ಆರ್. ಡಿ. ಹೆಗಡೆ ಆಲ್ಮನೆ
ವೃತ್ತಿಯಿಂದ ವೈದ್ಯರಾಗಿರುವ ಡಾ| ಕಣಾದ ರಾಘವ ಉತ್ತರಕನ್ನಡ ಜಿಲ್ಲೆಯವರು. ಸದ್ಯ ಬೆಂಗಳೂರಿನಲ್ಲಿ ಉದ್ಯೋಗಿ. ಇವರು ನೂರಾರು ರುಬಾಯತ್‌ಗಳನ್ನೂ ಹಗುರ ಕವಿತೆಗಳನ್ನೂ ಹದಿನೇಳು/ ಹದಿನೆಂಟು ಕತೆಗಳನ್ನೂ ಬರೆದಿದ್ದು ಬರವಣಿಗೆಯ ತುಂಬು ಉತ್ಸಾಹದಲ್ಲಿರುವಂತೆ ಕಾಣುತ್ತಿದೆ. ಕಣಾದ ಮೂಲತಃ ಕತೆಗಾರರು. ಈ ಸಾಲಿನ ‘ಛಂದ’ ಕಥಾಸ್ಪರ್ಧೆಯಲ್ಲಿ ಇವರ ‘ಮೊದಲ ಮಳೆಯ ಮಣ್ಣು ’ ಕಥಾಸಂಕಲನಕ್ಕೆ ಪ್ರಥಮ ಬಹುಮಾನ ಬಂದಿದೆ ಹಾಗು, ಈ ಸಂಕಲನ ‘ಛಂದ’ದ ಹೆಮ್ಮೆಯ ಪ್ರಕಟಣೆಗಳಲ್ಲಿ ಒಂದು. ಕಣಾದ ಇದೇ ಜಿಲ್ಲೆಯ ಮುಂಡಗೋಡ ತಾಲೂಕಿನ ಚಿಪಗೇರಿ ಊರಿನವರು. ಸಂದೀಪ ನಾಯಕ, ಪ್ರೇಮಾ ಭಟ್ಟ ಕಲ್ಲಬ್ಬೆ, ಎನ್ವಿ ವೈದ್ಯ ಹೆಗ್ಗಾರು, ಲೀನಾ ಭಟ್ಟ, ನವೀನ ಗಂಗೋತ್ರಿ, ರಾಜೀವ ನಾರಾಯಣ ನಾಯಕ, ಪದ್ಮನಾಭ ಭಟ್ಟ ಶೇವ್ಕಾರ್ ಮೊದಲಾದ ಈ ದಶಕದ, ಇತ್ತೀಚಿನ, ಈ ಜಿಲ್ಲೆಯ ಕತೆಗಾರರ ನಡುವೆ ಕಣಾದ ರಾಘವರದು ಭಿನ್ನವಾದ ಮತ್ತು ತಾನೇ ಅರಸಿಕೊಂಡ ದನಿ. ಈ ವರೆಗೆ ಪ್ರಕಟವಾದ ಇವರ ಕತೆಗಳಲ್ಲಿ ಉತ್ತರಕನ್ನಡದ ಸಾಂಸ್ಕೃತಿಕ ಪ್ರಭಾವ ಕಡಿಮೆ. ಈ ದೃಷ್ಟಿಯಲ್ಲಿ ಕೂಡ ಇವರು ಉಳಿದೆಲ್ಲ ಲೇಖಕರಿಂದ ಪ್ರತ್ಯೇಕತೆ ಉಳಿಸಿಕೊಳ್ಳುತ್ತಾರೆ.
‘ಮೊದಲ ಮಳೆಯ ಮಣ್ಣು’ ಸಂಕಲನಕ್ಕೆ ಮುನ್ನುಡಿ ಬರೆದವರು ಶ್ರೀ ಕೆ. ಸತ್ಯನಾರಾಯಣ. ಅವರಿಗೆ ಕಣಾದರ ಕತೆಗಳು ಇಷ್ಟವಾಗಲು ಕಾರಣ ಇವರ ಒಟ್ಟಾರೆ ಕತೆಗಳನ್ನು ಓದಿದಾಗ ಗಮನ ಸೆಳೆಯುವ “ಬರಹದ ವಸ್ತು ಮತ್ತು ಅನುಭವ ವೈವಿಧ್ಯ”. ಇದು ಕಣಾದರ ಕತೆಗಳ ಬಗ್ಗೆ ನಿರ್ವಿವಾದವಾಗಿ ಯಾವುದೇ ಓದುಗ ಕಾಣುವ ಸಂಗತಿ. ಏಕೆಂದರೆ ಹೊಸ ಹೊಸ ಕಥಾವಸ್ತುಗಳ ಹುಡುಕಾಟ ಮತ್ತು ವಿಭಿನ್ನ ಅನುಭವ ನೀಡುವ ನೆಲೆಯಲ್ಲಿ ಈ ಕತೆಗಳು ಬೆಳೆಯುವುದು ಕಣಾದರ ಕಥೆಗಳ ಚೆಹರೆಯೇ ಆಗಿದೆ. ‘ದಿವಾಸ್ವಾಪ’ದಂತಹ ಕತೆ ದುರ್ಬಲ ಪರಿಣಾಮದ ಕತೆಯಾಗಿದ್ದರೂ ಕೂಡ ಕತೆಯ ಮೂಲಕ ಹೊಸ ಅನುಭವದ ಶೋಧಕ್ಕೆ ಇಳಿಯುವ ಕತೆಗಾರ ಇಂತಹ ಸಾಫಲ್ಯ-ವೈಫಲ್ಯಗಳನ್ನು ಮೇಲೆಳೆದುಕೊಳ್ಳಲೇಬೇಕಾಗುತ್ತದೆ. ಇದು ಅವರ ಪ್ರಯೋಗದ ಸೋಲಷ್ಟೇ. ‘ಅಕ್ಬಚ್ಚಿ’ ಕತೆಯ ರಾಘು ಮತ್ತು ಅಕ್ಬಚ್ಚಿಯರ ದಾಹಗಳ ವಿರುದ್ಧ ಸೆಳೆತದಲ್ಲಿ, ಅಕ್ಬಚ್ಚಿಯಿಂದ ತಪ್ಪಿಸಿಕೊಳ್ಳುವ ರಾಘು ಆಕೆಯನ್ನು ‘ಅಕ್ಕ ಅಕ್ಕ’ ಎಂದು ಕರೆಯುತ್ತ ಕಾರ್ಯಾತುರದಲ್ಲಿ ಓಟಕೀಳುತ್ತಾನೆ, ಅವನ ಹದಿಹರೆಯದ ಮುಗ್ಧತೆ ಗೆಲ್ಲುತ್ತದೆ. ‘ಕ್ಯಾನ್‌ವಾಸ್ ಹೆಜ್ಜೆಗಳು’ ಹಲವು ಅರ್ಥದಲ್ಲಿ ಹೊಸ ಕತೆ; ಹುಟ್ಟಿನಿಂದ ಬ್ರಾಹ್ಮಣನಾಗಿದ್ದ ಕಿಟ್ಟಿಗೆ ತನ್ನ ಮೂಲವೇ ಮರೆತಂತಿದೆ; ಊರಿನ ಅಸಡ್ಡಾಳ ಜನರಿಗೆಲ್ಲ ಬೀರು, ಬ್ರ್ಯಾಂಡಿ,ಕೊಟ್ಟೆಗಳ ಸರಬರಾಜು ಮಾಡುತ್ತ ತನ್ನ ಬದುಕನ್ನ ರೂಪಿಸಿಕೊಳ್ಳಲಾರದ ಬುದ್ಧಿಗೇಡಿ. ‘ಚೇತನಗಂಧ’ ಕತೆಯ ಬುದ್ಧಿ ಏರುಪೇರಾದ ರಂಗಾಭಟ್ಟ ಮತ್ತು ಕಿವುಡಿ-ಮೂಕಿ ಚೇತನಾರ ಮದುವೆ ವಿಫಲತೆಯ ದುರಂತದಲ್ಲಿ ಮುಗಿಯುತ್ತದೆ. ‘ದೇಶಾಂತರ’ ಕತೆಯಲ್ಲಿ, ಅನ್ನವನ್ನು ಅರಸಿ ಶ್ರೀಲಂಕೆಯಿಂದ ಬೆಂಗಳೂರಿಗೆ ಬಂದ ಬಡ ಅಂತೋಣಿ ಅಯ್ಯಾಕುಟ್ಟನ್ ಕೊನೆಗೂ ಕೂಡಿಹಾಕಿಕೊಳ್ಳುವುದು ಕಷ್ಟಗಳನ್ನೇ. ಅವನ ‘ನಂಗ್ಯಾಕ್ ದುಡ್ಡು ಕಣ್ಣೇ ಕಾಣಲ್ವಲ್ಲ’ ಎನ್ನುವ ಮಾತು ಕಣ್ಣಿದ್ದವರಿಗೂ ಕಣ್ಣು ತೆರೆಸುವಂತಹುದು. ‘ಗಜಲುಗಳು’ ವಿಚಿತ್ರ ವ್ಯಾಮೋಹದ ಕತೆ, ಲಂಕೇಶರ ‘ಸ್ಟೆಲ್ಲಾ ಎಂಬ ಹುಡುಗಿ’ ಕತೆಯನ್ನು ನಡುನಡುವೆ ನೆನಪಿಸುವ ಈ ಕತೆಯ ವಸ್ತು ವಿಸ್ತಾರವಾಗಿದ್ದು ರೊಮ್ಯಾಂಟಿಕ್ ದನಿಯ ನಡುವಿನಿಂದಲೆ ವೈದ್ಯೆಯೊಬ್ಬಳ ಆಳದ ಕಷ್ಟಗಳ ಕಥನವಾಗುತ್ತದೆ. ‘ಇಳಿಹಗಲ ಮಂಜೂಷೆ’ ಕಲೆಯ ಬೆನ್ನು ಬಿದ್ದವನು ಕಷ್ಟಗಳ ನೆರವು ಯಾಚಿಸುತ್ತಾನೆ ಎನ್ನುವಂಥ ಕತೆ; ಆದರೂ ಈ ಕತೆ ಇಷ್ಟು ಮಾತ್ರವಲ್ಲ ಎನ್ನುವ ಭಾವನೆಯನ್ನು ಕೊನೆಯ ತನಕವೂ ಉಳಿಸಿಕೊಳ್ಳುತ್ತದೆ.‘ ಕುರಿಮಂದೀ ರೀ’ ಕತೆಯ ಸ್ವಾರಸ್ಯವೇ ಬೇರೆ; ಕತೆಯ ಹುಡುಗ ಮಂಟ್ಯಾ ತನ್ನ ಬದುಕಿನಲ್ಲಿ ಬದಲಾವಣೆ ಕಾಣದ,ಅದನ್ನು ಬಯಸಲೂ ಆಗದ ಆ ಬಗ್ಗೆ ಕನವರಿಕೆಯೂ ಇಲ್ಲದ ಹುಡುಗ; ಕತೆಯ ಆರಂಭದ ಪ್ಯಾರಾಗ್ರಾಫ್ ಕತೆಯ ಕೊನೆಯಲ್ಲಿ ಕೂಡ ಇಡಿಯಾಗಿಯೇ ಬಂದು ಬದುಕಿನ ಏಕತಾನತೆಯನ್ನು ಸೂಚಿಸುವ ತಂತ್ರ ಇಲ್ಲಿ ಹೊಸತು.‘ ನನ್ನ ಬೆಳಗು ನನ್ನದು’, ನಡುಪ್ರಾಯ ದಾಟಿದ ಗಂಡ ಬಸವರಾಜ ಕಸ-ಮುಸುರೆಯ ಬಸವಿಯ ತೆಕ್ಕೆಯಲ್ಲಿ ಬಿದ್ದಿರುವುದನ್ನು ಒಂದು ದಿವ್ಯ ಕ್ಷಣದ ಜ್ಞಾನೋದಯದಲ್ಲಿ ಕನಕಮ್ಮ ಒಪ್ಪಿಕೊಳ್ಳವುದನ್ನು ಚಿತ್ರಿಸುತ್ತದೆ. ಈ ಕತೆಯ ನಿರೂಪಣೆ ಮತ್ತು ವಸ್ತುವಿನ ನಿರ್ವಹಣೆಯ ಯಶಸ್ಸನ್ನು ಕನ್ನಡ ವಿಮರ್ಶಕರು ಹೊಸ ಮಾತಿನಲ್ಲಿ ಹೇಳಬೇಕಾದೀತು. ಇಬ್ಬರು ಮಕ್ಕಳ ಗೆಳೆತನವನ್ನು ಮೀರಿದ ಬಂಧದ ದಟ್ಟ ಚಿತ್ರಗಳ ಕತೆ ‘ನಟ್ಟಿರುಳ ಬೆಳಗು’. ‘ನೇಣಿಗೊಂದು ಸ್ವಗತ’ ಕತೆಯನ್ನು ಒಂದು ಕನಸಲ್ಲೆಂಬಂತೆ ಓದುಗ ಕೂಡ ಅನುಸರಿಸುತ್ತ ಆಸ್ವಾದಿಸಬೇಕಾಗುತ್ತದೆ; ಕನಸು ಮತ್ತು ಅನೂಹ್ಯ ಲಹರಿಗಳಲ್ಲಿ ಮಾತ್ರ ಸತ್ಯವನ್ನು ನೋಡಲು ಸಾಧ್ಯ, ಎಂಬ ಒಪ್ಪಗೆಯೊಡನೆ ಈ ಕತೆ ಬೆರಗಾಗಿಸುತ್ತದೆ. ‘ಶಲ್ಯ’ ಕತೆ ಚರಿತ್ರೆಯಿಂದ ಕೆಲವು ಸುಳಿವುಗಳನ್ನು ಪಡೆದು ವಿಸ್ತರಿಸಿ ಕಟ್ಟಿದ ಕತೆ; ಕತೆ ಓದುತ್ತ ಮಾಸ್ತಿಯವರ ಪ್ರಯೋಗಗಳು ನೆನಪಾದರೆ ಅಚ್ಚರಿಯಲ್ಲ.
ಕಣಾದರ ಪ್ರತಿಯೊಂದು ಕತೆಯ ವಸ್ತು ಹೇಗೆ ಬೇರೆಯೋ ಹಾಗೆಯೇ ಅವರ ಕತೆಗಳ ಪರಿಸರ, ಅನುಭವಗಳ ಹಿನ್ನೆಲೆ, ಕೂಡ ಬೇರೆ. ಜಯಂತರ ಕಥಾಶಿಲ್ಪದಂತೆ ಅನುಕರಣೆಗೆ ಸಾಧ್ಯವಲ್ಲದ‘ ಇನಿಮಿಟಬಲ್’ ಮಾದರಿ. ಶಿಲ್ಪಶೈಲಿಯ, ರೂಪಕಭಾಷೆ ಎನ್ನಬಹುದಾದ ಮಾದರಿ. ಈ ಶೈಲಿ ಹಾಗು ಈ ಕಥನಕಲೆಯ ಬಗ್ಗೆ ಒಂದು ಪ್ರತ್ಯೇಕ ಅವಲೋಕನದ ಅಗತ್ಯವಿದೆ. ಅದರೆ ಕತೆಯಿಂದ ಕತೆಗೆ ತನ್ನ ಅನುಭವವನ್ನು ಅಭಿವ್ಯಕ್ತಿಯ ಶಿಲ್ಪವನ್ನಾಗಿ ಬದಲಿಸಿಕೊಳ್ಳುವಲ್ಲಿ ಕಣಾದ ಒಂದು ಹೆಜ್ಜೆ ಮುಂದೆ ಎನ್ನಬಹುದು. ಸರ್ವಗ್ರಾಹಿಯಾದ ಈ ಎಚ್ಚರ ಈ ವರೆಗಂತೂ ಇವರ ಕತೆಗಳ ಮೇಲುಹೊದಿಕೆಯಾಗಿ ಕಣ್ಕಟ್ಟು ಕೆಲಸ ಮಾಡಿಲ್ಲ. ‘ಶಲ್ಯ’ ಕತೆಯಲ್ಲಿ ಎಚ್ಚರವಹಿಸಿದಂತೆ, ಬೇರೊಂದು ಶೈಲಿಗೆ ದಾಟದಿದ್ದರೆ, ಆಡಿದ ಮಾತುಗಳೇ ಬೆಡಗಾಗಿ ಅದೊಂದು ವ್ಯಸನವಾದೀತು. ಆದರೆ ಕಣಾದ ಗೆದ್ದಾರು ಎನಿಸುತ್ತಿದೆ. ‘ಕೆಂಡಸಂಪಿಗೆ ಬ್ಲಾಗ್’ನಲ್ಲಿ ಬಂದ ‘ಪ್ಯಾಂಪ್ಲೆಟ್ ಹುಡುಗ’ ಕತೆಯಲ್ಲಿ ಶೈಲಿಯಲ್ಲಿ ದಾಟಿಕೊಳ್ಳುವ ಪ್ರಯತ್ನ ರಿಪೀಟ್ ಆಗಿದೆ.
ಜಾಗತಿಕವಾಗಿ ಸಾಹಿತ್ಯದಲ್ಲಿ ಅಗ್ರಪಟ್ಟವಿರುವುದು ದುಃಖ, ಶೋಕ, ಆತ್ಮದ ತುಮುಲ, ಅಂತರಂಗದ ಹೊಯ್ದಾಟದ ವಸ್ತುಗಳುಳ್ಳ ದುರಂತ ಕಥನಗಳಿಗೇ. ಹಿಂದೆ ಪಶ್ಚಿಮದ ದೇಶಗಳಲ್ಲಿಯಂತೂ ದುರಂತ ನಾಟಕಗಳ ದೊಡ್ಡ ಪ್ರೇಕ್ಷಕ ಸಮೂಹವೇ ಇತ್ತು. ನಮ್ಮಲ್ಲಿ ಕೂಡ ನಾವು ಬೇರೆ ಮನಸ್ಥಿತಿಯಲ್ಲಿಲ್ಲ. ಯಾಕೆ ನಾವು ಸುಖಿಗಳಲ್ಲ? ನಮಗೆ ಸುಖದ ಕನಸೂ ಬೀಳುವುದಿಲ್ಲ? ನಮಗೆ ಸುಖದ ಕನಸು ಕಾಣಿಸುವವರೂ ಇಲ್ಲ? ಈಗೀಗ ಬರುತ್ತಿರುವ ಆರ್ಥಿಕ ಜಾಹೀರಾತು ಮಾತ್ರ ಯಾಕೆ ಸುಖದ ವ್ಯಾಪಾರಿಗಳಂತೆ ವಯ್ಯಾರ ತೋರುತ್ತಿವೆ? ಇಂಥ ಪ್ರಶ್ನೆಗಳು ಹತ್ತಾರು ಬಾರಿ ನನ್ನನ್ನು ಕಾಡಿವೆ. ಹೀಗೆ ಮಾತಾಡಿದವ ಇಲ್ಲಿ ಒಣ ವೇದಾಂತಿ ಎನ್ನಿಸಿಕೊಳ್ಳುತ್ತಾನೆ. ನನಗೆ ಅನೇಕ ಸಲ ಅನಿಸಿದ್ದಿದೆ ನಮ್ಮ ಸಾಹಿತ್ಯದಲ್ಲಾದರು ನಮಗೆ ವಾಸ್ತವದ ಚಿತ್ರಣದ ಜೊತೆಗೆ ಅವುಗಳನ್ನು ಉಲ್ಲಂಘಿಸಿ ಬರುವ ಕಿಂಡಿ ಕಾಣಿಸಬೇಕಿತ್ತು ಎಂದು. ಇದು ಕಣಾದರ ಕತೆಗೇ ಗುರಿಯಿಟ್ಟು ಹೇಳುವ ಮಾತಲ್ಲ. ಕಣಾದ ಆ ಕನಸು ಕಾಣಿಸುವ ಪ್ರತಿಭೆಯುಳ್ಳವರು ಎಂದಷ್ಟೆ ನಿರೀಕ್ಷೆಯೊಡನೆ ಹೇಳುವ ಮಾತು.
ಮೇಲಿನ ಅಭಿಪ್ರಾಯ ಇರಲಿ. ಹೇಳಲೇಬೇಕಾದ ಮಾತೆಂದರೆ ಕಣಾದರ ಕತೆಗಾರಿಕೆ ಮೊದಲ ಮಳೆಗೇ ಹದಗೊಂಡ ಮಣ್ಣು. ಇವರು ತನ್ನ ರುಚಿಯ ಹದವನ್ನ ಹಿಡಿದಿದ್ದಾರೆ.
ಜನಮಾಧ್ಯಮದ ಅಂಕಣ





0 Comments