ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಸಿಎನ್ನಾರ್ ಅವರ ’ನೆರಳುಗಳ ಬೆನ್ನು ಹತ್ತಿ’

ಡಾ ಸಿ ಎನ್ ರಾಮಚಂದ್ರನ್ ಆತ್ಮಕಥೆ


ಅಭಿಜಾತ, ಆಧುನಿಕ ಮತ್ತು ಜಾನಪದ ಕಥನ ಸಾಹಿತ್ಯದ ವಿಮರ್ಶಕರಾಗಿ, ಕಥನಶಾಸ್ತ್ರದ ವಿದ್ವಾಂಸಕರಾಗಿ, ಕತೆಗಾರ- ಕಾದಂಬರಿಕಾರರಾಗಿ ಪ್ರಸಿದ್ಧರಾಗಿರುವ ಡಾ ಸಿ ಎನ್ ರಾಮಚಂದ್ರನ್ ಆತ್ಮಕಥನವನ್ನು ಪ್ರಕಟಿಸುವ ಮೂಲಕ ತಮ್ಮ ಸಾಹಿತ್ಯಿಕ ಜೀವನದ ಮತ್ತೊಂದು ಪ್ರಮುಖ ಘಟ್ಟವನ್ನು ತಲುಪಿದ್ದಾರೆ. ಕಥನ ‘ಜ್ಞಾನ’ವನ್ನು ‘ಪ್ರಯೋಗ’ಕ್ಕೆ ಒಡ್ಡಿಕೊಂಡು ಸಫಲರಾಗಿದ್ದಾರೆ. ಸಣ್ಣ ಗ್ರಾಮವೊಂದರಲ್ಲಿ ಸಾಂಪ್ರದಾಯಕ ಹಿನ್ನೆಲೆಯ ಬಡ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದ ಸಾಧಾರಣ ಬಾಲಕನೊಬ್ಬ ನಾಡಿನ ಓರ್ವ ಗಣ್ಯವ್ಯಕ್ತಿಯಾಗಿ ಬೆಳೆದ ಪ್ರಕ್ರಿಯೆಯನ್ನು ಈ ಕಥನವು ದಟ್ಟವಾದ ವಿವರಗಳಲ್ಲಿ ದಾಖಲಿಸುತ್ತದೆ.

ಚಿಲಕುಂದದಿಂದ ನ್ಯೂಯಾರ್ಕ್ ವರೆಗೆ ಹರಡಿಕೊಂಡಿರುವ ಈ ‘ರಾಮಾಯಣ’ದ ‘ಕಥಾನಾಯಕ’ನು ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯಗಳ ಕಲಿಕೆ, ಅಧ್ಯಾಪನ ಮತ್ತು ಸಂಶೋಧನೆಗಳ ನಿಮಿತ್ತವಾಗಿ ಹಲವು ಬಗೆಯ ಶಿಕ್ಷಣ ವ್ಯವಸ್ಥೆಗಳಿಗೆ ತೆರೆದುಕೊಂಡು. ಕರ್ನಾಟಕದ ಮತ್ತು ಕರ್ನಾಟಕದ ಹೊರಗಿನ ಅನೇಕ ಪ್ರಾ೦ತ್ಯಗಳ, ಏಷ್ಯ, ಆಫ್ರಿಕಾ ಮತ್ತು ಅಮೆರಿಕಗಳ ಹಲವು ಪ್ರದೇಶಗಳಲ್ಲಿನ ವೃತ್ತಿ ಮತ್ತು ವಾಸ್ತವ್ಯಗಳ ವೈವಿಧ್ಯಮಯ ಅನುಭವಗಳನ್ನು ಹೀರಿಕೊಂಡು ಪಕ್ವವಾದ ಹಾಗೂ ಪ್ರಬುದ್ಧವಾದ ಬಗೆಯು, ಅನಿರೀಕ್ಷಿತ ಪ್ರಸಂಗಗಳ, ರೋಚಕ ಸನ್ನಿವೇಶಗಳ, ಸ್ಫುಟವಾದ ವ್ಯಕ್ತಿಚಿತ್ರಗಳ ಮತ್ತು ಲೇಖಕರ ದ್ವಂದ್ವ-ತಳಮಳ-ತಲ್ಲಣ ಹಾಗೂ ಉಗ್ರವಾದ ಆತ್ಮವಿಮರ್ಶೆಗಳ ಬಹುರೂಪಿ ನಿರೂಪಣೆಗಳ ಮೂಲಕ ಕಣ್ಣಿಗೆ ಕಟ್ಟುವಂತಿದೆ.
ಅಂತರಂಗದ ವೀಕ್ಷಣೆ ಮತ್ತು ಬಹಿರಂಗದ ಅವಲೋಕನಗಳು ಹದವಾಗಿ ಬೆರೆತಿರುವ ಈ ಕಥನವು ಏಕಕಾಲದಲ್ಲಿ ಒಂದು ವ್ಯಕ್ತಿ ಪುರಾಣವಾಗಿಯೂ, ಸಂಸ್ಕೃತಿ ಕಥನವಾಗಿಯೂ ಆಗಿ ಗಮನ ಸೆಳೆಯುತ್ತದೆ.
ಟಿ . ಪಿ. ಅಶೋಕ
 

‍ಲೇಖಕರು avadhi

21 February, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading