ಮೊದಲೇ ಹೇಳಿಬಿಡುತ್ತೇನೆ… ನಾನು ಪತ್ರಕರ್ತನೂ ಅಲ್ಲ, ಕಿರುತೆರೆ ಕಲಾವಿದನೂ ಅಲ್ಲ.. ಇವೆರಡೂ ಪ್ರಪಂಚಗಳನ್ನು ಸ್ವಲ್ಪ, ತಕ್ಕ ಮಟ್ಟಿಗೆ ಹತ್ತಿರದಿಂದ ನೋಡಲು ಯತ್ನಿಸಿದವನು…ಹೀಗಾಗಿ, ಈ ಎರಡು ಪ್ರಪಂಚದಲ್ಲಿ ಪಳಗಿರುವ ಗೆಳೆಯ ಬರೆದಿರುವ ಪುಸ್ತಕದ ಬಗ್ಗೆ ನನ್ನ ಮಾತುಗಳು, ಪುಸ್ತಕ ಓದಿದ್ದಕ್ಕೆ ನನ್ನ ಪ್ರತಿಕ್ರಿಯೆಯೇ ಹೊರತು ವಿಮರ್ಶೆಯಲ್ಲ.
ಸುಮಾರು ವರ್ಷಗಳ ಹಿಂದೆ ಈಟಿವಿ ವಾರ್ತೆಗಳನ್ನು ನೋಡುತ್ತಿದ್ದಾಗ, ನ್ಯೂಸ್ ಬೈಟ್ ಕೊನೆಯಲ್ಲಿ “ಈ ಟಿವಿ ಗಾಗಿ ಕ್ಯಾಮೆರ ಮ್ಯಾನ್……. ಜೊತೆ ಸುಘೋಷ್” ಎಂದು ಉಲಿಯುತ್ತಿದ್ದ ಈ ವ್ಯಕ್ತಿಯ ಬಗ್ಗೆ ನನಗೆ ಇದ್ದದ್ದು ಹೆಸರಿನ ಬಗ್ಗೆ confusion. ಯಾವಾಗಲೂ ಅವರ ಹೆಸರಿಗೂ, ಅಶ್ವಘೋಶನ ಹೆಸರಿಗೂ ನನ್ನ ತಲೆಯಲ್ಲಿ ತಾಕಲಾಟ.. ಅದೇ ರೀತಿಯ ತಾಕಲಾಟ ನನಗೆ ಪುನಃ ಬಂದದ್ದು ಈ ಪುಸ್ತಕದ ಹೆಸರಿನ ಪಿಂಟ್ ಮತ್ತು ಪ್ರಿಂಟ್ ಇದರ ಬಗ್ಗೆ.. ಬಹುಷಃ ನನಗೆ ಪಿಂಟ್ ಅಭ್ಯಾಸ ಇಲ್ಲದಿರುವದು ಇದಕ್ಕೆ ಕಾರಣವೇನೋ…. 🙂
ಇನ್ನು ಪುಸ್ತಕದ ಬಗ್ಗೆ… ವಿಷಯಗಳು ಓದುವುದಕ್ಕೆ ತುಂಬಾ ಸರಳವೆನ್ನಿಸುವುದಕ್ಕೆ ಕಾರಣ, ಸ್ಪಷ್ಟವಾಗಿ ಅದನ್ನು ಮೂರು ಭಾಗಗಳಾಗಿ ವಿಂಗಡಣೆ ಮಾಡಿರುವುದು.. ಪ್ರತಿಯೊಂದು ಭಾಗಕ್ಕೂ ನಾವು ಕನೆಕ್ಟ್ ಆಗುವುದು ಇದೇ ಕಾರಣಕ್ಕಾಗಿ…
ಪುಸ್ತಕದುದ್ದಕ್ಕೂ “ಸುಲಿದ ಬಾಳೆಯಹಣ್ಣಿನಂದದಿ” ಇರುವ ಭಾಷೆ ಎಲ್ಲೂ ಭಾರ ಎನಿಸದೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.
ಪುಟ್ಟ ಪುಸ್ತಕದಲ್ಲಿ ಮೀಡಿಯಾ ಮತ್ತು ಮನೆಯ ಬಗ್ಗೆ ಅಷ್ಟನ್ನೂ ಹೇಳುವ ಪರಿ ನನಗೆ ಇಷ್ಟವಾಯಿತು… ಇಡೀ ಪುಸ್ತಕದ ಹೈಲೈಟ್ ಎಂದರೆ ಅದು ಸುಘೋಷ್ ಗೆ ಇರುವ ಮುಗ್ಧತೆ ಮತ್ತು ನೇರಾನೇರತೆ. ಈ ನೇರಾನೇರತೆ ನನ್ನ ಮಟ್ಟಿಗಂತೂ ಅಚ್ಚರಿಯೇ.
ಪತ್ರಿಕೋದ್ಯಮ ಎಂದರೆ, ಅದರಲ್ಲೂ ಟಿವಿ ಮಾಧ್ಯಮದಲ್ಲಿ ಕೆಲಸ ಮಾಡುವುದೆಂದರೆ ಅದ್ಭುತ ಅದ್ಭುತ ಎನ್ನುವ ಭ್ರಮೆ ಇರುವ ಮಂದಿ ಈ ಪುಸ್ತಕ ಓದಲೇಬೇಕು. ಪತ್ರಕರ್ತನಾಗಿ ಎದುರಿಸಬೇಕಾದ ಸವಾಲುಗಳು, ಚಿತ್ರ ವಿಚಿತ್ರ ಜನಗಳು,ಎಲ್ಲವೂ ತುಂಬಾ ಕುತೂಹಲಕರವಾಗಿದೆ. ಸಾತ್ವಿಕವಾಗಿ ನಡೆಸಿದ ಪ್ರತಿಭಟನೆಗಳು, ಸಮಾಜದ ಒರೆ ಕೋರೆಗಳನ್ನು ತಿದ್ದುವೆಡೆಗೆ ಇರುವ ಕಾಳಜಿ, ಎಲ್ಲವೂ ಬರಹಗಳಲ್ಲಿ ಎದ್ದು ಕಾಣುತ್ತದೆ..
ಇನ್ನು ಕಿರುತೆರೆ.. ಬಹುಷಃ ಕಿರುತೆರೆ ಕಲಾವಿದ ಎನ್ನುವ ಪಟ್ಟ, ಮುಳ್ಳಿನ ಕಿರೀಟವೇನೋ? ಅದನ್ನು ಸುಘೋಷ್ ಕೂಡ ತಮ್ಮ ಲೇಖನಗಳಲ್ಲಿ ವ್ಯಕ್ತಪಡಿಸುತ್ತಾರೆ. ಜನಕ್ಕೆ ಸಿನೆಮಾಗಿಂತ ಹೆಚ್ಚು ಕುತೂಹಲ ಕಿರುತೆರೆ ಧಾರಾವಾಹಿಗಳ ಬಗ್ಗೆ. ಮುಂದೆ ಏನಾಗುತ್ತದೆ ಎಂದು ತಿಳಿಯುವ ಕುತೂಹಲ. ಈ ಕುತೂಹಲದ ಬ್ಲೇಡಿಗೆ ಕುತ್ತಿಗೆ ಒಡ್ದಬೇಕಾದ ಪ್ರಸಂಗ ನಮಗೆ ಹಾಸ್ಯವೆನಿಸಿದರೂ, ಅದರ ಕಷ್ಟ, ಪಾಪ, ಕಿರುತೆರೆ ಕಲಾವಿದರೇ ಬಲ್ಲರು.
ಇನ್ನು ಮೂರನೆಯ ಭಾಗವಾದ, ಆಸ್ಪತ್ರೆಯ ತಾಕಲಾಟ, ಓದುಗರಿಗೆ ಅಯ್ಯೋ ಪಾಪ ಅನ್ನಿಸದಿದ್ದರೆ ಕೇಳಿ.. (ಈ ಮಾತನ್ನು ನಾನು ಋಣಾತ್ಮಕವಾಗಿ ಹೇಳುತ್ತಿಲ್ಲ. ಧನಾತ್ಮಕವಾಗಿ ಹೇಳುತ್ತಿದ್ದೇನೆ). ಇಲ್ಲಿ ಏನಿಲ್ಲ? ಅನುಭವಿಸಿದ ನೋವು, ನೋವನ್ನು ಮಾಯ ಮಾಡುವ ನರ್ಸ್ ಎಂಬ ದಿವ್ಯಚೆತನಗಳು, ಇವರ ನೋವಿಗೆ ಇತರರ ಪ್ರತಿಕ್ರಿಯೆ, ಎಲ್ಲವೂ ಉಂಟು. ಸುಘೋಷ್ ಎಲ್ಲೂ ಹಿಂಸೆ ಎನಿಸದ ರೀತಿಯಲ್ಲಿ ಎಲ್ಲ ವಿಷಯಗಳನ್ನೂ ಸರಳವಾಗಿ ಹೇಳುತ್ತಾ ಹೋಗುತ್ತಾರೆ. ನನ್ನಪ್ಪನಂತೆ ನನ್ನನ್ನು ಮಾಡು ಎನ್ನುವಾಗ ಅವರ ಕಣ್ಣಲ್ಲಿ ನೀರು ಕಂಡಿತ್ತಾ? ಬಲ್ಲವರೇ ಬಲ್ಲರು…
ಕೊನೆಯಲ್ಲಿ ಒಂದು ಮಾತು…ಲೇಖನಗಳ ಉದ್ದೋಉದ್ದ ಅದ್ಭುತವಾದ ತೆಳುವಾದ ದುಪಟ್ಟಾದಂಥ ಹಾಸ್ಯ ಇದೆ. ಬಹುಷಃ ಸುಘೋಷ್ ಗೆ ಹಾಸ್ಯ ಲೇಖನ ಬರೆಯುವ ಕಲೆ ಒಲಿದಿರಬೇಕು.




0 Comments