ಹೈದರಾಬಾದ್ ಕರ್ನಾಟಕ ಹಿಂದುಳಿದ ಪ್ರದೇಶ. ಯಾಕೆ ಹಿಂದುಳಿದಿದೆ ಎಂದು ಈ ಭಾಗದ ಬರಹಗಾರರು ಯೋಚಿಸುತ್ತಲೇ ಇದ್ದಾರೆ. ಚಾರಿತ್ರಿಕ ಸಂಗತಿಗಳಲ್ಲಿ ‘ಹಿಂದುಳಿಯುವಿಕೆ’ಯನ್ನು ಹುಡುಕುತ್ತಿದ್ದಾರೆ. ಇದಕ್ಕೆ ಸಾಹಿತ್ಯ ರಚನೆಯು ಹೊರತಾಗಿಲ್ಲ. ಸಾಹಿತ್ಯವು ಚರಿತ್ರಿಯಿಂದ ಪ್ರತ್ಯೇಕವಾಗಿ ನಿಂತಿರುವುದಿಲ್ಲ. ಚರಿತ್ರೆಗಿಂತ ಭಿನ್ನವಾದ ವಾಸ್ತವವೊಂದನ್ನು ಕಟ್ಟಿಕೊಡುತ್ತಿರುತ್ತದೆ. ಅದು ಮತ್ತೊಂದು ರೀತಿಯ ಚರಿತ್ರೆಯ ಅಂಶಗಳನ್ನು ಬಿಚ್ಚಿಡುತ್ತದೆ.
ಚರಿತ್ರೆ ಮತ್ತು ಸಾಹಿತ್ಯದ ಸಂಬಂಧ ಮತ್ತು ಅವುಗಳ ಅನನ್ಯತೆಯನ್ನು ಹಳೆಮನೆ ರಾಜಶೇಖರರವರು ಈ ಅಧ್ಯಯನದಲ್ಲಿ ಶೋಧಿಸಿದ್ದಾರೆ. ಹೈದರಾಬಾದ್ ಕರ್ನಾಟಕದ ಚರಿತ್ರೆ ಮತ್ತು ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ ಹೊಸ ಹೊಳವುಗಳನ್ನು ಕಟ್ಟಿಕೊಟ್ಟಿದ್ದಾರೆ. ಸಾಹಿತ್ಯದ ಮೂಲಕ ಚರಿತ್ರೆಯನ್ನು ನೋಡುವ ಪ್ರಯತ್ನ ಮಾಡಿದ್ದಾರೆ. ವಿಶೇಷವಾಗಿ ರಜಾಕಾರರನ್ನು ಕುರಿತ ಸಾಹಿತ್ಯ ಮತ್ತು ಚರಿತ್ರೆಯ ನಿಲುವುಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ.

ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ 1947ರಿಂದ 1948ರ ಅವಧಿಯ ಸಂದರ್ಭವನ್ನು ‘ಕರಾಳಯುಗ’ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ರಜಾಕಾರರು ಈ ಪ್ರದೇಶವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿರುತ್ತಾರೆ. ಈ ಕಾರಣದಿಂದ ನೂರಾರು ವರ್ಷಗಳ ಕಾಲ ಕೂಡಿ ಬಾಳಿದ ಹಿಂದೂ ಮುಸ್ಲಿಂ ಐಕ್ಯತೆಗೆ ಭಂಗ ತರುವ ಸಂಗತಿಯು ಇದಾಯಿತು. ಈ ಸಂದರ್ಭವನ್ನು ಹಳೆಮನೆಯವರು ಮತೀಯ ನೆಲೆಯಲ್ಲಿ ನೋಡದೆ ಚರಿತ್ರೆ ಮತ್ತು ಸಾಮಾಜಿಕತೆಯ ಮೂಲಕ ನೋಡಿದ್ದಾರೆ. ಚರಿತ್ರೆ ಮತ್ತು ಸಾಹಿತ್ಯದ ಸಂಬಂಧದ ಮೂಲಕ ವಾಸ್ತವವನ್ನರಿಯುವ ಪ್ರತ್ನ ಮಾಡಿದ್ದಾರೆ.




0 Comments