ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಷ ಶೆಟ್ಟರ್ ಅವರ ’ಹಳಗನ್ನಡ’

ಷ. ಶೆಟ್ಟರ್

ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ
ಮೊದಲು ಸಹಸ್ರಮಾನದ ಶಾಸನಗಳ ಪ್ರಮಾಣ ಸಂಚಲನವನ್ನುಂಟು ಮಾಡುವಂತಹದು, ಏಕೆಂದರೆ ಇಷ್ಟೊಂದು ಸಂಖ್ಯೆಯ ಹಳಗನ್ನಡ ಶಾಸನಗಳಿರುವ ಕಲ್ಪನೆ ಈ ಮೊದಲು ನಮಗಿರಲಿಲ್ಲ. ಇನ್ನಾವ ದೇಶೀಭಾಷೆ ಅಥವಾ ಪ್ರದೇಶದಲ್ಲೂ ಈ ಪ್ರಮಾಣದ ಶಾಸನಗಲಿಲ್ಲವೆಂದಾಗ ಇವುಗಳ ಬಗ್ಗೆ ಆಸಕ್ತಿ ಇನ್ನೂ ಹೆಚ್ಚಾಗುವುದು. ಶಾಸನ ಇತಿಹಾಸದಲ್ಲಿ ತಮಿಳರಿಗೆ ವಿಶಿಷ್ಟ ಸ್ಥಾನವಿರುವುದು ನಿಜ. ಆದರೆ ಅದನ್ನವರು ಸಾಧಿಸಿಕೊಂಡದ್ದು ಎರಡನೇ ಸಹಸ್ರಮಾನದಲ್ಲಿ, ಮೊದಲ ಸಹಸ್ರಮಾನದಲ್ಲಲ್ಲ, ಎಂಬುದು ಮತ್ತೊಂದು ಹೊಸ ವಿಷಯ. ಈ ಎಲ್ಲ ಕಾರಣಗಳಿಂದಾಗಿ ಆರಂಭ ಕಾಲದ ದೇಶೀ ಅಕ್ಷರ ಇತಿಹಾಸದಲ್ಲಿ ಕೆಳದಖ್ಖಣಕ್ಕೆ, ವಿಶೇಷವಾಗಿ ಕರ್ನಾಟಕಕ್ಕೆ, ವಿಶಿಷ್ಟ ಸ್ಥಾನವಿರುವುದಂತೂ ಪ್ರಶ್ನಾತೀತ.
ಸಂಸ್ಕೃತೀಕರಣ ಮತ್ತು ಬ್ರಾಹ್ಮಣೀಕರಣ ಪ್ರಕ್ರಿಯೆ ಅವ್ಯಾಹತ ಹಾಗೂ ಸಾರ್ವತ್ರಿಕವಾಗಿ ಸಾಗಿತ್ತೆಂಬ ಸಿದ್ಧಾಂತವನ್ನು ಕೆಳದಖ್ಖಣದ ಅಪಾರ ಪ್ರಮಾಣದ ಆಕರಗಳು ಬೆಂಬಲಿಸುವುದಿಲ್ಲವೆಂಬುದಂತೂ ನಿಜ. ಮೊದಲ ಸಹಸ್ರಮಾನ ಕಾಲದ ಸಂಸ್ಕೃತ ಮತ್ತು ಕನ್ನಡ ಭಾಷಾ ವ್ಯವಹಾರಗಳ ಗೊತ್ತುಗುರಿಗಳೂ ಭಿನ್ನ ಭಿನ್ನವಾಗಿದ್ದವೆನಿಸುವುದು. ಸಂಸ್ಕೃತ ಭಾಷಾ ವ್ಯವಹಾರವು ಬಹುತೇಕ ಒಂದು ಸಮಾಜದ ಒಂದೇ ಬಗೆಯ ಕೊಡು ಕೊಳ್ಳುವಿಕೆಗೆ ಸೀಮಿತವಾಗಿದ್ದರೆ, ಕನ್ನಡ ಭಾಷಾ ವ್ಯವಹಾರವು ಬ್ರಾಹ್ಮಣರನ್ನೊಳಗೊಂಡು ಸಮಾಜದ ಎಲ್ಲಾ ವರ್ಗಗಳ – ಶೂದ್ರಾದಿ ಶುದ್ರರಾದ ಮಾದಿಗ ಮತ್ತು ಚರ್ಮಕಾರರನ್ನೊಳಗೊಂಡು- ಬಹುಮಖೀ ಕೊಡು ಕೊಳ್ಳುವಿಕೆಗೆ ವಿಸ್ತರಿಸಿಕೊಂಡಿತು. ಇಷ್ಟೇ ಸೋಜಿಗದ ಸಂಗತಿ ಎಂದರೆ ಈ ಕಾಲದ ಎರಡು ಸಹಸ್ರ ಕನ್ನಡ ಶಾಸನಗಳಲ್ಲಿ ಒಮ್ಮೆಯೂ ‘ವರ್ಣ’ ಪದ ಬಳಕೆಯಾಗದಿರುವುದು, ‘ಜಾತಿ’ ಪದವಿದ್ದರೂ ಅದು ‘ಜಾತ ಜನನ ‘, ಎಂಬ ಅರ್ಥದಲ್ಲಿ ಬಂದಿರುವುದು, ‘ಕುಲ’ ಪದವನ್ನು ವಂಶ ಅಥವಾ ಮನೆತನ (ಯಾದವ ಕುಲ) ಎಂಬ ಅರ್ಥದಲ್ಲಿ ಮಾತ್ರ ಬಳಸಿರುವುದು. ಅಂದರೆ ವೈದಿಕ ಸಾಮಾಜಿಕ ಶ್ರೇಣೀಕರಣಕ್ಕೆ ಸರಿಹೊಂದುವ ಅರ್ಥದಲ್ಲಿ ಈ ಮೂರೂ ಪದಗಳು ಬಳಕೆಯಾಗಿಲ್ಲವೆನ್ನಬಹುದು. ಇದರಿಂದಾಗಿ ಈವರೆಗೂ ನಾವು ನಿರ್ಮಿಸಿಕೊಂಡು ನಂಬುತ್ತಾ ಬಂದಿರುವ ವರ್ಣವ್ಯವಸ್ಥೆಯು ಗ್ರಾಂಥಿಕ-ಜ್ಞಾನವೋ ಅಥವಾ ವಾಸ್ತವ ವ್ಯವಸ್ಥೆಯೋ? ಎಂಬ ಭೂತಾಕಾರದ ಪ್ರಶ್ನೆಯೊಂದು ಉದ್ಭವಿಸಿದೆ. ಷ ಶೆಟ್ಟರ್ (ಪ್ರಸ್ತಾವನೆಯಿಂದ )

ಹೆಸರಿಗೆ ತಕ್ಕಂತೆ ನಮ್ಮ ತೆಲೆಮಾರಿನ ಪ್ರಾಧ್ಯಾಪಕ ಪರಿವಾರದಲ್ಲಿ ‘ಶ್ರೇಷ್ಠರು’ ಎನಿಸಿದರು ಪ್ರೊಫೆಸರ್ ಷ. ಶೆಟ್ಟರ್ ಬೋಧನೆಯಂತೆ ಬರಹದ ಮೂಲಕವೂ ಪ್ರಸಿದ್ಧರು. ಇವರ ಇತ್ತಿಚೀನ ಬರವಣಿಗೆಯಾಗಿರುವ ‘ಹಳಗನ್ನಡ ಲಿಪಿ, ಲಿಪಿಕಾರ, ಲಿಪಿವ್ಯವಸಾಯ ‘ವು ಮಹತ್ವಾಕಾಂಕ್ಷೆಯ ಕೃತಿಯಾಗಿದೆ; ಶೀರ್ಷಿಕೆಯನ್ನೂ ಮೀರಿ ಬೆಳೆದ ಅಭ್ಯಾಸವಾಗಿದೆ.
ಕಳೆದ ನೂರು ವರ್ಷಗಳಿಂದ ಕನ್ನಡ ನಾಡಿನ ಶಾಸನಗಳನ್ನು ಬಳಸಿಕೊಂಡು ಅನೇಕ ವಿದ್ವಾಂಸರು ಕೃತಿ ರಚಿಸಿದ್ದುಂಟು. ಇವೇ ಶಾಸನಗಳನ್ನು ಬಳಸಿಕೊಂಡು ಪ್ರೊ ಶೆಟ್ಟರ್ ಇಲ್ಲಿ ಭಿನ್ನ ಫಲಿತಾಂಶ ಪ್ರಕಟಿಸಿದ್ದಾರೆ. ನಿಜವಾದ ಸಂಶೋಧಕನಿಗೆ ಹೊಸ ಆಕರ ಬೇಕೆಂದೇನೂ ಇಲ್ಲ. ತನ್ನ ವ್ಯಾಖ್ಯಾನ ಸಾಮರ್ಥ್ಯದಿಂದ ಅವನು ಹಳೆಯ ಆಕರಗಳಿಂದಲೇ ಹೊಸ ಸಂಶೋಧನೆಯಲ್ಲಿ ಅಧ್ಯಯನ ವಿಧಾನಕ್ಕೆ ( methodology) ಮಹತ್ವದ ಸ್ಥಾನವಿದೆ. ಈವರೆಗೂ ಕನ್ನಡ ಶಾಸನಗಳ ಅಧ್ಯಯನದಲ್ಲಿ ಸಾಂಪ್ರದಾಯಿಕ ಸಂಶೋಧನ ವಿಧಾನವೊಂದು ರೂಢಿಯಲ್ಲಿದ್ದಿತು. ಇದಕ್ಕೆ ಭಿನ್ನವೆಂಬಂತೆ ಆಕರನಿಷ್ಠ – ವಿಶ್ಲೇಷಣನಿಷ್ಟ-ವ್ಯಾಖ್ಯಾನನಿಷ್ಠ, ಇನ್ನೂ ಮುಖ್ಯವಾಗಿ ಕಾಲದೇಶಗಳನ್ನು ಗಮನಿಸುತ್ತ ಮುಂದುವರಿದ ‘ಸಂಖ್ಯಾನಿಷ್ಠ ‘ ಶೋಧದ ಅಸಾಂಪ್ರದಾಯಿಕ ಹಾಗೂ ಅಪೂರ್ವ ಸಂಶೋಧನ ವಿಧಾನವೊಂದು ಇಲ್ಲಿ ತೆರೆದುಕೊಂಡಿದೆ. ‘ನಾವು ಶಿಲ್ಪವನ್ನು ಅಭ್ಯಾಸಿಸಿದ್ದೇವೆ, ಶಿಲ್ಪಗಳನ್ನು ಮರೆತಿದ್ದೇವೆ; ಲಿಪಿಯನ್ನು ಅಭ್ಯಸಿಸಿದ್ದೇವೆ, ಲಿಪಿಕಾರರನ್ನು ಮರೆತಿದ್ದೇವೆ’ ಎಂದು ಮೇಲಿಂದ ಮೇಲೆ ಎಚ್ಚರಿಸುತ್ತ ಬಂದಿರುವ ಪ್ರೊ ಶೆಟ್ಟರ್, ಈಗ ಮೊದಲ ಸಹಸ್ರಮಾನದ ನಮ್ಮ ಶಾಸನ ಲಿಪಿಕಾರರನ್ನು ಕುರಿತು ಇನ್ನೊಬ್ಬರು ಕೈಯಿಡದಂತೆ ಪೂರ್ಣ ಅಭ್ಯಾಸವನ್ನು ಪೂರೈಸಿದ್ದಾರೆ.
ಎಂ ಎಂ ಕಲಬುರ್ಗಿ (ಮುನ್ನುಡಿಯಿಂದ )
ಪ್ರಕಾಶಕರು: ಅಭಿನವ
ಬೆಲೆ : ರೂ. ೬೦೦/-
 

‍ಲೇಖಕರು avadhi

17 March, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading