್ನು ಕಾಡುತ್ತದೆ. ರೂಮಿನಿಂದ ಹೊರ ಹೋಗಿ ಒಬ್ಬಳೇ ಇಡೀ ರಾತ್ರಿ ರಸ್ತೆಯ ಬದಿಯಲ್ಲಿ ಕುಳಿತು ಏನೋ ನಡೆದಿದೆ ಎಂದು ಊಹಿಸಿ ಚಿಂತೆಗೀಡಾಗುತ್ತಾಳೆ.

ಮುಂಜಾನೆ ಎದ್ದು ಮಗಳ ಬಳಿ ಹೋಗುವ ಸ್ಟೇನ್ಲಿ ಆಕೆ ಒಬ್ಬಳೇ ಹೀಗೆ ಹೊರಬರಬಾರದಿತ್ತೆಂದು, ರಾತ್ರಿ ನಿದ್ರೆ ಬರದಿದ್ದರೆ ತನ್ನನ್ನು ಎಬ್ಬಿಸಬೇಕಿತ್ತೆಂದು ಹೇಳಿ, ಆಕೆ ಹೇಗಿದ್ದಾಳೆಂದು ವಿಚಾರಿಸುತ್ತಾನೆ. ಹೈಡಿ ತಂದೆಗೆ ಅವನ ಬಗ್ಗೆ ವಿಚಾರಿಸುತ್ತ ಎಲ್ಲವೂ ಸರಿಯಿದೆ ತಾನೇ ಎಂದು ಅಧೈರ್ಯದಿಂದ ಕೇಳುತ್ತಾಳೆ. ಆಕೆಯ ಕಣ್ಣುಗಳಲ್ಲಿನ ಆತಂಕವನ್ನು ದೂರ ಮಾಡುವಂತೆ, ಎಲ್ಲವೂ ಸರಿಯಿದೆ ಮತ್ತು ಈ ದಿನ ಎಲ್ಲರೂ ತಮ್ಮ ಇಷ್ಟದ ಜಾಗಕ್ಕೆ ಹೋಗಬೇಕಿರುವುದರಿಂದ ಡಾನ್ ತುಂಬಾ ಉತ್ಸಾಹದಲ್ಲಿದ್ದಾಳೆಂದೂ , ಹೀಗೆ ಪ್ರಶ್ನಿಸುತ್ತ ಉದಾಸೀನತೆಯಿಂದ ಇರುವುದರ ಬದಲು ಈ ದಿನ ಖುಷಿಯಿಂದ ಕಳೆಯಬೇಕೆಂದು ಮಗಳಿಗೆ ತಿಳಿಸುತ್ತಾನೆ.

grace is gone3ಮೂವರೂ ಎಂಚಾಂಟೆಡ್ ಗಾರ್ಡನ್ಸ್ ನಲ್ಲಿ ಮೋಜು ಮಾಡಿ, ನಗುತ್ತ ಕಾಲ ಕಳೆಯುತ್ತಾರೆ. ಇಡೀ ದಿನ ಸಂತಸದಲ್ಲಿ ಮುಳುಗುತ್ತಾರೆ. ಆದರೆ ಕಡೆಗೂ ಹಿಂತಿರುಗಿ ಮನೆಗೆ ಹೋಗುವ ಸಮಯ ಬಂದೇ ಬಿಡುತ್ತದೆ. ಮನೆಗೆ ಮರಳುವ ಮುನ್ನ ಮಕ್ಕಳಿಗೆ ನಿಜ ಹೇಳಲೇಬೇಕಾದ ಘಳಿಗೆ ಬಂದೇಬಿಡುತ್ತದೆ. ಊರಿಗೆ ತಲುಪುವ ಮಾರ್ಗದಲ್ಲಿ ಸಿಗುವ ಬೀಚ್ ಒಂದಕ್ಕೆ ಮಕ್ಕಳನ್ನು ಕರೆದೊಯ್ದು, ತಾನು ಮತ್ತು ಗ್ರೇಸ್ ಮಕ್ಕಳಿಬ್ಬರನ್ನೂ ತುಂಬಾ ಪ್ರೀತಿಸುತ್ತೇವೆಂದೂ , ಅದು ಯಾವುದೇ ಸಂದರ್ಭದಲ್ಲಿಯೂ ಬದಲಾಗುವುದಿಲ್ಲವೆಂದೂ ಅರಹುತ್ತಾನೆ. ಸೇನೆಯಲ್ಲಿ ಕೆಲಸ ಮಾಡುವ ಯೋಧರು ಕೆಲವೊಮ್ಮೆ ತುಂಬಾ ಗಾಯಕ್ಕೆ ಒಳಗಾಗುತ್ತಾರೆ, ಹಾಗೆ ವಿಪರೀತ ಗಾಯವಾದಾಗ ಪ್ರಾಣವನ್ನೂ ಬಿಡುತ್ತಾರೆ ಎನ್ನುತ್ತಾನೆ. ನಿಮ್ಮ ಅಮ್ಮ ಗ್ರೇಸ್ ಳಿಗೂ ಯುದ್ಧ ಮಾಡುವಾಗ ಅತಿಯಾಗಿ ಗಾಯವಾಗಿತ್ತು, ದೇಹಕ್ಕೆ ಬಹಳ ಪೆಟ್ಟಾಗಿತ್ತು , ಅವಳನ್ನು ಮತ್ತೆ ಜೋಡಿಸಿ ಸರಿ ಮಾಡಲು ಆಗಲಿಲ್ಲವಾದ್ದರಿಂದ ಆಕೆ ಪ್ರಾಣ ಬಿಟ್ಟಳೆಂದು ನಿಧಾನವಾಗಿ ಹೇಳುತ್ತಾನೆ. ಜೋರಾಗಿ ಅಳುವ ಮಕ್ಕಳನ್ನು ಅಪ್ಪಿ ಮೊದಲ ಬಾರಿಗೆ ಅವರ ಮುಂದೆ ಮತ್ತು ಅವರೊಂದಿಗೆ ಅಳುತ್ತಾನೆ.

ಗ್ರೇಸ್ ಳ ಸಮಾಧಿಯ ಮುಂದೆ ಮೂವರೂ ನಿಂತು ಡಾನ್ ನ ಕೈ ಗಡಿಯಾರದ ಅಲಾರಾಂ ಗಂಟೆ ಬಾರಿಸಿದಾಗ ಮೂವರೂ ಕಣ್ಣು ಮುಚ್ಚಿ ಗ್ರೇಸ್ ಳನ್ನು ನೆನೆಯುವುದರೊಂದಿಗೆ ಸಿನೆಮಾ ಮುಕ್ತಾಯವಾಗುತ್ತದೆ.

ಒಂದು ಜೀವಿಯ ಅಂತ್ಯ ಕೇವಲ ಆ ಜೀವಿಯ ದೈಹಿಕ ಅಂತ್ಯವಾಗಿರದೆ ಆ ಜೀವಿಯೊಂದಿಗೆ ಬಾಳುವವರ ಒಡನಾಟ, ಅವಲಂಬನೆ , ನಂಬಿಕೆಯ ಅಂತ್ಯವೂ ಆಗಿಬಿಡುತ್ತದೆ. ಜೀವನದ ವಿಚಿತ್ರ ಸನ್ನಿವೇಶಗಳಿಗೆ ಸಿಲುಕಿ ತಾಯಿಯ ಸ್ಥಾನವನ್ನೂ ತುಂಬುವ ಪ್ರಯತ್ನ ಮಾಡುತ್ತ , ಒಂಟಿಯಾಗಿ ಮಕ್ಕಳ ಜವಾಬ್ದಾರಿಯನ್ನು ಹೊತ್ತಿರುವ ಅಪ್ಪಂದಿರಿಗೆ ಒಂದು ವಿಶೇಷ ಸಲಾಂ! ಎಲ್ಲ ಅಪ್ಪಂದಿರಿಗೂ ,
Happy Father’s Day!

‍ಲೇಖಕರು admin

June 19, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. suresh rajamane, rannabelagali

    ಕಥೆ ತುಂಬಾ ಮನಕಲಕುತ್ತದೆ ಮೆಡಮ್
    ನಮ್ಮ ಬರಹ ಆ ಚಿ್ರವನ್ನು ನೋಡಿರದ ನನಗೆ ಒಂದು ದೃಷ್ಟಾಂತವನ್ನೆ ಕಣ್ಮುಂದಿರಿಸಿರು..
    ಸೂಪರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: