ಪತ್ರಕರ್ತ ಕೆ ಕರಿಸ್ವಾಮಿಯವರ ಈ ಬರಹಗಳು ಪತ್ರಿಕೋದ್ಯಮದ ತುರ್ತು ಮತ್ತು ವಿಷಯಗಳ ಅಗಾಧತೆಯನ್ನು ತೂಗಿಸುವ ಪ್ರಯತ್ನಗಳಾಗಿವೆ. ಕವಿ, ನಾಟಕಕಾರ ಮತ್ತು ಕಥೆಗಾರರೂ ಆದ ಕರಿಸ್ವಾಮಿ ಸಮಕಾಲೀನ ವಿಷಯಗಳ ಬಗ್ಗೆ ಬರೆದ ಹಾಗೆಯೇ ವ್ಯಕ್ತಿಗಳ ಬಗ್ಗೆಯೂ ಚುಟುಕಾಗಿ , ಚುರುಕಾಗಿ ಬರೆದಿದ್ದಾರೆ. ಕೆಲವು ಲೇಖನಗಳು ಸಂಕ್ಷಿಪ್ತವಾಗಿದ್ದೂ ಸಮಗ್ರವಾಗಿ ಮೂಡಿಬಂದಿವೆ.. ಆರ್ಥಿಕ ಹಿನ್ನಡೆ, ಮಠಗಳ ಸಂಖ್ಯೆ ಹೆಚ್ಚುವ ಹಿಂದಿನ ರಾಜಕೀಯ ಒತ್ತಡ , ಮಾಯಾವತಿಯ ಪ್ರತಿಮೆಯ ವ್ಯಸನದ ಬಗೆಗಿನ ಇವರ ಬರಹಗಳು ಇಂಥ ಸಾರ್ಥಕತೆಗೆ ಉದಾಹರಣೆಗಳಾಗಿವೆ. ಅಂದಂದೇ ಸಾಯುವ ಬರಹಗಳ ಜೊತೆಗೆಯೇ ಚಿರಂಜೀವಿಯಾಗಿ ಉಳಿಯುವ ಬರವಣಿಗೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತವೆ.
ಪ್ರಬಂಧದ ವಿದ್ವತ್ – ಗಾಂಭೀರ್ಯ ಮತ್ತು ಹರಟೆಯ ಆತ್ಮೀಯತೆ ಒಟ್ಟೊಟ್ಟಿಗೆ ಮೂಡಿಬಂದಾಗ ಪತ್ರಿಕಾ ಬರಹ ಚೆನ್ನ ಎನಿಸುತ್ತದೆ. ಇಲ್ಲಿನ ಎಲ್ಲ ಬರಹಗಳೂ ಈ ಹದವನ್ನು ದಕ್ಕಿಸಿಕೊಂಡಿವೆ ಎಂದು ಹೇಳಲಾಗದಿದ್ದರೂ, ಹದದ ಶೈಲಿಯ ಹಂಬಲ ಮತ್ತು ಹುಡುಕಾಟವನ್ನು ಈ ಸಂಕಲನ ಬಿಂಬಿಸುತ್ತದೆ. ಈ ಪುಸ್ತಕದಲ್ಲಿ ಮೂಡಿಬಂದಿರುವ ಕೆಲವು ಲೇಖನಗಳು ಕಾಲ ಸರಿದರೂ ಪ್ರಸ್ತುತವಾಗಿಯೇ ಉಳಿಯುವ ಗಟ್ಟಿತನವನ್ನು ತೋರುತ್ತವೆ.
-ಎಸ್ . ಆರ್. ರಾಮಕೃಷ್ಣ
ಸೀನಿಯರ್ ಎಡಿಟರ್, ಯಾಹೂ ಇಂಡಿಯ ನ್ಯೂಸ್




0 Comments