ಬಿ.ಎ ಓದುತ್ತಿದ್ದ ದಿನಗಳು. ನಮ್ಮ ಹೆಚ್ಚು ಒಡನಾಟ ನಮ್ಮನ್ನು ‘ದಾರಿ ತಪ್ಪಿಸುತ್ತಿದ ಸೀನಿಯರ್ಸ್ ಜತೆ. ಕವಿತೆ, ಕಥೆ, ಕಾದಂಬರಿ.. ಇವುಗಳ ಬಗ್ಗೆ ನಮಗೆ ಆಸಕ್ತಿ ಹುಟ್ಟಿಸಿ ಮಾದ್ಯಮ ವೃತ್ತಿಗೆ ಸಾಹಿತ್ಯ ಮುಖ್ಯ ಎಂಬುದನ್ನು ಮನಸ್ಸಿಗೆ ಮೂಡಿಸಿದವರು ಅವರೇ. ಇಂತಿದ್ದ ಅವರು ಎಂ.ಎ.ಗೆ ಸೇರಿದ ಮೇಲೂ ಒಡನಾಟ ಅನೂಚಾನವಾಗಿ ಸಾಗಿತ್ತು. ಆ ದಿನಗಳಲ್ಲೇ ಮೈಸೂರು ವಿಶ್ವ ವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಕ್ಕೆ ಸಂದರ್ಶಕ ಪ್ರಾದ್ಯಾಪಕರಾಗಿ ಸಾಹಿತಿ, ಪತ್ರಕರ್ತ ಡಾ. ಬಿ.ವಿ.ವೈಕುಂಠರಾಜು ಬರುತ್ತಿದ್ದರು. ಅವರು ಇರುತ್ತಿದ್ದುದು ವಿ.ವಿ ಗೆಸ್ಟ್ ಹೌಸ್‌ನಲ್ಲಿ. ಆಗ ಅಲ್ಲಿಗೆ ಲಗ್ಗೆ ಇಡುತ್ತಿದ್ದ ಸೀನಿಯರ್ಸ್ ಜತೆ ನಮ್ಮ ‘ವಾನರ ಸೇನೆ ಕೂಡ ಜತೆಗೂಡುತ್ತಿತ್ತು.
ನಮ್ಮಂಥ ಎಳೆ ವಯಸ್ಸಿನ ಹುಡುಗರೊಂದಿಗೆ ಆರಾಮವಾಗಿ ಹೊಂದಿಕೊಳ್ಳುತ್ತಿದ್ದ ರಾಜು ಸರ್ ಅವರು ಪ್ರೀತಿ-ಪ್ರೇಮ-ಪ್ರಣಯ ಸಂಬಂಧಿ ಕಥೆಗಳನ್ನು ಕೇಳಿಸಿಕೊಂಡು ರೇಗಿಸುತ್ತಿದ್ದರು. ಅಷ್ಟೆಅಲ್ಲ. ಮಾಧ್ಯಮದಲ್ಲಿ ಕೆಲಸಮಾಡಲು ಬೇಕಾದ ಭಾಷೆ, ಸಾಮಾನ್ಯ ಅರಿವು, ಸಾಂಸ್ಕೃತಿಕ ಪ್ರೀತಿ ಇವುಗಳ ಕುರಿತು ಮಾತನಾಡುತ್ತಿದ್ದರು. ಅದೊಂದು ದಿನ ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾಗ ಡಾ.ಬಿ.ವಿ.ವಿ ಏನು ಕಂಡರೋ ಏನೋ. ಶ್ರೀನಿವಾಸ ಗೌಡನನ್ನು ಕುರಿತು. ನೀನು ಜರ್ನಲಿಸ್ಟ್ ಆಗೋಕೆ ಸರಿಯಾಗಿದ್ದೀಯ ಕಣೋ ಎಂದರು. ನಮಗೆಲ್ಲಾ ಅಚ್ಚರಿಯ ನಗು.
ಕೋಲಾರದ ಮಲ್ಲಸಂದ್ರ ಎಂಬ ಪುಟ್ಟ ಹಳ್ಳಿಯಿಂದ ಮೈಸೂರು ಮಹಾರಾಜ ಕಾಲೇಜಿಗೆ ಶ್ರೀನಿವಾಸ ಗೌಡ ಬಂದಿದ್ದು ಪತ್ರಿಕೋದ್ಯಮ ಓದಿ ಪತ್ರಕರ್ತನೇ ಆಗಬೇಕು ಅಂತ. ಡಾ.ಬಿ.ವಿ.ವಿ ಹೇಳಿದ್ದು ಮತ್ತು ಅವನು ಆಗಿದ್ದು ಅವನು ಅಂದುಕೊಂಡದ್ದೇ.
ಮಹಾರಾಜ ಕಾಲೇಜಿನ ಸಮೂಹ ಸಂಹವನ ಮತ್ತು ಪತ್ರಿಕೋದ್ಯಮ ವಿಭಾಗ ಕಿರಿಯರಿಗೆ ಕೊಡುವ ವೆಲ್‌ಕಮ್ ಪಾರ್ಟಿ ಊರ ಮಾರಿಹಬ್ಬದಂತೆ. ಹಳ್ಳಿಯಿಂದ ನಮ್ಮಂತ ಹುಡುಗರಿಗೆ ವಸಿ ಖುಷಿ ವಸಿ ಭಯ. ಪರಿಚಯ ಮಾಡಿಕೊಡುವ ನೆಪದಲ್ಲಿ ಕೀಟಲೆ-ಕೋಟಲೆ. ಅದು ಗೌಡನ ಸರದಿ ನಿನ್ನ ಬಗ್ಗೆ ಹೇಳು ಎಂಬ ಪ್ರಶ್ನೆ ಸೀನಿಯರ್ಸ್ ಕಡೆಯಿಂದ ತೂರಿಬಂತು. ತುಂಬಾನೆ ಗಂಭೀರವಾಗಿ ಭಯವಿದ್ದರು ಧೈರ್ಯ ತಂದುಕೊಂಡು ಮೆಲುಧ್ವನಿಯಲ್ಲಿ ಎಲ್ಲವನ್ನು ಮುಟ್ಟಿ ನೋಡಿ ಮುಂದೆ ನಡೆಯಬೇಕೆನ್ನುವುದು ನನ್ನ ಮಂತ್ರ ಎಂದ ಶ್ರೀನಿವಾಸ. ಜೂನಿಯರ್ ಬಿ.ಎ ಹಾಲಿನಲ್ಲಿ ಕುಲು ಕುಲು ನಗು.
ಅಲ್ಲಿಂದಾಚೆಗೆ ಶ್ರೀನಿವಾಸ ಗೌಡ ಎಲ್ಲರಿಗೂ ಅಚ್ಚುಮೆಚ್ಚಿನ ಗೌಡನಾದ. ಅವನಿದ್ದೆಡೆ ತರ್ಕದ ಮಾತೇ. ಮಾಧ್ಯಮ ವೃತ್ತಿಗೆ ಬೇಕು ಎನಿಸಿದ ಕಲೆ ಸಾಹಿತ್ಯ ಮುಂತಾದವುಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡ. ಪುಸ್ತಕವನ್ನು ಪ್ರೇಯಸಿಯಂತೆ ಪ್ರೇಮಿಸಬೇಕು; ಉತ್ಕಟವಾಗಿ ಎಂಬುದು ಅವನ ಮಂತ್ರವಾಯಿತು. ಇದರೊಂದಿಗೆ ಸತೀಶ್ ಶಿಲೆ, ಸುನೀಲ್ ಬಾದ್ರಿ ಮಧುಕುಮಾರ್, ನವೀನ್ ಜೋಸೆಫ್ ಅಂತವರ ಗೆಳೆತನ ಸಿಕ್ಕಿತು. ಇವರು ತರುತ್ತಿದ್ದ ‘ಓಯಸಿಸ್’ ಗೋಡೆ ಪತ್ರಿಕೆಯಲ್ಲಿ ತೊಡಗಿಸಿಕೊಂಡ. ಅವರ ನಂತರ ನಾವೆಲ್ಲ ಗೆಳೆಯರು ಸೇರಿ ‘ಯುವಧ್ವನಿ’ ಹೊರತರಲಾಂಭಿಸಿದೆವು. ಅದಕ್ಕೆ ಗೌಡನದೆ ಪಾರುಪತ್ಯೆ.
ಹೀಗೆ ಓದಿನೊಂದಿಗೆ ಮಾಧ್ಯಮದ ಪ್ರಾಯೋಗಿಕ ಅನುಭವ. ತರಗತಿಗೆ ಹಾಜರಿ ಇತ್ತೋ ಇಲ್ಲವೋ. ಬಿ.ಎ ಅಂತು ಮುಗಿಯಿತು. ಎಂ.ಎ ಗೆ ಸೇರಿದ್ದೂ ಆಯಿತು. ಅಲ್ಲಿಯೂ ಗೌಡನದ್ದೇ ದರ್ಬಾರು. ಕನ್ನಡ ಗೌಡ ಇಂಗ್ಲಿಷ್ ಗೌಡ್ಸ್ ಆಗಿಹೋದ!
ಗೌಡನ ಇಂಗ್ಲಿಷ್‌ಗೆ ಹುಡುಗಿಯರ ದಂಡು ಭಯಾನಕ ದಂಗು! ಕ್ಲಾಸಿನಲ್ಲಿ ಕಲಿಯುವುದು ಏನಿಲ್ಲಾ ಎಂಬುದು ಅವನ ನಂಬಿಕೆ ಹಾಗಾಗಿ ಮಾನಸ ಗಂಗೋತ್ರಿಯ ಕ್ಯಾಂಟೀನು ಮೊದಲ ಪಾಠಶಾಲೆ. ಮೈಸೂರಿನ ಆಸು-ಪಾಸೇ ವಿಶ್ವವಿದ್ಯಾಲಯ. ಆದರೂ ಗೌಡನೆಂದರೆ ಅತಿಯಾದ ಆತ್ಮವಿಶ್ವಾಸ. ಹುಂಬತನ, ಭಯಾನಕ ಧೈರ್ಯ ಮತ್ತು ಛಲ. ಆದರೆ ಇಂಗ್ಲಿಷ್ ಮಾತ್ರ ಕೈಕೊಡುತಿತ್ತು. ಅಷ್ಟರಲ್ಲಿ ಎಂ.ಎ ಮುಗಿಯಿತು. ಫೇರ್‌ವೆಲ್ ಪಾರ್ಟಿ.
Dear friends,
I speak some words on my campus experience. In welcome party many ಆಫ್ my friends laughed at me when I spoke in Kannada. I took it as a
challenge. Now, I hope you understand my English. I didn’t learn from my teachers and classrooms. But, my campus taught the lessons to live
my life fully well.
ನಂಗೊತ್ತು ನಂಗೊಂದು ಪತ್ರಕರ್ತ ಅನ್ನೊ ನೌಕರಿ ಸಿಗುತ್ತೆ; ನಾನು ಇಷ್ಟ ಪಟ್ಟಿದ್ದು. ಒಂದಿಷ್ಟು ವರ್ಷ ಕೆಲಸ ಮಾಡ್ತೀನಿ. ಆಮೇಲೆ ನನ್ನೂರಿಗೆ ವಾಪಸ್ಸ್ ಹೋಗಿ ವ್ಯವಸಾಯ ಮಾಡ್ತೀನಿ. ಭೂಮ್ತಾಯಿ ಮೋಸಮಾಡಲ್ಲ. ಒಂದೇ ಉಸಿರಿಗೆ ಮಾತನಾಡಿದವನ ಕಣ್ಣಲ್ಲಿ ನೀರಿತ್ತು ಜೊತೆಗೆ ಸುಳ್ಳೇ ನಗು. ಗೆಳೆಯರೆಲ್ಲರು ಎತ್ತಿ ಅಪ್ಪಿಕೊಂಡರು. ಅವನು ಹಾಗೆ ಇದ್ದ.
ಓದು ಮುಗಿಸಿ ಮಾಧ್ಯಮ ಲೋಕಕ್ಕೆ ಈ ಟಿ.ವಿ ಮೂಲಕ ಅಡಿ ಇಟ್ಟ. ಅವನ ಆಸಕ್ತಿಗಳು ವಿಸ್ತಾರವಾದವು. ವರದಿಗಳು ಜನಪರವಾದವು. ಗ್ರಾಮಮುಖಿ, ರೈತಸ್ನೇಹಿ ವಿಷಯಗಳಿಗೆ ಒತ್ತುಕೊಟ್ಟ. ಪ್ರತಿಯೊಬ್ಬರಿಂದಲೂ ಒಳ್ಳೆಯದನ್ನು ಹೆಕ್ಕುತ್ತಾ ತನ್ನ ಅರಿವಿನ ಮಟ್ಟವನ್ನು ಉನ್ನತೀಕರಿಸಿಕೊಂಡ. ಜನಸಂಪರ್ಕ ಜಾಸ್ತಿಯಾದಂತೆ ಅನುಭವಗಳು ವಿಸ್ಮಯವು ಆಗುತ್ತಾ ಹೋದವು. ತಾನು ಕಂಡ, ಉಂಡ ಮಾಧ್ಯಮ ಕೇಂದ್ರಿತ ಅನುಭವಗಳು, ಮಾಧ್ಯಮ ಸಂಬಂಧಿ ಚಿತ್ರ ವಿಚಿತ್ರ, ಆಶ್ಚರ್ಯಕರ ಸಂಗತಿಗಳು, ವ್ಯಕ್ತಿಗಳ ಮತ್ತು ಘಟನೆಗಳ ಕುರಿತು ಶ್ರೀನಿವಾಸ ಗೌಡ ಎಂ.ಬಿ ಆಪ್ತವಾಗಿ ಅರ್ಥಪೂರ್ಣವಾಗಿ, ಹೇಳುವುದರ ಜೊತೆಗೆ ಮಾಧ್ಯಮ ಕ್ಷೇತ್ರದ ಪರದೆಯ ಹಿಂದಿನ ಕಥೆಗಳನ್ನು ತಿಳಿಸುವುದು ಮುಖ್ಯ ಎಂಬಂತೆ ಎಲ್ಲವನ್ನು ಬಿಡುಬಿಸಾಗಿ ಅಕ್ಷರಕ್ಕಿಳಿಸಿದ್ದಾನೆ. ಅವನ ಕಥೆ ಹೇಳುವ ಶೈಲಿ ಚೆಂದವಿದೆ. ಬರೆಹ ಕಥೆ ಹೇಳಿದಂತಿದೆ.
ಓದುವ ಖುಷಿ ನಿಮ್ಮದಾಗಲಿ. ಗೌಡನ ಬರೆಹಗಳು ನಮ್ಮನ್ನು ಓದಿಸಿಕೊಳ್ಳುತ್ತಲೇ ಇರಲಿ.
-ಗೋವಿಂದರಾಜು ಲಕ್ಷ್ಮೀಪುರ. ಮುಖ್ಯಸ್ಥರು. ಇಂಗ್ಲಿಷ್ ವಿಭಾಗ. ಸರ್ಕಾರಿ ಪ್ರಥಮ
ದರ್ಜೆ ಕಾಲೇಜು. ಗುಂಡ್ಲುಪೇಟೆ





ಗೋವಿಂದನ ಮಾತಿಗೆ ನನ್ನ ದನ್ಯವಾದಗಳು, ಏನೇನೂ ಗೊಂದಲವಿಲ್ಲದೇ ಬರೆದ ಲೇಖನ ಇದೇ ಮೊದಲಿರಬೇಕೇನೋ…
ಗೋವಿಂದ..
ಆಪ್ತ ಬರಹ. ಓದಿ ಖುಷಿ ಆಯ್ತು. ಗೌಡರ ಕಾಲೇಜು ದಿನಗಳ ಸಣ್ಣ ಝಲಕ್ ಕೊಟ್ರಿ.
ನಾನು ಇನ್ನೆಂದೂ ಮರೆಯದ ಒಂದು ಸಾಲು- ಗೌಡರು ಹೇಳಿದ್ದು, ನೀವು ಕೋಟ್ ಮಾಡಿದ್ದು..
“ಎಲ್ಲವನ್ನು ಮುಟ್ಟಿ ನೋಡಿ ಮುಂದೆ ನಡೆಯಬೇಕೆನ್ನುವುದು”
ತಮಾಷೆಯಾಗಿ ಕೇಳಿಸಿ, ಬಹಳಷ್ಟು ಅರ್ಥ ಹೊಳೆಸೋ ಸಾಲು.
ಗೌಡರ ಜೀವನ ಪ್ರೀತಿ ದಂಡಿಯಾಗ್ಲಿ. ದಂಡಿ ದಂಡಿಯಾಗಿ ಅಲ್ಲದಿದ್ದರೂ, ಇನ್ನಷ್ಟು ಬರೆಯಲಿ.