ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ – ನನ್ನ ರಸಯಾತ್ರೆ

ನನ್ನ ರಸಯಾತ್ರೆ

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-1983

‘ಮಲ್ಲಿಕಾರ್ಜುನ ಮನ್ಸೂರ್ ಅವರು ಮಹಾದೇವಿಯಕ್ಕನ ‘ಅಕ್ಕ ಕೇಳವ್ವ, ಅಕ್ಕಯ್ಯ ನಾನೊಂದು ಕನಸ ಕಂಡೆ’ ಎಂಬ ವಚನ ಹಾಡಿದ್ದನ್ನು ಕೇಳಿ ನಾನು ಅಪೂರ್ವ ರೀತಿಯ ರಸಾನುಭವ ಪಡೆದಿದ್ದೇನೆ.

ಸರಳವಾದ ಭಾಷೆಯನ್ನು ಬಳಸಿಕೊಂಡ ಆ ವಚನದ ಸೊಗಸಾದ ಗಾಯನದ ಮೂಲಕ ಮಹಾದೇವಿಯಕ್ಕನ ಮಧುರವಾದ ಆಧ್ಯಾತ್ಮಿಕ ಮನೋಲೋಕವನ್ನು ಪ್ರವೇಶಿಸಿದ ಅನುಭವವಾಯಿತು’

-ಕುವೆಂಪು

(‘ನನ್ನ ರಸಯಾತ್ರೆ’ ಪ್ರಕಟವಾಗುತ್ತಿದೆ ಎಂಬ ವಿಷಯ ತಿಳಿದಾಗ ಎರೆಡು ನಿಮಿಷ ಮೌನವಾಗಿ ಹೇಳಿದ ಮಾತುಗಳು)

‘ಮನ್ಸೂರರು ಈ ಕೃತಿಯಲ್ಲಿ ತಮ್ಮ ಕಲಾಸಾಧನೆಯ ಹೆಜ್ಜೆಗಳನ್ನೂ ಸಿದ್ಧಿಯ ಮುದ್ರೆಗಳನ್ನೂ ದಾಖಲು ಮಾಡಿದ್ದಾರೆ. ಅವರದ್ದು ಸ್ಫೂರ್ತಿಯಿದ ಮೂಡಿದ ಬರವಣಿಗೆ. ಇದನ್ನು ಓದುತ್ತಾ ಹೋದಂತೆ,ಅಪೂರ್ವ ಗಾಯಕರಾದ ಮನ್ಸೂರರು ಬರೆಯುತ್ತಿದ್ದಾರೆಯೇ. ಹಾಡುತ್ತಿದ್ದಾರೆಯೇ ಹೇಳುವುದು ಕಷ್ಟವಾಗುತ್ತದೆ.

ಓದುಗರ ಮುಂದಿನ ಅಕ್ಷರಗಳು ಮರೆಯಾಗುತ್ತವೆ. ಕಣ್ಣು ಮಂಜಾಗುತ್ತವೆ, ಕಿವಿ ತೆರೆಯುತ್ತವೆ. ಒಮ್ಮೆ ನೀಲಕಂಠ ಬುವಾ, ಮತ್ತೊಮ್ಮೆ ಮಂಜೀಖಾಂ ಸಾಹೇಬರು, ಮಗದೊಮ್ಮೆ ಬುರ್ಜಿಖಾಂ ಸಾಹೇಬರು ಮಲ್ಲಿಕಾರ್ಜುನರಿಗೆ ತಾಲೀಮು ಕೊಡುವುದು ಕೇಳಿಸುತ್ತದೆ. ಇನ್ನೊಮ್ಮೆ ಮಲ್ಲಿಕಾರ್ಜುನರು ಏಕಾಂತದಲ್ಲಿ ಕುಳಿತು ತಾಲೀಮು ಮಾಡುತ್ತಿರುವ ಅನುಭವವಾಗುತ್ತದೆ.

ಮತ್ತೊಮ್ಮೆ ಸಾವಿರಾರು ಜನ ಶೋತೃಗಳಲ್ಲಿ ನಾವೂ ಒಬ್ಬರಾಗುತ್ತೇವೆ. ಮಲ್ಲಿಕಾರ್ಜುನರು ಮೆಹಫಿಲ್ ನಲ್ಲಿ ರಚಿಸುತ್ತಿರುವ ಗಾನ ಗೋಪುರಗಳನ್ನು ಏರಿಹೋಗುತ್ತೇವೆ. ಕ್ರಮಕ್ರಮವಾಗಿ ಅಲ್ಲಿಂದ ಅಲ್ಲಿಂದ ಇಳಿದು ನೆಲದ ವೈಭವವನ್ನು ಕಾಣುತ್ತೇವೆ. ಅವರ ಸ್ವಂತ ಕಷ್ಟ ಸುಖಗಳಲ್ಲಿ ಭಾಗಿಗಳಾಗುತ್ತೇವೆ; ಅವರ ಸಂಗೀತದ ಗುರುಗಳಿಗೆ ಹೇಗೋ ಅವರ ಆಧ್ಯಾತ್ಮಿಕ ಗುರುಗಳಿಗೂ ನಮಿಸುತ್ತೇವೆ.

ಯಾವ ಅಪೂರ್ವವಾದ ಪ್ರತಿಭಾ ಕೌಶಲದಿಂದ ಅವರು ಸ್ವರ ಪ್ರಪಂಚವನ್ನು ಸೃಷ್ಟಿಸಲು ಸಮರ್ಥರಾದರೋ ಅದೇ ಪ್ರತಿಭಾ ಕೌಶಲದಿಂದ ‘ರಸಯಾತ್ರೆ’ಯನ್ನು ವರ್ಣಿಸಿ ನಮ್ಮನ್ನು ಅವರ ಆತ್ಮೀಯರನ್ನಾಗಿ ಮಾಡಿಸುತ್ತಾರೆ. ಹೀಗೆ ಮಾಡಿ ಅವರು ಸಂಗೀತ ರಸಿಕರಿಗೆ ಹೇಗೋ ಸಾಹಿತ್ಯಾಸಕ್ತರಿಗೂ ಪ್ರಿಯರಾಗಿದ್ದಾರೆ.

-ಪ್ರಭುಶಂಕರ

 

‍ಲೇಖಕರು avadhi

11 March, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading