ನಾನು ಇತ್ತೀಚಿಗೆ ಓದಿದ ನನ್ನ ಸ್ನೇಹಿತ ಹಾಲಿವುಡ್ ಚಲನಚಿತ್ರಗಳ ಬಗ್ಗೆ ಬರೆದ ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿವರೆಗೆ ಈ ಪುಸ್ತಕದ ಬಗ್ಗೆ ಏನು ಬರೆಯಬೇಕು ಅಂತ ಯೋಚಿಸುತ್ತಿರುವಾಗ ನನ್ನ ಮತ್ತು ವಿನಯ್ ನಡುವೆ ಕಳೆದ ಐದು ವರ್ಷಗಳ ನನ್ನ ಅವನ ಗೆಳತನ ಈ ಹಂತದವರೆಗೆ ನಮ್ಮನ್ನು ತಂದು ನಿಲ್ಲಿಸಿದೆ. ವಿನಯ್ ಬಗ್ಗೆ ಹೇಳಬೇಕೆಂದರೆ ನನಗೆ ಇವನ ಪರಿಚಯವಿರಲಿಲ್ಲ ನನ್ನ ಸ್ನೇಹಿತ ಅರುಣ್ ಪ್ರಸಾದ್ ನನಗೆ ಇವನ ಪರಿಚಯ ಮಾಡಿಸಿದ. ಆದರೆ ಮನುಷ್ಯನ ಬಾಂಧವ್ಯಗಳು ಸುಖಾಸುಮ್ಮನೆ ಏರ್ಪಾಡುವುದಿಲ್ಲ ಎಲ್ಲೋ ಇದ್ದ ನಾವು ಇಂದು ಸ್ನೇಹತರಾಗಿ ಸೇರಿದ್ದೇವೆ. ಅಲ್ಲಿಂದ ಇಲ್ಲಿನವರೆವಿಗೂ ನನ್ನ ಮತ್ತು ಅವನ ಸ್ನೇಹದ ರಥದಲ್ಲಿ ಇಬ್ಬರು ಪ್ರಯಾಣ ಮಾಡುತ್ತ ಇದ್ದೇವೆ. ನನ್ನ ವೈರುಧ್ಯಗಳು, ಚಿಂತನೆಗಳ ಬೇರೆಯಾಗಿದ್ದು ನನ್ನ ನ್ಯೂನತೆಗಳು ಬಗ್ಗೆ ಅವನು ಟೀಕೆ ಮಾಡಿದ್ದು ಇದೆ. ನಾನು ಅವನ ಬಗ್ಗೆ ಟೀಕೆ ಮಾಡಿದ್ದು ಇದೆ. ಯಾವ ಮನುಷ್ಯಗಳಿಗೆ ಸಮಸ್ಯೆಗಳ ಬರುವುದಿಲ್ಲವೋ ಅವುಗಳನ್ನು ಬಿಡಿಸುವ ಬಗ್ಗೆ ಯಾರಲ್ಲಾದರೂ ಉತ್ತರವನ್ನು ಹುಡುಕುತ್ತಾರೆ. ಆದರೆ ಯಾವ ವ್ಯಕ್ತಿ ಸಮಸ್ಯೆಗಳ ನಡುವೆಯೇ ಬದುಕುತ್ತಿರುತ್ತಾನೋ ಅವನಿಗೆ ಜೀವನವೇ ದಿನವೂ ಒಂದು ಪಾಠ ಕಲಿಸುತ್ತಿರುತ್ತದೆ. ಇಂತಹ ಸಮಸ್ಯೆಗಳು ಇದ್ದು ಸಹ ಇವೆಲ್ಲವನ್ನು ಮೀರಿ ಬೆಳಯುವುದು ಒಬ್ಬ ಸಕ್ರಿಯ ಮತ್ತು ಕ್ರಿಯಾಶೀಲ ವ್ಯಕ್ತಿಗೆ ಮಾತ್ರ ಸಾಧ್ಯ ಎಂತಹ ಆಸಾಧ್ಯಗಳನ್ನು ಸಾಧ್ಯ ಮಾಡುವ ನಿಟ್ಟಿನಲ್ಲಿ ಪ್ರಯೋಗಶೀಲರಾಗುತ್ತಾರೆ.ಇಂತಹ ವ್ಯಕ್ತಿತ್ವ ಹೊಂದಿರುವ ವಿನಯ್ ದು.
ಒಂದು ಸಮಸ್ಯೆಗಳನ್ನು ಚರ್ಚೆಗೆತ್ತಿಕೊಂಡು ಬೇಕಾದಷ್ಟು ಬಾರಿ ನನಗೂ ಅವನಿಗೆ ಜಗಳವಾಗಿದ್ದು ಇದೆ. ಆದರೆ ಅವನಲ್ಲಿರುವ ಒಂದು ಪ್ರಯೋಗಾತ್ಮಕ ವ್ಯಕ್ತಿತ್ವ ಹೊಸತನ್ನು ಕಲಿಯಲು ಎಡೆಮಾಡಿಕೊಟ್ಟಿದೆ. ನಾನು ಜಾಗತಿಕ ಮಟ್ಟದ ಚಲನಚಿತ್ರಗಳನ್ನು ನೋಡಿರಲಿಲ್ಲ ನಾನು ಕನ್ನಡ, ತಮಿಳು, ಹಿಂದಿ, ತೆಲುಗು ಹಾಗೂ ದೂರದರ್ಶನದಲ್ಲಿ ಆ ದಿನಗಳಲ್ಲಿ ಬರುತ್ತಿದ್ದ ರಾಷ್ಟ್ರೀಯ ಪುರಸ್ಕಾರ ವಿಜೇತ ಚಲನಚಿತ್ರಗಳನ್ನು ಭಾನುವಾರ ಮಧ್ಯಾಹ್ನ ಪ್ರಸಾರ ಮಾಡುತ್ತಿದ್ದ ಅವಧಿಯಲ್ಲಿಷ್ಟೆ ನೋಡುತ್ತಿದ್ದ ನೆನಪು. ಹಾಲಿವುಡ್ ಸಿನಮಾಗಳಾದ ಕಿಂಗ್ ಕಾಂಗ್, ಜುರಾಸಿಪಾರ್ಕ್, ಬಾಂಡ್ ಚಲನಚಿತ್ರಗಳನ್ನು ನೋಡಿದ್ದು ಬಿಟ್ಟರೆ ಬೇರೆ ದೇಶದ ಯಾವುದೇ ಚಲನಚಿತ್ರಗಳನ್ನು ನೋಡಿದ ನೆನಪುಗಳು ಇಲ್ಲ. ಆದರೆ ನಾನು ಮಾಜಿದ್ ಮಜ್ಜಿದಿಯ “ಫಾದರ‍್” ಚಲನಚಿತ್ರವನ್ನು ಮೊದಲಬಾರಿಗೆ ನೋಡಿದಾಗ ಇಂತಹ ಜಾಗತಿಕ ಮಟ್ಟದ ಬೇರೆ ಬೇರೆ ದೇಶದ ಚಲನಚಿತ್ರಗಳನ್ನು ನೋಡದೆ ಇನ್ನು ಮೂರ್ಖರಾಗಿ ಕಾಲಕಳೆಯುತ್ತಿದ್ದವಲ್ಲ ಎಂಬ ಮನೋಭಾವ ಕಾಡಲು ಶುರುಮಾಡಿತ್ತು. ಚಲನಚಿತ್ರಗಳು ಹಾಗೂ ದೃಶ್ಯ ಮಾಧ್ಯಮ ಬೇರೆ ಬೇರೆ ದೇಶದ ಸಂಸ್ಕೃತಿಯನ್ನು, ಪ್ರಕೃತಿ, ಜನರ ಜೀವನ ಅಭ್ಯಸಿಸುವುದರ ಜೊತೆಗೆ ವಿವಿಧ ದೇಶದ ಭಾಷೆಯನ್ನು ಅರ್ಥಿಕ ಸ್ಧಿತಿ-ಗತಿಗಳನ್ನು ಗ್ರಹಿಸುವುದರಿಂದ ನಮ್ಮ ಯೋಚನಾಶಕ್ತಿಯು ಸಹ ವಿಸ್ತೃತಗೊಳ್ಳವುದು. ಅಂದಿನಿಂದ ಇದುವರೆವಿಗೂ ಸುಮಾರು ದೇಶಗಳ ಚಲನಚಿತ್ರಗಳನ್ನು ನೋಡಿ ಅವುಗಳ ಬಗ್ಗೆ ಚರ್ಚೆ ಮಾಡುತ್ತಿದ್ದುದ್ದು ಉಂಟು. ಹೀಗೆ ಅವನು ಹಲವಾರು ಚಟುವಟಿಕೆಗಳಲ್ಲಿ ಪಾಲ್ಗೊಂಡು ಯಾವುದರ ಕಡೆಗೂ ಗಮನ ಕೊಡದೆ ಯಾವುದೇ ಒಂದು ಕೆಲಸ ಕೈಗೆತ್ತಿಕೊಂಡರೆ ಬೇಗ ಮುಗಿಸುವುದಿಲ್ಲವೆಂದು ನಾನು ಹಲವಾರು ಬಾರಿ ಅವನ ಜೊತೆ ಪ್ರೀತಿಯಿಂದ ಜಗಳವಾಡಿದ್ದು ಇದೆ. ಅವನ ಇರ್ಷೆಗಳನ್ನು ಒಂದು ಹಿಡಿತಕ್ಕೆ ತಂದು ಒಂದು ಕೆಲಸ ಮುಗಿದ ಮೇಲೆ ಇನ್ನೊಂದು ಕೆಲಸಕ್ಕೆ ಕೈಹಾಕು ಎಂದು ಹೇಳಿ ಸಾಕಾಗಿತ್ತು ಆದರೆ ಅವನ ಸಿನಿಮಾ ತುಡಿತ, ಸಿನಿಮಾದ ಬಗ್ಗೆ ಇರುವ ಗ್ರಹಣ ಶಕ್ತಿ ಅವನಲ್ಲಿ ಒಂದು ಹೊಸ ಆಯಾಮಕ್ಕೆ ಅವನನ್ನು ತಂದು ನಿಲ್ಲಿಸಿದೆ. ಅವನ ಸ್ನೇಹಿತರ ಪ್ರಪಂಚ ಕೂಡ ಅಷ್ಟೇ ದೊಡ್ಡದಾಗಿದ್ದು ಇವನ ಪ್ರಯೋಗಾತ್ಮಕತೆಗೆ ಮಂಡ್ಯದ ಸ್ನೇಹಿತರೂ ಕೂಡ ಸ್ಪಂದಿಸಿದ್ದಾರೆ. ಇವನ ಹಪಾಹಪಿ ಹೇಗೆ ಎಂದರೆ ಎಲ್ಲವನ್ನು ಒಂದೇ ಬಾರಿಗೆ ಮಾಡುವ ತವಕ ಅದರಲ್ಲಿ ಸೋಲುತ್ತೇನೋ, ಗೆಲ್ಲುತ್ತೇನೋ ಅದು ಮುಖ್ಯವಲ್ಲ ಏನಾದರೂ ಪ್ರಯೋಗ ಮಾಡುತ್ತಲೆ ಇರುವುದು ಇವನ ಜಾಯಮಾನ ಅದೆಲ್ಲದರ ಫಲವೇ ಇಂದು ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿಯವರೆಗೆ ಪುಸ್ತಕವಾಗಿ ಹೊರಬಂದಿದೆ.
ಈ ಪುಸ್ತಕಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಯುವ ಬರಹಗಾರರ ಚೊಚ್ಚಲ ಕೃತಿಗೆ ಧನ ಸಹಾಯ ಪಡೆದ ಕೃತಿಯಾಗಿದೆ. ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿಯವರೆಗೆ ಈ ಪುಸ್ತಕದಲ್ಲಿ ಹಾಲಿವುಡ್ ನಲ್ಲಿ ಅತ್ಯಂತ ಜನಪ್ರಿಯ ಚಲನಚಿತ್ರಗಳನ್ನು ಆರಿಸಿಕೊಂಡಿದ್ದು ಈ ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಇಂಟರ‍್ ನೆಟ್ ಹಲವಾರು ವಿಮರ್ಶಕರು ಪುಟಗಟ್ಟಲೇ ಈ ಚಲನಚಿತ್ರಗಳ ಬಗ್ಗೆ ವಿಮರ್ಶೆ ಮಾಡಿದ್ದಾರೆ. ಆದರೆ ಜಾಗತಿಕ ಮಟ್ಟದ ಸಿನಿಮಾಗಳ ಬಗ್ಗೆ ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಪುಸ್ತಕಗಳು ಲಭ್ಯವಿಲ್ಲದಿರುವುದು. ಇದಕ್ಕೆ ಕಾರಣವಿರಬಹುದು. ಆದರೆ ಇಂತಹ ಪ್ರಯೋಗಕ್ಕೆ ತಾನು ಒಳಪಡಿಸಿಕೊಂಡಾಗ ಆಯ್ದಕೊಂಡಿರುವ ಚಲನಚಿತ್ರಗಳು ಬಂದು ಹಲವಾರು ವರ್ಷಗಳೇ ಕಳೆದಿವೆ. ಈ ಚಲನಚಿತ್ರಗಳನ್ನು ಸ್ಟಾರ‍್ ಮೂವೀಸ್ ಇನ್ನಿತರ ಚಾನೆಲ್ ಗಳಲ್ಲಿ ಆಗ್ಗಾಗ ಮರುಪ್ರಸಾರಗೊಂಡಿದ್ದು ಇಂತಹ ಚಲನಚಿತ್ರಗಳ ಬಗ್ಗೆ ಬರೆದರೆ ಅಂತಹ ಪುಸ್ತಕಗಳನ್ನು ಕೊಂಡು ಓದುವ ಓದುಗರು ಇದ್ದಾರೋ ಇಲ್ಲವೋ ಎಂಬ ಅನುಮಾನ ಎಂತಹವರನ್ನೂ ಸಹ ಕಾಡುತ್ತದೆ. ಆದರೂ ಸಹ ಇಂತಹ ಸಾಧ್ಯತೆಗಳಿಗೆ ಕೈ ಹಾಕಬೇಕಾದರೆ ಅವನಲ್ಲಿರುವ ವಿಶ್ವಾಸ ಮುಖ್ಯವಾಗುತ್ತೆ. ಅದಕ್ಕೆ ತನ್ನ ಬರವಣಿಗೆಯ ಶಕ್ತಿಯ ಪೂರಕವಾಗಿರಬೇಕಾಗುತ್ತದೆ.
ಈ ಪುಸ್ತಕದಲ್ಲಿ ಬರುವ ಆರು ಚಲನಚಿತ್ರಗಳು ಜಾಗತಿಕ ಸಿನಿಮಾರಂಗದಲ್ಲಿ ಒಳ್ಳೆಯ ಹೆಸರನ್ನು ಮಾಡಿರುವಂತಹ ಚಲನಚಿತ್ರಗಳನ್ನು ಈ ಪುಸ್ತಕದ ಲೇಖಕರು ಆಯ್ಕೆ ಮಾಡಿಕೊಂಡಿದ್ದು ಈ ಆಯ್ಕೆಗಳು ಸಹ ಭಿನ್ನತೆಯಿಂದ ಕೊಡಿದೆ ಈ ಚಲನಚಿತ್ರಗಳ ಕನ್ನಡ ಸಾಹಿತ್ಯದಲ್ಲಿ ಮೊದಲ ಪ್ರಯತ್ನವಾಗಿದ್ದು ಈ ಮೊದಲು ಕೆ.ವಿ.ಸುಬ್ಬಣ್ಣನವರ ಬೈಸಿಕಲ್ ಥೀವ್ಸ್ ಪುಸ್ತಕ ಕನ್ನಡ ಸಾಹಿತ್ಯಕ್ಕೆ ಒಂದು ಕೊಡುಗೆಯಾಗಿತ್ತು. ನಂತರ ಎ.ಎನ್.ಪ್ರಸನ್ನ ರವರ ಚಿತ್ರಕಥೆ ಹಾಗೂ ಕನ್ನಡ ಚಿತ್ರರಂಗದ ಬಗ್ಗೆ ಬರೆದ ಸಿನಿಮಾಯಾನ ಎಂಬ ಕೆಲವೇ ಬೆರಳಣಿಕೆಯಷ್ಟು ಪುಸ್ತಕಗಳು ಬಂದಿರುವುದು ಆದರೆ ಜಾಗತಿಕ ಸಿನಿಮಾದ ಬಗ್ಗೆ ಕನ್ನಡದಲ್ಲಿ ಬಂದಿರುವುದು ಕಡಿಮೆ. ಆದರೆ ಈ ಲೇಖಕರು ಈ ಪುಸ್ತಕದಲ್ಲಿ ಹಾಲಿವುಡ್ ಸಿದ್ದ ಸೂತ್ರಬದ್ದವಾದ ಚಲನಚಿತ್ರಗಳನ್ನು ಇಂತಹ ಪ್ರಯತ್ನವನ್ನು ಈ ಚಿಕ್ಕವಯಸ್ಸಿನಲ್ಲಿ ಇವರು ಆಯ್ಕೆ ಮಾಡಿಕೊಂಡಿರುವುದು ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ಆಶಾಭಾವದೊಂದಿಗೆ ಲಭ್ಯವಾಗಿದೆ. ಆದರೆ ಈ ಪುಸ್ತಕವೇ ಮೊದಲು ಅಥವಾ ಕೊನೆಯಾಗಬಾರದು ಮುಂದಿನ ದಿನಗಳಲ್ಲಿ ಈ ಲೇಖಕರಿಂದ ಸಿನಿಮಾ ಜಗತ್ತಿನ ಅತ್ಯಂತ ಶ್ರೇಷ್ಟ ಚಲನಚಿತ್ರಗಳು ಮತ್ತು ನಿರ್ದೇಶಕರೆಂದು ಪರಿಗಣಿತರಾಗಿರುವ ಚಲನಚಿತ್ರ ಮತ್ತು ನಿರ್ದೇಶಕರ ಬಗ್ಗೆ ಮತ್ತೊಂದು ಪುಸ್ತಕ ಹೊರಬರುವ ಬಗ್ಗೆ ಆಶಯವನ್ನು ಸಹ ಇಟ್ಟುಕೊಂಡಿರುತ್ತೇವೆ. ಈ ಪುಸ್ತಕದ ಮುನ್ನಡಿಯನ್ನು ಚಲನಚಿತ್ರ ನಿರ್ದೇಶಕ ಬಿ.ಸುರೇಶ್ ಬರೆದಿದ್ದು ಮತ್ತು ಬೆನ್ನುಡಿಯನ್ನು ಲೇಖಕರಾದ ಜಿ.ಎನ್.ಮೋಹನ್ ಬರೆದಿದ್ದು ಈ ಪುಸ್ತಕದ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿರುತ್ತಾರೆ. ಈ ಪುಸ್ತಕದಲ್ಲಿ ಬರುವ ಚಲನಚಿತ್ರಗಳಾದ ಜೋಸೆಫ್ ಕಾನ್ರಾಡ್ ನ “ಹಾರ್ಟ್ ಆಫ್ ಡಾರ್ಕನೆಸ್” ಕೃತಿ ಆಧಾರಿತ ಫ್ರಾನ್ಸಿಸ್ ಫೋರ್ಡ್ ಕಪ್ಪೋಲ ನಿರ್ದೇಶನದ “ಅಪೋಕ್ಯಾಲಿಪ್ಸ್ ನವ್” ಚಿತ್ರ, ಚಾರ್ಲಿಚಾಪ್ಲಿನ್ ನಿರ್ದೇಶನದ “ಮಾರ್ಡ್‌ನ್ ಟೈಮ್ಸ್” ಜೇಮ್ಸ್ ಬಾಂಡ್ “ಟುಮಾರೋ ನೆವರ‍್ ಡೈಸ್” ಹಾಗೂ ಆಲೈಸ್ ವಾಕರ‍್ಳ “ದಿ ಕಲರ‍್ ಪರ್ಪಲ್” ಕೃತಿ ಆಧಾರಿತ ಸ್ಟೀವನ್ ಸ್ಪೀಲ್ ಬರ್ಗ ನಿರ್ದೇಶನದ “ದಿ ಕಲರ‍್ ಪರ್ಪಲ್”, ಮೆಲ್ ಗಿಬ್ಬನ್ಸ್ “ಅಪೋಕ್ಯಾಲಿಪ್ಟೋ” ರೋಮನ್ ಪೊಲಾನಸ್ಕಿಯ “ದಿ ಪಿಯಾನಿಸ್ಟ್” ಚಿತ್ರಗಳ ಬಗ್ಗೆ ಅಪರೂಪದ ಪ್ರಯತ್ನವನ್ನು ಈ ಲೇಖಕರು ಮಾಡಿದ್ದಾರೆ. ಈ ಲೇಖಕರ ವಿಭಿನ್ನವಾದ ಗ್ರಹಿಕೆ ಮತ್ತು ಸಿನಿಮಾದಲ್ಲಿರುವ ಆಳವಾದ ಆಸಕ್ತಿ ಇವುಗಳಿಂದ. ಇಂದಿನ ಪೀಳಿಗೆಗೆ ಜಾಗತಿಕ ಮಟ್ಟದ ಸಿನಿಮಾಗಳನ್ನು ನೋಡುವ ಹವ್ಯಾಸವುಳ್ಳವರಿಗೆ ಈ ಪುಸ್ತಕವೊಂದು ಹೊಸ ಅಭಿರುಚಿಯನ್ನು ಹುಟ್ಟಿಸುವುದರಲ್ಲಿ ಸಂಶಯವೇ ಇಲ್ಲ. ಈ ಆರು ಚಲನಚಿತ್ರಗಳಲ್ಲಿ ಬಳಸಿರುವ ವಸ್ತು ವಿಶೇಷತೆ ಚಲನಚಿತ್ರಗಳ ವಿಶ್ಲೇಷಣೆಗಳು ಒಂದು ಹೊಸ ವಿಭಿನ್ನ ದೃಷ್ಟಿಕೋನವನ್ನು ಸೃಷ್ಟಿಮಾಡುವುದರಲ್ಲಿ ಈ ಲೇಖನಗಳು ಗಮನ ಸೆಳಯುತ್ತವೆ. ಈ ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ವಿಶೇಷತೆಯನ್ನು ತಂದು ಕೊಟ್ಟಿದೆ. ಇಂತಹ ಪ್ರಯೋಗಶೀಲ ಹೊಸ ಬರಹಗಾರರು ಕನ್ನಡ ಸಾಹಿತ್ಯಕ್ಕೆ ಅವಶ್ಯಕತೆ ಇರುವುದರಿಂದ ಇಂತಹ ಪುಸ್ತಕಗಳನ್ನು ಕನ್ನಡದ ಓದುಗರ ಪ್ರೋತ್ಸಾಹಿಸಿದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಪುಸ್ತಕಗಳು ಕನ್ನಡ ಸಾಹಿತ್ಯಕ್ಕೆ ಬರುವುದರಲ್ಲಿ ಸಂಶಯೇ ಇಲ್ಲ. ಈ ಪುಸ್ತಕದ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಈ ಇ-ಮೇಲ್ ಗೆ ಕಳುಹಿಸಿ vinaysamvedhane@gmail.com or mandyafilmsociety@gmail.com
ಪುಸ್ತಕ ದೊರೆಯುವ ಸ್ಧಳ : ಮಂಡ್ಯ ಫಿಲಂ ಸೊಸೈಟಿ,
“ಹೆಣ್ಣು”, ೪ನೇ ಅಡ್ಡರಸ್ತೆ (ಕಬ್ಬಾಳಮ್ಮ ದೇವಸ್ಧಾನದ ಹತ್ತಿರ)
ಹೊಸಹಳ್ಳಿ, ಮಂಡ್ಯ.
ಲೇಖಕರ ದೂರವಾಣಿ ಸಂಖ್ಯೆ: 9972391577




0 Comments